ಹರಸುವವರ ಹಾರೈಕೆಯ 'ಹರೇ ರಾಮ' ....!

ನಮ್ಮ ಗುರುಗೊ ಓ ಮೊನ್ನೆ ಒಂದು ಆಶೀರ್ವಚನಲ್ಲಿ ಹೇಳಿದ ಮಾತುಗೊ:
’ಹರಿ’ ಹೇಳಿರೆ ದೇವಲೋಕಲ್ಲಿಪ್ಪ ನಾರಾಯಣನ ಅಂಶ. ’ರಾಮ’ ಹೇಳಿರೆ ಆ ತತ್ವದ ಮಾನವತೆ.
ದೇವಲೋಕಲ್ಲಿಪ್ಪ ನಾರಾಯಣನೇ ಮಾನವತ್ವದ ರೂಪ ತಾಳಿ ಅವತಾರ ಎತ್ತಿ ಶ್ರೀರಾಮ ಆಗಿ ನಮ್ಮೊಟ್ಟಿಂಗೆ ಈ ಭೂಮಿಲಿ ಇತ್ತಿದ್ದ. ಮೇಗಂದ ಭೂಲೋಕವ ನೋಡಿಗೊಂಡಿರ್ತ ದೇವತೆಗೊಕ್ಕೆ ಅವನ ಕಂಡು, ಅವನ ನಡವಳಿಕೆಯ ಕಂಡು, ಅವನಲ್ಲಿಪ್ಪ ಸಾತ್ವಿಕತೆಯ ಕಂಡು ’ಈ ಹರಿಯೇ ಆ ರಾಮ’ ಹೇಳ್ತ ತಿಳುವಳಿಕೆ ಬಂದು ದೇವತೆಗೊ ಮಾಡಿದ ಉದ್ಗಾರವೇ ’ಹರೇ ರಾಮ...!!!’
ಈ ’ಹರೇ ರಾಮ’ ಶಬ್ದಂದ ನಮ್ಮ ಗುರುಗೊ ತುಂಬ ಆಕರ್ಷಿತರಾಯಿದವು, ಅದರ ಎಷ್ಟು ಹಚ್ಚಿಗೊಂಡಿದವು ಹೇಳಿರೆ, ಆಶೀರ್ವಚನ ಆರಂಭದ ಸಮಯಲ್ಲಿ, ಅಂತ್ಯದ ಸಮಯಲ್ಲಿ, ಶಿಷ್ಯರ ನಮಸ್ಕಾರಂಗಳ ಸ್ವೀಕರಿಸುವ ಸಮಯಲ್ಲಿ, ತುಂಬ ಪ್ರಸನ್ನರಾದ ಸಮಯಲ್ಲಿ - ಎಲ್ಲವೂ ಇದೇ ಶಬ್ದ ಬಳಕೆ... ಹರೇರಾಮ. . . .!

ಗುರುಗೊ ಈ ಶಬ್ದವ ಬಳಸುದು ನೋಡಿ ಶಿಷ್ಯಕೋಟಿದೇ ಅದರ ಬಳಕೆ ಆರಂಭ ಮಾಡಿತ್ತು. ಗುರುಗೊ ಹೇಂಗೆಯೋ ಅದೇ ನಮುನೆ ಶಿಷ್ಯರು, ಅಲ್ಲದೋ? ನೂರಕ್ಕೆ ನೂರು ಸತ್ಯ.
ಶ್ರೀಮಠದ ಸಂಪರ್ಕ ಇಪ್ಪ ಎಲ್ಲೊರುದೇ ಈ ಶಬ್ದವ ತುಂಬ ಉಪಯೋಗಿಸುತ್ತವು ಹೇಳಿ ಗೋವಿಂದ ಮಾವ° ಹೇಳಿದವು. ಮಠಲ್ಲಿ ಅತಿತಿಗೊಕ್ಕೆ ನಮಸ್ಕಾರ ಮಾಡುದು, ಪತ್ರವೆವಹಾರ ಆರಂಭ ಮಾಡ್ತದು, ಪೋನು ಬಂದಪ್ಪಗ ಶುರು ಮಾಡುದು - ಎಲ್ಲ ಇದೇ ಶಬ್ದಲ್ಲಿ ಅಡ.
ಈಗಂತೂ ಆ ಶಬ್ದ ಎಷ್ಟು ಮನೆಮಾತು ಆಯಿದು ಹೇಳಿರೆ, ಹವ್ಯಕ ಸಮಾಜ ಪರಸ್ಪರ ಅಭಿವಂದಿಸುದು, ಅಭಿನಂದಿಸುದು, ಮಾತು ಆರಂಬ ಮಾಡುದು, ಅಂತ್ಯ ಮಾಡುದು - ಎಲ್ಲ ಅದೇ ಶಬ್ದಲ್ಲೇ.
ನಮ್ಮ ಊರಿಲಿದೇ ಹಾಂಗೇ, ಸಂಘಟನೆ, ಪರಿಷತ್ತಿಂಗೆ ಸಂಬಂದಪಟ್ಟ ಕಾರ್ಯಕ್ರಮಲ್ಲಿ ಭಾಷಣ ಮಾಡ್ತ ಸಂದರ್ಬಲ್ಲಿಯೋ, ಗುರಿಕ್ಕಾರಮಾವನ ಕಂಡ ತಕ್ಷಣವೋ, ಎಲ್ಲ ಇದೇ ಶಬ್ದಲ್ಲಿ ಮಾತು ಆರಂಭ ಮಾಡ್ತದು. ಒಪ್ಪಣ್ಣಂಗೆ ತೋಟಲ್ಲೋ ಮತ್ತೊ ಪಕ್ಕನೆ ಆಚಮನೆ ಪುಟ್ಟಣ್ಣ ಸಿಕ್ಕಿರೆ ಜೋರು ಬೊಬ್ಬೆ ಹೊಡದು ಹೇಳ್ತ ಶಬ್ದ ಅದೇ ಹರೇರಾಮ ಅಲ್ಲದೋ? ಎಡಪ್ಪಾಡಿ ಬಾವಂಗೆ ಅಜ್ಜಕಾನ ಬಾವ° ಪೋನೋ ಮತ್ತೊ ಮಾಡಿರೆ ಖಡ್ಡಾಯವಾಗಿ "ಹರೇರಾಮ..." ಹೇಳಿಯೇ ಹೇಳಿ ಮಾತಾಡುಲೆ ಸುರುಮಾಡುದಡ. ಶುಬತ್ತೆಯ ಮಗಳ ಹಾಂಗೆ ಕೆಮಿ ಆಡುಸಿಗೊಂಡು ’ಹೆಲೋ....!’  ಹೇಳ್ತ ಕ್ರಮ ಇಲ್ಲೆಡ. ಅವರ ಮನೆಕೆಲಸಕ್ಕೆ ಬತ್ತ ಆಚಾರಿ ಸುಂದರನೂ ಪೋನುಬಂದರೆ ಹರೇರಾಮ ಹೇಳಿಯೇ ಮಾತಾಡ್ಳೆ ಸುರುಮಾಡುದಡ. ನಾವು ಹೇಳಿ ಹೇಳಿ ಅಬ್ಯಾಸ ಮಾಡ್ಸಿರೆ ಎದುರಾಣವೂ ಅದನ್ನೇ ಹೇಳುಲೆ ಸುರುಮಾಡ್ತವು ಹೇಳುಸ್ಸು ಇದಕ್ಕೇ ಅಲ್ಲದೋ? ಒಪ್ಪಣ್ಣಂಗೂ ಊರಿನೊಳ ಮಾತಾಡುವಗ ಹರೇರಾಮ ಹೇಳಿಯೇ ಬತ್ತು. ಪಕ್ಕನೆ ಯೇವದಾರು ಆಪೀಸಿಂಗೋ ಮತ್ತೊ ಹೋದರೆ ಅದುವೇ ರಜ ಕಷ್ಟ ಆಗಿ ಹೋವುತ್ತು - ಆಪೀಸಿನವಕ್ಕೆ ಇನ್ನೂ ಅಬ್ಯಾಸ ಆಯೆಕ್ಕಷ್ಟೆ ಇದಾ!
ಮಠಲ್ಲಿ ಹರೇರಾಮ ಹೇಳಿ ಬರಕ್ಕೊಂಡು ಇಪ್ಪ ಶ್ಟಿಕ್ಕರುಗೊ ಧಾರಾಳ ಅಂಟುಸಿಗೊಂಡು ಇದ್ದಡ. ಇದರ  ಪ್ರತಿ ಸರ್ತಿ ನೋಡಿ ಅಪ್ಪಗಳೂ ರಾಮ ಸ್ಮರಣೆ ಆಗಲಿ ಹೇಳ್ತ ಉದ್ದೇಶ. ಹೊಸನಗರಲ್ಲಿ ಮಾಂತ್ರ ಅಲ್ಲ, ಬೆಂಗ್ಳೂರು ಮಟಲ್ಲಿದೇ ಹಾಂಗೇ ಇದ್ದು ಹೇಳಿ ಪೆರ್ಲದಣ್ಣ ಹೇಳಿದ್ದವು.
ಎಷ್ಟು ಚೆಂದ!
~~~

ಪುತ್ತೂರಿಂದ ಸುಬ್ರಮಣ್ಯಕ್ಕೆ ಹೋವುತ್ತ ಬಸ್ಸಿಂಗೆ ಓ ಮೊನ್ನೆ ಗಣೇಶಮಾವ ಹತ್ತಿ ಕೂದ್ದಡ. ಕೂದ್ದದು ಕರೇಣ ಸೀಟು ಆದ ಕಾರಣ ಕೆಳಂದ ಬತ್ತ ಜೆನಂಗೊ ’ಈ ಬಸ್ಸು ಎಲ್ಲಿಗೆ ಹೋಗ್ತದೇ?’ ಹೇಳಿ ಇವರತ್ರೇ ಕೇಳುದಡ. ಹೇಳುಲೇ ಬೇಕನ್ನೇ, ಹೇಳಿದವು. ಬಸ್ಸು ಶ್ಟೇಂಡಿಲಿ ನಿಂದಿದ್ದ ಅರ್ದಗಂಟೆಯ ಹೊತ್ತಿಲಿ ಸುಮಾರು ನೂರುಸರ್ತಿ ’ಸುಬ್ರಮಣ್ಯ, ಸುಬ್ರಮಣ್ಯ, ಸುಬ್ರಮಣ್ಯ,...’ ಹೇಳಿ ಜೆಪಮಾಡಿದ್ದು ಗ್ರೇಶಿ ಅವು ತುಂಬ ಕುಶಿಲಿ ಇತ್ತಿದ್ದವಡ ಆ ದಿನ ಇಡೀಕ. ಹಾಂಗೊಂದು ಶುದ್ದಿ!
ಇದು ಎಂತಕೆ ನೆಂಪಾತು ಹೇಳಿರೆ, ಗಮನ ಇದ್ದೋ ಇಲ್ಲೆಯೋ, ಒಂದೇ ಶಬ್ದ ತುಂಬ ಸರ್ತಿ ಹೇಳುವಗ ಮನಸ್ಸು ಆ ಶಬ್ದಕ್ಕೆ ಒಗ್ಗಿ ಹೋವುತ್ತು. ಪರಸ್ಪರ ಮಾತಾಡುವಗಳೋ ಮಣ್ಣ ಹರೇರಾಮ ಹೇಳಿರೆ, ನಮ್ಮ ಆಂತರ್ಯಲ್ಲಿದೇ ಗುರುಪೀಠದ ಅಂಶ ಸೇರಿ ಹೋವುತ್ತು ಹೇಳಿಗೊಂಡು ನಂಬಿಕೆ.

~~~
ಇದೆಲ್ಲ ಹೀಂಗೆ ನೆಡಕ್ಕೊಂಡು ಇಪ್ಪಗಳೇ,
ಗುರುಗೊಕ್ಕೆ ಇಂಟರ್ನೆಟ್ಟಿಲಿ ಅನುಭವ ಇಪ್ಪ ವಿಷಯ ಹೆಚ್ಚಿನವಕ್ಕೂ ಗೊಂತಿದ್ದು.
ಒಬ್ಬ ಸಾಮಾನ್ಯ ಇಂಜಿನಿಯರಷ್ಟೇ ಗುರುಗೊಕ್ಕೂ ಕಂಪ್ಯೂಟರು ಅರಡಿತ್ತಡ. ಯೇಪುಲು (ತಿಂತದಲ್ಲ, ಕಂಪ್ಯೂಟರು ಕಂಪೆನಿಯ ಹೆಸರು) ಕಂಪ್ಯೂಟರಿಲಿ ಟಕಟಕ ಒತ್ತುವಗ ಕೆಲವು ಸೋಪ್ಟುವೇರುಗಳುದೇ ಮೂಗಿಂಗೆ ಬೆರಳು ಮಡುಗುತ್ತವಡ. ಎಲ್ಲಾ ಆಡಳಿತವನ್ನುದೇ ಇಂಟರ್ನೆಟ್ಟಿಂಗೆ ತರೆಕ್ಕು, ಎಲ್ಲಿದ್ದರೂ ಸಿಕ್ಕೆಕ್ಕು, ಲೋಕವ್ಯಾಪಿ ಸಂಚಾರಲ್ಲಿಪ್ಪಗ ಇದು ಅನುಕೂಲ ಆವುತ್ತು ಹೇಳ್ತ ಯೋಚನೆ ಗುರುಗೊಕ್ಕೆ ಅಂದೇ ಬಯಿಂದು. ಅದಕ್ಕಾಗಿ ಕೆಲಸ ಕಾರ್ಯಂಗಳ ಮಾಡ್ತಾ ಇದ್ದವಡ.
ಇಂಟರ್ನೆಟ್ಟಿನ ಓರುಕುಟ್ಟಿಲಿ ಗುರುಗೊ ಇದ್ದವು ಹೇಳಿಗೊಂಡು ಪುಳ್ಳಿಯಕ್ಕಳಿಂದ ಹಿಡುದು ಪಿಜ್ಜಿಯಕ್ಕಳ ಒರೆಗೂ - ಎಲ್ಲೊರುದೇ ಓರುಕುಟ್ಟಿಲಿ ಜೆಮೆ ಅಪ್ಪಲೆ ಸುರು ಆದವು, ಶೆಕ್ಕರೆ ಡಬ್ಬಿಗೆ ಎರುಗು ಬತ್ತ ನಮುನೆಲಿ. ಅಲ್ಲಿ ಆಶೀರ್ವಾದ ಪಡಕ್ಕೊಂಬಲೆ, ಮಾತಾಡುಲೆ, ಪಟ ನೋಡಲೆ, ವೀಡ್ಯ ನೋಡಲೆ, ಸ್ವರ ಕೇಳಲೆ - ಎಲ್ಲದಕ್ಕುದೇ ಆವುತ್ತನ್ನೆ - ಹಾಂಗೆ!
ಗುರುಗೊಕ್ಕೆ ಎಲ್ಲೊರುದೇ ’ಹರೇರಾಮ, ಆಶೀರ್ವಾದ ಬೇಡುತ್ತೆ’ ಹೇಳುವೋರೇ!
ಎಷ್ಟಾದರೂ ಓರುಕುಟ್ಟು ಬೇರೆಯವರದ್ದು, ನಮ್ಮದಲ್ಲ. ಎಷ್ಟು ಶಾಶ್ವತ ಹೇಳ್ತದು ಗೊಂತಿಲ್ಲೆ. ಎಂತೆಲ್ಲ ಮಾಡ್ಳೆಡಿತ್ತು ಹೇಳ್ತದು ನಮ್ಮ ಕೈಲಿ ಇಲ್ಲೆ, ಎಷ್ಟು ಜೆನ ಶಿಷ್ಯರು ಬೇಕು ಹೇಳ್ತದು ನಮ್ಮ ಕೈಲಿ ಇಲ್ಲೆ, ಆರಿಂಗಲ್ಲ ಎಂತೆಲ್ಲ ಬರದ್ದು, ಅದು ಎಷ್ಟು ದಿನ ಇರ್ತು ಹೇಳ್ತದು ಯೇವದೂ ನಮ್ಮ ಕೈಲಿ ಇಲ್ಲೆ - ಎಂತಕೇ ಹೇಳಿತ್ತು ಕಂಡ್ರೆ, ಅದು ನಮ್ಮದಲ್ಲ. ಗೂಗುಲು ಕಂಪೆನಿಗೆ ಮನಸ್ಸು ಬಪ್ಪಗ ಮುಚ್ಚುಗು, ಬೇಕಪ್ಪ ತೆಗಗು. ನಮ್ಮಂದಾಗಿ ಅವರಲ್ಲಿ ಜೆನ ಜಾಸ್ತಿ ಮಾಡುಸ್ಸು ಎಂತಕೆ? ನಮ್ಮದೇ ಒಂದು ಆಗಲಿ, ನಮ್ಮದೇ ಹಿಡಿತಲ್ಲಿಪ್ಪ ಓರ್ಕುಟ್ಟು ನಮುನೆದು ಆಗಲಿ, ಅದರಲ್ಲಿ ಮಾತಾಡುವೊ, ಓರ್ಕುಟ್ಟಿಲಿ ಮಾತಾಡಿರೆ ಸಂತೆ-ಅಡ್ಕಲ್ಲಿ ಮಾತಾಡಿದ ನಮುನೆ, ನಮ್ಮ ಮನೆಲಿ ಮಾತಾಡುವ, ಮಠಲ್ಲೇ ಕೂದಂಡು ಮಾತಾಡುವ ಹೇಳ್ತ ಯೋಚನೆ ಬಂತಡ ನಮ್ಮ ಗುರುಗೊಕ್ಕೆ.

ಅದೇ ಆಲೋಚನೆಲಿ ಬೆಂಗ್ಳೂರಿನ ಸೋಪ್ಟುವೇರು ಮಾಣಿಯಂಗಳ ಬಪ್ಪಲೆ ಮಾಡಿದವಡ. ಹಾಂಗೆ ಬಂದವರ ಕೂರುಸಿಗೊಂಡು ಒಂದು ಮೀಟಿಂಗು ಮಾಡಿದವಡ, ಅವರ ವಿಚಾರಂಗಳ ಹೇಳಿದವಡ. ’ನಮ್ಮದೇ ಒಂದು ವೆಬ್-ಸೈಟು ಆಯೆಕ್ಕು’ ಹೇಳ್ತ ಯೋಚನೆ ಮಡಗಿದವಡ.  ದೀರ್ಘ ಚಿಂತನೆ ಆದ ಮತ್ತೆ ಒಂದು ವೆಬ್’ಸೈಟು ಹೆರಬಂತಡ, ಅದೇ ಹರೇರಾಮ.ಇನ್ [http://hareraama.in]....
ನಿತ್ಯ ಸ್ಮರಣೆ ಮಾಡ್ತ ಹರೇರಾಮ ಶಬ್ದ ಲೋಕಾಂತರ ಆಯೆಕ್ಕು ಹೇಳ್ತ ಉದ್ದೇಶಲ್ಲಿ ವೆಬ್’ಸೈಟಿಂಗೂ ಅದೇ ಹೆಸರು ಮಡಗಿದ್ದಡ.

ಗುರುಗಳ, ಮಠದ ಸಂಬಂಧಿ ಪಟಂಗ, ವೀಡ್ಯಂಗ, ಚಿತ್ರಂಗ, ಶುದ್ದಿಗೊ, ಶುದ್ದಿ ಇಪ್ಪ ಪೇಪರು ತುಂಡುಗೊ, ’ಇಂದೆಂತಾತು’ ಹೇಳ್ತ ದಿನಚರಿಗೊ, ಎಲ್ಲವೂ ಎದುರು ಕಾಣ್ತ ನಮುನೆ ಸಿಕ್ಕುತ್ತಡ ಆ ವೆಬುಸೈಟಿಲಿ.
ಅದಲ್ಲದ್ದೇ, ವಿಶೇಷವಾಗಿ ಗುರುಗೊ ಬ್ಲೋಗು ಬರೆತ್ತವಡ. ಅಧ್ಯಾತಿಕ, ಸಾಮಾಜಿಕ ಎರಡೂ ವಿಶಯ ಬತ್ತ ಹಾಂಗೆ ರಾಮ & ರಾಜ್ಯ ಹೇಳ್ತ ಎರಡು ಹೆಸರು ಮಡಗಿದ್ದವಡ ಬ್ಲೋಗುಗೊಕ್ಕೆ. ರಾಮ ಬ್ಲೋಗು ದೇವ, ಪುರಾಣ, ಇತ್ಯಾದಿ ಸಂಗತಿ ಒಳಗೊಂಡಿದ್ದರೆ, ರಾಜ್ಯ ಬ್ಲೋಗು ರಾಜನೀತಿ ಇತ್ಯಾದಿ ವಿಶಯಂಗಳ ಒಳಗೊಳ್ತಡ. ಗುರುಗೊ ಅಲಂಕರಿಸಿದ ರಾಮಚಂದ್ರಾಪುರದ ಪೀಠ - ಅದು ಗುರುಪೀಠವೂ ಅಪ್ಪು, ರಾಜಪೀಠವೂ ಅಪ್ಪು. ಗುರುಚಿಂತನೆಯುದೇ, ರಾಜಗಾಂಭೀರ್ಯದೇ ಎರಡೂ ಇದ್ದನ್ನೇ, ಹಾಂಗೆ ಇದೆರಡು ಬರವಲೆ ಸಾಧ್ಯ ಆವುತ್ತು.

ಅದಷ್ಟಲ್ಲದ್ದೇ, ಓರುಕುಟ್ಟಿಲಿ ಇರ್ತ ನಮುನೆ ’ಹುಂಡು ಅಂಚೆ’ (ಹುಂಡು= ಬಿಂದು / ರಜ್ಜ. ಓರುಕುಟ್ಟಿಲಿ ಇದರ Scrap ಹೇಳುದಡ, ಅಜ್ಜಕಾನ ಬಾವ° ಹೇಳಿದ°) ಬರವಲೆ ಎಡಿತ್ತಡ. ಕಾಪಿಗೆಂತ?, ಒಗ್ಗರಣೆ ಎಂತ? ಹೇಳಿ ಎಲ್ಲೊರುದೇ ಮಾತಾಡ್ಳೆಡಿಯ, ಬದಲಾಗಿ ನಾವುದೇ ಗುರುಗಳುದೆ ಮಾತಾಡ್ಳಾವುತ್ತಡ. ಎಂತ ಚಿಂತನೆಗೊ ಬೇಕಾರುದೇ ಮಾಡ್ಳಾವುತ್ತಡ. ಜನರಿಂದ ನೇರವಾಗಿ ಗುರುಗೊಕ್ಕೆ. ಗುರುಗೊ ಯಾವುದೇ ವ್ಯಕ್ತಿಗೆ - ಈ ನಮುನೆ ಸಂಪರ್ಕ ಮಾಡ್ಲೆ ಆವುತ್ತಡ. ಬಪ್ಪ ದಿನಂಗಳಲ್ಲಿ ಇನ್ನುದೇ ರಜ ದೊಡ್ಡ ಮಟ್ಟಿಂಗೆ ಬೆಳೆಶುತ್ತ ಏರ್ಪಾಡು ಇದ್ದಡ.
ಇದೆಲ್ಲ ಮಾಡ್ತ ಮೊದಲು ಅದರ್ಲಿ ರಿಜಿಶ್ಟ್ರಿ ಆಯೆಕ್ಕಡ.  ಅರ್ಜಿ ಹಾಕುಲೆ ಇದ್ದಡ. ಸಣ್ಣ ಮಟ್ಟಿನ ಜಾತಕ ತುಂಬುಸಿರೆ ಅದರ ಒಳ ಹೋಪಲೆ ಆವುತ್ತಡ. ಈಗಾಗಲೇ ಮಾಷ್ಟ್ರಮನೆ ಆತ್ತೆಯ ಹಾಂಗೆ ಕೆಲವು  ಜೆನ ಇದರ್ಲಿ ಅರ್ಜಿ ಹಾಕಿ ಸೇರಿಗೊಂಡಿದವಡ. ಓರುಕುಟ್ಟಿನ ಇನ್ನು ಕುಟ್ಟುಲೇ ಇರ!


ಓ ಮೊನ್ನೆ ದೀಪಾವಳಿ ದಿನ ಆದಿಮಠ ಗೋಕರ್ಣದ ಅಶೋಕೆಲಿ (ಗೋಕರ್ಣಲ್ಲಿ ನಮ್ಮ ಮಠ ಸ್ಥಾಪನೆ ಆದ್ದು, ಗೊಂತಿದ್ದನ್ನೇ?) ಇದರ ಲೋಕಾರ್ಪಣೆ ಮಾಡಿದವಡ. ಎಡಪ್ಪಾಡಿ ಬಾವ° ಇತ್ತಿದ್ದವಡ ಅಲ್ಲಿ. ಗುರುಗೊ ಮತ್ತೆರಡು ದಿನ ಕಳುದು ಬೆಂಗ್ಳೂರಿಂಗೆ ಬಂದು ಸುರೂವಾಣ ಬ್ಲೋಗು ಬರದವಡ. ಬರದು ಅರ್ದ ದಿನಲ್ಲಿ ಹತ್ತು ಜೆನರ ’ಅನಿಸಿಕೆ’ (Comment)ಗೊ ಬಯಿಂದಡ. ಇನ್ನೂ ಬತ್ತಾ ಇದ್ದಡ.  ನೋಡಿ, ಜೆನಂಗ ಎಷ್ಟು ಕಾದುಗೊಂಡು ಇದ್ದವು!!! ಗುರುಗಳ ಬ್ಲೋಗು ಪ್ರತಿ ಗುರುವಾರ ಬತ್ತಡ. ’ಇನ್ನಾಣ ವಾರ ಎಂತರಪ್ಪಾ’ ಹೇಳ್ತ ಕುತೂಹಲ ಕೆಲವು ಜೆನಕ್ಕೆ ಸುರು ಆಯಿದಡ ಈಗಾಗಲೇ.
(ಈ ವಾರ ದೀಪ-ಬೆಣಚ್ಚಿನ ಬಗ್ಗೆ ಬರದ್ದವಡ: ಇಲ್ಲಿದ್ದು ಓದಿ, ಅನಿಸಿಕೆ ಹೇಳಿ : http://hareraama.in/blog/ಅಬ್ಬಾ-ಬೆಳಕಿನ-ಸೆಳೆತವೇ)

ಜೆನಂಗಳ ಒಟ್ಟಿಂಗೆ ನೇರ ಸಂಪರ್ಕ ಆವುತ್ತ ದಿಶೆಲಿ ಒಂದು ತಲೆಮಾರು ಮುಂದಾಣ ಯೋಚನೆ ನಮ್ಮ ಗುರುಗೊಕ್ಕೆ ಬಂತು ಹೇಳ್ತದು ಎಲ್ಲೋರಿಂಗೂ ಖುಷಿಯ ಶುದ್ದಿ.  ಗುರುಗಳೇ ನಮ್ಮೆಲ್ಲರ ಹರಸುವವು. ಅವರ ಹಾರೈಕೆಯ ಹಾಂಗೇ ಇದು ಮೂಡಿ ಬಂದದು. ಶಿಷ್ಯರು ಎಲ್ಲೆಲ್ಲಿ ಇರ್ತವೋ ಅಲ್ಲಲ್ಲಿಗೇ ಆಶೀರ್ವದುಸುದು ನಮ್ಮ ಗುರುಗಳ ಗರಿಮೆ.

ಚೆ, ಎಂತಾ ಒಳ್ಳೆ ಯೋಚನೆ!
ಭಾರತದ ಬೇರೆ ಯೇವ ಸ್ವಾಮಿಗೊ, ಬೇರೆ ಯೇವ ಗುರುಪೀಠ ಈ ನಮುನೆಲಿ ಯೋಚನೆ ಮಾಡ್ತವು? ಆ ಮಟ್ಟಿಂಗೆ ನಮ್ಮ ಗುರುಗೊ ಅದೆಷ್ಟೋ ಹೆಜ್ಜೆ ಮುಂದೆ. ಅಲ್ಲದೋ? ಎಂತ ಹೇಳ್ತಿ?

ಗುರುಗೊ ಇಪ್ಪ ಜಾಗೆ ಮಠ. ಗುರುಗೊ ಇಪ್ಪ ವೆಬ್-ಸೈಟು ಇ-ಮಠ ಹೇಳಿ ಮೊನ್ನೆ ಗುರುಗೊ ಹೇಳಿತ್ತಿದ್ದವಡ.
ಬನ್ನಿ, ಹರೇರಾಮಲ್ಲಿ ಗುರುಗಳ ಒಟ್ಟಿಂಗೆ ಇಪ್ಪ. ಅವರ ಪ್ರತಿ ಹೆಜ್ಜೆಗುದೇ ಹೆಗಲು ಕೊಡುವ°.
ಅವಿನಾಭಾವ ಸಂಬಂದ ಅನಂತಕಾಲವೂ ಇರಳಿ.

ಗೋಮಾತೆಂದ ಹಿಡುದ ಕಂಪ್ಯೂಟರಿನ ವರೆಗೆ ತುಂಬ ವಿಶಾಲವಾದ ಆಸಕ್ತಿ ಇಪ್ಪ ನಮ್ಮ ಗುರುಗಳ ಚಿಂತನಾಲಹರಿ ನಮ್ಮೆಲ್ಲರ ಅಭ್ಯುದಯಕ್ಕೆ ಕಾರಣವಾಗಲಿ ಹೇಳ್ತದು ಒಪ್ಪಣ್ಣನ ಸದಾಶಯ. ’ಹರೇರಾಮ’ಲ್ಲಿ ಗುರುಗೊಕ್ಕೆ ಹರೇರಾಮ ಹೇಳುವ°.

ಒಂದೊಪ್ಪ: ಹರಸುವವರ ಹಾರೈಕೆಯೂ ಹರೇರಾಮ, ಹಾರಯಿಕೆಯ ಹರಸುವಿಕೆಯೂ ಹರೇರಾಮ...!