ಕಂಡುಗೊಂಡು ಇದ್ದ ಹಾಂಗೇ ನಮ್ಮ ಊರು ಎಷ್ಟು ಬದಲಾತು!
ಅಜ್ಜ ಸುರಿಯ! ನಂಬಲೇ ಎಡಿತ್ತಿಲ್ಲೆ!!!
ಕೆಲವೇ ಒರಿಶದ ಮೊದಲು ಏಕೂ ಬೇಡದ್ದ ಜಾಗೆಗೊ ಈಗ ಗ್ರೇಶುಲೆಡಿಯದ್ದಷ್ಟು ಬದಲಾಯಿದು. ಸಂಪರ್ಕವೇ ಇಲ್ಲದ್ದ ಕೆಲವು ಜಾಗೆಗೊ ಈಗ ವೆವಹಾರದ ಕೇಂದ್ರಸ್ಥಾನ ಆಗಿ ಬಿಟ್ಟಿದು. ಬೈಕ್ಕಿಲಿ ಹಿಂದೆ ಕೂದುಗೊಂಡಿದ್ದ ಹೆಮ್ಮಕ್ಕೊ ಎದುರು ಕೂಬಲೆ ಸುರು ಮಾಡಿದ್ದವು; ಗೆಂಡ ಹಿಂದಂದ ಕೂದಂಡು ಕೊಡೆ ಹಿಡಿವಲೆ ಅಭ್ಯಾಸ ಮಾಡಿಗೊಂಡವು.
ಮಾಣಿಯಂಗೊ ಜೆಡೆ ಕಟ್ಟಲೆ ಸುರು ಮಾಡಿದವು!
ಕೂಸುಗೊ ಪೇಂಟು ಹಾಕಲೆ ಸುರು ಮಾಡಿದವು!!
ಯೋ ದೇವರೇ!!!
ಇಡೀ ಲೋಕವೇ ಬೆಳದ್ದು, ಅದರ ಪ್ರತಿಫಲನ ನಮ್ಮ ಊರು ಬೆಳವದರ ಮೂಲಕ ಕಂಡತ್ತು.
ಅಂದೆಲ್ಲ ಪುಸ್ತಕಲ್ಲಿ ಓದಿಗೊಂಡು ಇದ್ದ ಸಂಗತಿ ಒಂದಿದ್ದು. ’ಇಂಟರ್ನೆಟ್ಟು’ ಹೇಳುಸ್ಸು.
ಪೋನು ವಯರಿಲೆ ಆಗಿ ಬಪ್ಪ ಸಂದೇಶಂಗಳ ಕಂಪ್ಯೂಟರಿಂಗೆ ಸಿಕ್ಕುಸಿರೆ, ಇಡೀ ವಿಶ್ವಲ್ಲಿ ಎಂತ ಆವುತ್ತು ಹೇಳ್ತದರ ಗೊಂತು ಮಾಡ್ಳೆ ಆವುತ್ತಡ. ಪುಸ್ತಕ ಓದಲೆ ಎಡಿತ್ತಡ, ಪಟ ನೋಡ್ಳೆ ಎಡಿತ್ತಡ, ಅದೆಡಿತ್ತಡ, ಇದೆಡಿತ್ತಡ ಹೇಳಿ ಮಾತಾಡುದೇ ಒಂದು ದೊಡ್ಡ ಶುದ್ದಿ.
ಈಗ ನಮ್ಮ ಊರಿಂಗೇ ಎತ್ತಿದ್ದು.
ಕೆಲವೆಲ್ಲ ಮನೆಗೆ ಇಂಟರ್ನೆಟ್ಟು ಅದಾಗಲೇ ಬಯಿಂದು. ಇನ್ನಷ್ಟು ಮನಗೆ ಅರ್ಜಿ ಕೊಟ್ಟಿದವಡ, ಸದ್ಯಲ್ಲೇ ಬತ್ತಡ.
ಇಷ್ಟೆಲ್ಲ ಆದಪ್ಪಗ, ಈ ಇಂಟರ್ನೆಟ್ಟು ಹೇಳಿದರೆ ಎಂತರ, ಅದರ ಗುಟ್ಟು ಎಂತರ ಹೇಳ್ತ ಒಂದು ವಿಮರ್ಶೆ ಆಗಡೆದೋ. ಅದಕ್ಕೆ ಬೇಕಾಗಿ ಗೊಂತಿಪ್ಪೋರ ಭೇಟಿ ಆಗಿ ಕೇಳಿದೆ, ಪೂರ್ವಾಪರ ಎಂತರ ಇದರದ್ದು, ಹೇಳಿಗೊಂಡು. ರಜ ಓದಿ, ಕೇಳಿ ಅಪ್ಪಗ ಗೊಂತಾತು. ಈ ವಾರಕ್ಕೆ ಅದೇ ಒಂದು ಶುದ್ದಿ. :-)
ಹುಟ್ಟು:
ಕಂಪ್ಯೂಟರಿನ ಒಂದಕ್ಕೊಂದು ಸಿಕ್ಕುಸಲೆ ಇಪ್ಪ ಒಂದು ನಿರ್ದಿಷ್ಟ ವೆವಸ್ತೆಗೆ ಇಂಟರ್ನೆಟ್ಟು ಹೇಳುತ್ಸು ಅಡ.
ಮದಲಿಂಗೆ, ಅಮೇರಿಕಲ್ಲಿ - ತುಂಬ ಕಂಪ್ಯೂಟರುಗಳ ಸಿಕ್ಕುಸಿ - ಚೋಮನವು ಮಣ್ಣ ಕೆಲಸ ಮಾಡ್ತ ನಮುನೆ - ಏಕಕಾಲಲ್ಲಿ ಕೆಲಸ ಮಾಡ್ತ ಅಗತ್ಯತೆ ಬಂತಡ, ಅದಕ್ಕೆ ಬೇಕಾಗಿ ಒಂದು ನಿಯಮ ಮಾಡಿ ಮಡಗಿದವು(TCP/IP). ಒಂದು ಕಂಪ್ಯೂಟರಿಂದ ಮಾಹಿತಿ ಇನ್ನೊಂದು ಕಂಪ್ಯೂಟರಿಂಗೆ ಈ ನಮುನೆಲಿ ಹೋಯೆಕ್ಕು, ಈ ನಮುನೆಲಿ ಬರೆಕ್ಕು, ಇತ್ಯಾದಿ ಒಂದು ಸೂತ್ರ ಬರದು ಮಡಗಿದ್ದವಡ.
ಅದರ ಮೂಲ ಆಗಿ ಮಡಿಕ್ಕೊಂಡು ಕಂಪ್ಯೂಟರುಗಳ ಒಂದಕ್ಕೊಂದು ಸಿಕ್ಕುಸಿದ ಒಂದು ಬಲೆ(net) ಸೃಷ್ಠಿ ಆತಡ.
ಅದನ್ನೇ ಬೆಳಶಿ ಬೆಳಶಿ ದೊಡ್ಡ ಮಾಡಿದವು, ಈಗ ಅಂತೂ ಆ ಬಲೆಲಿ ಕೋಟ್ಯಂತರ ಕಂಪ್ಯೂಟರು ಇದ್ದಡ. (ನಿಂಗೊ ಒತ್ತುತ್ತಾ ಇಪ್ಪ ಇದುದೇ ಒಂದು!)
ಸಿಕ್ಕುಸಿದ ಕೂಡ್ಳೇ ಒಂದು ಕಂಪ್ಯೂಟರಿಂಗೆ ಒಂದು ಎಡ್ರಾಸು(IP Address) ಸಿಕ್ಕುತ್ತಡ. ಏವದರ ಏವಗ ಬೇಕಾರು ಸಿಕ್ಕುಸಲೂ ಅಕ್ಕು, ತೆಗವಲೂ ಅಕ್ಕಡ. ಚೆಂದ ಅಲ್ದೊ?
ಇಂಟರ್ನೆಟ್ಟು ಸುರು ಆಗಿ ನಲುವತ್ತೊರಿಶ ಆತಡ, ಮೊನ್ನೆಂಗೆ. ಚಾಲೀಸು ಕನ್ನಡ್ಕ ಬೇಕಾವುತ್ತೋ ಏನೋ ಇನ್ನು ನೋಡ್ಳೆ!
ಕ್ರಯ:
ಆರಂಭದ ದಿನಲ್ಲಿ ಅದರ ಉಪಯೋಗ ಅಷ್ಟಾಗಿ ಕಾಣದ್ರೂ, ಮತ್ತಾಣ ಕಾಲಘಟ್ಟಲ್ಲಿ ತುಂಬ ಅಗತ್ಯದ ವಿಶಯ ಆಗಿ ಬಿಟ್ಟತ್ತು.
ಆದರೆಂತ ಮಾಡುಸ್ಸು? ಸಿಕ್ಕುಸುತ್ತ ವೆವಸ್ತೆ ಬೆಳದ್ದಿಲ್ಲೆ. ವಯರಿಲೇ ಆಗೆಡದೋ ಪೂರ. ಹಾಂಗಾಗಿ ಒಳ್ಳೆತ ಕರ್ಚಿನ ಬಗೆ ಆಗಿ ಬಿಟ್ಟತ್ತು. ’ಅಂತೇ ಪೈಸ ಮುಡುಚ್ಚುಲೆ ಒಂದೊಂದು ದಾರಿ’ - ಹೇಳಿ ಪಾಲಾರಣ್ಣನ ಹಾಂಗಿಪ್ಪವು ಪರಂಚುಗು ಅಂಬಗಂಬಗ.
ಈಗ ಉಪಗ್ರಹ, ಬೆಣಚ್ಚಿನ ವಯರು (OFC - ಪೋನು ವಯರಿಲಿ ಕರೆಂಟಿನ ಬದಲು ಬೆಣಚ್ಚು ಹೋವುತ್ತದು), ಮೊಬೈಲು, ಇತ್ಯಾದಿ ಸಂಪರ್ಕ ಸಾಧನ ಬಂದು ಸಂಪರ್ಕ ಮಾಧ್ಯಮಲ್ಲಿ ಹಂತ ಹಂತದ ಬೆಳವಣಿಗೆ ಆತು. ಹಾಂಗಾಗಿ ಜಾಸ್ತಿ ಕರ್ಚು ಎಂತೂ ಬಾರದ್ದೆ, ಸಾಮಾನ್ಯ ಮನುಶ್ಯನಿಂದ ಆಳುಸಿಗೊಂಬಲೆ ಎಡಿಗು ಹೇಳ್ತನಮುನೆಗೆ ಎತ್ತಿದ್ದು.
ಮದಲಿಂಗೆ ಪೇಟೆಲಿ ಗಂಟಗೆ ಅರುವತ್ತು ರುಪಾಯಿ ನೆಡಕ್ಕಂಡು ಇದ್ದ ಬಗೆ, ಈಗ ಬರೇ ಹದಿನೈದು ರುಪಾಯಿ ಮಾಂತ್ರ. (ಒಂದು ಕಿಲ ಒಳ್ಳೆಡಕ್ಕೆ ಇದ್ದದು ಒಂದು ಕಿಲ ಕರಿಗ್ಗೋಟಿಂಗೆ ಇಳುದ್ದು - ಹೇಳಿ ಪಾಲಾರಣ್ಣನ ವರ್ಣನೆ). ಅಲ್ಲ - ಅವಕ್ಕೂ ಕಾಯಿಸು ಬೇಕನ್ನೆ, ಎಲ್ಲ ಮನೆಲೇ ಮಾಡಿಗೊಂಡ್ರೆ ಹೋಟ್ಳಿಂಗೆ ಆರು ಹೋವುತ್ತ? ಹಾಂಗೇ ಆತು ಇದುದೇ.
ಕಾಲ ಮುಂದುವರುದ ಹಾಂಗೆ ಇಂಟರ್ನೆಟ್ಟು ಕಡಮ್ಮೆ ಕ್ರಯಕ್ಕೆ ಸಿಕ್ಕುತ್ತು, ಬೇಡಿಕೆ ಜಾಸ್ತಿ ಆದರುದೇ! "ಇದೆಂತ ಹೀಂಗೆ? ಗಿರಾಕಿ ಜಾಸ್ತಿ ಆದ ಹಾಂಗೆ ಕ್ರಯ ಜಾಸ್ತಿ ಆಗೆಡದೋ ಅಂಬಗ?" ಹೇಳಿ ಮುಳಿಯಾಲದಪ್ಪಚ್ಚಿ ಕೇಳಿದವು. ಅವಕ್ಕೆ ಕನ್ನಡಪ್ರಭ ಪೇಪರು ಎಲ್ಲ ಓದಿ ರಜ ಮಾರ್ಕೇಟು ಅರಡಿಗು ಇದಾ! ’ಉಪಯೋಗ ಜಾಸ್ತಿ ಆದ ಹಾಂಗೆ ವೆವಸ್ತೆ ಜಾಸ್ತಿ ಆವುತ್ತಡ, ವೆವಸ್ತೆ ಜಾಸ್ತಿ ಆದ ಹಾಂಗೆ ಕರ್ಚು ಕಮ್ಮಿ ಆವುತ್ತಡ, ಅವಕ್ಕೆ ಕರ್ಚು ಕಮ್ಮಿ ಆದ ಹಾಂಗೆ ಕ್ರಯ ಕಮ್ಮಿ ಆವುತ್ತಡ’ - ಪೆರ್ಲದಣ್ಣ ಹೇಳಿದ, ಅವಂಗೆ ಇಂಟರ್ನೆಟ್ಟು ಎಲ್ಲ ಅರಡಿಗು ಇದಾ.
ನವಗೆಂತ ಗೊಂತು ಅದರ ಬಗ್ಗೆ! ಹಳೇ ವಿಶಯಲ್ಲಿ ಒಪ್ಪಣ್ಣ ಆದರೂ ಹೊಸ ವಿಶಯಂಗಳಲ್ಲಿ ಇನ್ನುದೇ ಬೆಪ್ಪಣ್ಣನೇ ಹೇಳಿ ಅನಿಸುತ್ತು ಒಂದೊಂದರಿ! :-(
ಮದಲಿಂಗೆ ಪೈಸ ಒಳುಶುತ್ತ ಬಾವಂದ್ರು ಎಲ್ಲ ಈಗ ಹಿಂದೆ ಮುಂದೆ ನೋಡದ್ದೆ ಮನಗೆ ಬ್ರೋಡುಬೇಂಡು ಹಾಕುತ್ತಾ ಇದ್ದವು.
ಅಂತೂ ಸಿಕ್ಕಾಪಟ್ಟೆ ಕ್ರಯ ಇದ್ದ ಇಂಟರ್ನೆಟ್ಟು ಈಗ ಕಡಮ್ಮೆಗೆ ಸಿಕ್ಕುತ್ತಡ. ಅಂದ್ರಾಣ ವಿಪರೀತದ ಕ್ರಯ ಎಲ್ಲ ಇಳುದ್ದು. {ಆದರೂ ಪಾಲಾರಣ್ಣ ಪರಂಚುದು ನಿಲ್ಲುಸಿದ್ದವೇ ಇಲ್ಲೆ!, ಮೊನ್ನೆ ಒಂದರಿ ಒಪ್ಪಣ್ಣಂಗೆ ಪರಂಚಿದ್ದವು, ಗೊಂತಿದ್ದಲ್ದ!!! :-( }
ವೇಗ:
ಇಂಟರ್ನೆಟ್ಟಿಲಿ ಮುಖ್ಯವಾದ ವಿಚಾರ ಸಂಪರ್ಕ ವೇಗ. ಈ ಕಂಪ್ಯೂಟರಿಂದ ಆಚ ಕಂಪ್ಯೂಟರಿಂಗೆ ಒಂದು ವಿಶಯ ಹೋಪಲೆ ಎಷ್ಟೊತ್ತು ಹಿಡಿತ್ತು? ಹೇಳ್ತದು ದೊಡ್ಡ ಚೋದ್ಯ.
ಅಂದ್ರಾಣ ಕಾಲಲ್ಲಿ ಸಣ್ಣ ವಯರು, ಮೆಲ್ಲಂಗೆ ನಿಧಾನಕ್ಕೆ ಸಂದೇಶಂಗೊ ಬತ್ತದು- ಡಯಲಪ್ಪು ಹೇಳಿ ಹೆಸರಡ. ಮಾಷ್ಟ್ರುಮಾವನ ಮನೆಲಿ, ಮಾಡಾವಕ್ಕನ ಮನೆಲಿ ಎಲ್ಲ ಇತ್ತು.
ನಿದಾನಾ ಹೇಳಿರೆ ನಿದಾನ. ಒಂದು ಪಟದ ಪುಟ ಪೂರ್ತಿ ಕಾಣೆಕ್ಕಾರೆ ಗುಣಾಜೆಮಾಣಿಗೆ ಬದಿಯಡ್ಕಂದ ಸೂರಂಬೈಲಿಂಗೆ ಬಂದಕ್ಕಡ - ನೆಡಕ್ಕೊಂಡು.
ಈಗ ಹೊಸ ನಮುನೆದು ಬಯಿಂದಲ್ದ, ಬ್ರೋಡುಬೇಂಡು ಹೇಳಿಗೊಂಡು ಹೆಸರು.
ಬ್ರೋಡುಬೇಂಡಿನ ಸ್ಪೀಡು ಬಯಂಕರ ಅಡ, ಮೊದಲಾಣ ಡಯಲಪ್ಪಿನ ನೂರು ಪಾಲು ವೇಗಲ್ಲಿ ಬತ್ತಡ. ಗುಣಾಜೆಮಾಣಿಗೆ ಈಗ ಬೈಕ್ಕಿಲಿಯೂ ಹೋಗಿ ಬಂದಿಕ್ಕಲೆಡಿಯ ಇದಾ! ಅಷ್ಟು ಬೀಸಕ್ಕೆ ಬಂದು ಪಟದ ಪುಟ ಉದುರುತ್ತು (Page Loading).
ಎಲ್ಲ ಡಯಲಪ್ಪಿನವು ವಯರು ದೊಡ್ಡ ಮಾಡಿಗೊಂಡಿದವಡ, ಬೇಗ ಬೇಗ ಪುಟ ಬಪ್ಪಲೆ ತೋರದ ಪೈಪು ಹಾಕಿಯೋಂಡು.
ಹೊಸತ್ತು ಮಾಡ್ತರೆ ಎಲ್ಲ ದಿಕ್ಕುದೇ ಬ್ರೋಡುಬೇಂಡೇ ಮಾಡುತ್ಸು ಈಗ. ಒಪ್ಪಣ್ಣನ ಬೈಲಿಲಿ ಅಂತೂ ಸುಮಾರು ಮನೆಲಿ ಆತು.
ವ್ಯಾಪ್ತಿ:
ಇಂಟರ್ನೆಟ್ಟು ಹೇಳ್ತದು ನಿಜವಾದ ಜಾತ್ಯತೀತ ವಸ್ತು ಆಗಿ ಹೋಯಿದು. ದೇವೇಗೌಡನ ಹಾಂಗಿಪ್ಪ ಡೋಂಗಿ ಜಾತ್ಯತೀತ ಅಲ್ಲ.
ಮೇರ, ಮನ್ಸ, ಗೌಡ, ಪಾಟಾಳಿ, ಮುಕಾರಿ, ಬಂಟ, ಬಟ್ರು - ಎಲ್ಲೋರ ಮನಗೂ ಬಯಿಂದು ಈಗ. ಎಂತದೂ ಲೆಕ್ಕ ಇಲ್ಲೆ, ಇಡೀ ಊರಿಂಗೇ, ಅಕ್ಷರಷಃ ಜಾತ್ಯತೀತ.
ಅದಾಗಲೇ ನಮ್ಮೂರಿನ ಕೆಲವೆಲ್ಲ ಆಳುಗಳೂ ಹಾಕಿದ್ದವಡ. ಓ ಆ ಪೇಟೆಕರೆಯ ಹಾಜಿ ಅದ್ದುಲ್ಲನ ಮನೆಲಿದೇ ಇದ್ದಡ.
ಗುಣಾಜೆಮಾಣಿಗೆ ಒರಕ್ಕೇ ಬಯಿಂದಿಲ್ಲೆ ಅದರ ಕೇಳಿ. ಹಾಂಗೆ ಕಳುದ ವಾರ ಸಿದ್ದನಕರೆ ಅಪ್ಪಚ್ಚಿಯ ಕೈಂದ ಕಂಪ್ಯೂಟರು ತೆಕ್ಕಂಡುವಂದು, ಪೋನಾಪೀಸಿಂಗೆ ಅರ್ಜಿ ಕೊಟ್ಟು, ಇಂಟರ್ನೆಟ್ಟು ತೆಗೆದನಡ, ಮೊನ್ನೆ ಅಜ್ಜಕಾನ ಬಾವನತ್ರೆ ಹೇಳಿಗೊಂಡಿತ್ತಿದ್ದ. ಬರೇ ಇನ್ನೂರೈವತ್ತಕ್ಕೆ ತಿಂಗಳು ಪೂರ್ತಿ ಇಂಟರ್ನೆಟ್ಟು ಬತ್ತಡ.
ಇಂಟರ್ನೆಟ್ಟಿಲಿ ಇಪ್ಪ ನಕ್ಷೆಲಿ (wikimapia) ಅವನ ಮನೆ, ಜಾಗೆ ಎಲ್ಲಿ ಬಪ್ಪದು ಹೇಳಿ ಅಂದೇ ನೋಡಿ ಗುರ್ತು ಮಾಡಿ ಮಡಗಿದ್ದನಡ. ಇನ್ನೊಬ್ಬ ಬೇಕಾರೆ ನೋಡ್ಳಕ್ಕು ಹೇಳಿಗೊಂಡು.
ಎಲ್ಲಕ್ಕಿಂತ ಮುಕ್ಯವಾಗಿ ನೆರೆಕರೆ ಹೋಕ್ವರ್ಕು ಇಲ್ಲದ್ದ, ನೆಂಟ್ರುಗಳೂ ಸರಿ ಬಾರದ್ದ ಗೆಡ್ಡದ ಜೋಯಿಷರುದೇ ಹಾಕುಸಿದ್ದವಡ.
ನೆಂಟ್ರೇ ಬಾರದ್ದ ಮನಗುದೇ ಇಂಟರ್ನೆಟ್ಟು ಬಂದದು ಒಳ್ಳೆದೇ. ಇನ್ನಾರುದೇ ಹೆರಾಣ ವಿಚಾರಂಗೊ ಗೊಂತಾಗಲಿ ಹೇಳಿ ಎಂಗಳ ಊರಿನ ಎಷ್ಟೋ ಜೆನ ಕುಶಿಪಟ್ಟವು.
ಒಪ್ಪಣ್ಣನ ಆತ್ಮೀಯರ ಪೈಕಿ ಆಚಕರೆ ಮಾಣಿಗೆ, ಪುಟ್ಟಕ್ಕಂಗೆ, ಗಣೇಶಮಾವಂಗೆ, ಆಚಕರೆ ತರವಾಡುಮನೆಗೆ, ಎಡಪ್ಪಾಡಿ ಬಾವಂಗೆ, ಅಜ್ಜಕಾನ ಬಾವಂಗೆ, ದೊಡ್ಡಮಾವನಲ್ಲಿಗೆ, ಪಂಜೆಯ ಚಿಕ್ಕಮ್ಮನಲ್ಲಿಗೆ, ನೆಕ್ರಾಜೆ ಯೇಕ್ಟಿವಕೂಸಿಂಗೆ, ಕೊಳಚ್ಚಿಪ್ಪು ಬಾವಂಗೆ, ಬಂಡಾಡಿ ಅಜ್ಜಿಯಲ್ಲಿಗೆ (ಅಜ್ಜಿ ರೇಡಿಯ ಕೇಳಿರೂ ಪುಳ್ಳಿಯಕ್ಕೊ ಕೇಳೆಕ್ಕನ್ನೆ!), ಪೆರುಮುಕಪ್ಪಚ್ಚಿಯಲ್ಲಿಗೆ, ಅಲ್ಲಿಗೆ - ಇಲ್ಲಿಗೆ ಎಲ್ಲ ದಿಕ್ಕಂಗೂ ಆತು.
ಒಂದೊಂದರಿ ಮರುಳು ಎಳಗುವಗ, ಒಪ್ಪಣ್ಣಂಗುದೇ ಆಯೆಕ್ಕು ಕಾಣ್ತು. ಆದರೆ ಎಂತಕೆ? ಉಪಯೋಗ ಎಷ್ಟು? ಹೇಳಿಯೂ ಗ್ರೇಶಿ ಹೋವುತ್ತು.
ನೋಡೊ°. ಎಂತಾರು ಮಾಡಿ ಈ ಸರ್ತಿ ಹಾಕುಸಲೆ ಎಡಿತ್ತೋ ಹೇಳಿ. ೨ನೇ ಸರ್ತಿ ಮದ್ದು ಬಿಟ್ಟು ಕಳಿಯಲಿ, ಅಡಕ್ಕೆ ಹೇಂಗಿದ್ದು ಗೊಂತಾವುತ್ತನ್ನೇ! ಏ°!
ಸಂಪರ್ಕ ಪ್ರಗತಿ:
ಮೊದಲು ಬರೇ ಅಕ್ಷರ - ಚಿತ್ರಲ್ಲಿ ಇದ್ದದು ಸಂವಹನ. ಒಂದು ಕಂಪ್ಯೂಟರಿಂದ ಇನ್ನೊಂದು ಕಂಪ್ಯೂಟರಿಂಗೆ ಎಂತಾರು ಕಾಗತ ಬರದ್ದು ಮಾಂತ್ರ ಕಳುಸುಲೆ ಎಡಿಗಾಗಿಯಂಡು ಇದ್ದದು. ಬೆಳ್ಳಿಪ್ಪಾಡಿ ಅಪ್ಪಚ್ಚಿ ಹೇಳಿತ್ತಿದ್ದವು, ಒರಿಶಗಟ್ಳೆ ಮದಲಿಂಗೆ ಅಮೇರಿಕಲ್ಲಿ ಇದ್ದ ಅವರ ಚೆಂಙಾಯಿಗೆ ಒಂದು ಕಾಗತ ಬರದ್ದರ ಕಳುಸೆಕ್ಕಾರೆ ಒಂದು ಗಳಿಗೆ ಬರ್ತಿ ಹಿಡುದ್ದಡ.
ಈಗ ಅದರಂದ ಬಾದಿ ಇಪ್ಪ ’ವಸ್ತು’ಗಳನ್ನೂ ಅದರಿಂದ ಬೇಗ ಸಾಗುಸಲೆ ಎಡಿತ್ತಡ.
ನಿಂಗೊ ಹೇಳಿರೆ ನಂಬೆಯಿ: ತೆಂಕಬೈಲು ಅಜ್ಜನ - ಕಂಡನು ದಶವದನ - ಪದವ ಚೆಂಬರ್ಪು ಅಣ್ಣ ವೇಣೂರಣ್ಣಂಗೆ ಕಳುಸಿದ್ದವು ಮೊನ್ನೆ ಇತ್ಲಾಗಿ. ಚೆಂಬರ್ಪು ಅಣ್ಣ ಇಲ್ಲಿಂದ ಇಂಟರ್ನೆಟ್ಟಿಲಿ ಹತ್ತುಸಿ ಬಿಟ್ಟದು, ವೇಣೂರಣ್ಣ ಅದರ ಹಿಡ್ಕೊಂಡವಡ, ರಪಕ್ಕನೆ. ಪುತ್ತೂರಿಲಿ ಹತ್ತುಸಿದ ಪಂಜೆ ಕುಂಞಜ್ಜಿಯ ಮೈಸೂರಿಲಿ ಪುಳ್ಳಿಯಕ್ಕೊ ಇಳುಸಿಗೊಂಡ ಹಾಂಗೆ. ;-)
ಆದರೆ ಕುಂಞಜ್ಜಿ ಒಂದೇ ಇಪ್ಪದು. ಪದ ಈಗ ಇಬ್ರತ್ರೂ ಇದ್ದು!!! ಎಂತಾ ಅವಸ್ತೆ!!! ನವಗೆಲ್ಲ ತಲಗೇ ಹೋಗ. ಮಂಡೆ ಪಿರ್ಕಿ ಹಿಡಿತ್ತು ಕೆಲವು ಸರ್ತಿ. 'ಕಲ್ತದಕ್ಕೆ ಕಣ್ಣಿಲ್ಲೆಪ್ಪ’ ಹೇಳಿ ಮಾಷ್ಟ್ರುಮನೆ ಅತ್ತೆ ಪರಂಚುಗು, ಇದರ ಕಂಡ್ರೆ.
ಇಂಟರ್ನೆಟ್ಟಿಲಿ ಈಗ ವೀಡಿಯ ನೋಡ್ಳುದೆ ಆವುತ್ತಡ.
ನಮ್ಮ ಗುರುಗ ಎಲ್ಲಿಯೋ ಉತ್ತರ ಭಾರತಲ್ಲಿ ಭಾಷಣ ಮಾಡುದರ ಓ ಮೊನ್ನೆ ಅಜ್ಜಕಾನ ಬಾವ ತೋರುಸಿಗೊಂಡು ಇತ್ತಿದ್ದ°. ಐಸ್ಸಿರಿಗ! ಟೀವಿ ಬೇಡ ಇನ್ನು.
ಉಪಯೋಗ:
ಇಂಟರ್ನೆಟ್ಟಿಲಿ ವಿಶ್ವಲ್ಲಿ ಇಪ್ಪ ಎಲ್ಲ ವಿಶಯಂಗಳನ್ನೂ ನೋಡ್ಳಾವುತ್ತಡ.
ಎಲ್ಲ ಪ್ರಾಯದವಕ್ಕುದೇ ಉಪಯೋಗ ಆವುತ್ತ ಹಾಂಗೆ ಇದ್ದಡ ಇಂಟರ್ನೆಟ್ಟು. ನಮ್ಮ ಊರಿಲೇ ಒಬ್ಬೊಬ್ಬ ಒಂದೊಂದು ನಮುನೆಯ ಉಪಯೋಗ ಮಾಡ್ತವಡ.
ಮಾಷ್ಟ್ರುಮಾವ ಓ ಮೊನ್ನೆ ಪಾಕಿಸ್ತಾನಲ್ಲಿ ಇಪ್ಪ ಹಿಂದೂ ದೇವಸ್ತಾನದ ಬಗ್ಗೆ ತಿಳ್ಕೊಂಡಿತ್ತಿದ್ದವಡ. ಪುಟ್ಟಕ್ಕ ಅದರ ಡೇನ್ಸಿನ ಶುದ್ದಿ ಎಂತದೋ ಸಂಪಾಲುಸಿಗೋಂಡು ಇತ್ತು. ಆಚಕರೆ ಮಾಣಿ ಒಳ್ಳೆ ಪಟ (!?) ಏವದಿದ್ದು ಹೇಳಿ ನೋಡಿಗೊಂಡು ಇತ್ತಿದ್ದ°. ಪಾಲಾರಣ್ಣ ಕೆಮ್ಕದ ಶುದ್ದಿ ಎಂತಾರಿದ್ದೋ ಹೇಳಿ ನೋಡಿದ°.
ಪೆರ್ಲದಣ್ಣಂಗೆ ಬೆಂಗ್ಳೂರು ಬಸ್ಸಿನ ಕ್ರಯ, ಗುಣಾಜೆಮಾಣಿಗೆ ರೈಲಿನ ಹೊತ್ತುಗೊತ್ತು, ಬೈಲಕರೆ ಗಣೇಶಮಾವಂಗೆ ಮಂತ್ರ-ಶ್ಳೋಕಂಗೊ, ಪಾರೆಮಗುಮಾವಂಗೆ ಶೇರು - ಎಲ್ಲ ಸಿಕ್ಕುತ್ತಡ.
ಬಂಡಾಡಿ ಅಜ್ಜಿದೇ ಕಜಂಪಾಡಿ ಅಜ್ಜಿದೇ ಇಂಟರ್ನೆಟ್ಟಿಲಿ ಪದ್ಯಬಂಡಿ ಮಾಡಿಗೊಂಡು ಇತ್ತಿದ್ದವಡ. ಹೇಂಗೂ ರೇಡ್ಯಲ್ಲಿ ಕೇಳಿದ ಪದ್ಯಂಗ ಬತ್ತನ್ನೆ ಬಾಯಿಗೆ. ಮರುಳಲ್ಲದೋ ಅಜ್ಜ್ಯಕ್ಕೊಗೆ!
ಶಾಲಗೆ ಹೋವುತ್ತ ಮಕ್ಕೊಗೆ ಎಲ್ಲ ಬಾರೀ ಅನುಕೂಲ ಇದ್ದಡ, ಓದೆಕ್ಕಾದ ನೋಡ್ಸು ಎಲ್ಲ ಸಿಕ್ಕುತ್ತಡ. ಬೇರೆ ಒಳ್ಳೊಳ್ಳೆ ಮಾಹಿತಿಗಳೂ ಸಿಕ್ಕುತ್ತಡ.
ಒಪ್ಪಣ್ಣ ಹೇಳ್ತ ಈ ಶುದ್ದಿಗಳೂ ಇಂಟರ್ನೆಟ್ಟಿಲಿ ಬಕ್ಕೋ ಹೇಳಿ ಕನುಪ್ಯೂಸು ಬಯಿಂದು ಒಂದು!!! ;-)
ಒಳ್ಳೆದು ಮಾಂತ್ರ ಅಲ್ಲ, ಬೇಡಂಕಟ್ಟೆದೇ ಸಿಕ್ಕುತ್ತಡ ಅದರ್ಲಿ. ಮಕ್ಕೊ ಒಳ್ಳೆದೂ ಅಕ್ಕು, ಹಾಳೂ ಅಕ್ಕಡ. ಅಬ್ಬೆಪ್ಪ ನೋಡಿಗೋಳದ್ರೆ. ಅದು ಇದರ್ಲಿ ಮಾಂತ್ರ ಅಲ್ಲ, ಎಲ್ಲದರ್ಲಿದೇ ಹಾಂಗೇ. ಎಂತ ಹೇಳ್ತಿ?
ಅಂತೂ ಇಂತೂ ಎಲ್ಲೊರಿಂಗೂ ಬೇಕು ಅದು.
ಒಂದರಿ ಅದರ ಬುಡಲ್ಲಿ ಕೂಬಲೆ ಅಬ್ಯಾಸ ಆದರೆ ಮತ್ತೆ ಏಳುಲೇ ಮನಸ್ಸು ಬತ್ತಿಲ್ಲೆ ಹೇಳಿ ಕುಂಬ್ಳೆ ಅಜ್ಜಿ ಪರಂಚುಗು. ಅವರ ಮನೆಲಿ ಈಗ ಒಲೆಲಿ ಮಡಗಿದ ಹಾಲು ಯೇವತ್ತೂ ಕರಂಚುದೇ ಅಡ - ಇಂಟರ್ನೆಟ್ಟಿಂದಾಗಿ. ;-(
ಏನೇ ಆದರೂ, ಹೊಸ ಹೊಸ ತಂತ್ರಜ್ಞಾನಂಗೊ ನಮ್ಮ ಊರಿಂಗೆ ಎತ್ತುತ್ತಾ ಇದ್ದು. ತುಂಬ ಒಳ್ಳೆದು. ಎಲ್ಲವನ್ನೂ ಒಳ್ಳೆದಕ್ಕೇ ಉಪಯೋಗುಸಿಗೊಂಬ°, ಎಲ್ಲರುದೇ ಬೆಳದಿಕ್ಕುವ°. ಎಂತ ಹೇಳ್ತಿ?
ಒಂದೊಪ್ಪ: ಇಡೀ ವಿಶ್ವಂದ ಒಳ್ಳೆದು ಬರಳಿ (ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ) ಹೇಳಿ ಅಜ್ಜಂದ್ರು ಹೇಳಿದ್ದು ಇದನ್ನೆಯೋ ಹೇಂಗೆ?