ಒಪ್ಪಣ್ಣ ಎಂತ ಹೆಮ್ಮಕ್ಕಳ ಶುದ್ದಿ ಬರವಲೆ ಶುರುಮಾಡಿದ್ದು ಹೇಳಿ ಗ್ರೇಶಿಕ್ಕೆಡಿ ಆತೋ!
ನಮ್ಮೋರಲ್ಲಿ ಮನೆಯ ಹೆರಾಣ ಕಾರ್ಬಾರು ಹೆಚ್ಚಿಂದುದೇ ಗೆಂಡುಮಕ್ಕೊ ಮಾಡಿರುದೇ, ಒಳಾಣ ಕೆಲಸ, ಮೇಲುಸ್ತುವಾರಿ, ಕೆಲಸ ಎಲ್ಲ ಹೆಮ್ಮಕ್ಕಳದ್ದೇ. ಈ ಕಾರಣ ನಿತ್ಯಜೀವನಲ್ಲಿ ಅವರ ಪ್ರಭಾಕ್ಷೇತ್ರದ ಪಾಲು ಐವತ್ತು ಶೇಕಡಾ ಇದ್ದಲ್ದಾ? ಹಾಂಗಾಗಿ ರಜರಜ ಅದರ ಶುದ್ದಿಯುದೇ ಬಕ್ಕು. ಬಾರ ಹೇಳಿ ಏನಿಲ್ಲೆ! ಏ°?
ಯೇವತ್ತೂ ಮಾವಂದ್ರ ನೆಗೆ ಮಾಡಿ ಮಾಡಿ ಬೇಜಾರಾತು. ಇನ್ನು ರಜಾ ಅತ್ತೆಕ್ಕಳನ್ನುದೇ ನೆಗೆ ಮಾಡ್ಳೆ ಸುರುಮಾಡೆಕ್ಕು, ಮಾವಂದ್ರಿಂಗೆ ಕುಶಿ ಅಪ್ಪಲೆ ಬೇಕಾಗಿ ಆದರೂ. ;-) ಅಲ್ದೋ?
ಹಳೆಕಾಲಲ್ಲಿ ನಮ್ಮ ಊರು ಹೇಂಗಿತ್ತು ಹೇಳಿರೆ, ಹಳ್ಳಿ-ಪೇಟೆ ಈಗಾಣಷ್ಟು ಹತ್ತರೆ ಇತ್ತಿಲ್ಲೆ.
ಹಳ್ಳಿ ಒಳಾಣ ಜೀವನ ಹಳ್ಳಿಗೆ ದಕ್ಕಿತ. ಹಳ್ಳಿಲಿ ಉಪಯೋಗುಸುತ್ತ ಸಾಮಾಗ್ರಿಗೊ, ಅಲ್ಯಾಣ ಜೀವನ ಶೈಲಿಗೊ, ಆಂತರಿಕ ನಿಬಂಧನೆಗೊ ಎಲ್ಲ ಬೇರೆ ಬೇರೆ. ಸಂಪರ್ಕವೂ ಅಷ್ಟಾಗಿ ಇತ್ತಿಲ್ಲೆ ಇದಾ. ಹಾಂಗಾಗಿ ಕೇವಲ ಹತ್ತು ಮೈಲಿನ ಅಂತರಲ್ಲಿದೇ ಭಾಷೆ, ವೇಷ, ವೆವಸ್ತೆ, ಊಟ, ಉಪಚಾರಲ್ಲಿ ಕಂಡಾಬಟ್ಟೆ ವೆತ್ಯಾಸ ಇತ್ತು. ಈಗಾಣಷ್ಟು ಸಂಪತ್ತು ಜನರ ಕೈಲಿ ಓಡಾಡಿಗೊಂಡು ಇತ್ತಿಲ್ಲೆ. ಮುಖ್ಯವಾಗಿ ಹಳ್ಳಿಲಿ ಬಡಪ್ಪತ್ತು (ಬಡತನ) ಇತ್ತು.
ಮನೆಗೆಲ್ಲ ಪೇಟೆಂದ ವಸ್ತುಗೊ ಸಾಮಾನ್ಯವಾಗಿ ಬತ್ತೇ ಇಲ್ಲೆ. ಬಂದರುದೇ ಬಾರೀ ಅಪುರೂಪ. ಪೇಟೆಂದ ಎಂತಾರು ತಂದರೆ, ಅದರಲ್ಲಿಪ್ಪ ಪ್ರತಿಯೊಂದು ವಸ್ತುವನ್ನುದೇ ಉಪಯೋಗುಸುದೇ. ಯೇವದನ್ನುದೇ ಇಡ್ಕಲಿಲ್ಲೆ. ಹಳ್ಳಿಲೇ ಹುಟ್ಟಿ ಬೆಳದು, ಹಳ್ಳಿಲೇ ಜೀವನ ನಡೆಶಿದವಕ್ಕೆ ಪೇಟೆ ವಸ್ತುಗಳ ಮೇಲೆ ಕೊದಿ ಜಾಸ್ತಿ ಇದಾ!
ಬೆಲ್ಲವೋ, ಶೆಕ್ಕರೆಯೋ ಎಂತಾರು ತಂದರೆ, ಆ ತೊಟ್ಟೆಯ ಒಸ್ತ್ರ ಒಗವಗ ಒಗದು, ತಣಿಲಿಂಗೆ ಒಣಗುಸಿ, ಮಡುಸಿ ಮಡುಗ್ಗು. ಎಂತಾರು ತುಂಬುಸಲೆ ಬೇಕು ಹೇಳಿಗೊಂಡು.
ಅವಲಕ್ಕಿಯೋ, ಹೊದಳೋ ಎಂತಾರು ಕಾಗತಲ್ಲಿ ಕಟ್ಟಿ ಕೊಟ್ರೆ ಆ ಕಟ್ಟಿದ ಬಕ್ಕಿನಬಳ್ಳಿಯ ಮೇಗೆ ಕೊದಿ. ಅದರ ಸುರುಳಿಸುತ್ತಿ ತೆಗದು ಮಡಗ್ಗು, ಎಂತಾರು ಕಟ್ಟುಲೆ ಬೇಕಾವುತ್ತು ಹೇಳುಗು ಕೇಳಿರೆ. ಈಗ ಆ ನಮುನೆ ಕಟ್ಟುದು ಕಡಮ್ಮೆ, ಪೂರ ತೊಟ್ಟೆ ಬಯಿಂದಲ್ದ!
ಪುತ್ತೂರಿನ ಸಂಜೀವ ಶೆಟ್ಟಿಯಲ್ಲಿಂದ ಒಸ್ತ್ರವೋ, ಎಂತಾರು ಜವುಳಿ ತೆಗದರೆ ಅದರ ತುಂಬುಸಿ ತಂದ ತೊಟ್ಟೆಯ ಮೇಲೆ ಕೊದಿ. ವಸ್ತ್ರಂದ ಮೊದಲು ಅದರ ಮಡುಸಿ ಮಡಗ್ಗು. ಸಾಮಾನ್ಯ ನಮ್ಮ ಊರಿನ ಎಲ್ಲ ಬಟ್ಟಕ್ಕಳ ಟ್ರೇಡುಮಾರ್ಕು ಅದು, ಅಲ್ದೋ?
ಮಾರ್ಜಿನು ಪ್ರೀ ಅಂಗುಡಿಂದ ಕೊಡ್ತ ತೊಟ್ಟೆಯ - ಹರಿಯದ್ದ ಹಾಂಗೆ ಕಟ್ಟ ಬಿಡುಸಿ, ಒಳ ಇಪ್ಪ ಸಾಮಾನುಗಳ ಕರೆಲಿ ಮಡಗಿದ ಕೂಡ್ಳೆ - ಮಡುಸಿ ಮಡುಗ್ಗು. ದೊಡ್ಡ ತೊಟ್ಟೆ ಇದಾ, ಎಂತಕಾರು ಬೇಕಾವುತ್ತು ಹೇಳಿಗೊಂಡು.
ಮುಳಿಯದ ಮಾವನಲ್ಲಿಂದ ಚಿನ್ನವೋ, ಗೆಜ್ಜೆಯೋ ಎಂತಾರು ತಂದರೆ, ಅದರ ಮಡಿಕ್ಕೊಂಡಿಪ್ಪ ಪೆಟ್ಟಿಗೆ ಮೇಗೆ ಕೊದಿ. ಮೊದಾಲು ಅದರ ಚೆಂದ ನೋಡುಗು, ಮತ್ತೆ ಚಿನ್ನದ್ದು.
ಪುಳ್ಳಿಮಾಣಿಗೆ ಕುಡಿವಲೆ ಹೇಳಿಗೊಂಡು ಹೋರ್ಲಿಕ್ಸೋ ಮತ್ತೋ ತಂದರೆ, ಹೊಡಿ ಮುಗುದ ಕೂಡ್ಳೆ ಆ ಕುಪ್ಪಿಯ ತೊಳದು ಒಣಗುಸಿ ಮಡುಗ್ಗು, ಅದೊಂದು ಕೊದಿ. ಎಡಿಯಪ್ಪ ಈ ಹೆಮ್ಮಕ್ಕಳತ್ರೆ!!!
ಬಂಡಾಡಿ ಅಜ್ಜಿ ಅಂತೂ ಪುಳ್ಳಿಯಕ್ಕೊ ತಂದ ಜ್ಯೂಸಿನ ಕುಪ್ಪಿಯೋ, ನೀರಿನ ಕುಪ್ಪಿಯೋ ಎಲ್ಲ ತೆಗದು ಮಡಗಿದ್ದವಡ. ಪುತ್ತೂರಿಂಗೆ ಹೋವುತ್ತರೂ ಅದರ್ಲೇ ನೀರು ತುಂಬುಸಿ ಕುಡ್ಕೋಂಡು ಹೋಪದಡ.
ಹೀಂಗೆ ತೆಗದು ಮಡಗಿದ ತೊಟ್ಟೆಗಳ, ಕುಪ್ಪಿಗಳ ಎಲ್ಲ ಅಡಿಗೆಕೋಣೆ ಕರೆಲಿ ಒಂದು ದೊಡ್ಡ - ಗಡಿಯಾರವೋ ಎಂತಾರು ತಂದ - ತೊಟ್ಟೆಯ ಒಳ ಕ್ರಮಲ್ಲಿ ಮಡಿಕ್ಕೊಂಗು ಹೆಮ್ಮಕ್ಕೊ. ಅಂಬೆರ್ಪಿಂಗೆ ಎಂತಾರು ಬೇಕಾಗಿ ಬಂದರೆ ಕೊಡ್ಳೆ.
ಅಂತೂ, ಈಗ ಬೆಂಗ್ಳೂರಿನ ಶುಭತ್ತೆಯ ಮನೆಲಿ ಕಸವು ಕಸವು ಹೇಳಿಗೊಂಡು ಯೇವದರ ಎಲ್ಲ ಇಡ್ಕುತ್ತವೋ, ಹೆಚ್ಚಿಂದುದೇ ಅಂದು ನಮ್ಮೋರ ಹೆಮ್ಮಕ್ಕೊಗೆ ಕೊದಿಯ ವಿಷಯ ಆಗಿತ್ತು. ಎಲ್ಲವನ್ನುದೇ ಜೋಡುಸಿ ತೆಗದು ಮಡುಗುತ್ತ ಕಾರ್ಯ ನಮ್ಮ ಹಳಬ್ಬರಿಂಗೆ. ಶುಬತ್ತೆಯ ಮನೆಲಿ ಅದರ ಅಬ್ಬೆ ಒಂದು ತಿಂಗಳು ನಿಂದದರ್ಲಿ ರಾಶಿ ಕಸವು ತುಂಬಿತ್ತಡ, ತೊಟ್ಟೆ-ಕುಪ್ಪಿ-ಬಳ್ಳಿಗೊ. ಅವು ಹೆರಡುವನ್ನಾರ ಇಡ್ಕಲೆ ಎಡಿಗಾಯಿದಿಲ್ಲೆ ಅದಕ್ಕೆ. ಅಲ್ಲಿ ಕಸವು ಇಡ್ಕಲೂ ಪೈಸೆ ಕೊಡೆಕ್ಕು. ಪಾಪ!
ಮೊದಲಾಣ ಕಾಲಲ್ಲಿ, ನಿತ್ಯಜೀವನಕ್ಕೆ ಉಪಯೋಗುಸಿಗೊಂಡು ಇದ್ದದು ಹಳ್ಳಿ ವಸ್ತುಗಳನ್ನೇ, ಹೆಚ್ಚಾಗಿ. ನಿತ್ಯೋಪಯೋಗಕ್ಕೆ ಬೇಕಷ್ಟು ಮನೆಲೇ ಮಾಡಿಗೊಂಗು. ಉದ್ದು, ಹಸರು, ಮೆಣಸು, ತರಕಾರಿ, ತೆಂಗಿನ ಕಾಯಿ, ಅಕ್ಕಿ, ಅದು ಇದು - ಯೇವದುದೇ ಪೇಟೆಂದ ತಂದು ಉಪಯೋಗುಸುತ್ತ ಪರಿವಾಡಿ ಇತ್ತಿಲ್ಲೆ. ಎಲ್ಲ ಮನೆದೇ.
ಅತಿಮೀರಿ ಮನೆಲಿ ಇಲ್ಲೆ ಹೇಳಿ ಆದರೆ, ಆಚಮನೆಂದ ತಪ್ಪದು. ಅಲ್ಲದ್ರೆ ನೆಂಟ್ರಲ್ಲಿಂದ. ಅಲ್ಲಿ ಇಲ್ಲದ್ದರ ಇಲ್ಲಿಂದ ತೆಕ್ಕೊಂಡೋಗಿ ಕೊಡುದು. ಪೈಸದ ಪರಿಕಲ್ಪನೆ ಇಲ್ಲದ್ದೇ.
ಈ ಕೊಡು-ಕೊಳ್ಳುವಿಕೆ ಇದ್ದಲ್ದ, ಅದುವೇ ನೆರೆಕರೆಯ ಸಂಬಂಧವ ಗಟ್ಟಿ ಮಾಡುದು. (ಅಪುರೂಪಕ್ಕೆ ಕೆಲವು ಸರ್ತಿ ಹಾಳು ಮಾಡುದುದೇ ಇದ್ದು, ಅದು ಬೇರೆ.) ಗೆಂಡುಮಕ್ಕೊ ಅವರ ಗಟ್ಟಿ ಒಯಿವಾಟಿಂಗೆ (ವ್ಯವಹಾರಕ್ಕೆ) ಬೇಕಾದ ವಸ್ತುಗಳ ವಿನಿಮಯ ಮಾಡಿಗೊಳ್ತವೋ, ಅದೇ ನಮುನೆ ಹೆಮ್ಮಕ್ಕಳದ್ದುದೇ ಕಾರ್ಬಾರು ಇರ್ತು. ಹೆಚ್ಚಿನವು ಗಮನುಸದ್ದೇ ಇದ್ದರೂ, ಹಳ್ಳಿಯ ಬೈಲ ಜೀವನ ಅರಡಿವವಕ್ಕೆ ಇದರ ಸರೀ ಪರಿಚಯ ಇಕ್ಕು.
ನಮ್ಮ ಮನೆಲಿ ಆದ್ದು, ನವಗೆ ಆಗಿ ಒಳುದರೆ ಆಚಮನಗೆ, ಅಲ್ಲಿ ಎಂತಾರು ನೆಟ್ಟಿತರಕಾರಿ ಮಾಡಿದ್ದು ಕೊಯಿವ ಸಮಯಲ್ಲಿ ಈಚ ಮನೆಗೆ ಕೊಡುದು, ಉಪ್ಪಿನಕಾಯಿ ಮೆಡಿ ಧಾರಾಳ ಆದರೆ ಈ ಸರ್ತಿ ಮೆಡಿಯೇ ಸಿಕ್ಕದ್ದ ನೆಂಟ್ರಮನೆಗೆ, ಆಚಕ್ಕಂಗೆ ಚೆಕ್ಕರ್ಪೆ ಇಷ್ಟ ಹೇಳಿ ಗೊಂತಾದ ಈಚಕ್ಕ ಕೊಯಿದ ದಿನ ಎರಡು ತೆಕ್ಕೊಂಡು ಹೆರಡುಗು, ಬಪ್ಪಗ ಅಲ್ಲಿಂದ ಇಷ್ಟದ ಅರುವತ್ತೆಸಳಿನ ಮಲ್ಲಿಗೆ ಗೆಡುವೋ, ಎರವಂತಿಗೆ ತುಂಡೋ ಎಂತಾರು ಹಿಡ್ಕೊಂಡು ಬಕ್ಕು, ದೊಡ್ಡಜಾತಿ ದನವೂ, ದೊಡ್ಡ ಮನಸ್ಸೂ ಇಪ್ಪ ಹೆಮ್ಮಕ್ಕ ಕರವಲಿಲ್ಲದ್ದ ಮನೆಗೆ ಒಂದು ಕುಡ್ತೆ ಹಾಲು ತೆಕ್ಕೊಂಡು ಹೊತ್ತಪ್ಪಗ ಹೆರಡುಗು, ಬಪ್ಪಗ ಅಲ್ಲಿಂದ ನಿನ್ನೇಣ ಪೇಪರು ಹಿಡ್ಕೊಂಡು ಬಕ್ಕು - ಪದಬಂದ ತುಂಬುಸಲೆ, ಜೆಂಬ್ರದ ಮನೆಲಿ ಒಳುದ ಮೇಲಾರವ ಒಂದು ಪಾತ್ರಲ್ಲಿ ಹಾಕಿ ಆಚೀಚ ಮನೆಗೆ ಕೊಡುಗು, ಮರದಿನ ಆ ಪಾತ್ರಲ್ಲಿ ಮಲ್ಲಿಗೆ ಮುಗುಟೋ ಎಂತಾರು ತುಂಬುಸಿ ಒಪಾಸು ಎತ್ತುಸುಗು, - ಹೀಂಗಿಪ್ಪ ಒಂದು ಅವಿನಾಭಾವ ಸಂಬಂಧ ನಮ್ಮೂರ ನಮ್ಮೋರ ಹೆಮ್ಮಕ್ಕೊಗೆ ಇರ್ತು.
ನಮ್ಮ ಬೈಲಿನ ಯೇವದಾರು ಮನೆಗೆ ಬಂದಿಪ್ಪಗ ಮದ್ಯಾನ ಊಟಕ್ಕೆ ನಿಂದರೆ ಗೊಂತಾವುತ್ತು. ತರಕಾರಿಯ ವೈವಿಧ್ಯದ ಊಟ. ಎಲ್ಲವೂ ಅವರ ಮನೆಲೇ ಆದ್ದದು ಆಗಿರ. ಕೆಲವೆಲ್ಲ ನೆರೆಕರೆಯ ವಸ್ತುಗಳೂ ಇಕ್ಕು.
ಆಚಕರೆಂದ ತಂದ ಬಸಳೆಯ ಕೊದಿಲೋ, ಈಚಕರೆಂದ ಕೊಟ್ಟ ಮುಂಡಿಯೋ, ಪಾರೆ ಮಗುಮಾವ ತಂದ ಅಮುಂಡವೋ (ದೊಡ್ಡ ಜಾತಿಯ ಬಾಳೆಕಾಯಿ - ಕೊದಿಲೋ, ಪೋಡಿಯೋ ಎಂತಾರು ಮಾಡ್ತ ಕ್ರಮ), ಪಾಲಾರಣ್ಣನ ಮನೆಂದ ಕೊಟ್ಟು ಕಳುಸಿದ ಬೀಜದ ಬೊಂಡೋ (- ಅವಕ್ಕೆ ಬೀಜದ ಗುಡ್ಡೆ ಇದ್ದಿದಾ ದೊಡ್ಡದು), ಶೇಡಿಗುಮ್ಮೆ ಬಾವನಲ್ಲಿಂದ ಬಂದ ಗುಜ್ಜೆಯೋ-( ಅವನಿಂದಲೂ ಉರೂಟಿಂದು), ಆಚಮನೆ ದೊಡ್ಡಣ್ಣ ತಂದು ಕೊಟ್ಟ ಹಲಸಿನಣ್ಣಿನ ಪಾಯ್ಸವೋ, ಪಂಜೆ ಚಿಕ್ಕಮ್ಮನಲ್ಲಿಂದ ಬಂದ ಅಳತ್ತೊಂಡೆಯ ಮೇಲಾರವೋ, ಮುಳಿಯಾಲದಪ್ಪಚ್ಚಿಯಲ್ಲಿಂದ ಬಂದ ಹಲಸಿನ ಹಪ್ಪಳವೋ, ಶೇಣಿ ಬಾವನಲ್ಲಿಂದ ತಂದ ಬದನೆ ಬೋಳುಕೊದಿಲೋ, ಅಜ್ಜಕಾನ ಬಾವನಲ್ಲಿಂದ ತಂದ ತೊಂಡೆಕಾಯಿಯ ತಾಳೋ, ಮಾಷ್ಟ್ರುಮನೆಂದ ಬಂದ ದಾರೆಯೋ, ದೀಪಕ್ಕನಲ್ಯಾಣ ಪೀರೆಯೋ - ಎಂತಾರು ಇದ್ದೇ ಇಕ್ಕು.
ಇದೆಲ್ಲ ಅವರ ಮನೆಂದ ಪ್ರೀತಿಲಿ ಕಳುಸಿಕೊಟ್ಟ ವಸ್ತುಗೊ. ಅದಕ್ಕೆ ಪ್ರತಿಯಾಗಿ ಈ ಮನೆಂದಲೂ ಎಂತಾರು ಹೋಗಿರ್ತು, ಹೋಗಿರದ್ರೆ ಹೋವುತ್ತು - ಒಂದಲ್ಲ ಒಂದು ಕಾಲಲ್ಲಿ.
ಎರಡಕ್ಕೂ ಪೈಸೆ ಲೆಕ್ಕ ಹಾಕಲೆ ಇಲ್ಲೆ. ಈಗಾಣ ಭಾಷೆಲಿ ಹೇಳ್ತರೆ ಅದುದೇ ’ಫ್ರೀ’ ಇದುದೇ ’ಫ್ರೀ’!!
ಈ ಕೊಡುಕೊಳ್ಳುವಿಕೆಂದಾಗಿ ಎಲ್ಲ ಮನೆಲಿದೇ ಎಲ್ಲ ಕಾಲಲ್ಲಿದೇ ಸಮೃದ್ಧ ಊಟ ಇರ್ತು, ಒಂದ್ಸಮಯ ಒಂದು ಮನೆಲಿ ಯೇವದೇ ತರಕಾರಿ ಇಲ್ಲದ್ರೂ ನಡೆತ್ತು, ಆಚೀಚ ಮನೆಂದ ಬಂದಿರ್ತು. ಅತ್ತೆ ಸೊಸೆ ಸಂಬಂಧದಷ್ಟೇ ಗಟ್ಟಿಯಾಗಿ ನೆರೆಕರೆ ಸಂಬಂಧವೂ ಬಂದಿರ್ತು. ತಲೆತಲಾಂತರಂದ.ಇಂತಹ ಉತ್ತಮ ಸಂಬಂಧವ ನಡೆಶಿಗೊಂಡು ಬಂದದು ನಮ್ಮ ಮನೆಯ ಹೆಮ್ಮಕ್ಕಳ ಹೆಮ್ಮೆಗಾರಿಕೆಯ ವಿಷಯ. ಇದರ ಬಗ್ಗೆ ಎರಡು ಮಾತಿಲ್ಲೆ. ಮೆಚ್ಚೆಕ್ಕಾದ್ದೇ.
ಈ ಕೊಡುಕೊಳ್ಳುವಿಕೆಲಿ ಒಂದು ಗಮ್ಮತ್ತಿನ ಸಂಗತಿ ಇದ್ದು.
ಇಷ್ಟೆಲ್ಲ ಕೊಡ್ತ ಹೆಮ್ಮಕ್ಕೊ ಎಷ್ಟೇ ದಾರಾಳಿಗೊ ಆದರೂ, ಒಂದೊಂದು ವೀಕುನೆಸ್ಸು ಇದ್ದೇ ಇರ್ತು. ಅದೆಂತದು?
ಒಂದು ಮನೆಂದ ಇನ್ನೊಂದು ಮನೆಗೆ ಎಂತಾರು ವಸ್ತು ಕೊಡ್ತರೆ, ಅತೀ ಅಗತ್ಯ ಬಂದರೆ ಮಾಂತ್ರ ಆಗ ಹೇಳಿದ ಪ್ರೀತಿಯ ವಸ್ತುಗಳ ತೆಗಗಷ್ಟೆ. ನಾಕು ಅಳತ್ತೊಂಡೆ ಮಾಂತ್ರ ಆದರೆ ಅಂತೇ ಬಾಳಬಳ್ಳಿಲಿ ಕಟ್ಟಿ ಕೊಡುಗಷ್ಟೆ, ಅದರೊಟ್ಟಿಂಗೆ ಹತ್ತು ತೊಂಡೆಕಾಯಿದೇ ಕೊಡ್ಳಿದ್ದರೆ ಮಾಂತ್ರ ತೊಟ್ಟೆಲಿ ಹಾಕಿ ಕೊಡುಗು, ಅನಿವಾರ್ಯ ಆದ ಕಾರಣ. ತೊಟ್ಟೆ ಅಷ್ಟು ಬೆಲೆಬಾಳುವ ವಸ್ತು ಅಲ್ದೋ? ಹಾಂಗೆ. ಬಳ್ಳಿಲಿ ಅಳತ್ತೊಂಡೆ ಅಷ್ಟು ಕಮ್ಮಿ ಆದರೂ ಚಿಂತೆ ಇಲ್ಲೆ, ತೊಳದು ಒಣಗುಸಿ ತೆಗದುಮಡಗಿದ ತೊಟ್ಟೆ ಕಟ್ಟಲ್ಲಿ ಒಂದು ತೊಟ್ಟೆ ಕಮ್ಮಿ ಆತನ್ನೆ, ಅದು ರಜಾ ಬೇಜಾರಿನ ಬಗೆ. ;-(
ಓ ಮೊನ್ನೆ ಮಾಷ್ಟ್ರಮನೆ ಅತ್ತೆ ಹೇಳಿದ ಶುದ್ದಿ ಒಂದಿದ್ದು, ಹೇಳ್ತೆ ಕೇಳಿ:
ಚೂರಿಬೈಲು ದೀಪಕ್ಕನ ಮನೆಗೆ ಒಂದರಿ ಅದರ ಚಿಕ್ಕಮ್ಮನ ಮಗ ಹೋಗಿಪ್ಪಗ ಒಂದು ಕುಪ್ಪಿ ಬರ್ತಿ ತುಪ್ಪ ಕೊಟ್ಟತ್ತಡ. ಕರವದು ಕಮ್ಮಿ ಇಪ್ಪ ನೆಂಟ್ರ ಮನಗೆ ತುಪ್ಪ ಕೊಟ್ಟು ಕಳುಸುದು ಇಪ್ಪದೇ. ಅಲ್ಲದೋ? ಒಳ್ಳೆ ಪರಿಮ್ಮಳದ ಉತ್ಕೃಷ್ಟ ಗುಣಮಟ್ಟದ ತುಪ್ಪ. ಡಾಕ್ಟ್ರುಬಾವಂಗೆ ಆಯುರ್ವೇದದ ಮದ್ದು ಕಾಸಲುದೇ ಅಪ್ಪಂತದ್ದು. ಪೇಟೆಲಿ ಸುಮಾರು ರುಪಾಯಿ ಎಲ್ಲ ಅಕ್ಕದಕ್ಕೆ, ಪ್ರೀತಿಲಿ ಕೊಟ್ಟದಕ್ಕೆ ಕ್ರಯ ನೋಡ್ಳಾಗ ನಾವು! ಒಂದು ಕೇಜಿ ಹೋರ್ಲಿಕ್ಸು ಹೊಡಿ ಹಿಡಿತ್ತ ಕುಪ್ಪಿಲಿ ಕಂಠಮಟ್ಟ. ಕೊಡುವಗ ಒಂದು ಮಾತು ಹೇಳಿತ್ತಡ: "ಇನ್ನಾಣ ಸರ್ತಿ ಬಪ್ಪಗ ಕುಪ್ಪಿ ತಾ, ನೆಂಪಿಲಿ, ಮರೇಡಾ.. ಏ°?" ಹೇಳಿ. ಪಾಪ, ಆ ಮಾಣಿಗೆಂತ ಗೊಂತು, ತುಪ್ಪಂದಲೂ ಕ್ರಯ ಆ ಕುಪ್ಪಿಗೆ ಇಪ್ಪದು ಹೇಳಿಗೊಂಡು. ಅಲ್ಲದ್ರುದೇ, ಆ ಹೆಮ್ಮಕ್ಕಳ ದೃಷ್ಟಿಲಿ ಇನ್ನೂರು ರುಪಾಯಿ ತುಪ್ಪಂದ ಎರಡುರುಪಾಯಿಯ ಕುಪ್ಪಿ ಹೆಚ್ಚು ಮುಖ್ಯ.
ತುಪ್ಪಕ್ಕೆಲ್ಲ ಆರು ಕ್ರಯ ಹಿಡಿತ್ತ° ಬೇಕೆ, ಕುಪ್ಪಿ ಆದರೆ ಇನ್ನೊಂದರಿ ಹೋರ್ಲಿಕ್ಸು ತಂದರೆ ಮಾಂತ್ರ ಸಿಕ್ಕುಗಷ್ಟೆ. ಅಲ್ಲದೋ?
ರೂಪತ್ತೆ ಮಗ ಜರ್ಮನಿಗೆ ಹೆರಡುವಗ, ಒಳ್ಳೆ ಪರಿಮ್ಮಳದ ಮಾವಿನ ಮೆಡಿ ಉಪ್ಪಿನಕಾಯಿಯ ಪ್ಲೇಶ್ಟಿಕು ಬರಣಿಲಿ (ಕುಪ್ಪಿಲಿ) ತುಂಬುಸಿ ಕೊಟ್ಟತ್ತಡ ಪಂಜದ ಅಜ್ಜಿ. ’ಈ ಪ್ಲೇಶ್ಟಿಕು ಕುಪ್ಪಿಯ ಒಪಾಸು ತರೆಕ್ಕು ಮಾಣೀ’ ಹೇಳಿ ರಾಗ ಎಳದೇ ಎಳದತ್ತಡ ಕೊಡುವಗ. ’ವಿದೇಶಲ್ಲಿ ಅದರ ಎಲ್ಲ ಇಡ್ಕುದೇ, ತಪ್ಪಲಿಲ್ಲೆ, ತಪ್ಪಲೆ ಕರ್ಚು ಉಪ್ಪಿನಕಾಯಿಂದ ಜಾಸ್ತಿ ಅಕ್ಕು’ ಹೇಳಿದ ಮಾಣಿಯ ಮೇಲೆ ಒಳ್ಳೆತ ಕೋಪಮಾಡಿಗೊಂಡಿದು. ಅಷ್ಟೆಲ್ಲ ಕುಪ್ಪಿಯ ಇಡ್ಕುತ್ತರೆ ಅದರ ತಪ್ಪಲೆ ಹೇಳಿಗೊಂಡೇ ಅಲ್ಲಿಗೆ ಹೆರಡ್ತ ಏರ್ಪಾಡು ಮಾಡಿದ್ದಡ ಆ ಅಜ್ಜಿ, ಅಜ್ಜಕಾನ ಬಾವ° ಹೇಳಿದ್ದು. ಸರೀ ಗೊಂತಿಲ್ಲೆ.
ಅಂತೂ ಇಂತೂ, ಈಗಾಣ ಕಾಲಕ್ಕೆ ಎಷ್ಟೇ ತಮಾಶೆ ಕಂಡರುದೇ, ಅಂದ್ರಾಣ ಕಾಲಘಟ್ಟಕ್ಕೆ ಬೇಕಾದ ಹಾಂಗೆ ಜೀವನ ನಡೆಶಿ, ಲಭ್ಯ ಇಪ್ಪ ವಸ್ತುಗಳ ಚೆಂದಕ್ಕೆ ಜೋಡುಸಿಗೊಂಡು, ಗೆಂಡನ ವೆವಹಾರಕ್ಕೆ ಸಹಕಾರಿಣಿ ಆಯ್ಕೊಂಡು, ಮನೆ, ನೆಂಟ್ರು, ನೆರೆಕರೆ ಎಲ್ಲವನ್ನೂ ಸಂಬಾಳಿಸಿಗೊಂಡುಬಂದ ಹೆಮ್ಮಕ್ಕಳ ಸಾಮರ್ಥ್ಯ ಗ್ರೇಶಿರೆ ಒಳ್ಳೆ ಕುಶೀ ಅಪ್ಪದು ಕೆಲವು ಸರ್ತಿ. ಈಗಾಣ ಕೂಸುಗೊಕ್ಕೆ ಇದೆಲ್ಲ ಅರಡಿಗೋ? ತರವಾಡುಮನೆ ಶಾಂಬಾವನ ಹೆಂಡತ್ತಿ ಅಂತೂ ಎಲ್ಲ ಕುಪ್ಪಿಯನ್ನುದೇ ಇಡ್ಕುದೇ, ಪಾತಿಅತ್ತೆಯ ಹಾಂಗೆ ತೊಳದು ಒಣಗುಸಲೆ ಗೊಂತೇ ಇಲ್ಲೆ.
ಅಂಬಗಾಣ ಜೀವನದ ಅಗತ್ಯತೆಂದಾಗಿ ಕೆಲವೆಲ್ಲ ವಿಶಯ ಕಲ್ತಿದವು, ಈಗಂಗೆ ರಜಾ ಆಧುನಿಕತೆಯ ಗಾಳಿ ಬತ್ತಾ ಇದ್ದು, ಬರೆಕ್ಕಷ್ಟೆ. ಪೂರ್ತಿ ಬಂದರೆ ಮತ್ತೆ ಬೆಂಗ್ಳೂರಿನ ಶುಬತ್ತೆಯ ಹಾಂಗಕ್ಕು, ಅದು ಬೇಡ. ರಜ ಹೀಂಗಿದ್ದರೇ ಚೆಂದ. ಎಂತ ಹೇಳ್ತಿ?
ಒಂದೊಪ್ಪ: ಈಗ ಪೇಟೆಲಿ ಕಸದಿಂದ ರಸ ಹೇಳಿ ಬೊಬ್ಬೆ ಹೊಡವದು ಅಂದ್ರಾಣ ಅಜ್ಜಿಯಕ್ಕಳ ಇದೇ ಕ್ರಮವ ಅಲ್ದೋ?