ಅಲ್ಲಿಗೂ, ಇಲ್ಲಿಗೂ, ಎಲ್ಲೆಲ್ಲಿಗೂ 'ಗೂಗುಲು'..!

ಇಂಟರ್ನೆಟ್ಟು ನಮ್ಮ ಊರಿಂಗೆ ಬಂದ ಶುದ್ದಿ ಓ ಮೊನ್ನೆ ಮಾತಾಡಿದ್ದು. (ಬೇಕಾರೆ ಇಲ್ಲಿದ್ದು, ಪುನಾ ಓದಲಕ್ಕು)
ಇಂಟರ್ನೆಟ್ಟು ಬಂದ ಮತ್ತೆ ಅದರ ಬಳಕೆ ಹೇಂಗಾತು ಹೇಳ್ತದರ ಬಗ್ಗೆ ಶುದ್ದಿಗಳಲ್ಲಿ ಒಂದು:

ದೊಡ್ಡ ಜೆನ ಸೇರ್ತ ಜೆಂಬ್ರ ಎಂತಾರು ಇದ್ದರೆ ಬಟ್ಟಮಾವನ ಒಟ್ಟಿಂಗೆ ಪರಿಕರ್ಮಿಗೊ ಬತ್ತವು, ಗೊಂತಿದ್ದಲ್ದ? ಬಟ್ಟಮಾವಂಗೆ ಕ್ರಿಯಕ್ಕೆ ಬೇಕಾದಾಂಗೆ ಹುಡುಕ್ಕಿ ಕೊಡ್ಳೆ ಮನೆಯೋರಿಂಗೆ ವೆವಧಾನ ಇರ್ತಿಲ್ಲೆ. ವೆವಧಾನ ಇದ್ದರೂ ಗೊಂತಿರ್ತಿಲ್ಲೆ. (ಗೊಂತಿದ್ದರೂ ಮರಿಯಾದಿ ಬಿಡ್ತಿಲ್ಲೆ ಇದಾ, ಕೆಲವು ಜೆನಕ್ಕೆ! ;-( )
ಮನೆಯೋರು ಮೊದಲೇ ಸಂಪಾಲುಸಿ ರೂಡಿ ಮಾಡಿ ಮಡಿಕ್ಕೊಂಡ ಸುವಸ್ತುಗಳ ಜೋಡುಸಿ, ಬಟ್ಟಮಾವಂಗೆ ಬೇಕಾದ ಹಾಂಗೆ ರಜ ಮಾರ್ಪಾಡು ಮಾಡಿ ಕೊಡ್ತ ಕೆಲಸ ಅಲ್ಲದೋ ಪರಿಕರ್ಮಿಗಳದ್ದು. ಹಾಂಗಾಗಿ ಪರಿಕರ್ಮಿಗೊ ಇದ್ದರೆ ಮನೆಯವಕ್ಕೂ ಆರಾಮ, ಬಟ್ಟಮಾವಂಗೂ ಕುಶಿ. ಎಲ್ಲಿವರೆಗೆ ದೊಡ್ಡ ಜೆಂಬ್ರಂಗೊ ಇರ್ತೋ, ಎಲ್ಲಿ ಒರೆಂಗೆ ಬಟ್ಟಮಾವಂದ್ರು ಇರ್ತವೋ, ಅಲ್ಲಿವರೆಗೆ ಪರಿಕರ್ಮಿಗೊ ಬೇಕೇ ಬೇಕು!!! ಅಲ್ಲದೋ? ಏ°?
ಗಣೇಶಮಾವನ ಮನೆಯ ಹಾಂಗೆ ಕೆಲವು ಮನೆಗೆ ಅಂತೂ - ಮಂತ್ರ ಎಲ್ಲ ಅವಕ್ಕೇ ಅರಡಿಗು ಇದಾ - ಬಟ್ಟಮಾವ° ಬಾರದ್ರೂ ಸುದಾರಣೆ ಅಕ್ಕು, ಪರಿಕರ್ಮಿಗೊ ಬಾರದ್ರೆ ಪೂರ ಕೆಣಿಗು! ಸಪಾದ ಕಾಸಲೆದೇ ಅರಡಿಯ ಅವಕ್ಕೆ!! (ಆನು ಹೇಳಿದ್ದು ಹೇಳಿಕ್ಕೆಡಿ ಇನ್ನು, ಹಾಂ!)

ಇಂಟರ್ನೆಟ್ಟಿಲಿ ಎಲ್ಲ ಇದ್ದಡ.
ಶುದ್ದಿಗೊ, ಚಿತ್ರಂಗ, ಪದ್ಯಂಗ, ಕಲಿವಲಿಪ್ಪ ಪಾಟಂಗೊ - ನೋಡ್ಸುಗೊ (Notes), ಆಚಕರೆ ಮಾಣಿಗೆ ಬೇಕಪ್ಪ ದೇವರ ಪಟಂಗ ;-) , ಚೆಂಬರ್ಪು ಅಣ್ಣಂಗೆ ಬೇಕಪ್ಪ ಆಟದ ಪದಂಗೊ, ವೇಣೂರಣ್ಣ ಬರೆತ್ತ ಬಲಿಪ್ಪಜ್ಜನ ಶುದ್ದಿಗೊ, ಗಣೇಶಮಾವ ಓದುತ್ತ ಅರುಣಪ್ರಶ್ನದ ಹನುಸ್ಸುಗೊ, ಪಂಜೆಯಚಿಕ್ಕಮ್ಮಂಗೆ ಬೇಕಾದ ’ಮೇಲಾರ ಮಾಡ್ತ ವಿಧವಿಧ ವಿಧಾನಂಗೊ’, ದೀಪಕ್ಕಂಗೆ ಬೇಕಾದ ’ಮಲ್ಲಿಗೆ ಗೆಡುವಿನ ಕೃಷಿ’, ಪಡ್ರೆ ಮಾವ ಹೇಳ್ತ ಬರೆ-ನೀರಿನ ಶುದ್ದಿ, ದೊಡ್ಡಬಾವ ಹೇಳ್ತ ಶಾಲೆ ಶುದ್ದಿ, ಡೈಮಂಡುಬಾವ° ಬರೆತ್ತ ಜೀವನದ ಶುದ್ದಿ, ಶೇಣಿಬಾವ ಜಯಗಂಟೆ ಬಡಿತ್ತ ಶುದ್ದಿ - ಎಲ್ಲವುದೇ.

ಜೆಂಬ್ರದ ಮನೆಲಿದೇ ಎಲ್ಲ ಇರ್ತು.
ಶುದ್ದಕ್ಕಿಪ್ಪ ಗೋಮಯ, ಅಕ್ಕಿ, ತೆಂಗಿನಕಾಯಿ, ದರ್ಬೆ, ಗರಿಕ್ಕೆ, ಎಲೆಡಕ್ಕೆ, ಕೌಳಿಗೆ-ಸಕ್ಕಣ, ಹರಿವಾಣ, ಚೆಂಬು, ಹೋಮಕ್ಕಿಪ್ಪ ತುಪ್ಪ, ಸಮಿತ್ತು, ಶಾಕೋಲು, ದೇವರಿಂಗೆ ಹೂಗು, ದಕ್ಷಿಣೆ, ವೇಷ್ಟಿ ಶಾಲು, ಅಕ್ಕಿ ಕಾಯಿ ತುಂಬುಸಲಿಪ್ಪ ತೊಟ್ಟೆ - ಎಲ್ಲವುದೇ ತಯಾರು ಮಾಡಿ ಮಡಗಿರ್ತವು ಮನೆಯೋರು. ಬಟ್ಟಮಾವಂಗೆ ಅಂಬಗ ಅಗತ್ಯದ್ದು ಮಾಂತ್ರ ಬೇಕಪ್ಪದು.

ಇಂಟರ್ನೆಟ್ಟಿಲಿ ಒಂದು ವೆಬ್-ಸೈಟು(ತಾಣ) ಇದ್ದಡ. ಗೂಗುಲು(Google) ಹೇಳಿಗೊಂಡು. ಅದೇ ಹೆಸರಿನ ಕಂಪೆನಿಯ ತಾಣ ಅಡ. ಒಂದೇ ಕ್ಲಾಸಿಲಿ ಇದ್ದ ಪೇಜು, ಬ್ರಿನ್ನು ಹೇಳ್ತ ಎರಡು ಚೆಂಙಾಯಿಗೊ ಸೇರಿಗೊಂಡು ಈ ಕಂಪೆನಿ ಮಾಡಿದ್ದಡ. ಶ್ಟಾನುಪೋರ್ಡು ವಿಶ್ವವಿದ್ಯಾಲಯದ ಪುಸ್ತಕಂಗಳ ಹುಡ್ಕಲೆ ಹೇಳಿಗೊಂಡು ಮಾಡಿದ ಈ ವೆಬ್’ಸೈಟು ಬೆಳದು ಬೆಳದು ಈಗ ವಿಶ್ವಾದ್ಯಂತ ಎಲ್ಲಿ, ಯೇವಗ, ಎಂತಬೇಕಾರು ಹುಡ್ಕಿ ಕೊಡ್ತಡ. ಗೂಗೊಲು (Googol) ಹೇಳಿರೆ ಹತ್ತರ ಘಾತ ೧೦೦ ಹೇಳಿ ಲೆಕ್ಕ ಅಡ, ಗ್ರೀಕಿಲಿ. ತುಂಬಾ ಹೇಳಿ ಅರ್ತ. ಅದೇ ಅರ್ತ ಬಪ್ಪಹಾಂಗೆ, ರಜ್ಜ ಇಂಗ್ಳೀಶಿಲಿ ಹೇಳ್ತ ನಮುನೆ ಮಾಡಿ Google ಹೇಳಿ ಬರವದಡ. ಈಗ ಹಾಂಗೇ ಪ್ರಸಿದ್ದಿ ಆತು.

ಬೇರೆ ಬೇರೆ ವೆಬ್ ಸೈಟಿಲಿ ಎಂತೆಲ್ಲ ವಸ್ತು-ವಿಚಾರ ಇದ್ದೋ, ಅದರ ಹುಡ್ಕಿ ಬೇಕಾದಾಂಗೆ ರೂಡಿ ಮಾಡಿ ಕೊಡ್ತಡ. ಅದರ ಸೊಂತದ್ದು ಹೇಳಿ ಎಂತದೂ ಇಲ್ಲದ್ರೂ, ಎಲ್ಲ ಬೇರೆ ಬೇರೆ ದಿಕ್ಕಂದ ಹುಡ್ಕಿ ತಂದು ಕೊಡ್ತರೂ, ಎಲ್ಲೊರಿಂಗೂ ಅದು ಬೇಕು. ಎಂತಕೆ ಹೇಳಿರೆ ಎಲ್ಲೊರೂ ಬಟ್ಟಮಾವಂದ್ರೇ ಇದಾ...! ;-)
ಕಂಪ್ಯೂಟರಿನ ಬುಡಲ್ಲಿ ಬಟ್ಟಮಾವನ ಹಾಂಗೆ ಕೂದರೆ ಸಮ. ಮತ್ತೆಲ್ಲ ಆ ’ಪರಿಕರ್ಮಿ’ ಮಾಡಿ ಕೊಡ್ತಡ. ಯೇವದು ಬೇಕು ಹೇಳಿ ಯೋಚನೆ ಮಾಡ್ತ ಕೆಲಸ ಮಾಂತ್ರ ನಮ್ಮದು. ’ಇಂತಾದ್ದು ಬೇಕೆನಗೆ’ ಹೇಳಿ ಗೂಗುಲಿನ ಹತ್ರೆ ಹೇಳಿರೆ ಅದುವೇ ತೋರುಸಿ ಕೊಡ್ತಡ.

ಗೂಗುಲು ವೆಬ್-ಸೈಟಿಲಿ ನವಗೆ ಬೇಕಾದ ಶಬ್ದ ಬರವಲೆ ಹೇಳಿಗೊಂಡು ಒಂದು ಜಾಗೆ ಇದ್ದಡ. ಅದರಲ್ಲಿ ಎಂತಾರು ಬರದು "ಹುಡ್ಕು" ಹೇಳಿ ಸುಚ್ಚು ಒತ್ತಿರೆ, ಆ ಶಬ್ದದ ಪ್ರಯೋಗ ಎಲ್ಲೆಲ್ಲಿ ಬಯಿಂದೋ, ಅದರ ಸಂಕೊಲೆ(Link)ಗಳ ತಂದು ನಮ್ಮ ಎದುರು ಮಡಗುತ್ತಡ. ಒಂದು ಪುಟಲ್ಲಿ ಹತ್ತು ಸಂಕೊಲೆಯ ಹಾಂಗೆ, ಎಷ್ಟು ಇದ್ದರೂ ಕೊಡ್ತಡ.
ಯೇವದೇ ಒಂದು ವಿಷಯ ಅದರ್ಲಿ ಹುಡ್ಕುತ್ತರೂ, ಆ ವಿಷಯಕ್ಕೆ ನೇರವಾಗಿ ಸಂಬಂಧಪಟ್ಟ ವೆಬ್-ಸೈಟಿನ ಮೊದಾಲು ತೋರುಸುತ್ತದಲ್ಲದ್ದೆ, ಆ ವಿಶಯ ಯೇವೆ ಯೇವ ವೆಬ್-ಸೈಟಿಲಿ ವಿವರಣೆ ಇದ್ದೋ, ಪೂರ ತಂದು ಸೊರುಗುತ್ತು ನಿಂಗಳ ಎದುರು.
ನಿಂಗಳ ಎದುರು ಬಂದು ಉದುರಿದ ಸಾವಿರಗಟ್ಳೆಂದ ನಿಂಗೊಗೆ ಬೇಕಾದ್ದರ ಹುಡ್ಕುತ್ತಷ್ಟು ಪುರುಸೊತ್ತು, ತಾಳ್ಮೆ ನಿಂಗೊಗಿಲ್ಲದ್ರೆ, ’ಎನಗೆ ಅದೃಷ್ಟ ಇದ್ದು’ (I'm feeling lucky) ಹೇಳಿ ಬರಕ್ಕೊಂಡು ಇಪ್ಪ ಸುಚ್ಚು ಒತ್ತಿರೆ ನಿಂಗೊ ಕೇಳಿದ್ದಕ್ಕೆ ಅತಿ ಹೆಚ್ಚು ಸಾಮ್ಯ ಇಪ್ಪ ಪುಟವ ತಂದು ತೋರುಸುತ್ತಡ. ಅದೃಷ್ಟ ಬರ್ಕತ್ತಿಂಗೆ ಇದ್ದರೆ ನಿಂಗೊಗೆ ಬೇಕಾದ ಪುಟವೇ ಬತ್ತು- ನಿಂಗಳ ಅಜ್ಜಿ ಪುಣ್ಯ. ಇಲ್ಲೆ ಹೇಳಿ ಆದರೆ ಅದರ ದೂರುತ್ತ ಹಾಂಗಿಲ್ಲೆ.

ಮೊದಲು ಅಕ್ಷರ ಮಾಂತ್ರ ಹುಡ್ಕಿಯೊಂಡು ಇದ್ದ ಗೂಗುಲಿಂಗೆ ಈಗ ಪಟಂಗಳನ್ನೋ, ವೀಡಿಯಂಗಳನ್ನೋ, ಎಲ್ಲ ಹುಡ್ಕುಲೆ ಅರಡಿತ್ತಡ. ಗೂಗುಲು ಪಟಂಗೊ ಮತ್ತೆ ಗೂಗುಲು ವೀಡಿಯಂಗೊ ಹೇಳಿ ಎರಡು ಹೊಸತ್ತು ಸುರು ಆದ್ದರ್ಲಿ ಇದೆರಡೂ ಸಾಧ್ಯ ಇದ್ದಡ. ಪೆರ್ಲದಣ್ಣ ಮೊನ್ನೆ ಹೇಳಿಗೊಂಡು ಇತ್ತಿದ್ದ.
ಗೂಗುಲಿಲಿ ಹುಡುಕ್ಕುವಗ ಸುಮಾರೆಲ್ಲ ಕಣ್ಣುಕಟ್ಟು ಮಾಡ್ಳೆ ಆವುತ್ತಡ. ’ಇಂತಾ ವೆಬ್ಸೈಟಿಂದ’ ಬೇಕು / ಬೇಡ, ಇಂತಾ ವಸ್ತುಗೊ ಬೇಡ, ಇಂತಾ ದಿನಂದ ನಂತ್ರಾಣದ್ದು ಬೇಕು/ಬೇಡ, ಇಂತಾ ದೇಶದ್ದು ಬೇಕು / ಬೇಡ -ಇನ್ನೂ ಎಂತೆಂತದೋ..
ಗೂಗುಲಿನ ಹಾಂಗಿಪ್ಪ ಪರಿಕರ್ಮಿಗೆ ಈಗ ಸುಮಾರು ಜೆನ ಇದ್ದವಡ. ಆದರೂ ಹೆಚ್ಚು ಬಳಕೆಲಿ ಇಪ್ಪದು ಗೂಗಲುವೇ ಅಡ. ಎಂತಕೇ ಹೇಳಿರೆ ಅದು ಹೆಚ್ಚು ’ಪರಿಪೂರ್ಣ’ ಮತ್ತೆ ಹೆಚ್ಚು ’ಬೇಗ’ ತಂದು ಕೊಡ್ತಡ. ಪರಿಕರ್ಮಿಗೊ ಚುರ್ಕು ಬೇಕಲ್ದೋ? ಬಟ್ಟಮಾವ ಇಲ್ಲದ್ದರೂ!!
ಕೋಟಿಗಟ್ಳೆ ತಾಣಂಗೊ ಇಪ್ಪಗ ಯೇವದರ್ಲಿ ಯೇವದು, ಯೇವದು ಆರಿಂದು ಹೇಳಿ ಮನುಷ್ಯಂಗೆ ನೆಂಪು ಮಡುಗಲೆ ಸಾಧ್ಯ ಇಲ್ಲೆಡ. ಹಾಂಗಾಗಿ ಈಗೀಗ ಈ ಪರಿಕರ್ಮಿಗೆ ಒಳ್ಳೆತ ಬೇಡಿಕೆ ಬಯಿಂದಡ.

ಇಂಟರ್ನೆಟ್ಟು ಎಷ್ಟು ಅಗತ್ಯವೋ, ಇಂಟರ್ನೆಟ್ಟು ಬಂದ ಮೇಗೆ ಈ ಗೂಗುಲುದೇ ಅಷ್ಟೇ ಅಗತ್ಯ ಆಗಿ ಬಿಟ್ಟಿದು.
ಭಟ್ರಿಂಗೆ, ಪರಿಕರ್ಮಿಗೆ, ಜೋಯಿಷರಿಂಗೆ, ಅಡಿಗೆಯವಕ್ಕೆ, ಗೃಹಸ್ಥರಿಂಗೆ, ಬ್ರಹ್ಮಚಾರಿಗೊಕ್ಕೆ, ವಿದ್ಯಾರ್ಥಿಗೊಕ್ಕೆ, ಎಲ್ಲೋರಿಂಗೂ ಇದು ಉಪಕಾರವೇ.
[ಪೋಕ್ರಿಗೊಕ್ಕುದೇ ಹೇಳಿ ಅಜ್ಜಕಾನ ಬಾವ ಆಚಕರೆ ಮಾಣಿಯ ನೋಡಿ ನೆಗೆ ಮಾಡಿದ.. ;-) ]
ಸೋಪ್ಟುವೇರುಗೊಕ್ಕೆ ಅಂತೂ ಇದಿಲ್ಲದ್ರೆ ಕೆಲಸವೇ ಮುಂದೆ ಸಾಗ ಇದಾ! ಆ ಮಟ್ಟಿಂಗೆ ಎತ್ತಿದ್ದು ಈಗ ಪರಿಸ್ಥಿತಿ.
ಈ ಗೂಗುಲು ಇಂಟರ್ನೆಟ್ಟಿಲಿ ಇದ್ದ ಕಾರಣ, ಅಲ್ಲಿ ಇಲ್ಲಿ ಹೇಳಿ ಲೆಕ್ಕ ಇಲ್ಲೆ, ಎಲ್ಲಿ ಬೇಕಾರು ನೋಡ್ಳೆಡಿತ್ತು. ಹಾಂಗಾಗಿ ಎಲ್ಲ ದಿಕ್ಕಂಗುದೇ ಈ ಗೂಗುಲು ಬೇಕಾವುತ್ತು.

ಇನ್ನೊಂದು ಪೈಸದ ವಿಶಯ ಇದ್ದಿಲ್ಲಿ:
ಪರಿಕರ್ಮಿಗೆ ಯೇವರೀತಿ ದಕ್ಷಿಣೆ ಕೊಡ್ತೋ, ಅದೇ ನಮುನೆ ಈ ಪರಿಕರ್ಮಿಗೂ ದಕ್ಷಿಣೆ ಕೊಟ್ರೆ, ದಕ್ಷಿಣೆ ಕೊಟ್ಟವನ ವಿಷಯವ ಬಟ್ಟಮಾವಂಗೆ ಎದೂರು ಸಿಕ್ಕುತ್ತ ನಮುನೆ ಹಿಡಿತ್ತಡ. ಯೆಡ್ವಟೇಸು ಕೊಡ್ತ ನಮುನೆ. ಸುಮಾರು ನಡೆತ್ತಡ ಹಾಂಗಿರ್ತದು. ಹಾಂಗೆಯೇ, ಬೇರೆ ದಕ್ಷಿಣೆ ಕೊಟ್ಟವನ ವಿಷಯಂಗಳ ನಮ್ಮ ವೆಬ್ಸೈಟಿಲಿ ಹಾಕಿರೆ ಪರಿಕರ್ಮಿಯೇ ಇತ್ಲಾಗಿ ದಕ್ಷಿಣೆ ಕೊಡ್ತನಡ.. ಪೆರ್ಲದಣ್ಣ ತಿಂಗಳಿಂಗೆ ಎಷ್ಟೋ ರುಪಾಯಿಯಷ್ಟು ಎಣುಸುತ್ತನಡ, ಮೊನ್ನೆ ಹೇಳಿಗೊಂಡು ಇತ್ತಿದ್ದ°. "ಚೆಲಾ ಚೋದ್ಯವೇ- ಎಲ್ಯಾರು ಇದ್ದಾ!" ಹೇಳಿ ದೊಡ್ಡಮಾವ ಮೂಗಿಂಗೆ ಬೆರೆಳು ಮಡಗಿತ್ತಿದ್ದವು. ’ಹಾಕಿರೆ ಹೇಂಗಂಬಗ?’ ಹೇಳಿ ದೊಡ್ಡಬಾವ ಆಲೋಚನೆ ಮಾಡ್ಲೆ ಸುರುಮಾಡಿದವು. ಒರಿಶಕ್ಕೊಂದರಿ ಶಾರದಾಪೂಜೆಗೆ ಪಾಂಡೇಲಣ್ಣಂಗೆ ದಕ್ಷಿಣೆಕೊಡ್ಳೆ ದಕ್ಕಿತ ಆದರೂ ಬಕ್ಕನ್ನೆ ಹೇಳಿ ಗ್ರೇಶಿದವೋ ಯೇನೋ!

ಗೂಗುಲು ಕಂಪೆನಿ ಈ ಹುಡ್ಕುಸಿದ್ದರಿಂದ ಪೈಸೆ ಮಾಡಿ ಮಾಡಿ ಈಗ ಬೇರೆ ಬೇರೆ ಕಾರ್ಯಂಗೊ ಸುರು ಮಾಡಿದ್ದಡ. ಅದರ ಶುದ್ದಿ ಮುಂದಕ್ಕೆ ಮಾತಾಡುವ°. ಆಗದೋ?
ಏ°?

ಒಂದೊಪ್ಪ: ಗುಣಾಜೆಮಾಣಿ 'ಕೂಸುಡ್ಕಲೂ ಗೂಗುಲು ಮಾಡ್ಳಾವುತ್ತೋ?' ಹೇಳಿ ಬೇಂಕಿನ ಪ್ರಸಾದಣ್ಣನತ್ರೆ ಕೇಳಿಗೊಂಡಿತ್ತಿದ್ದ° ಓ ಮೊನ್ನೆ. ಉಮ್ಮ, ಆವುತ್ತಾಯಿಕ್ಕು. ನವಗರಡಿಯ. ನಿಂಗೊಗರಡಿತ್ತೋ?