ದನದ ಹಾಲು ಮೆಚ್ಚದ್ದ ಮಾಣಿಗೆ ತೊಟ್ಟೆ ಹಾಲೇ ಆಯೆಕ್ಕಡ...!

ಬೆಂಗ್ಳೂರಿನ ಶುಬತ್ತೆಯ ಶುದ್ದಿ ಕೆಲಾವು ಸರ್ತಿ ಮಾತಾಡಿದ್ದು ನಾವು. ಬೆಂಗುಳೂರಿಲಿ ಇರ್ತ ಒಂದು ವೆಕ್ತಿತ್ವ ಹೇಳ್ತಷ್ಟು ನಿಂಗೊಗೆ ಅಂದಾಜಿ ಆಯಿಕ್ಕು. ಈ ಸರ್ತಿ ಅದೇ ಶುಬತ್ತೆಯ ಮನೆಯ ಶುದ್ದಿ.

ಶುಬತ್ತೆದು ಸುಖೀ ಸಂಸಾರ ಬೆಂಗ್ಳೂರಿಲಿ ಆವುತ್ತಾ ಇದ್ದು, ಅಂದಿಂದ. ಒರಿಶಕ್ಕೊಂದರಿ ತಿತಿಗೋ, ಪೂಜಗೋ ಮತ್ತೊ° ಬಪ್ಪದಿದಾ ಎಂಗಳ ಬೈಲಿಂಗೆ, ಹಾಂಗಾಗಿ ಸಮಗಟ್ಟು ಗುರ್ತವೂ ಇಲ್ಲೆ. ಮೊದಲು ಗಟ್ಟಿಮುಟ್ಟು ಇದ್ದ ಹೆಮ್ಮಕ್ಕೊ ಈಗ ರೆಜಾ- ಬೇಳಗೆ ಮಣ್ಣುದ್ದಿದ ಹಾಂಗೆ -ತೋರ ಆಯಿದು. ಮಾಡ್ಳೆ ಕೆಲಸ ಎಂತ ಇದ್ದು ಬೇಕೆ ಪಾಪ.

ಅವರ ಮೂಲ ಕುಂಬ್ಳೆಸೀಮೆಯೇ ಆದರೂ, ಮಕ್ಕೊ ಹುಟ್ಟೆಕ್ಕಾರೆ ಮದಲೇ ಪೇಟೆ ಸಂಸ್ಕೃತಿಯ ದತ್ತಕ್ಕೆ ತೆಕ್ಕೊಂಡ ಕಾರಣ, 'ನಮ್ಮ ಊರೋರು' ಹೇಳ್ತದು ಪಕ್ಕನೆ ಗೊಂತೇ ಆವುತ್ತಿಲ್ಲೆ. ಅವಕ್ಕಿಬ್ರು ಮಕ್ಕೊ, ದೊಡ್ಡದು ಮಗಳು ಕೋಲೇಜಿಂಗೆ, ಎರಡ್ಣೇವ° ಮಗ°, ಶಾಲಗೆ.

ಪ್ರಕಾಶಮಾವ° ಶುಬತ್ತೆಯ ಹಸ್ಬೆಂಡು (ಗೆಂಡ°). ಯೇವದೋ ಕಂಪೆನಿಲಿ ಎಂತದೋ ಕೆಲಸ ಅಡ. ಕಾರಿಲಿ ಹೋಗಿ ಬತ್ತದು. ದಿನ ಉದಿ ಆದರೆ ಎದ್ದಿಕ್ಕಿ ’ವಾಕಿಂಗು’ ಹೋಕು, ಮಣ್ಣುಬಣ್ಣದ ಅಂಗಿಯೂ, ಅದೇ ಬಣ್ಣದ ಚಡ್ಡಿಯೂ, ಬೆಳಿಬಣ್ಣದ ಬೂಡ್ಸುದೇ ಹಾಕಿಯೊಂಡು. ಅರ್ದ ಗಂಟೆ ಕಳುದು ಒಪಾಸು ಎತ್ತುಗು. ಅಷ್ಟಪ್ಪಗ ಶುಬತ್ತೆಗೆ ಏಳುಲೆ ಸರೀ ಆವುತ್ತಿದಾ. ಎದ್ದು ಅಟ್ಟುಂಬೊಳಂಗೆ (ಕಿಚನು - ಹೇಳುಸ್ಸು ಅದರ) ಹೋಗಿ ಎಂತಾರು - ಸೇಮಗೆಯೋ, ಬ್ರೆಡ್ಡೋ - ತಿಂಬಲೆ ಪೇಟೆ ತಿಂಡಿ ಮಾಡುಗು. ದಿನಾಗುಳೂ ಉಂಡೆ, ತೆಳ್ಳವು ಮಾಡಿರೆ ಮಕ್ಕೊಗೆ ಮೆಚ್ಚೆಕ್ಕೇ, ಅಲ್ಲಮತ್ತೆ! ಒಂದು ದಿನ ಮೇಗಿ, ಒಂದು ದಿನ ಟೋಪ್ ರೋಮನ್ ನೂಡ್ಳುಸು (ಅರ್ದ ಬೇಶಿ ಪೆಕೆಟಿಲಿ ತುಂಬುಸಿದ ಒಂದು ನಮುನೆ ಸೇಮಗೆ ಅಡ), ಮತ್ತೊಂದು ದಿನ ಪೆಕೆಟಿಲಿ ಬತ್ತ ರವೆ ಇಡ್ಳಿ, ಇನ್ನೊಂದು ದಿನ ಪುಳಿಯೋಗರೆ, ಮತ್ತೊಂದರಿ ಚಪಾತಿ - ಹೀಂಗೆಂತಾರು, ಬದಲುಸಿ ಬದಲುಸಿ ಮಾಡುಗು - ನಮುನೆ ನಮುನೆದು. ಚಪಾತಿಯೋ ಮತ್ತೊ° ಮಾಡ್ತರೆ ಅದಕ್ಕೆ ಕೂಡ್ಳೆ ಎಂತಾರು ಆಯೆಕ್ಕಿದಾ, ತಾಳ್ಳಿನ ನಮುನೆದು. ನೆಟ್ಟಿಕಾಯಿಕೊರದು ಕೊಡ್ಳಪ್ಪಗ ಮಾವಂಗೆ ಹೇಂಗಾರೂ ವಾಕಿಂಗು ಮುಗಿಗು. ಪ್ರಕಾಶಮಾವ° ಮಾತಾಡದ್ದೆ ಕೂದಂಡು ಕೊರವದು, ಶುಬತ್ತೆ ಮಾತಾಡದ್ದೆ ಬೇಕಾದ ಅಡಿಗೆ ಕೆಲಸಂಗಳ ಮಾಡುದು - ಇಬ್ರೂ ಮೌನಲ್ಲೇ! ಅತ್ತಿತ್ತೆ ಮಾತಾಡ್ಳಿಲ್ಲೆ, ಜೋರು ಮಾತಾಡಿರೆ ಮಕ್ಕೊ ಏಳುಗು ಇದಾ - ಪಾಪ! ತಿಂಡಿ ಎಲ್ಲ ತಯಾರಾಗಿ ಬಳುಸುಲೆ ಹೆರಾಣ ಉಂಬ ಮೇಜಿಲಿ ಮಡಗಿ ಆದ ಮತ್ತೆ ಮಕ್ಕಳ ಏಳುಸುತ್ತ ಕಾರ್ಯ!


ಮಗಳ ಕೋಣೆಯ ಬಾಗಿಲಿಂಗೆ ಬಂದು ಪ್ರೀತಿಲಿ, ’ಏಳು ಮಗಳೇ...! ಹೋಮ್ ವರ್ಕ್ ಬಾಕಿ ಇಲ್ಲೆಯಾ...?’ - ಮಗಳ ಏಳುಸುವಗ ಮಗ° ಏಳುಲಾಗ ಇದಾ.. ಮೆಲ್ಲಂಗೆ ಹೇಳುಗು. ಹಾಸಿಗೆಯ ಮೆಸ್ತಂಗೆ ಮಗಳ ಏಳುಲೇ ಬಿಡ್ತಿಲ್ಲೆ. ಕೂಸು ನೆಡಿರುಳೊರೆಂಗೆ ಓದುಗು, ಮೊಬೈಲುದೇ ಕೈ ಅಡಿಲಿ ಇಕ್ಕು, ಉದೆಉದೆಕಾಲಕ್ಕೆ ಎಳ್ಡ್ರಾಮು ಬಡುದು ಬಚ್ಚಿದ್ದು ಮೊಬೈಲಿಂಗೆ. ಏಳುಸುವಗ ಏಳ, ಕೂಡ್ಳೆ ಎದ್ದರೆ ಕೊಂಗಾಟ ಸಿಕ್ಕ ಇದಾ. ಮಗಳಿಂಗೆ ಕೊಂಗಾಟ ಏರಿದ ಹಾಂಗೆ ಶುಬತ್ತೆಗೂ ಏರುಗು. ಕೊಂಗಾಟಕ್ಕೇ ಹತ್ತು ನಿಮಿಶ! ಮಗಳು ಎದ್ದ ಮತ್ತೆ ಎರಡು ನಿಮಿಶ ಮೊಬೈಲು ಒತ್ತುಗು, ಇರುಳು ಎರಡು ಗಂಟೆಂದ ಮತ್ತೆ ಯೇವದಾರು ಮೆಸೇಜೋ ಮತ್ತೋ° ಬಯಿಂದೋ - ಹೇಳಿಗೊಂಡು. ಕ್ಲಾಸಿನವು ಎಲ್ಲೊರುದೇ ಇದರತ್ರೆ ಕೊಂಗಾಟ ಅಡ, ಶುಬತ್ತೆ ಹೆಮ್ಮೆಲಿ ಹೇಳುಗು ಕೆಲವು ಸರ್ತಿ. ಕೆಲವೆಲ್ಲ ಮೆಸೇಜಿಂಗೆ ಉತ್ತರ್ಸಿ, ಕೆಲವೆಲ್ಲ ಉದ್ದಿಕ್ಕಿ ಮೆ---ಲ್ಲಂಗೆ ಹಾಸಿಗೆಂದ ಹಂದುಗು. ಹಾಸಿಗೆಯ ಮಡುಸಲೆ ಹೇಳಿ ಎಂತ ಇಲ್ಲೆ, ಯೇವತ್ತುದೇ ಬಿಡುಸಿಗೊಂಡು ಇಪ್ಪದು !

ಮಗಳ ಏಳುಸಿ ಆದ ಮೇಗೆ ಮಗನ ಏಳುಸುತ್ತ ಕೆಲಸ.

ಮಗಳಷ್ಟು ದೊಡ್ಡ ಆಯಿದ°ಯಿಲ್ಲೆ ಅವ°, ಅವಂಗೇ ಹೇಳಿಯೇ ಬೇರೆಯೇ ಮೊಬೈಲು ತೆಗದು ಕೊಟ್ಟಿದಿಲ್ಲೆ. (ಶುಬತ್ತೆಯ ಮೊಬೈಲು ಇದ್ದನ್ನೇ!) ಹಾಂಗಾಗಿ ಇರುಳು ಹತ್ತೂವರೆಗೆ ಟೀವಿಲಿ ಮಿಷ್ಟರುಬೀನು (ಒಂದು ಕಾರ್ಯಕ್ರಮ) ನೋಡಿದಮತ್ತೆ ವರಗುತ್ತ, ಆದರೂ ಬೇಗ ಏಳ°, ಒರಕ್ಕು ಜಾಸ್ತಿ ಅಡ ಅವಂಗೆ, ಅವನ ಅಜ್ಜನಮನೆ ಮಾವಂದ್ರ ಹಾಂಗೆ! - ಶುಬತ್ತೆ ಪರಂಚುಗು ಅದರ ತಮ್ಮಂದ್ರ ನೆಂಪಾಗಿ. ಸುಮಾರು ಹೊತ್ತು ಕೊಂಗಾಟ ಆದ ಮತ್ತೆ ಮೆಲ್ಲಂಗೆ ಎದ್ದರೂ, ಅಂತೇ ಕೂದುಗೊಂಗು, ಚೆಂಡಿಕೋಳಿ ಬೆಶಿಲಿಲಿ ಕೂದ ನಮುನೆ. ಹಲ್ಲುತಿಕ್ಕೆಕ್ಕಾರೆ ಶುಬತ್ತೆಯೇ ಬ್ರೆಶ್ಶು ಹುಡ್ಕಿ, ಅದಕ್ಕೆ ಪೇಷ್ಟು ಹಾಕಿ, ಅವರ ಕೈಲಿ ಮಡಗಿ, ಒಂದರಿ ಒಪ್ಪ ಕೊಟ್ಟು ಕೊಂಗಾಟ ಮಾಡಿ ಆಯೆಕ್ಕು.

ಮಕ್ಕೊಗೆ ಇಬ್ರಿಂಗೂ ಎದ್ದು, ಕೈಕ್ಕಾಲು ಮೋರೆ ತೊಳದು, ಹೆರ ಬಪ್ಪ ಹೊತ್ತಿಂಗೆ - ಹೆರ ಹಾಲಿನ ಪೆಕೆಟು ಬಿದ್ದಿರ್ತು, ಬಾಗಿಲ ಕರೆಲಿ ನೇಲುಸಿದ ಚೀಲಲ್ಲಿ. ಒಂದರ್ಲಿ ಮೂರು ನಾಕು ಕುಡ್ತೆ ಹಾಲು ಹಿಡಿತ್ತ ಮೂರು ಪೆಕೆಟುಗೊ. ಬೆಳಿ ಬಣ್ಣದ ಪೆಕೆಟಿಂಗೆ ಪಚ್ಚೆ ಗೆರೆಗೆರೆ. ’ನಂದಿನಿ ಹಾಲು’ ಹೇಳ್ತವದರ. ನಿಜವಾಗಿ ನಂದಿನಿ ಕೊಟ್ಟದೋ, ಅಲ್ಲ ಕತ್ತೆಕುಂಞಿಕೊಟ್ಟದೋ ಆರು ಕೇಳ್ತ°! ಅರ್ದಂಬರ್ದ ಕಾಸಿ, ಅಂಬೆರ್ಪಿಲಿ ತುಂಬುಸಿ, ತಣ್ಣಂಗೆ ಮಾಡಿ ಮಾರುದಡ. ಮದಲಾಣ ಹಾಂಗೆ ಕುಪ್ಪಿ ಅಲ್ಲ - ತೊಟ್ಟೆ. ಪೇಟೆಲಿ ಎಲ್ಲ ಅದು ತುಂಬ ಸುಲಬ ಆವುತ್ತಲ್ದ, ಪಕ್ಕನೆ ಕವುಂಚಿರೆ ಎಂತ ಆಗ. ಪಕ್ಕನೆ ಗುದ್ದಿ ಹೋದರೂ ಎಂತ ಆಗ. ಹಾಂಗೆ ಅದು ರಜ್ಜ ಪ್ರಸಿದ್ದ ಆಯಿದು ಈಗ. ಶುಬತ್ತೆ ಅಂತೂ ದಿನಕ್ಕೆ ಮೂರು ಲೀಟ್ರು ತೆಕ್ಕೊಂಬದಡ, ಆರು ಪೆಕೆಟು. ಉದಿಯಪ್ಪಗ ಒಂದೂವರೆ, ಇರುಳು ಒಂದೂವರೆ. ಇರುಳಾಣದ್ದರ್ಲಿ ನೆರವು ಹಾಕಿ ಮರದಿನಕ್ಕೆ ಮೊಸರುದೇ ಅದರ್ಲೇ ಮಾಡುದಡ. ಈಗೀಗ ನಂದಿನಿ ಹಾಲಿಲೇ ಎಲ್ಲ ಅಡ. ಆ ಮಕ್ಕೊ ಅದರ ಕುಡುದೇ ಬೆಳದ್ದು.

ಮಕ್ಕೊಗೆ ಹಾಲು ಬಂತು ಹೇಳಿರೆ ಈ ಬೆಳಿ ತೊಟ್ಟೆ ಬಂತು ಹೇಳಿಯೇ ಅರ್ತ ಅಕ್ಕು. ಆ ಬೆಳಿ ತೊಟ್ಟೆ ಬಾರದ್ದ ದಿನ ಹಾಲು ಬಯಿಂದಿಲ್ಲೆ! ಅಂಗುಡಿಲಿ ಹೋಗಿ ’ಹಾಲು ಇದ್ದೋ’ ಹೇಳಿ ಕೇಳಿರೆ ಆ ತೊಟ್ಟೆ ಇದ್ದೋ ಹೇಳಿ ಅರ್ತ ಅಡ. ಆ ಮಾಣಿಯ ಗಣಿತಲ್ಲಿ ಹಾಲು=ನಂದಿನಿ ತೊಟ್ಟೆ.
ಅದರ ತೆಕ್ಕೊಂಡು ಬಂದು ಒಂದು ಗೆನಾ ಪಾತ್ರಲ್ಲಿ ಕಾಸಿ, ಬೆಶಿ ಇಪ್ಪಗಳೇ ಮಕ್ಕೊಗೊಂದು ಹೋರ್ಲಿಕ್ಸು ಮಾಡಿ ಕೊಡ್ಳಿದ್ದು.
ಬುದ್ಧಿ ಬಪ್ಪಲಡ!

ತಣುದ ಮತ್ತೆ ಪ್ರಿಜ್ಜಿಲಿ ಮಡುಗುದು, ನಿನ್ನೇಣದ್ದು, ಮೊನ್ನೇಣದ್ದು ಎಲ್ಲ ಕರೆಕರೆಂಗೆ ಮಾಡಿ ಒಂದು ಒತ್ತಕ್ಕೆ.

~~~~~


ಆಚಕರೆಯ ತರವಾಡು ಮನೆ ಹೇರ್ರೆ(ಹೇಳಿರೆ) ಈ ಶುಬತ್ತೆಯ ಅಜ್ಜನ ಮನೆ. ಶಂಬಜ್ಜ° ಸೋದರ ಮಾವ° ಆದರೂ, ಅಪ್ಪನ ಸ್ಥಾನಲ್ಲಿ ಇತ್ತಿದ್ದವಡ ಈ ಶುಬತ್ತೆಗೆ. ಇಲ್ಲಿಂದಲೇ ನವಜೀವನಕ್ಕೆ ಹೋದ್ದಡ ಆ ಶುಬತ್ತೆ ಸಣ್ಣ ಇಪ್ಪಗ. ಅಂದ್ರಾಣ ಪ್ರೀತಿ ಈಗಳೂ ಒಳುದ್ದು. ಅದಕ್ಕೆ ರಂಗಮಾವ° ಸೋದರಬಾವ° ಹೇಳಿ ಮಾಂತ್ರ ಅಲ್ಲದ್ದೆ, ಪಾತಿಅತ್ತೆಯ ಹೂಗಿನ ಗೆಡುಗಳುದೇ ಕಾರಣ!! ಅಪುರೂಪಲ್ಲಿ ಒಂದೊಂದರಿ ಬಕ್ಕು ಈಗಳೂ.
ತರವಾಡು ಮನೆಲಿ ಓ ಮೊನ್ನೆ ಒಂದು ಪೂಜೆ ಕಳಾತು ಅಲ್ಲದೋ? - ಮೂಲೆಮನೆ ಒರಿಶಾಂತದ ಮರದಿನ - ಆ ಪೂಜೆಗಪ್ಪಗ ಪ್ರಕಾಶಮಾವಂಗೆ ಎರಡು ದಿನ ರಜೆ ಇತ್ತಡ. ಮತ್ತೆರಡು ದಿನ (ಶೆನಿವಾರ, ಆಯಿತ್ಯವಾರ)ವಾರಾಂತ್ಯ ಹೇಂಗೂ ರಜೆ!

ಪೂಜಗೆ ಬಂದ ಹಾಂಗೂ ಆತು, ಅಪುರೂಪಲ್ಲಿ ಅಜ್ಜನ ಮನೆಗೂ ಬಂದ ಹಾಂಗಾತು ಹೇಳಿಗೊಂಡು ಸೀತ ಹೆರಟು ಬಂದವಡ ಈ ಶುಬತ್ತೆ ಕುಟುಂಬ. ಪೂಜೆ ಮುನ್ನಾಣ ದಿನ ಹೊತ್ತೋಪಗ ಎತ್ತಿದವು, ಕಾರಿಲಿ. ಸಾರಡಿತೋಡಿನ ಆಚ ಹೊಡೆಲಿ ನಿಲ್ಲುಸಿ ನಡೇಕಿದಾ! ಅಲ್ಲದ್ರೆ ಆಚೊಡೆ - ಮುಕಾರಿ ಗುಡ್ಡೆಲೆ ಆಗಿ ಬರೆಕ್ಕು. ಶುಬತ್ತೆ, ಪ್ರಕಾಶಮಾವ, ಮಗಳು ಕೃಪಾ, ಸಣ್ಣಮಗ ಕಿಶನು- ಎಲ್ಲೊರುದೇ ನೆಡಕ್ಕೊಂಡು ಹೊತ್ತಪ್ಪಗ ಜಾಲಿಂಗೆ ಎತ್ತುವಗ ಪಾತಿ ಅತ್ತೆಗೆ ಗೌಜಿಯೇ ಗೌಜಿ. ಮನೆಲಿದೇ ಒಬ್ಬ ಪುಳ್ಳಿ ಇದ್ದ° ಇದಾ - ವಿನು. ಅವಂಗೆ ಆಡ್ಳೆ ಜೆನ ಆದ ಕುಶಿಯೋ ಕುಶಿ.
ಮರದಿನ ಪೂಜೆ, ಚೆಂದಲ್ಲಿ ಕಳಾತು. ಮಕ್ಕೊ ಎಲ್ಲ ಸೊಕ್ಕಿಗೊಂಡು ಇತ್ತಿದ್ದವು, ಶುಬತ್ತೆ ಹೂಗು ಆದು ಹಾಕುಲೆ ಎಲ್ಲ ಒಳ ಸೇರಿತ್ತಿದ್ದು, ಪ್ರಕಾಶಮಾವ (ಕನ್ನಡ) ಪೇಪರು ಎಲ್ಲ ಓದಿಗೊಂಡಿತ್ತಿದ್ದವು, (ಇಂಗ್ಳೀಶು ಪೇಪರು ಬಾರದ್ದು ಬಾರೀ ಸಂಕಟ ಆಯಿದಡ ಅವಕ್ಕೆ), ಪೂಜೆಗೆ ಸರೀ ಸೇರಿದ್ದವು.ಗೌಜಿಲಿ ಪೂಜೆದಿನ ಮುಗಾತು.

ಮರದಿನ ಶುಬತ್ತೆ ಏಳುವಗ ಪಾತಿಅತ್ತೆ ಯೇವತ್ತಿನಂತೆ ಹಾಲು ಕರವಲೆ ಹಟ್ಟಿಯ ಹತ್ರೆ ಹೋಗಿತ್ತು. ಶುಬತ್ತೆಯುದೇ ಬಂತು ಹಟ್ಟಿಯ ಹತ್ರಂಗೆ. ರಜ್ಜ ಹೊತ್ತಿಲಿ ಅಮ್ಮನ ಹುಡ್ಕಿಯೋಂಡು, ಒರಕ್ಕಿನ ಕಣ್ಣಿಲಿ ಕುಂಞಿಮಾಣಿದೇ ಬಂದ. ’ಅಮ್ಮಾ...’ ಹೇಳಿಗೊಂಡು. "ಕಾಲಿಂಗೆ ಹೇಸಿಗೆ ಹಿಡಿಗು, ಸ್ಲಿಪರ್(ಚೆರ್ಪು) ಹಾಕಿಗೊ ಕಿಶನ್ನ್...!" ಹೇಳಿತ್ತು ಈ ಶುಬತ್ತೆ ಹಟ್ಟಿಂದ. ಬಾರ ಇಪ್ಪ ಬೆಳಿಚೆರ್ಪು ಹಾಕಿಯೊಂಡ°, ಹಟ್ಟಿಯತ್ರೆ ಬಂದ°. ಶುಬತ್ತೆ ಒಂದು ಹಳೇ ದನುವಿನ ಕೊರಳಿನ ತಿಕ್ಕಿ ಮುದ್ದು ಮಾಡಿಗೊಂಡಿತ್ತು. ಶುಬತ್ತೆ ಸಣ್ಣ ಇಪ್ಪಗ ಆ ದನವ ಕೊಂಗಾಟ ಮಾಡಿದ್ದರ ಎಲ್ಲ ಪಾತಿಅತ್ತೆಯ ಹತ್ರೆ ಹೇಳಿಗೊಂಡು ಇತ್ತು. ಪಾತಿಅತ್ತೆ ಅದರ ಒತ್ತಕ್ಕೆ ಇದ್ದ ಇನ್ನೊಂದು ದನುವಿನ (ದನವ) ಕರಕ್ಕೊಂಡು ಇತ್ತು. ಶುಬತ್ತೆ ಆ ಅಜ್ಜಿದನುವಿನ ಗಂಗೆಕೊರಳಿನ ತಿಕ್ಕುವಗ ಆ ದನ ಕುಶಿಲಿ ಮೇಲೆ ನೋಡಿ, ಕೆಮಿ ಆಡುಸಿಗೊಂಡು ಇತ್ತು. ’ಇನ್ನೂ ತಿಕ್ಕು’ ಹೇಳಿ ಹತ್ತರ ಹತ್ತರೆ ಬಂದುಗೊಂಡು ಇತ್ತು.


ಹಟ್ಟಿ ಹೆರಂದಲೇ ಕರಿಕರಿ ನೆಲಕ್ಕ ಸುರು ಆಗಿತ್ತು, ಮಾಣಿಗೆ ತಲೆಬೆಶೀ ಆತು. ಸಗಣವ ಎಲ್ಲ ತಪ್ಪುಸಿ ತಪ್ಪುಸಿ ಅಮ್ಮನ ಹತ್ತರೆ ಬಂದ ಕುಂಞಿ ಮಾಣಿ ನೋಡಿದ°- ಹಟ್ಟಿ ಇಡೀಕ ಸೊಪ್ಪುಗೊ, ಎಲೆಗೊ. ಅದರ್ಲೆಲ್ಲ ಉಂಬೆತಾಚಿ (ಸಗಣ) ಹಿಡ್ಕೊಂಡು. ಅದರ ಮೇಲೆಯೇ ಈ ದನಗೊ ನಿಂದುಗೊಂಡು ಇದ್ದವು. ಮೈಲಿ ಎಲ್ಲ ಸಗಣ ಹಿಡ್ಕೊಂಡು ಇದ್ದು (ನಿನ್ನೆ ಪೂಜೆ ಆದ ಕಾರಣ ರಂಗಮಾವ ದನಗಳ ಮೀಶಿದ್ದವೂ ಇಲ್ಲೆ ಇದಾ). ಒಂದರ ಕೆಳ ದೊಡ್ಡಮ್ಮ ಹಾಲು ಕರಕ್ಕೊಂಡು ಇದ್ದವು, ಕೈಲಿ ಒಂದು ಚೆಂಬು. ಕರೆಲಿ ಒಂದು ಕಂಜಿ. ಅಬ್ಬೆ ದನ ಕಂಜಿಯ ನಕ್ಕಿಯೋಂಡು ಇದ್ದು. ಕಂಜಿಯ ಬಾಯಿಲಿ ಹಾಲಿನ ನೊರೆಯ ಜೊಗುಳಿ ಅರ್ಕೊಂಡು ಇತ್ತು. ಹಟ್ಟಿಗೆ ಹಾಕಿದ ಸೊಪ್ಪಿಲಿ ಇಡೀಕ ಉಂಬೆತಾಚಿ, ದನದ ಮೈಲಿದೇ ಹಿಡುದ್ದು, ಹಾಲು ಕೊಡುವ ದನದ ಮೈಲಿದೇ ಹಿಡ್ಕೋಂಡು ಇದ್ದು, ದೊಡ್ಡಮ್ಮನ ಕೈಲಿದೇ ರಜ ಹಿಡುದ್ದು, ಕೆಲವು ದನಗೊ ಅದರ್ಲೇ ನಿಂದುಗೊಂಡು ಇದ್ದವು, ಕೆಲವು ಅದರ್ಲೇ ಮನಿಕ್ಕೊಂಡು ಇದ್ದವು.
ಚೆಕ್! ಎಂತಾ ಅವಸ್ತೆ!!!

ಇಲ್ಲಿಂದ ಬಂದ ಹಾಲು ಹೇಂಗಿಕ್ಕು....!!?????

ಅಮ್ಮಂದೇ-ದೊಡ್ಡಮ್ಮಂದೇ ಮಾತಾಡಿಗೋಂಡು ಇದ್ದವು, ಹಳೇ ಕಾಲದ ಶುದ್ದಿಗೊ ಎಂತದೋ..
ಸಗಣದ ಜಾಗೆಲಿ ನಿಂಬದರಿಂದ ಮನೆಲಿ ಸಿಮೆಂಟಿನ ನೆಲಲ್ಲಿ ನಿಂಬ ಹೇಳಿ ಕಂಡತ್ತು ಅವಂಗೆ.
"ಅಮ್ಮಾ.. ನಾವು ಇಲ್ಲಿಂದ ಹೋಪ°...!" ಹೇಳಿ ರಾಗ ಎಳದ.

ಶುಬತ್ತೆ ಉದ್ದಿಗೊಂಡಿದ್ದ ದನಕ್ಕೆ ಪಕ್ಕನೆ ಮಕ್ಕಳ ಸ್ವರ ಕೇಳಿತ್ತಲ್ದಾ, ಕೊರಳು ಬಗ್ಗುಸಿ ಮಾತಾಡ್ಸಿತ್ತು - "ಹಿಂಡಿ ತಯಿಂದೆಯ ಪುಟ್ಟೋ..?" ಹೇಳುವ ಹಾಂಗೆ ಕಾಂಗು.

ಅಜ್ಜಿ ದನ ಇವನ ಕೈ ಮೂಸುವಗ ಮೂಗಿಲಿದ್ದ ಬೆಗರೋ, ಬಾಯಿಯ ಹತ್ರೆ ಇದ್ದ ದನದ ಎಂಜಲೋ ಎಲ್ಲ ಇವನ ಪುಟ್ಟು ಕೈಗೆ ಮುಟ್ಟಿತ್ತು. ಗಾಬೆರಿಲಿ ಪಕ್ಕನೆ ನಾಕು ಹೆಜ್ಜೆ ಹಿಂದೆ ಬಂದ°, ಅಮ್ಮನನ್ನೂ ಎಳಕ್ಕೊಂಡು. ಮುಂದೆ ಹೋಪಗ ಆದರೆ ನೋಡಿಗೊಂಡು ಹೋಯಿದ°, ಸಗಣ ಇಪ್ಪದರ ತಪ್ಪುಸಿ ತಪ್ಪುಸಿ, ಬರೇ ಎಲೆಗಳ ಮಾಂತ್ರ ಮೆಟ್ಟಿಗೊಂಡು ಹೋಯಿದ, ಈಗ ಹೆದರಿ ಹಿಂದೆ ಬಂದದು - ಪುರುಸೊತ್ತಿಲಿ ಬಂದದಲ್ಲ! ಒಂದು ಗೆನಾ ದೊಡ್ಡ ಸಗಣದ ಮುದ್ದಗೆ ಕಾಲು ಹಾಕಿದ°. ಸುರುವಿಂಗೆ - ಮೇಗಿಯ ತಟ್ಟೆಗೆ ತೊಳುದ ಹಾಂಗಾತು ಅವಂಗೆ, ಕಾಲು ಹಾಂಗೇ ಮಡಗಿ ಕೆಳ ನೋಡಿದ°, ಬೆಳೀಜೋಡು ಹಸುರಸುರು ಆಯಿದು, ಸಗಣದ ನೆಡುಮದ್ಯಕ್ಕೇ ಆಯಿದು ಅವ ಕಾಲು ಮಡಗಿದ್ದು!
(ರಂಗಮಾವ° ’ಚೆ, ಗೆನಾ ಸಗಣ ಒಂದು ಹಾಳಾತು’ ಹೇಳಿ ಗ್ರೇಶುಗು ಇದರ ಕಂಡ್ರೆ. ) ಆಯತಪ್ಪಿ ಅಲ್ಲೇ ಬಿದ್ದ°.
ಗಾಬೆರಿಲಿ "ಬೆರೇ°....ಏಂ" ಹೇಳಿ ಒಂದು ಬೊಬ್ಬೆ ಹೊಡಾದು ಕೂಗಿದ ಮಾಣಿ.

ಎಂತಾತಪ್ಪಾ ಈ ಮಾಣಿಗೆ ಹೇಳಿ ಆ ಅಜ್ಜಿದನವೇ ಏಳುಸುಲೆ ಬಂತು, ’ತಾಡ್ಳೆ ಬತ್ತಾ ಇದ್ದೋ’ ಹೇಳಿ ಗ್ರೇಶಿ ಮಾಣಿ ಕಾಲಿಂಗಾದ್ದರ ಮೈಗೆ ಪೂರಾ ಹಿಡುಸಿ ಅಮ್ಮನ ಅಲ್ಲೇ ಬಿಟ್ಟು ಹಟ್ಟಿಂದ ಹೆರಬಂದ.
"ಅದಾ, ಕಾಲು ಶುದ್ದ ಆತದಾ..!" ಹೇಳಿದವು ರಂಗಮಾವ°, ಅಲ್ಲೇ -ಉದಿಯಪ್ಪಗಾಣ ಪೂಜಗೆ ಹೂಗು ಕೊಯ್ಕೊಂಡು ಇದ್ದವು. ಮತ್ತೆ ಶುಬತ್ತೆ ಬಂದು, ಟೇಪಿನ ನೀರಿಂಗೆ ಕಾಲಿನ ಹಿಡುದು, ಮೊಳಪ್ಪೊರೆಂಗೆ ತೊಳದು, ’ಶುದ್ದ’ ಆದ ಜಾಗೆಯ ’ಕ್ಲೀನು’(clean) ಮಾಡಿತ್ತಡ. ಅಷ್ಟಪ್ಪಗ ಸಮಾದಾನ ಆತು ಮಾಣಿಗೆ.
~~~~~

ಉದಿಯಪ್ಪಗಾಣ ಕಾಪಿಗೆ ಮಾಣಿ ಒಂದು ಹೋರ್ಲಿಕ್ಸು ಕುಡಿಯೆಡದಾ, ಬುದ್ದಿ ಬಪ್ಪಲೆ?
ಷೇಡಿಗುಮ್ಮೆ ಬಾವನ ಹಾಂಗೆ ಕೊತ್ತಂಬರಿಜೀರಿಗೆ ಕಷಾಯ ಮೆಚ್ಚ ಅವಂಗೆ. ತರವಾಡು ಮನೆಲಿ ಹೋರ್ಲಿಕ್ಸು ಹೊಡಿ ಎಲ್ಲಿಂದ ಬೇಕೆ? ಅದಕ್ಕೆ ಬರೇ ಹಾಲಿಂಗೆ ಶೆಕ್ಕರೆ ಹಾಕಿ ಕೊಟ್ಟತ್ತಡ ಶುಬತ್ತೆ.
’ಹಾಲೋ? ಯೇವ ಹಾಲು? ಪಾತಿಅತ್ತೆ ಆಗ ಸಗಣದ ರಾಶಿಲಿ ಕೂದಂಡು, ಸಗಣ ಹಿಡುದ ದನದ ಹತ್ತರೆ ಸಗಣ ಹಿಡುದ ಚೆಂಬಿಲಿ ಕರದ ಹಾಲು...! 
ಚಿಬಿ!!! ಎಂತ ಇದು, ಈ ಹಾಲಿನ ಕುಡಿವದಾ!!!’

ಇದಾಗ, ಬೆಂಗ್ಳೂರಿಲಿ ಇರ್ತ ಹಾಂಗೆ ಚೆಂದಕ್ಕೆ, ತೊಟ್ಟೆಲಿ ತುಂಬುಸಿದ, ಪ್ರಿಜ್ಜಿಲಿ ಮಡಗಿದ ಹಾಲಿದ್ದಲ್ದ, ಅದಾಯೆಕ್ಕು!’ ಹೇಳಿ ಹಟ ಮಾಡ್ಳೆ ಸುರು ಮಾಡಿದನಡ. ಇದು ಅದೇ ಹಾಲು, ಆಗ ಶಾಮಣ್ಣ ತಂದದು - ಹೇಳಿ ಎಷ್ಟೂ ಸಮಾದಾನ ಮಾಡಿರೂ ಕೇಳಿದ್ದ°ಯಿಲ್ಲೆಡ. ರಂಗಮಾವನೂ ಹಾಂಗೆ, ಏನೆಲ್ಲ ಮಂಕಡುಸಿ ನೋಡಿದವು, ಪಾತಿಅತ್ತೆದೇ ಸೇರಿತ್ತು, ವಿನುವಿಂಗುದೇ ಒಂದು ಗ್ಲಾಸು ಹಾಲು ಕೊಟ್ಟು ಕುಡಿಶಿ ತೋರುಸಿದವು, ವಿನುವಿಂಗೆ ಒಂದು ಗ್ಲಾಸು ಚೀಪೆ ಹಾಲು ಲಾಬವೇ ಹೊರತು, ಈ ಮಾಣಿ ಕುಡುದ್ದನಿಲ್ಲೆ. ಆತಂಬಗ, ಬೇಡದ್ರೆ ಬೇಡ ಹೇಳಿ ಶುಬತ್ತೆ ಆ ಹಾಲಿನ ಮುಗುಶಿತ್ತಡ.
ಅಂತೂ ಆ ದಿನ ಹೋರ್ಲಿಕ್ಸು ಇಲ್ಲೆ ಅವಂಗೆ. ಬುದ್ಧಿ ಬಂದಿಕ್ಕೋ!?, ಉಮ್ಮಪ್ಪ!!


ಮತ್ತೆ ಎರಡು ದಿನ ಶುಬತ್ತೆಯವು ಇದ್ದಿದ್ದವಲ್ದ, ಈ ಮಾಣಿ ಒಂದೇ ಒಂದು ಹನಿ ಹಾಲುದೇ ಕುಡುದ್ದನಿಲ್ಲೆಡ. ರಂಗಮಾವ ಮತ್ತೆ ಶಾಂಬಾವನತ್ರೆ ಕುಂಬ್ಳೆಂದ ಹಾಲು ತಪ್ಪಲೆ ಹೇಳಿದವಡ. ಹಾಂಗೆ ಶಾಂಬಾವ ಕುಂಬ್ಳೆಂದ ತೊಟ್ಟೆ ಹಾಲು ತಂದುಗೊಂಡು ಇದ್ದದಡ, ಇವಂಗೆ ಕುಡಿವಲೆ ಹೇಳಿ! ತೊಟ್ಟೆ ಹಾಲಿನ ತೊಟ್ಟೆಂದ ಒಡದು, ಕಾಸುದರ ಕಾಣದ್ದೇ ವಿನಃ ಹಾಲನ್ನೇ ಮುಟ್ಟಿಗೋಂಡು ಇತ್ತಿದ್ದ°ಯಿಲ್ಲೆಡ. ತರವಾಡು ಮನೆಗೆ ಸುರೂ ಅದು ತೊಟ್ಟೆ ಹಾಲು ತಂದದು!!

ಅಂತೂ ಮೂರು ದಿನ ನಿಂದು ಹೆರಟವು ಶುಬತ್ತೆಯವು. ’ಇನ್ನು ಇಲ್ಲಿಗೆ ಬತ್ತರೆ ತೊಟ್ಟೆ ಹಾಲು ತೆಕ್ಕೊಂಡೇ ಬಪ್ಪ ಅಮ್ಮಾ’ ಹೇಳಿ ಮಗ ಅಮ್ಮಂಗೆ ಜೋರು ಮಾಡಿಗೊಂಡು ಕಾರು ಹತ್ತಿನಡ.

~~~~

ಈಗ ಹೇಳಿ ನಿಂಗೊ.
ಇದರ್ಲಿ ತಪ್ಪು ಆರದ್ದು?
ದನದ ಪರಿಸರವ ಹೇಸಿಗೆ ಹೇಳಿ ತಿಳ್ಕೊಂಡು, ಅಲ್ಲಿಂದ ತಂದ ಹಾಲುದೇ ಹೇಸಿಗೆ - ಕುಡಿತ್ತಿಲ್ಲೆ ಹೇಳಿ ಹಟ ಮಾಡಿದ ಮಾಣಿದೋ?
ಅದರ ಮಕ್ಕೊಗೆ ಅಬ್ಯಾಸ ಮಾಡುಸಲೆ ಎಡಿಯದ್ದ ಶುಬತ್ತೆದೋ?
ಹಾಲು ತಂದು ಕೊಟ್ಟ ಶಾಂಬಾವಂದೋ?
ಅಲ್ಲ ಈ ಶುದ್ದಿ ಹೇಳಿದ ಒಪ್ಪಣ್ಣಂದೋ? ;-)
ಏ°?


ತಪ್ಪು ಹುಡ್ಕಲೆ ಅಲ್ಲ ಒಪ್ಪಣ್ಣ ಆತಾ ಹೇಳಿದ್ದು.!

ಆದರೂ, ಇಪ್ಪ ವಿಶಯ ಆದ ಕಾರಣ ನಿಂಗೊಗೂ ಗೊಂತಿರ್ಲಿ ಹೇಳಿ. ಅಷ್ಟೇ!
ಶುಬತ್ತೆಗೆ ತರವಾಡುಮನೆಗೆ ಬಂದಿಪ್ಪಗ ದನಗೊ ಹೇಳಿರೆ ಬಾರೀ ಪ್ರೀತಿ.
ಬೆಂಗ್ಳೂರು ಮನೆಲಿ ಇಪ್ಪಗಳುದೇ ಇದೇ ಪ್ರೀತಿ ಇದ್ದಿದ್ದರೆ ಬಹುಶಃ ಆ ಮಾಣಿಗೆ ಅಷ್ಟೊಂದು ಹೇಸಿಗೆ ಆವುತಿತಿಲ್ಲೆಯೋ ಏನೋ!
ಅಲ್ಲದೋ?

ಚೋದ್ಯ ಎಂತರ ಹೇಳಿರೆ, ರಂಗಮಾವಂಗೆ ತೊಟ್ಟೆಹಾಲು ಮೆಚ್ಚದ್ದೆ ದನದ ಹಾಲೇ ಆಯೆಕ್ಕಡ. ಓ ಮೊನ್ನೆ ಬೆಂಗ್ಳೂರಿಂಗೆ ಹೋಗಿಪ್ಪಗ ಬಾರೀ ಕಷ್ಟ ಆಯಿದಡ. ಕಣ್ಣಚಾಯ ಕುಡುದು ದಿನನೂಕಿದ್ದವಡ!!!



ಒಂದೊಪ್ಪ: ಹೇಸಿಗೆ ಇಪ್ಪದು ಮನಸ್ಸಿಲಿ, ಹಟ್ಟಿಲಿ ಅಲ್ಲ! ಭಾವನೆಯೇ ಇಲ್ಲದ್ರೆ ಜೀವನವೇ ಹೇಸಿಗೆ!! ಎಂತ ಹೇಳ್ತಿ?





ಸೂ: ದನಗಳ ಬಗೆಗೆ ನಮ್ಮ ಹಿರಿಯೋರಿಂಗೆ ಇದ್ದ ಪ್ರೀತಿಯ ಇನ್ನಾಣೋರಿಂಗೂ ಎತ್ತುಸಲೆ ಬೇಕಾಗಿ ನಮ್ಮ ಗುರುಗೊ ಆರಂಭ ಮಾಡಿದ ’ವಿಶ್ವಮಂಗಳ ಗೋ ಗ್ರಾಮ ಯಾತ್ರೆ’ ಈಗ ನಮ್ಮ ಊರಿಲಿ ಆಗಿ ಬತ್ತಾ ಇದ್ದಡ. ದೇಶಾದ್ಯಂತ ಈ ಯಾತ್ರೆ ಹೋಗಿ ದನಗಳ ಬಗೆಗೆ ಜಾಗೃತಿ ಕೊಡ್ತಡ. ಗುರುಗೊಕ್ಕೆ ಇಪ್ಪ ಕಾಳಜಿಯ ಅಂಶವನ್ನಾದರೂ ಶಿಷ್ಯಂದ್ರು ವಹಿಸುವ°, ಎಷ್ಟೋ ಶುಬತ್ತೆಯ ಮಕ್ಕಳ ಪ್ರೀತಿಲಿ ಹಟ್ಟಿಗೆ ಕರಕ್ಕೊಂಡು ಹೋಪ°.
ಬತ್ತಿರಲ್ದಾ?