'ಕೊಡಿಮರ'ದ ಸಾಗುವಾನಿಯ ಕಡುದು ಮಾರಿದ ಶುದ್ದಿ

ಕೊಡಿಮರ ಗೊಂತಿದ್ದನ್ನೇ?
ಗೊಂತಿಲ್ಲದ್ರೆ ಇದಾ: ನಮ್ಮ ಊರ ದೇವಸ್ಥಾನಂಗಳಲ್ಲಿ ಮುಖ್ಯದ್ವಾರ ಕಳುದು ಒಳ ಹೋಪಗ ಗೋಪುರ ಸಿಕ್ಕುತ್ತು. ಅಲ್ಲಿಂದಲೇ ಒಳದಿಕ್ಕೆ ಅಂಗಣ (ದೇವರ ಜಾಲು). ಈ ಅಂಗಣದ ಮಧ್ಯ ಬಪ್ಪದು ಗುಂಡ (ಗರ್ಭಗುಡಿ), ಅದರ ಎದುರು ನಮಸ್ಕಾರ ಮಂಟಪ. ಗರ್ಭಗುಡಿಯ ಸುತ್ತುದೇ ಸುಮಾರು ಸಣ್ಣ ಸಣ್ಣ ಕಲ್ಲುಗೊ ಇರ್ತು. ಗುಂಡದ ಒಳದಿಕ್ಕೆ ಇರ್ತ ದೇವರ ಗಣಂಗೊ ಈ ಕಲ್ಲುಗಳಲ್ಲಿ ಇರ್ತದು ಹೇಳಿ ಲೆಕ್ಕ. (ಜಾತ್ರೆದಿನ ತಂತ್ರಿಗೊ ಬಂದು - ನೇರಳೆಮರ ಸೊಪ್ಪು ಎಲ್ಲ ಹಾಕಿ- ಈ ಬಲಿಕಲ್ಲುಗೊಕ್ಕೆ ವಿಶೇಷ ನೈವೇದ್ಯ ಕೊಡ್ತವು, ನೋಡಿದ್ದಿರನ್ನೇ?) ಸುತ್ತ ಸಣ್ಣ ಸಣ್ಣ ಬಲಿಗಲ್ಲು ಇದ್ದರೆ, ನಮಸ್ಕಾರ ಮಂಟಪಂದಲೂ ಎದುರು, ಮುಖ್ಯದ್ವಾರದ ಎದುರಂಗೆ ಸಿಕ್ಕುವ ಹಾಂಗೆ ದೊಡ್ಡದಾದ ಬಲಿಗಲ್ಲು ಇರ್ತು. ದೊಡ್ಡ ದೇವಸ್ಥಾನಂಗಳಲ್ಲಿ ಅದರ್ಲಿ ಒಂದು ಎತ್ತರದ ಮರ ನಿಲ್ಲುಸಿಗೊಂಡು ಇರ್ತು. ಅದಕ್ಕೇ ’ಕೊಡಿಮರ’ ಹೇಳಿ ಹೆಸರು. ಕೊಡಿ ಹೇಳಿರೆ ಧ್ವಜ ಹೇಳಿ ಅರ್ತ ಇದ್ದಡ. ದೇವಸ್ಥಾನದ ಜಾತ್ರೆಯ ಸಮಯಲ್ಲಿ ಈ ಮರದ ಕೊಡಿಯಂಗೆ ಧ್ವಜ ಏರುಸುತ್ತವು, ಕೊಡಿಏರುದು ಹೇಳ್ತವದಕ್ಕೆ. ಜಾತ್ರೆಯ ಗೌಜಿ ಪೂರ ಮುಗುದ ಮತ್ತೆ ಧ್ವಜ ಇಳಿವದು. (ಅಷ್ಟು ಸಮಯ ಊರವಕ್ಕೆಲ್ಲ ದೇವರದ್ದೇ ಹಬ್ಬ, ಅವರವರ ಮನೆಲಿ ಎಂತ ಜೆಂಬ್ರವೂ ಇರ) ಕಣಿಯಾರದ ಹಾಂಗೆ ಕೆಲವು ಪ್ರಸಿದ್ಧ ದೇವಸ್ಥಾನಂಗಳಲ್ಲಿ ಚೆಂಬಿನ ಕಂಬ ಇದ್ದರೂ, ಆದಾಯ ಕಮ್ಮಿ ಇರ್ತ ದೇವಸ್ಥಾನಂಗಳಲ್ಲಿ ಇನ್ನುದೇ ಮರವನ್ನೇ ಉಪಯೋಗುಸುತ್ತವು. ಕೊಡಿಮರ ಹೇಂಗಿರೆಕ್ಕು- ಸರೂತಕ್ಕೆ, ತೋರಕ್ಕೆ - ಗಟ್ಟಿಗೆ. ಸಾಗುವಾನಿಯೋ - ಹಲಸೋ ಮತ್ತೊ° ಆಯೆಕ್ಕು ಅದಕ್ಕೆ. ಹಲಸು ಸರೂತಕ್ಕೆ ಮೇಗಂಗೆ ಹೋವುತ್ತದು ಕಮ್ಮಿ ಆದ ಕಾರಣ ಕೊಡಿಮರಕ್ಕೆ ಹೆಚ್ಚಾಗಿ ಬಳಸುದು ಸಾಗುವಾನಿಯನ್ನೇ.[ ಸಾಗುವಾನಿ = ತೇಗ (ಕನ್ನಡ) /  Teak Wood (ಇಂಗ್ಳೀಶು) / Tectona (ಜೀವಶಾಸ್ತ್ರ)]

ಬದಿಯೆಡ್ಕಂದ ವಿಟ್ಳಕ್ಕೆ ಹೋಪಗ ಅರ್ದಲ್ಲಿ ಬೈಲಮೂಲೆ ಹೇಳಿ ಒಂದು ಊರು ಸಿಕ್ಕುತ್ತು. ಹಳೆಕಾಲದ ಪ್ರಸಿದ್ಧ ಸುಬ್ರಾಯಜ್ಜನ ನಿಂಗೊಗೆ ಕೇಳಿ ಗೊಂತಿದ್ದೋ ಏನೋ! ಬೈಲಮೂಲೆ ಸುಬ್ರಾಯ ಭಟ್ಟ ಹೇಳಿರೆ ಮೊದಲಿಂಗೇ ಹೆಸರು ಹೋದ ವೆಕ್ತಿ.  ಈಗಂಗೆ ನಾಲ್ಕು ತಲೆ(ಮಾರು) ಹಿಂದೆ. ಸೊತಂತ್ರ ಸಿಕ್ಕುವ ಮೊದಲಿಂಗೇ ಆತಿದಾ.
ದೊಡ್ಡ ಅಡಕ್ಕೆ ಕೃಷಿಕ. ಕೊಡೆಯಾಲಕ್ಕೆ ಹೋಗಿ, ವೇಪಾರ ಮಾಡಿಗೊಂಡು ಬಕ್ಕಡ. ದೊಡ್ಡ ತೋಟ. ಊರ ಗುರಿಕ್ಕಾರ್ತಿಗೆ ಬೇರೆ. ನಮ್ಮ ಸಮಾಜಲ್ಲಿ ಮಾಂತ್ರ ಅಲ್ಲದ್ದೇ, ಹೆರಾಣೋರಿಂಗೂ ಅವರ ಮೇಗೆ ಪ್ರೀತಿ ಇತ್ತಿದ್ದ ಕಾರಣ ಊರ ದೇವಸ್ತಾನಲ್ಲಿ ಮೊಕ್ತೇಸರಿಕೆಯುದೇ ಇತ್ತಿದ್ದು.
ಅವರ ಮನೆಯ ದೊಡಾ ಜಾಗೆ ವಳಚ್ಚಲಿಲಿ ಅಡಕ್ಕೆ ಮಾಂತ್ರ ಅಲ್ಲದ್ದೆ ಬೇರೆ ಕೆಲವು ಕೃಷಿಗಳನ್ನೂ ಮಾಡುಗು. ಮಾವು-ಹಲಸು- ಸಾಗುವಾನಿ ಸೆಸಿಗಳ ಮಾಡಿತ್ತಿದ್ದವು. ಮರ ಇದ್ದರೇ ಅಲ್ದೋ ಬೂಮಿಗೆ ಒಂಬು. ಸೆಸಿಗಳ ಆರೈಕೆ ಸರೀ ಅರಡಿಗು ಅವಕ್ಕೆ. ಯೇವ ಯೇವ ಸೆಸಿಯ ಹೇಂಗೆ ಸಾಂಕೆಕ್ಕೋ, ಹಾಂಗೇ ಸಾಂಕಿಯೊಂಡು ಇತ್ತಿದ್ದವು. ಕಾವಿನಮೂಲೆ ಮಾಣಿ ಶಾಲೆಲಿ ಹೇಳಿಕೊಡುವ ನಮುನೆಲಿ. ಸೆಸಿ ಆಗಿಪ್ಪಗ ಸಾಗುವಾನಿಲಿ ಎಗೆ ಬಂದರೆ ಮರದ ಒಂಬು ಹೋತು ಹೇಳಿಗೊಂಡು, ಅದಕ್ಕೆ ಸಣ್ಣ ಸೆಸಿಗೆ ಬೆದುರು ಕಟ್ಟಿ, ಎಗೆ ಹೋಪಲೆ ಬಿಡದ್ದೆ ಸರೂತಕ್ಕೆ ಬೆಳೆಸಿತ್ತಿದ್ದವು. ನೂಲು ಮಡಗಿದ ಹಾಂಗೆ ಸಾಗುವಾನಿ ಸೆಸಿಗಳ ರಾಶಿ ಇತ್ತು ಅವರ ವಳಚ್ಚಾಲಿಲಿ.
ಅವರ ಜವ್ವನಲ್ಲಿ ಮಾಡಿದ ಸೆಸಿಗಳ ಪೈಕಿ ಒಂದಂತೂ ಅತ್ಯಂತ ಚೆಂದ ಆಗಿ ಬಂದಿತ್ತು. ತೋಟದ ಕರೆ ಆದ ಕಾರಣ ತೆಂಗಿನಮರದ ಈಟನ್ನೂ ತಿಂದುಗೊಂಡು ಒಳ್ಳೆತ ಚೆಂದಕ್ಕೆ ಬೆಳದಿತ್ತು. ಊರ ದೇವಸ್ತಾನಕ್ಕೆ ಕೊಡಿಮರ ಆಯೇಕು ಹೇಳ್ತ ಪ್ರಸ್ತಾಪ ಊರೋರಲ್ಲಿ ಬಂದ ಸಮಯಲ್ಲಿ ಇದ್ದ ಸುಬ್ರಾಯಜ್ಜ°, ’ಈ ಮರ ಕೊಡಿಮರಕ್ಕೆ!’ ಹೇಳಿ ಮಾತು ಮಡಗಿದವು, ನಲುವತ್ತೊರಿಷ ಆಗಿತ್ತು ಆ ಮರಂಗೊಕ್ಕೆ. ಇನ್ನೂ ಹತ್ತೊರಿಷ ಹೋದರೂ ಸಾರ ಇಲ್ಲೆ ಹೇಳಿಗೊಂಡು ಸುಮ್ಮನೆ ಕೂದವು. ಸಾಗುವಾನಿ ಹಾಂಗೇಡ ಅಲ್ದೋ? ಕಡಿವ ಮೊದಲು ಎಷ್ಟೊರಿಶ ಆಯಿದೋ ಅಷ್ಟೇ ಒರಿಶ ಕಡುದಮತ್ತುದೇ ಬಾಳತನ (ಬಾಳ್ವಿಕೆ) ಬತ್ತಡ, ಶಂಬಜ್ಜ° ಹೇಳುಗು ಮದಲಿಂಗೆ.
ಸುಬ್ರಾಯಜ್ಜನ ಕಾಲ ಆತು, ದೇವಸ್ತಾನಲ್ಲಿ ಊರಿನ ಬಂಟ ಒಂದು ಮೋಕ್ತೇಸರ ಆತು, ಕೊಡಿಮರದ ವಿಷಯ ಅಡಿಯಂಗೆ ಬಿದ್ದತ್ತು.
ಮುದಿಅಜ್ಜನ ಜಾಗೆ ಅವರ ಮಕ್ಕೊ ಇಬ್ರು ಪಾಲು ಮಾಡಿಗೊಂಡವು. ನಾರಾಯಣ - ಕೃಷ್ಣ ಹೇಳಿ ಇಬ್ರು ಅಜ್ಜಂದ್ರು. ಜಾಗೆ ಅರ್ದರ್ದ ಆತು, ಸಾಗುವಾನಿ ಸೆಸಿಗಳುದೇ ಪಾಲಾತು. ಕೊಡಿಮರದ ಸಾಗುವಾನಿ ತಮ್ಮನ ಪಾಲಿಂಗೆ ಬಂತು. ಅಂಬಗ ಎಂತೂ ದೊಡ್ಡ ಸಂಗತಿ ಆಯಿದಿಲ್ಲೆ. ಆ ತಲೆ ಚೆಂದಕ್ಕೆ ಬದುಕ್ಕಿ ಹೋಯಿದು. ಸಾಗುವಾನಿ ಮರ ಇನ್ನುದೇ ತೋರಕ್ಕೆ - ಚೆಂದಕೆ ಬೆಳದತ್ತು. ಈಗ ಮಾತಾಡ್ತಾ ಇಪ್ಪದು ಅದರಿಂದಲೂ ಮತ್ತಾಣ ತಲೆಮಾರಿನ ಶುದ್ದಿ.

ಈ ಕೃಷ್ಣಜ್ಜಂಗೆ ಏಳು ಜೆನ ಮಕ್ಕೊ. ಐದು ಗೆಂಡುಮಕ್ಕೊ, ಎರಡು ಕೂಸುಗೊ.
ಕೂಸುಗಳ ಕೊಟ್ಟು ಎಲ್ಲೊರು ನೆಮ್ಮದಿಲಿ ಇದ್ದವು. ಮಾಣಿಯಂಗಳ ಪೈಕಿ ದೊಡ್ಡವು ಸುಬ್ರಮಣ್ಯಮಾವ° ಕೃಷಿ , ಎರಡ್ಣೇ ಮಾಲಿಂಗಮಾವಂಗೆ ಜೋಯಿಷತ್ತಿಗೆ. ಮೂರ್ನೆಯ ಕೇಶವಮಾವ° ಮನೆಲೇ, ಗುರಿಕ್ಕಾರ್ತಿಗೆ ಬಯಿಂದು- ಹಿಂದಾಣೋರದ್ದು, ನಾಲ್ಕನೆಯ ಶಂಕರಮಾವಂಗೆ ಬೇಂಕಿನ ಕೆಲಸ - ನಮ್ಮ ಪ್ರಸಾದಮಾವಂಗೆ ಗುರ್ತ ಇದ್ದು - ಒಂದೇ ಬೇಂಕಿಲಿ ಇದ್ದಿದ್ದವಡ ರಜ್ಜ ಸಮಯ. ಐದನೆಯವ° - ಸಣ್ಣಮಾವ° - ಶಿವರಾಮಮಾವಂಗೆ ಒಕ್ಕಾಲ್ತಿಗೆ (Lawer).  ಒಕಾಲ್ತಿಗೆ ಕಲ್ತರೂ, ಪೇಟೆಗೆ ಹೋಗಿ ಕೂಯಿದವಿಲ್ಲೆ, ಕಲ್ತ ಸಮಯಲ್ಲಿ ಒಂದೆರಡು ಬಯಿಂದಡ, ಮತ್ತೆ ದೊಡ್ಡ ಆಸಕ್ತಿ ಇಲ್ಲದ್ದ ಕಾರಣ ಮನೆಲೇ ಕೂದುಗೊಂಡವು, ಹೇಂಗೂ ಕೃಷಿ ಇದ್ದನ್ನೇ!

ಓ ಮೊನ್ನೆ ಪಾಲಾತು ಈ ಮಾವಂದ್ರಿಂಗೆ. ಹಿಂದಾಣೋರು ಮಾಡಿದ್ದರ ಪಾಲು ಮಾಡ್ಳುದೇ ಜಗಳ - ಕಿತ್ತಾಟ. ಸ್ವಂತದ್ದಲ್ಲ ಇದಾ, ಹಾಂಗಾಗಿ ಗ್ರೇಶಿದ್ದರಿಂದ ತುಂಬ ಹೆಚ್ಚು ಸಿಕ್ಕಲಿ ಹೇಳಿ ದುರಾಶೆ.
ಸುಮಾರು ಸರ್ತಿ ಪಾಲು ಪಂಚಾತಿಗೆ ಆಗಿ ಆಗಿ, ಪಂಚಾತಿಗೆ ಮಾಡ್ತ ಒಬ್ಬ ಹೆರಿಯವು ತೀರಿ ಹೋದರೂ ಮುಗುದ್ದಿಲ್ಲೆ. ಅಕೇರಿಗೆ ಹೇಂಗೆಲ್ಲ ಪಾಲು ಮಾಡಿಗೊಂಡವು. ತೋಟಕ್ಕೆ ಹೋಗಿ ಅರಡಿಯದ್ದ ಜೋಯಿಷಮಾವಂಗೆ, ಬೇಂಕಿಲಿ ಪೈಸೆ ಎಣುಸಿಗೊಂಡಿದ್ದ ಶಂಕರಮಾವಂಗೆ, ಒಕಾಲ್ತಿಗೆ ಕಲ್ತ ಶಿವರಾಮ ಮಾವಂಗೆ ಕೃಷಿಭೂಮಿ.  ಕೃಷಿ ಮಾಡಿಗೊಂಡಿದ್ದ ಸುಬ್ರಮಣ್ಯ ಮಾವಂಗೆ ಕಲ್ಲಡ್ಕದ ಕರೆಲಿ ಒಂದು ಸಣ್ಣ ಜಾಗೆ - ಹಿತ್ಲುಮನೆ. ಗುರಿಕ್ಕಾರ ಕೇಶವಮಾವ ಈಗ ವಿಟ್ಳದ ಹತ್ರೆ ಎಲ್ಲಿಯೋ ಒಂದು ದಿಕ್ಕೆ ಸಣ್ಣ ಜಾಗೆಲಿ ಅಡ (- ಗಣೇಶಮಾವಂಗೆ ಗೊಂತಿದ್ದು ಅವರ. ವಿಟ್ಳಕ್ಕೆ ಹೋದಷ್ಟು ಸರ್ತಿಯೂ ಅವರಲ್ಲಿ ಎಲೆತಿಂದು ಹೆರಡುಗು. )
 ಕೃಷಿಭೂಮಿಯ ಒಪ್ಪಿಗೊಂಡ್ರೆ, ಆ ಭೂಮಿಯ ನಂಬಿ ಹಿರಿಯೋವು ಮಾಡಿದ ಸಾಲವನ್ನೂ ಒಪ್ಪಿಗೊಳೆಕ್ಕನ್ನೆ, ಸಾಲವ-ಮೂರು ಪಾಲು ಮಾಡಿ ಆತು. ಪಾಲು ಪಂಚಾತಿಗೆ ಮುಗಾತು. ಪಂಚಾತಿಗೆ ಮಾಡಿದವಕ್ಕೆ ಗಡದ್ದಿಲಿ ಊಟವೂ ಆತು.

ಆಗ ಹೇಳಿದ ಕೊಡಿಮರ ಶಿವರಾಮ ಮಾವಂಗೆ ಬಂದಿತ್ತು.
ಹೊಸ ಮನೆ ಆಯೆಕ್ಕಷ್ಟೆ, ಸಾಲ ಬೇರೆ ಇತ್ತಿದಾ! ’ಎಂತಾ ಮಾಡುದು!’ ಹೇಳಿ ಯೋಚನೆ.

’ಸಾಲ ಮುಗಿವಲೆ ಸುಲಾಬ ಉಪಾಯ ಎಂತರ?’ ಹೇಳಿ ಯೋಚನೆ ಮಾಡಿಗೊಂಡಿರ್ತ ಸಮಯಲ್ಲಿ ಒಕಾಲ್ತಿಗೆಯ ತಲಗೆ ಹೋದ್ದು ಇದೇ ಕೊಡಿಮರ. ಕೂಡ್ಳೇ ಮರದಇಬ್ರಾಯಿಯ ಬರುಸಿ ಕ್ರಯ ಮಾಡಿದ°.
ಅಜ್ಜ ನೆಟ್ಟ ಮರದ ಮೇಲೆ ಅದಕ್ಕೆಂತ ಭಾವನೆಗೊ? ಊರಿಲೇ ಕಾಂಬಲೆ ಅಪುರೂಪ- ಹತ್ತೆಪ್ಪತ್ತು ಒರಿಷ ಆದ ದೊಡ್ಡ ಮರ. ನೂಲು ಹಿಡುದ ಹಾಂಗೆ ಸರೂತಕ್ಕೆ ಹೋಯಿದು, ಪತ್ತಕ್ಕೆ ಸಿಕ್ಕದ್ದಷ್ಟು ತೋರ ಆಯಿದು ಬೇರೆ, ಕೊಡಿಮರಕ್ಕೆ ಹೇಳಿ ಮಾಡುಸಿದ್ದು.
ಊರಿಲೇ ಅಪುರೂಪದ ಮರಕ್ಕೆ ಊರಿಲಿಲ್ಲದ್ದ ಕ್ರಯ ಹೇಳಿತ್ತು. ಚೊರೆ ಮಾಡಿ - ಚರ್ಚೆ ಮಾಡಿ ಮತ್ತುದೇ ಏರುಸಿದನಡ, ಅಂತೂ ಇಂತೂ ಕೊಡಿಮರಕ್ಕೆ ಕ್ರಯ ಆತು, ಮರದಿನ ಗಡಿ ಬಿದ್ದತ್ತು.

ಮರವ ಕಡುದು ತುಂಡುಸಿ ಶಿವರಾಮಮಾವನ ಜಾಲಕರೆಂಗೆ ಎತ್ತುಸುಲೆ ಮೂರು ದಿನ ಬೇಕಾಯಿದಡ, ಇಬ್ರಾಯಿಯ ಎಂಟು ಜೆನ ಆಳಗೊಕ್ಕೆ. ಬುಳ್ಡೋಜರಿನ ಹಾಂಗೆ ಒಂದಿದ್ದಲ್ದ, ಮರ ನೇಚುತ್ತದು (ನೆಗ್ಗುದು) - ಅದರ ಬರುಸಿದವಡ, ಆಳುಗೊ ಮೀಂಟಿಯೊಂಡು ಹೋಪದು ಕಷ್ಟ ಹೇಳ್ತ ಲೆಕ್ಕಲ್ಲಿ. ಸಣ್ಣ ಲೋರಿಲಿ ಎಡಿಯ ಹೇಳಿ ದೊಡ್ಡ ಲೋರಿಯನ್ನೇ ಹೇಳಿದವಡ. ಮರ ಹೆರಡ್ತ ದಿನ ಊರವೆಲ್ಲ ನೋಡ್ಳೆ ಬಂದವಡ - ಇಷ್ಟು ದೊಡ್ಡ ಮರವ ಲೋಡು ಮಾಡ್ತದರ ನೋಡ್ಳೆ. ಎಲ್ಲೊರಿಂಗೂ ಕುತೂಹಲ, ಕೌತುಕ. ಈಚಮನೆ ಶಂಕರಮಾವಂಗೆ ಸೊಂಟಬೇನಗೆ ಮದ್ದು ಕೊಡ್ಳೆ ಹೋದ ಡಾಕ್ಟ್ರುಬಾವಂದೇ ಹೋದವಡ. ತಿರುಳು ಈ ಗಾತ್ರ ಇತ್ತಡ ಆ ಮರದ್ದು!!!
ಮರವ ನೋಡಿ ಕೊದಿ ಆಗಿ ಅವರ ಮೊಬೈಲಿನ ಕೆಮರಲ್ಲಿ ಪಟವುದೇ ತೆಗದವಡ.ದೀಪಕ್ಕಂಗೆ ತೋರುಸಿಗೊಂಡು ’ನಿನ್ನ ಮಲ್ಲಿಗೆ ಗೆಡುವಿನ ಹಾಂಗೆ ಓರೆಕೋರೆ ಇಲ್ಲೆ, ಇಂಜೆಕ್ಷನು ಸಿರಿಂಜಿನ ಹಾಂಗೆ ಸರೂತ ಇದ್ದು!’ ಹೇಳಿದವಡ. :-(
ಕ್ರಯ ಎಷ್ಟು ಹೇಳ್ತದರ ಆರತ್ರುದೇ ಶಿವರಾಮ ಮಾವ ಬಿಟ್ಟಿದವಿಲ್ಲೆಡ. ಅವರ ಸಾಲ ಪೂರ ಮುಗುದು ಹೊಸ ಮನೆಕಟ್ಟುತ್ತ ಏರ್ಪಾಡಿಂಗೆ ಸಾಕಕ್ಕು ಹೇಳಿ ಎಲ್ಲೊರು ಮಾತಾಡಿಗೊಂಡವಡ. ಅವಕ್ಕೆ ಮಾಂತ್ರ ಅಲ್ಲ, ಇಬ್ರಾಯಿಗುದೇ ಹೊಸಮನೆ ಕಟ್ಟುಲೆ ತಕ್ಕ ಸಾಕು ಹೇಳಿ ಆಚಕರೆಮಾಣಿಯ ಅಬಿಪ್ರಾಯ.

ಇಲ್ಲಿ ಶಿವರಾಮ ಮಾವಂಗೆ ಕೂದಲ್ಲಿಂಗೇ ಪೈಸೆ. ಒಂದು ರಜವುದೇ ಬೆಗರು ಅರಿಶಿದ್ದವಿಲ್ಲೆ. ಅವರ ಅಜ್ಜ ನೆಟ್ಟ ಸಾಗುವಾನಿ.
ಅವರಿಂದ ಮೊದಲಾಣೋರು ಆ ಜಾಗೆಯ ಆಳಿರುದೇ ಆ ಮರವ ಮುಟ್ಳೇ ಹೋಯಿದವಿಲ್ಲೆ, ’ದೇವಸ್ತಾನಕ್ಕೆ ಬಿಟ್ಟದಲ್ದೋ!’ ಹೇಳಿಗೋಂಡು. ಶಿವರಾಮ ಮಾವಂಗೆ ಮಾಂತ್ರ ಆ ಯೋಚನೆ ಬಂದದು!!
ಇಬ್ರಾಯಿಗುದೇ ಹಾಂಗೆ,
ಈ ವೇಪಾರಲ್ಲಿ ಏನಿಲ್ಲೆ ಹೇಳಿರೂ ಶಿವರಾಮ ಮಾವನ ಡಬ್ಬಲು ಲಾಬ ಮಾಡುಗು.
ತಗಡಿನ ಕ್ರಯಕ್ಕೆ ತೆಗದು - ಚಿನ್ನದ ಕ್ರಯಕ್ಕೆ ಮಾರುಗು ಅದು. ಅದೇನಾರು ದುಡುದ ಪೈಸೆ ಅಲ್ಲ. ಕೂದಲ್ಲಿಂಗೇ ಆದ್ದು.

ಇಬ್ರಿಂಗೂ ಲಾಬವೇ. ನಷ್ಟ ಆರಿಂಗೆ? ಊರ ದೇವರಿಂಗೆಯೋ?
ಚೆ, ಕಾಲ ಎಲ್ಲಿಗೆತ್ತಿತ್ತು. ಅಲ್ಲದೋ?!!!

ಸಂಪತ್ತು ಇಪ್ಪದು ಭಾವನೆಗಳಲ್ಲಿ - ಬೇಂಕಿಲಿಪ್ಪ ಪೈಸೆಲಿ ಅಲ್ಲ! 
ಶಿವರಾಮಮಾವನ ಹತ್ರೆ ಪೈಸೆಯ ಸಂಪತ್ತು ತುಂಬಿತ್ತು, ಮರದ ಸಂಪತ್ತು ಕಳಕ್ಕೊಂಡವು. ಮರ ಹೇಳಿರೆ ಚಿನ್ನದ ಹಾಂಗೇ, ಆಪದ್ಧನ (ಕಷ್ಟಕಾಲಕ್ಕೆ ಇಪ್ಪ ಗೆಂಟು) ಹೇಳಿ ಲೆಕ್ಕ ಅಡ.  ಶಿವರಾಮಮಾವಂಗೆ ಆರು ಹೇಳುವವು!!!

ಮರ ಕಡುದು ಮಾರಿದ ಪೈಸೆ ಒದಗುತ್ತಿಲ್ಲೆಡ - ಶಂಬಜ್ಜ ಹೇಳುಗು ಅಂಬಗಂಬಗ.
ನಮ್ಮ ಹೆರಿಯೋರು ಜಾಗೆಲಿ ಮರಂಗಳ ನೇರ್ಪಕ್ಕೆ ಬೆಳೆಶಿ ಒಳುಶಿಗೊಂಡಿದವು, ಊಟಕ್ಕೆ ಸಮಗಟ್ಟು ಇಲ್ಲದ್ರೂ.
ಎಷ್ಟು ಕಷ್ಟ ಆದರೂ ಹೆಜ್ಜೆ ತೆಳಿ ಉಂಡುಗೊಂಡೇ ದಿನ ಕಳದ್ದವು. ಮರಂಗಳ ಅಂಬಗಳೇ ಮುಕ್ಕಾಲಿಂಗೆ ಮಾರಿದ್ದರೆ ಅವಕ್ಕೆ ಇನ್ನುದೇ ಆರಾಮಲ್ಲಿ ಬದುಕ್ಕುಲಾವುತ್ತಿತು.’ಜಾಗೆಲಿ ಮರ ಬೇಕು’ ಹೇಳಿಗೊಂಡು ಒಳುಶಿತ್ತಿದ್ದವು. ಒರಿಷವೂ ರಜ ರಜ ಸೆಸಿಗಳ ನೆಡುಗು, ಜಾಗೆ ಕೊಟ್ಟೊ ಮತ್ತೊ° ಹೋವುತ್ತರುದೇ ’ಇನ್ನಾಣವಂಗೆ ಆತು’ ಹೇಳಿ ಬಿಟ್ಟಿಕ್ಕಿ ಹೋಕು. ಎಲ್ಲ ಕಡುದು ಮಾರಿ ತಿಂದಿಕ್ಕಿ ಹೆರಡವು. ಆ ಮರಂಗಳ ಉಪಯೋಗುಸಿ ನಾವು ಈಗ  ಆರಾಮ ಅನುಬವಿಸುತ್ತಾ ಇದ್ದು. ಪರಿಸರ ಸಂರಕ್ಷಣೆ ಹೇಳಿ ರಾಗ ಎಳವವು ಹಳಬ್ಬರ ಈ ಮುತ್ಸದ್ಧಿತನವ ನೋಡಿ ಕಲಿಯೆಕ್ಕು.
ಈಗ ಅಂತೂ ’ಕಷ್ಟ ಬಂದರೆ ಮರ ಇದ್ದನ್ನೇ!’ ಹೇಳಿ ಯೋಚನೆ ಮಾಡ್ತು. ಅದರ ಬೆಲೆ ಅರಡಿಯದ್ದೆ ಎಲ್ಲ ಕಡುದು ಕಡುದು ಇಬ್ರಾಯಿಗೊಕ್ಕೆ ಮಾರಿರೆ, ನಮ್ಮ ಮುಂದಾಣೋರಿಂಗೆ ಮರಮಟ್ಟುಗಳ ಕಾಂಬಲೂ ಸಿಕ್ಕ.

ತಡವು ಮಾಡದ್ದೆ ನಿಂಗಳ ಜಾಗೆಲಿದೇ ರಜ ರಜ ಸಾಗುವಾನಿ-ಹಲಸ- ಮಾವು ಎಲ್ಲ ಹಾಕಿ, ನಿಂಗೊಗೆ ಅಲ್ಲದ್ರೂ ನಂತ್ರಾಣೋರಿಂಗಾದರೂ. ನೆರಳು, ಬಜಕ್ಕರೆ, ಕೋಲು, ಅಡರು, ಸೊಪ್ಪು, ದಂಟು, ಮರ, ಹಲಗೆ, ಪೋರೋಟು, ಸೈಜು, - ಯೇವದಾರು, ಯೇವತ್ತಾರು ಒಂದು ದಿನ ಉಪಯೋಗಕ್ಕೆ ಬಕ್ಕು.

ಒಂದು ಮರ ಕಡುದರೆ ನಾಕು ಮರ ನೆಡ್ಳೆಡಿಯೆಕ್ಕಡ. ನೆಟ್ರೆ ಸಾಲ, ದೊಡ್ಡಮಾಡ್ತ ತಾಕತ್ತುದೇ ಬೇಕು.
ಅಷ್ಟಿಲ್ಲದ್ರೆ ಕಡಿವಲೆ ಹೋಪಲಾಗ. ಅಲ್ಲದೋ?

ಅವರ ಅಣ್ಣ ಕೇಶವಮಾವಂಗೆ ಈ ಶಿವರಾಮ ಮಾವನ ಕೊಡಿಮರದ ಒಯಿವಾಟಿನ ಕಂಡು ಬೇಜಾರಾಗಿ ಅದೇ ಮರದ ಬೇರಿಲಿ ಹುಟ್ಟಿದ ಎರಡು ಗೆಡು ತೆಕ್ಕೊಂಡು ಹೋಯಿದವಡ. ಅವರ ವಿಟ್ಳದ ಪೇಟೆ ಜಾಗೆಲಿ ನೆಟ್ಟವಡ. ’ಎನ್ನ ಅಜ್ಜ° ಹೇಳಿದ್ದಕ್ಕೆ, ಎನ್ನ ಪುಳ್ಳಿಯಕ್ಕೊ ಆದರೂ ಇದರ ಆ ದೇವಸ್ಥಾಕ್ಕೆ ಎತ್ತುಸಲಿ!’ - ಹತ್ತರಾಣೋರತ್ರೆ ಹೇಳಿ ಬೇಜಾರು ಮಾಡಿದವಡ. ಇನ್ನೊಂದು ಎಪ್ಪತ್ತೊರಿಷ ಕಳುದ ಮತ್ತೆ ಎಲ್ಲಿಗೆತ್ತುಗೋ ಕಾಲ?
ಬಹುಶಃ ಅಷ್ಟಪ್ಪಗ ಆ ದೇವಸ್ಥಾನಲ್ಲಿ ಚೆಂಬಿನ ಕೊಡಿಮರ ಬಕ್ಕೋ ಏನೋ..! ಅಭಿವೃದ್ಧಿ ಆದರೆ ಬಕ್ಕು. ಬರಳಿ ಹೇಳಿಯೇ ಎಲ್ಲೊರ ಆಶಯ.

ಒಂದೊಪ್ಪ: ನಾವು ಮರವ ಒಳುಶಿದರೆ, ಮರ ನಮ್ಮ ಒಳುಶುತ್ತು. ಎಂತ ಹೇಳ್ತಿ?