ಬೈಗಳು ಶಬ್ದಕೋಶ: ಕುಂಬ್ಳೆ ಸೀಮೆಯ 'ಹವ್ಯಕ ಬೈಗಳು'ಗಳ ಸಂಗ್ರಹ

ಬೈಗಳು ಕೆಟ್ಟದ್ದಲ್ಲ,
ನಮ್ಮ ಮನಸ್ಸಿಲಿ ಇಪ್ಪ ಪಿಸುರು ಎದುರಾಣವಂಗೆ ಸೂಚಿಸುಲೆ ಇಪ್ಪ ಕೆಲವು ಶಬ್ದಂಗೊ.
ಕಪ್ಪು ೩ ರ ಏರುಸ್ವರ ಲ್ಲಿ ಈ ಶಬ್ದಂಗೋ ಬಂದರೆ ಜಗಳ ಮಾಡ್ತವು ಹೇಳಿ, ಅಲ್ಲದ್ರೆ ಎಂತಾರು ಶುದ್ದಿ ಮಾತಾಡ್ತವು ಹೇಳಿ ಲೆಕ್ಕ, ಅಷ್ಟೇ - ಹೇಳಿ ಪದ್ಯಾಣ ಭಾವ ಹೇಳುಗು ಕುಶಾಲಿಂಗೆ.

ನಮ್ಮ ಭಾಷೆಲಿ ಬಯಂಕರ ಚೆಂದ ಚೆಂದದ ಬೈಗಳುಗೊ ಇದ್ದು. ಕೆಲವು ನೆಗೆ ಬಪ್ಪಲೆ ಹೇಳಿಯೇ ಬೈವದು. ನಮ್ಮೋರು ಹೆಚ್ಚಿನವುದೇ ಬೈವದು ಹಿಂದಂದಲೇ ಆದ ಕಾರಣ, ಎದುರೇ ಕೇಳುಲೆ ಸಿಕ್ಕುತ್ತಿಲ್ಲೆ, ಸಿಕ್ಕಿರೂ ಬೇರೆಯವರ ಬೈವಗ ಆಗಿರೆಕ್ಕಷ್ಟೆ, ಅಷ್ಟಪ್ಪಗ ಕೇಳಿಗೊಂಡು ಕೂಪ ಕ್ರಮ ಒಪ್ಪಣ್ಣಂಗಿಲ್ಲೆ. ನಮ್ಮನ್ನೇ ಬೈದರೆ, ಕೇಳುವ ವ್ಯವಧಾನವೇ ಇರ್ತಿಲ್ಲೆ. :-)

ಮೊನ್ನೆ ಬೆಳ್ಳಿಪ್ಪಾಡಿ ಕುಂಞಪಚ್ಚಿ ಸಿಕ್ಕಿದವು, ಅವು ರಜ್ಜ ಕುಶಾಲು ಜೆನ ಇದಾ.. 'ಹಿರಣ್ಯದ ಮಾವ°, ಅವು ಇವು ಎಲ್ಲ ಸೇರಿ ಹವ್ಯಕ ಹಾಡುಗಳ / ಬೇರೆ ಸಾಹಿತ್ಯಂಗಳ ಸಂಗ್ರಹ ಮಾಡಿದ್ದವು, ಬೈಗಳಿನ ಸಂಗ್ರಹ ಆರುದೇ ಮಾಡಿದ್ದವಿಲ್ಲೇ' ಹೇಳಿ ಹೇಳಿದವು. ಎನಗೆ ಕಂಡತ್ತು, 'ಒಪ್ಪಣ್ಣ° ಏಕೆ ಮಾಡ್ಲಾಗ ಅದರ', ಹಾಂಗೇಳಿ ಎನಗೆ ಹೆಚ್ಚು ಬೈಗಳು ಕೇಳಿ ಗೊಂತಿದ್ದು ಹೇಳಿ ಲೆಕ್ಕ ಅಲ್ಲ . ;-)
ಕೂದಲ್ಲಿಗೆ ಈಚಕರೆ ಪುಟ್ಟ° ಮತ್ತೆ ಒಪ್ಪಣ್ಣ ಸೇರಿಗೊಂಡು ಬೈಗಳುಗಳ ಸಂಗ್ರಹ ಮಾಡಿದೆಯೊ. ಕರೆಲಿ ಕೂದೊಂಡಿದ್ದ ಎಡಪ್ಪಾಡಿ ಬಾವಂದೇ ಸುಮಾರು ಗೊಂತಿದ್ದದರ ಹೇಳಿದವು.
ಬೈಗಳು ಓದುವ ವ್ಯವಧಾನ ಇದ್ದರೆ ಓದಿ :-D
ಛೆ, ಆಚಕರೆ ಮಾಣಿ ಅಲ್ಲಿ ಇತ್ತ°ಯಿಲ್ಲೆ, ಅವನ ಅಳಿಯಂಗೆ ನೇವಳ ಮಾಡ್ಸಲೇಳಿಗೊಂಡು ಸೂರಂಬೈಲು ಆಚಾರಿ ಕೊಟ್ಟಗೆಗೆ ಹೋಗಿತ್ತಿದ್ದ°. ಅವ° ಇದ್ದಿದರೆ ಇನ್ನೂ ಸುಮಾರು ಸಿಕ್ಕುತಿತು. ಇರ್ಲಿ, ಅಂತೂ ಇಷ್ಟಾದರೂ ಇದ್ದನ್ನೆ. ಬಿಟ್ಟು ಹೋದರೆ ಅವ° ಕಮೆಂಟು ಬರಗು.


ಅದಿಕ ಪ್ರಸಂಗಿ (ಲೆಕ್ಕಂದ ಹೆಚ್ಚಿಗಾಣದ್ದು ಮಾಡುವವ°)
ಅನಿಷ್ಟ (ಅಶುಭ ಸೂಚಕ ವ್ಯಕ್ತಿ)
ಅಪರ ಡೆಂದ (ಯಾವದಕ್ಕೂ ಉಪಕಾರಕ್ಕಿಲ್ಲದ್ದವ°)
ಅಂಡೆ (ಪೂರ್ತಿ ಸ್ಥಿಮಿತ ಇಲ್ಲದ್ದವ°)
ಎರೆಪ್ಪು (ಪೆದಂಬು, ಹೇಳಿದ್ದಕ್ಕೆ ತದ್ವಿರುದ್ಧ ಮಾಡುವವ°)
ಎಬೇಲೆ (ಅಸಹ್ಯ)
ಎಳಮ್ಮೆ (ರಜ್ಜ ಮಂದ ಬುದ್ಧಿ <ಹಲ್ವ ಕಾಸುವಾಗ ಎಳಮ್ಮೆ ಹೇಳ್ರೆ, ಸಕ್ಕರೆಪಾಕ ಬೇಕಾದಷ್ಟು ಬೇಯಿಂದಿಲ್ಲೆ ಹೇಳಿ ಅರ್ಥ >)
ಓಡಾರಿ (ಕ್ರಮ ಅರಡಿಯದ್ದವ°)
ಅರೆ ಮರುಳ° (~ ಮರ್ಲ°)
ಅಂಬರ ಮರ್ಲ° (~ ಮರ್ಲ°)


ಕರ್ಮ (ಸಹ್ಯ ಇಲ್ಲದ್ದ ಕೆಲಸ ಮಡಿದ ಜನ, ಸಾಮನ್ಯ ಉಚ್ಚಾರ : ಖರ್ಮ)
ಕಾಟು (ಕ್ರಮ ಗೊಂತಿಲ್ಲದ್ದ°)
ಕುರೆಪ್ಪಾಟು (ಗಲೀಜು ಮಾಡುವವ°)
ಕುರೆಪ್ಪಾಟು ಸುಬ್ಬ / ಸುಬ್ಬಿ (ಗಲೀಜು ಮಾಡುವವ° - ಗೆಳೆತನದ ಪರಿಧಿಲಿ)
ಕೊರೆಂಙು (ಮಂಗ - ಮಲೆಯಾಳದ ಒತ್ತು)

ಗುಳಿಗ್ಗ° ( ದೈತ್ಯಾಕಾರದ / ಚುರುಕ್ಕು ಇಲ್ಲದ್ದವ° <ತುಳುನಾಡಿನ ಒಂದು ಬೂತದ ಹೆಸರುದೆ ಅಪ್ಪು>)
ಗೊಬ್ಬರ ಸುಬ್ಬ° (ಒಟ್ಟಾರೆ ಇಪ್ಪವ°, ಉಡುಗೆ ತೊಡುಗೆ ಚರ್ಯೆ ಎಲ್ಲ ಹರಗಿ ಇದ್ದರೆ ಹೀಂಗೆ.)
ಗೋಸಾಯಿ (ಸಾಧು , ಎಂತೂ ಸ್ಥಿಮಿತ ಇಲ್ಲದ್ದವ° )


ಜಗುಡ° ( ಮರುಳ, ಸಾಮಾನ್ಯ ಉಚ್ಚಾರ : ಜಗ್ ಡ)
ಜಡ ಭರತ° (ಚುರ್ಕು ಇಲ್ಲದ್ದವ )


ಡುಮ್ಮಿ (ಸೋಮಾರಿ - ಸಾಮಾನ್ಯವಾಗಿ ಕೂಸುಗಳ ಬೈವ ಶಬ್ದ)


ತಲೆ ಹರಟೆ (ಸುಮ್ಮನೆ ರಗಳೆ ಮಾಡುವವ°)
ತಾಟಕಿ (ಜೋರಿನ ಹೆಮ್ಮಕ್ಕೋ / ಕೂಸು )
ತಿಂಬ್ರಾಂಡಿ (ಅಳತೆ ಮೀರಿ ತಿಂಬವ°)
ತಿರ್ಗಾಡಿ (ತಿರುಗಾಡಿ - ಸ್ಥಿಮಿತ ಇಲ್ಲದ್ದವ° )
ತುರ್ಕ (ಪೆದಂಬು ಮಾಡುವವ° <ತುರುಕ ಹೇಳಿರೆ ಮಾಪಳೆ ಹೇಳಿ ಅನ್ವರ್ಥ > )

ದರಿದ್ರದ್ದು (ಅನಿಷ್ಟದವ°)
ದೊಣೆಯ (ಸೋಮಾರಿ)
ದುರುಸು ( ಮರ್ಲ°, ಸಾಮಾನ್ಯ ಉಚ್ಚಾರ : ದುರ್ಸು )

ಧರ್ಮ ದಂಡದ್ದು (ಉಪಕಾರಕ್ಕೆ ಇಲ್ಲದ್ದವ°)
ನಾಯಿ (ಒಡೆಯನ ಆಜ್ಞೆ ಇಲ್ಲದ್ದೆ ಕೆಲಸ ಮಾಡಲೇ ಅರದಿಯದ್ದವ°)
ನೇರ್ಪ ಇಲ್ಲದ್ದು (ತಲೆ ಸರಿ ಇಲ್ಲದ್ದು, ನೆರ್ಪ ಹೇಳಿರೆ ಸರಿ ಹೇಳಿ ಅರ್ಥ )


ಪರ್ದೇಶಿ (ಕ್ರಮ ಅರಡಿಯದ್ದವ <ಪರ ದೇಶಂದ ಬಂದವ° ಹೇಳಿ ಅರ್ಥ>)
ಪಟಿಂಗ (ಕ್ರಮ ಇಲ್ಲದ್ದವ° , ಪ್ಫಟಿಂಙ - ಇದು ನಿಜವಾದ ಉಚ್ಚಾರ )
ಪಿರ್ಕಿ (ಮಕ್ಕಳಾಟಿಕೆಯ ಜೆನ )
ಪೋಕ್ರಿ (~ ಪಿರ್ಕಿ )
ಪೆರಟ್ಟು (ಪೆದಂಬು, ಪೆದಂಬ°)
ಪೆಂಗ (ಹೆಡ್ಡ)
ಪೆದಂಬ° (ಹೇಳಿದ್ದಕ್ಕೆ ತದ್ವಿರುದ್ಧ ಮಾಡುವವ )
ಪೆಟ್ಟು ಕಮ್ಮಿ (~ ಮರ್ಲ° )

ಪ್ರಾಂದು (ಮರುಳು, ಮರ್ಲ° )
ಬಸವ° (ಹೆಡ್ಡು ಹೆಡ್ಡು ಮಾಡುವ ಜೆನ )
ಬೇಡು ಪರ್ದೇಶಿ (ಪರ್ದೆಶಿಲಿ ಕಚ್ಚಾ , ಪರದೇಶಂದ ಬಂದ ಬೇಡುದು)

ಬಿಕನಾಸಿ (ಭಾಷೆ / ಬುದ್ಧಿ ಅರಡಿಯದ್ದವ°)
ಬುರ್ನಾಸು (ಎಂತಕೂ ಪ್ರಯೋಜನ ಇಲ್ಲದ್ದವ° {ಚೋದ್ಯ: ನಿಜವಾಗಿ ಬುರ್ನಾಸು ಹೇಳಿರೆ ಮೆಸ್ತ್ರಿಗೊಕ್ಕೆ ಅತೀ ಅಗತ್ಯ ಬೇಕಪ್ಪ ಸಾಮಾನು })

ಬೆಪ್ಪ° (ಹೆಡ್ಡ° )
ಬೆಪ್ಪು ತಕ್ಕಡಿ (ಹೆಡ್ಡ° , ತಕ್ಕಡಿ ಹೇಳಿರೆ ಅಂತೆ ರೂಡಿಲಿ ಇಪ್ಪದು ಇಪ್ಪದು ಅಷ್ಟೇ)
ಬೋಳ° (ಹೆಡ್ಡ° )
ಬೋದಾಳ° (ಹೆಡ್ಡ° )
ಬೋದಾಳ ಸಿಂಗ° (ಹೆಡ್ಡರ ಹೆಡ್ಡ - ಸರ್ದಾರು ಇದ್ದ ಹಾಂಗೆ )
ಬೋಸ° (ಹೆಡ್ಡ° )
ಬೋಸುಕುಂಟ್ಯ° (ಹೆಡ್ಡ° )
ಬೆಗುಡ° (ಸಭ್ಯತೆ ಇಲ್ಲದ್ದವ° )
ಬೆಗ್ಡ್ ದತ್ತ° (~ ಬೆಗುಡು)
ಬ್ರಾಂತು (ಮರುಳು)
ಭಾಷೆ ಕೆಟ್ಟದು (ಬುದ್ಧಿ ಇಲ್ಲದ್ದು, ಭಾಷೆ ಹೇಳಿರೆ ಬುದ್ಧಿ ಹೇಳಿ ಅನ್ವರ್ಥ ಇಲ್ಲಿ )

ಮಂಗ° (ಅನಪೇಕ್ಷಿತ ಚರ್ಯೆ ಇಪ್ಪವ°)
ಮರುಳ° (ಮಾನಸಿಕ ವಾಗಿ ಸ್ಥಿಮಿತ ಇಲ್ಲದ್ದ ಜೆನ )
ಮಞನಾಡಿ (ಪೆದಂಬು ಮಾಡುವ ಜನ <ಚೋದ್ಯ: ಮಂಜನಾಡಿ ಹೇಳಿರೆ ಮಾಪ್ಲೆಗಳೇ ಇಪ್ಪ ಒಂದು ಊರು >)
ಮಜಡ° (ಹೆಬಗ°)
ಮಾರಿ (ಅನಿಷ್ಟ )
ಮೂರ್ಕಾಸು (ಬೆಲೆ ಇಲ್ಲದ್ದವ°)
ಮೋಞ (ಹೆಡ್ಡ)


ಯೆರ್ಬೆ (ಹೆಡ್ಡು)
ರಗಳೆ (ಮುಜುಗರ ಉಂಟುಮಾಡುವವ°)
ಲೊಟ್ಟೆ ಸುಬ್ಬ° / ಸುಬ್ಬಿ (ಲೊಟ್ಟೆ ಹೇಳುವವ)
ಶೆನಿ (ಅನಿಷ್ಟ , ನಿಧಾನದ್ದು)
ಸಿಂಗಳೀಕ (ಮಂಗನ ಹಾಂಗೆ, ರಜ್ಜ ಖಾರಕ್ಕೆ)
ಸುರ್ಪಕೆಟ್ಟದು (ಅನಿಷ್ಟದ್ದು , ಸುರ್ಪ ಹೇಳಿರೆ ಸ್ವರೂಪದ ಅಪಭ್ರಂಶ )
ಸೂಟೆ (ಜೋರಿನ ಜೆನ - ಸ್ತ್ರೀ)
ಸೊಯಿಂಪ (ಬೇಗ ಕೋಪ ಬಪ್ಪ ಜೆನ )

ಹರವಸು ಕೆಟ್ಟದು (ಅನಿಷ್ಟ)
ಹಸಿತುರ್ಕ ( ಕಚ್ಚಾ ತುರ್ಕ° :-D)
ಹೆಬಗ° (ಹೆಡ್ಡ° )
ಹೆಡಬ್ಬೆ (ಎಂತೂ ಅರಡಿಯದ್ದು )
ಹೆಡ್ಡ° / ಹೆಡ್ಡು (ಮಂದ ಬುದ್ಧಿ)
ಹಾರೆಂಗಿಲು (ಸಭ್ಯತೆಯ ಮೇರೆ ದಾಂಟಿದ ಜೆನ - ಸ್ತ್ರೀ . )

ಸೂ: ಮಕ್ಕಳುದೆ ಓದುವ ಹಾಂಗಿಪ್ಪ ನೆಗೆ ತರುಸುವ ಬೈಗಳುಗೋ ಮಾಂತ್ರ ಇಲ್ಲಿ ಇದ್ದು. ತುಂಬಾ ಹಾನಿಕಾರಕ ಬೈಗಳುಗಳ ಇಲ್ಲಿ ಬರದ್ದಿಲ್ಲೆ. ಈಚಕರೆ ಪುಟ್ಟ ಬೇಡ ಹೇಳಿದ°.

ನಿಂಗೋಗೆ ಗೊಂತಿಲ್ಲದ್ದು ಇದರ್ಲಿತ್ತಾ? ನಿಂಗೋಗೆ ಗೊಂತಿಪ್ಪದು ಇದರಲ್ಲಿಲ್ಲೆಯ ?
ಕೂಡ್ಲೇ ತಿಳ್ ಸಿ ಒಪ್ಪಣ್ಣಂಗೆ.

ಒಂದೊಪ್ಪ: ಬೈಗಳು ಶಬ್ದಂಗೊ ಗೊಂತಿಲ್ಲದ್ದವ ಒಳ್ಳೆಯವ ಹೇಳಿ ಅಲ್ಲ, ಉಪಯೋಗಿಸಲೆ ಗೊಂತಿಲ್ಲದ್ದವ° ಕೆಟ್ಟವ ಅಷ್ಟೇ.