ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ??

ಶಂಬಜ್ಜನ ತಿತಿ ಓ ಮೊನ್ನೆ.
ಹತ್ತರಾಣ ನೆರೆಕರೆ! ಹೋಗದ್ದೆ ನಿವೃತ್ತಿ ಇಲ್ಲೆ. ಸುರುವಿಂಗೆ ಅಪ್ಪ ಹೋದವು ಮನೆಂದ. ಮತ್ತೆ ಅಜ್ಜಕಾನ ಬಾವ ಬಂದ° ಇದಾ, ಬೈಲಿಲಿ ನೆಡಕ್ಕೊಂಡು ಎಂಗಳಲ್ಲಿಗೆ. ಅವನ ಒಟ್ಟಿಂಗೆ ಮಾತಾಡಿಯೊಂಡು ಹೋದ ಒಪ್ಪಣ್ಣಂದೇ ಅಲ್ಲಿಗೇ ಎತ್ತಿದ°! ನೆರೆಕರೆ ಆದ ಕಾರಣ ಎಂತ ಬಂದದು ಹೇಳಿ ಕೇಳವು ನಿಘಂಟು.
:-)

ಹನ್ನೆರಡು ಕಳುದ ಮತ್ತೆ ಎಣ್ಣೆ ಕೊಟ್ಟವು ರಂಗಮಾವ. ತರವಾಡು ಮನೆಲಿ ತಿತಿ ಹೇಳಿರೆ ಮದಲಿಂಗೇ ಹಾಂಗೇ, ಎರಡ್ನೇ ಹಂತಿ ಉಂಡಿಕ್ಕಿ ಸೂಟೆ ಕಟ್ಟಿಗೊಂಡು ಹೋಕಡ - ಒಪ್ಪಣ್ಣನ ಅಜ್ಜ ಹೇಳುಗು. ಅಷ್ಟುದೇ ತಡವು ಹೇಳಿ. ಅದಕ್ಕೆ ಸರೀಯಾಗಿ ಬಕ್ಕು ಎಲ್ಲೊರು ಅಲ್ಲಿಗೆ. ಮದಲಿಂಗೇ ನೆಡಕ್ಕೊಂಡು ಬಂದ ಕ್ರಮ ಅದು.
ಈಗಂತೂ ಒಂದು ವಾರ ಮದಲೇ ಪಿಡಿ ಎಲ್ಲ ತಯಾರು ಮಾಡಿ ಮಡಗ್ಗು ರಂಗಮಾವ.ಮದ್ಯಾನ್ನವೇ ಸುರು ಅಕ್ಕು ಇಸ್ಪೇಟು. ಒಪ್ಪಣ್ಣಂಗೆ ಆಟ ಆಡ್ಲೆ ತುಂಬ ಗೊಂತಾಗ, ನೋಡುಲೆ ಅರಡಿಗು ಇದಾ.

ಹದಿನಾಲ್ಕನೆದೋ-ಹದಿನೈದನೆದೋ ತಿತಿ ಆದ ಕಾರಣ ಕೂಗುವೋರು ಆರೂ ಇತ್ತಿದ್ದವಿಲ್ಲೆ
:-|. ಲೋಕಾಬಿರಾಮ ಎಲ್ಲ ಮಾತಾಡಿಗೊಂಡು ಗಲಗಲ ಆಯ್ಕೊಂಡು ಇತ್ತು.

ಅಜ್ಜಕಾನ ಬಾವ ಪೇಪರು ಓದಿ ಮಡುಸಿ ಮಡಗಿದ್ದ°. ಸೆಕೆಗೆ ಬೀಸಾಳೆಲಿ ಗಾಳಿ ಹಾಯ್ಕೊಂಡು ಇದ್ದ°.
ಆಚಕರೆ ಮಾಣಿ ಪಿಸುರಿಲಿ ಉಗುರು ಕಚ್ಚಿಯೊಂಡು ಕೂಯಿದ° - ಪುಟ್ಟಕ್ಕನ ಬಾಯಿಗೆ ಕೋಲು ಹಾಕಿ ಎಂತದೋ ಪರಂಚಿಸಿಯೊಂಡಿದ°, ಪಾಪ.
ಗುಣಾಜೆ ಮಾಣಿ ಒಳ್ಳೆತ ಟೆನ್ಷನಿಲಿ ಇತ್ತಿದ್ದ°. ಪೇಪರು ಇನ್ನೂ ಓದಿ ಮುಗುದ್ದಿಲ್ಲೆ, ಅವ° ಹಾಕಿದ ಲೆಕ್ಕಂದ ಸುಳ್ಯ ಹೊಡೆಲಿ ನೂರಇಪ್ಪತ್ತೆಂಟು ವೋಟು ನಳಿನಿಂಗೆ ಜಾಸ್ತಿ ಬಯಿಂದಡ. ಅದು ಹೇಂಗೆ ಹೇಳಿ ಗೊಂತಾಗದ್ದೆ ತಲೆ ತೊರುಸಿಗೊಂಡು ಇತ್ತಿದ್ದ°.
ಎನಗಪ್ಪದು, ಆಚಕರೆ ಮಾಣಿಯ
ಉಗುರು ಕಚ್ಚುದು, ಗುಣಾಜೆ ಮಾಣಿಯ ತಲೆ ತೊರುಸುದು, ಎರಡೂ ಅಬ್ಯಾಸ ಒಬ್ಬಂಗೇ ಇದ್ದಿದ್ದರೆ ಎಷ್ಟು ಹೇಸಿಗೆ, ಅಲ್ದಾ? ಎಬೆಕ್ಕ್-ಲೆ.. :-)

ಹೀಂಗೆ ಅರ್ದ ಗಂಟೆ ಕಳಾತು, ಮಂತ್ರ ಇನ್ನೂ ಮುಗುದ್ದಿಲ್ಲೆ...
ತಿತಿ ಮುಗಿವ ಹೊತ್ತಾತು. ಹೊಟ್ಟೆಲಿಪ್ಪ ಹುಳು ಪೂರ ಸತ್ತಾತು ಹೇಳಿದ° ಈಚಕರೆ ಪುಟ್ಟ°.
:-)
ಕ್ಷಣುವಿಂಗೆ (ಪರಾದಿನಕ್ಕೆ) ಕೂದ ಹರಿಮಾವಂಗೆ ಗೆಂಟು ಬೇನೆ ಸುರು ಆತೋ ಏನೋ, ಪಾಪ..!
ಒಳ ಬಟ್ಟಮಾವ° ಮಂತ್ರ ಹೇಳುದು ಕೇಳಿತ್ತು.
.....ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ ||

ಈ ಹಶು ಹೊಟ್ಟೆಲಿ ಮಂತ್ರ ಹೇಳ್ತವಲ್ದ, ಆರಿಂಗೆ ಅರ್ತ ಆವುತ್ತು ಬೇಕನ್ನೇ? ಹೇಳಿ ನೆಗೆ ಮಾಡಿದ° ಅಜ್ಜಕಾನ ಬಾವ°.
ಮಾಷ್ಟ್ರು ಮಾವ° ಬಂದಿತ್ತಿದ್ದವಲ್ದ ತಿತಿಗೆ, ಅಜ್ಜಕಾನ ಬಾವನಿಂದಲೇ ಅತ್ಲಾಗಿ ಎಲೆ ತಿಂದುಗೊಂಡು ಕೂದಿತ್ತಿದ್ದವು. ಅವಕ್ಕೆ ಮಂತ್ರಂಗಳದ್ದು, ಶ್ಲೋಕದ್ದು ಎಲ್ಲ ಅರ್ತ ಗೊಂತಿಕ್ಕು. ಸಂಸ್ಕೃತ, ಜ್ಯೋತಿಷ್ಯ ಎಲ್ಲ ಬಕ್ಕು. ಹಾಂಗೇಳಿ ಅವೆಂತ ಸಂಸ್ಕೃತ ಮಾಷ್ಟ್ರಲ್ಲ, ಬೇರೆಂತದೋ. ಆದರೆ ಅವರ ಅಪ್ಪ ವಿದ್ವಾಂಸರಡ ಮದಲಿಂಗೆ, ಹಾಂಗೆ ನೆತ್ತರಿಲಿ ಬಂದದು- ಹೇಳಿ ಹೇಳುಗು ಕೆಲವು ಜೆನ. ನೆತ್ತರಿಲಿ ಬಪ್ಪದು ಸಕ್ಕರೆ ಕಾಯಿಲೆ ಮಾಂತ್ರ ಹೇಳಿ ಇನ್ನು ಕೆಲವರ ವಾದ. ಅದಿರಳಿ. ಅವರ ಹತ್ತರೆ ಕೇಳಿದೆ - ಎಂತರ ಈ ಮಂತ್ರದ ಅರ್ತ ಅಂಬಗ? ಹೇಳಿ. ಬಟ್ಟಮಾವಂಗೆ ಗೊಂತಿಲ್ಲದ್ದ ಕೆಲವೂ ಅವಕ್ಕೆ ಗೊಂತಿಕ್ಕು. ಅವಕ್ಕೆ ಒಂದು ಮಂತ್ರ ಬತ್ತು ಹೇಳಿ ಆದರೆ ಅದರ ಅರ್ತ ಗೊಂತಿದ್ದು - ಖಂಡಿತ. ಕೇಳಿರೆ ಮಾಂತ್ರ ಹೇಳುಗಷ್ಟೇ. ಅವು ವಿವರುಸಿದವು.

ತಿತಿಲಿ ಅಕೆರಿಗೆ ಬತ್ತ ಒಂದು ಕಥೆ ಆಡ ಅದು.
ಗುರುಕುಲಲ್ಲಿ ಇದ್ದ ೭ ಜನ ಮಕ್ಕೋ ಗುರುಗೊಕ್ಕೆ ಅರಾಡಿಯದ್ದೆ (ಗೊಂತಾಗದ್ದ ಹಾಂಗೆ) ಒಂದು ಎತ್ತಿನ ಕೊಂದು ತಿಂದವಡ. ತಿಂಬ ಮೊದಲು 'ಇದು ನಮ್ಮ ಪಿತೃಗೊಕ್ಕೆ' ಹೇಳಿ ಒಂದು ತುಂಡು ತೆಗದು ಮಡಗಿತ್ತಿದ್ದವಡ. ಗುರುಗೊಕ್ಕೆ ಅವು ಮಾಡಿದ ತಪ್ಪು ಗೊಂತಾಗಿ ಶಾಪ ಕೊಟ್ಟವಡ. ಅದರಿಂದಾಗಿ ಬೇರೆ ಬೇರೆ ದಿಕ್ಕೆ ಬೇರೆ ಬೇರೆ ಜನ್ಮಲ್ಲಿ ಹುಟ್ಟಿ ಬಂದವಡ. ಅಕೆರಿಗೆ ೫ ಜೆನ ಒಂದು ರಾಜ್ಯಲ್ಲಿ ವೇದಪಾರಕ ಬ್ರಾಮ್ಮರಾಗಿ ಹುಟ್ಟಿದವಡ. ಮಂತ್ರ ಎಲ್ಲ ಕಲ್ತ ಮತ್ತೆ 'ಎಂಗೊ ಮೋಕ್ಷಕ್ಕೆ ಹೊವುತ್ತೆಯೊ°' ಹೇಳಿ ಅವರವರ ಮನೆಲಿ ಹೇಳಿದವಡ. ಎಂಗೊಗೆ ಗತಿ ಎಂತರ ಹೇಳಿ ಅಪ್ಪಮ್ಮ ಕೇಳಿ ಅಪ್ಪಗ, ಒಂದು ಶ್ಲೋಕ ಬರದು ಕೊಟ್ಟವಡ:

ಸಪ್ತವ್ಯಾಧಾ ದಶಾರ್ಣೇಶು ಮೃಗಾಃ ಕಾಲಾಂಜನಾಗಿರೌ |
(ನಾವು ಏಳು ಜೆನ - ದಶಾರ್ಣ ಹೇಳ್ತಲ್ಲಿ ಬೇಡಂಗೊ ಆಗಿಯೂ, ಕಾಲಾಂಜನಾ ಹೇಳ್ತ ಪರ್ವತಲ್ಲಿ ಜಿಂಕೆಗೊ ಆಗಿಯೂ, )
ಚಕ್ರವಾಕಾ ಶರದ್ವೀಪೇ ಹಂಸಾ ಸರಸಿ ಮಾನಸಿ ||
(ಶರದ್ವೀಪಲ್ಲಿ ಚಕ್ರವಾಕ ಪಕ್ಷಿಗೊ ಆಗಿಯೂ,  ಮಾನಸ ಸರೋವರಲ್ಲಿ ಹಂಸಂಗೊ ಆಗಿಯೂ  )
ಯೇಸ್ಮಿನ್ ಜಾತಾ ಕುರು ಕ್ಷೇತ್ರೇ ಬ್ರಾಹ್ಮಣಾ ವೇದ ಪಾರಕಾಃ|
(ಹುಟ್ಟಿತ್ತಿದ್ದೆಯೊ°. ಪ್ರಸ್ತುತ ಎಂಗೊ ಐದು ಜೆನ ಕುರುಕ್ಷೇತ್ರಲ್ಲಿ ವೇದಪಾರಕರಾಗಿ ಇದ್ದೆಯೊ°.)
ಪ್ರಸ್ತುತಾ ದೀರ್ಘಮಧ್ವಾನಂ ಯೂಯಮ್ ಕಿಮವಸೀದತಾ ||
(ಈಗ ಒಂದು ದೀರ್ಘವಾದ ಪ್ರಯಾಣಲ್ಲಿ ಹೆರಟಿದೆಯೊ°, ನಿಂಗೊ ಎಂತ ಮಾಡ್ತಿ?)

ಈ ಮೇಗಾಣ ಶ್ಲೋಕ ಬರದು (ಶ್ಲೋಕ ಮಾಂತ್ರ, ಅರ್ತ ಬರದ್ದವಿಲ್ಲೆ ಆತಾ..
:-) ) - ಇದರ ರಾಜ-ಮಂತ್ರಿಗೆ ತೋರುಸಿ, ಹೇಳಿ.
ಈ ಮೊದಲು ಎಲ್ಲೆಲ್ಲಿ ಎಂತೆಂತ ಆಗಿ ಹುಟ್ಟಿದ್ದೆಯೋ° ಹೇಳಿ ಬರದ ಆ ಶ್ಲೋಕದ ಕೊನೆಗೆ 'ಎಂಗೊ ಈಗ ದೀರ್ಘವಾದ ಪ್ರಯಾಣಲ್ಲಿ ಹೊವುತ್ತಾ ಇದ್ದೆಯೋ°, ನಿಂಗೊ ಎಂತ ಮಾಡ್ತಿ- ಹೇಳಿ ಆ ರಾಜ-ಮಂತ್ರಿಗೆ ಒಂದು ಪ್ರಶ್ನೆ ಇತ್ತಡ .ಅದರ ಓದಿ ಅಪ್ಪಗ ಅವಕ್ಕೆ ನೆಂಪಾತು, ನಾವುದೇ ಅವರ ಒಟ್ಟಿಂಗೆ ಇತ್ತು ಹೇಳುದು. ಈ ಏಳು ಸಂಸಾರದ ಭವಿಷ್ಯವ ಭದ್ರ ಪಡುಸಿಕ್ಕಿ ಅವುದೆ ಇವರೊಟ್ಟಿಂಗೆ ಬಂದು ಸೇರುತ್ತವು, ಮೋಕ್ಷದ ದಾರಿಲಿ ನೆಡವಲೆ ಮತ್ತೆ ಒಟ್ಟು ಸೇರುತ್ತವು. ಅಂದು ಎತ್ತಿನ ತಿಂಬಗ ಅವರ ಪಿತೃಗೊಕ್ಕೆ ಮಡಗಿದ ಕಾರಣ ಪೂರ್ವಜನ್ಮದ ನೆಂಪು ಅವಕ್ಕಿತ್ತು'. ಹೇಳಿ ಹೇಳಿದವು.

ನಮ್ಮೊರ ಕಲ್ಪನೆ ಎಷ್ಟು ಚೆಂದ!
ಜನ್ಮ, ಮರುಜನ್ಮ, ಮತ್ತಾಣ ಜನ್ಮ, ಪಾತಾಳ, ದೇವಲೋಕ ಮೋಕ್ಷ... ಅಂತೂ ಈ ಲೋಕಲ್ಲಿಪ್ಪಗ ಮನುಷ್ಯ ಹೇಂಗೆ ಸಕ್ರಿಯನೋ, ಜೀವನ ಆದ ಮತ್ತೆಯೂ ಹಾಂಗೇ.
ಮನುಷ್ಯನ ಭಾವನೆಯ ಹಾಂಗೆ ಅವನ ಆತ್ಮವೂ ನಿತ್ಯ ಚರ. ನಿಂದ ನೀರಿನ ಹಾಂಗೆ ಅಪ್ಪಲಿಲ್ಲೆ. ಈ ಜೀವನ ಮುಗುದ ಮತ್ತೆ ಇನ್ನೊಂದು ಇದ್ದು, ಅದರಿಂದ ಮತ್ತೆ ಮತ್ತೊಂದು ಸರ್ತಿ- ಮೋಕ್ಷದ ಒರೆಂಗೂ. ಹಾಂಗಾಗಿ ಈ ಸರ್ತಿ ಪುಣ್ಯ ಮಾಡಿರೆ ಇನ್ನಾಣದ್ದು ಸುಲಾಬ ಇರ್ತು. ಮೋಕ್ಷಕ್ಕೆ ಹತ್ತರೆ ಆವುತ್ತು... ಹೀಂಗೆ.
ನಾವೆಲ್ಲರೂ ಒಂದು ದೀರ್ಘ ಪ್ರಯಾಣಲ್ಲಿ ಇದ್ದು, ನಮ್ಮ ಮನುಷ್ಯ ಜನ್ಮದ ಜೀವಿತಾವಧಿ ಹೇಳಿರೆ ಸೌರವ್ಯೂಹದ ಆಯುಸ್ಸಿನ ಒಂದು ತೃಣವೂ ಅಲ್ಲ, ಇಪ್ಪಷ್ಟು ದಿನ ಮರಿಯಾದಿಲಿ, ಚೆಂದಕ್ಕೆ ಬದುಕ್ಕೆಕ್ಕು, ಇನ್ನಾಣ ಜನ್ಮವೂ ಅನುಕೂಲಕರ ಇರೆಕ್ಕು ಹೇಳಿ ಜನ ಈ ಜನ್ಮಲ್ಲಿ ಧರ್ಮದ ದಾರಿಲಿ ನೆಡೆತ್ತವು.

ಈ ಪುರ್ಬುಗೊ-ಮಾಪಳೆಗೊ ಎಲ್ಲ ಪುನರ್ಜನ್ಮ ನಂಬುತ್ತವಿಲ್ಲೆ ಇದಾ.
ಇಲ್ಲಿಂದ ಸತ್ತ ಮತ್ತೆ ಸೀದಾ ಹೋಗಿ ನರಕಲ್ಲಿ ನಿಂಬದಡ- ಸಾಲುಕಟ್ಟಿ, ಸೊಸೈಟಿಲಿ (ಸ್ಟೋರಿಲಿ) ಚಿಮ್ಣೆಣ್ಣೆಗೆ ನಿಲ್ಲುತ್ತ ಹಾಂಗೆ. ಅವರ ದೇವರು ಒಂದು ದಿನ ಬಂದು ತೀರ್ಪು ಕೊಡುದಡ, ಪುರುಸೋತ್ತಿಲಿ. 'ನಿನ್ನದು ಇಷ್ಟು ಪಾಪ, ನಿನ್ನದು ಇದು ತಪ್ಪು, ಇದು ಸರಿ, ನಿನಗೆ ಸ್ವರ್ಗ, ನಿನಗೆ ನರಕ- ಹೇಳಿ. ಅಲ್ದೋ ಹೇಳಿ ಕೇಳಿದೆ. "ಹ್ಮ್, Dooms Day/ Judgement Day ಹೇಳಿ ಹೆಸರು ಆ ದಿನಕ್ಕೆ"- ಹೇಳಿದವು ಮಾಷ್ಟ್ರು ಮಾವ°.
ಈಚಕರೆ ಪುಟ್ಟ ಹೇಳಿದ, 'ಹಟ್ಟಿ ಮಾಡಿಂಗೆ ಮುಳಿ ಒಂದು ಹಾಕು ಮಾರಾಯ' ಹೇಳಿ ದೂಜ ಪುರ್ಬುವಿನ ಹತ್ತರೆ ಹೇಳಿರೆ ಒಂದು ತಿಂಗಳಾದರೂ ಬತ್ತಿಲ್ಲೆ.  ಇನ್ನು ಅವರ ದೇವರಿಂಗೆ ಯೇವತ್ತು ಪುರುಸೋತ್ತಾವುತ್ತೋ!  ಹೇಳಿ.
ದೇವರ ತೀರ್ಪಿಲಿ ೭೨ ಕನ್ಯೆಗೊ ಇಪ್ಪ ಸ್ವರ್ಗ ಜೀವನ ಪ್ರಾಪ್ತಿ ಆಯೆಕ್ಕು ಹೇಳಿ ಆರಾರ ಕೊಂದುಗೊಂಡು, ಜಿಹಾದಿ, ಮಣ್ಣು ಮಸಿ ಹೇಳಿ ಎಂತಕೆ ಮೋಕ್ಷಕ್ಕೆ ದೂರ ಅಪ್ಪದು? ಧರ್ಮಕ್ಕೆ ಎಂತಕೆ (ಕೆಟ್ಟ) ಹೆಸರು ತಪ್ಪದು?
ನಿಂಗಳ ದೀರ್ಘ ಪ್ರಯಾಣಲ್ಲಿ, ಈ ಜನ್ಮಲ್ಲಿ ಎಂತ ಮಾಡಿಗೊಂಡಿದ್ದಿ?  ಮೋಕ್ಷಕ್ಕೆ ಹತ್ತರೆ ಆವುತ್ತಾ ಇದ್ದಿರನ್ನೆ!

ಅಂತೂ ಹೊತ್ತೋಪಗ ಬಾಳೆ ಹಾಕಿದವು, ಎಂಗೊ ಎಲ್ಲ ಉಂಡಿಕ್ಕಿ ಹೆರಟೆಯೊ°, ಗುಣಾಜೆ ಮಾಣಿಗೆ ಟೆನ್ಷನ್ ಮುಗುದ್ದೇ ಇಲ್ಲೆ. ಬಪ್ಪ ಜನ್ಮಲ್ಲಿ ಕಮ್ಮಿ ಅಕ್ಕೋ ಏನೋ.

ಒಂದೊಪ್ಪ: ನಮ್ಮ ಅಜ್ಜಂದ್ರ ಕೆಲವೆಲ್ಲ ಸಾಂಘಿಕ ಆಲೋಚನೆಗೊ ಅಂದಿಂಗೂ, ಇಂದಿಂಗೂ, ಎಂದೆಂದಿಂಗೂ ಪ್ರಸ್ತುತ, ಅಲ್ದೋ?