ಸಂದಾನಗಾರನ ಸ್ವಗತಂಗೊ

ಸದ್ಯ ಮದುವೆ ಊಟ ಉಂಡಿರಾ?
ಎಲ್ಯಾಣ ಮದುವೆ? ಸೀವು ಎಂತರದ್ದು? ಕೂಸು ಎಲ್ಲಿಂದ? ಮಾಣಿ ಎಷ್ಟು ಕಲ್ತಿದ°? ಮಾಣಿಗೆ ಅಡಕ್ಕೆ ಎಷ್ಟಾವುತ್ತು? ಕೂಸು ಕೆಲಸಕ್ಕೆ ಹೊವುತ್ತ? ಹೀಂಗಿಪ್ಪ ಸಾವಿರ ಪ್ರಶ್ನೆಗೊಕ್ಕೆ ನಿಂಗೊಗೆ ಉತ್ತರ ಸಿಕ್ಕಿಕ್ಕು, ಆದರೆ ಆ ಮದುವೆಯ ಸಂದಾನ ಆರದ್ದು? ಈ ಪ್ರಶ್ನೆ ಕೇಳಿದವು ಬೆರಳೆಣಿಕೆಯಷ್ಟು ಜೆನ ಮಾಂತ್ರ ಆದಿಕ್ಕಷ್ಟೇ. ಸಂದಾನ ಹೇಳುದು ಅಷ್ಟೊಂದು ಗೌಣ ಆಗಿರ್ತು.
ಸಂದಾನ ಆರಿಂಗೆ ಬೇಡ ಹೇಳಿ? ಮನೆಲಿ ಮಕ್ಕೊ ಜಗಳ ಮಾಡಿರೆ ಅಮ್ಮನ ಸಂದಾನ, ಒಪ್ಪಣ್ಣ-ಒಪ್ಪಕ್ಕ ಜಗಳ ಮಾಡಿರೆ ದೊಡ್ಡಣ್ಣನ ಸಂದಾನ, ಕ್ಲಾಸಿಲಿ ಜಗಳ ಮಾಡಿರೆ ಟೀಚರಿನ ಸಂದಾನ, ಕೋಲು ಹಿಡ್ಕೊಂಡು ;-), ದೊಡ್ಡವು ಇಬ್ರು ಜಗಳ ಮಾಡಿರೆ ಇನ್ನೊಬ್ಬ ಹಿರಿಯರ ಸಂದಾನ,ದೇಶ-ದೇಶ ಜಗಳ ಮಾಡಿರೆ (ದೊಡ್ಡಣ್ಣ!) ಅಮೆರಿಕ ಸಂದಾನ, ಹೀಂಗೆ ಎಲ್ಲಾ ಜಗಳಲ್ಲಿಯೂ ಒಂದಲ್ಲ ಒಂದು ಸಂದಾನ ಬೇಕೇ ಬೇಕು. ಇಲ್ಲಿ ಒಪ್ಪಣ್ಣ ಹೇಳುದು ಆ ಜಗಳದ ಸಂದಾನ ಅಲ್ಲ- ಶುಭಸೂಚಕ ಸಂದಾನಂಗೊ. ಎರಡು ಮನೆಯ ಬೆಸವ ಸಂದಾನಂಗೊ. ಅಪ್ಪು - ಮದುವೆಯ ಸಂದಾನವೇ!
:-P

ಹಳಬ್ಬರು ಕೆಲವು ಜೆನಂಗೊ ಇರ್ತವು,ಮದುವೆ ಪ್ರಾಯಕ್ಕೆ ಬಂದ ಒಪ್ಪಣ್ಣಂಗಳ, ಒಪ್ಪಕ್ಕಂಗಳ ('ಕೇಂಡಿಡೇಟುಗೊ' ಹೇಳಿ ಒಂದು ಪರಿಭಾಷೆ) ಒಂದು ಪಟ್ಟಿ ಅವರ ಮನಸ್ಸಿಲಿ ತೆಗದು ಮಡಿಕ್ಕೊಂಡು ಇರ್ತವು. ಜೆಂಬ್ರಕ್ಕೆ ಹೋದಲ್ಲಿ ಎಲ್ಲ ಅದು ಬೆಳೆತ್ತಾ ಇರ್ತು. ಹೀಂಗೆ ಆರಾರು ಪಕ್ಕನೆ ಕೂಸು/ಮಾಣಿ ಹುಡುಕ್ಕುವ ಕೆಲಸಲ್ಲಿ ತೊಡಗಿದ್ದರೆ, ಸಮಗಟ್ಟು ಹೋಲಿಕೆ ಆತು ಹೇಳಿ ಕಂಡ್ರೆ ಪರಸ್ಪರ ಕೊಂಡಿ ಮಾಡಿ ಬಿಡ್ತವು.ಅವಕ್ಕೆ ಅದರಿಂದ ಎಂತದೂ ಲಾಬ ಇಲ್ಲೆ, ಒಂದು ಸಮಾಜ ಸೇವೆ ಅಷ್ಟೇ. 'ಇದಾ, ಇಂಥಾಲ್ಲಿ ಒಂದು ಕೂಸು/ಮಾಣಿ ಇದ್ದು/ಇದ್ದ° , ನಿಂಗಳ ಮಾಣಿ/ಕೂಸು ಇದ್ದ°/ಇದ್ದು ಅಲ್ದಾ, ಅವಂಗೆ/ಅದಕ್ಕೆ ಸರೀ ಅಕ್ಕು' ಹೇಳಿ. ಮುಂದೆ ಅಪ್ಪ ಒಂದು ದೊಡ್ಡ ಜೆಂಬ್ರದ ಆರಂಬ ಅಲ್ಲಿಂದಲೇ.

ಇವು ಹಾಕಿಬಿಟ್ಟ ಒಂದು ಕೊಂಡಿ ಆ ೨ ಮನೆಯ ಸಂಪರ್ಕ ವೆವಸ್ತೆ ಮಾಡಿ, ಪರಸ್ಪರ ಜಾತಕ ತಪ್ಪಲ್ಲಿವರೆಂಗೆ ಮಾಡಿ ಬಿಡ್ತವು. ಮುಂದೆ ಈ ಜಾತಕ ಸೇರಿ ಬಂದರೆ, ಎರಡೂ ಕಡೆಯ ಮನೆ ನೋಡುವ ಕಾರ್ಯಕ್ಕೆ ಬಂದು, ಸೋದರ ಮಾವಂದ್ರ ಹಾಂಗೆ ಎದುರು ನಿಂದು, ಬದ್ದಕ್ಕೆ ದಿನ ನಿಗಂಟು ಮಾಡ್ತವು. ಅಷ್ಟರಲ್ಲಿ ಆ ಸಂದಾನಗಾರ ೨ ಮನೆಗಳ ಶುದ್ದಿ ಎಲ್ಲ ಪರಸ್ಪರ ಹೇಳಿ, ಎರಡೂ ಮನೆಯೂ ಎಷ್ಟೋಒರಿಶಂದ ಪರಿಚಿತ ಹೇಳಿ ಅನಿಸುವ ಹಾಂಗೆ ಮಾಡಿ ಮಡಗುತ್ತವು. ಅಲ್ಲಿಒರೆಂಗೂ ಆ ಸಂದಾನಗಾರ ಮುಖ್ಯವಾಹಿನಿಲಿ ಇರ್ತವು. ಮತ್ತೆ ಏನಿದ್ದರೂ ಆ ೨ ಮನೆಗಳ ನಡುವೆಯೇ.

ಉದಾಹರಣೆಗೆ ನಮ್ಮ ಊರಿನ ಹರಿಮಾವನ ತೆಕ್ಕೊಳಿ. ಹೆಸರು ಹರಿನಾರಾಯಣ ಶರ್ಮ ಹೇಳಿ ಆದ ಕಾರಣ ಶರ್ಮಮಾವ° ಹೇಳಿಯೂ ದಿನಿಗೆಳ್ತವು. ಎಲ್ಲೋರಿಂಗೂ ಕೂಸು/ಮಾಣಿ ಕೊಡ್ತ ಕಾರಣವೋ ಏನೋ, ಎಲ್ಲೋರಿಂಗೂ 'ಮಾವ°'ನೇ
;-).
ಹಿರಿಯವು- ಎತ್ತರದ, ಬೆಳೀ ಜೀವ. ಕಪ್ಪುಕರೆ ಕನ್ನಡಕ ಹಾಕಿಗೊಂಡು, ಬೆಳಿಅಂಗಿ, ಬೆಳೀವೇಷ್ಟಿ ಸುತ್ತಿಗೊಂಡು ಇಕ್ಕು, ಬದಿಯಡ್ಕ ಪೇಟೆಲಿ. ಮುಂಡಲ್ಲಿಪ್ಪ ಗಂಧದ ಬೊಟ್ಟಿಲಿ ೨ ಅಕ್ಕಿ ಕಾಳುದೆ ಅಂಟಿಗೊಂಡು,ಹಣೆಲಿಪ್ಪ ವಿಬೂತಿಯ ಕರೆಲಿ ಎಲೆಕೊಡಿ ಅಂಟಿಗೊಂಡು ಇಕ್ಕು. ಅವರ ಹೆಗಲಿಲಿ ಇಪ್ಪ ಕಡುಕಂದು ಬಣ್ಣದ ವಸ್ತ್ರದ ಬೇಗಿಲಿ ಎಷ್ಟು ಜೆನರ ಹಣೆಬಾರ(ಜಾತಕ) ಇದ್ದೋ ಏನೋ? ಒಳ್ಳೆ ಕೃಷಿಕ°, ದೊಡ್ಡ ಅಡಕ್ಕೆ ತೋಟ ಇದ್ದು ಅವಕ್ಕೆ. ತೋಟಂದ ಮೇಗೆ ಬೀಜದಗುಡ್ಡೆ ಬೇರೆ. ಅಡಕ್ಕೆ, ತೆಂಗಿನಕಾಯಿ, ಬೀಜ ಎಲ್ಲ ಅವು ಕೊಡೆಯಾಲಕ್ಕಿದ ಕೊಡುದು. ಕೊಟ್ಟಿಕ್ಕಿ ಪೈಸೆಹಾಕುಲೆ ಹೇಳಿ ಬೇಂಕಿಂಗೆ ಹೋದಿಪ್ಪಗ ನಮ್ಮ ಆಚಕರೆಮಾಣಿಗೆ ಸಿಕ್ಕಿದ್ದವಡ ಕೆಲವು ಸರ್ತಿ. (ಆಚಕರೆಮಾಣಿ ಬೇಂಕಿಂಗೆ ಹೊವುತ್ತ ಕತೆ ಇನ್ನೊಂದರಿ ಹೇಳ್ತೆ, ಗಮ್ಮತ್ತಿದ್ದು. ;-D... ) ಮೊನ್ನೆ ಒಪ್ಪಣ್ಣಂಗುದೇ, ಆಚಕರೆ ಮಾಣಿಗೂ ಕೊಡೆಯಾಲ ಬಷ್ಟೇಂಡಿಲಿ- ಕಾಸ್ರೋಡು ಬಸ್ಸಿಂಗೆ ಕಾಯ್ತಲ್ಲಿ- ಸಿಕ್ಕಿದವು, ಸದ್ಯಕ್ಕೆ ಅಂದಾಜಿ ಇದ್ದೋ ನಿನಗೆ? ಹೇಳಿಯೂ ಕೇಳಿದವು. ಯೇವತ್ತು ಹೋಗಿ ಕೇಳಿರೂ ಮಾವನತ್ರೆ ಕೆಲವು ಜಾತಕ ಇದ್ದೇ ಇಕ್ಕು ಹೇಳುಗು ಎಲ್ಲೊರು. :-) ಬದಿಯಡ್ಕಲ್ಲಿ ಅಂತೂ ಅವರ ಕಾಂಬಲೇಳಿಯೇ ಹೊವುತ್ತವು ಕೆಲವು ನಮ್ಮೋರು. ಅವಕ್ಕೆ ಎಂತೂ ಆಗೆಡ ಸಂದಾನದ ಕೆಲಸಂದ. ಮನೆಲಿ ದಾರಾಳ ಇದ್ದು, ಹಾಸಲೂ ಹೊದವಲೂ. ಆದರೂ ಶ್ರದ್ದೆಲಿ ಅದೊಂದು ಸೇವೆ ಹೇಳಿ ಮಾಡುಗು. ಮದುವೆಗೆ ಎಂತಾರು ಸಕಾಯ ಬೇಕು ಹೇಳಿ ಆದರೆ ಹಿಂದೆ ಮುಂದೆ ನೋಡದ್ದೆ ಕೊಡುಗುದೇ. ಎಷ್ಟು ಮದುವೆ ಮಾಡ್ಸಿದ್ದವೋ.ಆ ಪುಣ್ಯಾತ್ಮ ನಮ್ಮ ನೆಡುಕೆ ಇದ್ದವು ಹೇಳಿ ನವಗೇ ಒಂದು ಕುಶಿ ಅಲ್ದಾ?

ನಿಂಗೊಗೆ ಮೊನ್ನೆ ಎಂಗಳ ಊರಿಲಿ ಆದ ಶುದ್ದಿ ಹೇಳ್ತೆ. ನೆರೆಕರೆ ಮದುವೆ. ವಿಟ್ಲ ಹೊಡೆಂದ ಕೂಸಡ. ಇಬ್ರೂ ಬೆಂಗ್ಳೂರಿಲಿ ಇಪ್ಪದಡ. ಹರಿಮಾವನ ಸಂದಾನ. ಜಾತಕ ಸೇರಿತ್ತು- ಮನೆ ನೋಡಿತ್ತು- ಎಲ್ಲ ಸರೀ ಆತು. ಅಂತೂ ಬದ್ದ ಕಳುತ್ತು. ಇನ್ನು - ಜವುಳಿ ಮಾಡ್ಸುದು, ಚಿನ್ನಮಾಡ್ಸುದು, ಹೇಳಿಕೆ ಮಾಡುದು, ಅದು ಇದು ಎಲ್ಲವೂ ಸುರು. ಈ ಎಲ್ಲವುದೇ ೨ ಮನೆಯುದೆ ಸೇರಿ, ಒಂದು ಹೊಂದಾಣಿಕೆಲಿ ಮಾಡ್ತವು. ಆ ಹೊಂದಾಣಿಕೆಗೆ ವೇದಿಕೆ ಹಾಕಿ ಕೊಟ್ಟದು ಈ ಸಂದಾನಗಾರನೇ. ನೋಡು ನೋಡುವಾಗಲೇ ಮದುವೆಯುದೆ ನೆಡದತ್ತು. ಅಚಾತುರ್ಯ ಎಂತರ ಹೇಳಿರೆ ಆ ಹರಿಮಾವಂಗೇ ಹೇಳಿಕೆ ಬಿಟ್ಟು ಹೊಯಿದು. ಬದ್ದಲ್ಲಿ ಕಾಗತ ಕರಡು ತೆಗದ್ದೇ ಅವು, ಅವಕ್ಕೇ ಹೇಳಿಕೆ ಬಿಟ್ಟು ಹೋಯಿದು. ಬಾಯಿ ಹೇಳಿಕೆ ಇದ್ದನ್ನೇ ಹೆಂಗಾರು ಹೇಳಿ ಹರಿಮಾವ° ಹೊಯಿದವು, ಅದು ಬೇರೆ.

ಮದುವೆಲಿಯುದೆ ನೋಡಿ: ಬದ್ದದ ದಿನ ಬಂದು ಮದುವೆಗೆ ಮೂರ್ತ ಹೇಳಿದ ಜೋಯ್ಶರಿಂಗೆ ಒಂದು ದಕ್ಷಿಣೆ ಮರ್ಯಾದಿ ಇದ್ದು, ಮದುವೆಗೆ ಬಂದು ಎದುರು ಶಾಲು ಹೊದಕ್ಕೊಂಡು ಕೂದ ಗುರಿಕ್ಕಾರಮಾವಂಗೆ ಒಂದು ಮರ್ಯಾದಿ ಇದ್ದು, ಮಂತ್ರ ಹೇಳಿದ ಬಟ್ಟಮಾವಂಗೆ ಒಂದು ಮರ್ಯಾದಿ ಮಾಡ್ತವು, ಅಡಿಗೆಯವಕ್ಕೆ ಒಂದು ದಕ್ಷಿಣೆ ಇದ್ದೇ ಇದ್ದು. ಉಂಬಲೆ ಬಂದ ಜೆನಂಗೊಕ್ಕೂ ಒಂದು ಒಂದು ದಕ್ಷಿಣೆ ಇದ್ದು. ಆ ಮದುವೆಯ ಅಡಿಪಾಯದ ಮೊತ್ತಮೊದಲ ಕಲ್ಲುಮಡಗಿದ ಸಂದಾನಗಾರಂಗೆ ಎಂತದೂ ಇಲ್ಲೆ. ಹೇಳಿಕೆ ಇದ್ದರೆ, ಉಂಬಲೆ ಬಂದರೆ, ಸುರುವಾಣ ಹಂತಿಗೆ ಕೂದರೆ ಊಟದಕ್ಷಿಣೆ ಒಂದು ಸಿಕ್ಕುಗು, ಅಷ್ಟೇ! ಚೋದ್ಯ ಅಲ್ಲದ್ದೆ ಮತ್ತೆಂತರ?

ಎರಡು ಮನೆಯ ಒಂದು ಮಾಡಿ, ಒಂದು ಸುಂದರ ಸಂಸಾರಕ್ಕೆ ಅಡಿಪಾಯ ಹಾಕುವ ಈ ಸಂದಾನ ಹೇಳುದು ಸುಲಬದಕೆಲಸ ಮಣ್ಣ ಅಲ್ಲ. ಸಂದಾನ ಹಾಕುವಗ ಅಪ್ಪ ಎಡವಟ್ಟುಗಳ ಎಲ್ಲ ದೂರಮಾಡುದು ಇದ್ದನ್ನೇ - ಓ ರಾಮ - ಹೇಳಿ ಸುಕ ಇಲ್ಲೆ, ಬ್ರಹ್ಮಾಂಡ ಕೆಲಸ ಅದು. ಕೂಸು ಕಪ್ಪಾದರೆ 'ರಜ್ಜ ಗೋಧಿ ಬಣ್ಣ', ಕಾಲು ಕುಂಟು ಆದರೆ 'ನೆಡವಗ ರಜ್ಜ ಹಾರಿದಾಂಗೆ ಅಪ್ಪದಷ್ಟೇ', ಅಡಿಗೆ ಏನೂ ಬಾರದ್ರೂ 'ಅಡಿಗೆಲಿ ಒಳ್ಳೆ ಕೈ' , ಮಾಣಿಗೆ ಉಂಬಲೆ ಕಷ್ಟಆದರೂ 'ಒಳ್ಳೆತ ಸಂಬಳ ಎಣಿಸುತ್ತ' ಹೇಳಿ - ಸಂದರ್ಭಕ್ಕೆ ಬೇಕಾದಲ್ಲಿ ಬೇಕಾದಹಾಂಗೆ, Harmless ಲೊಟ್ಟೆಗಳ ಹೇಳಿಗೊಂಡು... ಅಂತೂ ಸಂಬಂದ ಮುಂದುವರದರೆ ಸಂದಾನಗಾರಂಗೆ 'ಒಂದು ಹೆತ್ತಹಾಂಗೆ' ಅಪ್ಪದು ಮಾಂತ್ರ ನಿಜ.
;-( ಯಾವುದೇ ಪ್ರತಿಫಲ ಇಲ್ಲದ್ದೆ, ಶ್ರದ್ಧೆಲಿ ಈ ಕೆಲಸ ಮಾಡುವ, ಎಷ್ಟೋ ಸಂದಾನಗಾರಂಗೊ ನಮ್ಮ ಮಧ್ಯೆ ಇಪ್ಪ ಕಾರಣ ನೂರಾರು ಒರಿಶಂದ ತಲೆಮಾರು ನೆಮ್ಮದಿಲಿ ಬೆಳಕ್ಕೊಂಡು ಬಯಿಂದು.

ಗುರ್ತಪರಿಚಯವೇ ಇಲ್ಲದ್ದ ಎರಡು ಮನೆಗಳ ಮಾತಿಲೇ ಹತ್ತರೆ ಸೇರ್ಸಿ, ಪರಿಚಯ ಮಾಡ್ಸಿ, ಮದುವೆ ಮಾಡಿ ಬಿಡ್ತವಲ್ದ? ಎಷ್ಟು ಸುಂದರ ಕಲ್ಪನೆ, ನಮ್ಮ ಅಜ್ಜಂದ್ರದ್ದು. ಆ ಮದಿಮ್ಮಾಯ-ಮದಿಮ್ಮಾಳಿಂಗೆ ಪರಸ್ಪರ ಗುರ್ತಆಗಿ ಅರ್ಥಅಪ್ಪಲೆ ಒಂದೆರಡು ಒರಿಷ ಹಿಡಿತ್ತಲ್ದ, ಆ ಹೊತ್ತಿಂಗೆ ಇಬ್ರೂ ಪರಸ್ಪರ Impress ಮಾಡ್ಲೆ ಪ್ರಯತ್ನ ಪಡ್ತಾ ಇರ್ತವು, ಅದು ವಿವಾಹಿತ ಜೀವನಲ್ಲಿ ಇಪ್ಪ Golden Period. ಅವ್ವವ್ವೆ ಹುಡುಕ್ಕುವಾಗ ಇಪ್ಪ ರಿಸ್ಕು ಈ ಸಂದಾನಲ್ಲಿ ಅಪ್ಪದಕ್ಕೆ ಇಲ್ಲೆ.
ಒಬ್ಬನ ಮನಸಾರೆ ಪ್ರೀತಿಸಿ ಮದುವೆ ಆದರೆ, ಮುಂದೊಂದು ದಿನ ಆ ಪ್ರೀತಿ ತಿರುಗುವ ಹೆದರಿಕೆ ಇದ್ದೇ ಇದ್ದು. ಮಹೇಂದರ್ ನ ಮೇಲೆ ಪಿಸುರು ಬಂದರೆ ಚಕ್ರವರ್ತಿ. ಇನ್ನು ಅದರ ಮೇಲೆದೇ ಪಿಸುರು ಬಂದರೆ ಅದರಜ್ಜ ಮತ್ತೊಬ್ಬ°. ಒಂದರಿ ಪ್ರೀತಿಸಿ ಅಬ್ಯಾಸ ಇರ್ತಲ್ಲ, ಇನ್ನೊಂದರಿ ಸುರು ಮಾಡ್ಲೆ ಎಂತ ಕಷ್ಟ ಇಲ್ಲೆ!! ಸಂದಾನಪೂರ್ವಕ ಮದುವೆ ಆದರೆ ಸಮಾಜಕ್ಕೆ ಬೇಕಾಗಿ (ಹೆದರಿ?) ಆದರೂ ಒಟ್ಟಿಂಗೆ ಹೋಪಲೆ ಪ್ರಯತ್ನ ಮಾಡ್ತವು ಹೇಳಿ ಅಜ್ಜಂದ್ರ ನಂಬೋಣ. ನೂರಕ್ಕೆ ನೂರು ಸರಿ ಹೇಳಿ ಅಲ್ಲ, ಆಚಕರೆ ಮಾಣಿಬಾವನ ಪ್ರಕಾರ ಎರಡರಲ್ಲಿಯೂ ವ್ಯಾಪ್ತಿ, ಮಿತಿ ಎಲ್ಲ ಇದ್ದು, ಅದಿರಳಿ.

ನಿಂಗಳ ಅಜ್ಜನ ಮನೆ ಅಜ್ಜನ ನಿಂಗೊಗೆ ಗೊಂತಿದ್ದು, ಮನೆ ಅಜ್ಜನ ಖಂಡಿತ ಗೊಂತಿದ್ದು, ಅವಕ್ಕಿಬ್ರಿಂಗೂ ಸಂಪರ್ಕ ಮಾಡ್ಸಿ, ನಿಂಗಳ ಅಪ್ಪ-ಅಮ್ಮನ ಒಟ್ಟು ಸೇರ್ಸಿದ ಸಂದಾನಗಾರ ಆರು ಹೇಳಿ ಎಷ್ಟು ಜೆನಕ್ಕೆ ಗೊಂತಿದ್ದು ನೊಡೊ°? ನಿಂಗಳ ಮದುವೆಗೆ ಕಾರಣರಾದ, ನಿಂಗೊಗೆ ಅಷ್ಟೊಳ್ಳೆ ಒಪ್ಪಣ್ಣ/ಒಪ್ಪಕ್ಕನ ಕೊಟ್ಟ ಸಂದಾನಗಾರ ಆರು ಹೇಳಿ ಆದರೂ ಗುರ್ತ ಇದ್ದನ್ನೇ ನಿಂಗೊಗೆ? ಅಂಥಾ ಮುತ್ತು ನಿಂಗೊಗೆ ಹೇಳಿಯೇ ತೆಗದುಮಡಗಿ ಕೊಟ್ಟದಕ್ಕೆ ಜೀವಮಾನ ಪೂರ್ತಿ ನೆಂಪು ಮಡಿಕ್ಕೊಳೆಕ್ಕಲ್ದ?

ಒಪ್ಪಣ್ಣ ಸುರುವಾಣ ಸಂದಾನ ಮಾಡಿದ° ಮೊನ್ನೆ, ಎಲ್ಲ ಸರಿ ಆತು, ನೊಡೊ°, ಮುಂದಕ್ಕೆ ಮದುವೆ ಇಕ್ಕು, ಹೇಳಿಕೆ ಬಂದರೆ ಹೋಯೆಕ್ಕು. ಕೆಲಸ ಆದ ಮತ್ತೆ ಸಂದಾನಗಾರ° ಎಷ್ಟು ಗೌಣ ಹೇಳುದು ಗೊಂತಾಗಿ ಹರಿಮಾವನ ನೆಂಪಾತು ಒಂದರಿ.
:-(

ಒಂದೊಪ್ಪ: ನಿಂಗಳ ಮದುವೆಗೆ ಆರು ಬಾವ ಸಂದಾನ? ನಿಂಗಳೆಯ, ಅಲ್ಲ ಬೇರೆಯವ? ;-)