ಕೊಂಞೆ ಶಬ್ದ ಕೋಶ : ಕುಂಞಿ ಮಕ್ಕಳ ಹತ್ತರೆ ಮಾತಾಡುವ ಕೊಂಗಾಟದ ಹವ್ಯಕ ಶಬ್ದಂಗಳ ಸಂಗ್ರಹ

ಕುಂಞಿ ಮಕ್ಕೊ ಮನೆಲಿದ್ದವು ಹೇಳಿ ಆದರೆ, ಅವರತ್ರೆ ಮಾತಾಡುವ ಭಾಷೆಯೇ ಒಂದು ಬೇರೆ, ದೊಡ್ದವರತ್ರೆ ಮಾತಾಡಿದ ಹಾಂಗೆ ಅಲ್ಲ. ಕೊಂಗಾಟಲ್ಲಿ, ಸಮಧಾನಲ್ಲಿ ಮಕ್ಕಳ ಹಾಂಗೆ ಲೊಚ ಲೊಚ ಹೇಳಿ ಮಾತಾಡುಗು. ಕುಂಬ್ಳೆ ಸೀಮೆಲಿ ಇದಕ್ಕೆ ಕೊಂಞೆ ಭಾಷೆ ಹೇಳುಗು. ಮಕ್ಕೊ ಮಾತು ಕಲಿವಾಗ ಇದು ತುಂಬಾ ಬಳಕೆಲಿ ಇರ್ತು. ಮಕ್ಕೊ ಬೆಳದ ಹಾಂಗೆ ಈ ಭಾಷೆ ಅದೃಶ್ಯ ಆವುತ್ತು.

ಮಕ್ಕೊಗೆ ಉಚ್ಚಾರಣೆಗೆ ಬೇಕಾದ ರಚನೆಗೊ ಎಲ್ಲ ಸರಿಯಾಗಿ ಬೆಳದಿರ್ತಿಲ್ಲೆ. ಕಷ್ಟದ ಅಕ್ಷರ ಟಾದಿ ಪಂಚಕಂಗಳ (ಟ ಠ.. ಣ), ಮತ್ತೆ ರ, ಋ, ಷ - ಇತ್ಯಾದಿಗಳ ಬಳಸದ್ದೆ, ಅದರ ಬದಲು ಉಳುದ ಅ,ಕ, ಚ, ಪ, ಯ,ದ ಸಮಾಂತರ ಅಕ್ಷರಂಗಳ ಬಳಸಿ ಮುದ್ದು ಮುದ್ದಾಗಿ ಮಾತಾಡುಗು. (ಉದಾ : ಕೂರು ಹೇಳ್ತ ಶಬ್ದಲ್ಲಿ ಇಪ್ಪ 'ರ'ಕಾರವ ಉಚ್ಚಾರ ಮಾಡ್ಲೆ ಬಾಬೆಗೆ ಕಷ್ಟ ಆವುತ್ತು ಹೇಳಿ ಕೂಚು / ಕೂಚಿ ಹೇಳಿ ಹೇಳುಗು.). ಸಾಮಾನ್ಯ ಇಂಥಾ ಶಬ್ದಂಗೊ ೨ ಅಥವಾ ೩ ಅಕ್ಷರದ್ದು ಆಗಿಪ್ಪದು.
ನಮ್ಮ ಭಾಷೆಲಿ ಮಾಂತ್ರ ಅಲ್ಲ,ಇಂಗ್ಲೀಶಿಲೇ ಮಾತಾಡುವ ಜೆನಂಗ ಆದರೂ ಬಾಬೆಗಳ ಹತ್ರೆ [ಕೆಲವು ಸರ್ತಿ ಅವರ ಅಮ್ಮನ ಹತ್ರೂ ;-) ] ಮಾತಾಡುವಾಗ ಅವರ ಶೈಲಿ ರಜ್ಜ ಬದಲುತ್ತು.
ಕೆಳುಲೇ ಕುಶಿ. ಮಕ್ಕೊಗುದೇ, ನವಗುದೇ :-) ಎಂತಕೇಳಿರೆ, ನಾವುದೇ ಅದರ ಕೇಳಿಯೇ ದೊಡ್ಡ ಆದ್ದಲ್ದ, ಹಾಂಗೆ .

ಆಚಕರೆ ಮನೇಲಿ ಅಂತೂ ಈಗ ಈ ಭಾಷೆದೆ ಕಾರ್ಬಾರು. ಎಷ್ಟು ಹೇರ್ರೆ ಪಕ್ಕನೆ ದೊಡ್ದವರತ್ರೆ ಮಾತಾಡುವಾಗಲೂ ಅದೇ ಬಂದು ಬಿಡ್ತು ಅವಕ್ಕೆ. ಮಾಣಿ ಭಾವಂಗೆ ಒಂದೊಂದರಿ ಆನು, ಈಚಕರೆ ಪುಟ್ಟ ಎಲ್ಲ ತಮಾಷೆ ಮಾಡ್ಲಿದ್ದು, ನಿನಗೆ ಮಕ್ಕೊ ಆದಮತ್ತೆ ಎಂತೂ ಕಷ್ಟ ಆಗ ಬಾವ - ಹೇಳಿ. ಹಲ್ಲು ಕಿರಿಗು ಅವ°, ಮೀಸೆ ಎಡೇಲಿ.
ಎಡಪ್ಪಾಡಿ ಬಾವಂದೇ ಆನುದೆ ಮೊನ್ನೆ ಒಟ್ಟಿಂಗೆ ತೆಂಕ್ಲಾಗಿ ಹೋಗಿ ಬಂದೆಯೊ°. ಕಾರಿಲಿ ಕೂದಂಡು ಹೋಪಗ ಕೆಲವು ಹೇಳಿದವು. ಅದುದೇ, ಆಚಕರೆಲಿ ಕೇಳಿದ ಶಬ್ದಂಗಳೂ ಇಲ್ಲಿ ಇದ್ದಿದ:


ಅಂಬೆ / ಉಂಬೆ(ದನ )
ಅಂಬೆತಾಚಿ (ಸಗಣ )
ಅಚೆ (ಹಸೆ)
ಅಕ್ಕೆ (ಆಡಕ್ಕೆ)
ಎದ್ದ (ಏಳು)
ಉಗ್ಗು (ಅಶನದ ಅಗುಳು)

ಒಪ್ಪ (ಮುತ್ತು {ಚೋದ್ಯ: ಒಪ್ಪಣ್ಣ ಹೇಳ್ತ ಶಬ್ದ ಹಾಂಗೆ ಬಂದದು})
ಒಪ್ಪಿ (ಸಣ್ಣ ಕೂಸು)
ಒಕ್ಕು (ಒರಕ್ಕು)
ಒಕ್ಕುಂಞಿ (ಕುಂಞಿ ಬಾಬೆ ಮಾಡುವ ಒರಕ್ಕು )


ಕೂಚು / ಕೂಚಿ (ಕೂರು )
ಕೂಚಕ್ಕ (ಕೂಸು ಬಾಬೆ)
ಕೋಕಿ (ಕಾಣೆ, ಕಾಂಬ ಹಾಂಗೆ ಇಲ್ಲದ್ದು )
ಕುಞ್ಞಿ (ಸಣ್ಣದು)
ದೋಂದ (ಮೀವದು)


ಚಾವು (ಹಾವು)
ಚಾಮಿ (ನಾ: ದೇವರು )
ಚಾಮಿ (ಕ್ರಿ : ನಮಸ್ಕಾರ ಮಾಡು )
ಚಂದಪ್ಪ ಚಾಮಿ (ಚಂದ್ರ )
ಚಾಚಿ (ಮನುಗು)
ಚುಬ್ಬ (ಕೊಂಗಾಟದ ಮಾಣಿ )
ಚುಬ್ಬಿ (ಕೊಂಗಾಟದ ಕೂಸು )
ಜಾಯಿ (ಹಾಲು )
ಜೀಜಿ (ನೀರು )
ಜೈ ಜೈ (ಚಪ್ಪಾಳೆ )
ಞಾಞಿ (ತಿಂಬ ವಸ್ತು)


ಮಕ್ಕಳ ಭಾಷೆಲಿ ಈ ಅಕ್ಷರಂಗೊ ಸಾಮಾನ್ಯವಾಗಿ ಇರ್ತಿಲ್ಲೆ.


ತಟುಪುಟು (ನಡವದು)
ತಾನೆ (ನಿಂಬದು {ಕ್ರಿ / ನಾ} )
ತಾನೆ ತಾನೆ - ಪುಟ್ಟು ಪುಟ್ಟು (ಮೆಲ್ಲಂಗೆ ನಡವದು )
ತಾತ / ಟಾಟ (ಹೋಪದು)
ತಾಚಿ (ಹೇಸಿಗೆ)
ತೋಚಿ (ಇಡುಕ್ಕುದು)
ದಾದೆ (ಮನುಗುದು {ಕ್ರಿಯಾಪದ / ನಾಮಪದ - ಎರಡುದೇ} )
ದೋಚೆ (ದೋಸೆ)


ಪೋಕ (ಲೂಟಿ ಮಾಣಿ ಬಾಬೆ )
ಪೋಕಿ (ಲೂಟಿ ಮಾಡುವ ಕೂಸು ಬಾಬೆ )
ಪೊಪ್ಪೆ (ವಸ್ತ್ರ)
ಪೂಪಿ (ಹೂಗು)
ಪುಟ್ಟುಂಬೆ (ದನದ ಕಂಜಿ)
ಬಬ್ಬು (ಮದ್ದು)
ಬಬ್ಬು ಮಾವ (ಡಾಕ್ಟ್ರು)
ಬಾಬೆ (ಮಗು)
ಬೊಂಬ (ಬೊಂಡ )
ಬೋಚು (ಮೊಸರು )
ಬೋಚು ಕಾಯಲು (ಬನ್ನಂಗಾಯಿ ಹಾಕಿ ಮಾಡಿದ ಚೀಪೆ ಪಚ್ಚಡಿ)
ಮಾಮು (ತಿಂಬ ವಸ್ತು )
ಮುಂಡು ಮುಂಡು - ಕುಟ್ಕಿ.. (ತಲೆಗೆ ತಲೆ ಕುಟ್ಟುದು)


ಹಪ್ಪ (ಜೋರು ಮಾಡುದು)

ಈ ಪಟ್ಟಿಲಿ ಬಿಟ್ಟು ಹೋದ್ದದು ಇದ್ದರೆ ಕೂಡ್ಲೇ ತಿಳ್ಸಿ. ನಿಂಗಳ ಆಳ್ಸಿದ್ದೋ, ಅಲ್ಲದ್ರೆ ನಿಂಗಳ ಮಕ್ಕಳ ಆಳ್ಸಿದ್ದೋ ಮಣ್ಣ ನೆಂಪಿದ್ದರೆ ಬರೆಯಿ ಆತಾ . . . ?

ಒಂದೊಪ್ಪ: ಮಕ್ಕೊ ಸಣ್ಣ ಇಪ್ಪಗ ನಾವು ಕೊಂಗಾಟ ಮಾಡಿರೆ, ದೊಡ್ಡ ಆದ ಮತ್ತೆ ಅವು ನಮ್ಮ ಕೊಂಗಾಟ ಮಾಡ್ತವು. ಗೊಂತಿದ್ದಲ್ದಾ ?