ಹಿಂಡಿ ಬದಲಿಸಿ "ನಿನಿಗೆ" ಹಾಲು ಕಮ್ಮಿ ಆದ ಶುದ್ದಿ

ಇದೊಂದು ರಜ್ಜ ಕುಶಾಲಿಂಗೆ ಹೇಳಿಯೇ ಬರದ ಹರಟೆ ಶುದ್ದಿ.

ತರವಾಡು ಮನೆ ಹೇಳಿರೆ ಎಂಗಳ ಬೈಲಿಂದ ಪಂಜ ಸೀಮೆಗೆ ಸಂಬಂದ ಆದ ಸುರೂವಾಣ ಮನೆ. ರಂಗಮಾವನ ತಂಗೆ ಮಾಲ ಚಿಕ್ಕಮ್ಮನ ಪಂಜಕ್ಕೆ ಕೊಟ್ಟದು. ಪಂಜಲ್ಲಿ ಎಲ್ಲಿ ಹೇಳಿ ಅವರ ಮನೆ ಹೆಸರು ಸರೀ ನೆಂಪಾಗ ಒಪ್ಪಣ್ಣಂಗೆ, ಅಂದೇ ಮದುವೆ ಆಗಿ ಹೋಯಿದವು, ಈಗ ತಿತಿಗೋ , ಪೂಜಗೋ ಹೇಳಿಗೊಂಡು ಒರಿಷಕ್ಕೆ ಒಂದರಿಯೋ, ಎರಡು ಸರ್ತಿಯೋ ಮಣ್ಣ ಬಕ್ಕಷ್ಟೆ ಅವು. ಮೊನ್ನೆ ಬಂದಿತ್ತಿದ್ದವು, ಇಬ್ರುದೇ. ಶಂಬಜ್ಜನ ತಿತಿಗೆ ಹೇಳಿ ಬಂದವು ಆ ದಿನ ನಿಂದು, ಮರದಿನ ಒಡೆ ಸುಟ್ಟವು ಕಟ್ಟಿ ತೆಕ್ಕೊಂಡು ಹೋಯಿದವು. ಪಿತೃ ಕಾರ್ಯಕ್ಕಪ್ಪಗ ಬಪ್ಪಲೇ ಬೇಕನ್ನೇ!

ಮಾಲ ಚಿಕ್ಕಮ್ಮನ ಮದುವೆ ಕಳುದ ಮತ್ತೆ ಸುಮಾರು ಸಂಬಂಧ ಆಯಿದು. ಆ ಮದುವೆ ದಿಂಡು ಕಳಿಯೆಕ್ಕಾರೆ ನಮ್ಮ ಶೇಡಿಗುಮ್ಮೆ ಮಾವಂಗೆ ಸಂದಾನ ಆಯಿದು, ಮಜಲುಕೆರೆಂದ - ಇಂದಿರತ್ತೆಯ. ಮತ್ತೆ ಒಂದು ಒರಿಶಲ್ಲಿ ಅಜ್ಜಕಾನ ಮಾವಂದು. ಅದಾದ ಮತ್ತೆ ಒಪ್ಪಣ್ಣನ ಮನೆಂದಲೇ ಅತ್ತೆಯ ಕೊಳ್ಚಿಪ್ಪಿ ಹೇಳ್ತಲ್ಲಿಗೆ ಕೊಟ್ಟದು. (ನಮ್ಮ ಊರಿಲಿಯುದೇ ಅದೇ ಹೆಸರಿನ ಊರು ಇದ್ದು, ಆದರೆ ಕೊಳಚ್ಚಿಪ್ಪು ಹೇಳುಸ್ಸು ಅದರ.) ಸದ್ಯದ್ದು ಹೇಳ್ತರೆ ಆಚಕರೆ ಕೂಸಿನ ಕೊಟ್ಟಿದು. ಹಾಂಗೆ ಬೆಳಕ್ಕೊಂಡು ಈಗ ಸುಮಾರು ಬಾವಂದ್ರು ಆಯಿದವು. ಸಂಪರ್ಕ, ಸಂಬಂಧ ಅತ್ತಿಂದಿತ್ತೆ ಆದ ಮತ್ತೆ ಪರಸ್ಪರ ಭಾಶಾ ಪರಿಚಯವೂ ಆಯಿದು.

ಪಂಜ ಹೊಡೆಲಿ ಮಾತಾಡುವ ಹವ್ಯಕ ಭಾಷೆಗೂ, ಕುಂಬ್ಳೆ ಹೊಡೆಲಿ ಮಾತಾಡುವ ಭಾಷೆಗೂ ರಜ ವೆತ್ಯಾಸ ಇದ್ದು. ರಂಗ ಮಾವ° ಮಾತಾಡ್ತ ಭಾಷೆಗೆ ’ಕುಂಬ್ಳೆ ಭಾಶೆ’ ಹೇಳ್ತವು, ಇದರ್ಲಿ ಸ್ಥಳೀಯ ಮಲೆಯಾಳದ ಪ್ರಭಾವದ ಶಬ್ದಂಗ ಜಾಸ್ತಿ. ಕುಂಬ್ಳೆ ಭಾಶೆಲಿ ರಜ್ಜ ವೆತ್ಯಾಸ, ಮಾರ್ಪಾಡುಗೊ ಆಗಿ ಅತ್ಲಾಗಿತ್ಲಾಗಿಯಾಣ - ಪುತ್ತೂರು, ಕೋಳ್ಯೂರು ಸೀಮೆ ಭಾಶೆ ಇತ್ಯಾದಿಗೊ ಇದ್ದು. ಜಾಸ್ತಿ ಅಲ್ಲದ್ರೂ ವಿಟ್ಳ ಸೀಮೆ (ನಮ್ಮ ಚೆಂಬರ್ಪು ಅಣ್ಣನ ಮನೆಲಿ ಮಾತಾಡ್ತ ನಮುನೆದು, ಗೊಂತಾತಲ್ದೋ?) ಭಾಶೆಯೂ ರಜ್ಜ ವೆತ್ಯಾಸ ಇದ್ದೇ ಇದ್ದು. ಹೊಸದುರ್ಗ ಸೀಮೆಯ ಅತ್ಲಾಗಿ ಕೆಲವು ಮನೆಲಿ ಶುದ್ದ ಮಲೆಯಾಳವೂ ಮಾತಾಡ್ತವು ಹೇಳಿ ಕುಂಬ್ಳೆ ಅಜ್ಜಿ ಹೇಳಿದ ನೆಂಪು, ಸರೀ ಗೊಂತಿಲ್ಲೆ!
ಪಂಜ ಚಿಕ್ಕಯ್ಯ ಮಾತಾಡುವ ಭಾಷೆಗೆ 'ಪಂಜ ಭಾಷೆ' ಹೇಳುದು. ಈ ಭಾಶೆಲಿ ಕನ್ನಡದ ಪ್ರಭಾವದ ಶಬ್ದಂಗ ಹೆಚ್ಚು. ಅಪ್ಪಚ್ಚಿ ಹೇಳ್ತದಕ್ಕೆ ಅವು ಚಿಕ್ಕಯ್ಯ ಹೇಳುದಲ್ದಾ, ಅದಕ್ಕೆ ಅವರ ’ಪಂಜಚಿಕ್ಕಯ್ಯ’ ಹೇಳಿಯೇ ಹೇಳುದು. {“ಕುಂಬ್ಳೆಲಿ ’ಮಿನಿ(ಲಿ)ಯ’ ಇಪ್ಪದು ಪಂಜಲ್ಲಿ ’ಬಿಲಿಯ’ ಆಯಿದು – ಸಾವಿರ ಪಟ್ಟು ಜಾಸ್ತಿ” ಹೇಳಿ ಈಚಕರೆ ಪುಟ್ಟ ಅಂಬಗಂಬಗ ನೆಗೆ ಮಾಡುಗು, ಹೆ ಹೆ.} ಪಂಜ ಭಾಶೆಂದಲೂ ಹಾಂಗೇ., ಕನ್ನಡದ ಪ್ರಮಾಣ, ಪ್ರತ್ಯಯ ರಜ್ಜ ವೆತ್ಯಾಸ ಆಗಿಪ್ಪ – ’ಚೊಕ್ಕಾಡಿ ಬಾಶೆ’ ಇದ್ದು. ದೀಪಕ್ಕನ (- ಚೂರಿಬೈಲು ಡಾಕ್ಟ್ರ ಹೆಂಡತ್ತಿ) ಅಪ್ಪನ ಮನೆಲಿ, ನಮ್ಮ ಕಾವಿನಮೂಲೆ ರಾಮಜ್ಜನ ಮನೆಲಿ ಎಲ್ಲ ಆ ಬಾಶೆಯೇ ಮಾತಾಡುದು. ಪಂಜ ಸೀಮೆಯ ಕೆಲವು ಬಾವಂದ್ರು ಮಡಿಕೇರಿಲಿ ಇದ್ದವು ಅಡ - ಅವು ಶುದ್ದ ’ಶಾಲೆ ಕನ್ನಡ’ ಮಾತಾಡುದು ಅಡ, ಮನೆಲಿಯುದೆ - ಪುಟ್ಟಕ್ಕ ಹೇಳಿಗೊಂಡಿತ್ತು ಮೊನ್ನೆ.
ಪಂಜ ಊರಿಂಗೆ ಹೋದ ಮತ್ತೆ ಮಾಲ ಚಿಕ್ಕಮ್ಮ ಅವರ ಮನೆಲಿ ಮನೆಭಾಷೆ ಮಾತಾಡುದು -ಪಂಜ ಚಿಕ್ಕಯ್ಯನ ಹಾಂಗೆ; ಹೋಪ್ಲೆ - ಬಪ್ಲೆ ಹೇಳಿ. ಅಪ್ಪನ ಮನಗೆ ಬಂದರೆ ಕುಂಬ್ಳೆ ಭಾಷೆ ಮಾತಾಡುದು; ಹೋಪಲೆ-ಬಪ್ಪಲೆ. ಅವರ ನೆರೆಕರೆ ದೀಪಕ್ಕಂಗೆ ಪೋನೋ ಮತ್ತೊ° ಮಾಡ್ತರೆ ರಜ ರಜ ಚೊಕ್ಕಾಡಿಯ ’ಹೋವುಕೆ -ಬರೂಕೆ’ಯನ್ನೂ ಮಾತಾಡ್ತವು. ಸಣ್ಣಗಿಪ್ಪಗ ಆಳುಗಳೊಟ್ಟಿಂಗೆ ಕಲ್ತ ಮಲೆಯಾಳವೂ, ಈಗ ಅಲ್ಲಿ ಆಳುಗಳತ್ರೆ ಮಾತಾಡ್ಳೆ ತುಳುದೇ ಬತ್ತು. ಮಹಿಳಾ ಸಮಾಜದ ಸಂಪರ್ಕಂದಾಗಿ ನೆರೆಕರೆ ಗೌಡುಗಳ ’ಹೋಕನೆ –ಬಾಕನೆ’ ಭಾಶೆಯೂ ಬತ್ತು. ಶಾಲಗೆ ಹೋವುತ್ತ ಮಗಳಿಂಗೆ ಹೇಳಿಕೊಡ್ಳೆ ಬೇಕಾಗಿ ಹಿಂದಿ- ಇಂಬ್ಳೀಶುದೇ ರಜ ರಜ ಮಾತಾಡ್ತವು! ಹಾಂಗಿಪ್ಪ ಮಾಲ ಚಿಕ್ಕಮ್ಮ. ಪಂಜ ಚಿಕ್ಕಯ್ಯಂಗೆ ಪಂಜ ಬಾಶೆ ಬಿಟ್ರೆ ಬೇರೆ ಏವದೂ ಬಾರ ಹೇಳಿ ನೆಗೆ ಮಾಡುಗು ಕೆಲವು ಸರ್ತಿ. ಇಷ್ಟರ ಒರೆಂಗೆ ಅದೊಂದೆ ಸಾಕಾಯಿದು ಅವಕ್ಕೆ. ;-)
ಅದಿರಳಿ,

ಈ ಪಂಜ ಚಿಕ್ಕಯ್ಯ ತುಂಬಾ ಶ್ರಮಜೀವಿ. ಅಡಿಕೆ ತುಂಬಾ ಆಗ್ತು ಅವ್ಕೆ. ಆದ್ರೂ ತುಂಬಾ ಸರಳ. (ಅದಾ..ಒಪ್ಪಣ್ಣಂಗೆ ಅವರ ಶುದ್ದಿ ಹೇಳುವಾಗ ರಜ ರಜ ಆ ಭಾಷೆ ಒತ್ತುತ್ತು- ಹಾಂಗೆ ಅತ್ತಿತ್ತೆ ಆದರೆ ತೊಂದರೆ ಇಲ್ಲೆನ್ನೇ!)
ಮಗ° ದೂರಲ್ಲಿ ಇಂಜಿನಿಯರು ಕಲಿಯೂದು, ಮಗ್ಳು ಬಾಳಿಲ ಶಾಲೆಗೆ ಹೋಪುದು. ಚಿಕ್ಕಯ್ಯನ ಸ್ವಂತ ಆಸಕ್ತಿಯಿಂದ ಕೃಷಿ ಅಭಿವೃದ್ದಿ ಆದ್ದು. ಹಟ್ಟಿ ತುಂಬಾ ದನ. ಬೆಳಿಗ್ಗೆ-ಬೈಸಾರಿ ಡೈರಿಗೆ ಹಾಲು ಹಾಕ್ತವು, ದಿವ್ಸಕ್ಕೊಂದ್ಸರ್ತಿ ನಡ್ಕೊಂಡೇ ಪೇಟೆಗೆ ಹೋಗ್ತವು. ಮನೆ, ಕೃಷಿ, ತರ್ಕಾರಿ, ನಂಟ್ರು, ನೆರೆ ಎಲ್ಲವನ್ನೂ ಸುದಾರ್ಸಿಗೊಂಡು ಹೋಗ್ತವು. ತುಂಬ ಮಾತಾಡ್ತುವು, (ಮಾಲ ಚಿಕ್ಕಮ್ಮನಷ್ಟು ಅಲ್ಲ!). ಸ್ವತಃ ಶ್ರಮಜೀವಿ ಆದ ಕಾರಣ ಮಾತುಕತೆ ಮಧ್ಯ ಜೀವನಾನುಭಾವ ಇರ್ತು.

ಕೆಮಿಲಿ ಒಂದು ಟಿಕ್ಕಿ, ಕೊರಳಿಂಗೆ ಒಂಟಿ ರುದ್ರಾಕ್ಷಿ ಮಾಲೆ. ಮೋರೆಲಿ ಬೆಳಿ ಗೆಡ್ದ, ಅಮವಾಸೆಗೆ ಹುಣ್ಣಮೆಗೆ ತೆಗೆತ್ತದು ಅದರ. ಅರೆ ಬೆಳಿ ತಲೆಕಸವು. ಅರೆ ಬೆಳಿ ಹೇಳಿರೆ?- ತಿಂಗಳಿಂಗೆ ಒಂದರಿ ಕುಚ್ಚಿ ತೆಗೆಶುದು, ಅಷ್ಟಪ್ಪಗ ತಲೆಕಸವಿಂಗೆ ಕಪ್ಪು ಬಣ್ಣ ಹಾಕುದು- ಪಂಜ ಬಷ್ಟೇಂಡಿನ ಕರೆಲಿಪ್ಪ ಕುಶಲಪ್ಪನ ಬಂಡಾರಿ ಕೊಟ್ಟಗೆಲಿ. ಹಾಂಗೆ ತಿಂಗಳಿನ ಸುರುವಾಣ ವಾರ ಮೂವತ್ತೊರಿಶದ ತುಂಡು ಜವ್ವನಿಗ° ;-). ಎರಡ್ನೇ ವಾರ ನಲುವತ್ತು ಒರಿಶದ ಜವ್ವನ. ಮೂರ್ನೇ ವಾರ ಅರೆಕರಂಚಿದ ತಲೆಕಸವು - ನಲುವತ್ತೈದು ಒರಿಶದ ಗೆಂಡು ಮಕ್ಕೊ. ಅಂತೂ ಮತ್ತಾಣ ತಿಂಗಳು ಕುಚ್ಚಿ ತೆಗೆಶುಲೆ ಹೋಪಲಪ್ಪಗ ಮತ್ತೆ ಐವತ್ತು ಒರಿಶದ ಅಪ್ಪಚ್ಚಿ. ಅದೇ ವಾರ ಆಯಿದು ಇದಾ ಶಂಬಜ್ಜನ ತಿತಿ. ;-)

ಹಗಲು ಪೂರ ಇಸ್ಪೇಟು ಗೌಜಿಲಿ ಕಂಡಾಬಟ್ಟೆ ಗಡಿಬಿಡಿ. ಹೊತ್ತೊಪ್ಪಗ ತಿತಿ ಊಟ ಉಂಬಲಪ್ಪಗ ರಜ್ಜ ಮಾತಾಡ್ಳೆ ಹೇಳಿ ಪುರುಸೊತ್ತು ಇದಾ! ದೊಡ್ಡವರ ಹಂತಿ ಒಳ್ಳೆ ಗೌಜಿ. ಇವುದೇ ಎಲ್ಲ ಹಳಬ್ಬರ ಹಾಂಗೇ ಬೊಬ್ಬೆ ಹೊಡದು ಮಾತಾಡುದು- ಆದರೆ ಪಂಜ ಭಾಷೆ. ಹಳೆ ಕಾಲದ ಶೈಲಿ ಅಲ್ದೋ! ರಾಜಕೀಯಂದ ಹಿಡುದು ಕೃಷಿಯ ಒರೆಗಾಣ ಜೀವನಾನುಭವ ಅವಕ್ಕಿದ್ದು. ಎಲ್ಲವುದೇ ಬಕ್ಕು.
ಈಚಕರೆ ಪುಟ್ಟ ಅವರ ಕರೆಲಿ ಕೂದ್ದು, ಅಜ್ಜಕಾನ ಬಾವ ಅವರ ಎದುರು. ಒಪ್ಪಣ್ಣ ಆಚಕರೆಮಾಣಿ, ಗುಣಾಜೆ ಕುಂಞಿ, ಎಲ್ಲೊರು ಅವರ ಒಟ್ಟೊಟ್ಟಿಂಗೆ ಕೂದೆಯೊ°. ಪಾಲಾರು ಅಣ್ಣ, ಸಿದ್ದನಕೆರೆ ಅಪ್ಪಚ್ಚಿ, ಕಾವೇರಿಕಾನ ಉದ್ದಣ್ಣ ಎಲ್ಲ ಎರಡ್ಣೇ ಹಂತಿಗೆ ಕೂಪದು, ಹೆಚ್ಚು ಹಶು ಆಗಿ ಜಾಸ್ತಿ ಉಂಬಲೆ ಬೇಕಾಗಿ. ;-)

ಕೆಲವು ಹಳಬ್ಬರುದೇ, ಎಂಗೊ ಜವ್ವನಿಗರುದೇ ಹೆರಾಣ ಜೆಗಿಲಿಲಿ ಹಾಕಿದ ಹಂತಿಲಿ ಕೂದ್ದು, ಕೈಸಾಲೆಲಿಯೋ, ಪಡುಜೆಗಿಲಿ ಹಂತಿಲಿ ಎಲ್ಲ ಒಳುದ ರಜ ಹಳಬ್ಬರು ಕೂಯಿದವು. ಕೈಸಾಲೆಲಿ ಕೂದ ಹರಿಮಾವನ ಹಳೆ ಕುಂಬ್ಳೆಭಾಶೆ , ಪಡುಜೆಗಿಲಿಲಿ ಕೂದ ಗೋವಿಂದ ಬಟ್ರ ಕನ್ನಡ (– ಅವು ಮಕ್ಕಳ ಹತ್ರೆ ಹವ್ಯಕ ಮಾತಾಡ್ತರೂ, ದೊಡ್ಡವರತ್ರೆ ಕನ್ನಡವೇ ಮಾತಾಡುಗು), ಇದರ ಒಟ್ಟೊಟ್ಟಿಂಗೆ ಹೆರಾಣ ಜೆಗಿಲಿಲಿ ಕೂದ ಪಂಜ ಚಿಕ್ಕಯ್ಯನ ಪಂಜಬಾಶೆದೇ ಅಲ್ಲಿ ಇದ್ದ ಎಲ್ಲೊರಿಂಗೂ ಕೇಳಿಗೊಂಡಿತ್ತು. ಪಡುಜೆಗಿಲಿಂದ ಕೈಸಾಲೆಗೆ, ಕೈಸಾಲೆಂದ ಹೆರಾಣ, ಎಂಗಳ ಹಂತಿಗೆ ಬೊಬ್ಬೆ ಹೊಡದು ಮಾತಾಡುದು. ಬಳುಸುತ್ತವ° ಎಂತರ ತಂದದು ಹೇಳಿ ಹಾಕಿದ ಮತ್ತೆಯೇ ಗೊಂತಾಯೆಕ್ಕಷ್ಟೆ. ಚೀಪೆ ತಿಂಬಲಾಗದ್ದ ಮಗುಮಾವನ ಬಾಳಗೆ ಕೆಳಾಣ ಸುಬ್ಬಣ್ಣ ಹಸರ ಸೀವು ಬಳುಸಿದ್ದು ಅದೇ ಗಡಿಬಿಡಿಂದ!

ಪಂಜ ಚಿಕ್ಕಯ್ಯ ಮಾತಾಡುವಾಗ ಒಂದು ವಿಶೇಷ ಇದ್ದು- ಎಂತದೇ ಮಾತಾಡ್ಲಿ, ಎಡೆ ಎಡೆಲಿ 'ನೀನು/ ನಿಂಗ' ಹೇಳಿ ಸೇರುಸುದು. ಎದುರಾಣವನ ಹತ್ರೆ ಮಾತಾಡುವಗ ಇಪ್ಪ ಆಪ್ತತೆ, Involvement ಜಾಸ್ತಿ ಅಪ್ಪಲೆ ಹೇಳಿ ಲೆಕ್ಕ. ಅವರ ಊರಿನ ನೀರಿನ ತೊಂದರೆಂದ ಸುರು ಆಗಿ, ಕ್ರಿಕೆಟು - ಟಿ-೨೦ ಆಗಿ, ರಾಜಕೀಯ, ಸೊನೆ ಗಾಂದಿ, ರಾಮಜ್ಜ ಆಗಿ, ಮಠದ ಯಾತ್ರೆಯ ಶುದ್ದಿ, ದನಗಳ ಶುದ್ದಿ ಆಗಿ ಅಕೆರಿಗೆ ಅವರ ಮಾವ° ಶಂಬಜ್ಜನ ಕಾಲಬುಡಲ್ಲಿ ನಿಂದತ್ತು. ಮಾತಾಡಿದ ಅಷ್ಟೂ ವಿಷಯಲ್ಲಿ ನಿನಿಗೆ, ನಿಂಗಗೆ - ಹೇಳಿ ಸೇರಿಸಿಗೊಂಡೇ ಇತ್ತಿದ್ದವು.

ಆಚಕರೆ ಮಾಣಿಗೆ ತಾಳು ಕಾರ ಆಗಿ ಅಂಬಗಳೇ ಒಂದು ಗ್ಲಾಸು ನೀರು ಕಾಲಿ. ಚಿಕ್ಕಯ್ಯನ ಗ್ಲಾಸು ತೆಕ್ಕೊಂಡ°, ಅದನ್ನೂ ಕಾಲಿ ಮಾಡಿದ. ನೀರಿಂಗೆ ತತ್ವಾರ ಆದರೂ ನೆಟ್ಟಿ ತರಕಾರಿ ಮಾಡುವ ಪಂಜಚಿಕ್ಕಯ್ಯ ನೀರಿನ ತುಂಬುಸಿ ಮಡಗುತ್ತ ವೆವಸ್ತೆ ಬಗ್ಗೆ ಹರಿ ಮಾವ° ಕೇಳಿದವು. ’ಗುಡ್ಡೆ ತುದಿಲಿ ಮಣ್ಣ ಗುಂಡಿ ತೆಗುದು ಅದ್ರಲ್ಲಿ ನೀರು ಶೇಖರಣೆ ಮಾಡುವ’ ಬಗ್ಗೆ ವಿವರುಸಿದವು ಪಂಜ ಚಿಕ್ಕಯ್ಯ. ’ಕರೆಯ ಡೆಂಜಿ ಕೊರದು ನೀರು ಇಂಗಿ ಸೋರದೋ?’ ಹೇಳಿ ಪ್ರಶ್ನೆ ಬಂತು ಹರಿಮಾವಂದು. ಅದಕ್ಕೆ "ಮಣ್ಣು-ಮಡ್ಡಾಯಿಲು (Mud-Oil) ಸೇರ್ಸಿ ಹೊಳಿಮಣೆಲಿ ಸರೀ ಹೊಳಿಯೆಕ್ಕು ನಿಂಗಗೆ’ ಹೇಳಿದವು. ಎಲ್ಲೊರು ’ಅಪ್ಪನ್ನೇ! ಒಳ್ಳೆ ಉಪಾಯ’ ಹೇಳಿ ಗ್ರೇಶಿಗೊಂಡರೆ, ಆಚಕರೆ ಮಾಣಿಗೆ ಎಡೆಲಿ ಬಂದ ’ನಿಂಗೊಗೆ’ ತುಂಬ ತಮಾಶೆ ಆಗಿ ಕಂಡತ್ತು.ಕೊರಳು ಎತ್ತರ್ಸಿ ನೀರು ಕುಡ್ಕೊಂಡು ಇದ್ದವನ ತಲಗೆ ಈ ವಿಶಯ ಹೋದ್ದೇ ತಡ, ರಪಕ್ಕ ತೆರಂಬು ಹೋಗಿ ನೀರು ಪೂರ ಹೆರ. ಮಡ್ಡೋಯಿಲಿನ ಹೊಳಿಮಣಗೆ ಮೆತ್ತಿ ಪುಟ್ಟಕ್ಕನ ಮೋರೆಗೆ ಹೊಳಿವದು ನೆಂಪಾತೋ ಏನೋ! ಕಣ್ಣು ಕೆಂಪಾಗಿ, ಶಾಲು ಚೆಂಡಿ ಆಗಿ ಕಿತಾಪತಿ– ’ಎಂತಾತು ಮಾರಾಯ°’ ಹೇಳಿ ಅಜ್ಜಕಾನ ಬಾವ ಕೇಳಿದ°, ಶುದ್ದಿ ವಿವರ್ಸಿದ° -ಬಂಙಲ್ಲಿ. ಅಜ್ಜಕಾನ ಬಾವಂಗೂ ನೆಗೆ ಶುರು ಆತು. ಮತ್ತೆ ಅಲ್ಲಿಂದ ಗುಣಾಜೆ ಕುಂಞಿ, ಅಲ್ಲಿಂದ ಈಚಕರೆ ಪುಟ್ಟ° – ಅಂತೂ ಕ್ಷಣಾರ್ಧಲ್ಲಿ ಜವ್ವನಿಗರಿಂಗೆ ಎಲ್ಲೊರಿಂಗೂ ನೆಗೆ ಬಂತು. ಹಳಬ್ಬರಿಂಗೆ ಮಾಂತ್ರ ಇದಕ್ಕೇ ನೆಗೆ ಮಾಡುದು ಹೇಳಿ ಗೊಂತಾಯಿದಿಲ್ಲೆ, ಎಂತಾರು ಬೇರೆ ಇಕ್ಕು ಹೇಳಿ ಗ್ರೇಶಿಗೊಂಡವು. ಮಾತು ಮುಂದುವರುತ್ತು.

ದೋನಿ ಈ ಸರ್ತಿ ಕ್ರಿಕೇಟಿಲಿ ಸರಿಯಾಗಿ ಆಡಿದ್ದಿಲ್ಲೆ ಅಡ. ಹಾಂಗೆ ಸೋತು ಮನಗೆ ಬಯಿಂದಡ ಭಾರತ ತಂಡ. ಸೆವಾಗು ಬೇಗ ಮನಗೆ ಬಂತಡ. ಕೈಬೇನೆಯೋ, ಸೊಂಟ ಬೇನೆಯೋ, ಮಾಲ ಚಿಕ್ಕಮ್ಮನ ಹಾಂಗೆ! ಸೆವಾಗು ಹೇಳಿರೆ ಭಾರೀ ಅಬಿಮಾನ ಹೇಳಿ ಕಾಣ್ತು ಈ ಚಿಕ್ಕಯ್ಯಂಗೆ. ’ಅವ ಹೊಡಿಲೆ ಸುರು ಮಾಡಿದ್ರೆ ನಿನಿಗೆ ನಾಯಿಗೆ ಹೊಡುದ ಹಾಂಗೆ ಹೊಡಿತ್ತ’ ಹೇಳಿ ಮೂರು ಮೂರು ಸರ್ತಿ ಹೇಳುವಗ ಈಚಕರೆ ಪುಟ್ಟಂಗೆ ತಡವಲೆಡಿಯ. ಬಾಯಿಲಿ ತುಂಬುಸಿದ ಕೊದಿಲಿನ ದೀಗುಜ್ಜೆ ಹೋಳುದೇ ರಜ್ಜ ಅಶನವುದೇ ಆಚಕರೆ ಮಾಣಿಯ ಮೇಗಂಗೆ ಚೆಂದಕೆ ಪ್ರೋಕ್ಷಣೆ! ’ಸೋರಿ ಬಾವ’’ ಹೇಳಿದ°. ’ಸೋರಿರೆ ಉದ್ದಿಗೊ’ ಹೇಳಿ ಮೋರೆ ಹಸಿ ಮಾಡಿದ° ಆಚಕರೆ ಮಾಣಿ. ಅವಂಗೂ ಎಂತಕೆ ನೆಗೆ ಬಂದದು ಹೇಳಿ ಗೊಂತಾದ ಕಾರಣ ಜಾಸ್ತಿ ಪಿಸುರು ಬಯಿಂದಿಲ್ಲೆ. ದೂರಲ್ಲಿ ಕೂದೊಂಡೇ ಕೆಮಿ ಕೊಟ್ಟ ಎರಡ್ಣೇ ಹಂತಿ ಮಕ್ಕೊಗೂ ನೆಗೆ ತಡೆಯ.

ಮಾಷ್ಟ್ರು ಮಾವ° ಜೆಂಬ್ರ ತೆಗೆತ್ತರೆ ಈ ಮಳೆಗಾಲ ಹೋದ ಕೂಡ್ಳೆ ಜಾಲಿನ ಸರಿ ಮಾಡೆಕ್ಕು, “ಸೆಗ್’ಣಿ ಸಾರ್ಸಿ ಸರೀ ಹೊಳಿಯೆಕ್ಕು ನಿನಿಗೆ” ಹೇಳಿದವು. ತಡವಾದರೆ ಮಣ್ಣು ಗಟ್ಟಿ ಆಗಿ ಅದರ ಹೊಳಿವದು ಕಷ್ಟ ಹೇಳಿ ಅದರ ಅರ್ತ. ಬಪ್ಪ ಮಳೆಗಾಲ ಒರಂಗೆ ಒಳಿಯೆಕ್ಕನ್ನೆ ಆ ಜಾಲು!
ಅಡಿಕೆ ಬೆಳೆಯ ಬಗ್ಗೆ ಮಾತಾಡುವಗ ’ಗೋಬರುಗೇಶಿನ ಸ್ಲರಿಯ ಸರೀ ಕೊಳ್ಸಿ ಹಾಕಿದ್ರೆ ಒಳ್ಳೆ ಸಿಂಗಾರ ಬತ್ತು ನಿನಿಗೆ’ ಹೇಳಿದವೂಳಿ ಎಡೆಲಿ ಒಂದರಿ! ಮೊದಲೇ ಕೆಲವು ಜವ್ವನಿಗರು ಕಂಗಾಲು, ಅವರ ನೆಗೆ ಇನ್ನುದೇ ಜೋರಾದ್ದು ಅಲ್ಲದ್ದೆ, ಮತ್ತುದೇ ಕೆಲವು ಜೆನ ನೆಗೆ ಮಾಡ್ಳೆ ಸೇರಿಗೊಂಡವು.
ಉಂಬಗ ಎಡೆಲಿ ಗುಣಾಜೆ ಕುಂಞಿ ಸೋನಿಯನ ಉದುರುಸುವ ಮಾತಾಡಿಗೊಂಡು ಇತ್ತಿದ್ದ°. ಈಗಾಣ ಗೋರ್ಮೆಂಟು ಗಟ್ಟಿ ಇದ್ದು, ಅದೆಂತ ಹಂದ ಹೇಳಿ ಗೊಂತಿದ್ದರೂ! “ಸೋನಿಯನ ಬೀಳ್ಸೆಕ್ಕಿದ್ರೆ ಮಮತಾ ಬೇನರ್ಜಿಯ ಸಪೋರ್ಟು ಬೇಕಲ್ದಾ ನಿನಿಗೆ?’ ಹೇಳಿದವು. ’ಎನಗೆಂತಕಪ್ಪಾ ಬೇನರ್ಜಿಯ ಸಪೋರ್ಟು ತೆಕ್ಕೊಂಬ ಜೆಂಬಾರ!’ ಹೇಳಿ ಕುಂಞಿ ಪರಂಚಿಗೊಂಡದು ಒಪ್ಪಣ್ಣಂಗೆ ಕೇಳಿತ್ತು.

ದನ ಸಾಂಕಾಣದ ಮಾತುಕತೆಲಿ ಅವರ ಡೈಲಾಗು ಬಂದದು ಆ ದಿನದ ಗಮ್ಮತ್ತಿನ ವಿಶಯ. ಗಡದ್ದು ಆಯಿದು.
ದನವ ಸಾಂಕುವಗ, ಅದರಲ್ಲೂ ಕರವ ದನ ಆದರೆ ಎಡೆಲಿ ಆಹಾರ ಕ್ರಮ ಬದಲು ಮಾಡ್ಳೆ ಆಗ ಹೇಳಿ ಅವು ತಿಳುಕ್ಕೊಂಡಿದವು. ಅದರ ಮಗುಮಾವಂಗೆ ವಿವರುಸಿಗೊಂಡು ಇತ್ತಿದ್ದವು. ಎಡೆಲಿ ಹೇಳಿದವು: “ಎಳ್ಳಿಂಡಿ ಹಾಕಿ ಹಾಕಿ, ಒಂದೇ ಸರ್ತಿ ಹುಡಿ ಹಿಂಡಿ ಹಾಕುಲೆ ಸುರು ಮಾಡಿದ್ರೆ ಮತ್ತೆ ಹಾಲಿದ್ದ ನಿನಿಗೆ?, ಹಾಂಗೆ ಒಂದೇ ಸರ್ತಿಗೆ ಹಿಂಡಿ ಬದಲಿಸಿದ್ರೆ ಹಾಲು ಕಡಿಮೆ ಆಗ್ತಿಲ್ಯ ನಿನಿಗೆ?” ಮಗುಮಾವಂಗೆ ಹಾಲು ಕಮ್ಮಿ ಅಕ್ಕು ಹೇಳಿ ಅಲ್ಲ ಭಾವ, ದನಕ್ಕೆ ಹಾಲು ಕಮ್ಮಿ ಅಕ್ಕು ಹೇಳಿ ಅರ್ತ!
ಮಜ್ಜಿಗೆ ಬಂದ ಮೇಲೆ ಈ ವಿಶಯ ಸುರು ಆದ ಕಾರಣ ಎಲ್ಲೊರಿಂಗೂ ಉಂಡಾಗಿತ್ತು. ದೊಡ್ಡ ಒಂದು ಅನಾಹುತ ತಪ್ಪಿತ್ತು. ಅಲ್ಲದ್ರೆ ಮಾಲ ಚಿಕ್ಕಮ್ಮನೂ, ಪಾತಿ ಅತ್ತೆಯೂ ಸೇರಿ ಉದ್ದುವಗ ಬಯಂಕರ ಕಷ್ಟ ಆವುತಿತು.
ಒಟ್ಟಿಲಿ ಹಳಬ್ಬರಿಂಗೆ ಶಂಬಜ್ಜನ ತಿತಿ ಊಟ ಆದರೂ, ಎಳಕ್ಕದ ಮಕ್ಕೊಗೆ ಇದು ನೆಗೆ ಊಟ ಆಗಿತ್ತು.

ಅವರ ಹತ್ತರೆ ಸುಮಾರು ವಿಶಯ ಇಪ್ಪದು ಅಂತೂ ನಿಜ. ಲೋಕಾನುಬವ ಇದ್ದ ಕಾರಣ ಎಲ್ಲೊರು ಅವರ ಹತ್ತರೆ ಸಲಹೆ ಸೂಚನೆ ತೆಕ್ಕೊಳ್ತವು. ಮಕ್ಳ ಕಲಿಯುವಿಕೆ, ಆರೋಗ್ಯ, ವಾಹನದ ಬಗೆಗೆ ಅನುಭವ, ಕೃಷಿ ಎಲ್ಲ ಎದುರು ಸಿಕ್ಕಿರೆ ಕೇಳುದಲ್ಲದ್ದೆ, ಅವಕ್ಕೆ ಪೋನು ಮಾಡಿ ಕೇಳುವ ಜೆನಂಗ ಇದ್ದವು. ಬಯಂಕರ ಅನುಬವದ ಜೆನ ಅವು. ಆದರೆ - ಎಂತದೇ ವಿವರುಸಲಿ, ಅದರ ಎಡೆಂಗೆ ನೀನು / ನಿಂಗ ಹೇಳಿ ಸೇರ್ಸಿಯೇ ಸೇರ್ಸುಗು.

ಕೆಲವು ಜೆನ ವಿಶಯ ಮಾತಾಡುವಗ ಹೀಂಗಿಪ್ಪ ಸುಮಾರು ಶುದ್ದಿಗೊ ಸಿಕ್ಕುತ್ತು. ಸುಮ್ಮನೆ ಕೂದು ಕೇಳೆಕ್ಕಷ್ಟೆ ನಾವು.
ಮಾತಾಡುವಗ ಹೀಂಗಿಪ್ಪ ಒಂದೊಂದು ಶಬ್ದ ಸೇರುಸುದಕ್ಕೆMannerisms ಹೇಳ್ತವು. ಹೀಂಗಿಪ್ಪ Mannerisms ಅಬ್ಯಾಸ ಇಪ್ಪವು ಸುಮಾರು ಜೆನ ಇದ್ದವು.
"ಎಂತ ಗೊಂತಿದ್ದಾ?",
"ಮತ್ತೆ - ಮತ್ತೆ" ,
"ಏ°?"
"ಇದೂ, ಇದೂ"
"ಬೇಕಾರೆ"
"ಎನ್ನತ್ರೆ ಕೇಳಿರೆ",
"ವಿಶಯ ಎಂತರ ಹೇಳಿರೆ",
"ಹೇಳುದು ಕೇಳು",
"ಅದಿರಳಿ"
ಹೇಳಿ ಎಲ್ಲ ಕೆಲವು ಚಾಲ್ತಿಲಿ ಇದ್ದು ಕೆಲವು. ನಿಂಗೊಗೆ ಗೊಂತಿಪ್ಪದು ಏವದಾರು ಇದ್ದರೆ ಹೇಳಿಕ್ಕಿ.
ಭಾಷೆ ಯಾವುದಾದರೆ ಎಂತ, ಉಪಯೋಗಿಸುವ Mannerisms ಎಂತ ಆದರೆಂತ, ಮನಸ್ಸಿನ ಭಾವನೆ ಇದ್ದರೆ ಆತಲ್ದೋ? ಹೇಳುದರ್ಲಿ ಸತ್ವ ಇದ್ದರಾತು,ಆಲ್ದೋ?

ಪಂಜ ಚಿಕ್ಕಯ್ಯನೋ ಮತ್ತೊ° ಪಕ್ಕನೆ ಸಿಕ್ಕಿರೆ ’ಒಪ್ಪಣ್ಣ ಈ ವಿಶಯವ ಕುಶಾಲಿಂಗೆ ಹೇಳಿದ್ದು, ಗಾತಿಗಲ್ಲ’ ಹೇಳಿ ಹೇಳಿಕ್ಕಿ ಆತೋ? ಏ°?
ಪಂಜ ಚಿಕ್ಕಯ್ಯ ಹೇಳಿರೆ ಇಲ್ಲಿ ’ವಸ್ತು’ ಅಲ್ಲ. ವಿಚಾರ ಮಾಂತ್ರ.

ಒಂದೊಪ್ಪ: ಮಾತಿಲಿಪ್ಪ ಶಬ್ದಾರ್ತಂದ ಧ್ವನ್ಯಾರ್ಥ ಮುಕ್ಯ - ಎಂತ ಹೇಳ್ತಿ?