ಮೋಳಮ್ಮ ಹೇಳಿರೆ ಒಪ್ಪಣ್ಣನ ಮನೆಯ ಒಂದು ದನ. ಹಟ್ಟಿಯ ದನ ಹೇಳುದರಿಂದಲೂ ಮನೆಯ ದನ ಹೇಳಿರೆ ಹೆಚ್ಚು ಸೂಕ್ತ!
ಸಣ್ಣ ಕಂಜಿ ಆಗಿ ಇಪ್ಪಗಳೇ ಆ ಮೋಳಮ್ಮಂಗೆ ಮನುಷ್ಯರ ಹತ್ತರೆ ಕೊಂಗಾಟ ಮಾಡುಸಿಗೊಂಡು ಅಬ್ಯಾಸ. ಅಂಬಗ ಒಳ ಕಟ್ಟಿದ ನೆಂಪು ದೊಡ್ಡ ಆದ ಮತ್ತುದೇ ಮರದ್ದಿಲ್ಲೆ ಅದಕ್ಕೆ. ಇಂದಿಂಗೂ ಮನೆ ಒಳ ಬಪ್ಪಲೆ ಹೆದರಿಕೆ ಆಗಲಿ, ಬೇಧ ಆಗಲಿ ಎಂತದೂ ಇಲ್ಲೆ, ಅದಕ್ಕೆ ಮನಸ್ಸಪ್ಪಗ ಸೀದಾ ಮನೆ ಒಳಂಗೆ ಹೋಗಿ, ಅಮ್ಮಂಗೆ ಪೂಸಿ ಹೊಡದು, ಅಮ್ಮನ ಕೈಂದ ದೋಸೆಯೋ, ಬಾಳೆಹಣ್ಣೋ- ಎಂತಾರು ಪೀಂಕುಸಿಗೊಂಡು ರಾಣಿ ಗಾಂಭೀರ್ಯಲ್ಲಿ ಹೆರ ಬಕ್ಕು. ಕಪ್ಪು ಬಣ್ಣದ ಕೊಂಗಾಟದ ಮೈ. ಉದ್ದಿದಷ್ಟೂ ಕುಶಿ ಅಪ್ಪದು ಅದಕ್ಕೆ. ಗಂಗೆ ಕೊರಳಿನ ತಿಕ್ಕುತ್ತರೆ ಗಂಟೆಗಟ್ಲೆದೇ ನಿಂಗು. ಮನೆಯ ಎಲ್ಲೋರನ್ನೂ ಪ್ರತ್ಯೇಕ ಗುರ್ತ ಹಿಡಿವ ವಿಶೇಷತೆ ಅದಕ್ಕೆ ಇದ್ದು. ಅಪ್ಪ° ಎಳ್ಳಿಂಡಿ ಕೊಡ್ಲೇ ಬಪ್ಪದು, ಅಮ್ಮ ಕರವಲೇ ಬಪ್ಪದು, ಒಪ್ಪಕ್ಕ° ಚೆರಪ್ಪುಲೇ ಬಪ್ಪದು, ಒಪ್ಪಣ್ಣ ಗುರುಟುವವ° ಇಲ್ಲೆ ಆಗಿ ಬಂದದು ಅಷ್ಟೇ- ಎಂತದೂ ಸಿಕ್ಕ ಅವನ ಕೈಲಿ - ಇತ್ಯಾದಿ ವಿಷಯ ಅದಕ್ಕೆ ನಮ್ಮ ಹಾಂಗೆ ಮನವರಿಕೆ ಇದ್ದು.
ಉರುವೆಲು ಹತ್ತರಾಣ ಶಾಂತಿ ಮರದ ಬುಡಲ್ಲಿ ಅದು ನಿಂದಿಪ್ಪಗ, ದೂಡಿದಷ್ಟೂ ಹಂದದ್ದೆ ಮತ್ತೆ ಅದರ ಅಡಿಂಗೆ ಹೋಗಿ ಶಾಂತಿಕಾಯಿ ಹೆರ್ಕಿದ್ದು ನೆಂಪಿದ್ದು ಒಪ್ಪಣ್ಣಂಗೆ. ಕರೆತ್ತ ಸಮಯಲ್ಲಿ ಮೆಲ್ಲಂಗೆ ಒಂದು ಹುಂಡು ಹಾಲು ಕೈಗೆ ಹಾಕಿ ಕುಡುದ್ದೂ ಇದ್ದು. ತುಂಬಾ ಪಾಪ ಆದ ಕಾರಣವೇ ಮಕ್ಕೊಗೆ ಅದರ ಮೇಲೆ ವಿಶೇಷ ಮಮತೆ. ಅದರ ಮೇಲಂಗೆ ಹತ್ತಿ ಹಾರಿರೂ ಅದು ಮಾತಾಡ. ಒಪ್ಪಕ್ಕ ಸಣ್ಣ ಇಪ್ಪಗ ಅಂತೂ ಬೈಪ್ಪಾಣೆಲಿ ಠಿಕಾಣಿ ಹಾಯ್ಕೊಂಡಿತ್ತು - ಎಂತಾರು ಮಾತಾಡಿಗೊಂಡು, ಮೈ ಕೈ ನಕ್ಕುಸಿಗೊಂಡು. ಟಾಮಿ ನಾಯಿಯೋ ಮತ್ತೊ° ನಕ್ಕಿರೆ ನಾಕು ದಿನ ಕೈ ತೊಳಕ್ಕೊಂಬ ಒಪ್ಪಕ್ಕಂಗೆ ಮೋಳಮ್ಮ ನಕ್ಕಿರೆ ಕುಶೀ ಅಕ್ಕು. ಅಮ್ಮನ ಹಾಲು ನಿಲ್ಲುಸಿದ ಕೂಡ್ಲೇ ಅದರ ಹಾಲು ಕುಡಿವಲೆ ಸುರು ಮಾಡಿದ್ದನ್ನೇ ಒಪ್ಪಕ್ಕ°!
ಅಮ್ಮಂಗೆ ಮೋಳಮ್ಮ ಅಂತೂ ಒಂದು ಸ್ವಂತ ಮಗಳ ಹಾಂಗೆ! ಅಮ್ಮ ಅತ್ತೆ ಇತ್ತೆ ಹೋವುತ್ತರೆ ಅದರ ಹತ್ತರೆ ಮಾತಾಡಿಯೊಂಡೇ ಹೋಪದು, 'ಎಂತಬ್ಬೆ? ಹುಲ್ಲು ತಂದಿಕುತ್ತೆ ಆತಾ?', 'ಕರವಲೆ ಬತ್ತೆ ನಿಲ್ಲು ಆತಾ!', ಹೇಳಿ ಎಲ್ಲ. ಬರವಲೆ ಕೂದ ಒಪ್ಪಣ್ಣಂಗೆ ಪಕ್ಕನೆ ಆರಾರು ಬಂದವೋ ಹೇಳಿ ಅಪ್ಪದು, ಅಮ್ಮನ ಕುಣುಕುಣು ಕೇಳುವಗ ;-) . ಅಪ್ಪಂದೆ 'ಎಂತ ಮೋಳೇ' ಹೇಳುಗು, ಅಲ್ಲೇ ಆಗಿ ಹೋವುತ್ತರೆ ಒಂದು ಎಳ್ಳಿಂಡಿ ತುಂಡೂ ಕೊಡುಗು. ಅಮ್ಮ ಹಲುವ ಎಂತಾರು ಕಾಸಿರೆ ಆ ಬಾಣಲೆಲಿ 'ಇದು ಮೋಳಮ್ಮಂಗೆ!' ಹೇಳಿ ಒಂದು ರಜ್ಜ ಮಡಗಿ ಅದರ್ಲೇ ಅಕ್ಕಚ್ಚು ಕೊಡುದು. ನಕ್ಕಿ ಚೆಂದ ಮಾಡುಗು - ತೊಳದ ಹಾಂಗೆ! ಒಂದೊಂದರಿ ಉರುವೆಲು ತೆಗದಿದ್ದರೆ ಸೀದ ತೋಟಕ್ಕೆ ಹೋಪದೂ ಇದ್ದು. ಬಾಕಿ ಹೆರಾಣ ದನಗಳ ಎಬ್ಬಿದ ಹಾಂಗೆ ಅದರ ಎಬ್ಬುತ್ತ ಕ್ರಮ ಇಲ್ಲೆ ಅಮ್ಮಂಗೆ. ಹೊಟ್ಟೆ ತುಂಬಿ ಅಪ್ಪಗ ಮನೆ ಜಾಲಿಂಗೆ ಬಂದೇ ಬತ್ತು,'ಎಳ್ಳಿಂಡಿ ಕೊಡು’ ಹೇಳಿ ಎದುರು ಸಿಕ್ಕಿದವರ ಹತ್ತರೆ ತಲೆ ಆಡುಸಿ ಪ್ರೀತಿಲಿ ಜೋರು ಮಾಡ್ತು, ಮನಸ್ಸಾದರೆ ಮನೆ ಒಳಂಗೂ ಬತ್ತು, ಅಷ್ಟೇ. ಹಟ್ಟಿಲಿ ಈಚ ಕರೇಲಿ ಅದರ ಕಟ್ಟುತ್ತ ಕಾರಣ ಮನೆಯವು ಎಲ್ಲಿಗೆ ಎಂತ ಮಾಡ್ಲೆ ಹೋವುತ್ತರೂ ಅದಕ್ಕೆ ಕಾಣ್ತು. ಗಮನಿಸಿಗೊಂಡು ಇಕ್ಕು. ಹೊತ್ತಿಂಗೆ ತಿಂಬಲೆ ಹಾಕುದು ಮರದರೆ ಹೂಂಕುಟ್ಟಿ ನೆಂಪು ಮಾಡುಗು, ಕೇಳದ್ರೆ ಮಾಂತ್ರ ಕೆಲಗಷ್ಟೇ. ಎಲ್ಲೊರು ಅದರತ್ರೆ ನಮ್ಮ ಭಾಷೆಲೇ ಮಾತಾಡ್ತ ಕಾರಣ ನಮ್ಮ ಮನೆಯ ಒಂದು ಸದಸ್ಯೆ ಆಗಿ ಬಿಟ್ಟಿದು.
ಸುಮಾರು ಇಪ್ಪತ್ತು ಒರಿಷ ಹಳೆ ಶುದ್ದಿ ಇದು. ಯೇವತ್ತಿನ ಹಾಂಗೆ ದನಗಳ ಗುಡ್ಡೆಗೆ ಬಿಟ್ಟಿದು. ನಮ್ಮ ಮೋಳಮ್ಮ ತೊಡಮಣಿಕ° (ಸುರೂವಾಣ ಕಂಜಿ ಹಾಕಿದ ಗಡಸಿಂಗೆ ತೊಡಮಣಿಕ° ಹೇಳುಗು, ಗೊಂತಿದ್ದನ್ನೇ!). ಅದನ್ನೂ ಬಿಟ್ಟಿದು ಗುಡ್ಡಗೆ. ಕದ್ದು ತಿಂಬಲೆ ಹೋಪ ದನವೇ ಅಲ್ಲ ಅದು. ಆದರೆ ಅದೊಂದು ದಿನ ಬೇರೆ ಯೇವದೋ ದನಗಳ ಗುಂಪಿನ ಒಟ್ಟಿಂಗೆ ಮೇವಲೆ ಹೋದ್ದು ಸೀದಾ ಮೋಹನ ಬಂಟನ ವಳಚ್ಚಲಿಂಗೆ ಹೋತು.
ಎಂಗಳ ಊರಿನ ಆ ಮೋಹನ ಬಂಟ ಹೇಳ್ತ ಜನಕ್ಕೆ ದನಗಳ ಕಂಡ್ರೆ ಆಗ, ಅದೂ ಸಾಂಕುತ್ತಿಲ್ಲೆ, ಸಾಂಕುಲೂ ಬಿಡ್ತಿಲ್ಲೆ. ಜಾಗಗೆ ಸರಿಗಟ್ಟು ಬೇಲಿಯೂ ಹಾಕುಲೆ ಇಲ್ಲೆ, ದನಗ ಬಂದರೆ ಹಿಂಸೆ ಕೊಡದ್ದೇ ಬಿಡ್ತೂ ಇಲ್ಲೆ. ಬೇಲಿ ಹಾಕಲೆ ಎಡಿಗಾಗದ್ದ ಜೆನ ಉರುಳು ಮಡಗುಸುಗು- ಕೆಲಸದವರ ಕೈಲಿ. ಕೆಲಸಕ್ಕೆ ಬಪ್ಪದು ಓ ಆ ಸೂರಂಬೈಲು ಹೊಡೆಣ ಮಾಪ್ಲೆಗೊ ಇದಾ! ಉರುಳಿಂಗೆ ದನ ಬಿದ್ದತ್ತು ಹೇಳಿ ಆದರೆ ಅದರ ಕಟ್ಟಿ ಜೆಪ್ಪುದು. ದನದ ಗುರ್ತ ಇದ್ದರೆ ಯೆಜಮಾನನ ಬಪ್ಪಲೆ ಹೇಳಿ, ಮನೆ ಜಾಲಿಂಗೆ ಬರುಸಿ ಬೊಬ್ಬೆ ಗೌಜಿ ಮಾಡುದು. ಗುರ್ತ ಇಲ್ಲದ್ರೆ ಆ ಕೆಲಸದವಕ್ಕೆ ಮಾರುಗು- ಕಮ್ಮಿ ಕ್ರಯಕ್ಕೆ. ಶೆನಿವಾರ ಕೋಳಿ ತಿಂಬಗ ಆ ಪೈಸೆ ಮುಗಿತ್ತನ್ನೇ! ಹಾಂಗೆ! ಈಚಕರೆ ಪುಟ್ಟಂಗೂ ಅದಕ್ಕೂ ಸುಮಾರು ಸರ್ತಿ ಮಾತು ಆಯಿದು. ಒಂದು ಕಾಲಲ್ಲಿ ಊರಿಲಿ ಅಂತೂ ದನಗಳ ಮೇವಲೆ ಬಿಡ್ಲೇ ಗೊಂತಿಲ್ಲೆ, ಇದರ ಪಂಚಾತಿಗೆಲಿ.
ಈ ಗಾತ್ರದ ಸರಿಗೆಯ ಉರುಳು ಮಾಡಿ ಎಲ್ಲಿಯೋ ಮಡಗಿತ್ತು, ಈ ನಮ್ಮ ಮೋಳಮ್ಮನ ಗ್ರಾಚಾರಲ್ಲಿ ಆ ಉರುಳಿಂಗೆ ಬಿದ್ದತ್ತು. 'ಒಂದು ದಿನವೂ ಗುಡ್ಡೆಗೆ ಬಿಟ್ಟದು ಬಾರದ್ದೆ ಕೂಯಿದಿಲ್ಲೆ ಈ ಮೋಳು! ಅದೂ ಈಗ ಕರೆತ್ತದು, ಎಂತಪ್ಪಾ ಇನ್ನೂ ಬಯಿಂದಿಲ್ಲೆ' ಹೇಳಿ ಬಂದ ದನಗಳ ಹಟ್ಟಿಗೆ ಕೂಡಿಕ್ಕಿ ಅಮ್ಮ ತಲೆಬೆಶಿ ಮಾಡ್ಲೆ ಶುರು ಮಾಡಿತ್ತು. ಅಂಬಗಂಬಗ ಹಟ್ಟಿ ಬಾಗಿಲಿಂಗೆ ಹೋಗಿ ನೋಡಿಗೊಂಡು ಬಂತು, ಇರುಳಿರುಳು ಅಪ್ಪನ್ನಾರವೂ. 'ಮೂರು ಬೆಟ್ರಿ ಲೈಟು' ಹಿಡ್ಕೊಂಡು ದಾರಿಲೆ ಒಂದು ಪರ್ಲಾಂಗು ಹೋಗಿ ನೋಡಿಗೊಂಡು ಬಂತು. ಎಲ್ಲಿಯೂ ಕಂಡತ್ತಿಲ್ಲೆ. ಶಾಲಗೆ ಹೋದ ಮಗಳು ಹೊತ್ತಿಂಗೆ ಮನಗೆ ಎತ್ತದ್ರೆ ಅಮ್ಮಂದ್ರಿಂಗೆ ತಲೆಬೆಶಿ ಅಪ್ಪ ಹಾಂಗೆ- ಅಮ್ಮಂಗೆ ಒಟ್ಟು ಕಸಿವಿಸಿ. ಮೋಳಮ್ಮ ಕೆಲೆತ್ತದು ಕೇಳ್ತೋ ಹೇಳಿ ಅಂಬಗಂಬಗ ಕೆಮಿ ಕೊಡುಗು. ಮನುಗುಲಪ್ಪಗ ಮತ್ತೊಂದರಿ ಹೋಗಿ ನೋಡಿತ್ತು. ಉಹೂಂ! 'ಮೋಳಮ್ಮಾ......ಬಾ..ಬಾ....' ಹೇಳಿ ದಿನಿಗೆಳಿತ್ತು ಸುಮಾರು ಸರ್ತಿ. ಓಕೊಳ್ತಾ - ಉಹೂಂ! ಯೇವತ್ತು ಮನೆಲಿ ಮಕ್ಕೊ 'ಅಮ್ಮಾ..' - ಹೇಳಿ ಅಮ್ಮನ ದಿನಿಗೆಳಿರೆ ಮೋಳಮ್ಮ "ಹೂಂ" ಹೇಳಿ ಹಟ್ಟಿಂದ ಓಕೊಂಗು, ಇಂದು ಅಮ್ಮ ಎಷ್ಟು ಜೋರು ದಿನಿಗೆಳಿರೂ ಸುದ್ದಿ ಇಲ್ಲೆ!
ಬಂಟನ ಜಾಗಗೆ ಹೊಗಿಪ್ಪ ಸಾದ್ಯತೆಯ ಬಗ್ಗೆ ಅಂದಾಜಿ ಆತೋ ಏನೋ, ಅಮ್ಮಂಗೆ ಪಿಟಿಪಿಟಿ ಅಪ್ಪಲೆ ಸುರು ಆತು. ಕರೆತ್ತ ಅದರ ಕಪಿಲೆ ಕಂಜಿಗೆ ಇರುಳು ಹಾಲು ಚಮ್ಚಲ್ಲಿ ಕುಡಿಶಿತ್ತು, ಇರುಳಿಡಿ ಬೇಜಾರಲ್ಲಿ ಮನುಗಿತ್ತು.
ಮೋಳಮ್ಮ ಬಂಟನ ತೋಟಲ್ಲಿ ಸರಿಗೆ ಉರುಳಿಂಗೆ ಬಿದ್ದು ಉರುಡಿತ್ತು, ಹೊಡಚ್ಚಿತ್ತು. ಬಿಡುಸಿಗೊಂಬಲೆ ಹರಸಾಹಸ ಮಾಡಿತ್ತು. ಇಪ್ಪ ಎಲ್ಲ ಚೈತನ್ಯವ ಉಪಯೊಗಿಸಿಗೊಂಡತ್ತು, ಮೈ ಕೈ ಎಲ್ಲ ಗೀರುಸಿಗೊಂಡು. ಇರುಳಿಡೀ ಏಕಧ್ಯಾನದ ಪ್ರಯತ್ನ! ಸರಿಗೆಯ ಎಲ್ಲಿಗೋ ಕಟ್ಟಿ ಉರುಳು ಮಾಡಿದ್ದು ಅಲ್ದೋ? ಇದು ಉರುಡಿದ ರೀತಿಗೆ ಆ ಸರಿಗೆ ಪೀಂಟಿ ಪೀಂಟಿ ಹೋಗಿತ್ತು. ಸರಿಗೆ ಪೀಂಟುವಗ ಅದರ ಕೊರಳು ಬಿಗಿಯದ್ದೆ ಇಕ್ಕೋ? ಸಮಕ್ಕೆ ಒಂದು ಗೆರೆ ಬಿದ್ದತ್ತು, ಉಸುಲು ಕಟ್ಟುತ್ತಷ್ಟು. ಆದರೂ ಬಿಡುಸುವ ಪ್ರಯತ್ನ ನಿಲ್ಲುಸಿದ್ದಿಲ್ಲೆ.
ಅಂತೂ ಮೋಳಮ್ಮನ ಪ್ರಯತ್ನಂದ ಉದೆಕಾಲಕ್ಕೆ ಆ ಸರಿಗೆಯ ಉರುಳು ಕಟ್ಟಿದ ಜಾಗೆಂದ ಪೀಂಕಿತ್ತು. ಆದರೆ ಸರಿಗೆ ಇದರ ಕೊರಳಿಲೇ ಇತ್ತು. ಬಿಡುಸಿಗೊಂಡ ಕೂಡ್ಲೇ ಒಂದೇ ಓಟ. ಬಂದ ದಾರಿಯ ಹೊಡೆ ನೆಂಪಿಲಿ ಓಡಿ ಓಡಿ ಮನಗೆ ಎತ್ತಿತ್ತು. ಉದೆಕಾಲದ ಬೆಳ್ಳಿ ಹೊತ್ತಿಂಗೆ ಹಟ್ಟಿ ಬಾಗಿಲಿನ ಹತ್ತರಂದ ಕೆಲದತ್ತು. ಅದರದ್ದೇ ಧ್ಯಾನಲ್ಲಿ ಮನುಗಿದ್ದ ಅಮ್ಮಂಗೆ ಎಚ್ಚರಿಗೆ ಆಗಿ, ಸಂತೋಷಲ್ಲಿ ಹೋಗಿ ಉರುವೆಲು ತೆಗದತ್ತು, ಓಡಿಗೊಂಡು ಬಂದು ಕುಶೀಲಿ ಹಟ್ಟಿ ಸೇರಿತ್ತು. ಅಮ್ಮ ಒಂದು ಅಕ್ಕಚ್ಚು ಕೊಟ್ಟು ಸ್ವಾಗತ ಮಾಡಿ, ಅದರ ಮೈ ಪೂರ ಉದ್ದಿ ಒಳ ಕೂಡಿ ಪೋಚಕಾನ ಮಾಡಿತ್ತು. ಮಕ್ಕೊ ದೂರು ಹೇಳುವಾಗ ಅಮ್ಮ ಸಮಾದಾನ ಮಾಡ್ತ ಹಾಂಗೆ ಕಂಡುಗೊಂಡು ಇತ್ತು. ಮೋಳಮ್ಮನ ಹಾಂಗಿಪ್ಪ ದನಗೊ ಧಾರಾಳ ಇಕ್ಕು, ಅದರ ಪ್ರೀತಿಯ ಸ್ವೀಕರಿಸಿ ಅತ್ಲಾಗಿ ಪುನಾ ಕೊಡುವವೇ ಕಮ್ಮಿ ಆದ್ದು ಅಷ್ಟೇ!
ಕೊರಳಿಲಿ ಬಿಗುದ ಸರಿಗೆ ಕಂಡು ವಿಷಯ ಎಂತ ಆದ್ದು ಹೇಳಿ ಅಮ್ಮಂಗೆ ಗೊಂತಪ್ಪಲೆ ತುಂಬ ಹೊತ್ತು ಬೇಕಾಯಿದಿಲ್ಲೆ. ಕೂಡ್ಲೇ ಬಿಡುಸಿ ದೊಡ್ಡ ಗಾಯ ಎಂತ ಅಯಿದಿಲ್ಲೆನ್ನೇ ಹೇಳಿ ನೋಡಿ, ಆ ಸಣ್ಣಕೆ ಚೋಲಿ ಹೋದಲ್ಲಿಗೆ ಬೇವಿನ ಎಣ್ಣೆ ಕಿಟ್ಟಿತ್ತು. ಹ್ಮ್, ವಾಸನೆಯ ಎಣ್ಣೆ ಅದು! ಒಪ್ಪಣ್ಣಂಗೆ ಆ ಎಣ್ಣೆಯ ಕಂಡ್ರೆ ಆಗ! ಮೋಳಮ್ಮ ಅದರ ನಿತ್ಯದ ಜಾಗೆಲಿ ಬಂದು ನಿಂದತ್ತು. ಯೇವತ್ತಿನ ಬಳ್ಳಿ ಉರುಳಿಂಗೆ ಸಂತೋಷಲ್ಲಿ ತಲೆ ಒಡ್ಡುಸಿತ್ತು. ಹಶುವಿಲಿ ಇದ್ದ ಅದರ ಕಂಜಿ ಕಪಿಲೆಯ ನಕ್ಕಿ ಹಾಲು ಕುಡುಶಿತ್ತು. ಮೋಳಮ್ಮ ಕದ್ದು ತಿಂಬಲೆ ಅದರಿಂದ ಮತ್ತೆಯೂ ಹೊಯಿದಿಲ್ಲೇ , ಮೊದಲೂ ಹೋಯಿದಿಲ್ಲೆ.
ಕೊರಳಿಲಿ ಇದ್ದ ಆ ಸರಿಗೆಯ ಬಿಡುಸಿ, ಸರ್ತದ ಒಂದು ಕೊಕ್ಕೆ ಆತು ಮನೆಲಿ. ಸುಮಾರು ಸಮಯ ಜೆಂಬ್ರದ ಕಾಗತ ನೇಲ್ಸುಲೆ ಉಪಯೋಗ ಮಾಡಿಗೊಂಡು ಇದ್ದದು ಒಪ್ಪಣ್ಣಂಗೆ ಈಗಳೂ ನೆಂಪಿದ್ದು. 'ಮೋಳಮ್ಮನ ಕೊಕ್ಕೆ' ಹೇಳಿಯೂ ಅದಕ್ಕೆ ಹೆಸರಿತ್ತು. ಮೋಹನ ಬಂಟ ಅದರ ಹುಡುಕ್ಕಿಯೊಂಡು ಅಂತೂ ಬಯಿಂದಿಲ್ಲೆ, :-)
ಈ ಮೋಳಮ್ಮನ ಕಲ್ಪನೆ ನೋಡಿ: ಇರುಳಿಡೀ ಹೊಡಚ್ಚಿತ್ತು, ಆ ಬಂಧನ ಬಂಙಲ್ಲಿ ಬಿಡುಸಿಗೊಂಡತ್ತು.
ಗುರ್ತ ಇಲ್ಲದ್ದ ಜಾಗೆಲಿ, ಗುರ್ತವೆ ಇಲ್ಲದ್ದ ರೀತಿಲಿ ಅದರ ಕೊರಳಿಂಗೆ ಬಿದ್ದ ಉರುಳಿನ ಎಷ್ಟೋ ಪರಿಶ್ರಮಂದ ಬಿಡುಸಿ ಸ್ವತಂತ್ರ ಆದ ಈ ಮೋಳಮ್ಮ, ಸೀದಾ ಮನಗೆ ಬಂದು ಅದರ ನಿತ್ಯದ ಉರುಳಿಂಗೆ ತಲೆ ಒಡ್ಡುಸಿತ್ತು.
ಎಂತಕೆ ಬೇಕಾಗಿ?
ಗೊಂತಿಲ್ಲದ್ದ ಆ ಬಂಧನಂದ ಗೊಂತಿಪ್ಪ ಈ ಬಂಧನ ಅದಕ್ಕೆ ಆಪ್ಯಾಯಮಾನ ಆತು!
ಅದರಿಂದ ಇದುವೇ ಸಹ್ಯ ಹೇಳಿ ಅನಿಸಿತ್ತು.
ನಾವುದೇ ಹಾಂಗೆ ಅಲ್ದೋ?
ಸ್ವಾತಂತ್ರ್ಯ ಬಯಸಿ ಒಂದಲ್ಲ ಒಂದು ದಾರಿ ನೋಡಿಗೊಳ್ತು. ಅದಕ್ಕೆ ಬೇಕಾಗಿ ಮಾನಸಿಕವಾಗಿ ಸರೀ ಹೊಡಚ್ಚಿಗೊಳ್ತು. ಅದು ಸಿಕ್ಕುವನ್ನಾರವೂ ನಮ್ಮ ಛಲ ಬಿಡ್ತಿಲ್ಲೆ.
ಆಪೀಸಿಂದ ಸ್ವಾತಂತ್ರ್ಯ ಬೇಕು, ಪ್ರೈವಸಿ ಬೇಕು ಹೇಳಿಗೊಂಡು ಸೀದಾ ಮನಗೆ ಹೋಗಿ ಇನ್ನೊಂದು ಬಂಧನಲ್ಲಿ ಬೀಳುದು. ಅಲ್ಲಿ ಬೇಜಾರಪ್ಪಗ ಸಾಮಾಜಿಕ ಸೇವೆ ಹೇಳಿ ಮತ್ತೊಂದು ಬಂದನಲ್ಲಿ ಬೀಳುದು, ಅಲ್ಲಿ ಬೊಡಿವಗ Outing ಹೇಳಿ ಮಗದೊಂದು ಬಂಧನಲ್ಲಿ ಉದುರುದು.
ಆರೋಗ್ಯ ಹಾಳು ಮಾಡಿ ದನದ ಹಾಂಗೆ ದುಡಿತ್ತು, ಕೈಲಿ ರಜ ಪೈಸೆ ಮಾಡ್ತು. ಅಕೇರಿಗೆ ಅನಾರೋಗ್ಯ ಹೇಳಿಗೊಂಡು ಹೋಗಿ ಒಂದು ಆಸ್ಪತ್ರೆಗೋ ಮಣ್ಣ ಆ ಪೈಸೆಯ ಸೊರಿತ್ತು.
ಅಂದು ಆದ ಈ ಶುದ್ದಿಯ ಈಗ ಹಿಂದೆ ತಿರುಗಿ ನೋಡಿರೆ ಎಷ್ಟೊಂದು ವಿಶಾಲ ಅರ್ಥ ಕಾಣ್ತು ಈ ಒಪ್ಪಣ್ಣಂಗೆ! ಬಂಧನ-ಸ್ವಾತಂತ್ರ್ಯ ಇದರ ನೆಡುಕೆ ಇನ್ನುದೇ ಒಂದು ನಿರ್ದಿಷ್ಟ ಗಡಿ ಎಳವಲೆ ಕಷ್ಟವೇ, ಅಲ್ದೋ?
ಹೆಚ್ಚು ಗುರ್ತ ಇಪ್ಪ ಬಂಧನವೇ ನಮ್ಮ ಸ್ವಾತಂತ್ರ್ಯದ ಕಲ್ಪನೆ - ಅಲ್ಲದೋ?
ಒಂದೊಪ್ಪ: ಬೆಣಚ್ಚಿಲ್ಲದ್ದ ದಾರಿಲಿ ಹೋಪಲೆ ಎಡಿಗು, ಆದರೆ ಬಂಧನ ಇಲ್ಲದ್ದ ದಾರಿಲಿ ಹೋಪಲೆ ಎಡಿಗೋ?
ಸೂ: ಈಗಳೂ ಆ ಅಜ್ಜಿ ಮೋಳಮ್ಮ ಒಪ್ಪಣ್ಣನ ಮನೆ ಹಟ್ಟಿಯ ಗುರಿಕ್ಕಾರ್ತಿ ಆಗಿ ಚೆಂದಕ್ಕೆ ಹುಲ್ಲು ತಿಂದೊಂಡು ಇದ್ದು - ಒಪ್ಪಣ್ಣನ ಪ್ರಾಯ ಅದಕ್ಕೆ! ಮನಗೆ ಬಂದರೆ ನೋಡ್ಲಕ್ಕು.
~~~~~
ಗೋರೋಚನದ ಶುದ್ದಿ:
(ಓದುಗರಿಂಗೆ ಮಾಹಿತಿಗಾಗಿ & ಒಪ್ಪ ಕೊಟ್ಟವು ಒತ್ತಾಯ ಮಾಡಿದವು ಹೇಳಿಗೊಂಡು ಈ ವಿಷಯ ಸೇರುಸಿದ್ದು)
ಈ ಶುದ್ದಿಲಿ ಬಪ್ಪ ಮೋಳಮ್ಮನ ಪಾತ್ರದ ನಿಜವಾದ ಹೆಸರು 'ಉಮಾ' ಹೇಳಿ. ಎಳ್ಯಡ್ಕದ ಹಟ್ಟಿಲೇ ಅರಳಿದ ದನ.
ಅಪ್ಪನ ಬಾಲ್ಯಲ್ಲಿ ಒಂದು ದನ ಇತ್ತಡ - ಮೋಳಮ್ಮ ಹೇಳಿ, ಅದುದೆ ಈ ಉಮನ ಹಾಂಗೆ ತುಂಬಾ ಸೌಮ್ಯ ಅಡ. ಅಪ್ಪ ಆ ದನದ ಶುದ್ದಿ ಅಂಬಗಂಬಗ ಹೇಳುಗು. ಆ ದನದ ನೆಂಪಿಂಗೆ, ಅಪ್ಪನ ಬಾಲ್ಯದ ನೆಂಪಿಂಗಾಗಿ ಆ ಮೋಳಮ್ಮನ ಹೆಸರು ತಂದದು.
ಈ ಉಮಾ ಎನ್ನಂದ ಕೇವಲ ಹದಿನೇಳು ದಿನ ಮತ್ತೆ ಹುಟ್ಟಿದ ದನ. ಅದು ಕುಡುದು ಬಿಟ್ಟ ಹಾಲನ್ನೇ (ಅದರ ಹಾಲನ್ನೇ) ಆನು ಕುಡುದು ದೊಡ್ಡ ಆದ್ದು. ಅದರ ಹಾಲನ್ನೇ ಕುಡುದು ಒಪ್ಪಕ್ಕ ದೊಡ್ಡ ಆದ್ದು. ಅಂತೂ ಅಜ್ಜ, ಅಪ್ಪ, ಅಮ್ಮ, ಎಂಗೋ ಮಕ್ಕೋ - ಮೂರು ತಲೆಮಾರಿಂಗೆ ಅದರ ಕ್ಷೀರಾಮೃತ ಕೊಟ್ಟಿದು. ಅದರ ಮೈ, (ವಿಶೇಷವಾಗಿ ಮೋರೆ)ಗೆ ಒಂದು ಪರಿಮ್ಮಳ. ಕೇಸರಿ ಹಾಕಿದ ತುಪ್ಪದ ಹಾಂಗೆ. ಮೋರೆಲಿ ಬಪ್ಪ ಪರಿಮ್ಮಳಕ್ಕೆ ಗೋರೋಚನ ಹೇಳಿಯೂ, ತಲೆಲಿ ಇಪ್ಪ ಮಣಿಗೆ ಗೋಮೇಧಕ ಹೇಳಿಯೂ ಹಳಬ್ಬರು ಹೇಳುಗು. ತುಂಬಾ ಅಪುರೂಪ - ಈ ಎರಡು ಸಂಗತಿಗೊ. ಲಕ್ಷಕ್ಕೆ ಒಂದು ಇಕ್ಕಷ್ಟೇ ಅಡ. ನಮ್ಮ ಉಮಂಗೆ ಇದ್ದು ಅದು. ಅದರ ಗುರ್ತ ಇಪ್ಪವಕ್ಕೆ ಎಲ್ಲೋರಿಂಗೂ ಅದರ ಮೋರೆ ಮೂಸುದು ಒಂದು ಅಭ್ಯಾಸ ಆಗಿ ಬಿಡ್ತು. ಅದಕ್ಕುದೆ ಅದು ಅಬ್ಯಾಸ ಆಯಿದು. ಸಾಮಾನ್ಯ ಗೊರೋಚನ ಇಪ್ಪ ದನಗೊ ರಾಜ ಗಾಂಭೀರ್ಯ ಇಪ್ಪದುದೆ, ರಜ ಶುದ್ದದವುದೇ ಹೇಳಿ ಪ್ರತೀತಿ. ಈ ದನವುದೇ ರಜ್ಜ ಹಾಂಗೆ! ಬೇರೆ ದನಗೊ ಅಕ್ಕಚ್ಚು ಕುಡುದ ಬಾಣಲೆಲಿ / ಬಾಲ್ದಿಲಿ ಕುಡಿಯ. ಇದಕ್ಕೆ ಒಂದೋ ಸುರೂವಿಂಗೆ ಕೊಡೆಕ್ಕು, ಅಲ್ಲದ್ರೆ ಇದಕ್ಕೆ ಹೇಳಿ ಬೇರೆ ಪಾತ್ರಲ್ಲಿ ಮಡಗೆಕ್ಕು. ಅಮ್ಮ ಒಂದೊಂದರಿ 'ಶುದ್ದಂಭಟ್ಟೆತ್ತಿ' ಹೇಳಿ ಪರಂಚುಗು ಇದರ ಈ ಕ್ರಮಕ್ಕೆ. ಅದರ ಪ್ರಾಯದ ಮಟ್ಟಿಂಗೆ ಒಳ್ಳೆ ಆರೋಗ್ಯಲ್ಲಿ ಚುರುಕ್ಕು ಇದ್ದು ಈಗಳುದೆ.
ಮೊನ್ನೆ ಗುರುಗೊ ಮನೆಗೆ ಬಂದಿಪ್ಪಗ ಅವರ ಕೈಂದ ವಿಶೇಷ ಫಲಸಹಿತ ಆಶೀರ್ವಾದ ಸ್ವೀಕರುಸಿ ಜನ್ಮ ಪಾವನ ಮಾಡಿಗೊಂಡಿದು.
ನಿಂಗೊ ಮನಗೆ ಬನ್ನಿ ಒಂದರಿ. ಅದರ ಹತ್ತರೆ ಮಾತಾಡ್ಳಕ್ಕು, ಅದರ ಮೋರೆಲಿಪ್ಪ ಗೊರೋಚನದ ಪರಿಮ್ಮಳವ ನೋಡ್ಲಕ್ಕು. ಈ ವಿಶೇಷ ದನುವಿನ ಗುರ್ತ ಮಾಡಿಗೊಂಬಲಕ್ಕು.