(ಆನೆಯ) ಕಾಂಬ ಹಲ್ಲುದೆ- ತಿಂಬ ಹಲ್ಲುದೆ ಬೇರೆ ಬೇರೆ : ಶಂಬಜ್ಜನ ಪಳಮ್ಮೆ

ನಮ್ಮ ಊರಿಲಿ ಕೆಲವು ಜೆನ ಇದ್ದವು, ಮಾತಿನ ಎಡೆಡೆಲಿ ಪಳಮ್ಮೆಗಳ ಸೇರುಸುತ್ತ ಕ್ರಮ ಅವಕ್ಕೆ.
ಪಳಮ್ಮೆ ಹೇಳಿರೆ ಎಂತರ ಗೊಂತಿದ್ದನ್ನೆ? ಏ°? ಹೇಳಿಕೆ / ಗಾದೆಗೊಕ್ಕೆ ಅಜ್ಜಂದ್ರ ಶೆಬ್ದ.

ಜೆನ ರಜ ಕುಶಾಲು ಆದರೆ ಅಂತೂ ಖಂಡಿತ ಪಳಮ್ಮೆಗೊ ಇದ್ದೇ ಇಕ್ಕು. ಬದುಕ್ಕಿ ಬೆಳದ ಪರಿಸರದ ಕೆಲವು ಆದರ್ಶ ಸಂಗತಿಗಳ ತಾತ್ಪರ್ಯಂಗಳ ಒಂದೇ ಗೆರೆಯಷ್ಟು ಸಣ್ಣ ಮಾಡಿ, ಒಂದು ಪಳಮ್ಮೆ ಮಾಡುದು. ಅನುಭವವ ಹೊಂದಿಗೊಂಡ ಆ ಪಳಮ್ಮೆಯ ಬೇಕಾದ ಸಂದರ್ಭಕ್ಕೆ ಬೇಕಾದ ಹಾಂಗೆ ಉಪಯೋಗುಸುದು ಅವರ ಮಾತಿಂಗೆ ತೂಕ ಕೊಡ್ತು. ’ಓಡಾರಿ ಕುಡು ಹಾಕಿದ ಹಾಂಗೆ’, ’ಹೊಳೆಲಿ ಹುಳಿ ತೊಳದ ಹಾಂಗೆ’, ಅದರ ಹಾಂಗೆ, ಇದರ ಹಾಂಗೆ ಹೇಳಿ ಎಡೆಡೆಲಿ ಸೇರುಸುವಗ ಎದುರಾಣವಂಗೆ ವಿಶಯವೂ ಮನನ ಆವುತ್ತು, ಭಾವನೆಯೂ ಶುದ್ದ ಆವುತ್ತು. ಕೆಲವೆಲ್ಲ ಕೇಳಿರೆ ಅಂತೂ ಎಂತವಂಗೂ ನೆಗೆ ತಡೆಯ, ಅಷ್ಟುದೇ ತಮಾಶೆ, ಹಗುರವಾಗಿ ಮನಮುಟ್ಟುವ ಹಾಂಗೆ ಇರ್ತು.

ತರವಾಡು ಮನೆ ಶಂಬಜ್ಜ, ಈಗ ಇಲ್ಲೆ ಅವು - ಸುಮಾರು ಪಳಮ್ಮೆಗಳ ಸೇರುಸುಗು ಮಾತಾಡುವಗ.
ಅಂಬಗ ಎಲ್ಲ ಎಂಗೊ ಬರೇ ಸಣ್ಣ ಇದಾ! ರಜ ರಜ ಅರ್ತ ಅಕ್ಕಷ್ಟೆ ಅಂಬಗ, ಆದರೆ ಈಗ ಅದರ ಪುನಾ ಬೇರೆ ಆರಾರ ಬಾಯಿಲಿ ಕೇಳಿ ಅಪ್ಪಗ "ಓ! ಇದರ ಅರ್ತ ಹೀಂಗೆ!" ಹೇಳಿ ಗೊಂತಪ್ಪದು.

ಅಜ್ಜಂದ್ರಿಂಗೆ ಕೆಲವು ಜೆನಕ್ಕೆ ಈ ಅಭ್ಯಾಸ ಇರ್ತು. ಅಜ್ಜಂದ್ರ ಒಟ್ಟಿಂಗೆ ತುಂಬ ಒಡನಾಡಿ ಗೊಂತಿಪ್ಪವಾದರೆ ಅವರ ಬಾಯಿಲೂ ಈ ಪಳಮ್ಮೆಗೊ ತಿರುಗುಲೆ ಸುರು ಆವುತ್ತು. ಒಪ್ಪಣ್ಣನ ಚೆಂಙಾಯಿಗಳಲ್ಲಿ ಸುಮಾರು ಜೆನಕ್ಕೆ ಆ ಬುದ್ದಿ ಇದ್ದು. ಕೇಳಿ ಕೇಳಿ ಒಪ್ಪಣ್ಣಂಗೂ ರಜ ರಜ ಶುರು ಆಯಿದೋ ಹೇಳಿ ಒಂದು ಕನುಪ್ಯೂಸು ಬಪ್ಪದು ಒಂದೊಂದರಿ! ;-)

ಮುಳಿಯಾಲದಪ್ಪಚ್ಚಿಗಂತೂ ಈ ಅಬ್ಯಾಸ ಒಳ್ಳೆತ ಇದ್ದು. ಶುದ್ದಿ ಕೇಳುದರಿಂದಲೂ ಪಳಮ್ಮೆಗಳ ಕೇಳುಲೆ ಹೇಳಿಗೊಂಡೇ ಎಂಗೊ - ಮಕ್ಕೊ ಎಲ್ಲ ಕೂಪದಿದ್ದು ಅವರ ಸುತ್ತಕೆ. (ಅವಕ್ಕೆ ಗೊಂತಿಲ್ಲೆ ಎಂಗೊ ಎಂತಕೆ ಕೂಬದು ಹೇಳಿ. ನಿಂಗೊ ಇನ್ನು ಹೇಳಿಕ್ಕೆಡಿ, ಹಾಂ!) ನೆಗೆ ಮಾಡಿ ಮಾಡಿ ಸಾಕಾವುತ್ತು. ಅಜ್ಜಕಾನ ಬಾವ° ಅಂತೂ ಆ ಪಳಮ್ಮೆಗಳ ಕೇಳಿ ನೆಗೆ ಮಾಡ್ಳೆ ಸುರು ಮಾಡಿರೆ, ಅಪ್ಪಚ್ಚಿ ಹೆರಟು ಅರ್ದ ದಿನ ಆದರೂ ನೆಗೆ ಮಾಡಿಯೇ ಬಾಕಿ! ಆಚಕರೆ ಮಾಣಿ ಮಂಡಗೆ ಎರಡು ಕುಟ್ಟಿ ಹಾಕುವನ್ನಾರ ಇಕ್ಕದು.
ಮಿಂಚಿನಡ್ಕ ಬಾವ° ವಿಶಯ ವಿವರುಸುದೇ ಪಳಮ್ಮೆಂದ. ಅವು ಒಂದರಿ ಬದಿಯಡ್ಕಲ್ಲೋ ಮತ್ತೊ ಮಾತಾಡ್ಳೆ ಸಿಕ್ಕಿದವು ಹೇಳಿತ್ತು ಕಂಡ್ರೆ ಕನಿಷ್ಠ ನಾಲ್ಕಾರೂ ಹೊಸ ಪಳಮ್ಮೆಗೊ ಸಿಕ್ಕುಗು ನಿಂಗೊಗೆ.

ಏನೇ ಇರಳಿ, ಕೇಳಿದ್ದರ ಹೇಳಿರೆ, ಹೇಳಿದ್ದರ ಬರದರೆ ಏನೂ ಚೋದ್ಯ ಇಲ್ಲೆ. ಅಲ್ದೋ? ಏ°?
ಕೆಲವೆಲ್ಲ ತುಂಬ ಮೌಲ್ಯ ಇಪ್ಪ ವಿಷಯಂಗೊ ಆದ ಕಾರಣ ’ಶುದ್ದಿ’ಗಳಲ್ಲಿ ಹೇಳುಲೇ ಬೇಕು ಹೇಳಿ ಆತು ಒಪ್ಪಣ್ಣಂಗೆ. ಅದಾಗಲೇ ಒಂದು ಗಾದೆಯ ಬಗ್ಗೆ ಮಾತಾಡಿದ್ದು ನಾವು, ನೆಂಪಿದ್ದನ್ನೇ? ಏ°? ಹಾಂಗೇ, ಈ ಸರ್ತಿ ಶಂಬಜ್ಜ ಹೇಳಿಗೊಂಡಿದ್ದ ಒಂದು ಪಳಮ್ಮೆ.
ಸಣ್ಣದು, ಆದರೆ ಅರ್ತಗರ್ಭಿತ ಆಗಿ ಇಪ್ಪದು.

ನಿತ್ಯಜೀವನಲ್ಲಿ ನವಗೆ ಸುಮಾರು ನಮುನೆಯ ಜೆನಂಗೊ ಸಿಕ್ಕುತ್ತವು. ಕೆಲವು ಜೆನ ನಮ್ಮ ಅತ್ಯಂತ ಪ್ರೀತಿಲಿ ಮಾತಾಡುಸುತ್ತವು, ನಮ್ಮ ತುಂಬ ಆತ್ಮೀಯರ ಹಾಂಗೆ ನಡಕ್ಕೊಳ್ತವು. ಆದರೆ ಒಳಂದ ಅವರ ಚರ್ಯೆಯೇ ಬೇರೆ ಇರ್ತು. ಕಾರ್ಯಸಾಧನೆಗೆ ತಕ್ಕ ನಮ್ಮ ಒಟ್ಟಿಂಗೆ ಇರ್ತವು. ಎದುರು ಅವು ಮಾತಾಡಿದ್ದರ ನೋಡಿ ’ಓ! ಬಾರೀ ಒಳ್ಳೆ ಜೆನ!" ಹೇಳಿ ಗ್ರೇಶಿಗೊಂಡು ಅವರ ಚೆಂಙಾಯಿ ಸುರು ಮಾಡಿರೆ ಮುಂದೆ ಒಂದು ದಿನ ಬತ್ತಿ ಮಡುಗುತ್ತವು, ನಿಘಂಟೇ!.

ಇನ್ನು ಕೆಲವು ಜೆನಕ್ಕೆ, ಮಾತಾಡುವಗ ನೈಸು ಮಾತಾಡ್ಳೆ - ಈಗಾಣ ಕಾಲದವರ ಹಾಂಗೆ - ಅರಡಿಯ, ಎಂತ ಇದ್ದರೂ ನೇರಾನೇರ. ಅಕ್ಕಾರೆ ಅಕ್ಕು, ಆಗದ್ರೆ ಆಗ- ಖಡಾಖಡಿ! ಸುಮ್ಮನೆ ಎದುರಂದ ಒಂದು ನಮುನೆ, ಬೆನ್ನ ಹಿಂದಂದ ಇನ್ನೊಂದು ನಮುನೆ - ಚೆಚೆ, ಎಡಿಯಲೇ ಎಡಿಯ ಅವಕ್ಕೆ!
ಈ ನೇರ ಮಾತುಗಳಲ್ಲಿ ಎಷ್ಟೋ ಒಳ್ಳೆಯ ವಿಶಯ ಬಕ್ಕು, ನಮ್ಮ ಬಗ್ಗೆ ಕಾಳಜಿಲಿ ಹೇಳಿದ ಮಾತುಗೊ ತುಂಬ ಇಕ್ಕು, ಆದರೆ ಅದರ ಹೇಳ್ತ ರೀತಿ ರಜಾ ಒರಟು ನಮುನೆಲಿ ಇರ್ತು. ಈಗಾಣ ಎಷ್ಟೋ ಜೆನಕ್ಕೆ ಈ ನೇರತ್ವ ಹಿಡಿಶುತ್ತಿಲ್ಲೆ. ರಜ ಕಡ್ಪಕ್ಕೆ ಮಾತಾಡಿದ ಕೂಡ್ಲೆ "ಅವು ಜೆನ ಆಗ ಮಾರಾಯ°!" ಹೇಳಿ ನಿರ್ದಾರ ಮಾಡಿ ಬಿಡ್ತವು.

ಕಾಂಬಲೆ ಚೆಂದ ಇಪ್ಪ ಮಾಣಿಯ ಮನಸ್ಸಿಲಿ ಎಂತಾ ಕೆಟ್ಟ ಕೆಟ್ಟ ಆಲೋಚನೆಗೊ ಇರ್ತೋ ಏನೋ! ಸುರ್ಪ ಚೆಂದ ಇಲ್ಲದ್ದ ಎಷ್ಟೋ ವಿಶಾಲ ಹೃದಯಿ ಮನುಷ್ಯರು ನಮ್ಮ ಮಧ್ಯಲ್ಲಿ ಇದ್ದವು. ಚೀಪೆ ಬೆಲ್ಲ ತುಂಬ ತಿಂದರೆ ಹಲ್ಲು ಹುಳು ತಿಂತಡ. ಬರೇ ಕೈಕ್ಕೆ ಹಾಗಲಕಾಯಿ ಮೈಗೆ ತುಂಬ ಒಳ್ಳೆದಡ, ಚೂರಿಬೈಲು ಡಾಗ್ಟ್ರು ಹೇಳಿಗೊಂಡು ಇತ್ತಿದ್ದವು ಮೊನ್ನೆ.
ಯೇವದೇ ಒಂದು ವಿಶಯ, ನಾವು ಕಂಡ ಹಾಂಗೇ ಇರೆಕ್ಕು ಹೇಳಿ ಏನೂ ಇಲ್ಲೆ, ಬದಲಾಗಿ ಅದರ ಒಳಾಣ ವ್ಯವಸ್ಥೆ ಬೇರೆಯೇ ಇಕ್ಕು. ಎದುರಂದ ಒಳ್ಳೆದರ ಹಾಂಗೆ ಕಂಡದು ಪರಾಂಬರಿಸಿ ನೋಡಿ ಅಪ್ಪಗ ತಂಬ ಹುಳ್ಕು ಇಪ್ಪಂತದ್ದು ಆಗಿಕ್ಕು. ಅಲ್ಲದೋ?


ಪ್ರಾಣಿಗೊಕ್ಕೆ ಹಲ್ಲು (ದಂತ) ಇಪ್ಪದು ಎಂತಾರು ಅಗಿವಲೋ, ಮಾಂಸ ತುಂಡುಸಲೋ, ಎದುರಾಳಿಗೊಕ್ಕೆ ಕಚ್ಚಲೋ, ಮೆಲುಕು ಹಾಕಲೋ ಎಂತಾರು. ಮನುಷ್ಯರಿಂಗೆ ಮತ್ತೂ ಕೆಲವು ಇದ್ದು - ಪಟ ತೆಗವಗ ನೆಗೆ ಮಾಡ್ಳೋ, ರಸ್ಕಿನ ಒಕ್ಕಲೋ, ಪಾಪದವರ ಕಾಡುಸುಲೋ, ಉದಿಯಪ್ಪಗ ಬ್ರೆಶ್ಶಿಲಿ ತಿಕ್ಕಲೋ (ಹಾಂಗೇಳಿರೆ ಎಂತರ - ಹೇಳಿ ಆಚಕರೆ ಮಾಣಿ ಕೇಳಿಗೊಂಡಿತ್ತಿದ್ದ° ಮೊನ್ನೆ!)- ಹೀಂಗೆ ಸುಮಾರು ನಮುನೆ ಇದ್ದು.
ಆನೆ ಇದ್ದಲ್ದೋ, ಅದರ ವ್ಯಕ್ತಿತ್ವಲ್ಲಿ ’ದಂತ’ಕ್ಕೆ ವಿಶೇಷ ಸ್ಥಾನ. ಆದರೆ ಆನೆಯ ಆ ದಂತ ಈ ಏವದಕ್ಕೂ ಅಲ್ಲ. ಬದಲಾಗಿ ಬೇರೆಯೇ ಕೆಲವು ಉಪಯೋಗಕ್ಕೆ ಇಪ್ಪದು. ವೈರಿಗಳ ಸೊಂಡ್ಳಿಲಿ ಹಿಡ್ಕೊಂಡು ಕುತ್ತಲೋ, ಮರ ಎಳವಲೋ, ಇತ್ಯಾದಿಗೊಕ್ಕೆ ಬೇಕಪ್ಪದು ಅಷ್ಟೆ. ಅಗಿವ ಹಲ್ಲು ಬೇರೆಯೇ ಇದ್ದು, ಬಾಯಿಯ ಒಳದಿಕ್ಕೆ. ಒಳುದ ಪ್ರಾಣಿಗಳ ಹಾಂಗೇ, ಸಣ್ಣದು.
ಈ ದಂತವ ಕಂಡ ಕೂಡ್ಳೆ ತುಂಬ ಕ್ರೂರ ಪ್ರಾಣಿ ಹೇಳಿ ಅನಿಸುಗು. ಆದರೆ ಒರ್ಮೈಸಿದರೆ ಎಷ್ಟು ಸಾಧು ಪ್ರಾಣಿ ಅದು!

ಅದಕ್ಕೇ ಶಂಬಜ್ಜನ ಗಾದೆ ಇಪ್ಪದು, ಆನೆಯ ಕಾಂಬ ಹಲ್ಲುದೇ, ತಿಂಬ ಹಲ್ಲುದೇ ಬೇರೆ ಬೇರೆ ಹೇಳಿಗೊಂಡು. . . .
ಹೆರ ಕಾಂಬ ದಂತವ ಕಂಡಕೂಡ್ಳೆ ’ಇದು ಹೀಂಗೇ’ ಹೇಳಿ ನಿರ್ಧಾರ ಮಾಡುದು ತಪ್ಪು ಹೇಳಿ ಲೆಕ್ಕ.
ಎದುರಂದ ತೋರುಸಿಗೊಂಬದು ಬೇರೆಯೇ ವೆಕ್ತಿತ್ವ, ಒಳಂದ ಬೇರೆಯೇ ನಡವಳಿಕೆಗೊ ಇಪ್ಪ ಜೆನಂಗಳ ಕಾಂಬಗ ಈ ಗಾದೆ ನೆಂಪಾಗಲಿ ಆತೋ?


ಸುಮ್ಮನೆ ವರ್ಡ್ಸ್ ವರ್ತು, ಅರಿಶ್ಟಾಟಲ್ಲು ಹೇಳಿಗೊಂಡು ಲಾಗ ಹಾಕುವ ಮೊದಲು ನಮ್ಮಲ್ಲೇ ರೂಡಿಲಿ ಇಪ್ಪ ನಮ್ಮದೇ ಜೀವನ ಪದ್ಧತಿಯ ಎಷ್ಟೋ ಶಂಬಜ್ಜನವರ ಪಳಮ್ಮೆಗಳ ಕೇಳಿ ಮನನ ಮಾಡಿರೆ ಜೀವಮಾನ ಚೆಂದಲ್ಲಿ ಕಳವಲೆ ಸಾಕು.
ಏ°? ಎಂತಹೇಳ್ತಿ?

ಒಂದೊಪ್ಪ: ಈ ನಮುನೆಯ ಶುದ್ದಿಗೊ ಸುಮಾರು ಇದ್ದು ಹೇಳುಲೆ. ಒಂದೊಂದೆ ಆಗಿ ಮಾತಾಡುವೊ°, ’ಓಡಾರಿ ಕುಡು ಹಾಕಿದ ಹಾಂಗೆ’’ ಅಪ್ಪದು ಬೇಡ, ಅಲ್ದೋ?