ಬೂತ ಕಟ್ಟುವ ಕೋಟಿ ತೀರ್ಪು ಕೊಟ್ಟತ್ತಡ

ಒರಿಷಕ್ಕೊಂದರಿ ಬೂತ ನೇಮ ಆವುತ್ತು ಎಂಗಳ ಬೈಲಿಲಿ.
ಎಡಪ್ಪಾಡಿ ಬೈಲಿಂದ ಹಿಡುದು ಅಜ್ಜಕಾನ ಬಯಲುವರೆಗೆ ಅರಿಶಿನ ಪ್ರಸಾದ ತೆಕ್ಕೊಂಬಲೆ ಬಕ್ಕು, ಆಚಕರೆ ಮನೆ ಮೇಲ್ಕಟೆ ಇಪ್ಪ ಪಾರೆಲಿ ಬೂತದ ಕಲ್ಲು ಇಪ್ಪದಿದ.ಹೆಣ್ಣು ಬೂತ, ಹಾಂಗೆ ಊರಿಲಿ ಅದಕ್ಕೆ ಇನ್ನೊಂದು ಹೆಸರು 'ಪಾರೆಅಜ್ಜಿ' ಹೇಳಿ. ಬಂಡಾರ ಪೂರ ಆಚಕರೆ ಹೆರಿ ಮನೇಲಿ ಇಪ್ಪದು. ಮಾಣಿ ಬಾವನ ಆಚಮನೆ. ಬಂಡಾರದ ಮನೆ ಹೇಳಿಯೂ ಹೇಳ್ತವದಕ್ಕೆ. ಸುಮಾರು ನೂರೈವತ್ತು ಒರಿಷ ಹಿಂದಾಣ ಮನೆ, ಮುರುದು ಹೊಸತ್ತು ಕಟ್ಟುವ ಏರ್ಪಾಡಿಲಿ ಇದ್ದವು ಮನೆ ಹೆರಿಯ ರಂಗಮಾವ°.

ಮಾಯಿಪ್ಪಾಡಿ ಹೊಡೆಣ ಪರವಂಗೊ ಕಟ್ಟುಲೆ. ಆಚ ಒರಿಷ ವರೆಗೆ ಪುತ್ತ°, ಈಗ ಅದರ ಮಗ ಕೋಟಿ ಕಟ್ಟುದು. ೮೫ ಒರಿಷ ವರೆಗೂ ಕಟ್ಟಿಗೊಂಡು ಇತ್ತು ಪುತ್ತ. ಅಕೆರಿಗೆ- ಎಲ್ಲಿಯೋ ಅಡ್ಕಸ್ಥಳ ಹೊಡಿಲಿ ಅಡ- ಎಷ್ಟು ಪ್ರಾರ್ಥನೆ ಮಾಡಿರೂ ದರುಸುಲೆ, ಬೂತ ದರ್ಸೆಕ್ಕಿದಾ - ಹಾಂಗೆ ದರುಸುಲೆ ಆವೇಶವೇ ಬಾರ ಅಡ. ಅದೇ ಅಕೆರಿ. ಮತ್ತೆ ಎಲ್ಲ ಅದರ ಮಗ ಕೋಟಿ ಕಟ್ಟುದು. ತಮ್ಮ ಮೋಂಟನೂ ಕಟ್ಟುತ್ತು, ಆದರೆ ಎಂಗಳ ಬೈಲು ಕೋಟಿಗೆ ಬಂತಡ.

ಬೂತ ಹೇಳಿರೆ ಪುರ್ಬುಗೊ ಹೇಳುವ ಸೈತಾನ ಅಲ್ಲ - ತೆಂಕ್ಲಾಗಿ & ಮಂಗ್ಳೂರು ಹೋಬಳಿಲಿ ಆರಾಧನೆ ಇಪ್ಪ ಉಪ ದೇವರುಗೊ. ಸಾಮಾನ್ಯವಾಗಿ ಬೂತಂಗೊಕ್ಕೆ ಬ್ರಾಮ್ಮರು ಹತ್ತುಗಟ್ಲೆ ಹೋಕಷ್ಟೇ. ಜಾಸ್ತಿ ಹಚ್ಚಿಗೊಂಡಿದವಿಲ್ಲೆ. ಪಾರೆ ಅಜ್ಜಿಗೆ ಹಾಂಗಲ್ಲ- ರಜ್ಜ ವಿಶೇಷದ ಬೂತ, ಬ್ರಾಮ್ಮರು ತುಂಬಾ ಹತ್ತರೆ. ತಿಂಗಳಿಂಗೊಂದರಿ ಸಂಕ್ರಮಣಕ್ಕೆ ಪೂಜೆ ಅಕ್ಕು,ಬ್ರಾಮ್ಮರೆ ಮಾಡೆಕ್ಕು.ಊರವು ಪೂರ ಪ್ರಾರ್ತನಗೆ ಬಕ್ಕು.ಈಗ ರಂಗ ಮಾವ. ನೇಮದ ದಿನ ಬಂಡಾರ ತೆಗವ ಕ್ರಮ ಎಲ್ಲ ಅವರದ್ದೇ. ಮದಲಿಂಗೆ ರಂಗ ಮಾವನ ಅಪ್ಪ ಶಂಭಜ್ಜ ಮಾಡಿಗೊಂಡು ಇದ್ದದು ಒಪ್ಪಣ್ಣಂಗೆ ನೆಂಪಿದ್ದು.

ನೇಮಕ್ಕೆ 'ಎದುರು ನಿಂಬದು' ಹೇಳಿ ಇದ್ದಿದಾ, ಪಾರೆ ಅಜ್ಜಿಗೆ ಬಂಡಾರದ ಮನೆಯವೆ ನಿಂಬದು. ಈಗ ಆಚಕರೆ ರಂಗಮಾವ ನಿಂಬದು. ಬೂತ ಕಟ್ಟುದು ಹೇಂಗೆ ವಂಶ ಪಾರಂಪರ್ಯವೋ, ಹಾಂಗೆ, ಇದುದೆ. ಪುತ್ತನ ಕಾಲಕ್ಕೆ ಶಂಬಜ್ಜ, ಈಗ ಕೋಟಿಯ ಕಾಲಕ್ಕೆ ರಂಗಮಾವ. ಪಾರೆ ಅಜ್ಜಿಗೆ ಕೋಟಿಯ ಗುರ್ತ ಆದ್ದು ಮೊನ್ನೆ ೩ ಒರಿಷ ಹಿಂದೆ. ರಂಗ ಮಾವನ ಗುರ್ತ ಆಗಿ ಹದಿನಾಲ್ಕೊರಿಷ ಕಳುತ್ತು. ಹಾಂಗೆ ನೋಡಿರೆ ರಂಗಮಾವನ ಪ್ರಾಯವೇ, ಕೋಟಿಗೆ. ರಜ್ಜ ಜಾಸ್ತಿಯೇ ಬೇಕಾರೆ.

ಶಂಬಜ್ಜ ಹೇಳಿರೆ ಪುತ್ತಂಗೆ ದೇವರು ಇದ್ದ ಹಾಂಗೆ. ಎಲ್ಲಿ ಸಿಕ್ಕಿರೂ ಅಡ್ಡ ಬೂರ್ಯೆ ಬಾಣಾರೆ ಹೇಳುಗು, 'ಹಾಂ, ಪುತ್ತಾ' ಹೇಳುಗಡ, ಅಜ್ಜ. ವೇಷ ಇಬ್ರದ್ದೂ ಸಾಮಾನ್ಯ ಒಂದೇ ನಮೂನೆ. ಅಂಗಿ ಹಾಕವು , ಜೊಟ್ಟು ಇಕ್ಕು, ಕಂಬಿ ಶಾಲು ಹೊದಗು, ಪುತ್ತಂಗೆ ಕುಂಕುಮ, ಅಜ್ಜಂಗೆ ಗಂಧ-ವಿಬೂತಿ, ಒಬ್ಬ ಸಮಾಜಲ್ಲಿ ಮೇಲಣ ವರ್ಗ, ಇನ್ನೊದು ಕೆಳಾಣ ವರ್ಗ, ಅಷ್ಟೇ ವೆತ್ಯಾಸ. ಪತ್ತನಾಜೆ ಕಳುದು ಪರವಂಗೆ ಪುರುಸೊತ್ತೇ ಅಲ್ದಾ? ಮಳೆಗಾಲ ಎಲ್ಲ ಬಕ್ಕಡ, ಬೇಡುಲೆ ಹೇಳಿಗೊಂಡು, ತರವಾಡು ಮನೆಗುದೆ ಬಕ್ಕು.. ಮಳೆಗಾಲ ಆದ ಕಾರಣ ಶಂಬಜ್ಜಂಗೂ ಬೇರೆ ಎಂತ ಕೆಲಸ ಇಲ್ಲೆ, ಮಣ್ಣ ಚಿಟ್ಟೆಲಿ ಕೂಪದು ಬಿಟ್ರೆ! ಬಂದರೆ ಶಂಬಜ್ಜಂಗೆ ಒಂದು ಪಟ್ಟಾಂಗಕ್ಕೆ ಜೆತೆ. ಮನೆ ಕರೆಯ ದನದ ಹಟ್ಟಿ ಬೈಪ್ಪಾಣೆಲಿ ಕೂದುಗೊಂಗು, ಅಜ್ಜಂಗೆ ಮಣ್ಣ ಚಿಟ್ಟೆಂದ ಒಂದೇ ಎತ್ತರಲ್ಲಿ ಸರೀ ಒರೆಗೆ ಆವುತ್ತಿದ. ಜೋರು ಬೊಬ್ಬೆ ಹೊಡದು ಪಟ್ಟಾಂಗ, ಈಗಾಣ ಕೂಸುಗೊ ಫೋನಿಲಿ ಮಾತಾಡಿದ ಹಾಂಗೆ - ಮೆಲ್ಲಂಗೆ ಮಾತಾಡ್ಲೆ ಅರಡಿಯ ಅವಕ್ಕೆ! ;-) ಬಾಯಿ ಚೆಪ್ಪೆ ಅಪ್ಪದಕ್ಕೆ 'ಒಂಜಿ ಪುಗೆರೆ ಇಂಚಿ ಅಡಕ್ಕುಲೆ ದೇವೆರೆ' ಹೇಳಿರೆ, ಹತ್ತರೆ ಇದ್ದ ಎಲೆ ಮರಿಗೆಂದ ಒಂದು ಗೆನಾ ಹೊಗೆಸೊಪ್ಪು- ಗಾಟು ಹಾಳಾಗದ್ದ ಹಾಂಗೆ ತಿರ್ಪಿದ್ದು- ಕುಣಿಯ - 'ಇಂದಾ...' ಹೇಳಿ ತೆಗದ್ದು ಅತ್ಲಾಗಿ ಇಡುಕ್ಕುಗು, ದಳಿ ಎಡಕ್ಕಿಲೆ ಆಗಿ. ಹೆರ್ಕಿಯೊಂಡು ಸಂತೋಷಲ್ಲಿ ತೆಕ್ಕೊಂಗು.ಕಾಂಬು ಅಜ್ಜಿ ಮಜ್ಜಿಗೆ ನೀರಿನ ಹಿಡ್ಕೊಂಡು ಹೋದರೆ ಅಂಬಗ ಕೆರಸಿದ ಕರಟ ಹಿಡಿಗು, ಎರದಷ್ಟೂ ಕುಡಿಗು. ಮೆಡಿ ಉಪ್ಪಿನಕಾಯಿ ತಂದರೆ ಕುಶಿ ಅಕ್ಕದಕ್ಕೆ, ಸೇರ್ಸಿಗೊಂದು ಮಜ್ಜಿಗೆ ಹೀರುಲೆ. ಅಜ್ಜ ತೋಟಕ್ಕೆ ಹೋಪಗ ಹಿಂದಂದಲೇ ಹೋಕು- ಮಾತಾಡಿಯೊಂಡು. ಎಂತರ ಇವರದ್ದು ಹೀಂಗುದೇ ಪಟ್ಟಾಂಗ, ಊರಿಡೀಕ ಕೇಳುಲೆ- ಹೇಳಿ ಕಾಂಬು ಅಜ್ಜಿ ಪರಂಚುಗು. ನೆಗೆ, ಬೊಬ್ಬೆ, ಹಾಸ್ಯ, ಬೈಗಳು ಎಲ್ಲ ಸೇರಿ - ಮಕ್ಕಳ ಹಾಂಗೆ ಅಕ್ಕು, ಅವು ಇಬ್ರು ತೋಟಕ್ಕೆ ಹೋದಪ್ಪಗ. ಸುಮಾರು ಅರುವತ್ತು ಒರಿಶಂದ ಹಾಂಗೆ ಮಾಡಿಗೊಂಡಿತ್ತಿದ್ದವು. ಹಾಂಗಾಗಿ ರಂಗ ಮಾವ - ಎಳ್ಯ ಬಾಣಾರ್ - ಸಣ್ಣ ಇಪ್ಪಗಳೇ ಅದಕ್ಕೆ ಗೊಂತಿದ್ದು, ಬಾಯಿಗೆ ಕೋಲು ಹಾಕಿ,
ಹಳೆ ಕಾಲದ ಕ್ರಮದ ಹಾಂಗೆ ಕನಿಷ್ಠ ೨ ಕೋಲು ದೂರ ಆದರೂ ಮಡಿಕ್ಕೊಂಗು ಪರಸ್ಪರ. ಅಜ್ಜ ಹತ್ತರೆ ಹೊಯಿದವಿಲ್ಲೆ ಹೇಳುದರಷ್ಟೇ, ಪುತ್ತ ಹತ್ತರೆ ಬಪ್ಪಲುದೆ ಪ್ರಯತ್ನ ಮಾಡಿದ್ದಿಲ್ಲೆ ಹೇಳುದು ನಿಜ. ಶಂಬಜ್ಜ ತೀರಿ ಹೋದ ಮೇಲೆ ಪುತ್ತಂಗೆ ಇವರ ನೆಂಪಾಗಿಯೊಂಡು ಇದ್ದದು ಮಾಂತ್ರ ನಿಜವೇ. ಉದಿಯಪ್ಪಗ ಬಂದರೆ, ಒಂದು ಕರಟ ಕೆರಸಿ, ಅದರ್ಲಿ ದೆತ್ತಿಯ ಕೈಲಿ ಮಜ್ಜಿಗೆ ಕುಡುದು, ಮದ್ಯಾನ್ನ ಹಾಳೆಲಿ ಉಂಡಿಕ್ಕಿ, ಹೊತ್ತಪ್ಪಗ ಕಡ್ಪದ 'ಛಾ' ವ ಅದೇ ಕರಟಲ್ಲಿ ಕುಡುದಿಕ್ಕಿ ಹೆರಡುಗು, ಈಗ ಅದು ಮನೆಯಷ್ಟಕ್ಕೆ..

ನೇಮದ ದಿನ ಹೊತ್ತೊಪ್ಪಂಗೆ ಊರವೆಲ್ಲ ಸೇರುಗು. ಒರಿಷ ಪೂರ್ತ ಆರತಿ ಎತ್ತಿದ, ಒಳ ಇಪ್ಪ ಭಂಡಾರವ ಚೆಂದಕ್ಕೆ ಹೆರ ತಪ್ಪ ಕಾರ್ಯ, 'ಬಂಡಾರ ತೆಗೆತ್ತದು' - ಹೇಳಿ. ರಂಗಮಾವನ ಕೈಂದ ಆಯೆಕ್ಕಪ್ಪದು. ಸಂಬಂಧ ಪಟ್ಟ ಕೆಲವು ಬಂಟಕ್ಕೊ, ಮುಕಾರಿಗೊ- ಎಲ್ಲ ಶಾಲು ಹಾಕಿಯೊಂಡು ಇಕ್ಕು. ಬೇಂಡುವಾಲಗ ಎಲ್ಲ ಇಪ್ಪಗ ಹೆರ ಜಾಲಿಲಿ ಕಟ್ಟಿದ ಉಯ್ಯಾಲೆಲಿ ಮಣಿ, ಮೋರೆ, ಕತ್ತಿ ಎಲ್ಲ ತಂದು ಮಡಗುದು. ತಪ್ಪಗ ನೋಡಿಗೊಂಡಿಪ್ಪ ಕೆಲವಕ್ಕೆ ದರ್ಶನ ಹಿಡಿವದುದೇ ಇದ್ದು. ಬೂತದ ಆ ಒರಿಶದ ನೇಮ ಆರಂಭ ಅಪ್ಪದು ಅಲ್ಲಿಂದ. ಬೂತ ಕಟ್ಟುವ ಜೆನ ಬಂದ ಇತರ ಜೆನಂಗಳ ಹಿಂದೆ ನಿಂದುಗೊಂಡು ಇಕ್ಕು. ಎದುರು ಬಪ್ಪಲಾಗ ಇದಾ, ಅವು. ಪಕ್ಕನೆ ಆರನ್ನೂ ಮುಟ್ಟಿ ಹೊಪಲಾಗ!

ಅದೇ ಕೋಟಿ ಪಾರೆ ಅಜ್ಜಿ ಬೂತ ಆವೇಶ ಬರುಸಿಗೊಂಡು ದರುಸುಗು. ಅರ್ಧವೇ ಗಳಿಗೆಲಿ ಅದರ ಸ್ಥಾನಲ್ಲಿ ಎಷ್ಟು ವೆತ್ಯಾಸ! ಸೂಟೆ ಹಿಡುದು ಎಲ್ಲೋರನ್ನೂ ಹೆದರುಸುಗು. ನಿತ್ಯವೂ ಅದರ ಎದುರು ಶಾಲು ಸರಿ ಮಾಡಿಗೊಂಬ ಎಷ್ಟೋ ಜೆನ ಆ ದಿನ ಅದರ ಎದುರು ಕಷ್ಟ ಹೇಳಿ ಕೂಗುಗು! ಬೇಕಾದ್ದರ ಎಲ್ಲ ತೆಕ್ಕೊಂಗು, ಸೇರಿದ ಜೆನಂಗಳ ಪ್ರಾರ್ಥನೆಗೆ ಪರಿಹಾರ ಕೊಡುಗು. ತಾಂಪಾದಿ - ತೈಯಂಪಾದಿ ಹೇಳುಗು ಕೆಲವು ಜೆನ. ಹ್ಮ್, ಅದಪ್ಪು - ಬೂತ ಕಟ್ಟಿದ ಮನುಷ್ಯನೂ ರಜ್ಜ ಬುದ್ಧಿವಂತ ಬೇಕು. ಅಲ್ಲದ್ರೆ ಎಡಿಗಾ ಈ ಬಂಟಕ್ಕಳ ಎಡೆಲಿ, ಹೇಳಿ ದೊಡ್ದವೆಲ್ಲ ಮಾತಾಡುಗು.

ವಿಷಯ ಸುರು ಅಪ್ಪದು ಇಲ್ಲಿಂದ:
ರಂಗಮಾವನ ಜಾಗೆಯ ಒತ್ತಕ್ಕೆ ಬಾಲಕೃಷ್ಣ ಬಂಟನ ಜಾಗೆ, ಅದರ ಮೆಲ್ಕಟೆ ಮೋಹನ ಬಂಟಂದು. ಅದರಿಂದಲೂ ಮೇಗೆ ಆವುತ್ತು ಪಾಡಿ ಕಟ್ಟ. ಕಟ್ಟ ಹೇಳಿರೆ ಅದು ಕೆರೆಯ ನಮೂನೆ, 'ಪಳ್ಳ' ಹೇಳಿಯೂ ಹೇಳ್ತವು ಅದಕ್ಕೆ. ರಜ್ಜ ಎತ್ತರಲ್ಲಿ ಇಪ್ಪದು. ಮದಲಿಂಗೆ ಕೆಳಾಣ ಕೆಲವು ಕೃಷಿ ಬೂಮಿಗೊಕ್ಕೆಲ್ಲ ನೀರಿನ ಆಶ್ರಯ. ಕೆರೆಂದ ಒಂದು ಮಾದು ಬಕ್ಕು, ಆ ಎರಡು ಬಂಟಕ್ಕಳ ಜಾಗೆ ಆಗಿ, ತರವಾಡು ಮನೆ ಕರೆಲಿ ಆಗಿ, ಆಚಕರೆ ಮಾಣಿಯವರ ಜಾಗೆಲಿ ಬಂದು, ಕೆಳ ಕೆಲವೆಲ್ಲ ಮನೆ ಕರೆಲಿ ಹೋಗಿ ಮತ್ತೆ ಸಾರಡಿ ತೋಡಿಂಗೆ ಸೇರುದು ಅದು. ಈಗ ಬಂಟಕ್ಕ ಎಲ್ಲ ಬೋರು ಹಾಕಿದ್ದವು, ಆದರೂ ಈ ಕಟ್ಟದ ನೀರಿನ ಗುಲಾಬಿ ಸೆಸಿಗಾರೂ ಬಿಡ್ತು ಆ ಬಂಟೆತ್ತಿ, ಪಾಲಿನ ನೀರಲ್ದಾ ಹಾಂಗೆ. ಮೋಹನನ ಮನೆಯವು ಆ ಕೆರೆಯ ಮಾದು ಇಪ್ಪ ಜಾಗಗೆ ಬೇಲಿ ಹಾಕಿ ನೀರು ಸಮಕಟ್ಟು ಬಿಡ್ತವಿಲ್ಲೆ. ತರವಾಡು ಮನೆಗೆ, ಕೆಳಾಣ ಬೈಲಿಂಗೆ ಎಲ್ಲ ನೀರು ಇದೇ ಕಟ್ಟದ್ದು ಅಲ್ದೋ?
ಆ ವಿಷಯಲ್ಲಿ ಮದಲಿಂಗೇ ನಂಬ್ರ ಇತ್ತು - ತರವಾಡು ಮನೆಯವಕ್ಕೂ ಆ ಬಂಟಕ್ಕೊಗೂ. ಮೆಡ್ರಾಸ್ ಹೈಕ್ಕೋರ್ಟೋರೆಂಗೆ ಹೊಯಿದಡ. ಮೂಲಗೇಣಿಯವಂಗೆ ನೀರಿನ ಹಕ್ಕು ಇಲ್ಲೆ ಹೇಳಿಯೋ ಎಂತದೋ ಬಂಟಕ್ಕಳ ವಾದ, ಬೂತದ ನೀರಿನ ಬೂತಕ್ಕೆ ಕೊಡ್ತಿಲ್ಲೆ ಹೇಳಿ ಬೈಲಿನವರ ವಾದ. ಕೋರ್ಟಿಲಿ ಇತ್ಯರ್ತ ಆಗದ್ದೆ ಮತ್ತೆ ಬಿಟ್ಟಿಕ್ಕಿ ಬಂದವಡ. ಇದೆಲ್ಲ ಹಳೆ ಕಾಲದ್ದು, ಅಲ್ಲಿ ಹುಕ್ರಪ್ಪ ಬಂಟ ಇದ್ದದು. ಇಲ್ಲಿ ಶಂಭಜ್ಜ - ಜವ್ವನಲ್ಲಿ. ಈಗ ರಂಗಮವನ ಕಾಲಲ್ಲಿ ಅದರ ರಾಜಿಲಿ ಇತ್ಯರ್ತ ಮಾಡುದು ಹೇಳಿ ಹೆರಟವು. ಎರಡೂ ಕಡೆಯವುದೇ. ಕೋರ್ಟ್ ಒರೆಂಗೆ ಹೋದ ಶುದ್ದಿ ಅಲ್ದೋ? ಇತ್ಯರ್ತ ಹೇಳಿರೆ,ಪಾರೆ ಅಜ್ಜಿ ಹೇಂಗೆ ತೀರ್ಪು ಕೊಡ್ತೋ ಹಾಂಗೆ ನೆಡವ ಹೇಳಿ ಮಾತಾಡಿಗೊಂಡದಡ.

ಸುರುವಿಂಗೆ 'ಅಕ್ಕು' ಹೇಳಿದ ರಂಗಮಾವಂಗೆ ತಲೆಬೆಶಿ ಸುರು ಆತು. ಎಂತಕೆ ಹೇರ್ರೆ,
ಬೂತ ಕಟ್ಟುದು ಕೋಟಿ ಇದಾ. ಮೂರು ನಾಲ್ಕೊರಿಷ ಆತಷ್ಟೆ ಸುರು ಮಾಡಿ. ಹಾಂಗಾಗಿ ಮದಲಾಣ ವಿಷಯಂಗೊ ಗೊಂತಿಲ್ಲೆ ಅದಕ್ಕೆ. ಅದು ಕೆಲಸಕ್ಕೆ ಹೋಪದು ಬಂಟಕ್ಕಳಲ್ಲಿಗೆ. ಈಗ ಮೋಹನನಲ್ಲಿಗೆ ಹೇಳಿ ಕಾಣ್ತು. ಅದರ ಅಪ್ಪ ಆದರೆ ಮನೆಗೆ ಬಂದುಗೊಂಡು ಇತ್ತು, ಸರಾಗ. ಇದು ಬಪ್ಪದು ಎರಡೇ ಸರ್ತಿ. ಬೂತ ಕಟ್ಟುವ ದಿನವುದೇ, ಮಳೆಗಾಲ ಬೇಡುಲೆ ಬಪ್ಪ ದಿನವುದೇ, ಎರಡೇ ದಿನ ಅಲ್ಲದ ಅದರ ಸಂಪರ್ಕ ಅಪ್ಪದು. ಅಂದು ಆದ ವಿಷಯಂಗ ಎಲ್ಲ ಅದಕ್ಕೆ ಹೇಳುವ ಹೇಳಿ ರಂಗ ಮಾವಂಗೆ ಅನಿಸಿದರೂ, ಅದು ಸಿಕ್ಕುತ್ತೆ ಇಲ್ಲೆ. ಅದರ ಮನೆಗೆ ಹೋಗಿ ಮಾತಾಡುಲೆ ಎಷ್ಟಾರೂ ಸರಿ ಆವುತ್ತಿಲ್ಲೆ. ಸೂರಂಬೈಲಿಲಿ ಕಾಂಬಲೆ ಸಿಕ್ಕಿರೂ ಕೈ ಮುಗುದು ದೂರವೇ ನಿಂದುಗೊಳ್ತು, ಒಳ್ಳೆ ಸಂಸ್ಕಾರ ಕೊಟ್ಟಿದು, ಪುತ್ತ ಅದಕ್ಕೆ. ನೆರೆಕರೆ ಬಟ್ಟಕ್ಕೊ ಎಲ್ಲ ಹೇಳುಲೇ ಸುರು ಮಾಡಿದವು,'ರಂಗಣ್ಣ, ನೀನು ಹೆಡ್ಡು ಮಾಡಿದೆ ಒಪ್ಪಿಗೊಂಡು' ಹೇಳಿ. ಒಂದೊಂದರಿ ಅದು ಅಪ್ಪೋ ಹೇಳಿ ಅನಿಸುತ್ತು ರಂಗಮಾವಂಗೆ.
ಈ ಒರಿಶದ ಬೂತ ಕೋಲ ಮೊನ್ನೆ ಆತು. ಪ್ರತಿ ಒರಿಶದ ಹಾಂಗೆ ನೆಡದ್ದು ಎಲ್ಲ ಕಾರ್ಯವುದೇ. ಬಿರಿವಲಪ್ಪಗ ಮಾಂತ್ರ ನೆರೆಕರೆಯವೆಲ್ಲ ಬಂದೇ ಬಯಿಂದವು- ತೀರ್ಪು ನೋಡ್ಲೇ ಆದರೂ. 'ಮಾತೆರೆಗ್ಲಾ ಸಮದರಿಕೆ ಅತ್ತೋ?' ಹೇಳಿ ಕೇಳಿತ್ತು ಬೂತ, 'ಅಂಚನೆ' ಹೇಳಿ ಹೇಳಿದವು ರಂಗ ಮಾವ.ಬೂತ ಕಟ್ಟಿದ ಕೋಟಿಗೂ ಗೊಂತಿತ್ತು, ರಂಗಮಾವಂಗೂ ಗೊಂತಿತ್ತು, ಬಾಲಕೃಷ್ಣ ಬಂಟಂಗೂ ಗೊಂತಿತ್ತು - ಈಗ ಆ ವಿಷಯ ಪ್ರಸ್ತಾಪ ಆವುತ್ತು ಹೇಳಿ. ಆಪ್ತ ವಿಷಯ ಆದ ಕಾರಣ, ಬಿರಿವಲಪ್ಪಗ ಇತ್ಯರ್ತ ಮಾಡುವ ಹೇಳಿ ಮಡಗಿದ್ದವು. ಬೂತದ ಪೂಜಾರಿ ಕೆಲಾಣಬೈಲು ಬಿರ್ಮು ಪೂಜಾರಿ ಹತ್ತರೆ ಈ ವಿಷಯ ಮದಲೇ ಹೇಳಿದ ಕಾರಣ, ಬೂತದ ಎದುರು ಪ್ರಸ್ತಾಪ ಮಾಡಿತ್ತು. 'ಪಿರಾಕುತ ತಗಾದೆ, ನೀರುತ ಬಗ್ಗೆ- ಅಪ್ಪೆನೇ ಇತ್ಯರ್ತ ಮಲ್ಪೊಡು' ಹೇಳಿ.

ಎಲ್ಲ ದಿವ್ಯ ಮೌನ.
ಸುಮಾರು ಇನ್ನೂರು ಜೆನ ಸೇರಿದ್ದು ಅಲ್ಲಿ, ನೂರು ಜೆನ ನಮ್ಮವೇ. ಐವತ್ತು ಬಂಟಕ್ಕೊ, ಮತ್ತೆ ಐವತ್ತು ಹೆರಾಣೋರ. ಪ್ರಶ್ನೆ ಕೇಳಿದ ಕೂಡ್ಲೇ ಒಂದೈದು ನಿಮಿಷ ದರುಸುತ್ತು, ಉತ್ತರ ಆಲೋಚನೆ ಮಾಡ್ಲೆ ಹೇಳುದು ಒಳಾಣ ಶುದ್ದಿ. ;-)
ದರುಸಿದ ವಾದ್ಯ ಎಲ್ಲ ನಿಂದತ್ತು. ದರುಸಾಣವೂ. ಎಂತ ಹೇಳುಗು ಈಗ ಪಾರೆ ಅಜ್ಜಿ?
ಆ ಕೆರೆ ಇಪ್ಪದು ಮೋಹನ ಬಂಟನ ಜಾಗೆಲಿ. ಆ ನೀರು ಇವಕ್ಕೆ ಕೊಡೆಕ್ಕಾ? ಬೇಡದೋ? ಕೊಡೆಕ್ಕಾರೆ ಎಂತ? ಕೊಡದ್ರೆ ಎಂತ? ಎಲ್ಲೋರಿಂಗೂ ಕುತೂಹಲ. ನಮ್ಮ ಊರಿನ ಅತ್ಯಂತ ಹಳೆಯ ತಗಾದೆ ಒಂದು ಇತ್ಯರ್ಥ ಆವುತ್ತನ್ನೇ ಹೇಳಿ.
...ಮೌನ.
ಒಂದರಿಯೇ ಎದ್ದು ನಿಂದತ್ತು ಬೂತ. ಎಲ್ಲೋರನ್ನೂ ನೋಡಿತ್ತು! ಬಂಟಕ್ಕೊ ಗೆಲುವು ನಮ್ಮದೆ ಹೇಳಿ ಬಾರಿ ಕುಶಿಲಿ ಇತ್ತಿದ್ದವು. ನೀರಿಂದಲೂ ಹೆಚ್ಚು ಹಿರಿಯರು ಕಾದಾಡಿದ ಕೇಸು ಹೇಳುದು ಹೆಚ್ಚಿನ ಮಹತ್ವದ್ದಾಗಿತ್ತು. 'ಎಂತ ಇಲ್ಲೆಯಾ°, ಅದು ಎರಡು ಮನೆಯ ಈಗೋ ಪ್ರಾಬ್ಲೆಮ್' ಹೇಳಿ ಮೊನ್ನೆ ಹುಟ್ಟಿದ ಆಚಕರೆ ಮಾಣಿಯ ಅಭಿಪ್ರಾಯ. :-)

ಬೂತ ಮಾತಾಡ್ಲೆ ಸುರು ಮಾಡಿತ್ತು.
ಪಾಡಿ ಕಟ್ಟ- ಕೆರೆ ಇಪ್ಪದು ಪಾರೆ ಬೂತದ ಕಲ್ಲಿನ ಹತ್ತರೆ, ಮೇಗೆ. ಅಲ್ಲಿಂದ ನೀರು ಬಪ್ಪದು ಈ ತರವಾಡು ಮನೆಗೆ. ಎನ್ನ ಕಲ್ಲಿನ ಹತ್ತರಾಣ ನೀರು, ಎನ್ನ ಬಂಡಾರ ಇಪ್ಪಲ್ಲಿಗೆ ಆನೇ ಬರುಸಿಗೊಂಡದು. ಎಡೇಲಿ ಇಪ್ಪ ನೀನು ಅದರ ತಡದರೆ ನಿನಗೆ ಒಂದು ಸಕ್ಕಣ ನೀರು ಸಿಕ್ಕದ್ದ ಹಾಂಗೆ ಮಾಡುವೆ. ಆ ನೀರಿನ ಪ್ರತಮ ಹಕ್ಕು ಎನ್ನ ಬಂಡಾರದ ಮನೆಗೆ. ನಿಂಗೋ ಆಗಿಯೇ ಆ ನೀರಿನ ವೆವಸ್ತೆ ಪುನಾ ಕಟ್ಟಿ ಇಲ್ಲಿ ಒರೆಂಗೆ ಬಪ್ಪ ಹಾಂಗೆ ಮಾಡಿ ಕೊಡೆಕ್ಕು. ಅಂದೇ ಆನು ಹೇಳಿದ್ದಿಲ್ಲೆಯ ಹೀಂಗೆ! - ಹೇಳಿತ್ತು ಬೂತ.
ಅಂದೇ ಹೇಳಿದ್ದಾ? ಅದೇಂಗೆ? ಈ ಕೋಟಿ ಕಟ್ಟಿದ್ದೆ ಆಚ ಒರಿಶಂದ, ಅಲ್ದಾ ಹೇಳಿ ಕೆಲವು ಕಣ್ಣು ಪಿಳಿ ಪಿಳಿ ಮಾಡಿ ನೋಡಿದವು. 'ಅತ್ತಾ ತಂತ್ರಿಲೇ?' ಹೇಳಿ ತೀರ್ಪು ನೋಡ್ಲೆ ಬಂದ ಹೊಸಮನೆ ಅಜ್ಜ, ಸುಮಾರು ೯೦ ಒರಿಷ ಆತವಕ್ಕೆ, ಅವರ ಹತ್ತರೆ ಕೇಳಿತ್ತು. ಅಂದು ಹೇಳಿದವು ಅಜ್ಜ. ಅಜ್ಜನ ಜವ್ವನಲ್ಲಿ, ಇದೆ ವಿಷಯ ಪ್ರಸ್ತಾಪ ಆಯಿಡದ. ಅರುವತ್ತು ಒರಿಷ ಹಿಂದೆ ಪುತ್ತನ ತೀರ್ಪು,ಈಗ ಅದರ ಮಗಂದು. ಆದರೆ ಅದಾಗಲೇ ಕೋರ್ತಿಂಗೆ ಹೋದ ಕಾರಣ, ಅನ್ವಯ ಮಾಡ್ಲೆ ಕಾನೂನು ಬಿಟ್ಟತ್ತಿಲ್ಲೆ. ಈ ತೀರ್ಪು ಕೋಟಿ ಹೇಳಿರೂ ಪಾರೆ ಅಜ್ಜಿ ಹೇಳಿದ್ದು ಹೇಳಿ ಲೆಕ್ಕ. ಹಾಂಗಾಗಿ ದೊಡ್ಡ ಬೇಜಾರ ಆಯಿದಿಲ್ಲೆ, ಒಪ್ಪಿಗೊಂಡವು.ಕೆಲವು ಜೆನಕ್ಕೆ ಅವರ ಅಹಂ ಕಳಕ್ಕೊಂಬಲೆ ಕೆಲವು ಸಾಧನಂಗೊ ಬೇಕಾವುತ್ತು. 'ದೇವರು' ಹೇಳಿ ಅದಕ್ಕೇ ಹೇಳುದು. ಅಲ್ದೋ?

ಕೋಟಿ ನಿಜಜೀವನಲ್ಲಿ ಆರಿಂಗೂ ಹತ್ತರೆ ಬಪ್ಪಲಾಗದ್ದ ಜೆನ. ಎಲ್ಲೋರಿಂದಲೂ ದೂರ ಇದ್ದುಗೊಂಡು, ಅದೇ ಸಮಾಜವ ಮೂರ್ನೆಯವ ಆಗಿ ನೋಡಿಗೊಂಡೇ ಇರ್ತು. ೩೬೪ ದಿನವುದೇ ಕೋಟಿಗೆ ಯಾವುದೇ ಬೆಲೆ ಇಲ್ಲದ್ದರೆಂತಾತು, ೩೬೫ನೆ ದಿನ ಎಷ್ಟೋ ಜೆನಕ್ಕೆ ಅದು ಸಾಕ್ಷಾತ್ ದೇವರೇ!
ಅಪ್ಪನ ಜೀವನಾನುಭವ ಮಗಂಗೆ ಸಣ್ಣ ಇಪ್ಪಗಳೇ ಸಿಕ್ಕುತ್ತು. ಕೋಟಿಗಾದರೂ, ಬ್ಯಾರಿಗಾದರೂ, ಬಟ್ರಿಂಗಾದರೂ! ಜಾತಿಪದ್ಧತಿಲಿ ಇಪ್ಪ ಪ್ಲಸ್ ಪಾಯಿಂಟು ಇದು.

ಮೊನ್ನೆ, ಮೇ ೨೪ಕ್ಕೆ ಪತ್ತನಾಜೆ ಬಂತು ಬಾವ. ಕೆರೆ ಕರೆಣ ಪಾರೆಲಿ ಬೂತಕ್ಕೆ ತಂಬಲ ಇತ್ತು, ರಂಗಮಾವನೂ ಮೋಹನ ಬಂಟನೂ ಚೆಂದಲ್ಲಿ ಮಾತಾಡಿಗೊಂಡು, ನೆಗೆ ಮಾಡಿಗೊಂಡು ಇಪ್ಪದರ ಬರೆ ಕರೆಲಿ ನಿಂದುಗೊಂಡು ಕೋಟಿ ನೋಡುದರ ಒಪ್ಪಣ್ಣ ಗಮನಿಸಿದ. ಕೋಟಿ ಅದೇ ಮೋಹನ ಬಂಟನಲ್ಲಿಗೆ ಈಗಳೂ ಕೆಲಸಕ್ಕೆ ಹೊವುತ್ತಡ. ಎಂತ ತೊಂದರೆಯೂ ಆಯಿದಿಲ್ಲೆ.

ಎಷ್ಟೇ ದೊಡ್ಡ ಜೆನಂಗ ಆಗಲಿ, ಎಷ್ಟೇ ದೊಡ್ಡ ವಿಷಯ ಆಗಲಿ, ಕೊರ್ಟಿಲಿ ಇತ್ಯರ್ತ ಆಗದ್ದದೂ ಹೀಂಗಿಪ್ಪ ಬೂತಂಗಳಲ್ಲಿ ಆರ 'Ego'ಕ್ಕೂ ಬೇನೆ ಆಗದ್ದೆ,ಚೆಂದಕ್ಕೆ ತೀರ್ಮಾನ ಆವುತ್ತು. ದೇವರಿಂಗೆ ಹೆದರದ್ದ ಎಷ್ಟೋ ಜೆನ ಬೂತಕ್ಕೆ ನೆಡಕ್ಕೊಳ್ತವು. ಎಂಗಳ ಪಾರೆ ಅಜ್ಜಿಯೇ ಒರಿಷ ಒಂದಕ್ಕೆ ನೂರಾರು ಕುಟುಂಬ ಒಂದು ಮಾಡ್ತು. ಭಾರತ ಭಾರತ ಆಗಿ ಒಳುದ್ದೆ ಹೀಂಗಿಪ್ಪ ಕೆಲವು ವಿಷಯಂಗಳಲ್ಲಿ. ಎಂತ ಹೇಳ್ತಿ?
ತೀರ್ಪು ಕೊಡುವಾಗ ಕೋಟಿ ಪಾರೆ ಅಜ್ಜಿ ಆಗಿ ಇತ್ತು, ರಂಗಮಾವ ಅದರ ಸೇವಕ ಆಗಿ ಇದ್ದದು ಎನಗೆ ಸಂಶಯ ಇದ್ದು ಬಾವ!

ಒಂದೊಪ್ಪ:ಸಮಾಜವ ಸರಿಯಾಗಿ ಅರ್ತ ಮಾಡಿದ ಜೆನ ತೀರ್ಪು ಕೊಡೆಕ್ಕು, ಅದು ಬಿಟ್ಟು ಬೆಂಗ್ಳೂರಿಲಿ ಕೂದ ಒಕೀಲ°- ಜಡ್ಜ° ಎಂತರ ತೀರ್ಪು ಕೊಡ್ತದು? ಅಲ್ದೋ?