ಹೆಜ್ಜೆಲಿ ಬಿದ್ದ ನೆಳವಿಂಗೂ ರೆಚ್ಚೆಲಿ ಕೂದ ನೆಳವಿಂಗೂ ಎಂತ ವೆತ್ಯಾಸ?

ಪಳಮ್ಮೆಗಳ ಶುದ್ದಿ ಓ ಮೊನ್ನೆ ಒಂದರಿ ಮಾತಾಡಿದ್ದು. ಓದಿದ್ದಿರನ್ನೇ? (ಓದದ್ರೆ ಇಲ್ಲಿದ್ದು, ಓದಲಕ್ಕು).

ಎರಡು ಸಮಾಂತರ ಪಳಮ್ಮೆಗಳ ಸೇರುಸಿ ಈ ಶುದ್ದಿ. ಎರಡುದೇ ವ್ಯಕ್ತಿತ್ವಂಗಳ ಹೇಳ್ತ ಪಳಮ್ಮೆಗೊ. ಎರಡ್ರಲ್ಲಿದೇ ’ನೆಳವು’(Fly) ಮಾದರಿ. ಎರಡುದೇ ಶುಬತ್ತೆಯ ಮಕ್ಕೊಗೆ ಹೇಸಿಗೆ ಅಪ್ಪ ಸಂದರ್ಬಂಗೊ ;-) . ಎರಡರಲ್ಲಿಯೂ ತಮಾಶೆ ಇದ್ದು.
ಪಳಮ್ಮೆ ೧: ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ:
ಮುಚ್ಚದ್ದೆ ಮಡಗಿದ ಹೆಜ್ಜೆ ಅಳಗೆಗೆ ನೆಳವು ಹಾರಿ ಬಂದು ಬಿದ್ದರೆ ಎಂತ ಗತಿ? ಹೆಜ್ಜೆ ಬೆಶಿ ಬೆಶಿ ಇದ್ದರೆ ಅದುದೇ ಊಟದೊಟ್ಟಿಂಗೆ ಸೇರಿಹೋಕು, ಅದು ಬೇರೆ.
ಹೆಜ್ಜೆ ಬೆಶಿ ಇಲ್ಲೆ ಹೇಳಿ ಆದರೆ? ಬಿದ್ದ ಆ ನೆಳವು ರಜ್ಜ ಹೊತ್ತು ಪೆಡಚ್ಚುತ್ತು. ಮತ್ತೆ ಅದರ ರೆಂಕೆ ಎಡೆಂಗೆ ಆ ಮಂದ ತೆಳಿ ಸೇರಿ ರೆಂಕೆ ಆಡುಸುಲೇ ಎಡಿತ್ತಿಲ್ಲೆ.
ಪಕ್ಕನೆ ನೋಡಿರೆ ಸತ್ತಿದೋ ಗ್ರೇಶೆಕ್ಕು, ಹಾಂಗೆ ಚೈತನ್ಯವೇ ಇಲ್ಲದ್ದೆ ತೇಲಿಗೊಂಡಿರ್ತು. ಜೀವ ಇದ್ದರೂ ಜೀವ ಇಲ್ಲದ್ದ ಹಾಂಗೆ, ಅಂತೇ ಬಿದ್ದುಗೊಂಡಿರ್ತು. ಬಿಡುಸಿಗೊಂಡು ಹೆರ ಹೋಪ ಕನಿಷ್ಠ ಪ್ರಯತ್ನವನ್ನೂ ಮಾಡದ್ದೇ! ಹುಟ್ಟಿದ ಲಾಗಾಯ್ತು ಮಾಡಿದ ’ರೆಂಕೆ ಆಡುಸುತ್ತ’ ಗುಣ ಮರದೇ ಹೋಯಿದಾ ಹೇಳಿ ಕಾಣ್ತು ಅದರ ನೋಡುವಗ.

ನಮ್ಮಲ್ಲಿ ಕೆಲವು ಜೆನವುದೇ ಹೀಂಗೆ.
ಮಾಡ್ಳೆ ತುಂಬ ಕೆಲಸ ಇದ್ದರೆ, ಅದು ಅವಕ್ಕೆ ಗೊಂತಿದ್ದರೂ, ಜೀವನಲ್ಲಿ ಯಾವುದೇ ಚೈತನ್ಯ ಇಲ್ಲದ್ದೋರ ಹಾಂಗೆ ಬಿದ್ದುಗೊಂಡು ಇರ್ತವು. ಒಟ್ಟು ಹೇಂಗಾರು ಜೀವನ ಸಾಗುತ್ತು ಹೇಳ್ತ ತತ್ವಲ್ಲಿ. ಆರತ್ರೂ ಸಮಗಟ್ಟು ವೆವಹರುಸುಲೂ ಇಲ್ಲೆ, ಆರನ್ನೂ ಜಾಸ್ತಿ ಹಚ್ಚಿಗೊಂಬಲೂ ಇಲ್ಲೆ, ಸಮಾಜದ ಯೇವ ಕಾರ್ಯಲ್ಲೂ ಜಾಸ್ತಿ ಹೊಂದಿಗೊಂಬಲೆ ಇಲ್ಲೆ- ಒಟ್ಟು ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ. ;-)

ಪಳಮ್ಮೆ ೨: ರಚ್ಚೆಲಿ ಕೂದ ನೆಳವಿನ ಹಾಂಗೆ (/ ಹಲಸಿನ ಗಡಿಲಿ ಕೂದ ನೆಳವಿನ ಹಾಂಗೆ):
ಹಲಸಿನ ಕಾಯಿ ಸಮಯಲ್ಲಿ, ಮೆಟ್ಟುಕತ್ತಿ ಮಡಿಕ್ಕೊಂಡು ಹಲಸಿನ ಗಡಿ ಮಾಡ್ತವು. ಇಡಿ ಹಲಸಿನ ಕಾಯಿಯ ಗಡಿ ಮಾಡಿ, ಗಡಿಯ ಸೊಳೆಗಳ ತೆಗದು ಪಾತ್ರಕ್ಕೆ ಹಾಕಿ ರಚ್ಚೆಯ ಕರೆಲಿ ಮಡಗುತ್ತವು. ನೆಳವು ಅಲ್ಲಿಗೂ ಎತ್ತುತ್ತು. ಹಲಸಿನ ಕಾಯಿ ಕೊರೆತ್ತವನ ಕೈಲಿ ಇಡೀಕ ಮೇಣ ಆದ ಮತ್ತೆಯೇ ಅಲ್ಲದೊ ಆ ನೆಳವು ಅವನ ಮೂಗಿನ ಮೇಲೆ ಕೂರ್ತದು. ತೊರುಸುಲೂ ಅಲ್ಲ, ಬಿಡ್ಳೂ ಅಲ್ಲ - ಅದವನ ಪರಿಸ್ಥಿತಿ.
ಅದಿರಳಿ, ಹಲಸಿನ ಗಡಿಲಿಯೋ, ರಚ್ಚೆಲಿಯೋ ಕರೆ ಕರೆಲಿ ಮೇಣ ಇರ್ತು.
ನೆಳವು ಹೋಗಿ ಅದರ್ಲೇ ಕೂದರೆ? ಅದರ ಕಾಲಿಂಗಿಡೀ ಮೇಣ. ಗಡಿಗೂ ಅದರ ಕಾಲಿಂಗೂ ಅವಿನಾಭಾವ, ಬೇರ್ಪಡಿಸುಲೇ ಎಡಿಯದ್ದ ಸಂಬಂಧ ಏರ್ಪಡುತ್ತು. ರೂಪತ್ತೆಗೂ ಗುಪ್ತಗಾಮಿನಿ ಧಾರವಾಹಿಗೂ ಆದ ಹಾಂಗೆ!
ಆದರೆ ಮನಸ್ಸು ಪೂರ ಸ್ವಚ್ಚಂದವಾಗಿ ಹಾರೆಕ್ಕು, ಹೆರ ಹೋಗಿ ಸ್ವತಂತ್ರ ಆಯೆಕ್ಕು ಹೇಳಿ ಯೋಚಿಸುತ್ತು.
ಹೆರ ಹೋಯೆಕ್ಕು ಹೇಳಿ ತನ್ನ ರೆಂಕೆಯ ಜೋರು ಜೋರು ಬಡಿತ್ತು, ಚಡಪಡಿಸುತ್ತು.. ಆದರೆ ಎಡಿತ್ತಿಲ್ಲೆ. ಹಲಸಿನ ಮೇಣ ಬಿಡ್ತಿಲ್ಲೆ.

ಕೆಲವು ಸರ್ತಿ ನವಗೆ ಯೇವದೋ ಕೆಲಸ ಮಾಡೆಕ್ಕು ಹೇಳಿ ಇರ್ತು. ಆವುತ್ತಿಲ್ಲೆ.
ಹತ್ತರಾಣ ನೆಂಟ್ರಮನೆ ಜೆಂಬ್ರಕ್ಕೆ ಹೋಯೆಕ್ಕು ಹೇಳಿ ಇರ್ತು, ಆದರೆ ಮನೆಲಿ ಬೇರೆ ಜೆನ ಇಲ್ಲೆ, ಆಳುಗೊ ಮೊದಲೇ ಇಲ್ಲೆ. ಹಟ್ಟಿಲಿ ಕರೆತ್ತ ದನ ಬೇರೆ.  ಎಂತರ ಮಾಡುಸ್ಸು? ಅಲ್ಲಿಗೆ ಹೋಯೆಕ್ಕು-ಇಲ್ಲಿಗೆ ಹೋಯೆಕ್ಕು ಗ್ರೇಶುದು. ಯೇವದೂ ಎಡಿತ್ತಿಲ್ಲೆ.
ಮನೆಲಿಪ್ಪ ಬೇರೆ ’ಬಂಧನಂಗೊ’ ಬಿಡ್ತಾ ಇಲ್ಲೆ. ಹಾಂಗಿರ್ತ ಕಥೆ, ಒಟ್ಟು ’ರಚ್ಚೆಲಿ ಕೂದ ನೆಳವಿನ ಹಾಂಗೆ’ ಆವುತ್ತು.


ನೋಡದಿರಾ?
ಎರಡು ಪಳಮ್ಮೆ. ವ್ಯಕ್ತಿ ಒಂದೇ - ಅದೇ ನೆಳವು.
ಒಂದು ದಿಕ್ಕೆ ಬರೇ ಉದಾಸಿನದ ಬಡ್ಡ. ಇನ್ನೊಂದು ದಿಕ್ಕೆ ಅತ್ಯಂತ ಚುರ್ಕು.
ಒಂದೇ ವ್ಯಕ್ತಿ. ಬೇರೆ ಬೇರೆ ವ್ಯಕ್ತಿತ್ವ.
ಕಾರಣ? ವ್ಯಕ್ತಿ ಇಪ್ಪ ಪರಿಸರ.

ಎಷ್ಟೇ ಚುರ್ಕಿನ ವೆಕ್ತಿ ಆದರೂ ಅವನ ಪರಿಸರ ಇಡೀ ಉದಾಸಿನದವೇ ಆದರೆ ಬಡ್ಡ° ಆವುತ್ತ°.
ಅದೇ ರೀತಿ ಉದಾಸಿನದ ಮಾಣಿ ಒಬ್ಬ ಚುರುಕ್ಕಿನ ಪರಿಸರಲ್ಲಿ ಬೆಳದರೆ ಅವ ಉಳುದವರೊಟ್ಟಿಂಗೆ ಸೇರಿ ಒಳ್ಳೆತ ಚುರುಕ್ಕು ಆವುತ್ತ°. ಅಲ್ಲದೋ? ನಮ್ಮ ಪರಿಸರ ಒಳ್ಳೆದಿರೇಕು ಹೇಳಿ ಅಜ್ಜಿಯಕ್ಕೊ ಹೇಳುಸ್ಸು ಇದಕ್ಕೆ ಬೇಕಾಗಿಯೇ!. ಅಲ್ಲದೋ?
ಏ°?
ಎಂತ ಹೇಳ್ತಿ?

ಶಂಬಜ್ಜನ ಎರಡು ಪಳಮ್ಮೆಗಳ ಸೇರ್ಸಿ ಪುಳ್ಳಿದು ಉಪಾಯಲ್ಲಿ ಒಂದು ಶುದ್ದಿ. ;-)

[ಮುಳಿಯಾಲದಪ್ಪಚ್ಚಿ ಓ ಮೊನ್ನೆ ವಿಟ್ಳಲ್ಲಿ ಸಿಕ್ಕಿ ಅಪ್ಪಗ ಪರಂಚಿದವು, ’ನಿನ್ನ ಶುದ್ದಿಗೊ ಬಯಂಕರ ಉದ್ದ ಆತು ಒಪ್ಪಣ್ಣ’ ಹೇಳಿ.  ಈ ಸರ್ತಿ ಚಿಕ್ಕ-ಚೊಕ್ಕ ಶುದ್ದಿ. ಈ ಸರ್ತಿ ಎಂತ ಹೇಳ್ತವು ನೋಡೆಕ್ಕು :-) ]

ಒಂದೊಪ್ಪ: ಪಳಮ್ಮೆ ಓದಿದ ಲೆಕ್ಕಲ್ಲಿ ಆದರೂ ಇಂದ್ರಾಣ ಹೆಜ್ಜೆಲಿ ನೆಳವು ಇದ್ದೋ ನೋಡಿಗೊಳ್ಳಿ. ;-)