ಗುರುಕೋಪದ ನಿವುರ್ತಿ

ತೆಂಕ್ಲಾಗಿ ಆದ ಶುದ್ದಿ ಅಡ. ಮಾಷ್ಟ್ರು ಮಾವ° ಹೇಳಿದ್ದು ಓ ಮೊನ್ನೆ.

ಒಂದೆರಡು ತಲೆಮಾರು ಮದಲಿಂಗೆ ಒರೆಂಗೆ ನಮ್ಮಲ್ಲಿ ಹೇಂಗಿತ್ತು ಹೇಳಿರೆ, ತುಂಬಾ ದೊಡ್ಡೋರು ಹೇಳಿ ಇರ್ತವಲ್ದ, ಅವರ ದೊಡ್ಡ ಜಾಗೆಲಿ ಹಲವಾರು ಸಣ್ಣ ಸಣ್ಣ ಮನೆಗೊ. ಒಂದು ಮನೆಯ ಸುತ್ತ ಮುತ್ತ ಆಸುಪಾಸಿಲಿ ಒಂದು ರಜ್ಜ ಜಾಗೆ - ತೋಟ. ಆ ಮನಗೆ ಬೇಕಾದ ನೀರಿನ ವೆವಸ್ತೆ, ಹಟ್ಟಿ, ಕೊಟ್ಟಗೆ ಎಲ್ಲ ಇಕ್ಕು. ತಕ್ಕ ಮಟ್ಟಿನ ಬಂದವಸ್ತುದೇ ಇಕ್ಕು. ಅಂತೂ ಜನವಾಸಕ್ಕೆ ಯೋಗ್ಯವಾಗಿ ಇದ್ದೊಂಡಿತ್ತು. ’ಒಕ್ಕಲು ಮನೆ’ ಹೇಳಿ ಹೆಸರು ಇದಕ್ಕೆ.
ಹಲವಾರು ಒಕ್ಕಲು ಮನಗೆ ಒಂದು ಧಣಿಮನೆ. ಸಮಸ್ತ ಜಾಗೆಯ ಅಧಿಪತ್ಯದ ಒಟ್ಟಾರೆ ಹಕ್ಕು ಅವಕ್ಕೇ ಇಪ್ಪದು. ಒಕ್ಕಲಿನವಕ್ಕೆ ಏನಿದ್ದರೂ ಅವರ ಸೀಮಿತ ಪ್ರದೇಶದ - ಆ ಮನೆಯೂ ಅದಕ್ಕೆ ಸಂಬಂದ ಪಟ್ಟ ಜಾಗೆಯ ಮೇಲೆ - ಮೌಖಿಕ ಅಧಿಕಾರ ಮಾಂತ್ರ.ಈಗ ಪೇಟೆಲಿ ’ಬಾಡಿಗೆ ಮನೆ’ ಹೇಳಿ ಇದ್ದಲ್ದೋ? ಅದೇ ನಮುನೆ ಸಾಮಾನ್ಯ. ಅಲ್ಲಿ ತಿಂಗಳು ತಿಂಗಳು ಬಾಡಿಗೆ ಕೊಡೆಕ್ಕು, ಆದರೆ ಇಲ್ಲಿ ಒರಿಷಕ್ಕೊಂದರಿ ಆ ಭೂಮಿಲಿ ಬಂದ ಫಸಲಿನ ಒಂದಂಶ ಕೊಡೆಕ್ಕು. ಅದಕ್ಕೆ ’ಗೇಣಿ’ ಹೇಳಿ ಹೆಸರು. ಸಾಮಾನ್ಯವಾಗಿ ಬೆಳದ್ದರ ಮೂರನೇ ಎರಡಂಶ (66%) ಇದ್ದೊಂಡಿತ್ತು. ಈಗ ಸಂಬಳಲ್ಲಿ ’ತೆರಿಗೆ’ ಹೇಳಿ ಗೋರ್ಮೆಂಟಿಂಗೆ ಕಟ್ಟುತ್ತಷ್ಟು ಮದಲಿಂಗೆ ದುಡುದವಂಗೆ ಸಿಕ್ಯೊಂಡಿತ್ತು.

ನೀಲೇಶ್ವರದ ಹತ್ತರೆ ಅಡ, ದೊಡ್ಡ ಜಾಗೆಯವು ಅಡ. ನಮ್ಮೋರೇ.
ಪ್ರಾಯದ ಧಣಿಗೊ. ತುಂಬ ಒಳ್ಳೆ ಹೃದಯ. ದೇವತಾ ಮನುಶ್ಯರು ಹೇಳಿ ಹೇಳುಗು ಎಲ್ಲೊರು ಅವರ. ತುಂಬ ದೈವಭಕ್ತ. ಒಂದೊಂದು ಒಕ್ಕಲಿಂಗೆ ಒಂದೊಂದರ ಹಾಂಗೆ ಬೂತಸ್ಥಾನ ಇತ್ತಡ. ಒಕ್ಕಲು ಹೇಳಿರೆ ನೆಂಟ್ರ ಹಾಂಗೆ ನೋಡಿಗೊಂಗು. ಉಳುದವರ ಹಾಂಗೆ ದರ್ಪ ತೋರುಸವು. ದೇವತಾ ವಿನಿಯೋಗ ನಿತ್ಯ ಅಕ್ಕು. ಮನೆಲಿ ಜೆಂಬ್ರ ಮತ್ತೊ° ಇದ್ದರೆ ಎಲ್ಲ ಒಕ್ಕಲಿನ ಮನಗೆ ಹೋಗಿ ಹೇಳುಗಡ - ಬರ್ಮಿಲಿ ಇನ್ನೊಬ್ಬರತ್ರೆ ಹೇಳಿಕಳುಸುದಲ್ಲ. ಪೇಟೆಲಿದೇ ಹಾಂಗೆ, ಒಳ್ಳೆ ಹೆಸರು ಇತ್ತಡ ಅವಕ್ಕೆ. ಗಟ್ಟಿಗೆ ಒಂದು ಶಾಲು ಹಾಯ್ಕೊಂಡು ಬಷ್ಟೇಂಡಿಂಗೋ ಮತ್ತೊ° ಹೋದರೆ ಅಲ್ಲಿದ್ದ ಎಲ್ಲರು ಎದ್ದು ನಿಂಗಡ. ಅಷ್ಟುದೇ ಮರಿಯಾದಿ. ಒಕ್ಕಲಿನ ಎಲ್ಲೊರೂ ಚೆಂದಕ್ಕೆ ಇರೆಕ್ಕು, ಎಂತದೂ ತೊಂದರೆ ಅಪ್ಪಲಾಗ ಹೇಳಿ ಇಪ್ಪತ್ನಾಲ್ಕು ಗಂಟೆಯೂ ಅವರ ಮನಸ್ಸು ಬಯಸಿಗೊಂಡು ಇತ್ತು. ಅದಕ್ಕೆ ಸರೀ ಆಗಿ ಒಕ್ಕಲುಗಳೂ ಒಳ್ಳೆ ರೀತಿಲಿ ನೋಡಿಗೊಂಡು, ಗೌರವಲ್ಲಿ ನೆಡಕ್ಕೊಂಡು ಇತ್ತಿದ್ದವು. ’ಧಣಿಗೊ ಶ್ರೀಮಂತರಾಯೆಕ್ಕು’ ಹೇಳುವ ಮನೋಭಾವಂದ ದುಡುಕ್ಕೊಂಡು ಇತ್ತಿದ್ದವು. ಧಣಿಗೊ ಹೆಚ್ಚು ಗೇಣಿ ಕೇಳದ್ರೂ, ಅವ್ವಾಗಿ ಅದರ ಕೊಟ್ಟು ಧಣಿಗಳ ಕುಶಿಪಡುಸುಲೆ ನೋಡಿಗೊಂಡು ಇತ್ತಿದ್ದವು. ಒಂದು ವೇಳೆ ಒಕ್ಕಲು ಮನೆ ಯೆಜಮಾನಂಗೆ ಅಸೌಖ್ಯವೋ ಮಣ್ಣ ಇದ್ದುಗೊಂಡು ಆ ಒರಿಶ ಗೇಣಿ ಕಮ್ಮಿ ಆದರೆ ಎಂತ ಜೋರು ಮಾಡವು, ಪರಿಸ್ತಿತಿ ಅವಕ್ಕೂ ಅರ್ತ ಅಕ್ಕು. ಒಳ್ಳೆ ಹೃದಯ. ಧಣಿಗೊ ಒಳ್ಳೆಯವು ಆದ ಕಾರಣವೇ ಒಕ್ಕಲುಗೊಕ್ಕೆ ಹಾಳು ಮಾರ್ಕಿಶ್ಟು ಬುದ್ದಿ ಬಪ್ಪಲೆ ಎಡೆಯೇ ಇತ್ತಿಲ್ಲೆ. ಈಗ ಪ್ರಾಯ ಆತು, ಅವರ ಕಾರ್ಬಾರು ಮುಗುಕ್ಕೊಂಡು ಬಯಿಂದು, ಇಬ್ರು ಮಕ್ಕೊ ಅವಕ್ಕೆ. ಸಣ್ಣ - ಇನ್ನೂ ವೈವಾಟು ಅರಡಿವಷ್ಟು ದೊಡ್ಡ ಆಯಿದವಿಲ್ಲೆ. ಈ ಸಮಯಲ್ಲಿ ಧಣಿಗಳ ತಮ್ಮನ (ಸಣ್ಣ ದಣಿಗೊ) ಕಾರ್ಬಾರು ಇದಾ.

ಧಣಿಗಳ ಹಾಂಗಲ್ಲ ಅವರ ತಮ್ಮ. ರಜಾ ಹುಳುಕ್ಕಟೆ. ಒಕ್ಕಲಿನವರ ಮನುಶ್ಯರು ಹೇಳಿ ಕಾಂಬ ಬುದ್ದಿ ಇಲ್ಲೆ. ವೈವಾಟುದೇ ಹಾಂಗೆ, ರಜ ಮೋಸವೇ. ಧಣಿಗಳ ಕಾಲಲ್ಲಿ ಆರೆಲ್ಲ ತುಂಬ ನಿಷ್ಠೆಲಿ ಇತ್ತಿದ್ದವೋ, ಅವರ ಈಗ ತಮ್ಮಂಗೆ ಕಂಡ್ರೆ ಆಗ. ಅಣ್ಣನ ಕಾರ್ಬಾರಿಲಿ ಜಾಸ್ತಿ ಎಂತ ಲಾಬ ಆಯ್ಕೊಂಡಿತ್ತಿಲ್ಲೆ ಹೇಳಿ ಸಣ್ಣ ದಣಿಗಳ ದೂರು. ಗೆಯ್ಮೆ, ಉಳುಮೆ ಸರಿಯಾಗಿ ಮಾಡದ್ದೆ ಗೇಣಿ ಕಮ್ಮಿ ಕೊಟ್ರೂ ಅವರ ಏಳುಸುಲಿಲ್ಲೆ, ಮತ್ತೆ ಲಾಬ ಅಪ್ಪದು ಹೇಂಗೆ ಬೇಕೆ? ಅದರ ಮೇಗಂದ ಮನೆಲಿ ಒರಿಶಕ್ಕೆ ಸುಮಾರು ಪೂಜೆ ಪುನಸ್ಕಾರಂಗ. ಒಕ್ಕಲು ಮನೆಲಿ ಪೂಜೆ ಆದರೂ ಸಾಮಾನು ಪೂರ ದಣಿಗಳಲ್ಲಿಂದಲೇ. ಕರ್ಚೇ ಕರ್ಚು. ಈ ಎಲ್ಲ ವೆವಸ್ತೆಗಳ ಸರಿಮಾಡ್ಳೆ ಅಲ್ಲಿಂದ ಕೆಲವು ಒಕ್ಕಲುಗಳ ಏಳುಸೆಕ್ಕು ಹೇಳಿ ಆಲೋಚನೆ ಈ ತಮ್ಮಂಗೆ. ತುಂಬ ಪೈಸೆ ಒಂದರಿಯೇ ಮಾಡೆಕ್ಕು ಹೇಳಿ ಹೆರಟವು. ಹೀಂಗೆ ಕಂಡಾಬಟ್ಟೆ ಲಾಬ ಬಂದರೆ ತನ್ನ ಪಾಲಿಂಗೂ ರಜ ಬಂತು ಹೇಳಿ ಆದರೆ, ಮುಂದಕ್ಕೆ ಒಳ್ಳೆದಲ್ದೋ? ಪೈಸೆ ಇದ್ದರಲ್ದೋ ನೆಮ್ಮದಿ! ಈಗಳೇ ಮಾಡಿಗೊಂಡ್ರೆ ಬಂತು, ಮತ್ತೆ ಅಣ್ಣನ ಮಕ್ಕೊ ದೊಡ್ಡ ಆದ ಮತ್ತೆ ಮಾಡ್ಳೆಡಿಯ! ಇದರ ಎಡಕ್ಕಿಲಿ ಧಣಿಗೊಕ್ಕೆ ತೀರಾ ಅನಾರೋಗ್ಯ. ಮನೆ ಹೆರಡವು. ಮನೆಯಷ್ಟಕೆ ಆದ ಕಾರಣ ಹೆರ ಎಂತ ಆವುತ್ತಾ ಇದ್ದು ಹೇಳಿ ಗೊಂತಾಗಿಯೋಂಡಿಲ್ಲೆ.

ಅದೊಂದು ಮನೆ ಒಕ್ಕಲುಗಳ ಮಟ್ಟಿಂಗೆ ತುಂಬ ಸುಸಂಸ್ಕೃತ ಮನೆ. ಅವುದೇ ನಮ್ಮೋರೇ. ಬಾಕಿದ್ದ ಒಕ್ಕಲುಗೊ ಎಲ್ಲ ಜೇಡಂಗಳೋ, ಚೆಪ್ಪುಡಿಗಾರಂಗಳೋ, ಮುಕಾರಿಗಳೋ ಬ್ರಾಮ್ಮರಲ್ಲ - ಕೋಳಿ ಸಾಂಕುತ್ತ ಜೆನಂಗ. ಇವ್ವಾತು, ಇವರ ಮನೆ ಆತು. ತುಂಬ ಮದಲಿಂಗೆ ಬೇರೆ ಎಲ್ಯೋ ದೊಡ್ದ ಜಾಗೆ ಎಲ್ಲ ಇದ್ದೋರು ವೈವಾಟಿಲಿ ಸೋತು ಈಗ ಆ ಮನೆಲಿ ಒಕ್ಕಲು ಆಗಿ ಇದ್ದವು - ಸುಮಾರು ಒರಿಷ ಆತು ಬಂದು, ಈಗಾಣ ದಣಿಗಳ ಅಪ್ಪನ ಕಾರ್ಬಾರಿಲಿ ಗೆಯ್ಮೆಗೆ ಸೇರಿದ್ದು. ಈಗ ಪ್ರಾಯ ಆಗಿ ಅಜ್ಜಜ್ಜ° ಆಯಿದವು. ಒಂದು ಅಜ್ಜಿ, ಅವರ ’ಇದು’ (ಯೆಜಮಾಂತಿ), ಒಂದೇ ಮಗಳು - ಮದುವೆ ಪ್ರಾಯ ಕಳುದ್ದು. ಎಲ್ಲಿಯೂ ಆಯಿದಿಲ್ಲೆ. ಅದೊಂದು ಬಿಟ್ರೆ ಅವಕ್ಕೆ ಬೇರೆ ಎಂತದೂ ಬೇಜಾರು ಇಲ್ಲೆ.
ಈಗಾಣ ಧಣಿಗೊ, ಅವರ ಈ ತಮ್ಮ - ಇವಕ್ಕೆಲ್ಲ ಉಪ್ನಯನ ಆದ ಕಾಲಲ್ಲಿ ಜೆಪ-ತಪ-ಅಗ್ನಿಕಾರ್ಯ ಇತ್ಯಾದಿ ಎಲ್ಲ ಹೇಳಿಕೊಟ್ಟದು ಅವ್ವೇ! ದೊಡ್ಡ ದಣಿಗಳ ಕಾರ್ಬಾರಿಲಿ ಮನೆ ಒಳ ಲೆಕ್ಕ ಬರಕ್ಕೊಂಬಲೆ ಇತ್ಯಾದಿಗೊಕ್ಕೆ ಅವು ಸೇರಿಗೊಂಡು ಇತ್ತಿದ್ದವಡ. ಮೊದಲಾಣ ಧಣಿಗೊ ಬಾಯಿಲಿ, ಹೃದಯಲ್ಲಿ ಶ್ರೀಮಂತಿಕೆ ಇದ್ದರೂ, ಗಣಿತಲ್ಲಿ ರಜ್ಜ ಹಿಂದೆಯೇ. ಎನ್ನ ಮಕ್ಕೊ ಹಾಂಗಪ್ಪಲಾಗ ಹೇಳಿ ಇವರ ಕೈಲಿ ಮಕ್ಕೊಗೆ ಲೆಕ್ಕ ಪಾಟ ಹೇಳುಸಿಗೊಂಡು ಇತ್ತಿದ್ದವು. ಅಂದಿಂದಲೇ ವೆವಹಾರಲ್ಲಿ ಎಲ್ಲ ಸಕಾಯ ಮಾಡುಗಿದಾ- ಹಾಂಗಾಗಿ ಇಂತವಂದು ಇಂತಾ ಒರಿಶ ಇಂತಿಷ್ಟು ಗೇಣಿ ಹೇಳಿ ಇವಕ್ಕೆ ಕಂಠಸ್ತ. ಸೂತ್ರ, ಗುಣಾಕಾರ, ಚಕ್ರ ಬಡ್ಡಿ ಲೆಕ್ಕಾಚಾರ ಎಲ್ಲ ಬಾಯಿಲಿ ಇದ್ದ ಕಾರಣ ಲೆಕ್ಕಾಚಾರಲ್ಲಿ ತಪ್ಪುಲೆ ಸಾದ್ಯವೇ ಇಲ್ಲೆ. ದಣಿಗೊ ಗುರುವಾಯೂರೋ, ತ್ರಿಶೂರೋ, ಅನಂತಶಯನವೋ ಮತ್ತೊ ಹೋವುತ್ತರೆ ಇವರ ಪಾಸಾಡಿ (ಜೊತೆ ಪ್ರಯಾಣಿಕ) ಆಗಿ ಕರಕ್ಕೊಂಡು ಇತ್ತಿದ್ದವು. ಈಗೀಗ ಪ್ರಾಯ ಆದ್ದು ಗೊಂತಾವುತ್ತು. ದುಡಿವಲೂ ಎಡಿತ್ತಿಲ್ಲೆ, ಪಸಲೂ ಕಮ್ಮಿ. ಮದಲಾಣಶ್ಟು ಪಸಲೂ ಬತ್ತಿಲ್ಲೆ. ಅಜ್ಜ ಆದರೂ ದುಡಿಯದ್ದೆ ಗೊಂತಿಲ್ಲೆ, ಹೊಟ್ಟೆ ಹಶುವಿಂಗೆ ಪ್ರಾಯ ಲೆಕ್ಕ ಇದ್ದೊ? ಎಡಿಗಾದಷ್ಟು ದುಡಿಗು. ಬಂದ ಪಸಲಿಲಿ ಲೆಕ್ಕಕ್ಕೆ ಸರೀ ಆಗಿ ಗೆಯ್ಮೆ ಕೊಡುಗು.

ಬೇರೆ ಜವ್ವನ ಆರಾರು ಗೇಣಿಗೆ ಬಂದರೆ ಆ ಜಾಗೆಲಿ ಈಗಾಣಿಂದ ಹೆಚ್ಚು ಪಸಲು ತೆಗವಲೆ ಎಡಿಗಲ್ದಾ ಹೇಳಿ ಧಣಿಗಳ ತಲೆಗೆ ಬಂದ ಆಲೋಚನೆ. ಅದು ಮಾಂತ್ರ ಅಲ್ಲ. ಲೆಕ್ಕಾಚಾರ ಪೂರ ಈ ಜನರ ತಲೆಲಿ ಇದ್ದ ಕಾರಣ ಸಣ್ಣ ದಣಿಗೊಕ್ಕೆ ಪೈಸೆ ನುಂಗಲೆ ಬಾರೀ ಕಷ್ಟ. ಇದೆಲ್ಲ ಕಾರಣಕ್ಕೆ ಇವರ ಈ ಜಾಗೆಂದ ಏಳ್ಸೆಕ್ಕು ಹೇಳಿ ಕಂಡತ್ತು ಸಣ್ಣ ದಣಿಗೊಕ್ಕೆ.

ಕಾಲಕ್ರಮೇಣ ಅದೆಂತದೋ ಒಕ್ಕಲು ಮಸೂದೆ ಬಂತಡ ಅಲ್ದೋ? ಅಶ್ಟಪ್ಪಗ ಆಯಿದು ಈ ಧಣಿಗಳ ತಮ್ಮ ಕಾರ್ಬಾರ. ಮೊದಲೇ ಇವರ ಏಳುಸುವ ಏರ್ಪಾಡಿಲಿ ಇದ್ದ ತಮ್ಮಂಗೆ ಊರವೆಲ್ಲ ಕುತ್ತಿ ಕೊಡ್ಳೆ ಸುರು ಮಾಡಿದವು. ಧಣಿಗೊ ಮನೆಯಷ್ಟಕ್ಕೆ ಆದ ಕಾರಣ ಹೆರಾಣ ಸಂಪರ್ಕ ಸಂಪೂರ್ಣ ನಿಂದಿದು. ಹೆರ ಎಂತ ಆದರೂ ಅವಕ್ಕೆ ಗೊಂತಾಗ. ಈ ವಿಶಯವೂ ಗೊಂತಿಲ್ಲೆ. ಪರೆಂಗಿಗ ಭಾರತ ಬಿಟ್ಟು ಹೋಯಿದವು ಹೇಳುದು ಕೊನೆ ಒರೆಂಗೂ ಗೊಂತಾಯಿದಿಲ್ಲೆ ಅವಕ್ಕೆ.
ಧಣಿಗಳ ಮಕ್ಕೊಗೆ ಅಪ್ಪಚ್ಚಿ ಹೇಳಿದ್ದು ಅರ್ತ ಅಕ್ಕು, ಆದರೆ ವಿಮರ್ಶೆ ಮಾಡ್ಳೆ ಅರಡಿವಷ್ಟು ದೊಡ್ಡ ಆಯಿದವಿಲ್ಲೆ. ಈ ಅಪ್ಪಚ್ಚಿ ಬೇಕಾದ್ದರ, ಬೇಡದ್ದರ ಪೂರಾ ಮಾಡ್ಲೆ ಸುರು ಮಾಡಿದವು. ಮಕ್ಕೊ ನೋಡ್ಳೆ ಸುರು ಮಾಡಿದವು, ಹಿತ್ತಾಳೆ ಕೆಮಿಯವರ ಹಾಂಗೆ.

ಒಂದು ದಿನ ಮದ್ಯಾನ್ನ ಅಪ್ಪಲಪ್ಪಗ ನಾಕು ಆಳುಗಳೊಟ್ಟಿಂಗೆ ಸೀದ ಬಂದು ಈ ಅಜ್ಜಯ್ಯರ ಕೈಲಿ ಜೋರು ಮಾಡಿದವಡ. “ನಿಂಗೊ ಈ ತಿಂಗಳಕೆರಿಗೆ ಎಂಗಳ ಜಾಗೆಂದ ಒಕ್ಕಲು ಹೋಯೆಕ್ಕು” ಹೇಳಿ. ’ಇಷ್ಟು ಬೇಗ ಬಿಡೆಕ್ಕು ಹೇಳಿರೆ ಎಂಗೊ ಎಲ್ಲಿಗೆ ಹೋಪದು?, ಒಂದು ಆರು ತಿಂಗಳಾದರೂ ಮದಲೇ ಹೇಳಿರೆ ಮತ್ತಾಣದ್ದು ಹುಡುಕ್ಕಲೆ ಸುಲಬ ಆವುತ್ತು’ ಹೇಳಿ ಹೇಳಿದವಡ. ಅಜ್ಜನ ಆ ಮಾತಿಲಿ ಈಗಾಣ ಜಾಗೆಯ ಬಗೆಗೆ ಏವದೇ ಮೋಹ ಇತ್ತಿಲ್ಲೆ, ಬರೇ ಒಂದು ಮಾನವೀಯತೆಯ ಪ್ರಶ್ನೆ. ಅಷ್ಟೆ.
ಆದರೆ ಮೊದಲೇ ಇವರ ಏಳುಸೆಕ್ಕು ಹೇಳ್ತ ಹುಚ್ಚು ಉತ್ಸಾಹಲ್ಲಿ ಬಂದ ಸಣ್ಣ ಧಣಿಗೊ ಇವರ ಮಾತು ಕೇಳಿ ಏರಿ ಹೋದವು. ಒಕ್ಕಲಿನವ ಎನಗೇ ಗಡುವು ಕೊಡ್ತ ಹೇಳಿ ಅಹಂ ತಾಗಿತ್ತು. ಪಿಸುರಿಲಿ ಎಂತೆಂತೋ ಮಾತಾಡಿದವು. ’ನಿಂಗಳ ಅಣ್ಣ ಹೇಳಲಿ, ಏಳ್ತೆ’ ಹೇಳಿದವಡ ಈ ಅಜ್ಜ. ಆಳುಗಳ ಎದುರಂಗೆ ತನ್ನ ಅಣ್ಣನ ಹೊಗಳಿದ ಏವ ಕಾರ್ಬಾರಿಗೆ ಕುಶಿ ಅಕ್ಕು? ಪಿಸುರು ಬಂತು. ಕಾನೂನು ಹಿಡ್ಕೊಂಡು ಮಾತಾಡಿದವು. ಈ ತಿಂಗಳಕೇರಿಗೆ ಅಲ್ಲ, ಇಂದೇ, ಈಗಳೇ ಹೆರಡೆಕ್ಕು ಹೇಳಿ ಹೆದರುಸಿದವು. ದೊಡ್ಡೋರಿದಾ, ಗೋರ್ಮೆಂಟು ಅವರ ಕೈಲಿ ಇರ್ತು.

ಈ ಜಗಳಲ್ಲಿ ನವಗೆ ನೆಮ್ಮದಿ ಇಲ್ಲೆ ಹೇಳಿ ಅರ್ತ ಆದ ಅಜ್ಜಿ ಒಳಂದ ಹೇಳಿತ್ತಡ – ’ಅಶನಲ್ಲಿ ನೆಮ್ಮದಿ ಇಲ್ಲದ್ರೆ ಇಲ್ಲಿ ಇರೆಕ್ಕು ಹೇಳಿ ಎಂತರ ನವಗೆ?’. ಮಗಳು ಎಂತ ಹೇಳ. ಬರೇ ಸಾದು. ’ಹ್ಮ್, ಆತಂಬಗ. ಅಶನ ಮಡಗಿದ್ದೆಯೊ ° ಇಂದ್ರಾಣದ್ದು, ಉಂಡಿಕ್ಕಿ ಹೋವುತ್ತೆಯೊ°’ ಹೇಳಿ ಹೇಳಿದವಡ ಆ ಅಜ್ಜ.
ಮದ್ಯಾನ್ನ ಹೊತ್ತಿಂಗೆ ಇದಾ. ಅಕ್ಕಿಯೂ ಹಾಂಗೆ ಲೆಕ್ಕ ಮಾಡಿ ಮುಗುಶುದು. ಒಬ್ಬಂಗೆ ಇಂತಲ್ಲೇ ಬಗವದು ಹೇಳಿ ಇದ್ದಲ್ದೊ, ಇಂದ್ರಾಣ ಬಾಬ್ತು ಮಡಗಿ ಆತು. ಅಶ್ಟಪ್ಪಗ ಇಷ್ಟೆಲ್ಲ ಕತೆ. ಚೆ. ಗ್ರೇಶದ್ದೆ ಹೀಂಗೆ ಹೇಳಿರೆ ಮಾಡುದಾರೂ ಎಂತರ, ಒಳ್ಳೆ ನೆರೆಕರೆ ಬೇರೆ ಇಲ್ಲೆ ಬೇರೆ. ಇಪ್ಪವೆಲ್ಲ ದಣಿಗಳ ಮರ್ಜಿಲಿ ಇಪ್ಪದು. ಹೆರ ಎಲ್ಲಿಯೂ ಉಂಬ ಹಾಂಗೆ ಇಲ್ಲೆ. ’ಉಂಡಿಕ್ಕಿ ಹೋವುತ್ತೆಯೊ’ ಹೇಳಿ ಹೇಳಿದ್ದು ಅದೇ ಕಾರಣಲ್ಲಿ…
ಮಾಡಿಯೇ ಮಾಡೆಕ್ಕು ಹೇಳಿ ಮನಸ್ಸಂಕಲ್ಪ ಮಾಡಿದವಂಗೆ ಕಾವ ವ್ಯವಧಾನ ಇರ್ತೊ? ಏಳುಸಿಯೇ ಕಳಿಯೆಕ್ಕುಹೇಳಿ ಬಂದ ಈ ಸಣ್ಣ ದಣಿಗೊಕ್ಕೆ ಎಂತರ ಮಾನವೀಯತೆ?

ಇಪ್ಪವೆಲ್ಲ ನೋಡು ನೋಡಿಗೊಂಡು ಇಪ್ಪ ಹಾಂಗೇ ಅವರ ಜಾಗೆ ಕರೇಲಿ ದಟ್ಟಿಗೆ (ಹೊಲೆಯರ ಗುಡಿಚ್ಚೆಲಿಂಗೆ ದಟ್ಟಿಗೆ ಹೇಳ್ತದು) ಕಟ್ಟಿಗೊಂಡು ಇದ್ದ ಕೆಲವು ಹೊಲೆಯಂಗಳ ದಿನಿಗೆಳಿದವು. ಒಳ ಒಲೆಲಿ ಅಶನ ಬೆಂದೋಂಡು ಇಪ್ಪ ಹಾಂಗೆ ಆ ಹೊಲೆಯರ ಮನೆ ಒಳಂಗೆ ನುಗ್ಗುಸಿದವಡ. ಮಡಿವಂತರಲ್ಲಿ ಮದಲಿಂಗೆ ಒಂದು ಕ್ರಮ ಇತ್ತು. ’ಹೊಲೆಯ ನುಗ್ಗಿದ ಮನೆ’ಗೆ ಶುದ್ದ ಕಾರ್ಯ ಮಾಡಿಯೇ ಹೋಕಷ್ಟೆ. ಮನೆ ಕಟ್ಟುಲೆ ಮಣ್ಣ ಗೋಡೆ ಕೆಲಸ ಎಲ್ಲ ಹೊಲೆಯರೇ ಮಾಡಿರೂ, ಅದರ ’ಆಪೋಹಿಷ್ಠಾ...’ ಆಗದ್ದೆ ಒಕ್ಕಲು ಆಗವು ಇದಾ. ಉಡು ಹೊಕ್ಕರೆ ಆದರೂ ಅಕ್ಕು, ಹೊಲೆಯ ಹೊಕ್ಕರೆ ಒಕ್ಕಲು ಇರವು ಅಲ್ಲಿ.

ಇನ್ನೆಂತರ ಮಾಡುದು, ಅವರದ್ದು ಹೇಳಿ ಆದ ರಜ್ಜ ಸೊತ್ತುಗೊ - ತಲಾಂತರಲ್ಲಿ ಇದ್ದ ರಜ ಚಿನ್ನವೋ, ದೇವರ ಸನ್ನೆಯೋ, ಹರಿವಾಣಂಗಳೋ, ಕೆಲವು ಮಂತ್ರ ಪುಸ್ತಕಂಗಳೊ, ಒಂದು ಪೈಶದ ಕರಡಿಗೆಯೋ ಎಲ್ಲ ಹುಡುಕ್ಕಿ ಅಜ್ಜ ಮನೆಂದ ಹೆರ ತಂದವು. ನಿತ್ಯ ಒಸ್ತ್ರಂಗ, ಹಳೆ ಕೆಲವು ಮಡಿ ಸೀರೆ, ಬಾಚಣಿಗೆ, ಕುಂಕುಮದ ಡಬ್ಬಿ - ಹೀಂಗಿರ್ತರ ಹಿಡುಕ್ಕೊಂಡು ಅವರ ಯೆಜಮಾಂತಿಯೂ ಬಂತು, ಕರಟದ ಸೌಟು, ಮಣ್ಣಳಗೆ, ಉಪ್ಪಿನಕಾಯಿ ಮರಿಗೆ, ಎರಡು ಮಣ್ಣಳಗೆ ಹಿಡ್ಕೊಂಡು ಮಗಳೂ ಮನೆ ಹೆರಟತ್ತು. ಏವತ್ತೂ ’ಬತ್ತೆ ಮಿನಿಯಾ°..’ ಹೇಳ್ತ ಅಜ್ಜ ಇಂದು ಮಾಂತ್ರ ’ಎಂಗೊ ಹೋವುತ್ತೆಯೊ°’ ಹೇಳಿದವು, ಉತ್ತರವನ್ನೂ ನಿರೀಕ್ಷೆ ಮಾಡದ್ದೆ!

ಒಂದು ತಿಂಗಳು ಗಡುವು ಕೊಡ್ಳೆ ಬಂದ ಧಣಿಗೆ ಇಂದೇ ಹೆರಡುಸಿದ ತನ್ನ ಪೌರುಷದ ಬಗ್ಗೆ ಬಯಂಕರ ಹೆಮ್ಮೆ ಅನಿಸಿ, ಮೂಗಿನ ಕೆಳ ದಪ್ಪ ಮೀಸೆ ಇಪ್ಪದಕ್ಕೆ ಸಾರ್ತಕ ಹೇಳಿಗೊಂಡಿತ್ತು. ಹೆರಡುಸುಲೆ ಕಂಡ ಆ ಮಡೀ ಉಪಾಯವ ಗ್ರೇಶಿ ಗ್ರೇಶಿ ಹೆಮ್ಮೆ ಉಕ್ಕಿ ಬಂತು. ಉಳುದ ಒಕ್ಕಲುಗಳೂ ಇದರ ನೋಡಿ ಕಲ್ತೇ ಕಲಿತ್ತವು ಹೇಳಿ ನಿಗಂಟು ಆತು. ಸಣ್ಣ ಇಪ್ಪಗ ಕಲುಶಿದ ’ನಮೋ ಪ್ರಾಚ್ಯೈ ದಿಶೇ..’ ಎಲ್ಲ ಮರದು ಹೋಗಿ, ಕಳುದ ಒರಿಶ ಇವು ಕಮ್ಮಿ ಗೇಣಿ ಕೊಟ್ಟದು ಮಾಂತ್ರ ನೆಂಪು ಒಳುದ್ದು.
ಹೆರಡುವ ಹೊತ್ತಿಂಗೆ ಒಂದರಿ ಆದರೂ ಧಣಿಗಳ ಹತ್ರೆ ಹೇಳಕ್ಕಿ ಬರೆಕ್ಕು ಹೇಳಿ ಅನಿಸಿದ್ದು ಅಜ್ಜಿಗೆ. ಆದರೆ ’ಹೋದರೆ ಅಲ್ಲಿ ದಣಿಗೊ ಉಂಬಲೆ ಹೇಳುಗು, ಆ ಮೋಹ ಇದ್ದರೆ ಹೋಗು. ಏ°?’ ಅಜ್ಜ ಹೇಳಿದವು. ಮನೆ ಊಟವೇ ಬಗೆಯದ್ದ ಮೇಲೆ ದಣಿಗಳಲ್ಲಿ ಎಂತರ ಊಟ? ಅಜ್ಜಿ ಹೋದವಿಲ್ಲೆ. ಜಾಗೆ ಕರೆಯ ಹಳ್ಳದ ದಾರಿಲೆ ನೆಡದವು. ಗೆಂಟು ಕಟ್ಟಿ ಹೆರಟವು ಜಾಗೆಂದ ಹೆರ ಹೋದವು ಹೇಳಿ ನಿಘಂಟು ಆದ ಮತ್ತೆ ಮನಗೆ ಬಂದು ಗಟ್ಟಿಗೆ ಉಂಡವು. ಉಂಬ ಹೊತ್ತೇ ಇದಾ!

ಮೂರು ಜೆನಕ್ಕೂ ತಲೆ ಪೂರ್ತಿ ಸಾಮಾನು. ಪಗರುಸಿಗೊಂಬ ಹೇಳಿರೆ ಎಡಿಯ. ಮದಲಿಂಗೆ ಆದರೆ ಅಜ್ಜಿಂದ ಜಾಸ್ತಿ ಅಜ್ಜ° ಹೊರುಗು, ಬೇಕಾರೆ ಅಜ್ಜಿಯನ್ನೇ ಹೊರುಗು -ನೋಡ್ತವ° ಆರೂ ಇಲ್ಲದ್ರೆ ;-) ಈಗ ಪ್ರಾಯ ಆಗಿ ಅಜ್ಜಂಗೇ ನೆಡವಲೆ ಕಷ್ಟವೋ ಹೇಳಿ ಆವುತ್ತು. ಹೊರ್ಲೆಡಿಯ. ಮಗಳ ಕೈಲಿ ತುಂಬ ಅಡಿಗೆ ಸೌಲತ್ತುಗೊ. ಅಜ್ಜಿ ಕೈಲಿ ಒಸ್ತ್ರಂಗೊ. ಅಜ್ಜನ ಕೈಲಿ ದೇವರ ಸಾಮಾನು, ರಜ್ಜ ಪೈಸೆ. ಇಷ್ಟೇ. ನೆಡದವು, ನೆಡದೇ ನೆಡದವು, ನೆಡಕ್ಕೊಂಡೇ ಹೋದವು.

ಸುಮಾರು ದೂರ ಎತ್ತುವಗ ಒಂದು ತೋಡಕರೆ ಬೈಲು ಸಿಕ್ಕಿತ್ತು. ಹೊರೆ ಪೂರ ಇಳುಸಿ ಕೂದುಗೊಂಡವು. ಮದ್ಯಾಂತಿರುಗಿ ಆಯಿದು. ಮಗಳು ಕಣ್ಣೆಡೇಲಿ ಕೂಗಿಯೊಂಡು ಇತ್ತು. ಅಜ್ಜನೇ ಕೂಗುವನ್ನಾರ ಅಜ್ಜಿ ಕೂಗ. ಏವ ಕಷ್ಟ ಕಾಲಲ್ಲಿಯೂ ಅಜ್ಜನ ಹೆಗಲಿಂಗೆ ಹೆಗಲು ಕೊಟ್ಟ ಅಜ್ಜಿ ಅದು. ಅಜ್ಜ ಎಂತದೋ ಆಲೋಚನೆ ಮಾಡ್ತಾ ಇಪ್ಪದು ಅಜ್ಜಿಗೆ ಗೊಂತಾತು. ಕಟ್ಟಲ್ಲಿ ಎಂತದೋ ಹುಡುಕ್ಕುದು ಕಂಡತ್ತು. ’ಎಂತರ?’ ಕೇಳಿತ್ತು ಅಜ್ಜಿ. ’ಮಂತ್ರ ಪುಸ್ತಕ ಇದ್ದನ್ನೇ ಹೇಳಿ ನೋಡಿಗೊಂಡದು’ ಹೇಳಿದವು ಅಜ್ಜ. ಜೀವನವ ಮತ್ತೆ ಎದುರುಸುಲೆ ಅಜ್ಜ ಸಂಪೂರ್ಣ ಸಮರ್ತ ಆಗಿ ಇತ್ತಿದ್ದವು. ಅಜ್ಜಿಯುದೇ. ತಂದ ಕಟ್ಟಲ್ಲಿ ಇದ್ದ ರಜ್ಜ ಅಕ್ಕಿಯ ಒಂದು ಪಾತ್ರಲ್ಲಿ ಹಾಕಿ ತೋಡ ನೀರಿಲಿ ತೊಳದು, ಸಣ್ಣ ಕಿಚ್ಚು ಮಾಡಿ, ಉಪಾಯಲ್ಲಿ ಒಂದು ಅಶನ ಮಾಡಿದವು. ಉಂಡವು. ಮತ್ತೆ ಹೆರಟವು, ಆ ಊರಿಂದ. ಎಲ್ಲಿಗೋ!

ಹೊಲೆಯರು ನುಗ್ಗಿದ ಮನಯ ಮತ್ತೆ ಶುದ್ದ ಮಾಡಿದವು. ಇನ್ನೊಂದು ಒಕ್ಕಲು ಬಪ್ಪಲೆ ತುಂಬ ದಿನ ಹಿಡುದ್ದಿಲ್ಲೆ. ಮತ್ತಾಣ ಒರಿಶಂದ ಅಂದ್ರಾಣ ಹಾಂಗೆ ಒಳ್ಳೆ ಪಸಲು ಬಪ್ಪಲೆ ಶುರು ಆತು. ಎಲ್ಲ ಚೆಂದಕೆ ಇತ್ತಿದ್ದವು, ರಜ ಸಮಯ.

ಹಿರಿಯ ದಣಿಗೊಕ್ಕೆ ಇವರ ಕಾಣೆಕ್ಕು ಹೇಳಿ ಅನಿಸಿದರೂ, ಅವರ ಹೆರಮಾಡಿದ ಶುದ್ದಿ ಸಾವನ್ನಾರವೂ ಗೊಂತಾಯಿದಿಲ್ಲೆ. ಮಕ್ಕೊಗೆ ಗೊಂತಿದ್ದರೂ ಹೇಳದ್ದವಿಲ್ಲೆ, ಹೇಳುವನ್ನಾರ ದಣಿಗಳೂ ಕಾಯಿದ್ದವಿಲ್ಲೆ, ಧಣಿಗೊ ಪ್ರಾಯ ಆಗಿ ತೀರಿಗೊಂಡವು. ಕೆಲವು ಒರಿಷ ಕಳುದ ಮತ್ತೆ ಸಣ್ಣ ಧಣಿಗೊ ಒಂದು ಅನಿರೀಕ್ಷಿತ ದುರ್ಘಟನೆಲಿ ಸತ್ತವು. ಅದರಿಂದ ಮತ್ತೆ ಬೇರೆ ಬೇರೆಯುದೇ ಕೆಲವು ದೋಶಂಗೊ ಕಾಂಬಲೆ ಶುರು ಆತು. ಅನಿಷ್ಠ ಕಾಲ! ಎಂತಪ್ಪಾ ಹೀಂಗುದೇ ತೊಂದರೆ ಹೇಳಿ ಆಲೋಚನೆ ಮಾಡಿದ ಆ ಜವ್ವನಿಗ ಕುಂಞಿ ಧಣಿಗೊ ಊರಿನ ಆ ಕಾಲದ ಪ್ರಸಿದ್ದ ಗೆಡ್ಡದ ದರ್ಕಾಸು ಜೋಯಿಶರ ದಿನಿಗೆಳಿ ಒಂದು ಅಷ್ಟಮಂಗಲ ಮಡಗಿಸಿದವು.

ಗುರುಕೋಪ ಕಂಡೇ ಕಂಡತ್ತು. ಅಪ್ಪ-ಅಪ್ಪಚ್ಚಿಗೆ ಗುರುಗ ಆಗಿ ಇದ್ದ ಆ ಅಜ್ಜನ ಕುಟುಂಬವ ಊಟದ ಹೊತ್ತಿಂಗೆ, ಉಂಬಷ್ಟೂ ಪುರುಸೊತ್ತು ಇಲ್ಲದ್ದೆ ಹೆರ ಕಳುಸಿದ ವಿಚಾರ ನೆಂಪಾತು. ಸಣ್ಣಗಿಪ್ಪಗ ನೆಡದ್ದು. ಆ ಅಜ್ಜನ ಮನಸ್ಸಿಲಿ ಬಂದ ಆ ವೇದನಾಪೂರ್ವಕ ಮಾತು ಇದ್ದಲ್ದೋ, ಎಂಗ ಹೋವುತ್ತೆಯೊ ಹೇಳಿ, ಅದುವೇ ಈ ಮನೆಗೆ ದೋಶ ಆದ್ದು ಹೇಳಿ ಕಂಡುಗೊಂಡವು. ನಿವುರ್ತಿ ಮಾಡ್ತ ಬಗೆ ಕೇಳಿದವು. ಶ್ರೀ ಗುರುಗಳ (ಸ್ವಾಮಿಗಳ) ದಿನಿಗೆಳಿ ಒಂದು ಬಿಕ್ಷಾ ಸೇವೆ ಮಾಡುಸಿ. ಗುರುಗೊ ಬಂದು ಬಿಕ್ಷೆ ಉಂಡಿಕ್ಕಿ ಹೋದರೆ ಎಲ್ಲ ನಿವುರ್ತಿ ಆವುತ್ತು ಹೇಳಿದವು.

ಪೈಸೆ ಇದ್ದು ದಾರಾಳ, ಬಿಕ್ಷೆ ಮಾಂತ್ರ ಅಲ್ಲ, ಪಾದಪೂಜೆ, ಕಿರೀಟೋತ್ಸವ ಎಲ್ಲ ಮಾಡುವಷ್ಟು ತಾಕತ್ತು ಇದ್ದು ಅವಕ್ಕೆ. ಒಂದು ಸುಮುಹೂರ್ತಲ್ಲಿ ಅದುದೇ ನೆರವೇರಿತ್ತು. ಸ್ವಾಮಿಗೊ ಬಂದವು, ಜೆನ ಸೇರಿದವು, ಗೌಜಿಲಿ ಕಿರೀಟೋತ್ಸವ ಕಳುಶಿದವು. ಹಿಂದಾಣ ತಪ್ಪಿನ ಬಗ್ಗೆ ಪಶ್ಚಾತ್ತಾಪ ಇಪ್ಪದರಿಂದಲೂ ಈಗಾಣ ಜೆಂಬ್ರದ ಬಗ್ಗೆ ಹೆಮ್ಮೆ ಇತ್ತು ಅವಕ್ಕೆ, ಅಷ್ಟೆ. ಬಂದವರ ಹತ್ರೆ ದೊಡ್ಡಸ್ತಿಕೆ ತೋರುಸಿಗೊಂಡು ಜೆಂಬ್ರ ಕಳುಶಿದವು. ಈಗಾಣ ಗೇಣಿಗೊಕ್ಕೆ ರಜ್ಜ ಚಳಿಕೂರಲಿ ಹೇಳಿಯೂ ತಿಳ್ಕೊಂಡವು. ಇಂದು ಈ ಗುರುಗೊ ಉಂಡದರ್ಲಿ ಅಂದ್ರಾಣ ಗುರುಕೋಪ ನಿವುರ್ತಿ ಆತು ಹೇಳಿದವು, ಹೆಚ್ಚಿನವುದೇ.

ಜೋತಿಶ್ಶ ಶಾಸ್ತ್ರಲ್ಲಿ ನಿವುರ್ತಿ ಆಗಿಕ್ಕು, ಮಾನವೀಯತೆಯ ಶಾಸ್ತ್ರಲ್ಲಿ ನಿವುರ್ತಿ ಆಗಿಕ್ಕೋ? ಆ ಊಟದ ಹೊತ್ತಿಂಗೆ ಉಂಬಲೂ ಬಿಡದ್ದೆ ಬರೇ ಹೊಟ್ಟೆಲಿ, ಅದುದೇ ಮಂತ್ರ ಕಲುಶಿದ ಗುರುಗಳ - ಹಾಂಗೆ ಕಳುಸಿದ ಮನೆಗೆ ಬಂದ ಗುರುಕೋಪ ಪೈಸೆ ರಜಾ ಕರ್ಚು ಮಾಡಿ, ಮನೆಯ ಆಡಂಬರವ ನಾಲ್ಕು ಜೆನಕ್ಕೆ ತೋರುಸಿ, ಅಂತೇ ಒಂದು ಗೌಜಿ ಮಾಡಿರೆ ನಿವುರ್ತಿ ಅಕ್ಕೋ? ಏ°?
ಅಲ್ಲ, ಗುರುಗಳ ಸೇವೆ ಮಾಡಿದ್ದು ಒಳ್ಳೆದೇ, ಅತ್ಯಂತ ಒಳ್ಳೆ ಕೆಲಸ, ಎರಡು ಪ್ರಶ್ಞೆ ಇಲ್ಲೆ ಅದರಲ್ಲಿ. ಸ್ವಾಮಿಗೊ ಆ ಊರಿಂಗೂ ಬಂದದು ಪಾಪದವಂಗೆ ಮಂತ್ರಾಕ್ಷತೆ ಸಿಕ್ಕುಲೆ ಒಳ್ಳೆದಾತು. ಆದರೆ ಆ ಉಟ್ಟ ಬಟ್ಟೆಲಿ ಹೆರಟ ಆ ಮನೆಯ ಗೆತಿ ಎಲ್ಲಿಗೆ ಬಂತು ನೋಡಿದವೋ ಇವು? ಆರಿಂಗೂ ಅದರ ಬಗ್ಗೆ ಕಾಳಜಿ ಇತ್ತೇ ಇಲ್ಲೆ.ಅವರನ್ನೇ ಹುಡುಕ್ಕಿ, ಅವಕ್ಕೆ ಒಂದು ನೆಲೆ ಕೊಟ್ಟಿದ್ದರೆ ಅದು ನಿಜವಾದ ನಿವುರ್ತಿ ಆವುತಿತು. ಅಲ್ದೊ?

ಆ ಅಜ್ಜ ಈಗ ಖಂಡಿತಾ ಇರವು, ಅಜ್ಜಿಯೂ ತೀರಿಗೊಂಡಿಕ್ಕು. ಅವರ ಮಗಳಿಂಗೆ ಕೊನೆಗೂ ಮದುವೆ ಆಗಿದ್ದಿದ್ದರೆ ಈಗ ಅವರ ಮಕ್ಕೊಗೆ ಪ್ರಾಯ ಆಗಿಕ್ಕು! ಅವರ ಮನೆಯವು ಎಲ್ಯಾರು ಇಕ್ಕು, ಚೆಂದಕ್ಕೆ ನೆಮ್ಮದಿಲಿ ಉಂಡುಗೊಂಡು.ಎಲ್ಲಿ ಇದ್ದವು ಹೇಳಿ ಮಾಷ್ಟ್ರುಮಾವಂಗೆ ಗೊಂತಿಲ್ಲೆ, ಒಪ್ಪಣ್ಣಂಗೆ ಅದೆಲ್ಲ ಹುಡ್ಕುಲೂ ಅರಡಿಯ.:(

ಗುರುಕೋಪದ ಮನೆಯವು ಮಾಂತ್ರ ಈಗಳೂ ಪೇಟೆ ಕರೆಯ ಪೋಲೀಸು ಶ್ಟೇಶನು ಕರೆಲಿ ಕಳ್ಳು ಕುಡುದು ಹೊಡಚ್ಚಿಗೊಂಡು ಇದ್ದವು. ಇನ್ನೂ ನಿವುರ್ತಿ ಆದ ಹಾಂಗೆ ಕಾಣ್ತಿಲ್ಲೆ ಬಾವ! ಹೇಳಿದ ಈ ಶುದ್ದಿ ಕೇಳಿಸಿಗೊಂಡ ಈಚಕರೆ ಪುಟ್ಟ. ಅವಂಗೆ ಗುರ್ತ ಇದ್ದು ಕಾಣ್ತು.

ಗುರು ಹೇಳ್ತ ಶಬ್ದಕ್ಕೆ ಅತ್ಯಂತ ಶಕ್ತಿ ಇದ್ದು. ಪ್ರಾಯ, ಜಾತಿ, ಲಿಂಗ – ಯೇವದೂ ಇಲ್ಲದ್ದ ಒಂದು ಶಕ್ತಿ. ಯಾವುದೇ ರೂಪಲ್ಲಿ ಬಂದರೂ ಅದರ ಧನಾತ್ಮಕವಾಗಿ ನೋಡಿಗೊಂಬ ಸಂಸ್ಕೃತಿ ನಮ್ಮದು. ನಾಲ್ಕಕ್ಷರ ಕಲುಶಿದ್ದವು ಹೇಳಿ ಆದರೆ ಎಂತವಂದೇ ಗುರುಗೊ ಆವುತ್ತವು. ಎಲ್ಲೊರನ್ನೂ ಚೆಂದಕ್ಕೆ ನೋಡಿಗೊಂಡು, ಆರನ್ನೂ ಬೇನೆ ಮಾಡದ್ದೆ ನೋಡಿಗೊಂಬ ಚೈತನ್ಯ ಎಲ್ಲ ಶಿಶ್ಯರಿಂಗೂ ಬರೆಕ್ಕು. ಸಂಸ್ಥಾನಲ್ಲಿಪ್ಪ ಶ್ರೀಗುರುಗಳಿಂದ ಹಿಡುದು ಒಂದು ಎರಡು ಹೇಳಿ ಕೊಡ್ತ ಟೀಚರಮ್ಮನ ವರೆಗೆ ಎಲ್ಲೊರೂ ಗುರುಗಳೇ!. ಗುರುಕೋಪ ಒಂದು ಬಂದಿಕ್ಕದ್ದ ಹಾಂಗೆ ನೋಡಿಗೊಳೆಕ್ಕು, ಎಲ್ಲೊರುದೇ.

ಒಂದೊಪ್ಪ: ಪ್ರತಿ ಗುರುಕೋಪದ ಹಿಂದೆಯೂ ಹೀಂಗಿರ್ತ ದಾರುಣ ಕತೆ ಇರ್ತು. ಎಂತ ಹೇಳ್ತಿ?