ಮಧ್ಯಂತಿಷ್ಠತಿ ಒಪ್ಪಣ್ಣ!!! ;-)

ತುಂಬಿದ ಮನೆಯ ಜೀವನ ಶೈಲಿಲಿ ಇಪ್ಪ ತಮಾಷೆಗಳಲ್ಲಿ / ಗಮ್ಮತ್ತುಗಳಲ್ಲಿ ಈ ಶುದ್ದಿಯೂ ಒಂದು.
ಮನೆಲಿ ಇನ್ನು ಮುಂದೆ ಒಪ್ಪಕ್ಕ ಒಪ್ಪಣ್ಣನ ಕೈಲಿ ಕೆಲಸ ಮಾಡುಸುಗೋ ಹೇಳುವ ಹೆದರಿಕೆಲೇ ಈ ಶುದ್ದಿ ಹೇಳ್ತೆ, ಆತೋ? ;-(

ನಮ್ಮೋರಲ್ಲಿ ಈಗಾಣ ಟ್ರೆಂಡು ಎಲ್ಲ ಎರಡೆರಡೇ ಮಕ್ಕೊ - ಇನ್ನಾಣದ್ದು ಒಂದೊಂದೇ ಅಡ! ಒಪ್ಪಣ್ಣನ ಊರಿಲಿ ಹೇಳ್ತರೆ ಕೆಲಾವು ಮನೆ ಬಿಟ್ಟು ಹೆಚ್ಚಿಂದುದೆ ಹಾಂಗೇ - ಬೇಕಾರೆ ನೋಡಿ ನಿಂಗೊ - ಆಚಕರೆ ಮಾಣಿ ಬಾವಂಗೆ ಒಂದು ತಂಗೆ (- ಅದಾ, ಮೂಡ್ಲಾಗಿ ಕೊಟ್ಟಿದು ಅದರ,) ಈಚಕರೆ ಪುಟ್ಟಂಗೆ ಒಂದು ಅಕ್ಕ (- ಪುಟ್ಟಕ್ಕ), ಪಾಲಾರು ಅಣ್ಣಂಗೆ ಒಂದು ತಂಗೆ, ಕಾವೇರಿಕಾನ ಉದ್ದ ಮಾಣಿಗೆ ಒಬ್ಬ ತಮ್ಮ, ಅವನ ದೊಡ್ಡಪ್ಪಂಗೆ ಇಬ್ರು ಕೂಸುಗೊ, ಶೇಡಿಗುಮ್ಮೆ ಮಾವಂಗೆ ಇಬ್ರು ಮಕ್ಕೊ - ಸುಬ್ಬಣ್ಣ , ಸುಬ್ಬಿಅಕ್ಕ ಹೇಳುದು ಎಂಗೊ ಅವರ
{- 'S' ಹೇಳಿ ಅಡ್ಡ ಹೆಸರು ಅದಾ, ಇಬ್ರಿಂಗೂ.. ;-) }, ರಂಗ ಮಾವನಲ್ಲಿಯೂ ಇಬ್ರು ಮಕ್ಕೊ, ಶಾಂಬಾವಂದೆ, ಕುಂಞತ್ತಿಗೆಯುದೆ--- ಇನ್ನೂ ಸುಮಾರು ದಿಕ್ಕೆ ಎಲ್ಲ ಇಬ್ರಿಬ್ರೆ ಮಕ್ಕೊ!

ಆದರೆ ಒಪ್ಪಣ್ಣನ ಮನೆಲಿ ಮೂರು ಜೆನ ಮಕ್ಕೊ.
ಒಪ್ಪಣ್ಣಂಗೆ ಒಂದು ತಂಗೆ- ಒಪ್ಪಕ್ಕ°,
ಒಬ್ಬ ಅಣ್ಣ- ಒಪ್ಪಕ್ಕನ ದೊಡ್ಡಣ್ಣ.
ಅಂತೂ ಒಪ್ಪಣ್ಣ ಮಧ್ಯದವ°.
:-P


ಸಣ್ಣ ಇಪ್ಪಗಾಣ ಕಥೆ ಕೇಳಿ:
ಅಮ್ಮನನ್ನೇ ಅಂಟಿಗೊಂಡು ಇಪ್ಪ ಒಪ್ಪಕ್ಕ ರಜ್ಜ ಗೆಂಟು ಮಾಡ್ತಷ್ಟು ದೊಡ್ಡ ಆಯಿದು. ಎಲ್ಲೋರತ್ರೂ ಅದಕ್ಕೆ ಕೊಂಗಾಟವೆ, ಎಲ್ಲೋರಿಂಗೂ ಅದರತ್ರೆದೇ. ಗೆಂಟೂ ಹೇಳಿರೆ ಗೆಂಟು, ಕೆಲವು ಸರ್ತಿ..! ಗೆಂಟು ಜೋರಾತೋ, ಅಮ್ಮ ಎಂತಾರು ಸಣ್ಣ ಕೆಲಸ ಕೊಡುದು. 'ಇದಾ ಒಪ್ಪಕ್ಕೋ, ಈ ಚಿತ್ರ ನೋಡು / ಆನೆಯ ಚಿತ್ರ ಮಾಡು' - ಹೀಂಗೆಂತಾರು. ಒಂದೊಂದರಿ ಅರ್ದ ಗಂಟೆ ಕುಣುಕುಣು ಅದರಷ್ಟಕೆ ಮಾತಾಡಿಗೊಂಡು ಒಂದು ಅಡ್ಡಾದಿಡ್ಡಿ ಗೀಚಾಣ ತಯಾರಾವುತ್ತು. ಆನೆಯೋ, ನಾಯಿಯೋ, ಪೂಪಿಯೋ ಎಂತಾರು- ಅದು ಹೇಳಿದ ಹೆಸರದಕ್ಕೆ. ಗಳಿಗೆ ಕಳುದರೆ ಅದು ಆನೆ ಇಪ್ಪದು ಪೂಪಿಯೂ, ಪೂಪಿ ಇಪ್ಪದು ಗುಡ್ದೆಯೂ - ಎಂತೆಲ್ಲ ಅಪ್ಪದಿದ್ದು. ಅಂತೂ ಚಿತ್ರ ಮುಗುದ ಮತ್ತೆ ಪುನಾ ಗೆಂಟು ಸುರು ಆದರೆ ಇನ್ನೊಂದು ಕೆಲಸ - 'ಈ ಪೂಪಿ ಸರಿ ಮಾಡು / ತಲೆ ಬಾಚುಲೆ ಸುರು ಮಾಡು' - ಹೀಂಗೇ ಒಟ್ಟು ಎಂತಾರು ಕೆಲಸ ಹೇಳಿಗೊಂಡು ಇಕ್ಕು.
ಇದರ ಎಡೆಲಿ ಒಪ್ಪಣ್ಣಂದೇ ಕೆಲವು 'ಬರೇ ಸಣ್ಣ' ಕೆಲಸಂಗ ಒಪ್ಪಕ್ಕಂಗೆ ಹೇಳುದು. ಅಣ್ಣ ಕೆಲಸ ಕಲುಶೆಡುದೋ?
;-) ಒಪ್ಪಕ್ಕ, ಓ ಅಲ್ಲಿ ಮಡಗಿದ ಪುಸ್ತಕ ಇತ್ತೆ ತಾ. ಅಪ್ಪನ ಮೇಜಿನ ಮೇಲೆ ಇಪ್ಪ ಪೆನ್ನು ತಾ, ಒಳಂದ ಎರಡು ಬಾಳೆಹಣ್ಣು ತಾ, ಅಮ್ಮ ಒಳ ಇದ್ದೋ ನೋಡು - ಎಂತಾರು, ಪುಟ್ಟು ಪುಟ್ಟು ಕೆಲಸಂಗ ಸಂತೋಷಲ್ಲಿ ಮಾಡುಗು. ( ದೊಡ್ಡ ಆದ ಮೇಲೆಯುದೆ ಮಾಡುಗು, ಸಮಾದಾನ ಆಗದ್ರೆ ತೊಡಿ ಪೀಂಟುಸಿ ಮೂಗಿನ ಒಟ್ಟೆ ದೊಡ್ಡ ಮಾಡಿಯೊಂಡು ಆದರೂ. ;-))

ಹೋದಲ್ಲಿಯೂ ಹಾಂಗೆ, ಹೆಮ್ಮಕ್ಕಳ ಸಬೆಲಿ ಅಮ್ಮನೊಟ್ಟಿಂಗೆ ಕೂದುಗೊಂಗು. ಹೂಗಿನ ಮಾಲೆ ಕಟ್ಟುವಗ ಜೋಡ್ಸಿ ಕೊಡ್ಲೆ, ಹೂಗು ಆದು ಹಾಕುವಾಗ ಹೂಗಿನೊಟ್ಟಿಂಗೆ ಮುಗುಟು ಬಯಿಂದ ನೋಡ್ಲೆ, ಹೆಮ್ಮಕ್ಕೋ ಮಾತಾಡುವಾಗ ಸೆರಗು ಎಳಕ್ಕೊಂಡು ಚಿರಿಚಿರಿ ಮಾಡ್ಲೆ,
ಎಂತಾರು ಕೆಲಸಲ್ಲಿ ಒಪ್ಪಕ್ಕ ಇರ್ತು. ಅಲ್ಲಿಯುದೆ ಎಲ್ಲೋರು ಅದರತ್ರೆ ಕೆಲಸ ಹೇಳುವವೇ. ಏ ಒಪ್ಪಕ್ಕೋ, ಒಂದರಿ ಪುಟ್ಟತ್ತೆ ಎಲ್ಲಿದ್ದು ನೋಡ್ತೆಯಾ? ಒಂದರಿ ಎನ್ನ ವೇನಿಟಿ (ಬೇಗು) ತತ್ತೆಯಾ? ಒಳಂದ ಒಂದು ಗ್ಲಾಸು ನೀರು ತತ್ತೆಯಾ? - ಪುಟು ಪುಟು ನೆಡಕ್ಕೊಂದು ಹೋಗಿ ಎಡಿಗಾದಷ್ಟು ಮಾಡುಗು.
ಸಣ್ಣ ಮಗಳು / ಮಗ ಆದರೆ ಎಲ್ಲೋರು ಹೇಳುವವೇ.

ದೊಡ್ಡಣ್ಣನೋ,
ದೊಡ್ಡ ಆಗಿ ಶಾಲೆಗೆ ಸೇರಿದ್ದ°. ಶಾಲೆ ಇದ್ದರೆ ಶಾಲೆ ಪುಸ್ತಕ ಇದ್ದು - ಓದಲೆ ಇದ್ದು, ಕೋಪಿ ಬರವಲೆ ಇದ್ದು, ಓದುವಗ ಬಂದ ಸಂಶಯ ಎಲ್ಲ ಅಪ್ಪನತ್ರೆ ಕೇಳುಲೆ ಇದ್ದು. ಓದಿಬರದು ಆದ ಮತ್ತುದೆ ಪುರುಸೋತ್ತಿದ್ದರೆ ರಜ ಕೆಲಸಂಗಳೂ ಹೇಳ್ತವು ಅವಂಗೆ- ನಿತ್ಯ ಪೂಜಗೆ ಹೂಗು ಕೊಯ್ವಲೋ, ಕಂಜಿಗೊಕ್ಕೆ ಅಕ್ಕಚ್ಚು ಮಡಗುದೋ, ಚಳಿಗಾಲ ಉದೆಕಾಲ ೩ ಗಂಟೆಗೆ ಎದ್ದು ಕರೆಂಟು ಪಂಪಿನ ಲೈನು ಬಂತೋ ನೋಡ್ಲೆ ಅಪ್ಪನ ಒಟ್ಟಿಂಗೆ ಹೋಪಲೋ, ಲೈನು ಬಂದರೆ ಸುಚ್ಚು ಹಾಕಲೋ, ಒಯಿಶಾಕಲ್ಲಿ (ಬೇಸಗೆ) ಮೇಗಾಣ ತೋಟದ ಜೆಟ್ಟು ಬದಲುಸುಲೋ (ಅಡಕ್ಕೆ ತೋಟಲ್ಲಿ ಜಟ್ಟು ಚೇಂಜಿ ಮಾಡ್ತದು ಗೊಂತಿದ್ದನ್ನೇ?), ಮೇಗಂಗೆ (ಪೇಟಗೆ) ಹೋಗಿ ಸಣ್ಣ ಸಾಮಾನುಗಳ ತಪ್ಪಲೋ - ಹೀಂಗಿರ್ತ ಸಣ್ಣ ಮಟ್ಟಿನ ಗಟ್ಟಿ ಕೆಲಸಂಗ ಎಲ್ಲ ಬಕ್ಕು ಅವನ ಪಾಲಿಂಗೆ- ತಮ್ಮ ತಂಗೆಯ ನೋಡಿಗೊಳೆಕ್ಕುದೆ - ಅಣ್ಣ ಆಗ್ಯೊಂಡು. ಎಲ್ಲವನ್ನೂ ಸಂತೋಷಲ್ಲಿ ಮಾಡುಗು. ಅದರಿಂದಲೂ ದೊಡ್ಡ ಕೆಲಸ ಆದರೆ ಅಪ್ಪನೋ ಮತ್ತೊ ಮಾಡುಗು. ಹಾಂಗೆ ಆಳುದೆ ಬತ್ತನ್ನೇ.
ಇದರ ಎಡಕ್ಕಿಲಿ ಪುರುಸೊತ್ತಾದರೆ ಚಂದಮಾಮ ಇದ್ದು. ಹೊಸತ್ತು ಎಲ್ಲ ಜೆಗಿಲಿ ಕರೆಯ ಒಂದು ಅದೆ(Shelf) ಲಿ ಮಡಿಕ್ಕೊಂಡು ಇರ್ತು, ಕೆಳಾಣದ್ದು ಮುಗುತ್ತು ಕಂಡ್ರೆ ಇಟ್ಟೇಣಿಲಿ ಕೂದುಗೊಂಡು ಅಟ್ಟದ್ದರ ಓದುದು. ಅಟ್ಟಲ್ಲಿ ಒಂದು ರಾಶಿ ಇದ್ದು. ಹಾಂಗೊಂದು ಓದುತ್ತದರ ಮರುಳು. ಪುರುಸೊತ್ತಿದ್ದರೆ ರಜ ಒರಗುಲಾಗದೋ?
:-)

ಹೋದಲ್ಲಿಯೂ ಅಷ್ಟೇ, ರಜ್ಜ ಗಂಭೀರ ಇಕ್ಕು. ಕುಶಾಲು ಎಲ್ಲ ಇಲ್ಲೆ. ನೆಂಟ್ರ ಮನಗೆ ಜೆಂಬ್ರಕ್ಕೋ ಮಣ್ಣ ಹೋದರೆ ದೊಡ್ದವರ ಹಾಂಗೆ ಅಪ್ಪನ ಕರೇಲಿ ಕೂದೊಂಡು ಮಾತಾಡಿಗೊಂಡು ಇಕ್ಕು- ಬೆಳಿ ವೇಷ್ಟಿಯ ನೆಂಟ್ರುಗಳ ಒಟ್ಟೋಟ್ಟಿಂಗೆ. ಅಲ್ಲಿಯೂ ಚಂದಮಾಮ ಸಿಕ್ಕಿರೆ ಓದಿತ್ತು. ಅಂತೂ ದೊಡ್ಡಣ್ಣಂಗೆ ಚಂದಮಾಮ ಕಂಡ್ರೆ ಆತು, ಒಪ್ಪಕ್ಕಂಗೆ ಅಮ್ಮನ ಕಂಡ್ರೆ ಆತು! ಒಪ್ಪಣ್ಣನ ಹಾಂಗೆ ಸಮಪ್ರಾಯದವರ ಒಟ್ಟಿಂಗೆ ಕಂಬಾಟ ಆಡುದಲ್ಲ, ಗಿರ್ಗೀಟಿ ಮಾಡ್ಲೆ ಹೋಗಿ ಮೈ ಗೀರ್ಸಿಗೊಂದು ಬಪ್ಪದಲ್ಲ - ಕೈಕ್ಕಾಲು ಹಂದುಸದ್ದೆ ಬೆಂಚಿಲಿ ಕೂದೊಂಗು, ಎಲ್ಲೋರು ಮಾತಾಡುವಾಗ ಚೆಂದಕ್ಕೆ ಕೂದಂಡು ನೋಡುಗು, ದೊಡ್ಡವರ ಹಾಂಗೆ!
ದೊಡ್ಡ ಮಗ / ಮಗಳು ಹೇಳಿ ಆದರೆ ಎಲ್ಲೊರು ನಿರೀಕ್ಷಿಸುವವೇ! ಸಮಾಜದ ನಿರೀಕ್ಷೆಲಿ ಗಂಭೀರತೆಯುದೆ ಜಾಸ್ತಿ ಇರ್ತು.

ಅಂಬಗ ಒಪ್ಪಣ್ಣನೋ? ಒಟ್ಟಾರೆ ಪುರ್ಸೋತ್ತೆ ಇಲ್ಲೆ. ಮನೆಲಿಪ್ಪಗ ಕೆಲಸಂಗಳಲ್ಲೇ ಬಿಜಿ ಇಕ್ಕು. ಒಟ್ಟೆ ಕರಟಲ್ಲಿ ನೀರು ತುಂಬುಸುದೋ, ನಿನ್ನೆ ಹುಟ್ಲೆ ಹಾಕಿದ ಅಳತ್ತೊಂಡೆ ಬಿತ್ತು ಹುಟ್ಟಿದ್ದೋ ನೋಡುದೋ, ಪೇಷ್ಟಿನ ಟ್ಯೂಬು ತೊಳದು ಜೀರಕ್ಕಿ ಮಿಟಾಯಿ ತುಂಬುಸುದೋ, ಗಿರ್ಗೀಟಿ ಮಾಡುದೋ, ಅಟ್ಟುಂಬೊಳದ ಕಿಚ್ಚಿನ ಪೆಟ್ಟಿಗೆ ತೆಗದು (ಕದ್ದು?) ರಬ್ಬರು (ಬೇಂಡಿನ) ಬೆಡಿ ಮಾಡುದೋ - ಅಂತೂ ಓದಿ ಬರೆತ್ತ ತಲೆಬೆಶಿ ಇಲ್ಲದ್ದೆ - ಒಪ್ಪಣ್ಣನೇ ಮಾಡೆಕ್ಕಾದ್ದು ಕೆಲಸ ಇರ್ತು ಇದಾ - ಎಂತಾರು ಮಾಡಿಗೊಂಡು ಇಪ್ಪದು. ಮನೆಲಿ ಅಪ್ಪ° ಎಂತೂ ಹೇಳವು, ಅಮ್ಮ ಬೈತ್ತದು ಎದುರು ಕಾಂಬ ಹಾಂಗೆ ಇದ್ದರೆ ಮಾಂತ್ರ ಅಲ್ದೋ?
;-)

ಯೇವದಾರು ಜೆಂಬ್ರಕ್ಕೆ ಹೋದರೆಯೋ°?
ಅಲ್ಲಿ ಚೆಪ್ಪರ ಹಾಕುತ್ತವು- ಅದಕ್ಕೆ ಅಡಕ್ಕೆ ಮರದ ಕಂಬ ಹಾಕಿಯೇ ಹಾಕುತ್ತವು. ಒಪ್ಪಣ್ಣನ ಹಾಂಗೇ ಅದೇ ಪ್ರಾಯದವೇ ಸುಮಾರೆಲ್ಲ ಜೆನ ಇದ್ದೇ ಇರ್ತವು, ಎಲ್ಲ ಸೇರಿ ಕಂಬಾಟ! ಅದರ್ಲಿ ಜೋರು ಬೊಬ್ಬೆ ಹೊಡವವ° ಹೆಚ್ಚು ಉಷಾರಿ. ಒಪ್ಪಣ್ಣನ ದೊಂಡೆ ಅಂದೇ ದೊಡ್ಡದು. ಅಜ್ಜನ ಸ್ವರ ಅಡ - ಹಳಬ್ಬರು ಹೇಳುಗು. ಜಾಲು ನೋಡಿಗೊಂಡು ಆಟ ಸುರು. ಮಾಡಾವು ಅಕ್ಕನ ಮನೆಯ ದೊಡ್ಡ ಜಾಲು ಆದರೆ ತುಂಬ ಕಂಬಂಗೊ ಇರ್ತು. ತುಂಬ ಮಕ್ಕೊ ಬೇಕಾವುತ್ತು - ಇರ್ತವು ಅಲ್ಲಿ. ಕಂಬ ಇದ್ದಲ್ಲಿ ಮಕ್ಕೊಗೆ ಏನೂ ದರಿದ್ರ ಆಯಿದಿಲ್ಲೆ ಆ ಕಾಲಲ್ಲಿ, ಈಗಾಣ ಹಾಂಗೆ 'ಜೋಡಿಂಗೆ ಮಣ್ಣಕ್ಕು ಮಗಾ°!' ಹೇಳುವ ಅಮ್ಮಂದ್ರು ಅಂಬಗ ಇತ್ತಿದ್ದವಿಲ್ಲೇ ಇದಾ. ವಿಷಯ ಅಪ್ಪೋ ಅಲ್ದಾ? ಅಷ್ಟೇ ಉಳ್ಳೊ!!!

ಅಲ್ಲಿ ಸಿಕ್ಕಿದ ಸಮಪ್ರಾಯದ ಮಕ್ಕಳೇ ಆ ದಿನದ ನೆಂಟ್ರುಗೊ. ಅವರೊಟ್ಟಿಂಗೇ ಕೂದು ಉಂಡತ್ತು, ಎದ್ದತ್ತು, ಆಟ ಆಡಿತ್ತು. ಮದುವೆ ಆಗಿರ್ಲಿ, ಉಪ್ನಯನ ಆಗಿರ್ಲಿ, ಪೂಜೆ ಆಗಿರ್ಲಿ ಕ್ಯಾರೇ ಇಲ್ಲೆ ನವಗೆ!
ಹೆರಡ್ಲಪ್ಪಗ ಅಮ್ಮ ಹುಡ್ಕುಲೆ ಸುರು ಮಾಡುಗು, ಬಂದು ಸೇರಿಗೊಂಡತ್ತು.
ಹೆರಟು ಮನಗೆತ್ತಿತ್ತು, ಇನ್ನೊಂದು ಒಟ್ಟೆ ಕರಟ ಹುಡುಕ್ಕಿಯೊಂಡು ಹಿತ್ಲಿಲಿ ಹೆರಟತ್ತು.
ಮನಗೆ ಪಕ್ಕನೆ ಆರಾರು ಬಂದರೆ ದೊಡ್ಡಣ್ಣ ಅಪ್ಪನತ್ರೆ ಹೇಳುಲೆ ಹೋಕು, ಒಪ್ಪಕ್ಕ ಅಮ್ಮನತ್ರೆ ಹೇಳುಲೆ ಹೋಕು. ಒಪ್ಪಣ್ಣಂಗೆ ಪುರುಸೊತ್ತೇ ಅಲ್ದೋ? ಕೂದೊಂಡು ಪಂಚಾತಿಗೆ ಹಾಕಿತ್ತು ಅವರತ್ರೆ.

ಮನೆಲಿ ಎಂತಾರು ಕೆಲಸ ಹೇಳಿದವೋ? ಅದು ದೊಡ್ಡದೋ, ಸಣ್ಣದೋ ನೋಡುದು!
  • ಬರೇ ಸುಲಬದ ಸಣ್ಣ ಕೆಲಸ ಆದರೆ ಒಪ್ಪಕ್ಕಂಗೆ ಮಾಡ್ಲೆ ಹೇಳಿತ್ತು ಅದರ. ಅದು ಉಷಾರಿ ಕೂಸು ಅಲ್ದೋ, ಮಾಡುಗು. ರಜ್ಜ ಕೊಂಗಾಟಲ್ಲಿ ಹೇಳಿರೆ ಸರಿ.
  • ರಜ್ಜ ದೊಡ್ಡ ನಮೂನೆ ಕೆಲಸವೋ, ಒಪ್ಪಣ್ಣ ಮಾಡ್ತನೋ ನೋಡ್ತ°, ಮಾಡುದು ಕಾಣದ್ರೆ ದೊಡ್ಡಣ್ಣ ಮಾಡ್ತ°! ಎಷ್ಟು ಪಿಸುರು ಬಂದರೂ ಪರಂಚ° ಅವ°.ಉಷಾರಿ ಮಾಣಿ!
ಯಾವುದೇ ಕೆಲಸ ಒಂದಾ ರಜ್ಜ ದೊಡ್ಡ, ಅಲ್ಲದ್ರೆ ರಜ್ಜ ಸಣ್ಣ ಆಗಿ ಇರ್ತು, ಅಲ್ದೋ?
ಇವಿಬ್ರಲ್ಲಿ ಒಬ್ಬಂಗೆ ಆ ಕೆಲಸದ ದಾರಿ ತೋರುಸಿ ಒಪ್ಪಣ್ಣ ಪೀಂಕಿದ ಅಲ್ಲಿಂದ.
:-)

ಸಣ್ಣ ಮಗ / ಮಗಳು ಆದರೆ ಎಲ್ಲೊರು ಮಾರ್ಗದರ್ಶನ ಕೊಡುವವೇ! ಹೀಂಗೇ ಮಾಡು, ಹಾಂಗೆ ಮಾಡು ಹೇಳುವವೇ. ದೊಡ್ಡ ಮಗ ಆದರೆ ಆರೂ ಮಾರ್ಗದರ್ಶನ ಕೊಡ್ಲೇ ಬತ್ತವಿಲ್ಲೆ. ಅವರ ಮೇಲೆ ಸಮಾಜದ ಎಲ್ಲೊರು ನಿರೀಕ್ಷೆ ಮಡಿಕ್ಕೊಂಡು ಇರ್ತವು. ಅದು ಬಿಟ್ಟು ಹಾಂಗೆ ಮಾಡು ಹೀಂಗೆ ಮಾಡು ಹೇಳುಲೇ ಆರೂ ಇರ್ತವಿಲ್ಲೇ. ಅಪ್ಪಮ್ಮ ಮಾಂತ್ರ. ಅದರ ಮೇಗಂದ ತಮ್ಮ ತಂಗೆಗೂ ಮಾರ್ಗದರ್ಶನ ಕೊಡೆಕ್ಕು. ಮನೆಕ್ರಮಂಗೊ ಹೇಳುದರಿಂದ ಹಿಡುದು ವಿದ್ಯಾಭ್ಯಾಸದ ವಿಷಯದ ಒರೆಂಗೂ ದೊಡ್ಡ ಮಗ / ಮಗಳಿಂಗೆ ಜವಾಬ್ದಾರಿ ಬೀಳ್ತು. ಹೆತ್ತವಕ್ಕೆ ಸಹಕಾರ ಕೊಡೆಕ್ಕಾವುತ್ತು. ಕೊಂಗಾಟ ಮಾಡುಸಿಗೊಂಬದು ಅಲ್ಲ, ತಮ್ಮ ತಂಗೆಕ್ಕಳ ಮಾಡೆಕ್ಕಾವುತ್ತು.
ಒಪ್ಪಣ್ಣನ ಹಾಂಗೆ ಮದ್ಯಲ್ಲಿ ಇದ್ದರೆ ದೊಡ್ಡಣ್ಣ ಹೇಳ್ತ°, ಒಪ್ಪಕ್ಕ ಕೇಳ್ತು. ಒಪ್ಪಣ್ಣಂಗೆ ಯೇವತ್ತೂ ಜೇನುತುಪ್ಪ.
:-) ಮಧ್ಯಂತಿಷ್ಠತಿ ಒಪ್ಪಣ್ಣ !!!

ಅಂತೂ ದೊಡ್ಡಣ್ಣ, ಒಪ್ಪಕ್ಕ - ಇಬ್ರ ಮಧ್ಯಲ್ಲಿ ಬೆಶಿ ತಾಗದ್ದ ಹಾಂಗೆ ಕೂದುಗೊಂಡು, ಹದಾಕೆ ಚಳಿ ಕಾಸಿಗೊಂಡು ಬದುಕ್ಕುತ್ತ ಬಾಗ್ಯ ಎಷ್ಟು ಜೆನಕ್ಕೆ ಇದ್ದು? ಮನೆ ತುಂಬಾ ಮಕ್ಕೊ ಇಪ್ಪಗ ಅಂತೂ ಈ ವಿಷಯ ನೂರಕ್ಕೆ ನೂರು ಸಮ. ಆದರೆ ಈಗಾಣವಕ್ಕೆ ಇದರ ಅನುಭವ ಕಮ್ಮಿ ಇಕ್ಕಷ್ಟೇ,
ಮದ್ಯದವ° ಆಗಿ ಹುಟ್ಲೇ ಒಂದು ಭಾಗ್ಯ ಬೇಕು ಅಲ್ದೋ?

ಮುಂದೆ ದೊಡ್ಡಣ್ಣ ಇಂಜಿನಿಯರು ಕಲಿವಲೆ ಹೇಳಿಗೊಂಡು ಮನೆ ಬಿಟ್ಟಪ್ಪಗ ಒಪ್ಪಕ್ಕ° ಎಲ್ಲಾ ಕೆಲಸಂಗಳ ಮಾಡುವಷ್ಟು ದೊಡ್ಡ ಆಗಿತ್ತಿಲ್ಲೆ ಆತಾ!. ಒಪ್ಪಣ್ಣನ ಕಷ್ಟದ ಕಾಲ ಅದು!
;-(

ಒಂದೊಪ್ಪ: ನಿಂಗಳ ಅಪ್ಪಮ್ಮಂಗೆ ನಿಂಗೊ ಎಷ್ಟು ಜೆನ ಮಕ್ಕೊ?