ಒರಕ್ಕು ತೂಗಿರೂ ಓರ್ಕುಟ್ಟು, ಒರಕ್ಕು ತೂಗದ್ರೂ ಓರ್ಕುಟ್ಟು...!

ಊರಿಂಗೆ ಕಂಪ್ಯೂಟರು ಬಂದದರ ಬಗ್ಗೆ, ಇಂಟರ್ನೆಟ್ಟು ಬಂದ ಬಗ್ಗೆ ಶುದ್ದಿ ಮಾತಾಡಿದ್ದು ಅದಾಗಲೇ.

ಈ ಕಂಪ್ಯೂಟರು, ಇಂಟರ್ನೆಟ್ಟು, ಗೂಗುಲು ಎಲ್ಲ ಇದ್ದಲ್ದಾ ಬಾವ - ಒಂದು ನಮೂನೆ ಬಂಗಿ(ಗಾಂಜಾ) ಎಳೆತ್ತ ಹಾಂಗೆ ಅಡ. ಅಬ್ಯಾಸ ಅಪ್ಪನಾರ ’ಎಂತರ ಇದ್ದು ಬೇಕೆ ಹಾಂಗುದೇ ಅದರ್ಲಿ? ಎಬೆಕ್ಕಲೆ!’ ಹೇಳಿ ಆವುತ್ತು. ಒಂದರಿ ಅಭ್ಯಾಸ ಆದ ಮತ್ತೆ ಅದು 'ಇಲ್ಲದ್ದೆ ಕಳೀಯ!’ ಒಪ್ಪಣ್ಣಂಗೆ ಎರಡರ ಬಗ್ಗೆಯುದೇ ಹೆಚ್ಚೆಂತ ಗೊಂತಿಲ್ಲದ್ರೂ, ಹತ್ತರಾಣೋರು ಮಾಡ್ತದು ಕಂಡು ಗೊಂತಿದ್ದಿದಾ! ಎಷ್ಟೇ ದೊಡ್ಡವ ಆಗಿರ್ಲಿ, ಎಷ್ಟೇ ಸಣ್ಣವ ಆಗಿರ್ಲಿ - ಕಂಪ್ಯೂಟರಿನ ರುಚಿ ಹಿಡುತ್ತು ಹೇಳಿರೆ ಮತ್ತೆ ಕತೆ ಗೋವಿಂದ! ಊರಡಿಮೊಗಚ್ಚಿರೂ ಗೊಂತಾಗ! ನಮ್ಮೆದುರಂಗೇ ಆದ ಅವಸ್ತೆ ನೋಡಿ ಬೇಕಾರೆ: ಮದಲಿಂಗೆ ಬೆಂಗ್ಳೂರಿಲಿಪ್ಪ ಕುಂಞಿಬಾವನ ಬೈಕ್ಕೋಂಡಿತ್ತಿದ್ದವು, ಈಗೀಗ ಊರಿಲೇ ಇಪ್ಪೋರದ್ದುದೇ ಇದೇ ಕತೆ. :-)
ಊರಿಲಿ ಮದಲಿಂಗೆಲ್ಲ ’ಕಂಪ್ಯೂಟರು ಗೊಂತಿಲ್ಲೆ’ ಹೇಳಿ ಒಂದು ಬೇಜಾರು ಇತ್ತು, ಅದು ಅಬ್ಯಾಸ ಆತು. ಮುಂದೆ ’ಇಂಟರ್ನೆಟ್ಟು ಅರಡಿತ್ತಿಲ್ಲೆ’ ಹೇಳಿ ಒಂದು ಬೇಜಾರು ಇತ್ತು - ಅದೂ ಅಬ್ಯಾಸ ಆತು, ಈಗ ಇಂಟರ್ನೆಟ್ಟಿಲಿ ನಮುನೆ ನಮುನೆ ಬಲೆಜಾಗೆ(ವೆಬ್ ಸೈಟು)ಗಳ ನೋಡ್ತದೇ ಕೆಲಸ ಅಡ, ಅದುದೇ ಅಬ್ಯಾಸ ಆದ ಮತ್ತೆ ಇನ್ನೆಂತದೋ? ಉಮ್ಮ!

ಇಂಟರ್ನೆಟ್ಟಿಲಿ ಗೂಗುಲು ಕಂಪೆನಿ ಹೇಳಿ ಒಂದಿದ್ದು, ಅಲ್ದಾ? ಅದಾ - ಪರಿಕರ್ಮಿಯ ಹಾಂಗೆ ಬೇಕಾದ್ದರ ಬೇಡದ್ದರ ಪೂರ ಹುಡ್ಕಿ ಕೊಡ್ತದು - ಶುದ್ದಿ ಓ ಮೊನ್ನೆ ಮಾತಾಡಿದ್ದು, ( ಮರದರೆ ಪುನಾ ಓದಲಕ್ಕು). ಹಾಂಗೆ -ಆ ಕಂಪೆನಿ ಅಂದಿಂದ ಸಿಕ್ಕಿದ ದಕ್ಷಿಣೆಲಿ ಬೆಳದು ದೊಡ್ಡ ಆಗಿ ಈಗ ಸುಮಾರು ವೆಬ್‘ಸೈಟುಗೊ ಮಾಡಿದ್ದಡ. ಆರು ಬೇಕಾರೂ ನೋಡ್ಳಕ್ಕಡ. ಅವು ಹಾಂಗೇಡ, ವೆಬ್‘ಸೈಟು ಎಲ್ಲ ಮಾಡಿ ಮಾಡಿ ಜೆನಂಗೊಕ್ಕೆ ದರ್ಮಕ್ಕೇ ಸಿಕ್ಕುತ್ತ ಹಾಂಗೆ ನೇಲುಸುತ್ತವಡ. ಆರು, ಯೇವತ್ತು ಬೇಕಾರುದೇ ಬಂದು ಆಂತುಗೊಂಬಲಕ್ಕಡ - ರೂಪತ್ತೆಮಗಳ ಮದುವೆದಿನದ ಬಪೆಯ ಹಾಂಗೆ. ಇಂದು ನಾವು ಮಾತಾಡ್ತದು ಹಾಂಗೇ ಇಪ್ಪ ಸುಮಾರು ವೆಬ್‘ಸೈಟುಗಳಲ್ಲಿ ಒಂದರ ಶುದ್ದಿ.


ಈ ವೆಬ್‘ಸೈಟಿಂಗೆ ಓರುಕುಟ್ಟು(Orkut) ಹೇಳಿ ಹೆಸರಡ. ಅದೇ ಹೆಸರಿನ ಮಾಣಿ (Orkut Büyükkökten) ಆ ಕಂಪೆನಿ ಒಳದಿಕ್ಕೆ ಕೂದುಗೊಂಡು ನೇರಂಪೋಕು ಈ ವೆಬ್ಸೈಟು ಮಾಡಿದ್ದಡ - ಒಬ್ಬಂದೊಬ್ಬ ಮಾತಾಡ್ಳೆ. ಹಾಂಗೆ ಅದರದ್ದೇ ಹೆಸರು ಮಡಗಿದ್ದಡ. (ಓರ್ಕುಟ್ಟು ಹೇಳಿರೆ ಸಂತೋಷ ಹೇಳಿ ಅರ್ತ ಅಡ, ಟರ್ಕಿ ಬಾಶೆಲಿ - ದೊಡ್ಡಣ್ಣ ಇಂಟರ್ನೆಟ್ಟಿಲಿ ನೋಡಿ ಹೇಳಿದ°). ನೇರಂಪೋಕು ಮಾಡಿದ್ದಾದರೂ ಅದರ ತೂಕ ಕಂಡು ಕಂಪೆನಿಯವಕ್ಕೆ ಕೊಶಿ ಆತಡ. ಒಳದಿಕ್ಕೆ ಮಾಂತ್ರ ಸಿಕ್ಕಿಯೊಂಡಿದ್ದ ಓರ್ಕುಟ್ಟಿನ ಎಲ್ಲೊರಿಂಗೂ ಸಿಕ್ಕುತ್ತ ಹಾಂಗೆ ಮಾಡಿದವಡ.

ಈ ವೆಬ್-ಸೈಟಿಲಿ ಬಂದು ಒಂದು ಪುಟ ಮಾಡ್ಳಕ್ಕಡ - ಆರು ಬೇಕಾರು. ಇಂತಿಷ್ಟೇ ಕಲ್ತವ°, ಇಂತದ್ದೇ ಜಾತಿ - ಹೇಳಿ ಎಂತದೂ ಇಲ್ಲೆ. ಜಾತ್ಯತೀತ - ದೇವೇಗೌಡನ ಹಾಂಗೆ. ಈ ಈಮೈಲು ಹೇಳಿ ಎಡ್ರಾಸು ಬತ್ತಡ ಅಲ್ದಾ, ಆ ಎಡ್ರಾಸು ಇದ್ದರೆ ಮುಗಾತು. [ಈಮೈಲೆಡ್ರಾಸು ಹೇಳಿರೆ -ವಯಾ ಕುಂಬಳೆ, ವಯಾ ನೀರ್ಚಾಲು ಹೇಳಿ ಬರೆತ್ತ ನಮುನೆಯ - ಪೋಷ್ಟು ಎಡ್ರಾಸು ಅಲ್ಲ. ಮೈಲೆಡ್ರಾಸಿಂಗುದೇ ಈಮೈಲೆಡ್ರಾಸಿಂಗುದೇ ವಿತ್ಯಾಸ (ವೆತ್ಯಾಸ) ಇದ್ದು. ಒಬ್ಬಂಗೆ ಒಂದೇ ಗೆರೆ ಬಪ್ಪ ಎಡ್ರಾಸು ಅಡ. ನಿಂಗಳ ಹೆಸರು ಎಟ್(ಯೇವದರ್ಲಿ) ಕಂಪೆನಿಹೆಸರು ಹೇಳಿ ಬಪ್ಪದಡ ಅದು. ಆಚಕರೆ ಮಾಣಿ ಒಪ್ಪಣ್ಣಂಗೂ ಒಂದು ಈಮೈಲು ಮಾಡಿ ಕೊಟ್ಟಿದ° OppaOppanna@Gmail.com, ಕಿದೂರು ಡಾಕ್ಟ್ರುಬಾವ°, ಬೊಳುಂಬುಮಾವ° ಎಲ್ಲ ಕಾಗತ ಬರಕ್ಕೊಂಡು ಇರ್ತವು. ಕುಶೀ ಆವುತ್ತು ಅದರ ಓದಿರೆ. ಗೊಂತಿದ್ದಾ?]

ಅಂತೂ ಆ ಈಮೈಲೆಡ್ರಾಸಿನ ಹಾಕಿಕ್ಕಿ ’ಎನಗೊಂದು ಪುಟ ಮಾಡಿಕೊಡು’ ಹೇಳಿ ಸುಚ್ಚು ಒತ್ತಿರೆ ಮುಗಾತು... ನವಗೇ ಹೇಳಿ ಮಾಡಿದ ಬೆಶಿಬೆಶಿ ಪುಟ ನಮ್ಮ ಎದುರು ಕಾಣ್ತಡ. ಒಂದು ಸಣ್ಣ ಪಟವುದೇ, ರಜಾ ಜಾತಕವುದೇ ಅಲ್ಲಿ ತುಂಬುಸಿರೆ, ಅರೆಕ್ಷಣಲ್ಲಿ ಪುಟ ತೆಯಾರಿ. ನಮ್ಮ ಪುಟಲ್ಲಿ ನವಗೆ ಸಂಬಂದಪಟ್ಟ ವಿಶಯಂಗಳ ಬರದು ಇನ್ನೊಬ್ಬಂಗೆ ಕಾಣ್ತ ಹಾಂಗೆ ನೇಲುಸುಲೆ ಅಕ್ಕಡ. ನಿಂಗೊ ’ಎಂತದು’ , ನಿಂಗಳ ’ಆಸಕ್ತಿ’ ಎಂತರ, ನಿಂಗೊಗೆ ಮದುವೆ ಆಯಿದಾ, ಬದ್ದ ಕಳುದ್ದೋ, ಕೂಸು ನೋಡ್ತಾ ಇದ್ದಿರಾ, ಎಲ್ಲಿದ್ದಿ, ಎಂತಮಾಡ್ತಾ ಇದ್ದಿ ಎಲ್ಲ ಬರವಲಕ್ಕಡ. ಪಟದಪುಟ ಹೇಳಿ ಒಂದಿದ್ದಡ - ನಿಂಗಳದ್ದೇ ಆದ ಪಟಂಗ ಇದ್ದರೆ ತೆಗದು ತೆಗದು ನೇಲುಸುಲಕ್ಕಡ. ನಿಂಗೊಗೆ ಕುಶಿ ಆದ ವೀಡ್ಯಂಗಳನ್ನುದೇ ಹಾಕಲಾವುತ್ತಡ. ಬೇರೆ ಇನ್ನೂ ಎಂತೆಂತದೋ - ಆಚಕರೆ ಮಾಣಿ ಹೇಳಿಗೋಂಡು ಹೋದ°, ನವಗೆ ಅದೆಲ್ಲ ಪಕ್ಕನೆ ತಲಗೆ ಹೋಗ ಇದಾ! ;-(



ಎಂತ ಗುಣ ಇದ್ದು ಬೇಕೆ ಅದರ ಹಾಕಿ?’ ಕೇಳಿದೆ. ಅದು ಇಪ್ಪದೇ ಅದಕ್ಕೇಡ. ’ಸಮಾಜ ಸಂಪರ್ಕ ಸೇತು’ ಹೇಳಿದ° ಆಚಕರೆ ಮಾಣಿ. ಸಮಾಜದ ಎಲ್ಲೊರನ್ನುದೇ ಸಂಪರ್ಕ ಮಾಡುಸುತ್ತ ನಮುನೆಯ ಕಲ್ಪನೆ ಅಡ. ಎಲ್ಲೋರು ಬಂದು ಅವರವರ ಪುಟ ಮಾಡ್ತ ಕಾರಣ ಹಾಂಗೆಡ. ಒಬ್ಬ ಅದರ ಒಳ ಹೊಕ್ಕಪ್ಪಗ, ಬೇರೆ ಬೇರೆ ಜೆನಂಗಳ ಪುಟ ನೋಡಿಗೊಂಡು ಹೋಪಲೆ ಆವುತ್ತಡ. ಹೀಂಗೆ ಹೋಪಗ ಇನ್ನೊಬ್ಬ ಗುರ್ತದವನ ಪುಟ ಇದ್ದರೆ, ಅವನ ನಿಂಗೊಗೆ ಸರೀ ಗೊಂತಿದ್ದರೆ ಅವನ ’ಚೆಂಙಾಯಿ’ (ಗೆಳೆಯ /Friend ) ಹೇಳಿಗೊಂಡು ಸೇರುಸುಲಕ್ಕಡ. ಅವಂಗೂ ನಿಂಗಳ ಗುರ್ತ ಸಿಕ್ಕಿರೆ ’ಅಪ್ಪು’ ಹೇಳಿ ಉತ್ತರ ಕೊಡ್ತನಡ. (ಅಲ್ಲ-ಹೇಳಿ ಹೇಳುಲೂ ಅಕ್ಕಡ, ಗುರ್ತ ಇಲ್ಲದ್ರೂ ಮಾತಾಡುಸುತ್ತವರ ಎಲ್ಲ ದೂರ ಮಡುಗಲೆ ಬೇಕಾಗಿ!) ನಿಜ ಜೀವನಲ್ಲಿ ಅವು ಎಷ್ಟೇ ಗುರ್ತದವು ಆದರೂ, ಓರುಕುಟ್ಟಿನ ಚೆಂಙಾಯಿ ಅಷ್ಟಪ್ಪಗ ಸುರು ಆದ್ದಷ್ಟೇ! ಅವಿಬ್ರು ಆದವನ್ನೇ, ಅವಂಗೆ ಅದಾಗಲೇ ಇಪ್ಪ ಚೆಂಙಾಯಿಗಳ ಪಟ್ಟಿಯ ಇವ° ನೋಡ್ಳಕ್ಕು, ಇವನ ಗುರ್ತದವರ ಅವ° ನೋಡ್ಳಕ್ಕು. ಅದರ್ಲಿ ಪರಸ್ಪರ ಗುರ್ತದೋರು ಇದ್ದರೆ ’ಚೆಂಙಾಯಿ’ ಸೇರುಸುಲಕ್ಕು. ಹಾಂಗೇ ಬೆಳವದು, ಚೆಂಙಾಯಿ ಪಟ್ಟಿ.

ಚೆಂಙಾಯಿಗೊ ಅತ್ಲಾಗಿತ್ಲಾಗಿ ಮಾತಾಡ್ಳಾವುತ್ತಡ. ಪುಟಗಟ್ಳೆ ಬರದು ಮಾತಾಡುದು ಅಲ್ಲಡ, ಒಂದು-ತಪ್ಪಿರೆ ಎರಡೇ ಗೆರೆಯ "ಹುಂಡಂಚೆ" (Scrap) ಬರವದಡ. ಈಗೀಗ ಒಳ್ಳೆ ಲಾಯ್ಕಾವುತ್ತಡ ಅದು. ಆರಿಂಗಾರು ಎಂತಾರು ತಿಳಸೆಕ್ಕು ಹೇಳಿ ಆದರೆ ಇಲ್ಲಿ ಒಂದು ಹುಂಡಂಚೆ ಹಾಕಿರೆ ಮುಗಾತು. ಅವರ ಪುರುಸೋತಿಲಿ ನೋಡಿ ಅದಕ್ಕೆ ಉತ್ತರ ಬರೆತ್ತವಡ. ಪೋನೋ, ಮೆಸೇಜೋ ಮತ್ತೊ° ಮಾಡುದರಿಂದ ಇದು ಲಾಯ್ಕಾವುತ್ತಡ. ಈ ಹುಂಡಂಚೆ ಮಾಡಿರೆ ಎಲ್ಲೊರಿಂಗೂ ಕಾಣ್ತು, ’ಎನಗೆ ಸಿಕ್ಕಿದ್ದಿಲ್ಲೆಪ್ಪ!!!’ ಹೇಳಿ ಜಾರುಲೆ ಎಡಿತ್ತಿಲ್ಲೆ ಇದಾ! ಹೆ ಹೆ! ;-)

ಒಪ್ಪಣ್ಣನ ಬೈಲಿಲಿದೇ ಈ ಓರುಕುಟ್ಟು ಬಯಂಕರ ಆಯಿದು. ಎಲ್ಲೊರುದೇ ಒಂದೊಂದು ಪುಟ ಮಾಡಿಗೊಂಡಿದವು. ಅಡಕ್ಕೆಬಟ್ಟಕ್ಕೊ ಮೊದಲಿಂಗೆ ’ನಿಂಗಳಲ್ಲಿ ರೋಗ ಬಯಿಂದೋ?’ ಹೇಳಿ ಕೇಳಿದ ಹಾಂಗೆ ಈಗ ಜೆಂಬ್ರಂಗಳಲ್ಲಿ ’ನಿಂಗಳಲ್ಲಿ ಓರುಕುಟ್ಟ್ ಬಯಿಂದೋ’ ಹೇಳಿ ಮಾತಾಡಿಗೊಂಬಷ್ಟುದೇ! ಎನ್ನದಿದ್ದು - ಎನ್ನದಿದ್ದು ಹೇಳಿ ಹೇಳಿಗೊಂಬದೇ ಅಡ. ಮಕ್ಕೊ, ಪುಳ್ಳಿಯಕ್ಕೊ - ಅತ್ತೆಕ್ಕೊ - ಅಜ್ಜಿಯಕ್ಕೊ ಅಜ್ಜಂದ್ರು - ಎಲ್ಲೋರು ಬಂದು ಮಿಜುಳುತ್ತಾ ಇದ್ದವಡ. ಒಪ್ಪಣ್ಣನ ಚೆಂಙಾಯಿಗಳ ಪೈಕಿ ಹೆಚ್ಚಿನವುದೇ ಈಗ ಓರುಕುಟ್ಟಿಯೋಂಡಿದ್ದವು. ಓರುಕುಟ್ಟುದೇ ಹೊಸ ಹೊಸ ನಮುನೆ ಬತ್ತಾ ಇದ್ದಡ ಈಗ. ಸಣ್ಣ ತಲೆಗಳ ಪೈಕಿ ಆಚಕರೆ ಮಾಣಿ. ಅಜ್ಜಕಾನ ಬಾವ, ಎಡಪ್ಪಾಡಿ ಬಾವ, ಪಾಲಾರಣ್ಣ, ಸಿದ್ದನಕೆರೆ ಮಾಣಿ, ಯೇನಂಕೂಡ್ಳಣ್ಣ, ಕಾಂಚೋಡಿಮಾಣಿ, ದೊಡ್ಡಬಾವ, ಪೆರ್ಲದಣ್ಣ, ಪುಟ್ಟಕ್ಕ, ಒಪ್ಪಕ್ಕ, ದೀಪಕ್ಕ, ಚೆಂಬಾರ್ಪು ಅಣ್ಣ, ಚೆನ್ನಬೆಟ್ಟಣ್ಣ, ವೇಣೂರಣ್ಣ, - ಎಲ್ಲೊರುದೇ. (ಇವೆಲ್ಲ ಹೊಸ ನಮುನೆ ಓರುಕುಟ್ಟಿಲಿ ನೇತೋಂಡಿದ್ದರೆ ಗುಣಾಜೆ ಮಾಣಿಗೆ ಹೊಸತ್ತು ಮಾಡ್ತ ಕ್ರಮ ಗೊಂತಾಗದ್ದೆ ತಲೆ ತೊರುಸಿ ತೊರುಸಿ ಉಗುರು ಇಡೀಕ ಮಣ್ಣಾಯಿದಡ) ಇವೆಲ್ಲ ಮಾಂತ್ರ ಅಲ್ಲದ್ದೆ ದೊಡ್ಡೋರುದೇ ಬಯಿಂದವು. ಗಣೇಶಮಾವ, ಶುಬತ್ತೆ, ರಂಗಮಾವ, ಮಾಷ್ಟ್ರಮನೆ ಅತ್ತೆ, ಮಾಲ ಚಿಕ್ಕಮ್ಮ, ಕಳಾಯಿ ಗೀತತ್ತೆ, ಪೆರುಮುಕಪ್ಪಚ್ಚಿ, ಕೋರಿಕ್ಕಾರು ಮಾವ - ಎಲ್ಲೊರುದೇ. ಬಂಡಾಡಿ ಅಜ್ಜಿ, ಕಜಂಪಾಡಿ ಅಜ್ಜಿಯ ಹಾಂಗೆ ಕೆಲವು ಅಜ್ಜಿಯಕ್ಕಳೂ ಬಂದು ಒಟ್ಟಿಂಗೆ ಸೇರಿದ್ದು ನಿಜವಾಗಿ ಚೋದ್ಯ! ತಳೀಯದ್ದೆ ರೇಡಿಯ ಹಿಡ್ಕೊಂಡು ದಂಟುಕುಟ್ಟುವ ಬದಲು ಓರುಕುಟ್ಟಿಗೊಂಡು ಕೂಪದು!!!
ಶೇಡಿಗುಮ್ಮೆ ಬಾವಂಗೆ ಅದರ ತಲೆಬುಡ ಅರಡಿಯದ್ದೆ ಸುಮ್ಮನೆ ಕೂಯಿದ°. (ಅಜ್ಜಕಾನಬಾವ ನಾಕು ಸರ್ತಿ ಹೇಳಿಕೊಟ್ಟಿಕ್ಕಿ ’ಇನ್ನು ಇಂದಿರತ್ತೆಯೇ ಬರೆಕ್ಕಷ್ಟೆ!’ ಹೇಳಿಕ್ಕಿ ಮನೆಗೆ ಹೆರಟ° ಓ ಮೊನ್ನೆ.)


ರೂಪತ್ತೆ ಅಂತೂ ಬ್ರೋಡುಬೇಂಡು ಆಗಿ ಆ ಎಲಿ ಉಪದ್ರ ಕಮ್ಮಿ ಆದ ಕೂಡ್ಳೇ ಸುರು ಮಾಡಿದ್ದು. (ಶೇಡಿಗುಮ್ಮೆಂದ ತಂದ ಅದರ ಆಲ್ಸೇಶನ್ ನಾಯಿ, ಐಟೆನ್ ಕಾರಿನ ಎದುರು ನಿಂದ ಪಟವುದೇ, ಅವರಲ್ಲೇ ಆದ ಕೆಂಪು ಗುಲಾಬಿಯ ಪ್ರಿಜ್ಜಿನ ಮೇಗೆ ಮಡಗಿದ ಪಟವುದೇ ಹಾಕಿತ್ತಿದ್ದು) ದೀಪಕ್ಕಂಗೆ ಮಲ್ಲಿಗೆಮುಗುಟಿನ ಪಟ ಹಾಕಲೆ ಒಳ್ಳೆ ಜಾಗೆ ಸಿಕ್ಕಿತ್ತಿದಾ! ಚೂರಿಬೈಲು ಡಾಕ್ಟ್ರುಬಾವ ಮಣಿಪುರದ ಸೆಸಿಗಳ ಪಟ ಹಾಕಿದ್ದವು. ಕೆದೂರು ಡಾಕ್ಟ್ರುಬಾವ ಸದ್ಯ ಓಪ್ರೇಶನು ಮಾಡಿದ್ದರ ಪಟ ಹಾಕಿದ್ದವು, ಗಣೇಶಮಾವ ಕೈಲಾಸ ಪರ್ವತದ್ದು ಹಾಕಿದ್ದವು, ಒಪ್ಪಕ್ಕ ಬಾಬೆಯ ಪಟ ನಾಕು ಹಾಕಿದ್ದು, (ಈಗಲೇ ಎಂತಪ್ಪ ಅರ್ಜೆಂಟು ಕೇಳಿದ ಒಪ್ಪಣ್ಣನ ಹತ್ರೆ ರಜಾ ಪಿಸುರು!), ಪುಟ್ಟಕ್ಕ ಸಮುದ್ರಕರೆಲಿ ಆಡ್ತ ಪಟ ಹಾಕಿದ್ದು, ಆಚಕರೆ ಮಾಣಿ ಅವನ ಅಳಿಯ ಅಂತೇ ಮನುಗಿದ್ದರ ಹಾಕಿದ್ದ, ಗುಣಾಜೆ ಮಾಣಿ ಕೂಸುಗೊ ಹೇಳದ್ದೆಓಡಿಹೋದ ಶುದ್ದಿ ಹಾಕಿದ್ದ, ದಿನಾಗುಳದೇ! ಪಾಲಾರಣ್ಣ ಜೋಗದ ಕರೆಲಿ ನೇತುಗೊಂಡಿಪ್ಪದನ್ನುದೇ, ಅಜ್ಜಕಾನ ಬಾವ ಓ ಮೊನ್ನೆ ರೈಲಿಲಿ ಹೋದ ಪಟಂಗಳನ್ನುದೇ (ರೈಲಿಲಿ ಹೋದ ಶುದ್ದಿ ಗಮ್ಮತ್ತಿದ್ದು, ಇನ್ನೊಂದರಿ ಹೇಳ್ತೆ) ಹಾಕಿದ್ದವು. ಎಡಪ್ಪಾಡಿ ಬಾವ ನಾಕು ಪುಳ್ಳರುಗಳ ಒಟ್ಟಿಂಗೆ ಇಪ್ಪ ಪಟ ಇದ್ದಡ, ಬಂಡಾಡಿ ಅಜ್ಜಿ ಅದರ ಪುಳ್ಳಿಯ ಬದ್ದದ್ದಿನ ತೆಗದ ಪಟ ಹಾಕಿದ್ದೋ ಏನೋ..! ದೊಡ್ಡಬಾವಂಗೆ ಮಾಂತ್ರ ಪಟ ಹಾಕುದು ಹೇಂಗೆ ಹೇಳ್ತದು ಮಂಡಗೆ ಹೊಕ್ಕದ್ದೆ ಬಾಕಿ. ಶಾಲೆಪಟ ಎರಡು ಹಾಕುಲೆ ಹೇಳಿಗೊಂಡು ಹೆರಟವು, ಎಡಿಗಾಯಿದಿಲ್ಲೆ. ಯೇವ ಪಟವುದೇ ಇಲ್ಲೆ ಅವರ ಪುಟಲ್ಲಿ!

ಎಲ್ಲೊರುದೇ ಅತ್ತಿತ್ತೆ ಮಾತಾಡಿಗೊಂಡು ಗಮ್ಮತ್ತಿಂಗೆ ಇದ್ದವೀಗ. ದೀಪಕ್ಕ ಮಾಷ್ಟ್ರಮನೆ ಅತ್ತೆಗೆ ’ಕಾಪಿಗೆಂತ’ ಕೇಳಿತ್ತಡ. ಮಾಷ್ಟ್ರುಮನೆ ಅತ್ತೆ ’ತೆಳ್ಳವು’ ಹೇಳಿ ಉತ್ತರ ಬರದ್ದಡ. ಇದರ ನೋಡಿ ಹನ್ನೊಂದುಗಂಟೆ ಹೊತ್ತಿಂಗೆ ಆಚಕರೆ ಮಾಣಿ ಹಾಜರಡ. ಪಾಪ! ತೆಳ್ಳವು ಮುಗುದ್ದು ಅಲ್ಲಿ, ಅದರಿಂದ ಮೊದಲೇ! ;-) ಇಬ್ರು ಮಾತಾಡಿಗೊಂಬದು ಮೂರ್ನೆಯವಂಗೆ ಕಾಣ್ತಡ ಅಲ್ಲದೋ, ಅದಕ್ಕೆ ಈ ತಟಪಟಂಗ ಆದ್ದು! ;-) ಬೆಂಗ್ಳೂರಿಲಿಪ್ಪ ಶುಬತ್ತೆಯ ಹತ್ರೆ ರೂಪತ್ತೆ ಓರುಕುಟ್ಟಿಯೋಂಡೇ ಮಾತಾಡುದಡ. ಹರಿಮಾವಂಗೆ ಪರಾದಿನಕ್ಕೆ ಹುಂಡಂಚೆ ಬರದರೆ ಆವುತ್ತಡ ಈಗ! (ಮಾಷ್ಟ್ರುಮನೆ ಅತ್ತೆಯ ಹುಂಡಂಚೆ ಪುಟದ ಪಟ ಸಿಕ್ಕಿತ್ತು, ರಜ್ಜ ಚೆಂಡಿ ಆಗಿ ಹಾಳಾದ ಹಾಂಗೆ ಆಯಿದು, ಆದರೂ ಓದಲೆಡಿಗು!)

ನಿನ್ನೆ ಇರುಳು ಒಪ್ಪಕ್ಕ° ಓದಿಗೊಂಡಿತ್ತು. ಪರೀಕ್ಷೆಯೋ ಎಂತದೋ ಇತ್ತದಕ್ಕೆ. ಒಂದಾ ಪರೀಕ್ಷೆ, ಅಲ್ಲದ್ರೆ ಲೇಬು (Lab) - ಎರಡ್ರಲ್ಲಿ ಒಂದು - ಯೇವತ್ತು ನೋಡಿರೂ. ಎರಡೇ ಇಪ್ಪದೋ ಕಾಣ್ತು, ರಾಮಜ್ಜನ ಕೋಲೇಜಿಲಿ. ಅಂತೂ ಪರೀಕ್ಷೆ ಸಮಯಲ್ಲಿ ನೆಡಿರುಳು ಒರೆಂಗೆ ಕೂದುಗೊಂಡು ಓದುಗು. ಇರುಳು ಹತ್ತನ್ನೆರಡು ಗಂಟೆ ಹೊತ್ತಿಂಗೆ ಒಂದರಿ ಒರಕ್ಕು ತೂಗುಲೆ ಸುರು ಆದರೆ, ಪಕ್ಕನೆ ಓರುಕುಟ್ಟುದಡ. ’ಆರಾರದ್ದು ಎಂತರ ಶುದ್ದಿ?’ ಹೇಳಿ. ಅಷ್ಟೆ - ಒಂದರಿ ನೋಡಿಕ್ಕಿ ಪುನಾ ಮುಚ್ಚಿ ಮಡಗುದು- ಒರಕ್ಕು ತೂಗುದಕ್ಕೆ ದಕ್ಕಿತ.

ಗಣೇಶಮಾವ° ಓ ಮೊನ್ನೆ ಮಾಡಾವಕ್ಕನ ಮನೆ ಜೆಂಬ್ರಕ್ಕೆ ಬೆಂದಿಗೆ ಕೊರದು (/ಮೇಲಾರಕ್ಕೆ ಕೊರದು) ಬಂದವಡ. ಮುನ್ನಾಣದಿನ ಇರುಳು ಇದಾ, ಬೆಂದಿಗೆಕೊರವಲೆ ಕೂದರೆ ವೆಜ್ಜು-ನೋನುವೆಜ್ಜು ಹೇಳಿ ಎಂತೂ ಇಲ್ಲೆ- ಒರಕ್ಕು ಅಂತೂ ಬಿಡುಗು! ;-) ನೆಡಿರುಳು ಮನೆಗೆ ಬಂದವು. ಮನುಗಿದವು, ಒರಕ್ಕು ಬರೆಕ್ಕೇ!! ಎದ್ದು ಕಂಪ್ಯೂಟರು ಹಾಕಿ ಓರುಕುಟ್ಟುಲೆ ಸುರು ಮಾಡಿದವು.’ಎಂತರ ಶುದ್ದಿ ಇದ್ದು?’ ಹೇಳಿ ನೋಡಿಗೊಂಡು ಕೂದವು , ಒರಕ್ಕು ಬಪ್ಪನ್ನಾರ. ರಜ ಹೊತ್ತಿಲಿ ಬೆಲ್ಲತೂಗುಲೆ ಸುರು ಆಗಿ ಒರಗಿದವು.

ಅಂತೂ ಇಂತೂ ಎಲ್ಲೋರಿಂಗೂ ಮರುಳು ಹಿಡುಸಿದ್ದು ಈ ಓರುಕುಟ್ಟು. ಒಪ್ಪಣ್ಣಂಗುದೇ ಒಂದು ಪ್ರೊಪೈಲು ಪುಟ ಮಾಡೆಕ್ಕು ಹೇಳಿ ಎಳಗಿದ್ದು, ನಾಳೆ ಹೊತ್ತೋಪಗ ಆಚಕರೆ ಮಾಣಿ ಬತ್ತನಡ, ಹೇಳಿಕೊಡ್ಳೆ.

ಇದರೆಡಕ್ಕಿಲಿ ಎಡಪ್ಪಾಡಿ ಬಾವ° ಒಂದು ಶುದ್ದಿ ಹೇಳಿದ ಎಂಗೊಗೆಲ್ಲ. ಗುರುಗಳ ವೆಬ್ಸೈಟು ಇದ್ದಲ್ದ, ಹರೇರಾಮ, ಅದಾ- ಓ ಮೊನ್ನೆ ಮಾತಾಡಿದ್ದು, ಅದರ್ಲಿದೇ ಓರುಕುಟ್ಟಿನ ಹಾಂಗೆಯೇ ಒಂದು ಪುಟ ಮಾಡ್ಳಾವುತ್ತಡ. ಗುರುಗಳ ಹತ್ರೆ ನೇರವಾಗಿ ಹುಂಡಂಚೆ ಬರದು ಮಾತಾಡ್ಳಾವುತ್ತಡ. ಗುರುಗಳೇ ಬರೆತ್ತ ಬ್ಲೋಗುಗೊ ಎಲ್ಲ ಇರ್ತಡ. ಹಾಂಗಾಗಿ ಈಗ ಓರುಕುಟ್ಟಿಂದಲೂ ಹರೇರಾಮಲ್ಲಿ ಪುಟಮಾಡಿರಕ್ಕೋ ಹೇಳಿ ಒಂದು ಕನುಪ್ಯೂಸು ಬಯಿಂದು. ನೋಡೊ° - ಎಂತಕೂ ಆಚಕರೆಮಾಣಿ ಬರಳಿ, ಅವಂಗೆ ಅದೆಲ್ಲ ಅರಡಿಗು. ಗುರುಗಳೇ ನೇರವಾಗಿ ಸಿಕ್ಕುತ್ತರೆ ಹರೇರಾಮಲ್ಲಿ ಮಾಡ್ತದು ಒಳ್ಳೆದಲ್ಲದೋ? ಓರುಕುಟ್ಟು ಬೊಡುದವೆಲ್ಲ ಇನ್ನು ಹರೇರಾಮಲ್ಲಿ ಮಾತಾಡ್ತವಾಯಿಕ್ಕು.
ಅಲ್ಲದಾ?

ಎಂತದೇ ಆಗಲಿ ಬಾವ, ಈ ಓರುಕುಟ್ಟಿಂದಾಗಿ ನಮ್ಮೋರ ಮಾತುಕತೆಗೊ ಸುಲಬ ಆಯಿದು. ಸಂಪರ್ಕ ಬಾರೀ ಹತ್ತರೆ ಆಯಿದು. ತುಂಬ ಒಳ್ಳೆದೇ. ಆದರೆ ಅತಿ-ಅಪ್ಪಲಾಗ ಇದಾ. ಹಿಡಿತಲ್ಲಿ ಬೇಕು. ದಿನಕ್ಕೆ ಎರಡು-ಮೂರುಸರ್ತಿ ಓರುಕುಟ್ಟಿರೆ ಏನೂ ಸಾರ ಇಲ್ಲೆ. ಕೆಲವು ಜೆನ ಅದರ್ಲೇ ಹೊಡಚ್ಚಿಗೊಂಡು ಇರ್ತವಡ. ನಮ್ಮಲ್ಲೂ ಇದ್ದವಪ್ಪ ಅಂತವು, ಕೆಲವು ದಿಕೆ ಕೃಷಿ ಕಂಗಾಲಾಯಿದು, ಪಾಪ. ತೋಟಲ್ಲಿ ಅಡಕ್ಕೆ ಹೆರ್ಕದ್ದೆ ಎರಡೆರಡು ವಾರ ಅಪ್ಪದಿದ್ದು. ಕೊಯಿಲಿನ ಅಡಕ್ಕೆ ತೋಟಲ್ಲೇ ಬಾಕಿ ಅಪ್ಪದೂ ಇದ್ದು - ಹೆರ್ಕುಲೆ ಪುರುಸೊತ್ತಿಲ್ಲೆ. ಮತ್ತೆ ’ಆಳುಗೊ ಬತ್ತವಿಲ್ಲೆ’ ಹೇಳಿ ಬೈದರೆ ಮುಗಾತು. ಕಳಾಯಿ ಗೀತತ್ತೆ ಹಾಂಗೇ ಮಾಡುದು. ;-) ಎಲ್ಲೊರು ಓರುಕುಟ್ಟುತ್ತವು ಹೇಳುದಲ್ಲ ಆನು, ಕೆಲವು ಜೆನಕ್ಕೆ ಅದು ಬೊಡುದ್ದು. ಮಾಡಾವಕ್ಕನ ಎಲ್ಲ ಕಾಂಬಲೇ ಇಲ್ಲೆ ಈಗ. ಬೊಡುದು ಬಚ್ಚಿದ್ದು, ಪಾಪ! ಅಲ್ದೋ?


ಒರಕ್ಕು ಬತ್ತರೂ, ಒರಕ್ಕು ಬಾರದ್ರೂ ಎರಡೂ ದಿಕ್ಕೆ ಓರುಕುಟ್ಟೇ ಇದ್ದರೆ ಕತೆ ಅಕ್ಕೋ? ರಜಾ ಬೇರೆಯುದೇ ಆಲೋಚನೆ ಇರೆಡದೋ! ಒರಕ್ಕಿಂದಲೂ ಓರುಕುಟ್ಟು ಮುಖ್ಯ ಹೇಳಿ ಮಾಡಿಕ್ಕೆಡಿ ಇನ್ನು, ಹಾಂ.

ಒಂದೊಪ್ಪ: ಒರಗಿರೆ ಸಿಕ್ಕುವ ಆನಂದ ಓರುಕುಟ್ಟುವಗ ಸಿಕ್ಕುಗೋ?