ನವನವೋನ್ಮೇಷ ಶಾಲಿನೀ : ನವರಾತ್ರಿಯ ಚಾಮಿ ನೀ...

ಒರಿಷಕ್ಕೆ ಎರಡು ನವರಾತ್ರಿ.
ಒಂದು ವಸಂತ ನವರಾತ್ರಿ, ಚೈತ್ರಮಾಸ (ವಸಂತಋತು)ಲ್ಲಿ ಬಪ್ಪದು, ರಾಮನ ಹಬ್ಬ. ಉತ್ತರಲ್ಲಿ ಎಲ್ಲ ಇದರ ಬಗೆಗೆ ರಜ್ಜ ಒಲವು ಜಾಸ್ತಿ.
ಇನ್ನೊಂದು ಶರನ್ನವರಾತ್ರಿ, ಆಶ್ವಿಜ(ಶರದೃತು)ಲ್ಲಿ ಬಪ್ಪದು, ದುರ್ಗೆಯ ಹಬ್ಬ. ನಮ್ಮ ಊರಿಲಿ, ಮೈಸೂರಿಲಿ, ವಿಜಯನಗರಲ್ಲಿ (ಅಂದು - ವೈಭವದ ಕಾಲಲ್ಲಿ), ಬಂಗಾಳಲ್ಲಿ, ಎಲ್ಲ ಇದರ ಆಚರಣೆ ಜಾಸ್ತಿ. ನಮ್ಮೋರಲ್ಲಿದೇ ಇದು ರಜ್ಜ ಗೌಜಿಯೇ.
{ಇನ್ನೊಂದಿದ್ದಡ ಮೂರ್ನೇದು, ಸಣ್ಣ ಮಟ್ಟಿಂದು, ವರಾಹ ನವರಾತ್ರಿ ಹೇಳಿಗೊಂಡು - ಹಿಮಾಚಲದ ಹೊಡೆಂಗೆ ಆಚರಣೆ ಮಾಡ್ತದು, ಅದರ ಬಗೆಗೆ ಅಷ್ಟಾಗಿ ಗೋಷ್ಠಿ ಇಲ್ಲೆ, ಬಿಡಿ. }

ಸಂಸ್ಕೃತಲ್ಲಿ ಒಂದು ಶಬ್ದಕ್ಕೆ ಕನಿಷ್ಠ ಒಂಬತ್ತು ಅರ್ತ ಇರ್ತು ಹೇಳಿ ಚೌಕ್ಕಾರು ಮಾವ ಹೇಳ್ತವು.
ನವ ಹೇದರೆ ಒಂಬತ್ತು ಹೇಳಿಗೊಂಡು ಒಂದರ್ತ, ’ಹೊಸತ್ತು’ ಹೇಳಿ ಇನ್ನೊಂದರ್ತ. ಇನ್ನು ಎಷ್ಟೆಷ್ಟಿದ್ದೋ, ಅವರತ್ರೇ ಕೇಳೆಕ್ಕಷ್ಟೆ!

ನಮ್ಮ ಹೊಡೆಲಿ ಹೆಚ್ಛಾಗಿ ಆಚರಣೆ ಇಪ್ಪದು ದುರ್ಗೆದು. 'ನವರಾತ್ರಿ' ಹೇಳಿರೆ ಅದುವೇ ನವಗೆ. ತುಳುವಿಲಿ 'ಮಾರ್ನಮಿ / ಮಾರ್ಣೆಮಿ' ಹೇಳುಗು. ದೈವೀ ಸ್ವರೂಪಿಣಿ ಆದ ಅಮ್ಮ (ಶಕ್ತಿದುರ್ಗೆ) ರಾಕ್ಷಸರ ಸಂಹಾರ ಮಾಡಿ, ಮನುಕುಲದ ಮಕ್ಕೊಗೆಲ್ಲ ನೆಮ್ಮದಿ, ನವ(ಹೊಸ)ಚೈತನ್ಯ ತಂದುಕೊಟ್ಟ ಒಂಬತ್ತು ದಿನವ ನವರಾತ್ರಿ ಹೇಳಿ ಆಚರಣೆ ಮಾಡ್ತ ಕ್ರಮ.

ಈಗ ಈ ನವರಾತ್ರಿ. ಮಳೆಗಾಲ ಬೇರೆ, ಒಂದರಿಯಾಣ ಸೋಣೆಯ ಜೆಂಬ್ರಂಗೊ ಎಲ್ಲ ಕಳುದು ರಜ್ಜ ಉಸುಲು ತೆಗವಲೆ ಪುರುಸೊತ್ತು ಸಿಕ್ಕುವ ಕಾಲ! ಹಾಂಗಾಗಿ ಈ ಸರ್ತಿ ಒಪ್ಪಣ್ಣಂಗೂ ಓದಲೆ ಪುರುಸೊತ್ತು ಸಿಕ್ಕಿತ್ತಿದಾ. ಹಳೇ ಪುಸ್ತಕ ಒಂದರ ಮಾಷ್ಟ್ರುಮಾವನತ್ರೆ ಕೇಳಿ, ತೆಕ್ಕೊಂಡು ಓದಿದೆ. ಅದರಲ್ಲಿ ನವರಾತ್ರಿಯ ಬಗ್ಗೆ ರಜ್ಜ ವಿವರವಾಗಿ ಬರಕ್ಕೊಂಡು ಇತ್ತು. ಎನಗೆ ಅರ್ತ ಆದಷ್ಟು ಹೇಳ್ತೆ, ಮತ್ತೆ ಒಳುದ್ದರ ನಿಂಗೊ ಹೇಳಿ.

ಪ್ರಪಂಚಲ್ಲಿ ಎಲ್ಲದರಿಂದ ಮೊದಲು ಕಾಂಬದು ಅಮ್ಮ. ಅಕೇರಿ ಒರೆಂಗೆ ನೆಂಪೊಳಿವದುದೇ ಅಮ್ಮನನ್ನೇ.
ಪ್ರಶ್ನೆಗೆ ನಿಲುಕದ್ದು. ಯೋಚನೆಗೆ ಎತ್ತದ್ದು - ಅಮ್ಮ. ಅಮ್ಮನಿಂದಾಗಿಯೇ ವ್ಯಕ್ತಿ, ವ್ಯಕ್ತಿತ್ವ - ಎರಡುದೇ. ಬಾಬೆಯೊಟ್ಟಿಂಗೆ ಅಮ್ಮನ ವ್ಯಕ್ತಿತ್ವ ಜನನ. ಬಾಬೆ ಬೆಳದು ದೊಡ್ಡ ಆದ ಹಾಂಗೆಯೇ ಅಮ್ಮನುದೇ ಬೆಳೆತ್ತಾ ಹೋವುತ್ತು. ಎಷ್ಟೇ ದೊಡ್ಡ ಜೀವಿಗೂ ಅಮ್ಮ ಅಮ್ಮನೇ. ಎಷ್ಟೇ ಹಳಬ್ಬಂಗೂ ಅಮ್ಮ ಇದ್ದೇ ಇದ್ದು. ಎಲ್ಲೊರಿಂದ ಮೊದಲು ಬಂದದೂ ಅಮ್ಮನೇ.

ರಕ್ಕಸರ ಉಪದ್ರ ಜೋರು ಆದ ಸರ್ತಿ ಒಂದರಿ ಲೋಕನಿಯಂತ್ರಕರಾದ ಬ್ರಹ್ಮ ವಿಷ್ಣು ಮಹೇಶ್ವರರು - (ತ್ರಿಮೂರ್ತಿಗೊ) ಶಕ್ತಿಸ್ವರೂಪಿಣಿ ಈ ಲೋಕ ಅಮ್ಮನ (ಜಗನ್ಮಾತೆಯ) ಹತ್ರೆ ಹೋಗಿ ದೂರು ಕೊಟ್ಟವಡ. ಅದಕ್ಕೆ ಈ ದುರ್ಗೆ ಚಾಮಿ 'ಸಿಂಹವಾಹಿನಿ'ಆಗಿ ಬಂದು ರಾಕ್ಷಸರ ಸಂಹಾರ ಮಾಡಿದ್ದಡ. ದೇವಿಮಹಾತ್ಮೆ ಆಟ ನೋಡಿದ ಪುಟ್ಟಕ್ಕ ಹೇಳಿದ್ದು ಎನ್ನತ್ರೆ.  ರಾಕ್ಷಸರ ಸಂಹಾರ ಮಾಡಿದ ದೇವರ 'ಒಂಬತ್ತು ದಿನ' ವಿವಿಧ ರೂಪಲ್ಲಿ ಆರಾಧನೆ ಮಾಡಿ, ಪ್ರಸಾದ ತೆಕ್ಕೊಂಬ ಹಬ್ಬವೇ ಈಗಾಣ ನವರಾತ್ರಿ.

ನಮ್ಮ ಊರಿಲಿ ನವರಾತ್ರಿಗೆ ರೆಜಾ ಗೌಜಿ ಇದ್ದು.
ಚೌತಿಯ ಹಾಂಗೆ ಊರಿಡೀಕ ಬೊಬ್ಬೆ ಇಲ್ಲದ್ರೂ, ಮೌನಲ್ಲಿ, ಚೆಂದಲ್ಲಿ ಆಚರಣೆ ಮಾಡ್ತವು.
ಕಟೀಲು, ಪೊಳಲಿ, ಇತ್ಯಾದಿ ಶಕ್ತಿಕ್ಷೇತ್ರಂಗಳಲ್ಲಿ ವಿಶೇಷ ಆಚರಣೆಗೊ. ತರವಾಡು ಮನೆಯ ಹಾಂಗೆ ಕೆಲಾವು ಮನೆಗಳಲ್ಲಿ ಪೂಜೆ ಇತ್ಯಾದಿ ಇದ್ದು. ಪರಕ್ಕಜೆಯ ಹಾಂಗಿರ್ತ ಕುಲಪೌರೋಹಿತ್ಯ ಇಪ್ಪ ಬಟ್ಟಮಾವನ ಮನೆಲಿ ಅಂತೂ ಗೌಜಿಯ ಪೂಜೆ, ಶಿಷ್ಯವರ್ಗ ಎಲ್ಲರುದೇ ಒಂದು ದಿನ ಆದರೂ ಬಂದು ಪ್ರಸಾದ ತೆಕ್ಕೊಂಡು ಹೋಕು. ಕೆಲಾವು ಮನೆಗಳಲ್ಲಿ ಶಕ್ತಿಪೂಜೆದೇ ಇದ್ದಡ, ಕಳ್ಳುತೀರ್ಥ ಕುಡಿತ್ತ ಕ್ರಮ ಮಾಡಿಗೊಂಡು. ಪಾರೆ ಮಗುಮಾವ ಲಲಿತಪಂಚಮಿಗೆ ಪೂಜೆ ಮಾಡುಗು. ಎಡಪ್ಪಾಡಿಬಾವನಲ್ಲಿ ದುರ್ಗಾಪೂಜೆ ಇದ್ದೇ ಇದ್ದು. [ದೊಡ್ಡಬಾವ° ಶಾಲೆ ತಪ್ಪುಸಿ ಆದರೂ ಹೋಕು, ಪಾಚ ಉಂಬಲೆ ;-) ] ಹೆಚ್ಚಿನ ದಿಕ್ಕೆಯುದೇ ಶಾರದಾ(ಪುಸ್ತಕ) ಪೂಜೆ ಇಕ್ಕು. ಅಂಗುಡಿಗೊ ಎಲ್ಲ ಅಂಗಡಿ(ಲಕ್ಷ್ಮಿ)ಪೂಜೆ ಮಾಡುಗು. ಚೆನ್ನಬೈಲು ಚೆನ್ನಬೆಟ್ಟು ಮಠಲ್ಲಿ ಒಂಬತ್ತು ದಿನವುದೇ ಗೌಜಿಯ ಆರಾಧನೆ ಇದ್ದಡ, ಬೆಂಗ್ಳೂರಿಲಿ ಇಪ್ಪ ಚೆನ್ನಬೆಟ್ಟು ಅಣ್ಣ ಕಳುದವಾರವೇ ಊರಿಂಗೆ ಬಂದು ಕೂಯಿದವು. ಮಲ್ಲ, ಅಗಲ್ಪಾಡಿ, ತೈರೆ, ಆವಳ ಮಠದಲ್ಲಿ "ಮೊಘ್ಘಮ್ಹೊರ (ಹಸರ ಸೀವು) ಎಲ್ಲ ಮಾಡಿ ಗೌಜಿಉಂಟು" ಹೇಳಿ ಗೋವಿಂದ ಬಟ್ರು ಹೇಳಿತ್ತಿದ್ದವು.

ಮದಲಿಂಗೆ ವಿಜಯನಗರದ ರಾಜರು ಈ ನವರಾತ್ರಿಯ ಆಚರಣೆ ಮಾಡಿಗೊಂಡಿತ್ತಿದ್ದವಡ. ಮುಂದಕ್ಕೆ ಅದು ಅಳುದ ಮೇಗೆ ಆ ಆಚರಣೆಯ ಒಂದಂಶ ನಮ್ಮ ಮೈಸೂರಿಂಗೆ ಎತ್ತಿದ್ದು. ಈಗ ಮೈಸೂರಿಂದೇ ಗೌಜಿ ನವಗೆ, ಅಲ್ದೋ?! ಮೊದಲಾಣ ವಿಜಯನಗರದ ವೈಭವ ಹೇಂಗಿದ್ದಿಕ್ಕಪ್ಪಾ ಹೇಳಿ ಗ್ರೇಶಿ ಹೋವುತ್ತು ಒಪ್ಪಣ್ಣಂಗೆ. :-(
ಬಂಗಾಳಲ್ಲಿ ಎಲ್ಲ ಈಗಳೂ ನವರಾತ್ರಿ ಆಚರಣೆ ವಿಪರೀತ ಅಡ. ಕಲ್ಕತ್ತಾ ನೋಡಿಕ್ಕಿ ಬಂದ ಪಾಂಡೇಲಣ್ಣ ಹೇಳಿದ್ದವು. 'ದುರ್ಗಾಮಾ / ಕಾಲೀಮಾ' ಹೇಳಿ ಶಕ್ತಿಯ ಆರಾಧನೆ ಮಾಡಿಗೊಂಡು - ಮಹಾರಾಷ್ಟ್ರಲ್ಲಿ ಗೆಣವತಿ ಚೌತಿ ಇದ್ದ ಹಾಂಗೆ - ಗೌಜಿಯ ಹಬ್ಬ ಅಡ. ಎರಡುತಿಂಗಳು ಮೊದಲೇ ಮಾರ್ಗದ ಕರೆಲಿ ಮೂರ್ತಿ ಮಾರಿಗೊಂಡು ಇತ್ತಿದ್ದವಡ. ಅಲ್ಯಾಣ ದುರ್ಗೆಯ ಮೋರೆ ಉರುಟು ಜಾಸ್ತಿ ಹೇಳಿ ಎಡಪ್ಪಾಡಿ ಬಾವ ಆಶ್ಚರ್ಯ ಮಾಡಿಗೊಂಡಿತ್ತಿದ್ದವು ಓ ಮೊನ್ನೆ. ಕಲ್ಕತ್ತಕ್ಕೆ ಹೋಗಿಪ್ಪಗ ಮಾರ್ಗದ ಕರೆಲಿ ನೇತಾಕಿದ ನವರಾತ್ರಿ ಬೋರ್ಡು ನೋಡಿ ಗೊಂತಾದ್ದಡ ಅವಕ್ಕೆ. ದುರ್ಗೆಗೆ ಇಷ್ಟ ಹೇಳಿಗೊಂಡು ದಾಸನ ಹಾಕುದಡ ಅಲ್ಲಿ. [ಒಪ್ಪಣ್ಣನ ಮನೆ ಹಟ್ಟಿಲಿದೇ ಒಂದು ದುರ್ಗೆ ಇದ್ದು, ಅದಕ್ಕುದೇ ದಾಸನ ಬಾರೀ ಕುಶಿ. ;-) ]
ಇರಳಿ, ಅವರವರ ಜಾಗೆಗೆ ತಕ್ಕ ಹಾಂಗೆ ದೇವರ ಆರಾಧನೆ, ಅಲ್ದೋ?

ನಮ್ಮೋರಲ್ಲಿ ನವರಾತ್ರಿಗೆ ದುರ್ಗಾಪೂಜೆ ವಿಶೇಷ. ಒಂದೊಂದು ದಿನ ಒಂದೊಂದು ರೂಪಲ್ಲಿ ದುರ್ಗೆಯ ಆರಾಧನೆ ಮಾಡ್ತ ಕ್ರಮ. ಮಾಷ್ಟ್ರುಮಾವನ ಮನೆ ಪುಸ್ತಕಲ್ಲಿ ಹಾಂಗೆ ಬರಕ್ಕೊಂಡು ಇತ್ತು. ನವರಾತ್ರಿಯ ನವದುರ್ಗೆಗೊ ಆರಾರು ಹೇಳ್ತದರ ಬಗೆಗೆ ವಿವರುಸಿತ್ತಿದ್ದು. ಈಗ ಇದು ಎಷ್ಟೋ ಜೆನಕ್ಕೆ ಗೊಂತೇ ಇಲ್ಲೆ. ಮರದೇ ಹೋಯ್ಕೊಂಡಿದ್ದು. ಯೇವ ದಿನ ಯೇವ ದೇವಿಯ ಪೂಜೆ ಮಾಡೆಕ್ಕು ಹೇಳ್ತದು ಚೆಂದಕೆ ಒಂದು ಶ್ಲೋಕಲ್ಲಿ ಇತ್ತು, ಗಣೇಶಮಾವ ತೋರುಸಿಕೊಟ್ಟವು:
ಆ ಶ್ಳೋಕ ಹೀಂಗಿದ್ದು:

ಪ್ರಥಮಂ ಶೈಲಪುತ್ರೀಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೀತಿ ಕೂಷ್ಮಾಂಡೀತಿ ಚತುರ್ಥಕಂ ||
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿಚ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿಚಾಷ್ಟಮಂ ||
ನವಮಂ ಸಿದ್ಧಿದಾತ್ರೀಚ ನವದುರ್ಗಾಃ ಪ್ರಕೀರ್ತಿತಾಃ ||

ನವರಾತ್ರಿಯ ಸುರುವಾಣ ದಿನಂದ ಆರಂಭ ಆಗಿ ಕೊನೆಯ ಒಂಬತ್ತನೆಯ ದಿನದ ವರೆಂಗೆ ಆರಾಧನೆ ಮಾಡ್ತ ದೇವಿಯರ ಹೆಸರಗೊ ಈ ಶ್ಳೋಕಲ್ಲಿ ಹೇಳಿದ್ದು.
೧. ಶೈಲಪುತ್ರಿ -
ನವರಾತ್ರಿಯ ಆರಂಭದ ದಿನ ದೇವಿಯ ಬಾಲದುರ್ಗೆಯ ರೂಪಲ್ಲಿ ಪೂಜೆ ಮಾಡ್ತ ಕ್ರಮ. ಶೈಲಪುತ್ರೀ ಹೇಳಿರೆ ಸಣ್ಣ ಕೂಸಿನ ಹಾಂಗಿರ್ತ ರೂಪದ ಚಾಮಿ. ಪರ್ವತ ರಾಜನ ಮಗಳಾಗಿ ಹುಟ್ಟಿದ ದುರ್ಗೆ ಬಾಲ್ಯಾವಸ್ಥೆಯ ಕೈಕೂಸು ಆಗಿ ಇಪ್ಪಗಾಣ ಸ್ವರೂಪ. ಮನುಷ್ಯನ ಜೀವನದ ಹಾಂಗೇ ಬಾಲ್ಯಂದಲೇ ನವರಾತ್ರಿ ಸುರು.

೨. ಬ್ರಹ್ಮಚಾರಿಣೀ -
ಶೈಶವಾವಸ್ಥೆ ಕಳುದಮತ್ತೆ ಬತ್ತ ಎಳೆ ಪ್ರಾಯದ ಕೂಸು. ಸುಮಾರು ಹನ್ನೊಂದು ಒರಿಶದ ಕೂಚಕ್ಕ. ಕೌಮಾರೀ ಹೇಳಿಯೂ ಹೇಳ್ತವು ಈ ಸ್ವರೂಪವ. ತ್ರಿಕಾಲಪೂಜೆಲಿ ಎಲ್ಲ ಸಣ್ಣ ಕೂಚಕ್ಕಂಗೊಕ್ಕೆ ಪೂಜೆ ಮಾಡ್ತವು, ಕುಮಾರಿ ಪೂಜೆ - ಹೇಳಿ, ಗೊಂತಿದ್ದನ್ನೇ? ಇದೇ ಬ್ರಹ್ಮಚಾರಿಣಿಯ ಆವಾಹನೆ ಮಾಡಿ ಪೂಜೆ ಮಾಡ್ತದು.

೩. ಚಂದ್ರಘಂಟಾ -
ಕೌಮಾರಿಗೊ ರಜ ದೊಡ್ಡ ಆದ ಕೂಡ್ಳೇ, ಸೌಂದರ್ಯದ ಬಗ್ಗೆ ಮನಸ್ಸು ಉಂಟಾವುತ್ತು. ಆ ಕಾಲಲ್ಲಿ ಕೈಗೆ, ಕಾಲಿಂಗೆ, ಕೆಮಿಗೆ ಕೆಲವೆಲ್ಲ ಆಭರಣ ಸಿಕ್ಕುಸಿ ತಿರುಗುಲೆ ಸುರು ಮಾಡ್ತವು. ಅಲ್ಲದೊ? ಅದೇ ನಮುನೆ, ಕೆಮಿಲಿ ಚಂದ್ರನ ಆಕಾರದ - ಉರೂಟು ಘಂಟೆಯ ನಮುನೆ ಆಭರಣ ಇಪ್ಪ ದೇವಿ ಚಂದ್ರಘಂಟಾ. ಮೂರ್ನೇ ದಿನದ ಚಾಮಿ.
ಶಿವನ ಮದುವೆ ಅಪ್ಪಲೆ ಒಲುಸುವ ಸುಂದರ ದಿನಂಗ.

೪. ಕೂಷ್ಮಾಂಡೀ -
ಮೂರು ದಿನ ಬಾಲ್ಯಾವಸ್ಥೆಲಿ ಇದ್ದ ಸೌಮ್ಯ ಮೂರ್ತಿಯ ಆರಾಧನೆ ಮಾಡಿಕ್ಕಿ, ನಾಕನೇ ದಿನ ಉಗ್ರಮೂರ್ತಿ ಕೂಷ್ಮಾಂಡಿಯ ಪೂಜೆ. ಶೂಲ ಇತ್ಯಾದಿ ಆಯುಧ ಹಿಡ್ಕೊಂಡಿಪ್ಪ ಈ ಶಕ್ತಿಗೆ ಶೂಲಿನೀ ಹೇಳಿಯೂ ಹೆಸರಿದ್ದು. ಅಮ್ಮ ಯೇವತ್ತೂ ಸೌಮ್ಯ ಇದ್ದರಾಗ, ಕೆಲವು ಸರ್ತಿ ಉಗ್ರಮೂರ್ತಿ ಆಯೆಕ್ಕಾವುತ್ತು, ಮನೆಯ ಒಳಿತಿಂಗೋಸ್ಕರ ಆದರೂ, ಅಲ್ದೋ?
ರಕ್ತಬೀಜಾಸುರನ ಕೊಂದ ಈ ದೇವಿಗೆ ರಕ್ತೇಶ್ವರಿ ಹೇಳಿಯೂ ಹೆಸರಿದ್ದು.

೫. ಸ್ಕಂದಮಾತಾ -
ಅಂದು ಶೈಲಪುತ್ರಿ ಆಗಿದ್ದ ದೇವಿ ಈಗ ದೊಡ್ಡ ಆಗಿ ಶಿವನ ಮದುವೆ ಆಯಿದು. ’ಸ್ಕಂದ’ ಹೇಳಿ ಒಪ್ಪೊಪ್ಪ ಮಾಣಿದೇ ಆಯಿದ ಅವಕ್ಕೆ. ಶಿವನ ತೊಡೆಮೇಲೆ ಕೂದುಗೊಂಡ, ಸ್ಕಂದನ ಅಮ್ಮ ಪಾರ್ವತಿಯ ಆರಾಧನೆ ಮಾಡುದ ಐದನೇ ದಿನ. ಮನೆ ಹೆಮ್ಮಕ್ಕೊಗೆ ಈ ದಿನದ ಆರಾಧನೆ ವಿಶೇಷ. ಸಹಸ್ರನಾಮ ಪೂರ್ವಕ ಲಲಿತಾಪಂಚಮಿ ಆರಾಧನೆ. ಗಣೇಶಮಾವನ ಮನೆಲಿ ರಜಾ ಗೌಜಿ ಇರೆಕ್ಕು ಬೌಷ್ಷ (ಬಹುಶಃ).

೬. ಕಾತ್ಯಾಯನೀ -
ಆರನೇ ದಿನ ಶಿವನ ಹೆಂಡತ್ತಿ ಆಗಿ, ಆತ್ಮಸಖಿ ಪತಿವ್ರತೆ ಆಗಿ ಇಪ್ಪ ದೇವಿಯ ಆರಾಧನೆ. ಕಾತ್ಯಾಯನೀ ಹೇಳಿ ನಾಮಧೇಯ.
ಕಾತ್ಯಾಯನೀ ಹೇಳಿತ್ತುಕಂಡ್ರೆ ಸಪ್ತ ಮಾತೃಕಾ ಅವತಾರಲ್ಲಿ ಒಂದು - ಹೇಳಿ ಲೆಕ್ಕ.
ಸಾಮಾನ್ಯವಾಗಿ ಈ ದಿನ ಮೂಲಾ ನಕ್ಷತ್ರ ಇರ್ತು. ಮೂಲಾ ನಕ್ಷತ್ರ ವಿದ್ಯೆ ಆರಂಭಕ್ಕೂ ಮೂಲವೇ. ವಿದ್ಯಾಧಿದೇವತೆ ಆದ ಶಾರದಾ ದೇವಿಯ ಪೂಜೆ ಇಂದು ಆರಂಭ. ಮನೆಲಿಪ್ಪ ಒಳ್ಳೊಳ್ಳೆ ಪುಸ್ತಕ ಎಲ್ಲ ದೇವರೊಳ ಒಂದು ಮಣೆ ಮೇಲೆ ಅಟ್ಟಿ ಮಡಗಿ, ನಾಕು ಹೂಗುದೇ ಮಡಗಿ, ಪುಸ್ತಕಪೂಜೆ ಸುರು. ಇನ್ನು ಮೂರು ಇರುಳು ತೆಗವಲಿಲ್ಲೆ ಇದರ. (ಆಚಕರೆ ಮಾಣಿ ಶಾಲೆಪುಸ್ತಕವನ್ನುದೇ ಮಡಗಿಯೊಂಡು ಇದ್ದದು ಇದೇ ಕಾರಣಲ್ಲಿ ಅಡ! ;-( ) ನಾಲ್ಕನೇ ದಿನ (ವಿದ್ಯಾದಶಮಿ) ಆ ಪುಸ್ತಕದ ಅಟ್ಟಿಗೆ ಆವಾಹನೆ ಮಾಡಿದ ಶಾರದಾದೇವಿಯ ಉದ್ವಾಸನೆ.

೭. ಕಾಲರಾತ್ರಿ -
ಉಗ್ರಸ್ವರೂಪಿಣಿ ಆದ ಈ ದೈವೀ ಸ್ವರೂಪದ ಮಾತೆ, ಕಪ್ಪು ಮೈಬಣ್ಣ ಹೊಂದಿದ್ದಡ. ಕೆಂಪು ಕಣ್ಣಿಂದ ಪಿಸುರಿನ ಉಗ್ರತೆ ಎದ್ದು ಕಂಡೋಂಡು ಇದ್ದು. ಲೋಕಕ್ಕೆ ಉಪದ್ರ ಕೊಟ್ಟೋಂಡು ಇದ್ದ ರಕ್ಕಸರ ಈಗ ತಾನೇ ಸಂಹಾರ ಮಾಡಿ, ಅವರ ರುಂಡವ(ತಲೆಯ) ಮಾಲೆ ಮಾಡಿ ಕೊರಳಿಂಗೆ ಹಾಕಿಯೋಂಡಿದು. (ರುಂಡಮಾಲಾಧರ) ನೆತ್ತರು ಅರಿತ್ತಾ ಇದ್ದು ಅವುಗಳಿಂದ. ದೇವಿಯ ರಕ್ತಸಿಕ್ತವಾದ ನಾಲಗೆ ಬಾಯಿಂದ ಹೆರ ಇಳಿಬಿದ್ದೊಂಡು ಇದ್ದು. ಒಟ್ಟಾರೆಯಾಗಿ ಉಗ್ರಮೂರ್ತಿ.ಮಂಗಳಕರವಾದ ಭದ್ರಕಾಳಿ. ಕೆಟ್ಟವಕ್ಕೆ ಕಾಲ-ರಾತ್ರಿ. ಕಾಲರಾತ್ರಿ ಹೇಳಿರೆ ಮರಣದಿವಸದ ಪೂರ್ವರಾತ್ರಿ ಹೇಳಿ ಅರ್ತ ಅಡ. ಆರೋ ಹೇಳಿದಾಂಗೆ ಇತ್ತು. ಇದೇ ಮೂರ್ತಿಯ ’ಕಾಳಿ’ / ಕಾಲೀಮಾ ಹೇಳಿ ಉತ್ತರಲ್ಲಿ ಪೂಜೆ ಮಾಡ್ತವಡ. ಕೊಲ್ಕತ್ತಲ್ಲಿಪ್ಪ ಕಾಳಿಘಾಟು ಹೇಳ್ತ ದೇವಸ್ತಾನಕ್ಕೆ ಎಡಪ್ಪಾಡಿ ಬಾವ ಹೋಗಿ ಪ್ರಸಾದ ತೆಕ್ಕೊಂಡು ಬಯಿಂದವಡ. ಅವು ಹೇಳಿತ್ತಿದ್ದವ.
ಮರಾಠಿ ಸಂಸ್ಕೃತಿ ಹೆಚ್ಚಿಪ್ಪ ನಮ್ಮೂರಿನ ಮಾರಾಟಿ ನಾಯ್ಕಂಗೊ ’ಗೋಂದೋಲು ಪೂಜೆ’ ಹೇಳಿ ಮಾಡಿ ಈ ಕಾಲರಾತ್ರಿಯ ಸೇವೆ ಮಾಡ್ತವಡ, ಮಾಷ್ಟ್ರುಮಾವ ಹೇಳಿತ್ತಿದ್ದವು.

೮. ಮಹಾಗೌರಿ / ಮಹಾ ದುರ್ಗೆ
ಪ್ರಸನ್ನವದನೆ ಪಾರ್ವತಿಗೆ ಮಹಾಗೌರಿ ಹೇಳಿ ಪೂಜೆ ಮಾಡುದು. ಮಂದಸ್ಮಿತ. ಸ್ನಿಗ್ಧ ಸ್ಮಿತ. ಮೈಗೆ ಸುವಾಸನೆಯ ಪರಿಮಳದ್ರವ್ಯಂಗಳ (ಗುಣಾಜೆಮಾಣಿಯ ಸೆಂಟಿನ ನಮುನೆದು) ಉದ್ದಿಗೊಂಡಿದು. ಶಾಂತಸ್ವರೂಪಿ ಆದ ಈ ಮಾತೆಯ ಎಲ್ಲೊರೂ ಪೂಜೆ ಮಾಡಿ ಪುಣ್ಯಕಟ್ಟಿಗೊಳ್ತವು. ಅಷ್ಟಮದಿನದ ಈ ದುರ್ಗೆಯ ದಿನವ ದುರ್ಗಾಷ್ಟಮಿ ಹೇಳಿಯೂ ಪೂಜೆ ಮಾಡ್ತವು.

೯ . ಸಿದ್ಧಿದಾತ್ರೀ-

ಕೊನೆ ಹೇಳಿರೆ ಎರಡರ್ತ. ಒಂದು ಅಕೇರಿ ಹೇಳಿ. ಇನ್ನೊಂದು ಫಲ (ಬಾಳೆಕೊನೆ) ಹೇಳಿ. ಒಂಬತ್ತು ದಿನದ ಭಕ್ತಿಯ ಪೂಜೆಂದಾಗಿ ಅಕೇರಿ ದಿನ ಫಲಕೊಡೆಡದೋ?
ಸಿದ್ಧಿದಾತ್ರಿ ಹೇಳಿರೆ ಸಿದ್ಧಿಯ ಕೊಡ್ತ ದೇವರು ಹೇಳಿ ಲೆಕ್ಕ. ದೇವಸ್ತುತಿಗೆ ಅನುಗ್ರಹ ಮಾಡುವ ಮೂರ್ತಿ. ಪ್ರಸನ್ನ ಮೂರ್ತಿ. ಮುನಿಗೊಕ್ಕೆ ಎಲ್ಲ ಸಿದ್ಧಿಕೊಡುದು ಈ ದೇವಿ ಅಡ.
ದೇವಿಮಹಾತ್ಮದ ಅಕೇರಿಲಿ ಎಲ್ಲಿಯೋ, ೧೩ನೇ ಅಧ್ಯಾಯಲ್ಲಿ ಈ ಶುದ್ದಿ ಬತ್ತಡ, ಬೈಲಕರೆ ಜೋಯಿಷಪ್ಪಚ್ಚಿ ಹೇಳಿತ್ತಿದ್ದವು.
ಈ ಒರಿಶದ ನವರಾತ್ರಿ ಆಚರಣೆ ಈ ದಿನಕ್ಕೆ ಮುಗಾತು. ಕೊನೆಯ ದಿನ ಅತ್ಯಂತ ಶ್ರದ್ಧೆ, ಭಕ್ತಿಲಿ ಆಚರಣೆ ಮಾಡಿದ ಫಲವಾಗಿ ಸಿದ್ಧಿ ಕೊಡ್ತು ಹೇಳಿ ನಂಬಿಗೊಂಡು ಎಷ್ಟೋ ಭಕ್ತರು ಸಂತುಷ್ಟರಾವುತ್ತವು.

೧೦. ವಿಜಯದಶಮಿ / ವಿದ್ಯಾದಶಮಿ
ಒಂಬತ್ತುದಿನವುದೇ ವಿವಿಧ ರಕ್ಕಸರ ಕೊಂದದಕ್ಕಾಗಿ ಆ ಅಮ್ಮನ ಮಕ್ಕೊ, ಜೆನಂಗೊ ಸಂತೋಷಲ್ಲಿ ವಿಜಯೋತ್ಸವ ಆಚರುಸುತ್ತ ದಿನ. ಹಾಂಗಾಗಿ ವಿಜಯದಶಮಿ ಹೇಳಿಯೂ ಹೆಸರು.
"ವಾಣೀ ತ್ರಿರಾತ್ರಾರ್ಥಯೇತ್ " ಸರಸ್ವತೀ ದೇವಿಯ ಮೂರು ರಾತ್ರಿ ಪೂಜೆ ಮಾಡೆಕ್ಕು ಹೇಳಿ ವಾಡಿಕೆ ಇದ್ದಡ. ಓ ಮೊನ್ನೆ, ಮೂಲಾ ನಕ್ಷತ್ರದ್ದಿನ ಆವಾಹನೆ ಮಾಡಿದ ಸರಸ್ವತಿ ಚಾಮಿಯ, ಶ್ರವಣಾ ನಕ್ಷತ್ರಲ್ಲಿ ಉದ್ವಾಸನೆ ಮಾಡಿ (ಮೂಲೇನ ಆವಾಹಯೇದ್ದೇವೀಂ, ಶ್ರವಣೇನ ವಿಸರ್ಜಯೇತ್ ಹೇಳಿ ಇದ್ದಡ, ಜೋಯಿಷಪ್ಪಚ್ಚಿ ಹೇಳಿದ್ದು.), ಪುಸ್ತಕವ ಪ್ರಸಾದರೂಪಲ್ಲಿ ಪರಿಗ್ರಹಿಸಿ, ವಿದ್ಯೆ ಎಂದೆಂದಿಂಗೂ ಒಲಿದು ಬರ್ಲಿ ಹೇಳಿ ಪ್ರಾರ್ತನೆ ಮಾಡುವ ದಿನ ’ವಿದ್ಯಾದಶಮಿ’ಯುದೇ ಅಪ್ಪು.
ಈ ದಿನ ಉದಿಯಪ್ಪಗ, ಮನೆಲಿ ಯೆಜಮಾನ್ರು ಪುಸ್ತಕ ಪೂಜೆ ಉದ್ವಾಸನೆ ಮಾಡಿ, ಮನೆಯ ಎಲ್ಲ ಸದಸ್ಯರಿಂಗೂ ಹೂಗು ಪ್ರಸಾದದ ಒಟ್ಟಿಂಗೆ ಒಂದೊಂದು ಪುಸ್ತಕವನ್ನುದೇ ಕೊಡ್ತದು. ಪುಸ್ತಕ ತೆಕ್ಕೊಂಡವ ಚಕ್ಕನಕಟ್ಟಿ ಕೂದುಗೊಂಡು ಆ ಪುಸ್ತಕದ ಒಂದು ಹನುಸ್ಸು ಆದರೂ ಓದಿ, ನಮಸ್ಕಾರ ಮಾಡಿ, ಮಡುಸಿ ಮಡುಗ್ಗು. ವಿದ್ಯಾದೇವಿಯ ಆಶೀರ್ವಾದ ಇದ್ದರೇ ತಾನೆ, ಜಗತ್ತಿಲಿ ಎಲ್ಲ ಒಯಿವಾಟುದೇ ನೆಡವದು? :-) ಹಾಂಗೊಂದು ತೂಷ್ಣಿಲಿ ಪುಸ್ತಕ ಪೂಜೆ.
(ಅಜ್ಜಕಾನಬಾವ ಪುಸ್ತಕ ಹಿಡಿವಲೆ ಕಂಡುಕಟ್ಟಿಗೊಂಡು ಇದ್ದದು ಸರೀ ಗೊಂತಾಗಿಯೊಂಡು ಇತ್ತಡ, ಶೇಡಿಗುಮ್ಮೆ ಬಾವ ಈಗಳೂ ನೆಗೆ ಮಾಡುಗು.)

ಇದರೆಡಕ್ಕಿಲಿ ಒಂದು ಶುದ್ದಿ,
ದಕ್ಷಯಜ್ಙದ ಸಮಯಲ್ಲಿ ಗೌರೀದೇವಿ (ದಾಕ್ಷಾಯಣಿ) ತೀರಿಗೊಂಡತ್ತು. ಮರುಜನ್ಮಲ್ಲಿ ಪರ್ವತರಾಜನ ಮಗಳಾಗಿ ಹುಟ್ಟಿತ್ತು. ಈ ಪಾರ್ವತಿ, ತಪಸ್ಸಿಂಗೆ ಕೂದ ಶಿವನ ಹತ್ರೆ ಹೋಗಿ ಒಲುಸುಲೆ ಬೇರೆ ಬೇರೆ ವೇಶ ಹಾಕಿಯೊಂಡು ಹೋತಡ. ಅದರ ಅಪ್ಪನ ಒಟ್ಟಿಂಗೆ. ಬೇಡ್ತಿಯ ರೂಪಲ್ಲಿ, ಸಿಂಹದ ರೂಪಲ್ಲಿ, ಕರಡಿಯ ನಮುನೆ, ಇತ್ಯಾದಿ. ಅದರ ನೆಂಪಿಂಗೋಸ್ಕರ, ಇಂದಿಂಗುದೇ ನಮ್ಮ ಊರಿಲಿ ನವರಾತ್ರಿಗೆ ’ವೇಶ’ ಹಾಕುವ ಹರಕ್ಕೆ ಹೊತ್ತುಗೊಳ್ತವು.
ಮಾರ್ನೆಮಿಯ ಕೊರಗ್ಗನ ವೇಶ ಹಾಕಿ, ಒಂದು ಕೊಳಲು ಉರುಗಿಯೊಂಡು ಮನೆಮನೆಗೆ ಹೋಗಿ, ಬೇಡಿಗೊಂಡು - ಹತ್ತರಾಣ ದೇವಿ ದೇವಸ್ತಾನಲ್ಲಿ ಸಮಾಪ್ತಿ ಆಗಿಯೋಂಡು ಇತ್ತು. ಬೇಡಿದ್ದರ್ಲಿ ಸಿಕ್ಕಿದ್ದರ ಪೂರ ಆ ದೇವಸ್ತಾನಕ್ಕೆ ಒಪ್ಪುಸಿ, ದೇವರ ಎದುರ ಬಟ್ರು ಕೊಡ್ತದರ ಪ್ರಸಾದರೂಪಲ್ಲಿ ಸ್ವೀಕಾರ ಮಾಡಿ ಹರಕ್ಕೆ ’ಸಂದಾಯ’ ಮಾಡ್ತವು.
ಈಗ ಅಂತೂ ಪೈಸೆ ಮಾಡ್ತ ದಾರಿ ಆಗಿ ಹೋಯಿದು - ಹೇಳಿ ಸುಕ ಇಲ್ಲೆ.
ಪುತ್ತೂರು ಪೇಟೆಲಿ ಇಡೀ ರಕ್ಕಸಂಗೊ, ಸಿಂಹಂಗೊ, ಬ್ರಾಹ್ಮಣ ವೇಶಂಗೊ, ಎಲ್ಲ ಧಾರಾಳ ತಿರುಗಿಯೊಂಡು ಇದ್ದಡ. ಗಣೇಶಮಾವ ನೋಡಿಕ್ಕಿ ಬಂದು ವಿವರುಸಿಗೊಂಡು ಇತ್ತಿದ್ದವು ಓ ಮೊನ್ನೆ!.

ಇಡೀ ನವರಾತ್ರಿಯ ಸಮಯಲ್ಲಿ ಚಾಂಗುಳಿ ಅಕ್ಕನ ಮನೆಲ ಎಲ್ಲೊರು ಶಾಮಲದಂಡಕವ ಓದುತ್ತವಡ. ಒಪ್ಪಕ್ಕ ಅಂತೂ ಲಲಿತಾಸಹಸ್ರನಾಮ ಓದಿಯೇ ಓದುತ್ತು. ಗಣೇಶಮಾವ ದೇವಿದೇವಸ್ಥಾನಕ್ಕೆ ಹೋಗಿ ಕೈ ಮುಗುದು ಬತ್ತವು. ಪಾರೆ ಮಗುಮಾವ ದುರ್ಗಾಪೂಜೆ ಮಾಡಿ ಕುಶಿ ಆದವು. ಮಾಷ್ಟ್ರುಮಾವಂಗೆ ಗ್ರಾಮದೇವಸ್ತಾನಕ್ಕೆ ಹೋಯೆಕ್ಕೂಳಿ ಕಾಣ್ತು, ಪುರುಸೊತ್ತಾಯಿದಿಲ್ಲೆ.

ದಿನ ನಿತ್ಯವೂ ಜೀವನಕ್ಕೆ ಬೇಕಾದ ನವ ನವೀನವಾದ ಉತ್ಸಾಹ, ಉನ್ಮೇಷಂಗಳ ಅನುಗ್ರಹಿಸಿಗೊಂಡು ಮಕ್ಕೊಗೆಲ್ಲ ಶ್ರೀರಕ್ಷೆ ಕೊಟ್ಟೋಂಡಿಪ್ಪ ನವರಾತ್ರಿಯ ಚಾಮಿ, ಆ ದೇವಿಯ ಆಶೀರ್ವಾದ ಎಲ್ಲೊರ ಮೇಗೆ ಇರಳಿ.  ಅನಾದಿ, ಅನಂತ - ಅಮ್ಮನ ಆರಾಧನೆಯ ಈ ನವರಾತ್ರಿ ಎಲ್ಲೊರಿಂಗೂ ಒಳ್ಳೆದು ಮಾಡ್ಳಿ,
ನವರಾತ್ರಿ ಎಲ್ಲೊರಿಂಗೂ ನವಚೈತನ್ಯ ತರಳಿ ಹೇಳಿ ಒಪ್ಪಣ್ಣನ ಆಶಯ.

ಒಂದೊಪ್ಪ:
ಹಳೆಕಾಲಲ್ಲಿದ್ದ ಕೊರಗ್ಗಂದ್ರು ಈಗ ಕಮ್ಮಿ ಆಯಿದವು ಹೇಳಿ ಬೇಜಾರು ಮಾಡುವಗ, ದುರ್ಗಾಪೂಜೆ ಮಾಡ್ತ ಮನೆಯುದೇ ಕಮ್ಮಿ ಆಯಿದು ಹೇಳಿ ಮಗುಮಾವಂಗೆ ಅಂದಾಜಿಯೇ ಆಯಿದಿಲ್ಲೆ. :-(