ಮರುಳು ಕಟ್ಟಿ ಆಡಿರೂ 'ಇಸ್ಪೇಟು ಗುಲಾಮ' ಆಯಿದವಿಲ್ಲೆ

ತರವಾಡು ಮನೆ ತಿತಿಯ ಶುದ್ದಿ ಹೇಳಿದ್ದೆ ಓ ಮೊನ್ನೆ. ಮಾಷ್ಟ್ರು ಮಾವ° ಶ್ಲೋಕದ ಅರ್ತ ವಿವರುಸಿದ್ದರ.
ಅದೇ ದಿನದ ಇನ್ನೊಂದು ಶುದ್ದಿ ಈ ವಾರ ಹೇಳ್ತೆ ಕೇಳಿ:
ತರವಾಡು ಮನೆ ಹೇಳಿರೆ ಪಿಡಿ ಆಡ್ತ ಒಂದು ಜಾಗೆ.
ಪಿಡಿ ಹೇಳಿರೆ ಇಸ್ಪೇಟು (Cards) - ಗೊಂತಾತಲ್ದ? ಪರಿಭಾಷೆಲಿ ಪುಷ್ಪಾಂಜಲಿ ಹೇಳಿ ಹೇಳುದು ಅದರ. :-) ಇಂಥಾ ದಿನ ತರವಾಡು ಮನೆಲಿ ತಿತಿ ಹೇಳಿ ಹೇಳಿಕೆ ಆದರೆ ಆ ದಿನಕ್ಕೆ ನೆಂಟ್ರು - ನೆರೆಕರೆ ಹಳಬ್ಬರು ಬಂದೇ ಬಕ್ಕು. ಬೇರೆ ಜೆಂಬ್ರ ಹೇಳಿಕೆ ಇದ್ದರೆ ಅದಕ್ಕೆ ಅವರ ಮಕ್ಕಳನ್ನೋ ಮಣ್ಣ ಕಳುಸುಗು. ಅಷ್ಟುದೇ ಖಂಡಿತ. ಪ್ರಾಕಿಂದಲೇ ನೆಡಕ್ಕೊಂಡು ಬಂದ ಶುದ್ದಿ ಅಡ ಇದು.


ತಿತಿ ಯಾವುದೇ ಇರಳಿ, ಶಂಭಜ್ಜ ಮಾಡಿಗೊಂಡಿದ್ದ ಮುದಿ ಅಜ್ಜನ / ಅಜ್ಜಿಯ ತಿತಿ ಆಗಿಕ್ಕು, ಈಗ ರಂಗ ಮಾವ° ಮಾಡ್ತ ಶಂಬಜ್ಜನ ತಿತಿ ಆಗಿಕ್ಕು, ಕಾಂಬು ಅಜ್ಜಿ ತಿತಿ ಆಯಿಕ್ಕು, ಆರದ್ದೇ ಇರಳಿ- ಇಸ್ಪೇಟು ಆಟ ಯಾವದೇ ತಡೆ ಇಲ್ಲದ್ದೆ ನೆಡಗು. 'ತರವಾಡು ಮನೆಲಿ ಅದಿಲ್ಲದ್ರೆ ಶಂಬಜ್ಜಂಗೆ ತೃಪ್ತಿ ಆಗ' ಹೇಳಿ ಹಳಬ್ಬರು ನೆಗೆಮಾಡುಗು. ಶಂಬಜ್ಜಂಗೆ ಅಷ್ಟುದೇ ಇಸ್ಪೇಟು ಮರುಳು ಅಡ.
:-)

ಶಂಬಜ್ಜನ ಕಾಲಕ್ಕೆ ಅಂತೂ ಉಛ್ರಾಯ. ಹನ್ನೊಂದು ಗಂಟೆ ಹೊತ್ತಿಂಗೆ ಶುರು ಆದರೆ- ತಿತಿ ದಿನ- ಉಂಬಲಪ್ಪನ್ನಾರ ಒಂದು ಸುತ್ತು, ಹೊತ್ತೋಪಗ ಆಸರಿಂಗೆ ಆಗಿಕ್ಕಿ ಇನ್ನೊಂದು ಸುತ್ತು, ಇರುಳು ಉಂಡಿಕ್ಕಿ ಮತ್ತೊಂದು ಸುತ್ತು - ಗೇಸುಲೈಟು ಮಡಗಿ - ಉದಿಯಾ ಒರೆಂಗೆ. ಈಗ, ರಂಗಮಾವನ ಕಾಲಕ್ಕೆ ಆ ಮೂರ್ನೆದು ಬಿಟ್ಟು ಹೋಯಿದು. ಇರುಳು ಒರೆಂಗೆ ಅಂತೂ ಭರ್ಜರಿ ಆಟ. ಹಳಬ್ಬರು ಎಲ್ಲ ಬಂದು ಸೇರಿ ಆಡುವಗ ದೊಡ್ಡ ರಾಮಾ ರಂಪ ಆವುತ್ತು. ನೋಡ್ಲೇ ಒಂದು ಕುಶಿ.

ಒಂದು ವಾರ ಮದಲೇ ಪಿಡಿ ಎಲ್ಲ ತಯಾರು ಮಾಡಿ ಮಡಗ್ಗು ರಂಗಮಾವ°.
ಹನ್ನೊಂದು -ಹನ್ನೆರಡು ಗಂಟೆಗೆ ಕಳ ಹಾಕಿರೆ, ಸುರುವಿಂಗೆ ಅರ್ದ ಗಂಟೆ ಕತ್ತೆ ಆಟ. ಅದು ಚಿರಿಚಿರಿ ಮಾಡ್ತ ಮಕ್ಕೊಗೆ ಬೇಕಾಗಿ. ಮುಂದಾಣ ತಲೆಮಾರು ತಯಾರು ಆಯೆಕ್ಕಲ್ದಾ- ಹಾಂಗೆ. ಕೆಲವು ಕುಶಾಲಿನ ಹಳಬ್ಬರು ಮಾಂತ್ರ ಸೇರುಗಷ್ಟೆ ಅದಕ್ಕೆ. ಅರ್ದ ಗಂಟೆಲಿ ಹೆಚ್ಹುಹೇಳಿರೆ ಸುಮಾರು ಎಂಟು ಆಟ ಆಡ್ಳೆಡಿತ್ತು. ಅಷ್ಟಪ್ಪಗ ಹಾಸಿದ ಹೊದಕ್ಕೆ, ಪಿಡಿ ಎಲ್ಲ ಸರೀ ಆಗಿ ಸೆಟ್ ಆವುತ್ತು, ದೊಡ್ಡವಕ್ಕೆ ಆಡ್ಳೆ
;-). ಸುರುವಾಣ ನಾಲ್ಕು ಆಟ ಸಮದಾನಕ್ಕೆ ಆಡುದು, ಮತ್ತಾಣದ್ದರ್ಲಿ ಮಕ್ಕೊಗೇ ಪೆಟ್ಟು ಕೊಡುದು, ಅಷ್ಟಪ್ಪಗ ನಾಮಸ್ ಆವುತ್ತಿದಾ. ಹಶುದೇ ಆವುತ್ತು ಅವಕ್ಕೆ. ಎಂತಾರು ಅರಟುಲಾ, ಗುರುಟುಲಾ ಮಣ್ಣ ಎದ್ದು ಹೋವುತ್ತವು. ರಜ್ಜ ದೊಡ್ಡ ಆದರೆ ಆಟ ನೋಡುಲೆ ಹೇಳಿ ಕೂರ್ತವು, ಕರೇಲಿ. ಮಕ್ಕೊ ಎದ್ದ ಕೂಡ್ಳೇ ’ಏ ಕುಂಞೀ, ಆ ಎಲೆ ಮರಿಗೆ ಕೊಂಡ ಮಿನಿಯಾ..!’ ' ತಲೆಕೊಂಬು ಕೊಂಡ ಮಿನಿಯಾ' ಹೇಳುಗು. ತಂದ ಕೂಡ್ಲೇ 'ನಿನಗೆ ಸುರುವಾಣದ್ದು ಕೂಸು ಹುಟ್ಲಿ ಮಿನಿಯಾ' ಹೇಳುಗು. ಇಷ್ಟೆತ್ತರದ ಮಕ್ಕೊಗೆ ಎಂತರ ಅರ್ತ ಅಪ್ಪದು ಬೇಕೇ!

ಒಂದೊಂದು ತಲೆಕೊಂಬುದೇ, ಎಲೆ ಹರಿವಾಣವೂ ಎತ್ತಿದ ಮೇಗೆ ಮೆಲ್ಲಂಗೆ ಶಾಲಿನ ಅಲ್ಲಿಗೆ ಇಡುಕ್ಕಿ ಒಂದರಿ ಎಲೆ ತುಪ್ಪಿ ಬಾಯಿ ಮುಕ್ಕುಳುಸಿ ಬಕ್ಕು. ಅಲ್ಲಿಂದ ದೊಡ್ಡೋರ ಆಟ ಸುರು. ಇಪ್ಪತ್ತೆಂಟು ಆಟ ಆಡುದು. ತುಂಬ ಸರ್ತಿ ಆಡ್ಳಾವುತ್ತು- ಬೇಗ ಮುಗಿತ್ತಿದಾ! ಹಾಂಗೆ. ಆಟಾಡ್ಲೆ ಒಟ್ಟು ಸಮಸಂಕೆ ಜೆನ ಬೇಕಾದ್ದು ಅವಕ್ಕೆ. ಪಾರೆ ಮಗು ಮಾವ°, ಶರ್ಮ ಮಾವ°, ಹೊಸ ಮನೆ ಅಜ್ಜ°, ಅಜ್ಜಕಾನ ಮಾವ°, ಖಂಡಿಗೆ ದೊಡ್ದಪ್ಪ, ಆಚಕರೆ ಮಾವ°, ಪಂಜದ ಚಿಕ್ಕಯ್ಯ- ರಂಗಮಾವನ ಬಾವ (ಅಪ್ಪಚ್ಚಿಗೆ ಪಂಜಲ್ಲಿ ಚಿಕ್ಕಯ್ಯ ಹೇಳುದು - ಅಪ್ಪಚ್ಚಿ ಹೇಳಿರೆ 'ಎಂತ ನುಸಿಯಾ?' ಹೇಳಿ ನೆಗೆ ಮಾಡುಗು)-ಅವು, ಗೋವಿಂದ ಭಟ್ರು, ಮತ್ತೆ ವಾಸ್ದೇವಟ್ರು, ಎಲ್ಲ ಕೂಪದೆ ಕಳಕ್ಕೆ. ಸುರುವಿಂಗೆ ಎಡಿತ್ತಿಲ್ಲೆ - ಆಟಕ್ಕೆ ಬತ್ತಿಲ್ಲೆ ಹೇಳುಗು. ಮತ್ತೆ ನೋಡಿರೆ ಎಲ್ಲೊರು ಕೂರುಗು. :-) ಕೊದಿ ಬಿಡೆಕೆ!

ಈ ಸರ್ತಿ ಎಲ್ಲ ಸೇರಿ ಒಟ್ಟು ಒಂಬತ್ತೇ ಜೆನ ಆದ್ದು. ಸಮಸಂಕೆಗೆ ಮತ್ತೊಂದು ಬಾಕಿ ಇತ್ತನ್ನೇ, ಆಗಾಣ ಕತ್ತೆ ಆಟಲ್ಲಿ ಕತ್ತೆ ಆದ ಗುಣಾಜೆ ಉಷಾರಿ ಮಾಣಿಯ ದಿನಿಗೆಳಿದವು ಶರ್ಮ ಮಾವ°. 'ಆನು ಕತ್ತೆ ಮಾಂತ್ರ ಆಡುದು, ಇಪ್ಪತ್ತೆಂಟು ಆಡ್ತಿಲ್ಲೆ ಮಾವ°, ಅಪ್ಪ° ಬೈತ್ತವು!' ಹೇಳಿಕ್ಕಿ ಆ ಮಾಣಿ ಪೇಪರು ಓದಲೆ ಸುರು ಮಾಡಿದ°. :-) ಪಾಲಾರು ಮಾಣಿ ಏವತ್ತಿನ ಹಾಂಗೆ ಉಂಬಲಪ್ಪಗ ಬಂದದು, ಈ ಸರ್ತಿಯಾಣ ಕಾರಣ - 'ಅಡಕ್ಕೆ ತೆಗವಲೆ ಮೋಂಟ ಬಂತು' ಹೇಳಿ. ;-) ಹಾಂಗೆ ಮತ್ತೆ ಉಗುರು ಕಚ್ಚಿಗೊಂಡು ಕೂದ ಆಚಕರೆ ಮಾಣಿ ಮೂಡಿಲ್ಲದ್ದ ಮೂಡಿಲಿ ಕೂದ°. ಒಪ್ಪಣ್ಣ, ಅಜ್ಜಕಾನ ಬಾವ, ಈಚಕರೆ ಪುಟ್ಟ° ಎಲ್ಲ ನೇರಂಪೋಕು ಮಾತಾಡಿಗೊಂಡು ಕೂದೆಯೊ°. ಮಾಷ್ಟ್ರು ಮಾವಂದೆ ಇದ್ದ ಕಾರಣ ಒಳ್ಳೆ ವಿಷಯಂಗೊ ಬಯಿಂದು ಮಾತಾಡುವಗ, ಒಂದರ ಕಳುದ ವಾರ ಹೇಳಿದ್ದೆ. ಇನ್ನೂ ತುಂಬಾ ಇದ್ದು ಹೇಳ್ತರೆ.
ಈ ಪಿಡಿ ಆಟಲ್ಲಿ ಪಾರ್ಟಿ ಮಾಡುದು ಹೇಳಿ ಎಂತ ವಿಶೇಷ ಗಡಿಬಿಡಿ ಇಲ್ಲೆ. ಒಂದು ಬಿಟ್ಟು ಒಂದು- ಹೇಳಿರೆ, ಪಾರೆ ಮಗುಮಾವನ ಹತ್ತರೆ ಕೂದ ಆಚಕರೆ ಮಾವ° ಎದುರಾಣ ಪಾರ್ಟಿ, ಅವರಿಂದ ಅತ್ಲಾಗಿ ಕೂದ ಶರ್ಮ ಮಾವ° ಇವರದ್ದೇ ಪಾರ್ಟಿ - ಹಾಂಗೆ ಒಂದು ಸುತ್ತು. ಹತ್ತು ಜೆನ ಕೂದತ್ತು ಕಂಡ್ರೆ, ಐದೈದರ ಎರಡು ಪಾರ್ಟಿ ಅಲ್ಲಿ. ಅದೆಂತ ಪೂರ್ವ ಯೋಜಿತ ಅಲ್ಲ. ಪಿಡಿ ಕಲಸಿ ಹಾಕುವನ್ನಾರವೂ ಪಾರ್ಟಿ ಗಮನುಸವು. ಸುರುವಾಣ ಆಟಲ್ಲಿ ಪಿಡಿ ತೆಗದು ಕೈ ನೋಡಿದ ಮತ್ತೆಯೇ ಪಾರ್ಟಿಲಿ ಆರೆಲ್ಲ ಇದ್ದವು ಹೇಳುದರ ನೋಡುದು.

ಸುರುವಾಣ ಒಂದು ಹತ್ತು ಆಟ ಕಳದ ಸುತ್ತ ನೀಟಕ್ಕೆ -ತ್ರಿಕಾಲಪೂಜೆಯ ಪುಷ್ಪಾಂಜಲಿಗೆ ಬಟ್ಟಕ್ಕೊ ಕೂದ ಹಾಂಗೆ- ಕೂರ್ತವು. ಮತ್ತೆ ಮೆಲ್ಲಂಗೆ ಒಂದೊಂದೇ ಕೀಲು ಪೀಂಕುಲೆ ಸುರು ಆವುತ್ತು. ಅಜ್ಜಂದ್ರಿದಾ.. ಹೆಚ್ಚಿನವು ಎಪ್ಪತ್ತರ ಮೇಲೆಯೇ! ಕಡಮ್ಮೆ ಹೇಳಿರೆ ಐವತ್ತು! ಸೊಂಟ ಬೇನೆ ಎಲ್ಲ ಸುರು ಆಗಿರ್ತು.
:-)
ಪಾರೆ ಮಗುಮಾವಂಗೆ ಗೆಂಟು ಬೇನೆ, ಕಳುದೊರಿಷ ಆ ಜ್ವರ ಬಂದದು. ಆದರೂ ಪಿಡಿ ಮರುಳು ಬಿಡವು. ತಲೆಕೊಂಬಿನ ಮೇಲೆ ಎದೆ ಮಡಗಿ, ಮಾಪಳೆ ನಮಾಜು ಮಾಡ್ಲೆ ಕೂದ ಹಾಂಗೆ ಆದರೂ ಕೂದುಗೊಂಡವು. ಶರ್ಮ ಮಾವ° ಬಚ್ಚುತ್ತು ಹೇಳಿ ಅನಂತ ಶಯನದ ಹಾಂಗೆ ಮನಿಕ್ಕೊಂಡವು.
ಆಚಕರೆ ಮಾವ ತಲೆಕೊಂಬು ಮಡಗಿ ಗೋಡೆಗೆ ಎರಗಿ ಆಟೀನು ನೈಲನ ತಿರುಗುಸಿ ಬಿಡ್ತ ಚೆಂದ ನೋಡೆಕ್ಕಾತು!
ಅವರ ಕಾಲು ಖಂಡಿಗೆ ದೊಡ್ದಪ್ಪನ ಗೆನಾ ವಸ್ತ್ರಕ್ಕೆ ಮುಟ್ಟಿ ಸಗಣವೋ ಎಂತದೋ ಕುರೆ ಹಿಡುದ್ದು ಆಟ ಮುಗಿವನ್ನಾರವೂ ಗೊಂತಾಯಿದಿಲ್ಲೆ. ದೊಡ್ಡಮ್ಮ ಖಂಡಿತ ಪರಂಚುತ್ತವು ಮನೆಲಿ ಅವಕ್ಕೆ! ಪಾರೆ ಮಗು ಮಾವಂಗೆ ಒಳ್ಳೆತ ಕುಶಾಲಿದಾ, ಬೇಕಾದ್ದು ಬೇಡದ್ದು ಎಲ್ಲ ಬಕ್ಕು - ಮಾತಾಡುವಾಗ. 'ಚೆಕ್ಕ್, ಇವೊಂದು' ಹೇಳಿ ಮಗು ಅತ್ತೆ ಮೋರೆ ಪೀಂಟುಸುಗು , ಒಳಾಂದಲೇ!. ಹೊಸಮನೆ ಅಜ್ಜಂಗೆ ಮಾತಾಡಿದ್ದು ಏನೂ ಕೇಳ, ಪ್ರಾಯ ಆತಿದಾ! 'ಏ°' ಹೇಳುಗು- ಅಂಬಗಂಬಗ. ಪಿಡಿ ಆಟಲ್ಲಿ ಜಾಸ್ತಿ ಮಾತಾಡ್ಲಿಲ್ಲೆ - ಹಾಂಗಾಗಿ ಏನೂ ತೊಂದರೆ ಆಯಿದಿಲ್ಲೆ.

ಆಟದ ಎಡೆಲಿ ಮಾತಾಡ್ಲಿಲ್ಲೆ, ಬೈವಲೆ ಇಲ್ಲೆ ಹೇಳಿ ಅರ್ತ ಅಲ್ಲ. :-) ಆ ಹಳಬ್ಬರ ಬೈಗಳು ಕೆಳುಲೇ ಒಂದು ಚೆಂದ. ಆದರೆ ಬೈವದೆಲ್ಲ ನೆಗೆ ಮಾಡ್ಲೆಯೇ. ಅಪುರೂಪದವ° ಬಂದರೆ ಪೋಲೀಸು ದಿನಿಗೆಳುಗು. ಹಾಂಗುದೆ ಇರ್ತು ಎಡೆಡೇಲಿ!
"ಆಟ ಹಾಳುಮಾಡಿದೆ ಎರೆಪ್ಪು",
'ಛೆ, ಎನ್ನ ಬೆನ್ನಿಂಗೆ ಪೀಶಕತ್ತಿ ಹಾಕಿದೆನ್ನೇ",
"ನಿನ್ನ ಲಗಾಡಿ ತೆಗೆತ್ತೆ ನೋಡು",
"ಅದ, ಪ್ರಾಂದ° ಎನ್ನ ನವಿಲನ ರಟ್ಟುಸಿದ° ಅದಾ!",
...ಹೇಳಿ ಎಲ್ಲ ಬೈಗು.
" ನಿಮಿಗೆ ಮರುಳುಂಟೋ?" ಹೇಳಿ ಅಂಬಗಂಬಗ ಗೋವಿಂದ ಬಟ್ರು ಬೈಗು. ಕರಾಡಿ ಭಾಷೆ ಬಾರದ್ದೆ ಅವು ಮನೆಲಿಯುದೆ ಕನ್ನಡವೇ ಮಾತಾಡುದು.
ಮತ್ತೆ, ಬಡಿವದು,ಕಡಿವದು, ರಟ್ಟುಸುದು, ತಲೆ ತೆಗವದು,ಇಳಿವದು, ನುಂಗುದು ಇದೆಲ್ಲ ಆ ಆಟಲ್ಲಿ ಸಾಮಾನ್ಯ ಶಬ್ದ.

ಆಚಕರೆ ಮಾಣಿ ಬಾವ ಇಸ್ಪೇಟಿಂಗೆ ಹೊಸಬ್ಬ ಆದರೂ, ಮಾಣಿಗೆ ಬೈಗಳು ತಿಂದು ಒಳ್ಳೆತ ಅನುಭವ ಇದ್ದನ್ನೇ, ಆದರೂ ಇದು ಕುಶಾಲಿಂಗೆ ಬೈವದು ಹೇಳಿ ಅವಂಗೆ ತಲಗೇ ಹೋಯಿದಿಲ್ಲೆ , ಯೇವತ್ತಿನ ಹಾಂಗೆ ಮೋರೆ
ದಪ್ಪ ಮಾಡಿತ್ತಿದ್ದ°. ಅವ° ಗುಲಾಮನ ಬೇಕಪ್ಪಗ ಇಳುಸಿದ್ದ°ಯಿಲ್ಲೆ ಹೇಳಿ ಹೊಸಮನೆ ಅಜ್ಜ° ಬೈದ್ದಾತ, ಪುಟ್ಟಕ್ಕನಿಂದಲೂ ಜೋರು ಬೊಬ್ಬೆ- ಅಜ್ಜಕಾನ ಬಾವನ ಬೀಸಾಳೆ ಒಂದರಿ ನಿಂದಿದು. ಪಕ್ಕನೆ ತಿತಿಯೇ ನಿಂದತ್ತು ಗ್ರೇಶೆಕ್ಕು ಎಲ್ಲೋರು!
ಮನಿಕ್ಕೊಂಡಿದ್ದ ಶರ್ಮ ಮಾವ° ಪಿಡಿ ನೋಡ್ತವೋ ಹೇಳಿ ಸಂಶಯ ಬಂದ ಪಂಜ ಚಿಕ್ಕಯ್ಯ ಎರಡ್ಡು ಬೈದವು (ಕುಶಾಲಿಂಗೆ!) - 'ಆಡ್ತಿದ್ರೆ ಸಾಬೀತಿಲಿ ಆಡೆಕ್ಕು, ಇದೆಂತದ್ದು? ಇನ್ನೊಬ್ನ ಕೈ ನೋಡಿ ಇಳೀಲಾಗ ಹೇಳಿ ಗೊತ್ತಿಲ್ಯಾ ನಿನಿಗೆ?' - ಪಂಜ ಹೊಡೆಲಿ ರಜ್ಜ ಮೋಡಿ ಭಾಷೆ ಇದಾ, ಕನ್ನಡ ಒತ್ತಿದ್ದು. 'ಪಂಜ ಭಾಷೆ' ಹೇಳಿಯೇ ಹೇಳುದು ಅದರ. ಆಚಕರೆ ಕೂಸಿನ (ಮಾಣಿಯ ತಂಗೆ) ಮೂಡ್ಲಾಗಿ ಕೊಟ್ಟ ಕಾರಣ ಎಂಗೊಗೆಲ್ಲ ಆ ಭಾಷೆ ಪರಿಚಯ ಆತು.
ಶರ್ಮ ಮಾವಂಗೆ ಬಿದ್ದ ಬೈಗಳು ಕೇಳಿ ಎಲ್ಲೊರು ನೆಗೆ ಮಾಡಿದವು, ಹೊಸ ಮನೆ ಅಜ್ಜನ ಬಿಟ್ಟು.
:-) ಎಲ್ಲೋರ ನೆಗೆ ನಿಂದ ಮತ್ತೆ 'ಏ°' ಹೇಳಿದವು ಒಂದರಿ.

ಪಿಡಿ ಇಳಿವಗಳೂ ಸುಮಾರೆಲ್ಲ ಸೂಕ್ಷ್ಮಂಗೊ ಇದ್ದು. ಒಂದರಿ ವಾಸ್ದೇವಟ್ಟ° ಆಟೀನು ಎಕ್ಕ°ನ ಎತ್ತಿ ಬಡುದವು. ಹತ್ತರೆ ಕೂದ ಗೋವಿಂದ ಬಟ್ರು - ಎದುರು ಪಾರ್ಟಿಯವು - 'ಹಾ, ಆಟ ಮುಗೀತು' ಹೇಳಿದವು. ಎಂತಕೆ ಹೇಳಿರೆ, ಅವರಿಂದಲೂ ಅತ್ಲಾಗಿ ಕೂದ ಆಚಕರೆ ಮಾವ°- ವಾಸ್ದೇವಟ್ರ ಪಾರ್ಟಿ - ಆಟೀನು ನವಿಲ°ನ ಆಗಂದ ಕಟ್ಟಿ ಮಡಗಿತ್ತಿದ್ದವು- ಇನ್ನಾಣ ಸರ್ತಿಗೆ ಇಳಿವಲೆ ಸೂಕ್ಷ್ಮ ತೋರುಸಿ ಕೊಟ್ಟದು. ಅನುಭವ ಆ ಮೂರು ಜೆನಕ್ಕೂ ಇದ್ದ ಕಾರಣ ಎಂತ ಆವುತ್ತಾ ಇದ್ದು ಹೇಳ್ತದು ಗೊಂತಾಗಿತ್ತು. ಆಚಕರೆ ಮಾಣಿಗೆ ಬಿಟ್ಟು.
;-( ಆಚಕರೆ ಮಾವ° ಆಟೀನು ನವಿಲನ ತಿರುಗಿಸಿ ಬಿಟ್ಟಪ್ಪಗ, ಮತ್ತಾಣದ್ದರ್ಲಿ ತುರ್ಪು ಇಸ್ಪೇಟು ಗುಲಾಮನ ಇಳಿತ ಹೇಳಿ ಅದೇ ಪಾರ್ಟಿಯ ಶರ್ಮ ಮಾವಂಗೆ ಗೊಂತಾಗಿ, ಅದನ್ನೇ ಇಳುದು ಆ ಆಟ ಮುಗುಶಿದವು. ಅವೆಲ್ಲ ಇಸ್ಪೇಟು ಆಡುದು ಇಂದು ನಿನ್ನೆ ಅಲ್ಲ ಬಾವ, ಸುಮಾರು ಹತ್ತೈವತ್ತು ಒರಿಷ ಆತಲ್ದ? ಹಾಂಗಾಗಿ ಇಂತಾ ಸಂಜ್ಞೆ, ಸೂಕ್ಷ್ಮ, ಸೂಚನೆಗೊ ಧಾರಾಳ ಬಳಕೆಲಿ ಇದ್ದು. ಆಚಕರೆ ಮಾಣಿ ಇನ್ನುದೆ ಕಲಿಯೇಕ್ಕಷ್ಟೇ. ಎಂಗಳ ಊರು ಗೊಂತಿಪ್ಪ ಎಲ್ಲೋರಿಂಗೂ ಇದೆಲ್ಲ ಇಸ್ಪೇಟಿನ ಒಂದು ಅಂಗ.

ಇದು ಮದ್ಯಾನ್ನ ಆದ ಶುದ್ದಿ. ಹೊತ್ತೊಪ್ಪಗಾಣ ಆಸರಿಂಗೆ ಆದಮತ್ತೆ ಹಾಕಿದ ಕಳಕ್ಕೆ ಪರಾದಿನದ ಹರಿಮಾವಂದೇ ಕೂದ ಕಾರಣ ಆಚಕರೆ ಮಾಣಿ ಬದ್ಕಿರೆ ಬೇಡಿ ತಿಂಬೆ ಹೇಳಿ ರಟ್ಟಿದ°. ಆಗ ಮದ್ಯಾನ್ನ ಪರಾದಿನಕ್ಕೆ ಒಳ ಕೂದಿಪ್ಪಗ ಅವರ ತಲೆ ಕಳದ ಮೇಲೆಯೇ ಇತ್ತೋ ಏನೋ! ಪಾಪ. ಅಲ್ಲ- ಹಾಂಗೆ ಇದ್ದಿದ್ದರೆ ಮಾಂತ್ರ ಶಂಬಜ್ಜಂಗೆ ಕುಶಿ ಆವುತ್ತಿತು...! ಅಷ್ಟೇ ಈಗ!

ತಿತಿ ದಿನ ನೆಡು ಇರುಳು ಒರೆಂಗೆ ಒರಕ್ಕು ತೂಗಿಯೊಂಡು ಕಾದು ಪಾತಿ ಅತ್ತೆ ಹತ್ತು ಸರ್ತಿ ಊಟಕ್ಕೆ ದಿನಿಗೆಳಿದ ಮತ್ತೆ ಮನಸ್ಸಿಲ್ಲದ್ದ ಮನಸ್ಸಿಲಿ ಆಟ ನಿಲ್ಸಿದವು. ಶಂಬಜ್ಜ ಇರ್ತಿದರೆ ಉಂಡಿಕ್ಕಿ ಇನ್ನೊಂದು ಕಳ ಇರ್ತಿತು ಹೇಳಿ ಮಾತಾಡಿಗೊಂಡವು ಕೆಲವು ಹಳಬ್ಬರು. ಇರುಳಿಡೀ ಕಳ ಹಾಕಿ- ಕೂದು - ಬೊಬ್ಬೆ ಹೊಡಕ್ಕೊಂಡು- ಬೈಕ್ಕೊಂಡು- ಅಂಬಗಂಬಗ ಕಾಂಬು ಅಜ್ಜಿಯ ಏಳುಸಿ ಚಾಯ ಮಾಡುಸಿಗೊಂಡು, ಕಾಂಬು ಅಜ್ಜಿ ಪರಂಚಿಯೊಂಡು - ಓ ಹೋ ಹೋ - ಎಲ್ಲ ನೆಂಪಾತು, ಹಳಬ್ಬರಿಂಗೆ.

ಇರುಳು ಊಟ ಆದ ಮತ್ತೆ ನೆರೆಕರೆಯವು ಎಲ್ಲ ಹೆರಟೆಯೊ°, ದೂರದ ಪಂಜ ಚಿಕ್ಕಯ್ಯ ನಿಂದವು. ರಂಗ ಮಾವ 'ಅಡಕ್ಕೆ ಹೇಂಗಿದ್ದು ಬಾವ' ಹೇಳಿ ಬುಡಂದ ಮಾತಾಡ್ಸುಲೆ ಸುರು ಮಾಡಿದವು. 'ಎನಿಗೆ ಸೊಲ್ಪ ಬೆನ್ನು ನೋವು ಜೋರಿದ್ದು, ಮಜಲುಕೆರೆಗೆ ಹೋಪುದು ಎರಡು ತಿಂಗ್ಲಾತು' ಹೇಳಿ ಲೋಕಾಭಿರಾಮ ಸುರು ಮಾಡಿಗೊಂಡವು. ಯಬಾ! ಈ ಬೆನ್ನು ಬೇನೆಲಿಯುದೆ ಬಂದ ಇವರ ಉತ್ಸಾಹವೇ! ಹೇಳಿ ಕಂಡತ್ತು ರಂಗಮಾವಂಗೆ.

ಇಸ್ಪೇಟು (Spades), ಆಟೀನು (Hearts), ಡೈಮ (Diamonds), ಕ್ಲಾವರು (Clubs) ಹೇಳ್ತ ನಾಲ್ಕು ಜಾತಿ ಪಿಡಿಗಳಲ್ಲಿ ಪಳಗಿ ಹೋದ ಮನೆ ಅದು. ಅದೆಷ್ಟೋ ತಿತಿ ಜೆಂಬ್ರ ಕಳುದ್ದು ಆ ಮನೆಲಿ. ದೇವರ ತಲೆಲಿ ಹೂಗು ತಪ್ಪಿರೂ ತರವಾಡು ಮನೆಲಿ ಪಿಡಿ ತಪ್ಪ ಹೇಳಿ ಒಂದು ಗಾದೆ ಆಯಿದು ಎಂಗಳ ಊರಿಲಿ. ಎಲ್ಲರು ಬಕ್ಕು, ಚೆಂದಕ್ಕೆ ಆಡುಗು, ಶಂಬಜ್ಜ° ಇಪ್ಪಗ ಇದ್ದಷ್ಟು ಇಲ್ಲೆ ಈಗ. ಅವರ ಚೆಂಙಾಯಿಗೊಕ್ಕೆ ಎಲ್ಲ ಪ್ರಾಯ ಆತು, ಇಪ್ಪವಕ್ಕೆ ಸರಿಯಾದ ಜೆತೆಯೂ ಇಲ್ಲೆ. ಅಂತೂ ಆ ನೆಂಪಿಂಗೆ ರಂಗಮಾವ ರಜ್ಜ ಆದರೂ ಆಡುಗು, ಹೊತ್ತೊಪಗ ತಿತಿ ಮುಗುಷಿ ಆದರೂ.
ಈಗ ಎಲ್ಲಿಯೂ ಕಾಂಬಲೇ ಸಿಕ್ಕ ಬಾವ ಇಂತಾ ವೆವಸ್ತೆಗಳ. ಪಂಜ ಚಿಕ್ಕಯ್ಯನ ನೆರೆಕರೆ ಒಂದು ಮನೆಲಿ ಮೊನ್ನೆ ಒಂದು ದಿನ ಪಿಡಿ ಪ್ರಿಯರೆಲ್ಲ ಮತ್ತೆ ಒಂದಾಗಿ ಇರುಳಿಡಿ ಆಡಿದ್ದವಡ. ಆ ಊರಿನ ಅಣ್ಣಂದ್ರು ಎಲ್ಲ ಸೇರಿದ್ದವಡ. 'ತಾಪತ್ರೆ ಎಲ್ಲ ಮರ್ತು' ಹೇಳಿ ಪಂಜ ಚಿಕ್ಕಯ್ಯ ವಿವರ್ಸಿದವು.

ಆಡುವ ಎಲ್ಲರದ್ದೂ ಮಂಡೆ ಚುರ್ಕು ಆವುತ್ತು. ಲೆಕ್ಕ ಹಾಕಿ ಹಾಕಿ ಜನರ ಆಲೋಚನಾ ದೃಷ್ಟಿಗೊ ಗೊಂತಾವುತ್ತು. ರಜ್ಜ ಕುಶಾಲುಗಳೂ ಗೊಂತಾವುತ್ತು. ಒಟ್ಟಾರೆ ಜನರೊಟ್ಟಿಂಗೆ ಒಂದು ಸಂಪರ್ಕ ಬೆಳೆತ್ತು. ಬಂಧ ಗಟ್ಟಿ ಆವುತ್ತು ಹೇಳಿ ಆಚಕರೆ ಮಾಣಿ ಬಾವ° ಹೇಳ್ತ°. 'ಅವಂಗೆ ಎಂತ ಅದು ಯಾವುದೂ effect ಆಯಿದಿಲ್ಲೆ ಹೇಳಿ ಅರ್ತ ಆವುತ್ತಿಲ್ಲೆ' ಹೇಳಿ ಅಜ್ಜಕಾನ ಬಾವ° ನೆಗೆ ಮಾಡುಗು!
;-)

ಇಷ್ಟೆಲ್ಲಾ ಆಡಿರೂ, ಶಂಬಜ್ಜ° ಒಳ್ಳೆ ಕೆಲಸಗಾರ° ಆಗಿತ್ತಿದ್ದವು. ರಂಗಮಾವಂದೇ. ವಿಶೇಷ ಸಂದರ್ಬಂಗಳಲ್ಲಿ, ದಿನಂಗಳಲ್ಲಿ ಆಟ ಆಡಿಗೊಂಡಿದ್ದರೂ ಅವೆಂತ ಅದರ ಒಂದು ಜೂಜು ಆಗಿ ತೆಕ್ಕೊಂಡಿತ್ತಿದ್ದವಿಲ್ಲೆ. ಮರದಿನ ಬದಿಯಡ್ಕ ಕೆಮ್ಕಲ್ಲಿಯೋ ಮತ್ತೊ° ಸಿಕ್ಕಿರೆ ಏವತ್ತಿನ ಹಾಂಗೆ ತುಂಬಾ ಗಂಭೀರಲ್ಲಿ ಮಾತಾಡುಗು, ಪಿಡಿ ಆಟದ ಪಿಸುರು, ಕುಶಾಲು ಅಲ್ಲಿ ಇರ. ಎದ್ದ ಕೂಡ್ಲೇ ಎಲ್ಲೊರು ಪಿಡಿ ಆಟ, ಅದರ ವಾತಾವರಣ ಮರದವು. ಮನೋರಂಜನೆಯ ಸಾಧನ ಆಗಿ ಇತ್ತು ಅಷ್ಟೇ. ಅಲ್ಲಿ ಬಂದ ಶರ್ಮ ಮಾವ°, ಹರಿಮಾವ°, ಅಜ್ಜಕಾನ ಮಾವ°, ಆಚಕರೆ ಮಾವ° - ಎಲ್ಲೋರಿಂಗೂ ಅನ್ವಯ ಆವುತ್ತು ಅದು. ಇದುದೆ ಒಂದು ಸಂಸ್ಕೃತಿಯೇ ಅಲ್ದೋ!? ಒಂದು ಮನೋರಂಜನೆಯೇ ಅಲ್ದೋ? ಹೇಳಿ ಕೇಳುಗು ರಂಗಮಾವ°..

ಅಂತೂ ನಮ್ಮ ಹಳಬ್ಬರು ಅಂತೆ ಕೂದು ಕಾಡು ಹರಟೆ ಹೊಡವಗ ಹೀಂಗೊಂದು ಟೈಂಪಾಸು ಹೇಳಿ ಇಸ್ಪೇಟು ಆಡುಗು, ಆದರೆ ಅದರ ಗುಲಾಮ ಆಗಿತ್ತಿದ್ದವಿಲ್ಲೆ!

ಒಂದೊಪ್ಪ: ನಾವು ಇಸ್ಪೇಟು ಆಡೆಕ್ಕು, ಅದು ನಮ್ಮ ಆಡ್ಲಾಗ ಅಲ್ದಾ?