ರೂಪತ್ತೆ ಮನೆಲಿ ಎಲಿ ಉಪದ್ರ ಅಡ


ಮಾಲ ಚಿಕ್ಕಮ್ಮನ ನೆರೆಕರೆಯ ದೀಪಕ್ಕಂಗೆ ಸಂಬಂದಲ್ಲಿ ಒಂದು ಅತ್ತೆ ಇದ್ದು. ರೂಪ° ಹೇಳಿ ಹೆಸರು, ಎಂಗೊ ಎಲ್ಲ ರೂಪತ್ತೆ ಹೇಳುದು. ರೂಪತ್ತೆದು ಬಾಯಿ ರಜ ಬೊಂಬಾಯಿ- ಎಂತ ವಿಶಯ ಆದರೂ ಅದರ ಬಾಯಿಲಿ ನಿಲ್ಲ. ಎಲಿ ಹೋದಲ್ಲಿ ಹುಲಿ ಹೋತು ಹೇಳುಗು. ಮನೆಲಿ ಏನಾರು ಆದರೆ ಎಲ್ಲೊರತ್ರೆ ಹೇಳಿ ಕಳಿಯೆಕ್ಕು. ಇಲ್ಲದ್ರೆ ಅದಕ್ಕೆ ಒರಕ್ಕೇ ಬಾರ. ಅದರ ಈ ಬುದ್ದಿಂದಲೇ ಮಾಲಚಿಕ್ಕಮ್ಮಂಗೆ ಅದರ ಕಂಡ್ರೇ ತಲೆಸೆಳಿತ್ತು. ದೀಪಕ್ಕನೂ - ಎದುರಂದ ಅತ್ತೆ ಅತ್ತೆ ಹೇಳಿರೂ, ಹಿಂದಂದ ಅಷ್ಟಕ್ಕಷ್ಟೆ. ;-)

ರೂಪತ್ತೆದು ಸಂತೃಪ್ತ ಸಂಸಾರ. ಇಬ್ರು ಮಕ್ಕೊ. ದೊಡ್ಡವ° ಬೆಂಗ್ಳೂರಿಲಿ ಇಂಜಿನಿಯರು ಅಡ. ದೊಡ್ಡ ಸಂಬಳ ಇಪ್ಪ ಕೆಲಸ. ಅಂದೇ ಸೇರಿದ್ದ°. ಸಣ್ಣ ಇಪ್ಪಗಳೇ ಬಾರೀ ಉಶಾರಿ ಅಡ. ಆಚಕರೆ ಮಾಣಿಯ ಹಾಂಗೆ ಬಿಂಗಿ ಎಲ್ಲ ಇತ್ತಿಲ್ಲೆ ಅವಂಗೆ. ಒಳ್ಳೆ ಶಾಲೆಲಿ ಓದಿ ಒಳ್ಳೆ ಮಾಣಿ ಆಗಿತ್ತಿದ್ದ°. ಈಗ ಐಬಿಯಮ್ಮೋ, ಇಂಪೋಸಿಸ್ಸೋ – ಹೀಂಗಿರ್ತ ಯೇವದೋ ಒಂದರ್ಲಿ ತಿಂಗಳಿಂಗೆ ಎರಡು ಕಂಡಿ ಎಣಿಸುತ್ತ° ಅಡ. ಎರಡು-ಮೂರು ತಿಂಗಳಿಂಗೊಂದರಿ ಬಪ್ಪಗ ಜರಿ ಕಂಬಿ ಸೀರೆಯೋ, ಅಲ್ಲದ್ರೆ ಫ್ಯಾನ್ಸಿ ಸೀರೆಯೋ ಮಣ್ಣ ತಪ್ಪದಿತ್ತು, ಪ್ರೀತಿಯ ಅಮ್ಮಂಗೆ ಹೇಳಿಗೊಂಡು. ಆಚ ಒರಿಶ ಮದುವೆ ಆಯಿದು, ಹಾಂಗೆ ಸದ್ಯ ತಾರದ್ದೆ ರಜ್ಜ ಸಮಯ ಆತು. ಅವಂಗೆ ಮದುವೆ ಆದ್ದುದೇ ಹಾಂಗೆ, ಇನ್ನೊಂದು ಸಾಫ್ಟ್ವೇರನ್ನೇ ಅಡ. ಒಳ್ಳೆ ಸಾಫ್ಟುವೇರು ಆಯೆಕ್ಕು ಹೇಳಿ ಹುಡ್ಕಿ ಹುಡ್ಕಿ ಒಂದು ಸಿಕ್ಕಿತ್ತು ಮತ್ತೆ ಅಕೆರಿಗೆ. ಈಗಳೂ ಕೆಲಸಕ್ಕೆ ಹೋವುತ್ತಾ ಇದ್ದು, ಕಳುದೊರಿಶ ಜರ್ಮನಿಗೋ, ಜಪಾನಿಂಗೋ ಏನೊ ಹೋಗಿ ಬಯಿಂದು ಆ ಕೂಸು (ಹೆಮ್ಮಕ್ಕೊ). ಹೂಗು ಸೂಡದ್ರೂ, ಬಳೆ ಹಾಕದ್ರೂ, ಕುಂಕುಮ ಮಡುಗದ್ರೂ, ಸಾಫ್ಟುವೇರು ಅಪ್ಪನ್ನೇ! ಅಷ್ಟು ಸಾಕು ರೂಪತ್ತೆಗೆ.

ಎರಡ್ಣೇದು ಮಗಳು. ಕಳುದೊರಿಶ ಇಂಜಿನಿಯರು ಕಲ್ತು ಆತು. ಇಲ್ಲೇ ಹತ್ತರಾಣ ಕುರುಂಜಿ ಗೌಡನ ಕೋಲೇಜು ಇದ್ದನ್ನೆ, ಅಲ್ಲಿ. ಕಲಿವಲೆ ಅದರ ಅಣ್ಣನಷ್ಟು ಉಶಾರಿ ಅಲ್ಲ, ಎಂತ ಮಾಡುದು- ಎಲ್ಲೊರು ಒಂದೇ ನಮುನೆಯೋ! ಹೇಳುಗು ರೂಪತ್ತೆ ಅಂಬಗಂಬಗ. ಸಣ್ಣ ಕ್ಲಾಸಿಲಿ ಇಪ್ಪಗಳೇ ನವೋದಯ ಅದು ಇದು ಹೇಳಿ ಸುಮಾರು ಪೈಸೆ ಸೊರುಗಿದವು. ಇಂಜಿನಿಯರು ಕಲಿವಲಪ್ಪಗ ಒಂದರಿಂಗೆ ರೂಪತ್ತೆಯ ಅಪ್ಪನ ಮನೆಯೋರು ತಾಂಗಿದ್ದು. ಐದೊರಿಶ ಹಿಂದೆ ಪೀಯೂಸಿ ಕಳುದಪ್ಪಗ ಬೇಕಾದಲ್ಲಿ ಸೀಟು ಸಿಕ್ಕಿತ್ತಿಲ್ಲೆ ಕೂಸಿಂಗೆ. ಮತ್ತೆ ಕುರುಂಜಿಯ ಹತ್ತರೆ ರೂಪತ್ತೆಯ ತಮ್ಮ ಗೌಡುಗಳ ಹಿಡುದು ಮಾತಾಡ್ಸಿದ್ದಡ. ಮಗಳಿಂಗೆ ಸೀಟು ಕೊಡುಸಿದ್ದಕ್ಕೆ ತಮ್ಮನ ಮೇಲೆ ಪ್ರೀತಿ ಸಾವಿರ ಪಾಲು ಜಾಸ್ತಿ ಆಗಿತ್ತು ರಜ ಸಮಯ.

ಈಗ ಕಲ್ತು ಒಂದು ಒರಿಶ ಆದರೂ ಕೆಲಸ ಹೇಳಿ ಎಲ್ಲಿಯೂ ಆಯಿದಿಲ್ಲೆ ಅಡ. ಈಗ ಹಾಂಗೇಡ ಅಲ್ದ, ಪೈಸೆಯೇ ಇಲ್ಲೆಡ ಕಂಪೆನಿಗಳ ಹತ್ರೆ. ಇಡೀ ಲೋಕವೇ ಲೋಸಿಲಿ ನಡೆತ್ತದಡ. (ಅಂಬಗ ಮದಲು ಪ್ರಿಂಟು ಮಾಡಿದ ಅಷ್ಟು ಪೈಸೆ ಎಲ್ಲ ಎಲ್ಲಿಗೆ ಹೋತು ಹೇಳಿಗೊಂಡು ಒಂದು ಕನುಪ್ಯೂಸು ಬಪ್ಪದು ಒಪ್ಪಣ್ಣಂಗೆ.) ಕೂಸಿಂಗೆ ಕೆಲಸ ಆಗದ್ರೆ ಎಂತಾತು - ಕೂಸೇನು ಸುಮ್ಮನೆ ಕೂಯಿದಿಲ್ಲೆ ಇದಾ. ರೂಪತ್ತೆಯ ಮೇಲೆ ಏವ ಪಾಪಪುಣ್ಯ ಕಂಡತ್ತೋ ಏನೊ, ಅಳಿಯನ ಹುಡ್ಕುತ್ತ ತಲೆಬೆಶಿ ರೂಪತ್ತೆಗೆ ಕೊಟ್ಟಿದೇ ಇಲ್ಲೆ. ಅದುವೇ ಹುಡ್ಕಿ ಸಕಾಯ ಮಾಡಿದ್ದು. ಸುರುವಿಂಗೆ ಒಪ್ಪಿದ್ದಿಲ್ಲೆ ಈ ರೂಪತ್ತೆ, ಮತ್ತೆ ಅವಕ್ಕುದೇ ಒಳ್ಳೆತ ಅಡಕ್ಕೆ ಆವುತ್ತು, ಅಲ್ಯಾಣ ಹೆಮ್ಮಕ್ಕಳೂ ದಾರವಾಹಿ ನೋಡ್ತವು ಹೇಳಿ ಎರಡು-ಮೂರು ಜೆನರ ಕೈಲಿ ತಿಳುದು, ಖಂಡಿತ ಆದ ಮತ್ತೆ ಒಪ್ಪಿತ್ತು. ಈಗ ರೂಪತ್ತೆ ಮನೆಲಿ ಮಗಳ ಮದುವೆ ಗೌಜಿ ಸುರು ಆಯಿದು. ಬದ್ದ ಕಳುತ್ತೋ ಇಲ್ಲೆಯೋ ಒಪ್ಪಣ್ಣಂಗೆ ಗೊಂತಿಲ್ಲೆ. ಬಹುಶ್ಶ ಆಟಿ ಕಳುದು ಮದುವೆ ಜೆಂಬ್ರ ಇರೆಕ್ಕು. ಅಜ್ಜಕಾನ ಬಾವಂಗೆ ಗೊಂತಿಕ್ಕು.

ಮಗನ ಮೇಲೆ ತುಂಬಾ ಪ್ರೀತಿ ಇದಾ!. ಆಆಆಆಚ ಒರಿಶ ಮಗ° ಕಂಪೆನಿ ಕೆಲಸಲ್ಲಿ ಆಷ್ಟ್ರೇಲಿಯಕ್ಕೆ ಹೋಗಿತ್ತಿದ್ದ° ಅಡ. ಅದೊಂದು ಊರ ಹೆಸರು- ಸಿಡ್ನಿಯೋ, ಕಿಡ್ನಿಯೋ ಎಂತದೋ - ’ಸೂರಂಬೈಲು’ ಹೇಳಿದಷ್ಟೇ ಬಾಯಿಪಾಟ ಆಗಿತ್ತು ಆ ರೂಪತ್ತೆಗೆ. ಅಷ್ಟಪ್ಪಗ ಮಾತಾಡ್ಳೆ ಹೇಳಿ ಮಗ° ಒಂದು ಮೊಬೈಲು ತೆಗಶಿ ಕೊಟ್ಟಿದ°. ಮಗಳಿಂಗೆ ಗುರುಟುಲೂ ಆವುತ್ತು ಇದಾ. ಈ ರೂಪತ್ತೆ ಅದರ ಎಲ್ಲಿಗೆ ಹೋಪಗಳೂ ತೆಕ್ಕೊಂಗು, ಮೀವಗ ಹೇಂಗೆ ಹೇಳಿ ಗೊಂತಿಲ್ಲೆ.! ಮಹಿಳಾ ಪರಿಶತ್ತು ಮೀಟಿಂಗಿಲಿ ಇಪ್ಪಗ ಆ ಮೊಬೈಲಿಂಗೆ ಪೋನು ಬಾರದ್ರೆ ಬಯಂಕರ ಕಿರಿ ಕಿರಿ ಅಕ್ಕು ರೂಪತ್ತೆಗೆ. ಮೊಬೈಲು ಪ್ರತಿ ರಿಂಗು ಬಪ್ಪಗಳೂ ಮಗನ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಬಕ್ಕು ಅವಕ್ಕೆ. ಸೊಸೆ ಅವನ ಇನ್ನೂ ಚೆಂದಕೆ ನೋಡಿಗೊಳ್ಳಿ ಹೇಳಿ ಅವರ ಮನಸ್ಸಿಲಿ ಅನಿಸಿಗೊಂಡು ಇಪ್ಪದು. ಆಶ್ಟ್ರೇಲಿಯಂದ ಬಂದವ° ಅಲ್ದೋ, ಅಂಬಗಾಣ ಜೆಟ್ಳಾಗು ಈಗಳೂ ಇದ್ದೋ ಕಾಣ್ತು, ಪೋನಿಲಿ ಅಂಬಗಂಬಗ -ಬೇಗ ಮನುಗು ಮಗಾ- ಹೇಳಿ ರೂಪತ್ತೆ ನೆಂಪು ಮಾಡುಗು.
ರೂಪತ್ತೆ ಮಗಳಿಂಗೆ ಕಾರು ಬಿಡ್ಳೆ ಅರಡಿಗು, ರೂಪತ್ತೆ ಪಂಜ ದೇವಸ್ತಾನಕ್ಕೆ ನೆಡಕ್ಕೊಂಡು ಹೋಗದ್ದೆ ಕಾಲ ಆತು. ಈಗೀಗ ಎಲ್ಲಿಗೆ ಹೋವುತ್ತರೂ ಕಾರಿಲೇ!.

ಆ ಮನೆಲಿ ಇಪ್ಪ ಇನ್ನೊಬ್ಬರು ಈ ರೂಪತ್ತೆಯ ಗಂಡ. ಯಜಮಾನ್ರು ಹೇಳುದರಿಂದ ಗೆಂಡ ಹೇಳಿರೆ ಸಾಕು ಹೇಳಿ ಕೆಲವು ಸರ್ತಿ ಅನಿಸುತ್ತು. ಅವರ ಅಪ್ಪನ ಮನೆಯೋರೇ ದೊಡ್ಡೋರು, ಈಗ ಹೆಂಡತ್ತಿ ಮನೆಯೂ ದೊಡ್ಡೋರೇ - ದೊಡ್ಡೋರ ಮನೆಂದ ದೊಡ್ಡೋರ ಮನೆಗೇ ಬಂದ ಕಾರಣ ದೊಡ್ಡ ಕಷ್ಟ ಏನೂ ಆಯಿದಿಲ್ಲೆ. ಆದರೂ ಈಗಾಣ ಮನೆಂದ ಅವರ ಅಮ್ಮ ಅಡಿಗೆ ಮಾಡಿಗೊಂಡಿದ್ದ ಆ ಮನೆಯೇ ಒಳ್ಳೆದೋ ಹೇಳಿ ಕಾಂಬದು. ರೂಪತ್ತೆಗೆ ಅಮ್ಮ ಬೇಶಿ ಹಾಕಿದ್ದರಿಂದಲೂ, ಅಧಿಕಾರಯುತವಾಗಿ ಈಗ ಗೆಂಡನತ್ರೆ ಹೇಳುಲೆ ಎಡಿತ್ತಲ್ದ, ಈಗಳೇ ಒಳ್ಳೆದು ಹೇಳಿ ಅನುಸುದು. ಮನೆ ಕೆಲಸ ಎಲ್ಲ ಮಾವನೇ ಮಾಡ್ತ ಕಾರಣ ರೂಪತ್ತೆಗೆ ದಾರವಾಹಿ ನೋಡುದುದೇ, ಪೋನು ಮಾಡುದುದೇ ಮಾಂತ್ರ ಬಾಕಿ ಒಳಿವದು. ನೆರೆಕರೆ ಕೆಲವು ಮನೆ ಇದ್ದು, ಪೋನು ಮಾಡಿ ಮಾತಾಡ್ಳೆ.

ಮಾವ° ಅಕ್ಕಿ ತೊಳವಗ ಪೋನು ಸುರು ಮಾಡಿರೆ ಇರುಳು ಮಾವಂಗೆ ಪಾತ್ರ ತೊಳದಪ್ಪನ್ನಾರವೂ ಪೋನೇ ಪೋನು. ನಿನ್ನೆ ಇರುಳು ದಾರವಾಹಿಲಿ ನೋಡಿದ್ದರ ಇಂದು ಹಗಲು ಪೋನಿಲಿ ಹೇಳಿತ್ತು, ನಾಳೆ ಪೋನಿಲಿ ಹೇಳುಲೆ ಬೇಕಾಗಿ ಇಂದು ಪುನಾ ದಾರವಾಹಿ ನೋಡಿತ್ತು- ಅದೊಂದು ಅಂತ್ಯವೇ ಇಲ್ಲದ್ದ ಚಕ್ರ ಅಲ್ಲದೋ! ಮನುಗುಲಪ್ಪಗ ಮಗನತ್ರೆದೇ ಪೋನಿಲಿ ಮಾತಾಡ್ಳೆ ಇದ್ದು. ದಾರವಾಹಿ ವಿಶಯ ಅಲ್ಲ, ಬೇರೆ ಎಂತಾರು!
ರೂಪತ್ತೆಯ ವಿಶಯ ಎಂಗೊಗೆ ಇಷ್ಟೆಲ್ಲ ಹೇಂಗೆ ಗೊಂತಪ್ಪಾ ಹೇಳಿ ಆಶ್ಚರ್ಯ ಆತೋ ನಿಂಗಗೆ? ಕಾರಣ ಬಹು ಸರಳ. ಎಂತದೇ ಒಂದು ವಿಶಯ ಅದರ ಎದುರು ಬರಳಿ, ಆ ಸಮಯಕ್ಕೆ ಅದರ ಎದುರು ಸಿಕ್ಕಿದ ಎಲ್ಲೊರತ್ರೂ ಹೇಳಿ ಆತು. ಹೇಳುದು ಹೇಳುದು ಹೇಳಿ ಅಕೆರಿಗೆ ಅದು ಹೇಳಿಗೊಂಬದು ಹೇಳ್ತಲ್ಲಿಗೆ ಎತ್ತುತ್ತು. ಅದಕ್ಕೇ ದೀಪಕ್ಕಂಗೆ ಅದರ ಆವುತ್ತೇ ಇಲ್ಲೆ.

ಹೆಮ್ಮಕ್ಕಳ ಶುದ್ದಿ ಎಂತದೇ ಇರಳಿ. ರೂಪತ್ತೆ ಶುದ್ದಿ ಹೇಳ್ತ ರೀತಿಯೇ ಒಂದು ವೈಶಿಷ್ಠ್ಯ. ಎಂತದೇ ಶುದ್ದಿ ಮಾತಾಡ್ಳಿ, ಆ ಶುದ್ದಿಗೆ ಸಂಬಂದ ಪಟ್ಟ, ಬೇಕಾದ, ಬೇಡದ್ದ ಒಂದಷ್ಟು ವಸ್ತುಗಳ ಪ್ರಸ್ತಾಪ ಬತ್ತು. ಮನೆ ಸೊತ್ತುಗೊ ಎಂತೆಲ್ಲ ಇದ್ದು ಹೇಳ್ತದು ಎಲ್ಲೊರಿಂಗೂ ಗೊಂತಾಗಲಿ ಹೇಳುದು ಅವರ ಉದ್ದೇಶ ಆಗಿರ, ಆದರೂ ಅದರ ಹೆಸರೆಲ್ಲ ಬಕ್ಕು.

ಮೊನ್ನೆ, ಸದ್ಯ ಅದರ ಮನೆಲಿ ಆದ ಎಲಿ ಉಪದ್ರದ ಬಗ್ಗೆ ಹೇಳಿಗೊಂಡು ಇತ್ತಡ, ಮಾಲ ಚಿಕ್ಕಮ್ಮನತ್ರೆ. ಅದರಮೂಲ ಪಾಟ ಮರದು ಹೋದರೂ, ಸಾಮಾನ್ಯ ಹೇಂಗಿತ್ತು ಹೇಳಿ ನೆಂಪಿದ್ದು.
ರೂಪತ್ತೆ ಆದಿನ ಮಗನ ಹತ್ರೆ
ಮೊಬೈಲಿಲಿ ಮಾತಾಡಿ ಮನುಗಿದ ಮೇಲೆ ಹೆರಾಣ ಜೆಗಿಲಿಲಿ ಮಡಗಿದ – ಮಗ ತಂದ ಏರ್ ಕೂಲರಿನ ಹತ್ತರೆ ಕರಕರ ಕೆರವ ಶಬ್ದ ಕೇಳಿಗೊಂಡು ಇತ್ತಡ. ಹಗಲು ದಾರವಾಹಿ ನೋಡುವಗಳೇ ಇನ್ವರ್ಟರಿನ ಹತ್ತರೆ ಕೇಳುಗು, ಹೀಂಗೇ ಶಬ್ದ ಬಪ್ಪಗ ಗೆಂಡನತ್ರೆ ನೋಡ್ಳೆ ಹೇಳಿತ್ತಡ. ಹೋಗಿ ನೋಡುವಗ ಎಲಿ. ಅಲ್ಲಿಂದ ಓಡುಸಿದವಡ.ಸೀದ ಹತ್ತರೆ ಇದ್ದ ಟೀಪಾಯಿಯ ಅಡಿಂಗೆ ಸೇರಿಗೊಂಡತ್ತಡ. ಪಿಂಗಾಣಿ ಹೂದಾನಿ ಮಡಗಿದ ಟೀಪಾಯಿಯ ಅವು ಗೊಂತಿಲ್ಲದ್ದೆ ಹಂದುಸಿದವಡ, ಅದು ಬಿದ್ದು ಒಡದತ್ತು, ಆದರೆ ಎಲಿ ಗಾಬರಿಲಿ ಜೆಗಿಲಿಯ ಪಡುಮೂಲೆಗೆ ಓಡಿತ್ತಡ – ಇಂಟರ್ನೆಟ್ಟಿನ ಮೋಡೆಮ್ಮಿನ ಹತ್ತರೆ ಆಗಿ – ಕಂಪ್ಯೂಟರಿನ ಅಡಿಂಗೆ. ಅಲ್ಲಿ ಎಂತಾರು ಎಲಿ ಕೆರವದು ಬೇಡ, ಅಲ್ಲಿ ಇದ್ದರಾಗ ಹೇಳಿ ಅಲ್ಲಿಂದಲೂ ಓಡುಸುಲೆ ಹೇಳಿತ್ತಡ ಗೆಂಡನ ಹತ್ರೆ. ಅಲ್ಲಿಂದ ಕೈಸಾಲೆ (ಜೆಗಿಲಿಂದ ಒಳಾಣ ಕೋಣೆ)ಲಿ ಮಡಗಿದ – ಮಗನ ಸೀಡಿ ಪ್ಲೇಯರಿನ ಮೇಲೆ ಹೋಗಿ ಕೂದತ್ತಡ. ಅಲ್ಲಿಂದ ಹಾರಿ ಇಸ್ತ್ರಿ ಹಾಕುತ್ತ ಮೇಜಿನ ಬುಡಕ್ಕೆ. ಅಲ್ಲಿಂದಲೂ ಓಡುಸಿ ಅಪ್ಪಗ ದೇವರ ಕೋಣೆಲಿ ಕರೆಲಿ ಇಪ್ಪ ಗೋಡ್ರೆಜಿನ ಅಡಿಂಗೆ ಬಂದು ಕೂದತ್ತಡ. ಎರಡುನಿಮಿಶ ಶಬ್ದ ಮಾಡಿ ಅಪ್ಪಗ ಅಡಿಗೆ ಕೋಣೆ ಕರೆಲಿಪ್ಪ ಫ್ರಿಜ್ಜಿನ ಅಡಿಂಗೆ ಹೋತಡ. ಅಲ್ಲಿಂದ ಮತ್ತೆ ಗ್ರೈಂಡರಿನ ಬುಡಕ್ಕೆ. ಗ್ರೈಂಡರಿನ ಹತ್ತರಂದ ಗ್ಯಾಷ್ಟೌನ ಹತ್ರಂಗೆ. ಇನ್ನು ಆ ಗೇಸಿನ ಪೈಪು ಕೆರವದು ಬೇಡ ಹೇಳಿ ಓಡುಸಿ ಅಪ್ಪಗ ಸೀದ ಹೆರ ಹೋತಡ. ಹೆರ ಎಲ್ಲಿಗೆ? ಕಾರಿನ ಶೆಡ್ಡಿಂಗೆ. ಈಗ ಟಯರೀಸು ಮನೆ ಆದ ಮತ್ತೆ ಕಾರಿನ ನಿಲ್ಲುಸುದು ಶೆಡ್ಡಿಲೇ. ಮನೆಗೆ ಒತ್ತಕ್ಕೆ. ನಾಯಿಗೂಡಿನ ಹೊಡೆಲೇ. ಕಾರಿನ ಶೆಡ್ಡಿಂಗೆ ಹೋದರೆ ಮತ್ತೆ ಪುನಾ ಟೆನ್ಶನು, ಅಲ್ದೋ? ಆ ಹೊಸ ಕಾರಿನ ಒಳಂಗೆ – ಐ೨೦ ತೆಗೆಕು ಹೇಳಿ ಇತ್ತು, ಮಗ ಅದನ್ನೇ ತೆಗವ ಹೇಳಿ ಹೇಳಿದ್ದು, ಆದರೆ ಮತ್ತೆ ಅದು ಬುಕ್ ಮಾಡಿ ತುಂಬ ಸಮಯ ಕಾಯೆಕ್ಕು ಹೇಳಿ ಐ೧೦ ತೆಗದ್ದು - ಇನ್ನು ಆ ಐಟೆನ್ ಕಾರಿನ ಒಳಂಗೆ ಹೋದರೆ ಓಡುಸುದು ಹೇಂಗೆ? ಮತ್ತೆ ಸ್ಕೂಬಿ ಇದ್ದಲ್ದ ಆಲ್ಸೇಶನ್ ನಾಯಿ, ಶೇಡಿಗುಮ್ಮೆಂದ ತಂದದು, ಅದೇ ಆಯೆಕ್ಕಷ್ಟೆ. ಹಾಂಗೆ ಕಾರಿನ ಒಳಂಗೆ ಹೋಪ ಮದಲೇ ಓಡುಸಿಕ್ಕುವ ಹೇಳಿ ರೂಪತ್ತೆಗೆ ಅನಿಸಿದ್ದು ಅಷ್ಟೆ. ಅಂತೂ ಓಡಿತ್ತು ಎಲಿ, ಇನ್ನು ಬಾವಿ ಕರೆಲಿ ಎಲ್ಲೆ ಹೋತೋ, ಕರೆಂಟಿನ ಮೀಟರಿನ ಹತ್ರೆ ಆಗಿ ಓಡಿತ್ತು ಆ ದಿನ.
ಮರದಿನವೇ, ತಡವು ಮಾಡದ್ದೆ ಮಾವನ ಹತ್ರೆ ನಾಲ್ಕು ಎಲಿಪೆಟ್ಟಿಗೆ ತರುಸಿತ್ತಡ ರೂಪತ್ತೆ. ಒಂದರ
ಟೀವಿ ಕರೆಲಿ, ಒಂದರ ಏರ್ ಕೂಲರ್ ನ ಹತ್ತರೆ, ಇನ್ನೊಂದರ ಮಿಕ್ಸಿಯ ಹತ್ತರೆ, ಮತ್ತೊಂದರ ವಾಶಿಂಗ್ ಮಿಶನಿನ ಹತ್ತರೆ ಮಡಗಿದವಡ. ಎಲಿ ಪೆಟ್ಟಿಗೆಗೆ ಮಡಗಿದ ಪೋಪ್ಯುಲರು (ಬೇಕರಿ ಹೆಸರು) ಬ್ರೆಡ್ಡಿನ ಸ್ಕೂಬಿ ತಿಂಬದು ಬೇಡ ಹೇಳಿ ಎರಡು ದಿನ ಕಟ್ಟಿಯೇ ಹಾಕಿದ್ದಡ. ನಾಯಿ ಬಿಸ್ಕೇಟು ಅಂಬಗಂಬಗ ಕೇಳಿಗೊಂಡು ಇತ್ತಡ ಆ ಸ್ಕೂಬಿ. ಆಸರಪ್ಪದಕ್ಕೆ ರಸ್ಕಿನ ಹಾಲಿಲಿ ಅದ್ದಿ ಹಾಕುದಿದಾ ಅದಕ್ಕೆ. ಬರೇ ಕೊಂಡಾಟ ಆ ನಾಯಿಗೆ. ಅಂತೂ ಎರಡು ದಿನ ಅಪ್ಪಗ ಒಂದು ಎಲಿ ಬಿದ್ದತ್ತಡ, ಹೆರ ವಾಶಿಂಗ್ ಮಿಶನಿನ ಹತ್ತರೆ ಮಡಗಿದ್ದಕ್ಕೆ. ಮಾವ° ಮತ್ತೆ ಅದರ ನೀರಿನ ಬಾಳ್ದಿಗೆ ಅದ್ದಿ, ಎಲಿಯ ಕೊಂದು,ಅತ್ತೆ ಹೇಳಿದ ಹಾಂಗೆ ದೂರಕ್ಕೆ ಇಡುಕ್ಕಿದವಡ.
ಒಂದರಿಯಾಣದ್ದು ಕಮ್ಮಿ ಆತಡ, ಎಲಿ ಉಪದ್ರ. ಬಂದವಸ್ತಿನ
ಟೈಲ್ಸು ಎಲ್ಲ ಹಾಕಿದ ಮನೆ, ಗೋಡೆಬುಡಲ್ಲಿ ಒಟ್ಟೆ ಕೊರದು ಬಪ್ಪಲೆ ಎಡಿಯ, ಆದರೆ ಡೀಟೀಯಚ್ ಡಿಶ್ಶಿನ ವಯರು ಬಪ್ಪಲೆ ಹೇಳಿ ಒಂದು ಒಟ್ಟೆ ಕೊರದ್ದಲ್ದ, ಗೋಡೆಲಿ- ಅಲ್ಲೆ ಆಗಿ ಇನ್ನುದೇ ಬಕ್ಕೋ ಹೇಳಿ ರೂಪತ್ತೆಗೆ ತಲೆಬೆಶಿ ಅಡ!
ಎಂತಾ ಎಲಿ ಉಪದ್ರ, ಚೇ!

ನೋಡಿ! ಬರೇ ಒಂದು ಎಲಿಯ ಶುದ್ದಿ ಹೇಳುವಗ ಅವರ ಮನೆಲಿ ಇದ್ದ ಅಷ್ಟೂ ಸೊತ್ತಿನ ಪ್ರಸ್ತಾಪ ಬಯಿಂದಲ್ದ, ಇನ್ನು ಮರಗೊ ಎದುರಾಣವಂಗೆ ಎಲಿ ಉಪದ್ರದ ಶುದ್ದಿ? ಸಾಧ್ಯವೇ ಇಲ್ಲೆ.!!!

ಹೇಳೆಕ್ಕು ಹೇಳಿ ಹೇಳಿಗೊಂಬದಲ್ಲ ಈ ಜನ, ಆದರೆ ಮಾತಾಡುವಗ ತನ್ನ ಜೀವನ ಪದ್ಧತಿಯ ಎದುರಾಣವಂಗೆ ಹಂಚಿಗೊಂಬ ಉತ್ಸಾಹಲ್ಲಿ, ಎದುರಾವಣನ ಮನಸ್ಥಿತಿಯ ಬಗ್ಗೆ ಆಲೋಚನೆಯೇ ಮಾಡ್ತಿಲ್ಲೆ. ಅದರ ಮನೆಯ ಫ್ರಿಜ್ಜು, ವಾಶಿಂಗ್ ಮಿಶನು, ಏಸಿ, ಕಾರು, ದೊಡ್ಡ ಜಾತಿ ನಾಯಿ - ಇದನ್ನೇ ಹೇಳುಗು, ಏವಗಳೂ!
ಎಲಿ ಕಮ್ಮಿ ಆದರೆ ಜೆರಳೆ ತುಂಬುಗು, ಜೆರಳೆ ಕಮ್ಮಿ ಆದರೆ ಜೇಡ ತುಂಬುಗು – ಆ ಮನೆಲಿ ಯೇವದಾರು ಒಂದರ ಉಪದ್ರ ಇದ್ದೇ ಇಕ್ಕು ಆ ಸೊತ್ತುಗೊ ಇಪ್ಪನ್ನಾರವೂ! ರೂಪತ್ತೆ ಇಪ್ಪನ್ನಾರ ಆದರೂ! - ಹೇಳಿ ಅನಿಸಿತ್ತು ಒಪ್ಪಣ್ಣಂಗೆ.

ಮಗಳು ಏವಗಳೋ ಒಂದರಿ ಪ್ರಬಂದಲ್ಲಿ ಪಶ್ಟು ಬಂದಿಪ್ಪಗ ದೀಪಕ್ಕಂಗೆ ಹೇಳ್ಳೆ ಫೋನು ಮಾಡಿತ್ತಡ, ಮದ್ಯಾನ್ನದ ಹೊತ್ತು, ಟೀವಿಲಿ ಅತ್ತೆ-ಸೊಸೆ ಕಾರ್ಯಕ್ರಮ ಬಪ್ಪ ಹೊತ್ತಿಂಗೆ, ದೀಪಕ್ಕನ ಮನೆ ಕೆಲಸದ ಅಂಬಚ್ಚು ಉಂಬಲೆ ಬಂದು ಬಾಳೆಬುಡಲ್ಲಿ ಅರ್ದ ಗಂಟೆ ಒರಗಿತ್ತಡ ಮತ್ತೆ. ದೀಪಕ್ಕಂಗೆ ಮಾತಾಡ್ಳೂ ಅಲ್ಲ, ಬಿಡ್ಳೂ ಅಲ್ಲ! ಈ ಸರ್ತಿ ಪ್ರಬಂದ ಬರದ್ದು ಒಳ್ಳೆದಾತು, ಇನ್ನು ಬರದಿಕ್ಕುದು ಬೇಡ ಆ ಕೂಸು- ಹೇಳಿ ಅನಿಸಿಕ್ಕು ಆ ದೀಪಕ್ಕಂಗೆ, ಪಾಪ! ;-(

ಕಾರು ಕಲಿವಲೆ ಹೆರಟ ಶುದ್ದಿ ಎಲ್ಲೊರಿಂಗೂ ಹೇಳಿ ಹೇಳಿ ಈಗ ಅದರ ಕೇಳಿಯೇ ದೀಪಕ್ಕಂಗೆ ಕಾರು ಬಿಡ್ಳೆ ಅರಡಿಗೋ ಏನೋ!

ದೀಪಕ್ಕಂಗೆ ಮೊಬೈಲಿಲಿ ಮಾತಾಡ್ಳೆ ಹೇಳಿ ಕೊಡ್ಳೆ ಹೇಳಿಗೊಂಡು ಸುಮಾರು ಪೈಸೆ ಮುಗುಶಿದ್ದು ಆ ರೂಪತ್ತೆ, ಅದಕ್ಕೆಂತ ಸಾರ ಇಲ್ಲೆ, ಅದಕ್ಕೆ ಪೈಸೆ ಮಗ° ಹಾಕುತ್ತನಡ.

ಹ್ಮ್, ತಮಾಶೆ ಎಂತರ ಹೇಳಿರೆ, ಅಜ್ಜಕಾನ ಬಾವಂಗಂತೂ ಈ ರೂಪತ್ತೆಯ ಹತ್ರೆ ಮಾತಾಡುದು ಹೇಳಿರೆ ಒಂದು ನಮೂನೆ ಕುಶಿ, ’ಮಗಳು ಎಂತ ಮಾಡ್ತು?’ ಹೇಳಿ ಮಾತು ಸುರು ಮಾಡಿರೆ ನಿಲ್ಲುಸಲೇ ನಿಲ್ಲುಸ ಅವ°. ಅವರ ಮನೆ ಐಟಮ್ಮುಗೊ ಎಂತೆಲ್ಲ ಶುದ್ದಿ ಬಂತೋ, ಎಂಗಳ ಹತ್ರೆ ಮಾತಾಡುವಗ ಹೇಳುಗು ಮತ್ತೆ.
ಮಾಲ ಚಿಕ್ಕಮ್ಮ ಎಷ್ಟುದೇ ಮಾತಾಡುಗು, ಆದರೆ ಹೀಂಗೆ ಹೇಳಿಗೊಳ್ಳ. ಅದರ ಮನೆಲಿಯುದೇ ಕೆಲವೆಲ್ಲ ಸೊತ್ತುಗೊ ಇದ್ದು. ಅದರ ಮನೆಲಿಯೂ ಎಲಿ ಉಪದ್ರ ಇದ್ದಿಕ್ಕು. ಅದರ ಇನ್ನೊಬ್ಬರ ಹತ್ತರೆಯುದೇ ಹೇಳಿಗೊಂಡಿಕ್ಕು. ಎಲಿ ಉಪದ್ರ ಮಾಂತ್ರ ಹೇಳುಗಷ್ಟೆ. ಬೇರೆ ಎಂತ ಬಾರ ಅದರಲ್ಲಿ :-D
ನಿಂಗಳ ನೆಂಟ್ರ ಪೈಕಿಯೂ ಮಾಲ ಚಿಕ್ಕಮ್ಮನ ಹಾಂಗಿಪ್ಪವೂ, ರೂಪತ್ತೆಯ ಹಾಂಗಿಪ್ಪವೂ, ಇಬ್ರೂ ಇಕ್ಕು.

ಮಾತಾಡುವಗ ವಿಶಯ ಮುಖ್ಯ, ಸ್ಥಿತಿ ಅಲ್ಲ. ವಿಶಯ ಹೇಳುವಗ ಸ್ತಿತಿ ತೋರುಸಿಗೊಂಬಲಾಗ ಹೇಳಿ ಅದಕ್ಕೇ ಹೇಳುದು. ಎದುರು ಮಾತಾಡ್ತವಂಗೆ ಅದರಲ್ಲಿ ಆಸಕ್ತಿ ಇದ್ದೋ ಹೇಳಿ ವಿಮರ್ಶೆ ಮಾಡದ್ದೆ ಮಾತಾಡಿರೆ ಹೀಂಗೆ ರೂಪತ್ತೆಯ ಹಾಂಗೆ ಅಕ್ಕು ನಿಂಗೊಗುದೇ.

ಶುದ್ದಿ ಹೇಳುದು ಒಳ್ಳೆದೇ, ಹೇಳಿಗೊಂಬದು ಇದ್ದಲ್ದ, ಅದು ಒಳ್ಳೆದಲ್ಲ!

ಒಂದೊಪ್ಪ: ಗುಣಾಜೆ ಕುಂಞಿಗೆ ಮೊನ್ನೆ ಯೆಡಿಯೂರಪ್ಪನ ಹತ್ರೆ ಮಾತಾಡ್ಳೆ ಹೋದಿಪ್ಪಗ ಐಪೋನು ಸೈಲೆಂಟಿಲಿ ಹಾಕುಲೆ ಮರದೇ ಹೋಯಿದಡ. ;(