ಪಟ ತೆಗವ ಕೆಮರಲ್ಲಿ ಮೋರೆ ಕಾಣ್ತಡ

ಪುತ್ತೂರಿಲಿ ರಾಮಜ್ಜನ ಕೋಲೇಜು ಸುರು ಆದ ಸಮಯ.
ಪಾರೆ ಮಗುಮಾವ° ಆ ಕೋಲೇಜಿಂಗೆ ಹೋಪ ಕಾಲ. ಮನೆಂದ ಹೋಗಿ ಬಪ್ಪಲೆ ಎಡಿಯ ಇದಾ, ಅಲ್ಲೇ ಬೊಳುವಾರಿನ ಕರೆಲಿ ಒಂದು ರೂಮಿಲಿ ಇದ್ದದು ಅವು. ಶೆನಿವಾರ ಮನಗೆ ಬಕ್ಕು, ಐದುಗಂಟೆ ಶಂಕರ ವಿಟಲಲ್ಲಿ. ಸೋಮವಾರ ಉದಿಯಪ್ಪಗಾಣ ಕೃಷ್ಣಲ್ಲಿ ವಾಪಾಸು. ಬಾಕಿದ್ದ ದಿನ ಕೋಲೆಜಿಂದ ಬೇಗ ಬಂದರೆ ಮಾಡುದೆಂತರ ಬೇಕೇ?
ಹತ್ತರಾಣ ರೂಮಿಲಿ ತಮಿಳಂಗ ಇದ್ದದು. ರಜ್ಜ ಬೇಗ ಅವರ ಅಡಿಗೆ ಸುರು ಅಪ್ಪದು. ಮೀನಿನ ಹೊಟ್ಟೆ ಬಿಡುಸಿ, ಮೆಣಸಿನ ಹೊಡಿ ಇಂಗು ಮಡಗಿ ಬಾಣಲೆ ಎಣ್ಣೆಗೆ ಹಾಕಿ ಹೊರಿಗು- ಅಡಿಗೆ ಉದಯಣ್ಣ ದೀಗುಜ್ಜೆ ಪೋಡಿ ಹೊರುದ ಹಾಂಗೆ. ಸುರು-ಸುರುವಿಂಗೆ ಮಗುಮಾವಂಗೆ ಅದರ ಕಂಡ್ರಾಗ. ಮತ್ತೆ ಅಭ್ಯಾಸ ಆದ ಹಾಂಗೆ ಆ ಪರಿಮ್ಮಳ ಕೂಡಿಯೊಂದು ಉಂಡಿದವು, ಅದು ಬೇರೆ. ;-) ಆ ವಾಸನೆ ತಪ್ಪುಸುಲೆ ಹೇಳಿ ಪುತ್ತೂರಿಲಿ ಒಂದು ಸುತ್ತು ನೆಡಗು. ಶರ್ಮಾಡಿ ಮಾಣಿ ಚುಬ್ಬಣ್ಣ ಇತ್ತಿದ್ದ ಸ್ಟುಡಿಯ - ಪಟ ತೆಗವದು- ಇತ್ತಲ್ದ, ಅಲ್ಲಿಗುದೆ ಹೋಕಡ, ಮಾತಾಡ್ಲೆ. ಹೀಂಗೆ ಮಾತಾಡಿ ಹೊತ್ತು ಕಳಗು. ಇರುಳಿರುಳು ಅಪ್ಪಗ ರೂಮಿಂಗೆ ಬಕ್ಕು. ಒಂದು ಅಶನ ಮಡಗಿ, ಉಂಡಿಕ್ಕಿ ಒರಗ್ಗು.

ಈ ಶರ್ಮಾಡಿ ಚುಬ್ಬಣ್ಣ° ಅವನ ಮನೆಲಿ ಅವ ಹೆರೀಯವ°. ಮೂರು ಜೆನ ತಮ್ಮಂದ್ರು. ಎಲ್ಲೊರಿಂಗೂ ಓದುಲೆ ತಕ್ಕ ಮನೆಲಿ ಇಲ್ಲೆ ಹೇಳಿ ಇವನ ಒಂದು ಹಂತದ ಓದಾಣ ಆದ ಕೂಡ್ಲೇ ನಮ್ಮ ಸ್ಟುಡಿಯೊ ಪ್ರಸಾದ ಮಾವನ ದೀಪಾ ಭಾವಚಿತ್ರಾಲಯ ಇದ್ದಲ್ದ, ಅಲ್ಲಿ ಕೆಮರ ಹಿಡಿವಲೆ ಹೇಳಿ ಸೇರಿಗೊಂಡ. ಬಾರಿ ಬೇಗ ಕೆಲಸ ಪೂರ ಕಲ್ತುಗೊಂಡ. ಪ್ರಸಾದಮಾವನ ನೆಚ್ಚಿನ 'ಚುಬ್ಬ°' ಆದ, ಮಗು ಮಾವನ ಚುಬ್ಬಣ್ಣ ಆದ. ಪಾಪದ ಮನೆಂದ ಬಂದ ಕಾರಣ ಮಾತಾಡುವಾಗ ದರ್ಪ ಎಲ್ಲ ಏನಿರ, ಒಳ್ಳೆ ನಯ ವಿನಯಲ್ಲಿ ಮಾತಾಡುಗು. ಇನ್ನೊಬ್ಬಂಗೆ ಎಂತ ಎಡಿಗೋ ಕೈಂದ, ಅದರ ಮಾಡುಗು. ವಿಷಯ ಗೊಂತಿದ್ದರೆ ಹೇಳುಗು.

ಈ ಮಗು ಮಾವ° ಮೊದಲು ಪೀಯೂಸಿ ಎಲ್ಲ ಕಲಿವಗ ಅರ್ಜೆಂಟಿಂಗೆ ಪಟ ತೆಗವಲೆ ಆ ಸ್ಟುಡಿಯಕ್ಕೆ ಹೋಕು,
ಚೆಟ್ಟಿಯ ಜವುಳಿ ಅಂಗುಡಿ ಇಲ್ಲಿಯೋ, ಪುತ್ತೂರಿಲಿ - ಅದರ ಒತ್ತಕ್ಕೆ, ಮಾಳಿಗೆಲಿ. ಒಂದು ಸಪೂರದ ಓಣಿಯ ಹಾಂಗೆ ಮರದ ಮೆಟ್ಲು, ತಲೆ ಬಗ್ಗುಸಿ ಹೊತ್ತಿಗೊಂಡು ಮೇಲೆ ಹೋಗಿ ತಲೆ ಎತ್ತಿರೆ ಪ್ರಸಾದಮಾವ ಕೂದ್ದು ಕಾಂಗು, ಹಳೆ ಮರದ ಕುರ್ಷಿಲಿ. ಅದರ ಒತ್ತಕ್ಕೆ ಒಂದು ಸ್ಟೂಲು, ಚುಬ್ಬಣ್ಣಂಗೆ. ಪಟ ತೆಗವಲೆ ಬಂದದಾದರೆ ಸೀತ ಒಳಾಣ ಕೋಣೆಗೆ ಕರಕ್ಕೊಂಡು ಹೋಕು. ಹೋದ ಕೂಡ್ಲೇ ತಲೆ ಬಾಚಿ, ಬೆಗರು ಉದ್ದಿ- ಪೌಡರುದೇ ಮಡಿಕ್ಕೊಂಡು ಇಕ್ಕು ಅಲ್ಲಿ- ವಾಸನೆ, ಮಗು ಮಾವಂಗೆ ಆಗ ಅದು. ಆಯೆತ ಎಲ್ಲ ಆದ ಕೂಡ್ಲೇ ಕೂಪಲೆ ಹೇಳುಗು.ಮೈಸೂರಿನ ವೃಂದಾವನವೋ, ಬೆಂಗಳೂರಿನ ವಿದಾನಸೌದವೋ ಎಲ್ಲ ದೊಡ್ಡ ಪರದೆ ಕಟ್ಟಿಗೊಂದು ಇಕ್ಕು ಹಿಂದಂಗೆ, ಮದುವೆ ಆದ ಹೊಸತ್ತರಲ್ಲಿ ತೆಗೆತ್ತವಲ್ದ, ಅವಕ್ಕೆ ಹೇಳಿ ಹೇಳಿದ ಚುಬ್ಬಣ್ಣ! ಮಾವಂಗೆ ಪರೀಕ್ಷೆಗೆ ಕೂಪಲೆ ಪಟ, ಹಾಂಗಾಗಿ ಅದೆಲ್ಲ ಈಗ ಸದ್ಯಕ್ಕೆ ಬೇಡ! ಮಣ್ಣು ಹಿಡ್ಕಟೆ ನೆಲಕ್ಕಲ್ಲಿ,ಅರ್ಧ ಆಳು ಎತ್ತರದ ಸ್ಟಾಂಡ್ ಲಿ ಒಂದು ಕೆಮರ ಮಡಿಕ್ಕೊಂಡು ಇಕ್ಕು, ಪುಟ್ಟತ್ತೆಯ ವೇನಿಟಿ ಬೇಗಿನಷ್ಟಕೆ ಅಕ್ಕು. ಆ ಕಸ್ತಲೆ ಕಸ್ತಲೆ ಕೋಣೆಲಿ ನೆಡುಕೆ ಮಡಗಿದ ಒಂದು ಸ್ಟೂಲಿಲಿ ಕೂಪಲೆ.ತಲೆ ಮೇಲ್ಕಟೆ ಇಪ್ಪ ಬರೆಲಿ ಸುಮಾರು ಬೆಳಿ ಬೆಳಿ ಬಾಳೆದಂಡು ಟ್ಯೂಬುಲೈಟುಗೊ. ಎಡ ಬಲ ದಿಕ್ಕೆ ಕೊಡೆ ಸುತ್ತಿದ ಲೈಟುಗೊ ಮಡಿಕ್ಕೊಂಡಿರ್ತು.ಪಟಕ್ಕೆ ಒಳ್ಳೆತ ಬೆಣಚ್ಚು ಬೇಕಡ, ಪಟ ತೆಗವಲಪ್ಪಗ ಹೊತ್ತುಸುದಡ ಅದರ. 'ಮೊದಲೇ ಆನ್ ಮಾಡಿರೆ ಸೆಕೆಲಿ ಬೇಯಿಗು ಮಗು ಅಣ್ಣ , ಅಷ್ಟು ಹೈ ಓಲ್ಟೇಜು ಅಲ್ದೋ' ಹೇಳುಗು ಚುಬ್ಬಣ್ಣ. ಕರೆಂಟು ಮುಗಿಗು ಹೇಳ° ಅವ° ಪ್ರಸಾದ ಮಾವ ಇಪ್ಪಗ. ;-) .
ಪಟ ಹೇಂಗೂ ಕಪ್ಪು ಬೆಳಿ, ಆ ರೂಮುದೆ ಹಾಂಗೆ!

ಮತ್ತೆ ಪುತ್ತೂರಿಲಿ ಕಲಿವಗ ಇದಾ, ಮಗು ಮಾವಂಗೆ ಪಟ ತೆಗವದರ ಬಗ್ಗೆ ಎಲ್ಲ ಗೊಂತಾದ್ದು.
ಚುಬ್ಬಣ್ಣನ ಕೈಲಿ ಮಾತಾಡುವಾಗ ಕೆಲವು ಸರ್ತಿ ಹೀಂಗೆ ಪಟ ತೆಗವದರ ಬಗ್ಗೆ ಎಲ್ಲ ಕೆಳುಗು, ಪಟ ತೆಗವ ನಮುನೆಗೋ, ಬೇಕಪ್ಪ ಬೆಣಚ್ಚು, ತೆಗವಲೆ ಬೇಕಪ್ಪ ಹೊತ್ತು, ಮತ್ತೆ ಅದರ ತೊಳವಲೆ ಇಪ್ಪ ಕೆಲಸ, ಕಪ್ಪು ಕೋಣೆಗೆ ಹೋಗಿ ಮಾಡ್ತ ಕೆಲಸ, ಅಲ್ಲಿ ಸಿಕ್ಕುವ ಕೊಲೆ ಚಿತ್ರ ನೆಗೆಟೀವು, ಅದರ ಬೇಕಾದಪ್ಪಗ ಪಟ ಮಾಡ್ಲೆಡಿವ ಸಂಗತಿ, ಪಟವ ದೊಡ್ಡ, ಸಣ್ಣ ಮಾಡುದು, ಫ್ರೇಮು ಹಾಕುವ ಕಥೆ ಎಲ್ಲ ಮಗು ಮಾವಂಗೆ ಗೊಂತಾದ್ದು ಅಲ್ಲಿಯೇ.
ಚುಬ್ಬಣ್ಣಂಗೆ ಒಂದು ಸ್ಟುಡಿಯ ಮಡಗುತ್ತಷ್ಟು ಗೊಂತಿದ್ದಲ್ದ ? ಹೇಳಿ ಅಪ್ಪದು ಮಗುಮಾವಂಗೆ.
ಮುಂದೆ ಮದುವೆ ಎಲ್ಲ ಆದ ಮತ್ತೆ ಒಂದರಿ ಇಬ್ರ ಪಟ ತೆಗಶಿದ್ದವಡ ಅಲ್ಲಿ. ಅತ್ತೆಗೆ 'ಪಟ ತೆಗವಗ ಕಣ್ಣು ಮುಚ್ಚಿದ್ದೆ' ಹೇಳಿ ತಲೆಬೆಶಿ ಆಗಿ ಇತ್ತಡ, ಒಂದು ವಾರ ಕಳುದು ಆ ಪಟ ಸಿಕ್ಕುವನ್ನಾರವೂ. ಈಗ ಮಗುಮಾವ ಮಗು ಅತ್ತೆಯ ಒಟ್ಟಿಂಗೆ ನಿವೃತ್ತ ಜೀವನ ಮಾಡ್ತಾ ಇದ್ದವು, ಮನೇಲೆ. ಚುಬ್ಬಣ್ಣ ಮುಂದೆ ಮದುವೆ ಆದ ಮೇಲೆ ಬೆಂಗ್ಲೂರಿಂಗೆ ಹೋಗಿ ಸ್ಟುಡಿಯ ಮಡಗಿ ದೊಡ್ಡ ಆಯಿದ. ಅವಕ್ಕೆ ಅಷ್ಟು ಸಂಪರ್ಕ ಇಲ್ಲೆ ಈಗ.

ಆಚಕರೆ ಮಾಣಿಯ ಅಳಿಯನ ಶುದ್ದಿ ಗೊಂತಿದ್ದಲ್ದ, ಪುಳ್ಳಿಮಾಣಿ?
ಯಬೋ ! ಎಂತಾ ಕಿರ್ಚಾಣ, ಕೂಗಲೇ ಕೂಗ ಅವ°.ಆರ ಕೈಗೂ ಬಕ್ಕು- ಗುರ್ತ ನೋಡ°. ಮೊನ್ನೆ, ನಾಮಕರಣದ ದಿನ ಈಚಕರೆ ಪುಟ್ಟನ ಮೈಮೇಲೆ ಮಾಡ್ಲಾಗದ್ದು ಮಾಡಿ ಪುಟ್ಟನ ಮರ್ಯಾದಿ ತೆಗದ್ದ°. ಅಜ್ಜಕಾನ ಬಾವಂದೇ ಬಂದಿತ್ತಿದ್ದ ಆ ನಾಮಕರಣಕ್ಕೆ, ಸಾಕ್ಷಿಗೆ ಬೇಕಾರೆ..ಹ್ಹೆ! ಮಾಣಿ ಒಳ್ಳೆ ಚುರುಕ್ಕು ಇದ್ದ. ಅವನ ಮಾವನ ಹಾಂಗೆ ಅಲ್ಲ. ;-)
ಮಾಣಿ ಬಾವ ಒಂದು ಕೆಮರ ತೆಗದ°, ಕೊಡೆಯಾಲಂದ. ಮೇರ್ತಿಯ ಹಾಂಗೆ ಕಪ್ಪು, ಸಿಗ್ರೇಟು ಪೆಟ್ಟಿಗೆಯಷ್ಟಕ್ಕೆ ಅಕ್ಕು. ಒಂದು ಸುಚ್ಚು ಒತ್ತಿರೆ ಆನ್ ಆವುತ್ತು, ಸೊಯೋ° ಹೇಳಿಯೊಂಡು, ರೀಲು ಗೀಲು ಎಂತ ಇಲ್ಲೆ ಅಡ. ಅದರ ಒಳ ಒಂದು 'ನೆಂಪು' (Memory) ಇರ್ತಡ. ಪಟ ತೆಗದ ಹಾಂಗೆ ಅದು ನೆಂಪು ಮಡಿಕ್ಕೊಂಡು ಹೊವುತ್ತಡ. ನವಗೆಲ್ಲ ನೆಂಪು ಮುಗಿವದು ಹೇಳಿ ಇದ್ದಾ! ಆ ಕೆಮರಾಕ್ಕೆ ಹಾಂಗೆ ಇದ್ದಡ ಉಮ್ಮ! ಅದರ ನೆಂಪು ಮುಗುದ ಕೂಡ್ಲೇ ಕಂಪ್ಲೀಟರಿನ ಒಳ ಇಪ್ಪ ನೆಂಪಿಂಗೆ ಹಾಕುದು. ಅದರದ್ದುದೆ ನೆಂಪು ಮುಗುದ ಮತ್ತೆ ಸೀಡಿ, ಈ ನಮ್ಮ ಗ್ರಾಮ್ಫೋನು ಪ್ಲೇಟಿನ ಹಾಂಗೆ, ಆದರೆ ಹೊಳೆತ್ತು ಅಷ್ಟೇ - ಸೀಡಿಯ ನೆಂಪಿಂಗೆ ಹಾಕುದಡ - ಎಂತೆಂತೋ ಹೇಳಿದ ಅವ°.
ಆ ಕೆಮರದ ವಿಶೇಷ ಎಂತರ ಹೇಳಿರೆ, ಪಟ ಹೇಂಗೆ ಬತ್ತು ಹೇಳುದು ಅದರಲ್ಲಿ ಕಾಣ್ತು. ನಮ್ಮ ಹೊಡೆಂಗೆ ಅದರ ಕಣ್ಣು ಇರ್ತಲ್ದ, ಅವನ ಹೊಡೆಂಗೆ ಸಣ್ಣ ಟೀವಿ ಇರ್ತು. ಕೆಂಪು ಕೆಂಪು ಹೊಳೆತ್ತು. ಎದುರು ಎಂತರ ಕಾಣುತ್ತೋ , ಪಟಲ್ಲಿ ಹೇಂಗೆ ಬತ್ತೋ, ಅಲ್ಲೇ ನೋಡ್ಲಾವುತ್ತು. ಸರಿ ಬಾರದ್ರೆ ಇನ್ನೊಂದರಿ ತೆಗದ°. ಅಷ್ಟೇ!
ಮಗು ಅತ್ತೆಗೆ ಆದ ತಲೆಬೆಶಿ ಮಾಡೆಕ್ಕಾದ ಅಗತ್ಯವೇ ಇಲ್ಲೆ. ಅಲ್ದೋ?

ತಂದ ದಿನ ಆ ಕೆಮರದ್ದೆ ಕಾರ್ಬಾರು. ಅಳಿಯ ನೆಗೆ ಮಾಡುವಗ, ಕಿರ್ಚುವಗ, ಅಮ್ಮ ಎಣ್ಣೆ ಕಿಟ್ಟಿ ಮೀಶುವಗ, ಆಚಕರೆ ಮಾವ ಗೆಡ್ದ ತೆಗವಗ, ಎಲ್ಲ ಪಟವೇ ಪಟ. ಸುಮ್ಮನೆ ಎಂತಕೆ ಮಾಣಿ ಮುಗುಶುತ್ತೆ? ಹೇಳಿದವು ಅತ್ತೆ. 'ಇದರ್ಲಿ ಎಂತದೂ ಮುಗಿತ್ತಿಲ್ಲೆ ಅಮ್ಮ' ಹೇಳಿ ಅಮ್ಮನತ್ರೆ ವಾದುಸಿದ. 'ಹ್ಮ್, ಪೈಸೆ ಮಾಂತ್ರ' ಹೇಳಿದ ಅಜ್ಜಕಾನ ಬಾವ ಎಲೆ ತಿಂದೊಂಡು.. ಹಾಂಗೆ ಹೇಳಿದ್ದಕ್ಕೆ ಅಜ್ಜಕಾನ ಬಾವಂದು ಎಲೆ ತಿಂಬದು, ಎನ್ನದು ಅಡಕ್ಕೆ ಹೋಳು ಮಾಡುದು ಎರಡೆರಡು ಪಟ :-)

ಅಷ್ಟೇ ಅಲ್ಲ, ಅದರ ಒಂದು ಕರಿ ಪೈಪಿಲಿ ಅವರ ಮನೆ ಕಂಪ್ಲೀಟರಿಂಗೆ ಎಳದ್ದು ಹಾಕಿದ, ಹಾಕಿದ ಹೇಳಿರೆ, ಕೆಮರಲ್ಲಿಯೂ ಇದ್ದು, ಕಂಪ್ಲೀಟರಿಲಿಯುದೆ ಇದ್ದು. ನೆಗೆಟೀವಿನ ಹಾಂಗೆ ಒತ್ತೆ ಅಲ್ಲ. ರಜ್ಜ ಆಗ ಅಳಿಯನ ಎಣ್ಣೆ ಕಿಟ್ಟುಲೆ ಹೇಳಿ ಹಾಳೆಲಿ ಮನುಶಿತ್ತು, ಅಮ್ಮ. ಕುಶಿಲಿ ಒಂದು ನೆಗೆ ಮಾಡಿದ ಅವ..! ರಪಕ್ಕ ಇವ ಅದರ ಕೆಮರಕ್ಕೆ ಹಾಕಿತ್ತಿದ್ದ. ಆ ಪಟ, ಚೆಂದ ಬಯಿಂದು- ನೋಡಿದೆ. ಅದರ ಕಂಪ್ಲೀಟರಿಲಿ ಓಪನ್ ಮಾಡಿ, ಕಂಟ್ರೋಲ್ ವೈ, ಕಂಟ್ರೋಲ್ ಆರ್, ಕಂಟ್ರೋಲ್ ಎಸ್, ಎಂತೆಲ್ಲ ಹೇಳಿಗೊಂದು ಐದು ನಿಮಿಷ ಗುರುಟಿದ. ಒಪ್ಪಣ್ಣಂಗಂತೂ ಮದ್ದುಬಿಡ್ತ ಪಂಪಿನ ಕಂಟ್ರೋಲು ಬಿಟ್ರೆ ಬೇರೆಂತ ಅರಡಿಯ! ಯೋ ರಾಮ - ನೋಡಿಗೊಂದು ಇಪ್ಪ ಹಾಂಗೆ, ಹಾಳೆಲಿ ಮನುಗಿದ ಮಾಣಿ ಹೂಗಿನ ರಾಶಿಲಿ ಮನುಗಿತ್ತಿದ್ದ. 'ಅಜ್ಜ ಸುರಿಯ' ಹೇಳಿದ ಮಗುಮಾವ° ಒಂದರಿ ಎಲೆ ತುಪ್ಪುಲೆ ಹೋಗಿ ಬಂದವು. ಕಂಟ್ರೋಲು ತಪ್ಪಿ! :-)
ಎಂತದೋ! ಮಗುಮಾವಂಗೆ ಪ್ರಾಯ ಆದ್ದು ಅಪ್ಪು ಹೇಳಿ ಸುರುವಾಣ ಸರ್ತಿ ಆತಾಯಿಕ್ಕು!. :-)
ಅಮೆರಿಕಲ್ಲಿಪ್ಪ ಅವನ ಮಾಡಾವು ಅಕ್ಕಂಗೆ ಕಳುಸುಲಿದ್ದಡ ಅದರ, ಮದಲಾಣ ಹಾಂಗೆ ಕವರಿಲಿ ಹಾಕಿ ಪೋಸ್ಟು ಮಾಡುದಲ್ಲ, ಮೈಲ್ ಮಾದುದಡ.
ಎಂತ ಕರ್ಚಿಲ್ಲದ್ದೆ! :-)

ನೋಡಿದ್ದಿರಾ? ಒಂದು ತಲೆಮಾರು ಕಳಿವಗ ಎಷ್ಟೆಲ್ಲ ವೆತ್ಯಾಸ ಆತು ಪಟ ತೆಗವ ಜೆಂಬಾರ. ಸೃಜನಶೀಲತೆಯ ವಾತಾವರಣವೇ ಇಲ್ಲದ್ದ ಸ್ಟುಡಿಯದ ಕರಿ ಕೋಣೆಲಿ ಕೂದು ತೆಗವ ಪಟಕ್ಕೂ, ಪರಿಸರಕ್ಕೆ ಹೊಂದಿಯೊಂಡು ಇಪ್ಪ ಜೀವನದ ಪಟಕ್ಕೂ ಎಷ್ಟು ವೆತ್ಯಾಸ ಇರ್ತು, ಅಲ್ದಾ? ಇಂದಿಂಗೂ ಕಪ್ಪು ಬೆಳಿ ಪಟ ನೋಡಿರೆ ಅಂಬಗಾಣ ವೆವಸ್ತೆಗೋ ನೆಂಪಕ್ಕು ಒಪ್ಪಣ್ಣಂಗೆ.

ಈಗಾಣ ಕೆಮರಂಗಳಲ್ಲಿ ಜೂಮು (Zoom) ಹೇಳಿ ಒಂದು ಬತ್ತಡ, ಜವ್ವನಿಗರಿಂಗೆ ಕೆಲವು ಸರ್ತಿ ಬೇಕಾವುತ್ತಡ - ಹೇಳಿದ ಅಜ್ಜಕಾನ ಬಾವ. 'ಎಲಾ, ನೀನು ದೊಡ್ಡ ಆಯಿದೆ ಹಾಂಗಾರೆ' - ಹೇಳಿದ ಆಚಕರೆ ಮಾಣಿ. 'ದೊಡ್ಡ ಆಗದ್ದವು ಆರಿದ್ದವು ಈಗಾಣ ಕಾಲಲ್ಲಿ? ಹೇಳಿ ಕೇಳಿದ ಅಜ್ಜಕಾನ ಬಾವ.

ಹೇಳಿದಾಂಗೆ,
'ಜೂಮು(Zoom)' ನಿಂಗೊಗೆ ಬೇಕಾಯಿದ ಎಲ್ಯಾರು? ಏವದಾರು ಜೆಂಬ್ರಲ್ಲಿಯೋ ಮತ್ತೋ° ;-)

ಒಂದೊಪ್ಪ: ಮನೆಲಿ ಅಪ್ಪಮ್ಮನ ಪಟ ನೇಲ್ಸಿಗೊಂಡಿದ್ದ? ಎಲ್ಲಿ ತೆಗದ್ದು ಹೇಳಿ ಕೇಳಿ ಒಂದರಿ. :-)