ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?

ಊರ ದೇವಸ್ತಾನಲ್ಲಿ ಒರಿಶಕ್ಕೊಂದರಿ ಜಾತ್ರೆ ಆವುತ್ತು.
ನಿತ್ಯವೂ ಪೂಜೆಮಾಡಿದ ಆ ದೇವರ ಲೆಕ್ಕಲ್ಲಿ ಗಮ್ಮತ್ತು ಮಾಡ್ತ ದಿನ. ಉತ್ಸವ ಮೂರ್ತಿಯ ಅಲಂಕಾರ ಮಾಡಿ, ತಂತ್ರಿಗಳ ಬರುಸಿ, ಚೆಂಡೆ-ಪಟಹ ವಾದ್ಯಂಗಳ ಒಟ್ಟಿಂಗೆ ದರ್ಶನಬಲಿ ಬಂದು, ಬೆಡಿ ಇತ್ಯಾದಿ ಹೊಟ್ಟುಸಿ ಗೌಜಿ ಮಾಡುದು. ಊರಿನ ಆಸ್ತಿಕರೆಲ್ಲರೂ ಹೋಗಿ ಆ ಜಾತ್ರೆಗೆ ಸೇರಿಗೊಳ್ತವು.
ಶ್ರದ್ಧಾಕೇಂದ್ರ ದೇವಸ್ತಾನದ ಸುತ್ತಮುತ್ತ ಇಪ್ಪ ಗೌಜಿ ಗದ್ದಲಲ್ಲಿ ಕೂಡಿ, ಹತ್ತರಾಣವರತ್ರೆ ಮಾತಾಡಿಗೊಂಡು, ಬೊಬ್ಬೆ ಹೊಡಕ್ಕೋಂಡು ತಿರುಗುತ್ತವು. ಎಲ್ಲ ನಮುನೆಯ ಜೆನಂಗಳೂ ಬಂದು ಬಂದು ಸೇರುತ್ತವು. ಗಣೇಶಮಾವನ ಹಾಂಗಿರ್ತವು ಮಂತ್ರಸುತ್ತಿಲಿ ತೊಡಗಿಯೊಂಡ್ರೆ, ಆಚಕರೆಮಾಣಿಯ ಹಾಂಗಿರ್ತವು ಹೋಟ್ಳಕರೆಲಿ ಬೊಂಡಕುಡ್ಕೊಂಡು ಇರ್ತವು. ಒಪ್ಪಕ್ಕನ ಹಾಂಗಿರ್ತವು ಅಮ್ಮನ ಮೊಟ್ಟೆಲಿ ಒರಕ್ಕು ತೂಗಿರೆ ಪುಟ್ಟಕ್ಕನ ಹಾಂಗಿರ್ತವು ಅಪ್ಪಂಗೆ ಗೊಂತಾಗದ್ದೆ ಐಸ್ಕ್ರೀಮು ತಿಂದಿಕ್ಕಿ ಬತ್ತವು. ಅಂತೂ ಇಂತೂ ಎಲ್ಲಾ ನಮುನೆಯ ಜೆನಂಗೊಕ್ಕುದೇ ಗೌಜಿಯೇ ಗೌಜಿ, ಮರದಿನ ಉದಿಯಾ ಒರೆಂಗುದೇ. ಅಪ್ಪನ್ನೇ?

ದೇವರು ದೇವಸ್ತಾನಲ್ಲಿ ಇದ್ದ°. ಆಸ್ತಿಕರ ನಂಬಿಕೆ.

ದೇವರು ಕಲೆಗಳಲ್ಲಿದೇ ಇದ್ದ° - ಕಲಾಸಕ್ತರ ನಂಬಿಕೆ.
ಇಲ್ಲಿ ’ಕಲೆ’ ಹೇದರೆ ಎಲೆತಿಂತ ಮಾಷ್ಟ್ರುಮಾವನ ಒಸ್ತ್ರಕ್ಕೆ ಆವುತ್ತ ನಮುನೆ ಕಲೆ ಅಲ್ಲ. ಮನೋರಂಜನೆಗೆ ಬೇಕಾದ ವಸ್ತು-ವಿಷಯಂಗೊ. ಯೇವದೇ ಮೆದುಳು ಒಂದೇ ಕೆಲಸಂದ ಮುಕ್ತಿ ಹುಡ್ಕಿಯೋಂಡು ಇರ್ತು. ಅದಕ್ಕಾಗಿ ಮನಸ್ಸಂತೋಷಕ್ಕಾಗಿ ಆದರೂ ಕೆಲವು ಒಲವು ಬೆಳೆಸಿಗೊಳ್ತವು. ಅದುವೇ ಮುಂದೆ ಕಲೆ ಆಗಿ ಬೆಳಕ್ಕೊಳ್ತು.

ಮನುಷ್ಯಂಗೆ ಕಲೆಯ ಆಸಕ್ತಿ ಇರ್ತದರ ಬಗ್ಗೆ ಮಾಷ್ಟ್ರುಮಾವ° ಓ ಮೊನ್ನೆ ಹೇಳಿದ ಸುಭಾಶಿತ ಇದು:
ಸಂಗೀತ ಸಾಹಿತ್ಯ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಚ ವಿಷಾಣ ಹೀನಃ |
ತೃಣನ್ನ ಖಾದನ್ನಪಿ ಜೀವಮಾನೇ ಯದ್ಭಾಗದೇಯಂ ಪರಮಂ ಪಶೂನಾಮ್||
(ಅರ್ತ: ಸಂಗೀತ, ಸಾಹಿತ್ಯ ಇತ್ಯಾದಿ ಕಲೆಗಳಲ್ಲಿ ಆಸಕ್ತಿ ಇಲ್ಲದ್ದವ° ಕೊಂಬು-ಬೀಲ ಇಲ್ಲದ್ದ ಥೇಟ್ ಪ್ರಾಣಿ. ಹುಲ್ಲು ಒಂದು ಬಗೆ ತಿಂತ°ಯಿಲ್ಲೆ, ಪ್ರಾಣಿಗಳ ಪುಣ್ಯ ಅದು)

ನಮ್ಮೋರಲ್ಲಿ ಕಲಾಸಕ್ತಿಗೆ ಏನೂ ಕೊರತೆ ಇಲ್ಲೆ, ಬೇಕಾದಷ್ಟು ಇದ್ದು. ಹವ್ಯಕರಿಂಗೆ ಆಟ (ಯಕ್ಷಗಾನ) ಹೇಳಿರೆ ದೊಡ್ಡ ಮನೋರಂಜನೆಯ ವಸ್ತು. ಮದಲಿಂಗೇ - ಅಜ್ಜಂದ್ರ ಕಾಲಲ್ಲೇ ಹಾಂಗೆ. ಎಲ್ಯಾರು ಆಟವೋ ಮತ್ತೋ° ಇದ್ದು ಹೇಳಿ ಆದರೆ ಊರೂರಿಂದ ಆಟದ ಮರುಳಂಗೊ ಪೂರಾ ಸೂಟೆಕಟ್ಟಿ ನೆಡಕ್ಕೊಂಡು ಹೋಗಿ ಆಟದ ಮೈದಾನಲ್ಲಿ ಜೆಮೆ ಅಕ್ಕಡ. ಬೈರಾಸಿಲಿ ರಜ ಅವಲಕ್ಕಿದೇ ಬೆಲ್ಲತುಂಡುದೇ ಕಟ್ಟಿಗೊಂಡು - ನೀರು ಹತ್ತರಾಣ ತೋಡಿಲಿ ಸಿಕ್ಕುಗನ್ನೆ ಕುಡ್ಕೊಂಬಲೆ(ಅಂಬಗ ನೀರು ಶುದ್ದ ಇದ್ದುಗೊಂಡು ಇತ್ತು ;-( ). ಮೂರುಸಂದ್ಯೆ ಕಳುದು ’ದಕ್ಕಿತೋ ದಕ್ಕಿತೋ’ ಸುರು ಅಪ್ಪಗಳೇ ಒಂದೊಂದು ಮರದಡಿಲಿಯೋ, ಕಟ್ಟೋಣದ ಜೆಗಿಲಿಲಿಯೋ ಮತ್ತೊ ಕೂದುಗೊಂಗು. ಚೌಕಿಲಿ ಗುರ್ತ ಇಪ್ಪೋರ ಎಲ್ಲ ಒಂದು ಸುತ್ತು ಮಾತಾಡುಸಿಗೊಂಡು, ಊಟದ ಹೊತ್ತಿಂಗೆ ಈ ಅವಲಕ್ಕಿದೇ ಬೆಲ್ಲದೇ ತಿಂದು, ನೀರು ಕುಡ್ಕೊಂಡು ಆಟ ಅಪ್ಪಲ್ಲಿಂಗೆ ಬಂದು ಕೂರುಗು. ಪ್ರಸಂಗಾರಂಭ, ಮತ್ತೆ ಬಪ್ಪ ವಿವಿಧ ವೇಷಂಗೊ ಎಲ್ಲ ಆಗಿ, ನೆಡಿರುಳು ಕಳುದು ಬಪ್ಪ ಬಣ್ಣದವೇಷವುದೇ ಆಗಿ, ಉದೆಕಾಲಕ್ಕೆ ಬತ್ತ ದೇವಿಯ ನೋಡಿಕ್ಕಿ ಹೆರಡುಗು. ಕಟೀಲು ಮೇಳವೋ ಮತ್ತೊ° ಬಂದರೆ ಚೌಕಿಯ ಬಟ್ಟಮಾವನ ಹತ್ರೆ ಹಣ್ಣುಕಾಯಿದೇ ಮಾಡುಸಿಗೊಂಗಡ. ಎಲ್ಲ ಕಳುದು ಮರದಿನ ಉದೆಕಾಲಕ್ಕೆ ಒಪಾಸು ಬೈಲಿಂಗೇ - ನೆಡಕ್ಕೊಂಡು. ಹೋಪಗ - ಬಪ್ಪಗ ಕಲಾವಿದರ ಅಂದ್ರಾಣ ವೇಷದ ಬಗೆಗೆಯೋ, ಚೆಂಡೆಯ ಬಗೆಗೆಯೋ ವಿಮರ್ಶೆ ಮಾಡಿಗೊಂಡು ಬಕ್ಕು, ಅನುಭವಸ್ಥರ ವಿಮರ್ಶೆ ಅದು. ಇದೆಲ್ಲ ಹಳೆ ಕಾಲದ ಕಥೆ. ಅಜ್ಜಂದ್ರದ್ದು. ಈಗ ಕಾಲ ಬದಲಾಯಿದು. ಯೇವದಕ್ಕೂ ಪುರುಸೊತ್ತಿಲ್ಲೆ. ಅದರ ಎಡೆಲಿದೇ, ಈಗಳೂ ಕೆಲವು ಮನೆಲಿ ಅದೇ ಕಲಾಸಕ್ತ ನೆತ್ತರು ಹರಿತ್ತಾ ಇದ್ದು ಹೇಳ್ತದು ಸಂತೋಷದ ಶುದ್ದಿ.

ಯಕ್ಷಗಾನದ ಗರ್ಭಗುಡಿ ಕರೋಪಾಡಿಂದ ಬಂದ ಚೆಂಬರ್ಪು ಅಣ್ಣನ ನೋಡಿ ನಿಂಗೊ - ಕಂಪ್ಯೂಟ್ರು ಇಂಜಿನಿಯರು ಆಗಿ ಎಷ್ಟು ಬೆಶಿ ಆದರೂ ಮನಸ್ಸು ಪೂರ ಆಟದ ಹೊಡೇಂಗೇ, ಕಂಪ್ಯೂಟ್ರು ಕುಟ್ಟುವಗ ಆಟದ ಪದ ತಿರುಗಿಯೋಂಡೇ ಇರ್ತಡ ಕರಿಸ್ಪೀಕರಿಲಿ, ಅತ್ತಿಗೆಗೆ ತಲೆಸೆಳಿವದು ಜೋರಾದರೂ ಅದು ನಿಲ್ಲ, ಪಾಪ! ಬಾಯಾರಿನ ರಾಜಣ್ಣಂಗೆ ಎಲೆತಿಂಬದು ಮರದರೂ ಬೆಳ್ಟಿನ ಮೇಗೆ ಇಪ್ಪ ಮೊಬೈಲಿಲಿ ಪದ ಮಡಗಲೆ ಮರೆಯ. ಗಟ್ಟದಮೇಗೆ ಯೇವದೋ ಕೋಲೇಜಿಂಗೆ ಪಾಟಮಾಡ್ತ ವೇಣೂರಣ್ಣನತ್ರೆ ’ಊರಿಲಿ ಇಂದು ಎಲ್ಲಿ - ಆರ ಆಟ ಇದ್ದು?’ ಕೇಳಿರೆ ಬಾಯಿಕೊಡಿಲಿ ಉತ್ತರ ಸಿಕ್ಕುಗು, ರಪಕ್ಕನೆ. ಚೆನ್ನಬೆಟ್ಟು ಅಣ್ಣಂಗೆ ಕಾರಿಲಿ ಹೋವುತ್ತರೆ ಬಲಿಪ್ಪಜ್ಜ° ಪದ ಹೇಳುಲೇ ಬೇಕು. ಅಲ್ಲದ್ರೆ ಎಷ್ಟು ಪೆಟ್ರೋಲು ಹಾಕಿರೂ ಕಾರು ಮುಂದೆಯೇ ಹೋಗ ಇದಾ! ಆಚಕರೆಮಾಣಿಗೆ ಪೋನುಬಪ್ಪಗ ’ಶರಣುತಿರುವಕ್ರ...’ ಬರೆಕ್ಕಡ, ಇಲ್ಲದ್ರೆ ಮಾತಾಡ್ಳೇ ಮೋಡಬಕ್ಕು. ಯಕ್ಷಗಾನದ ಪುಟ ಮಾಡಿ ಇಂಟರ್ನೆಟ್ಟಿಲಿ ಹಾಕಿದ್ದಕ್ಕೆ ಲಾನಣ್ಣಂಗೆ ಆಪೀಸಿಲಿ ಬಾರೀ ಗುಣ ಆಯಿದಡ. ಮುಳಿಯಾಲದಪ್ಪಚ್ಚಿ ಕನ್ನಡಪ್ರಭದ ಎದುರಾಣ ಪುಟ ಓದದ್ರೂ ’ಇಂದು ಆಟ ಎಲ್ಲಿದ್ದು?’ ಹೇಳಿ ನೋಡಿಗೊಂಗು.
ಸಂಸ್ಕೃತಿ ಎಷ್ಟೇ ಆಧುನಿಕ ಆಗಲಿ ನಮ್ಮದೇ ಆದ ಯಕ್ಷಗಾನವ ಬಿಡದ್ದೆ ಈಗಳೂ ಅದರ ಮುಂದುವರುಸುತ್ತ ಎಷ್ಟೋ ಮನೆ ನವಗೆ ಕಾಣ್ತು. ಇವರ ಒಟ್ಟಿನ ಸಂಸರ್ಗಂದಾಗಿ ಅವು ಮಾತಾಡಿಗೊಂಬದು ಕೇಳಿ ಕೇಳಿ ಒಪ್ಪಣ್ಣಂಗೂ ರೆಜ ರೆಜ ಯಕ್ಷಗಾನ ಅರಡಿತ್ತು. ಕಲೆ, ಕಲಾವಿದ ಕಲಾಕೇಂದ್ರದ ಪರಿಚಯ ಆಯಿದು. ಒಳ್ಳೆದೇ

ಕಲೆಯೇ ಧರ್ಮ ಆಗಿ ಬಿಟ್ಟರೆ ಕಲಾವಿದನೇ ದೇವರು. ಕಲಾಕೇಂದ್ರವೇ ದೇವಸ್ತಾನ. ಅಲ್ಲದೋ?

ಈ ಮಾತು ಯೇವದೋ ಒಂದು ಕಲೆಗೆ ಸೀಮಿತ ಅಲ್ಲ, ಎಲ್ಲದಕ್ಕುದೇ. ಯಾವದೇ ಕಲೆ ಒಬ್ಬಂಗೆ ಅತ್ಯಂತ ಆಪ್ತ ಆಗಿ ಬಿಟ್ಟಿದು ಹೇಳಿ ಆದರೆ, ಅದುವೇ ಧರ್ಮ ಹೇಳಿ ಅನಿಸಿಹೋದರೆ, ಅದರ ಕಲಾವಿದರೆಲ್ಲರೂ ದೇವಸಮಾನರಾಗಿರ್ತವು. ಆ ಕಲೆ ನಡೆತ್ತ ಜಾಗೆ ದೇವಸ್ಥಾನ ಆಗಿರ್ತು. ಉದಾಹರಣಗೆ ಸಿನೆಮ ನೋಡ್ತ ಸಂಕಪ್ಪಂಗೆ ರಾಜುಕುಮಾರು ಹೇದರೆ ದೇವರು, ಟಾಕೀಸು ಹೇದರೆ ದೇವಸ್ತಾನ. ನಮ್ಮೋರಿಂಗೆ ಇಪ್ಪ ಯಕ್ಷಗಾನದ ಮರುಳು ಆಯಿಕ್ಕು, ಆಚಕರೆ ಮಾಣಿಯ ಭರತನಾಟ್ಯ ನೋಡ್ತ ಕೊದಿ ಆಯಿಕ್ಕು, ದೊಡ್ಡಣ್ಣನ ಸಂಗೀತ ಕೇಳ್ತ ಮರುಳು ಆಯಿಕ್ಕು, ಗಟ್ಟದ ಮೇಗೆ ಇಪ್ಪ ದೊಡ್ಡಾಟದ ಮರುಳು ಆಯಿಕ್ಕು, ಅಮೇರಿಕಲ್ಲಿಪ್ಪ ಕಾರುಬಿಡ್ತ ಸ್ಪರ್ದೆ ಆಯಿಕ್ಕು, ಸಚಿನು ಆಡ್ತ ಕ್ರಿಕೇಟು ಆಯಿಕ್ಕು, ಅವಧಾನ ಮಾಡ್ತ ಡಾ.ರಾ.ಗಣೇಶ ಆಯಿಕ್ಕು - ಆರಿಂಗೇ ಆಗಲಿ - ಯಾವದೇ ಕಲೆ ಮೆಚ್ಚಿರೆ ಕಲಾವಿದ ಅತ್ಯಂತ ಪೂಜನೀಯ ಆಗಿರ್ತ.
ಅಲ್ಲದೋ? ಏ°?

ನಮ್ಮವಕ್ಕುದೇ ಆಟಲ್ಲಿ ಸುಮಾರು ಜೆನ ದೇವರುಗೊ ಇದ್ದವು.
ಚೆನ್ನಬೆಟ್ಟಣ್ಣಂಗೆ ಬಲಿಪ್ಪಜ್ಜ ಹೇದರೆ ಊಟವೂ ಮರಗು. ಬೆಂಗ್ಳೂರಿಂದ ಕಾರಿಲಿ ಊರಿಂಗೆ ಹೋಪಗ ಬಲಿಪ್ಪಜ್ಜನ ಪದ ಹಾಕಿಯೋಂಡದಡ, ಮದ್ಯಾನ್ನದ ಊಟವೇ ಮರದ್ದು. ಮತ್ತೆ ಆಚಕರೆ ಮಾಣಿ ಹಟಮಾಡುಸಿ ಉಪ್ಪಿನಂಗಡಿ ಆದಿತ್ಯ ಹೋಟ್ಳಿಲಿ ನಿಲ್ಲುಸಿದ್ದಡ. ಷೋ ದೇವರೇ!
ತೆಂಕಬೈಲಜ್ಜನ ’ಶಿವ ಶಿವಾ...’ ಚೆಂಬರ್ಪು ಅಣ್ಣಂಗೆ ಟೋನಿಕ್ಕು ಇದ್ದ ಹಾಂಗಡ. ಅತ್ತಿಗೆ ಪರಂಚಿದ ಕೂಡ್ಳೆ ಅದರ ಕೇಳುದಡ - ಕರುಣ ರಸ ಅಲ್ಲದೋ, ಬೇಜಾರಲ್ಲಿಪ್ಪಗ ಒಬ್ಬ° ಆದರೂ ಕರುಣೆ ತೋರುಸಿರೆ ನೆಮ್ಮದಿ ಆವುತ್ತು ಇದಾ. ;-) ಕೇಸೆಟ್ಟಿಲಿ ನೆಡ್ಳೆ ಅಜ್ಜನ ಉರುಳಕೆ ಕೇಳಿ ವೇಣೂರಣ್ಣಂಗೆ ಪಾಟಮಾಡುವಗ ಬೆರಳು ದರುಸಿಗೊಂಡು ಇತ್ತಡ, ಇಡೀ ದಿನ!
ಬಲಿಪ್ಪಜ್ಜನ ಪದಂಗಳ ಹಳೆಶೈಲಿ, ತೆಂಕಬೈಲಜ್ಜನ ಕರುಣರಸ, ನೆಡ್ಳೆ ಅಜ್ಜನ ಉರುಳಿಕೆ, ಬಲ್ಲಾಳನ ಮದ್ದಳೆ, ಗೇರುಕಟ್ಟೆಯ ಬಣ್ಣದವೇಷ - ಇವೆಲ್ಲವಕ್ಕುದೇ ಸಾವಿರಾರು ಅಭಿಮಾನಿಗೊ ಇದ್ದವು. ಎಷ್ಟೋ ದೇವರುಗೊ ಇದ್ದವು ಯಕ್ಷಗಾನ ಮರುಳಂಗೊಕ್ಕೆ. ಇಂತ ಎಲ್ಲ ದೇವರ ಒಟ್ಟಿಂಗೆ ಕಾಣ್ತ ಒಂದು ಅವಕಾಶ ಸಿಕ್ಕಿರೆ ಹೇಂಗಕ್ಕು?
ವಾಹ್...!!!

ಸುಳ್ಯ - ಸಂಪಾಜೆ - ಮಡಿಕೇರಿ ಮಾರ್ಗಲ್ಲಿ ಕಲ್ಲುಗುಂಡಿ ಹೇಳಿ ಒಂದು ಊರು. ಸುಳ್ಯಂದ ಹೋವುತ್ತರೆ ಮಾರ್ಗವುದೇ ಹಾಂಗೇ ಇದ್ದು. ಅಲ್ಲೇ ಒಳದಿಕ್ಕೆ ಕೀಲಾರು ಹೇಳಿ ಒಂದು ಊರು. ಗೋಪಾಲಕೃಷ್ಣಯ್ಯ ಹೇಳಿ ಡಾಕ್ಟ್ರು ಇತ್ತಿದ್ದವು. (ಅತ್ಲಾಗಿ ನಮ್ಮೋರಿಂಗೆ ಭಟ್ಟ ಹೇಳ್ತ ಹಾಂಗೇ ’ಅಯ್ಯ’ ಹೇಳ್ತ ಕ್ರಮ ಇದ್ದು) ಕೀಲಾರು ಡಾಕುಟ್ರು ಹೇಳುದಡ ಅವರ. ತುಂಬ ಸಮಾಜ ಸೇವಕರು, ದಾನಿಗೊ ಆಗಿ ಇತ್ತಿದ್ದವು. ಯಕ್ಷಗಾನ - ಸಂಗೀತ ಇತ್ಯಾದಿ ವಿಷಯಂಗಳಲ್ಲಿ ಆಸಕ್ತಿ ಇಪ್ಪವು ಆಗಿತ್ತಿದ್ದವಡ.
ಒಂದು ತಲೆಮಾರು ಹಿಂದಾಣವು. ಈಗ ನಮ್ಮೊಟ್ಟಿಂಗೆ ಇಲ್ಲೆ, ಆದರೆ ಅವರ ಹೆಸರು ಯೇವತ್ತಿಂಗೂ ಇರ್ತ ಹಾಂಗೆ ಆಯಿದು. ಕೀಲಾರು ಪ್ರತಿಷ್ಠಾನ ಹೇಳಿ ಒಂದು ಸುರು ಆಯಿದು, ಅವರ ನೆಂಪಿಂಗೆ - ಅದರಿಂದಾಗಿ.
ಒರಿಷಕ್ಕೊಂದರಿ ಗೌಜಿ ಆವುತ್ತು. ಮದ್ಯಾನ್ನ ಧಾರ್ಮಿಕ ಕಾರ್ಯಕ್ರಮ, ಹೊತ್ತೋಪಗ ಸಭಾಕಾರ್ಯಕ್ರಮ, ಇರುಳಿಡೀ ಸಾಂಸ್ಕೃತಿಕ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮಲ್ಲಿ ಶತರುದ್ರವೋ ಅದುವೋ ಇದುವೋ ಎಲ್ಲ ಆವುತ್ತಡ. ಸಭಾಕಾರ್ಯಕ್ರಮಲ್ಲಿ ಎಷ್ಟೋ ಜೆನಕ್ಕೆ ಕಲಿವಲೆ ಬೇಕಾದ ಬಹುಮಾನವೋ, ಬೇರೆ ವಿಷಯಕ್ಕೆ ಧನಸಹಾಯಂಗಳೋ, ಎಲ್ಲ ಆವುತ್ತು. ಇದೊಂದು ಶುದ್ದ ಲೋಕಕಲ್ಯಾಣ ಕಾರ್ಯಕ್ರಮ. ನಿಜವಾಗಿಯೂ ಮೆಚ್ಚೆಕ್ಕಾದ್ದೇ. ನಮ್ಮ ಗುರುಗೊ ಸಭಾಮಧ್ಯಲ್ಲಿ ಇದ್ದೇ ಇರ್ತವು. ಒಳುದಂತೆ ಪೇಜಾವರವೋ, ಸುಬ್ರಮಣ್ಯ ಸ್ವಾಮಿಗಳೊ ಎಲ್ಲ ಬಂದಿರ್ತವು. ಸಭಾಕಾರ್ಯ ಆದ ಮತ್ತೆ ಸುರು ಅಪ್ಪದು ಈ ’ಜಾತ್ರೆ’.


ತೆಂಕು-ಬಡಗು ಎರಡೂ ಕಲಾಶೈಲಿಂದ ಆಯ್ದ ಮುತ್ತುಗಳ ಒಟ್ಟುಹಾಕಿ, ಐದಾರು ಪ್ರಸಂಗಂಗೊ ನಡೆತ್ತು.
ಚಿಟ್ಟಾಣಿ ಮಾಣಿಂದ ಹಿಡುದು ಬಲಿಪ್ಪಜ್ಜನ ವೆರೆಗೆ ಬೇರೆ ಬೇರೆ ವಯೋಮಾನ, ಅನುಭವ, ಕಲಾಶೈಲಿ ಇಪ್ಪವರ ಒಂದು ಸಮಗ್ರ ಸಂತೃಪ್ತ ಸೇರಾಣ. ಕಲಾಸಕ್ತರಿಂಗೆ ಇದುದೇ ಒಂದು ಜಾತ್ರೆ ಅಲ್ಲದೋ? ಪ್ರತಿಯೊಬ್ಬ ಕಲಾವಿದನೂ ’ದೇವಗಣ’ದ ಹಾಂಗೆ ಕಾಂಗು. ಆರಾಧ್ಯ ದೈವ ಬಂದರೆ ಅಂತೂ ಉತ್ಸವ ಮೂರ್ತಿ ಬಂದ ಹಾಂಗೆ ಕಾಂಗು. ಅಲ್ಲದೋ?

ಈ ಜಾತ್ರೆಯ ಹಿಂದೆಯೂ ಒಬ್ಬ ತಂತ್ರಿ ಇದ್ದವು.
ಸರಕಾರದ ದೊಡ್ಡ ಕೆಲಸಲ್ಲಿ ಇದ್ದವಡ, ಆರ್ಟೀವೋ ಶಾಮಣ್ಣ ಹೇಳಿ ಹೆಸರಡ, ಚೆಂಬರ್ಪು ಅಣ್ಣಂಗೆ ಸರೀ ಗುರ್ತ ಇದ್ದಡ ಅವರ. ಯಕ್ಷಗಾನದ ಪೋಷಕರು, ಯಕ್ಷಗಾನಾಸಕ್ತರಡ. ನಮ್ಮ ಮಟದ ಮೇಳವ ನೋಡಿಗೊಳ್ತವಡ. ಕೀಲಾರು ಗೋಪಾಲಕೃಷ್ಣಯ್ಯರ ಮಗಳ ಅವಕ್ಕೇ ಮದುವೆ ಆದ್ದಡ. ಹಾಂಗಾಗಿ ಸಮಾಜಸೇವಕ ಮಾವನ ಹೆಸರು ಅಜರಾಮರ ಆಗಿರಳಿ ಹೇಳಿ ಪ್ರತಿಷ್ಠಾನ ಎಲ್ಲ ಕಟ್ಟಿ ಬೆಳೆಶಿ, ಎಷ್ಟೋ ಕಲಾವಿದರ ಗುರುತಿಸಿ, ಅವಕ್ಕೊಂದು ವೇದಿಕೆ ಮಾಡಿದ್ದವು. ಈಗಂತೂ ಕಲ್ಲುಗುಂಡಿ ಆಟ ಹೇದರೆ ಕುಂಬ್ಳೆಬೆಡಿಯ ಹಾಂಗೇ ಆಯಿದು - ಹೋಪಲೇ ಬೇಕು ಹೇಳ್ತ ನಮುನೆ.
ಈ ಸರ್ತಿಯಾಣದ್ದು ಓ ಮೊನ್ನೆ ಆತಿದಾ ಒಗ್ಟೋಬರು ೧೭, ಶೆನಿವಾರ. ನಮ್ಮ ಗುರುಗೊ ಬಂದು ವಿಶೇಷ ಅಭಯ ಆಶೀರ್ವಚನ ಕೊಟ್ಟಿದವಡ.

ಊರಿಂದ ಸುಮಾರು ಜೆನ ಹೋಯಿದವು.
ಮುನ್ನಾಣ ದಿನವೇ ’ಹೇಂಗೆ ಹೋಪದು, ಹೇಂಗೆ ಹೋಪದು’ ಹೇಳಿ ವೆವಸ್ತೆ ಮಾತಾಡಿಗೊಂಡವು. ಕೆಲವು ಜೆನ ಕಾರೋ, ಜೀಪೋ ಎಂತಾರು ಮಾಡಿಗೊಂಡು, ಕೆಲವು ಜೆನ ಬಸ್ಸಿಲಿ, ಕೆಲವು ಜೆನ ಬೈಕ್ಕಿಲಿ. ತರವಾಡು ಮನೆ ರಂಗಮಾವನ ಮಗ ಶಾಂಬಾವ ಕಾರು ತೆಕ್ಕೊಂಡು ಹೆರಟಿದ°, ಪಂಜ ಚಿಕ್ಕಯ್ಯನ ಸೇರಿಗೊಂಡು ಹೋಪಲೆ. ರೂಪತ್ತೆಯ ಗೆಂಡಂದೇ (ರೂಪತ್ತೆಗೆ ಚೂರಿಬೈಲು ದೀಪಕ್ಕನಲ್ಲಿ ಮಲ್ಲಿಗೆಗೆಡು ತುಂಡುಸಲೆ ಹೋಪಲಿದ್ದ ಕಾರಣ ಕಾರು ಸಿಕ್ಕದ್ದೆ) ಬಯಿಂದವಡ. ಆಚಕರೆಂದ, ಈಚಕರೆಂದ, ಮೇಗಾಣ ಬೈಲಿಂದ, ಕೆಳಾಣ ಬೈಲಿಂದ ಎಲ್ಲದಿಕ್ಕಂದಲೂ - ಅಂತೂ ನಮ್ಮೋರ ದೊಡ್ಡ ಒಂದು ಸಬೆ ಅಲ್ಲಿ ಜೆಮೆ ಆಗಿತ್ತು.
ಒಪ್ಪಣ್ಣ ಅಲ್ಲಿಗೆ ಎತ್ತುವಗ ರಜ ತಡವಾಯಿದು ಇದಾ, ಅಷ್ಟಪ್ಪಗ ಅದಾಗಲೇ ನಮ್ಮ ಬೈಲಿನ ಸುಮಾರು ಜೆನ ಕುರ್ಶಿಹಿಡುದು ಕೂದಿತ್ತಿದ್ದವು. ಆಚಕರೆಮಾಣಿ ಪುಟ್ಟಕ್ಕನ ಹಿಂದೆ ಕೂದಿತ್ತಿದ್ದ°, (ಪುಟ್ಟಪ್ಪಚ್ಚಿ ಪುಟ್ಟಕ್ಕನ ಕರೆಲಿ ಕೂದ ಕಾರಣ!), ಸಿಬಂತಿ ಅಣ್ಣ ಮಂದೆ ಎಲ್ಲಿಯೋ ಕೂದಿತ್ತಿದ್ದ - ತಲೆ ಆಂಜಿದ ಹಾಂಗಾತು ಒಂದರಿ, ಜೋಗಿಬಾವ ಸಭೆಯ ಸಾಮಾನ್ಯ ಮದ್ಯಲ್ಲಿ ಕೂದಿತ್ತಿದ್ದ°, ಚೆನ್ನಬೆಟ್ಟಣ್ಣ ಹೆರದಿಕ್ಕೆ ಬಾವಿಕಟ್ಟೆಲಿ ಕೂದಿತ್ತಿದ್ದ°, ಅರ್ನಾಡಿಬಾವ ಚೌಕಿಚಿಟ್ಟೆಲಿ ಕೂದಿತ್ತಿದ್ದ°, ಕಜೆತಮ್ಮಣ್ಣ ಗೋಳಿಬಜೆ ತಿಂದೋಂಡು ಹಿಂದೆ ಇತ್ತಿದ್ದ°, ಅಮೈ ಬಟ್ಟಮಾವ° ವೇದಿಕೆ ಕರೆಲಿ ಚಕ್ಕನಕಟ್ಟಿ ಕೂದಿತ್ತಿದ್ದವು - ಮತ್ತೂ ಸುಮಾರು ಜೆನ ನಮ್ಮ ಬೈಲಿನವು ಬೇಗ ಬಂದವು ಅವರವರಷ್ಟಕ್ಕೆ ಒಂದೊಂದು ಜಾಗೆ ನೋಡಿ ಕೂದಿತ್ತಿದ್ದವು. ಬೈಲಕರೆ ಗಣೇಶಮಾವ, ಯೇನಂಕೂಡ್ಳು ಅಣ್ಣ, ಶೇಡಿಗುಮ್ಮೆ ಬಾವ, ದೇಲಂಬೆಟ್ಟು ಬಾಲಣ್ಣ - ಇವರ ಎಲ್ಲ ಕಂಡತ್ತಿಲ್ಲೆ ಅಪ್ಪ, ಬಯಿಂದವೋ ಏನೋ, ಜನ ಸಾಗರಲ್ಲಿ ಕಾಂಬದು ಹೇಂಗೆ ಬೇಕೇ.!

ಪುಟ್ಟಕ್ಕನ ಒಟ್ಟಿಂಗೆ ಚೌಕಿಗೆ ಹೋಗಿ ಆತು. ಚೌಕಿಲಿ ಕಲಾವಿದರು ಕೆಲವೆಲ್ಲ ಸಿಕ್ಕಿದವು, ವೇಶ ಹಾಕಿಯೋಂಡು ಇತ್ತಿದ್ದವು. ಪದ್ಯಾಣ ಮಾವನೋ, ಕೋಳ್ಯೂರು ಅಜ್ಜನೋ ಎಲ್ಲ ಸಿಕ್ಕಿದವು. ಪುಟ್ಟಕ್ಕಂಗೆ ಅವೆಲ್ಲ ಗುರ್ತ ಇದಾ, ಚೆಂದಕೆ ಮಾತಾಡಿದವು. ಅರ್ನಾಡಿ ಬಾವ° ಅಂತೂ ಕೈಲಿ ಮಾಷ್ಟ್ರುಮಾವ ಬರದ ಪುಸ್ತಕ ಹಿಡುದು ಅತ್ತಿತ್ತೆ ಹೋಯ್ಕೊಂಡು ಇತ್ತಿದ್ದ°. ಪುಟ್ಟಕ್ಕ° ಕೊಟ್ಟದಾಯಿಕ್ಕು. ಗಬ್ಲಡ್ಕ ಬಾವ° ಒಪ್ಪಣ್ಣನ ಗುರ್ತ ಹಿಡುದು ಮಾತಾಡುಸಿದವು. ಬೆಣಚ್ಚು ಕಮ್ಮಿ ಆಗಿ ಗುರ್ತ ಸಿಕಿದ್ದಿಲ್ಲೆ ಇದಾ! ಹೇಳಿ ಒಂದು ಡೌಲು ಬಿಟ್ಟ° ಒಪ್ಪಣ್ಣ! ಗೊಂತಾಯಿಕ್ಕೋ ಏನೋ ಅವಕ್ಕೆ!!

ಆಟ ತುಂಬ ಗೌಜಿ ಇತ್ತಪ್ಪ. ಅದ್ಭುತ ವೆವಸ್ತೆ.
ಬೇಕಪ್ಪಗ ಬೇಕಾದಷ್ಟು ಚಾಯ-ಕಾಪಿ-ಊಟ, ಸರಿಯಾದ ಬಾತುರೂಮು-ಹೇತುರೂಮುಗೊ, ಕುಡಿವ ನೀರು, ಲೈಟುಗೊ, ಶಬ್ದಪೆಟ್ಟಿಗೆಗೊ(Sound Box), ಸಬೆಮದ್ಯಲ್ಲಿ ವೇದಿಕೆ ಕಾಣ್ತ ನಮುನೆ ಟೀವಿಗೊ (CCTV), ಕುರ್ಶಿ ವೆವಸ್ತೆಗೊ, ಶೀಟಿನ ಮಾಡುಗೊ, ಬೆಡಿ ಹಿಡುದ ಗಾರ್ಡುಗೊ, ಎಲ್ಲವುದೇ ಒಳ್ಳೆ ವೆವಸ್ತೆಯ ಪ್ರತಿಬಿಂಬ. ಒರಿಶಂದ ಒರಿಶಕ್ಕೆ ಜೆನ ಜಾಸ್ತಿ ಬತ್ತದರ ಗುಮನಲ್ಲಿ ಮಡಿಕ್ಕೊಂಡು ಮಾಡಿದ ಸೌಲಭ್ಯಂಗೊ ಕುಶಿ ಆತು.

ಆಟದ ಮಟ್ಟಿಂಗೆ ಏನೂ ಹೇಳ್ತ ಹಾಂಗೆ ಇಲ್ಲೆ, ಒಳ್ಳೆ ತಂಡ ವಿನ್ಯಾಸ.
ಆದರೆ ಎಲ್ಲಾ ಕಲಾವಿದರೂ ಅವರ ಪರಿಪೂರ್ಣತೆಯ ತೋರುಸುಲೆ ಹೆರಟ ಕಾರಣ ರಜ್ಜ ತಡವಾಗಿಯೋಂಡು ಇತ್ತು ಹೇಳ್ತದು ಸತ್ಯ. ಒಳುದಂತೆ ಉತ್ತಮ ಕೆಲಸ. ಆಚೊರಿಶ ದೊಡ್ಡಣ್ಣನ ಒಟ್ಟಿಂಗೆ ಹೋದ್ದು ನೆಂಪಾತು, ಅಂಬಗಳೂ ಇದೇ ನಮುನೆ ಒಳ್ಳೆದಾಯಿದು.

ಚೆಂದ ಆಟ ಆದರುದೇ ’ಕೆಮರಲ್ಲಿ ಪಟ ತೆಗಕ್ಕೊಂಬಲಾಗ’ ಹೇಳ್ತ ಒಂದು ಬೋರ್ಡು ಕಂಡು ಒಪ್ಪಣ್ಣಂಗೆ ಅಷ್ಟು ಸಮಾದಾನ ಆತಿಲ್ಲೆ. ಕಲೆ ಒಬ್ಬನ, ಒಂದು ಸಂಘಟಕರ ಸೊತ್ತಲ್ಲ ಇದಾ, ಅದು ಪಸರುಸೆಕ್ಕು, ಒರತ್ತೆ ಬಂದ ಹಾಂಗೆ. ಬೇಕಾದವು ಪಟ ತೆಗೆಯಲಿ, ಒಳ್ಳೆದೇ ಅಲ್ದಾ?


(ಬಣ್ಣದವೇಶ ಕೊಣಿವದರ ಆಚಕರೆ ಮಾಣಿ ವೀಡ್ಯ ಮಾಡಿದ್ದು, ಅವ° ಹಾಂಗೆಯೇ, ಬೇಡ ಹೇಳಿ ಎಷ್ಟು ಹೇದರೂ ಕೇಳ°!)

ಉದೆಕಾಲ ಮೂರು ಗಂಟೆ ಒರೆಂಗೆ ಕೂದು ಆಟ ನೋಡಿಕ್ಕಿ, ಒಟ್ಟಿಂಗೆ ಬಪ್ಪೋರಿಂಗೆ ಅರ್ಜೆಂಟು ಹೇಳ್ತ ಲೆಕ್ಕಲ್ಲಿ ಹೆರಟದು. ಮರದಿನ ಮಾಣಿ ಮಟಲ್ಲಿ ಸಭೆ ಇತ್ತಲ್ದ, ಹಾಂಗೆ ಒರಕ್ಕು ಕೆಡುದು ಬೇಡ ಹೇಳಿ ಒಂದು ಯೋಚನೆ ಬಂದಿತ್ತು. ಅದಾಗಲೇ ೩ ಆಟ ಮುಗುದಿತ್ತು. ಇನ್ನು ೨ ಬಾಕಿ ಇತ್ತು, ತುಂಬ ಉದ್ದದ್ದಡ, ಪದ್ಯಾಣಮಾವ° ಹೇಳಿತ್ತಿದ್ದವು. ಬಲಿಪ್ಪಜ್ಜಂದು ಅಕೇರಿಗೆ. ಎಲ್ಲ ಮುಗಿವಗ ಗಂಟೆ ಹನ್ನೆರಡಕ್ಕು ಹೇಳಿ ಚೆನ್ನಬೆಟ್ಟಣ್ಣ ಹೇಳಿಗೊಂಡು ಇತ್ತಿದ್ದ, ಬಾವಿ ನೋಡಿಗೊಂಡು. ಪುಟ್ಟಪ್ಪಚ್ಚಿಯ ಶಾಲು ಹೊದಕ್ಕೊಂಡು ಪುಟ್ಟಕ್ಕ ಮೂರು ಐಸ್ಕ್ರೀಮು ತಿಂದಿದು ಆ ಚಳಿಗೆ. ಒಪ್ಪಣ್ಣಂಗೂ ಕೊಡುಸದ್ದೆ!
ಕುರಿಯ ಶಾಸ್ತ್ರಿಗಳ ಬಾಗವತಿಕೆ, ಚಿಟ್ಟಾಣಿಯ ಮುಖಭಾವ ತುಂಬ ಹಿಡುಸಿತ್ತು. ಚೆಂಙಾಯಿಗಳ, ಒಳುದವರ, ಆಟವ - ಬಿಟ್ಟಿಕ್ಕಿ ಬಪ್ಪಲೆ ತುಂಬಾ ಬೇಜಾರಾತು. ಎಂತ ಮಾಡುಸ್ಸು, ಬಪ್ಪಲೇ ಬೇಕು.

ಒಳ್ಳೆ ಗುಣಮಟ್ಟದ ಕಲೆ ಇದ್ದು ಹೇಳಿ ಆದರೆ ಕಲಾಸಕ್ತರು ಬಂದೇ ಬತ್ತವು. ನೋಡ್ಳೆ ನಾವು ಹೋವುತ್ತು, ಎಷ್ಟುದೂರಂದಲೂ, ಆದರೆ ಮಾಡುಸುತ್ತ ತಂತ್ರಿಗೊ ಕಮ್ಮಿ ಆಯಿದುವು ಈಗ, ಅಲ್ಲದೋ? ಪೈಸೆ ತುಂಬ ಜೆನರ ಹತ್ತರೆ ಇದ್ದು, ಆದರೆ ಕಲೆ ಒಳಿಯೆಕ್ಕು (ಒಸ್ತ್ರದ್ದಲ್ಲ!) ಹೇಳ್ತಲೆಕ್ಕಲ್ಲಿ ಅದರ ವಿನಿಯೋಗುಸುವವು ತುಂಬ ಕಮ್ಮಿ. ಆ ದೃಷ್ಟಿಲಿ ನೋಡಿರೆ ಈ ಶಾಮಣ್ಣ ತುಂಬ ಆದರಣೀಯ ಆಗಿ ಕಾಣ್ತವು. ಕಲಾಸಕ್ತರ, ಕಲಾವಿದರ ಆಶೀರ್ವಾದ ಅವಕ್ಕೆ ಯೇವತ್ತಿಂಗೂ ಇಕ್ಕು.

ಕಲ್ಲುಗುಂಡಿಯ ಹಾಂಗಿಪ್ಪ ಸುಮಾರು ದೇವಸ್ತಾನ ಇದ್ದು. ಅಂತಹ ದೇವಸ್ತಾನದ ಅಷ್ಟಬಂದ ಒರಿಶ ಹೋದ ಹಾಂಗೆ ಗಟ್ಟಿ ಆಗಲಿ ಹೇಳಿ ಒಪ್ಪಣ್ಣನ ಹಾರಯಿಕೆ.

ಒಂದೊಪ್ಪ: ಯಕ್ಷಗಾನದ ಹಾಂಗಿರ್ತ ಕಲೆಗಳ ಮುಂದಾಣ ದಾರಿಯೂ ಕಲ್ಲುಗುಂಡಿಗಳಿಂದ ತುಂಬಿ ಹೋಯಿದು. ನಾವೆಲ್ಲ ಸೇರಿ ಹೆದ್ದಾರಿಗೆ ತರೆಕ್ಕು, ಎಂತ ಹೇಳ್ತಿ?