ದೊಡ್ಡ ಅರ್ದ ಎನಗೆ: ಅರ್ಗೆಂಟಿನ ಒಪ್ಪಕ್ಕ ಹಣ್ಣು ಹಂಚಿದ ದಿನಂಗೊ. . .

ಕುಂಬ್ಳೆ ಅಜ್ಜಿ ಮನೆಲಿ ಚಿಕ್ಕು ಧಾರಾಳ.
ಅಲ್ಲಿ ತಿಂಬೋರು ಆರೂ ಇಲ್ಲದ್ರೂ ’ಮರಲ್ಲೇ ಹಾಳು ಮಾಡುಸ್ಸು ಎಂತಕೆ?’ ಹೇಳಿಗೊಂಡು ಅಜ್ಜ ಕೊಯಿಗು. ಬಾವಲಿ ಕೆರದೋ, ಹುಳು ತಿಂದೋ ಮತ್ತೊ ಉದುರಿರೆ ಹೋತು, ಕೊಕ್ಕಗೆ ಎತ್ತುತ್ತದರ ಎಡಿಗಾದಷ್ಟು ಕೊಯ್ವದು. ಅವರ ಮನೆಲಿಪ್ಪ ಎಲ್ಲರು ಕೂದು ತಿಂದರೂ ಮುಗಿಯ, ಅಲ್ಲಿಪ್ಪ ಅತ್ತೆಕ್ಕೊ ಕೋಲೇಜಿಂಗೆ ಹೋವುತ್ತ ನಮುನೆಯವಲ್ದ, ರಜ್ಜ ಜಾಸ್ತಿ ತಿಂದರೆ ತೋರ ಆವುತ್ತಡ, ರುಚಿಗೆ ತಕ್ಕ ತಿಂಬದು - ಪತ್ಯದವರ ಹಾಂಗೆ! ಹೆಡಗೆ ಹೆಡಗೆ ಚಿಕ್ಕಿನ ಮಾಡುದಾರೂ ಎಂತರ ಬೇಕೇ? ಹಾಂಗಾಗಿ ಎಲ್ಲ ಹಂಚಿ ಹಂಚಿಯೇ ಮುಗುಶುಗು.
ಅಜ್ಜಂಗೆ ಕೊಯ್ವದೇ ಕೆಲಸ, ಅಜ್ಜಿಗೆ ಕೊಯ್ದರ ಹಂಚುದೇ ಕೆಲಸ.

ಚಿಕ್ಕುದೇ ಹಾಂಗೆ- ಏಕ ಗಾತ್ರದ ದೊಡ್ಡ ದೊಡ್ಡ ಚಿಕ್ಕುಗೊ. ಸಕ್ಕರೆ ಸೀವು, ಕಡುಕಂದು ಬಣ್ಣ, ರಂಗಮಾವನ ಹಾಂಗೆ ;-) . ನಮ್ಮ ಊರಿಲಿ ಬೇರೆ ಎಲ್ಲಿಯೂ ಇಲ್ಲೆಡ, ಎಂತದೋ ಒಂದು ವಿಶೇಷ ಜಾತಿ ಚಿಕ್ಕು ಅಡ ಅದು. ನೀಲೇಶ್ವರ ಹೊಡೆಂದ ತಂದದು. ಅಜ್ಜನ ಆಸಕ್ತಿಂದಾಗಿ ನಮ್ಮ ಊರಿಂಗೆ ಎತ್ತಿದ್ದು ಆ ಸೆಸಿ.
ಈಗ ಅದರ ಸುಮಾರು ಗೆಡು ಆಯಿದು. ಒಪ್ಪಣ್ಣ ಒಂದರಿ ಆಟಿ ತಿಂಗಳಿಲಿ ಹೋಗಿ ’ಚಿಕ್ಕಿದ್ದಾ ಅಜ್ಜಿ?’ ಕೇಳಿದ್ದಕ್ಕೆ ’ಇದಾ ಈ ಸೆಸಿ ಕೊಂಡೋಗಿ ನೆಡು, ಐದೊರಿಶಲ್ಲಿ ಆವುತ್ತು ಮಿನಿಯಾ’ ಹೇಳಿದವು. ಐದು ನಿಮಿಶಲ್ಲಿ ತಿಂಬ ಆಶೆಗೆ ಐದೊರಿಶ ಕಾವದೋ ಹೇಳಿ ನೆಗೆ ಬಂತು ಒಪ್ಪಣ್ಣಂಗೆ. ಅಂತೂ ಸೆಸಿ ಇದ್ದು ವಳಚ್ಚಲಿಲಿ, ವರಕ್ಕು ತೂಗಿಯೋಂಡು. ;-(

ಕುಂಬ್ಳೆ ಅಜ್ಜಿಗೆ ಎಲ್ಲೊರು ಬೇಕು, ಸಣ್ಣ ಮಕ್ಕೋ ಹೇಳಿರೆ ಅಂತೂ ತುಂಬ ಇಷ್ಟ. ನಮ್ಮ ಒಪ್ಪಕ್ಕ ಹೇಳಿರೆ ಬಾರೀ ಪ್ರೀತಿ. ಸಣ್ಣ ಇಪ್ಪಗಳೇ ಹಾಂಗೆ. ಚಿಕ್ಕಿನ ಸಮಯಲ್ಲಿ ಒಪ್ಪಕ್ಕಂಗೆ ಹೇಳಿ ಒಂದು ಕಟ್ಟು ಆದರೂ ಖಂಡಿತ! ಅಲ್ಲಿಗೆ ಹೋಗಿಪ್ಪಗಳೋ, ಅಜ್ಜಿ ಮನೆಯವು ಎಂಗಳ ಬೈಲಿಂಗೆ ಬಂದಿಪ್ಪಗಳೋ ಮತ್ತೊ ಚಿಕ್ಕಿನ ಕಟ್ಟು ಕೊಡುಗು. ಅತಿ ಮೀರಿ ಬಪ್ಪಲೇ ಎಡಿಗಾಗದ್ರೆ ಕೊಟ್ಟು ಕಳುಸುಗು, ಆಚಕರೆ ಮಾಣಿ ಬಾವನತ್ರೋ, ಅಜ್ಜಕಾನ ಬಾವನತ್ರೋ ಮತ್ತೊ. ದಾರಿಲಿ ರಜ್ಜ ಕಾಲಿ ಆದರೂ, ಮನೆಗೆ ಎತ್ತುಗು ಆ ಚಿಕ್ಕಿನ ಕಟ್ಟು. ಪೇಟೆಲಿ ಮಾಪ್ಳೆ ಕೊಡ್ತ ಹಾಂಗಿಪ್ಪ ಸಣ್ಣ ಕಟ್ಟು ಅಲ್ಲ, ದೊಡ್ಡ ದೊಡ್ಡ ಹಣ್ಣುಗೊ ಇಪ್ಪ ದೊಡ್ಡ ಕಟ್ಟು. ಬೇರೆ ಬೇರೆ ದಿನ ಹಣ್ಣಪ್ಪ ನಮುನೆದು ನೋಡಿ ತುಂಬುಸುಗು ಅಜ್ಜಿ.

ಇಂದ್ರಾಣ ಶುದ್ದಿ ಆ ಚಿಕ್ಕು ಮನೆಗೆ ಎತ್ತಿದ ಮತ್ತಾಣದ್ದು:
ಚಿಕ್ಕಿನ ಕಟ್ಟ ಎತ್ತಿದ ದಿನಂದಲೇ ಒಪ್ಪಕ್ಕಂಗೆ ನವರಾತ್ರಿಯ ಹಾಂಗೆ ಹಬ್ಬ ಸುರು. ಮುಗಿವನ್ನಾರ ಗೌಜಿ ಅಲ್ದೋ!

ದಿನಕ್ಕೆ ಎರಡು ದೊಡ್ಡ ಚಿಕ್ಕಾರೂ ಹಣ್ಣಕ್ಕು. ಕಡಮ್ಮೆಲಿ ಒಂದು! ಹಾಂಗಿಪ್ಪಗ ಒಪ್ಪಕ್ಕಂಗೆ ಕುಶಿ ಆಗದ್ದೆ ಎಲ್ಲಿಗೆ? :-)
ಒಳ್ಳೆತ ಹಣ್ಣಾದ್ದರ ನೋಡಿ ಅಮ್ಮ ತಂದು ಒಪ್ಪಕ್ಕನತ್ರೆ ಕೊಡುಗು. ಇದ ಒಪ್ಪಕ್ಕೊ, ಒಂದು ಚಿಕ್ಕು ಹಣ್ಣಾಯಿದು, ತಿನ್ನಿ - ಹೇಳಿಗೊಂಡು.
ಸ್ಲೇಟಿಲಿ ಆನೆ ಚಿತ್ರ ಬಿಡುಸಿಗೊಂಡು ಕೂದ ಒಪ್ಪಕ್ಕನ ಕೈಗೆ ಚಿಕ್ಕು ಎತ್ತಿದ ಕೂಡ್ಳೆ ಸ್ಲೇಟು ಒಂದು ಮೂಲಗೆ ಎತ್ತಿತ್ತು. ಕೇಳುವೋರೇ ಇಲ್ಲೆ ಅದರ, ಪಾಪ! ;-)
ಆ ದೊಡ್ಡ ಚಿಕ್ಕಿನ ಎಲ್ಲೊರಿಂಗೆ ಬಪ್ಪ ಹಾಂಗೆ ಹಂಚುವ ಕೆಲಸ ಒಪ್ಪಕ್ಕಂಗೆ ಇದ್ದನ್ನೆ, ಅಷ್ಟು ಜೆವಾಬ್ದಾರಿಯ ದೊಡ್ಡ ಕೆಲಸ ಇಪ್ಪಗ ಸಣ್ಣ ಆನೆ ಚಿತ್ರ ಆದರೂ ಎಂತ ಲೆಕ್ಕ!

ಒಪ್ಪಣ್ಣನ ಮನೆಲಿ ಐದು ಜೆನ - ನಿಂಗೊಗೆ ಗೊಂತಿಪ್ಪದೇ. ಅಪ್ಪ-ಅಮ್ಮ-ದೊಡ್ಡಣ್ಣ-ಒಪ್ಪಣ್ಣ-ಒಪ್ಪಕ್ಕ. ಸಣ್ಣ ಜೆನ ಹಂಚುದು.
ಚಿಕ್ಕಿನ ಐದು ತುಂಡು ಮಾಡುದು ಕಷ್ಟ ಅಲ್ದೋ, ಹಾಂಗೆ ಸುಲಬ ಅಪ್ಪಲೆ ಸಮಸಂಕೆ - ಆರು ತುಂಡು ಮಾಡುಸ್ಸು.
  • ಆರಾದರೆ ಒಂದು ತುಂಡು ಜಾಸ್ತಿ ಬಂತನ್ನೆ, ಅದಾರಿಂಗೆ? ;-)
  • ಅಮ್ಮಂಗೆ ಹೇಳಿ ಒಂದು ತುಂಡು, ಇಪ್ಪದರಲ್ಲಿ ದೊಡ್ಡದು. ಎಂತಕೇಳಿರೆ, ಅಮ್ಮ ಚಿಕ್ಕು ತಿಂಬದು ಕಮ್ಮಿ. (ಕೊಟ್ರೆ ತಿಂಗೋ ಏನೋ, ಕೊಟ್ರಲ್ದೋ.!) ಹಾಂಗಾಗಿ ಅಮ್ಮಂಗೆ ಹೇಳಿ ಮಡಗಿದ ಚಿಕ್ಕಿನ ತುಂಡು ಆರಿಂಗೆ?
  • ದೊಡ್ಡಣ್ಣಂಗೆ ಹೇಳಿ ಇಪ್ಪ ತುಂಡಿಲಿ ಅರ್ದ ಮಾಂತ್ರ ಅವಂಗೆ ಸಿಕ್ಕುದು. ಒಳುದ ಅರ್ದ, ಅದಾರಿಂಗೆ?
  • ಅಪ್ಪನ ಮೇಲೆ ತುಂಬ ಪ್ರೀತಿ, ಗೌರವ. ಆದ ಕಾರಣ ಅಪ್ಪಂಗೆ ಹೇಳಿ ಇಪ್ಪ ತುಂಡಿನ ಅರ್ದ ಅಪ್ಪಂಗೇ ಕೊಡುಗು, ಒಳುದ ಅರ್ದ, ಅದಿನ್ನಾರಿಂಗೆ?
  • ಒಪ್ಪಣ್ಣನ ಮೇಲೆ ತುಂಬ ಕೋಪ, ಎಂತಕೇಳಿರೆ ಒಪ್ಪಣ್ಣ ಒಂದೇ ಒಂದು ತುಂಡು ಬಿಡ° ಇದಾ! ಬಜ್ಜಿ ಬಜ್ಜಿ ಆದ ಹೊಡೆಣ ತುಂಡು ಇಡೀ ಒಪ್ಪಣ್ಣಂಗೆ ಕೊಡುಗು, ಪಿಸುರಿನ ಸಂತೋಶಲ್ಲಿ. ;-)
ಅಂತೂ, ತಿಂಬಲೆ ಸುರು ಮಾಡುವ ಮದಲು ಎಲ್ಲೊರಿಂಗೆ ರಜ ರಜ ಆದರೂ ಕೊಟ್ಟೇ ಕೊಡುಗು. :-)

ಒಪ್ಪಣ್ಣಂಗೆ ಬೇಗ ತಿಂದಕ್ಕಿದಾ, ಒರಿಶಗಟ್ಳೆ ಆದ ಸರ್ವೀಸು ಅದೊಂದೇ ಅಲ್ದೋ , ಹಾಂಗೆ! ಒಪ್ಪಣ್ಣನ ಕೈಲಿ ಇಪ್ಪದು ಕಾಲಿ ಆದ ಕೂಡ್ಳೆ ಒಪ್ಪಕ್ಕಂದು ಸುರು ಆತು.
"ಎನ್ನ ಕೈಲಿ ಮೂರು ಚಿಕ್ಕಿನ ತುಂಡು ಇದ್ದು, ನಿನ್ನ ಕೈಲಿ ಒಂದೂ ಇಲ್ಲೆ, ಲಲ್ಲಲಾ!" ಹೇಳಿ. ’ಕೈತೊರುಸುವವ ಕುಡೆಲಿಪ್ಪದರ ಏಳುಸುತ್ತ’ ಕೆಲಸ ಈ ಒಪ್ಪಕ್ಕಂದು.

ಒಂದೆರಡು ಸರ್ತಿ ಮಾತಾಡದ್ದೆ ಕೂದರೂ, ಮೂರನೇ ಸರ್ತಿ ಒಪ್ಪಣ್ಣ ಬಾಯಿಬಿಟ್ಟು ಕೇಳುದು ಒಪ್ಪಕ್ಕನತ್ರೆ- ಎನಗೊಂದು ಕೊಡ್ತೆಯಾ?. ಹಾಂಗೆ ಕೇಳುವನ್ನಾರವೂ ಒಪ್ಪಕ್ಕಂಗೆ ಸಮಾದಾನ ಆಗ ಇದಾ! ಕೇಳಿದ ಕೂಡ್ಳೆ ’ನಿನಗೆ ಕೊಡೆ, ದೊಡ್ಡಣ್ಣಂಗೆ ಆದರೆ ಕೊಡುವೆ’ ಹೇಳುಗು. ಹತ್ತರೆ ಕೂದ ದೊಡ್ಡಣ್ಣಂಗೆ ಹೆದರಿ ಮಾತಾಡದ್ದೆ ಇದ್ದರೂ ಪಿಸುರು ಎಳಗಿ ಎಳಗಿ ಬಕ್ಕು ಒಪ್ಪಣ್ಣಂಗೆ. :-) :-x
ಒಪ್ಪಣ್ಣ-ಒಪ್ಪಕ್ಕನ ಚಿರಿಪಿರಿಯ ಜಗಳ ಹೀಂಗೇ ಮುಂದುವರಿವಗ ತಲೆಬೆಶೀ ಅಪ್ಪದು ಅಮ್ಮಂಗೆ, ’ಒಳ ಇನ್ನೊಂದು ಚಿಕ್ಕು ಇದ್ದು ಹೇಳಿ ಕಾಣ್ತು, ಕೊರದು ತಿಂಬಲಾಗದೋ?, ಒಪ್ಪಕ್ಕನತ್ರೆ ಜಗಳ ಮಾಡ್ತದಕ್ಕೆ’ ಹೇಳುಗು ಅಮ್ಮ.
ರಪಕ್ಕ ಹೋಗಿ ಒಳ ಹರಗಿ ಮಡಗಿದ ಚಿಕ್ಕಿಲಿ ಹಣ್ಣು ಇದ್ದಾ ಹೇಳಿ ನೋಡ್ತ ಕೆಲಸ. ಹಾಂಗೆ ನೋಡಿ ನೋಡಿಯೇ ಎಂತ ಕಾಯಿ ಇದ್ದರೂ ಹಣ್ಣಕ್ಕು, ಹ್ಹೆ ಹ್ಹೆ. ಅಂತೂ ನಿಜವಾಗಿ ಹಣ್ಣಾದ ಇನ್ನೊಂದರ ಹಿಡ್ಕೊಂಡು ಬಂದಪ್ಪಗ ’ಅಮ್ಮ, ಅವನತ್ರೆ.... ಅದರ ಎನಗೆ ಕೊಡ್ಳೆ ಹೇಳೂ...’ ಹೇಳಿ ಒಪ್ಪಕ್ಕಂದು ರಾಗ.
’ಕೊಡೆ ನಿನಗೆ, ಇದು ಎನಗೆ ಮಾಂತ್ರ’ ಹೇಳಿ ಹೇಳುದು ಒಪ್ಪಣ್ಣ, ಒಪ್ಪಕ್ಕನ ಎಳಗುಸುಲೆ.

ಎಳಗುಸಿದಷ್ಟೂ ಎಳಗುಗು ಒಪ್ಪಕ್ಕಂಗೆ, ಕೊಡ್ಳೇ ಬೇಕು ಹೇಳಿ ಗೆಂಟು ಮಾಡುಗು ಅಮ್ಮನತ್ರೆ. ಆತಪ್ಪ, ಅರ್ದ ಒಪ್ಪಕ್ಕಂಗೆ ಕೊಡ್ಳಾಗದಾ, ಹೇಳಿ ಅಮ್ಮಂದು ಮದ್ಯಸ್ತಿಕೆ.
ಅಂತೂ ಇಂತೂ ಆ ಚಿಕ್ಕು ಒಪ್ಪಣ್ಣ-ಒಪ್ಪಕ್ಕಂಗೆ ಅರ್ದರ್ದ ಹೇಳಿ ಪಂಚಾತಿಗೆ ಆತು. ಒಪ್ಪಣ್ಣ ತುಂಡು ಮಾಡಿಯುದೇ ಆತು. ಅಷ್ಟಪ್ಪಗ ಒಪ್ಪಕ್ಕಂದು ಬೇರೆಯೆ.
’ದೊಡ್ಡರ್ದ ಎನಗೆ’!!! ;-)
ಅರ್ದ ಹೇಳಿದ ಮೇಲೆ ದೊಡ್ಡದು ಸಣ್ಣದು ಹೇಳಿ ಇಲ್ಲೆನ್ನೆ, ಎರಡು ಅರ್ದವೂ ಒಂದೇ ನಮುನೆ, ಎರಡರ್ದ ಸೇರಿ ’ಒಂದು’ ಅಪ್ಪದು ಹೇಳಿ ದೊಡ್ಡಣ್ಣ ಗಣಿತದ ಸೂತ್ರ ಹಿಡುದು ಹೇಳಿದ. ಬಹುಮುಖ್ಯವಾದ ಈ ಚಿಕ್ಕಿನ ಜಗಳದ ಹೊತ್ತಿಲಿ ಅವಂಗೂ, ಗಣಿತದ ನೆಕ್ಕರೆ ಪಂಡಿತರಿಂಗೂ ಅದು ಹಿತ ಆವುತ್ತೋ ಏನೊ, ಒಪ್ಪಕ್ಕಂಗೆ ಅದು ಕುಶಿ ಅಪ್ಪಲೆ ಸಾದ್ಯವೇ ಇಲ್ಲೆ. ಒಪ್ಪಕ್ಕನ ಭಾಶೆಲಿ ಅರ್ದ ಹೇಳಿರೆ ’ತುಂಡು’ ಹೇಳಿ ಅರ್ಥ. ಅದಕ್ಕೆ ಒಂದು ಹಣ್ಣಿನ ಸುಮಾರು ಅರ್ದ ಮಾಡ್ಳೆ ಅರಡಿಗು, ಶಾಲೆಗೆ ಹೋವುತ್ತ ದೊಡ್ಡಣ್ಣಂಗೆ ಅದು ಅರಡಿಯ ಇದಾ! ;-)
ಅಂತೂ ಈ ಚಿಕ್ಕಿಲಿಯೂ ದೊಡ್ಡ ತುಂಡು(ಅರ್ದ) ತೆಕ್ಕೊಂಡು ಮಡುಗಿತ್ತು. ಮೊದಲಾಣ ತುಂಡುಗಳೂ, ಈಗಾಣ ದೊಡ್ಡರ್ದವನ್ನೂ ಅರ್ದ ಗಂಟೆ ಕೈಲಿ ಹಿಡ್ಕೊಂಡು ತಿರುಗ್ಗು. ರಜ್ಜ ಹೊತ್ತು ಜಗಳ ಮಾಡ್ಳೆ ಅವಕಾಶ ಸಿಕ್ಕುತ್ತೋ ನೋಡುಗು, ಒಪ್ಪಣ್ಣ ಎಂತಾರು ಉತ್ತರ ಕೊಡ್ಳೆ ಹೋದರೆ ’ದೊಡ್ಡಣ್ಣ, ಒಪ್ಪಣ್ಣ ಎಳಗುಸುತ್ತಾ’ ಹೇಳಿ ದೂರು ಕೊಡುಗು. ಒಂದೋ ರಜ್ಜ ತಿಂದರೂ ತಿಂದತ್ತು, ಬಚ್ಚಿ ಬೊಡುದ ಮತ್ತೆ ಆ ಚಿಕ್ಕಿನ ಅಮ್ಮನ ಕೈಲಿ ಕೊಟ್ಟತ್ತು. ಅಲ್ಲಿಗೆ ಚಿಕ್ಕಿನ ತಿಂತ ವೈವಾಟು ಮುಗುತ್ತು.
ಅಂತೂ ಚಿಕ್ಕಿಂಗೆ ಅದರ ನಿಜವಾದ ಸೀವು ಬಪ್ಪದು ಆ ಜಗಳ ಆದರೆ ಮಾಂತ್ರ.

ಇದು ಕುಂಬ್ಳೆ ಅಜ್ಜಿ ಕೊಡ್ತ ಚಿಕ್ಕು ಮಾಂತ್ರ ಅಲ್ಲ, ಆಚಮನೆ ದೊಡ್ಡಣ್ಣ ತಂದ ನಕ್ಷತ್ರ ಹಣ್ಣಾದರೂ ಅದೇ ಕತೆ, ಪೇಟೆಂದ ಅಪ್ಪ ತಂದ ಮಾವು, ಯೇಪುಲಿಂಗೂ(apple) ಅದೇ ಕತೆ, ಜಗಳ ಮಾಡಿ, ರುಚಿ ಬರುಸಿ ಹಂಚುದು, ತಿನ್ನದ್ರೂ ಅತು ಅಕೆರಿಗೆ.

ಮೊನ್ನೆ ಪುತ್ತೂರತ್ತಿಗೆ ಮನೆಗೆ ಹೋಗಿತ್ತಿದ್ದೆ.
ಒಂದೇ ಮಗಳು ಅವಕ್ಕೆ, ಒಂದು ಮಗಳು ಮಾಂತ್ರ. ವಿಕ್ಟರ್ಸಿಂಗೆ ಹೋಪದು. ಬಯಂಕರ ಕೊಂಗಾಟಲ್ಲಿ ಬೆಳೆತ್ತಾ ಇದ್ದು. ಶಾಲಗೆ ಬೊಟ್ಟು ಬಳೆ ಹಾಕಲಾಗ ಇದಾ, ಹಾಂಗೆ ಕಷ್ಟ ಅಪ್ಪದು ಬೇಡಾಳಿ ಮನೆಲಿದೆ ಹಾಕಿ ಅಬ್ಯಾಸ ಮಾಡ್ಸಿದ್ದಿಲ್ಲೆ ಈ ಅತ್ತಿಗೆ. ಅಣ್ಣಂದೇ ಹಾಂಗೆ, ಕೊಂಗಾಟಲ್ಲಿ ಸಾಂಕುತ್ತಾ ಇದ್ದವು. ಕೇಳಿದ್ದರ, ಕೇಳದ್ದರ ಎಲ್ಲ ತಂದು ಕೊಡ್ತವು. ಮೊನ್ನೆ ಹೋಗಿಪ್ಪಗ ಪೇಟೆಂದ ತಂದ ಚಿಕ್ಕು ಇತ್ತು. ಒಂದೇ, ಎರಡೇ ಹೇಳಿ ಎಂತ ಇಲ್ಲೆ - ಬೇಕಾದಷ್ಟು. ಹೊಟ್ಟೆ ಬಿರಿಯಪ್ಪ.

ಚೆಂದಕೆ ತೊಳದು, ತುಂಡುಸಿ, ಕುಪ್ಪಿಯ ಕರಟಲ್ಲಿ ತುಂಬುಸಿಗೊಂಡು ತಂದುಕೊಟ್ಟತ್ತು, ಆ ಪುಟ್ಟಿ. ಒಳಂದ ಅತ್ತಿಗೆ ಕೊಟ್ಟು ಕಳುಸಿದ್ದು. ಒಂದು ಇಸುಮುಳ್ಳು (fork)ದೇ ಮಡಿಕ್ಕೊಂಡು. ಇಸುಮುಳ್ಳಿಲಿ ಕುತ್ತಿ ಕುತ್ತಿ ಟೀವಿ ನೋಡಿಗೊಂಡು ತಿನ್ನೆಕ್ಕು ಅದರ. ಅತ್ತಿತ್ತೆ ಮಾತಾಡ್ಳೂ ಇಲ್ಲೆ ಸಮಗಟ್ಟು. ಒಪ್ಪಣ್ಣ ಮಾತಾಡ್ಸುಲೆ ಹೆರಡುವಗ ’ಸಲೆನ್ಸ್’ ಹೇಳಿತ್ತು ಆ ಕೂಸು. ’ಇಲ್ವರ್ಸು ಪಂಪಿಲಿಪ್ಪದು ಅದು’ ಹೇಳಿಕ್ಕಿ ಒಪ್ಪಣ್ಣ ಸುಮ್ಮನೆ ಕೂದ. ಎಲಿ-ಪುಚ್ಚೆ ಜಗಳದ ಕಾರ್ಟೂನು ಬಂದುಗೊಂಡು ಇತ್ತು. ಆ ಪುಚ್ಚಗೆ ಎಲಿಯ ಹಿಡಿವಲೇ ಎಡಿಗಾಯಿದಿಲ್ಲೆಡ. ಹಾಂಗೆ ಬಾರೀ ಕುಶಿ ಆ ಕೂಸಿಂಗೆ. ಆ ಎಲಿ ಪುಚ್ಚೆಯ ಬೊಂಬೆ ಚಿತ್ರಂಗಳೇ ಅದರ ಪ್ರೆಂಡುಗೊ, ಅದರೊಟ್ಟಿಂಗೇ ಭಾವನೆಗೊ. ನಿಜವಾದ ಮನುಶ್ಯರ ಬೊಂಬೆಗಳೊಟ್ಟಿಂಗೆ ಭಾವನೆ ಹಂಚಿಯೇ ಗೊಂತಿಲ್ಲೆ ಅದಕ್ಕೆ.
ನೀಟಾಗಿ ತಿಂದಾತು, ತಿಂದು ಕುಪ್ಪಿ ಕರಟವ ಕರೆಲಿ ಮಡಗಿ ಆತು. ಹತ್ತು-ಹದಿನೈದು ತುಂಡು ಕಾಲಿ. ರುಚಿಯೇ ಬಯಿಂದಿಲ್ಲೆ, ಎಂತ? ಜಗಳವೇ ಮಾಡಿದ್ದಿಲ್ಲೆ. ಚೆ!
ಆ ಪುಟ್ಟು ಕೂಸಿಂಗೆ ಇಂದಿನ ವರೆಗೆ ಅಂತಾ ಜಗಳದ ಅವಕಾಶವೇ ಸಿಕ್ಕಿದ್ದಿಲ್ಲೆ. ಹಂಚಿ ತಿಂಬ ಅವಕಾಶವೇ ಇಲ್ಲೆ,
ದೊಡ್ಡ ಆದ ಮತ್ತೆ ಹೇಂಗಿಕ್ಕು ಅದರ ಮನಸ್ತಿತಿ? ಎಂತದನ್ನೂ ಹಂಚುಲೆ ಅವಕಾಶವೇ ಇಲ್ಲೆ. ಒಬ್ಬನೇ ಮಗು ಆದ ಮನೆಲಿ ಇದ್ದೋ ಆ ಆನಂದ?

ಅಂದು ಅಷ್ಟು ಜಗಳ ಮಾಡಿದ್ದ ಒಪ್ಪಕ್ಕ ಈಗಳೂ ಹಾಂಗೆ ಹೇಳಿ ಗ್ರೇಶೆಡಿ ನಿಂಗೊ, ಈಗ ಒಂದು ಹೆಡಗೆ ಚಿಕ್ಕು ತೆಕೊಂಡೋಗಿ ಕೊಟ್ರೂ ’ಯೇ ಅಣ್ಣ, ಎನಗೆಂತಕೆ ಇಷ್ಟೆಲ್ಲ!!’ ಹೇಳುಗು. ಅದೇ ಅಂದ್ರಾಣಷ್ಟೇ - ಆ ಮೂರೂವರೆ ತುಂಡು ಕೊಟ್ರೆ ಅರೆವಾಶಿ ವಾಪಾಸ್ ಕೊಡುಗು. ;-)
ಸಣ್ಣ ಇಪ್ಪಗ ಜಗಳ ಮಾಡಿ ಮಾಡಿ ಬೆಳದು ಈಗ ಜಗಳವೇ ಆಗದ್ದಷ್ಟು ಹತ್ತರೆ ಆಗಿ ಬಿಡ್ತವು, ಮನೆ ಮಕ್ಕೊ. ಅಲ್ದಾ?

ಒಂದೊಪ್ಪ: ಹಂಚುಲೆ ಅರಡಿಯದ್ದವಂಗೆ ಹೊಂದಿಗೊಂಬಲೆ ಅರಡಿಗೋ?