ಹೆಸರಿಲಿ ಎಂತ ಇದ್ದು?

ಹೆಸರೆಂತ ಹೇಳಿ ಆತು? - ಶಿಶು ಹುಟ್ಟಿದ ಕೂಡ್ಲೇ ಎಲ್ಲೊರು ಕೇಳುವ ಪ್ರಶ್ನೆ. ಎಲ್ಲೋರಿಂಗೂ ಆತುರ. ಪುರ್ಸೊತ್ತೇ ಇಲ್ಲೆ.
ಜೀವಮಾನ ಪೂರ್ತಿ ದಿನಿಗೆಳುವ ಹೆಸರಿನ ಆಯ್ಕೆ ಮಾಡುವ ಅವಕಾಶ ಕೇವಲ ಕೆಲವು ದಿನಂಗ ಮಾಂತ್ರ.
ಕಾಲ ಹೋದ ಹಾಂಗೆ ಹೆಸರು ಮಡುಗುತ್ತದು ಹೇಂಗೆ ಬದಲಾಯಿದು ಹೇಳಿ ಗೊಂತಿದ್ದಾ?

ಸಾಮಾನ್ಯ ಹೆಸರು ಮಡುಗುವಾಗ ಕೆಲವೇ ಕೆಲವು ವಿಷಯಂಗೋ ನೋಡ್ತವು.
ಅಜ್ಜನ ಕಾಲ್ಲಲ್ಲಿ:

ಹಿಳ್ಳೆ - ಮಾಣಿಯೋ,
ಸುರುವಾಣವ° ಆದರೆ, ಮನೆ ಅಜ್ಜನ ಹೆಸರು.
ಎರಡ್ನೆಯವ° ಆದರೆ, ಅಜ್ಜನ ಮನೆ ಅಜ್ಜನ ಹೆಸರು
ಮೂರ್ನೆಯವ° ಆದರೆ, ಮನೆ ಮುದಿ-ಅಜ್ಜನ ಹೆಸರು
ನಾಲ್ಕನೆಯವ° ಆದರೆ,ಅಜ್ಜನ ಮನೆ ಮುದಿ ಅಜ್ಜನ ಹೆಸರು. ಹೀಂಗೆ ಪಟ್ಟಿ ಬೆಳೆತ್ತು. . .

ಕೂಸೋ,
ಸುರುವಾಣದ್ದಾದರೆ , ಮನೆ ಅಜ್ಜಿ ಹೆಸರು,
ಎರಡ್ನೆದೋ, ಅಜ್ಜನ ಮನೆ ಅಜ್ಜಿ.
ಮೂರ್ನೆದೋ, ಮನೆ-ಮುದಿ ಅಜ್ಜಿ, ಹೀಂಗೆ ಪಟ್ಟಿ . .
ಎಷ್ಟು ಮಕ್ಕೊ ಹುಟ್ಟಿರೂ ಅವಕ್ಕೆ ತಲೆಬೆಶಿ ಇಲ್ಲೆ. ಈ ಲೆಕ್ಕಾಚಾರ ಹಾಕಿತ್ತು, ಹೆಸರು ಮಡುಗಿತ್ತು .
ಇದರಿಂದ ಒಂದು ಲಾಭ ಇತ್ತು, ಅಜ್ಜಿ - ಅಜ್ಜಂದ್ರ ಹೆಸರು ಪೂರ ನೆಂಪಿಕ್ಕು ಮನೆಲಿ ಎಲ್ಲೋರಿಂಗೂ .
ಮನೇಲಿ ದಿನಿಗೆಳುಲೆ ಎಂತಾರು ಅಡ್ಡ ಹೆಸರು ಇಕ್ಕು, ಒಪ್ಪಣ್ಣ, ಮಗುವ, ಪುಟ್ಟ , ಕುಂಞಿ, ಮಾಣಿ, ಒಪ್ಪಕ್ಕ, ಅಬ್ಬೆ, ಮೋಳು , ಇತ್ಯಾದಿ ಇತ್ಯಾದಿ.
ಸುಲಭದ ಲಾಜಿಕ್ಕು. ಅಲ್ದೋ? :-), ಈಗಾಣ ಸಾಫ್ಟ್ವೇರ್ ಮಂಡೆಗೊ ಆದರೆ ಎಂತಾರು ಪ್ರೋಗ್ರಾಮು ಬರೆತ್ತಿತವು, ಇಂಥವನ ಇಷ್ಟನೇ ಮಗನ ಇಷ್ಟನೇ ಮಗಳಿಂದು ಇಂಥಾ ಹೆಸರೇ - ಹೇಳಿ ಕೂದಲ್ಲಿಂದಲೇ ಒಂದು ಸ್ವಿಚ್ಚು ಒತ್ತಿ ಹೇಳ್ತಿತವು, :-D ಅಲ್ದೋ?

ನಮ್ಮ ಕಾಲಲ್ಲಿ:
ಕಾಲ ಬೆಳದ ಹಾಂಗೆ, ಅಮ್ಮಂದ್ರಿಂಗೆ ಹೊಸ ಹೆಸರು ಬೇಕು ಹೇಳಿ, ಆದರೆ ಹಳೆ ಕ್ರಮ ಪೂರ ಬಿಡ್ಲೇ ಅತ್ತೆಗೆ ಮನಸ್ಸಿಲ್ಲೆ,
ಲಲಿತಾ ಸಹಸ್ರನಾಮವೋ, ವಿಷ್ಣು ಸಹಸ್ರನಾಮವೋ ಎಂತಾರು ಓದಿ, ಚೆಂದ ಕಂಡ ಹೆಸರಿನ ಒಂದು ನೆಂಪು ಮಡಿಕ್ಕೊಂಗು, ಹಿಳ್ಳೆ ಹುಟ್ಟಿದ ಕೂಡ್ಲೇ ಮಾಣಿಯೋ , ಕೂಸಾ ನೋಡಿಗೊಂದು ಒಂದರ ಧೃಡ ಮಾಡಿಗೊಂಗು.

ಅರ್ಧ ಹೊಸ ಹೆಸರು ಮಡುಗ್ಗು, ಅರ್ಧ ಹಳತ್ತು -
ಶಂಕರಜ್ಜನ ಪುಳ್ಳಿ ಶಂಕರ ಕಿರಣ, ರಾಮಜ್ಜನ ಪುಳ್ಳಿ ರಾಮ ಕೀರ್ತಿ. ಕೃಷ್ಣ ಭಟ್ರ ಪುಳ್ಳಿ ಕೃಷ್ಣ ಪ್ರಕಾಶ, ನಾರಾಯಣ ಭಟ್ರ ಪುಳ್ಳಿ ಹರಿ ನಾರಾಯಣ, ಸಾವಿತ್ರಿ ಅಜ್ಜಿಯ ಪುಳ್ಳಿ ವೀಣಾ ಸಾವಿತ್ರಿ, ಪಾರ್ವತಿ ಅತ್ತೆಯ ಪುಳ್ಳಿ ಸ್ವಪ್ನಾ ಪಾರ್ವತಿ-- ಇತ್ಯಾದಿ ಇತ್ಯಾದಿ.
ಅದೆಲ್ಲ ನಮ್ಮ ಕಾಲಲ್ಲಿ ಆತು.

ಆದರೆ ಈಗಳೊ° ?
ಕೆಲವು ವಿಶೇಷ ಕಟ್ಟು ಪಾಡುಗೊ:
ಒಂದು, ಅದು '' ಅಂದ ಸುರು ಆಯೆಕ್ಕು. ಶಾಲೇಲಿ ಹಾಜರಿ ಪುಸ್ತಕಲ್ಲಿ ಸುರೂವಿಂಗೆ ಬಪ್ಪಲೆ ಬೇಕಾಗಿ.
ಇನ್ನೊಂದು- ಅದು 2 , ತಪ್ಪಿರೆ- 3 ಅಕ್ಷರ ಇರೆಕ್ಕು. ಹೆಳುಲೆ ಬಂಙ ಅಪ್ಪಲಾಗ ಇದಾ, ಹಾಂಗೆ.
ಇನ್ನೊಂದು- ಎಡಿಗಾರೆ ಅದರ್ಲಿ ಅಪ್ಪನ & ಅಮ್ಮನ ಹೆಸರಿನ ತುಂಡುಗೊ (ಇಂಗ್ಲೀಷು ಲೆಕ್ಕಲ್ಲಿ) ಬರೆಕ್ಕು - ಕಾರಣ ಗೊಂತಿಲ್ಲೆ .
ಮತ್ತೊಂದು - ಹತ್ತರೆ ನೆಂಟರ ಮಕ್ಕೊಗೆ ಎಲ್ಲಿಯೂ ಆ ಹೆಸರು ಇಪ್ಪಲಾಗ.
ಮಗದೊಂದು ಬೇರೆಂತ ಇದ್ದಪ್ಪಾ... ಒಪ್ಪಣ್ಣಂಗೆ ಇನ್ನೂ ಆ ಅನುಭವ ಇಲ್ಲೆ ಇದಾ...! ;-)
ಮಾರ್ಗದ ಕರೆಲಿ ಪುಸ್ತಕ, ವೆಬ್ ಸೈಟಿಲಿ ಮಕ್ಕೊಗೆ ಮಡುಗುಲಕ್ಕಾದ ಹೆಸರುಗಳ ಪಟ್ಟಿಗೊ ಎಲ್ಲ ಸಿಕ್ಕುತ್ತು ಹೇಳಿ ಈಚಕರೆ ಪುಟ್ಟ° ಹೇಳಿದ ಮೊನ್ನೆ. ಉಮ್ಮ - ಎಂತದೋ.


ಒಪ್ಪಣ್ಣನ ಗುರ್ತದ ಒಂದು ತಮಿಳ° ಇದ್ದು, ವಾವಿನ್ ನ ಅಪ್ಪ. 'ಅದೆಲ್ಲ ಅಪ್ಪು ಮಾರಾಯ°, ಆ ವಾವಿನ್ನು ಹೇಳಿರೆ ಅರ್ಥ ಎಂತದೋ?'- ಹೇಳಿ ಕೇಳಿದೆ ಒಂದರಿ. ಅದು ಹೇಳಿತ್ತು,- ಎಂತ ಇಲ್ಲೆ ಪಟ್ರೆ , ವಾ ಹೇಳಿರೆ 'ಬಾ', ವಿನ್ ಹೇಳಿರೆ ವಿನ್ನು(ಗೆಲ್ಲು), ಅಷ್ಟೇ! ಕೊತ್ತಳಿಂಗೆ ಹೊಳಿಮಣೆಲಿ ಹಸಿಗೋಡೆಗೆ ಜೆಪ್ಪಿದ ಹಾಂಗೆ ಹೇಳಿತ್ತು.
ಯಪ್ಪಾ ಇದರ ಮಂಡಗೆ. . . ಹೇಳಿ ಕಂಡತ್ತು ಎನಗೆ. :-) . ಎಂತಾ ಡಿಮಾಂಡಡ ಗೊಂತಿದ್ದ ಅದಕ್ಕೆ, ಹೊಸ ನಮೂನೆ ಹೆಸರು ಮಡಗಲೆ.

ವಾವಿನ್, ಅವಿನ್, ಅಮರ್, ರಾಕಿ, ಪಿಂಕಿ ಹೇಳಿ ಸಂಸ್ಕೃತ, ಇಂಗ್ಲೀಷು ಎರಡ್ರಲ್ಲಿಯೂ ಅರ್ಥ ಇಲ್ಲದ್ದ ಹೆಸರುಗೋ ಮಡುಗುದರಿಂದ, ಒಳ್ಳೆ - ಒಪ್ಪೊಪ್ಪ ಹೆಸರು ಮಡಗಿ ಜೀವಮಾನ ಪೂರ ಸಂತೋಶಲ್ಲಿ ದಿನಿಗೆಳುಲಾಗದೋ?

ಆಚಕರೆ ಮಾಣಿಗೆ ಅಳಿಯ° ಹುಟ್ಟಿದ° ಮೊನ್ನೆ. ಆಸ್ಪತ್ರೆಂದ ಬಂದ ಹಿಳ್ಳೆ - ಬಾಳಂತಿಯ ನಿನ್ನೆ ನೋಡಿಕ್ಕಿ ಬಂದೆ, ಉಶಾರಿದ್ದವು.
ಇಂದು ಕೂದೊಂಡು ಎಲೆ ತಿಂಬಗ ಇಷ್ಟೆಲ್ಲಾ ನೆಂಪಾತು. ಬರದೆ . :-)

ಒಂದೊಪ್ಪ: ನಿಂಗಳ ಅಪ್ಪನ-ಅಜ್ಜನ ಹೆಸರು ನೆಂಪಿದ್ದೋ ನಿಂಗೊಗೆ?