ಕಾಪಿ - ಚಾಯ : ಹೊತ್ತು ಸೂಚಕ ಪಾನೀಯಂಗಳ ಬಗ್ಗೆ

ಕಾಪಿ ಕುಡುದಾತ? ಉದಿಯಪ್ಪಗಾಣ ಹೊತ್ತಿಂಗೆ ಪಕ್ಕನೆ ಆರಾರು ಸಿಕ್ಕಿರೆ ಕೇಳುವ ಸಾಮಾನ್ಯ ಪ್ರಶ್ನೆ . ಉದಿಯಪ್ಪಗ ಎದ್ದ ಕೂಡ್ಲೇ ಹಲ್ಲು ತಿಕ್ಕಿ, ಮಿಂದು, ಜೆಪ-ತಪ ಎಲ್ಲ ಮುಗುಶಿಕ್ಕಿ ಮಾಡುವ ಸಣ್ಣ ತಿಂಡಿಗೆ 'ಕಾಪಿ' ಹೇಳಿ ಹೆಸರು. 'ಕಾಪಿಗೆಂತ?' ಹೇಳಿ ಕೇಳಿರೆ 'ಉದಿಯಪ್ಪಗ ತಿಂಡಿ ಎಂತ?' ಹೇಳಿ ಅರ್ಥ. ದೋಸೆಯೋ, ಸಜ್ಜಿಗೆಯೋ ಎಂತಾರು ಹೇಳ್ತವು. ಅದರ ಒಟ್ಟಿಗೆ ಕುಡಿವಲೆ ಚಾಯ ಇದ್ದರೂ ಆತು, ಅದು ಚೋದ್ಯ ಇಲ್ಲೆ. ಕೆಲವು ಮನೆಲಿ ಕಾಪಿಗೆ 'ಹೆಜ್ಜೆ' (ಗಂಜಿ) ಆದರೂ ಆತು. :-) ಎಲ್ಲೋರಿಂಗೂ ಗೊಂತಿಪ್ಪ ವಸ್ತುವಾಚಕ ಅದು.

ಮದಲಿಂಗೆ ಕಾಪಿಯೂ ಹಾಂಗೇ! ಸಾಮಾನ್ಯ ನಮ್ಮೋರ ಮನೆಗಳಲ್ಲಿ ಮಾಡುದು 'ಬೆಲ್ಲದ ಕಾಪಿ'. ಬೆಲ್ಲದ ಚೀಪೆ ಕಾಪಿ. ಬೆಲ್ಲ + ನೀರು ಒಲೆಲಿ ಮಡುಗಿ, ಅದು ಕರಗಿ ಬಳ-ಬಳ ಹೇಳಿ ಕೊದಿವಗ ಕಾಪಿ ಹೊಡಿ ಹಾಕಿ ಇಳುಗುದು. ರಜ್ಜ ಹನುದಮತ್ತೆ ಅದಕ್ಕೆ ಹಾಲು ಹಾಕಿ ಕುಡಿವದು. ಕರಿ ಅರಿಶಲೆ ಎಲ್ಲ ಇಲ್ಲೆ, ಅಡಿಲಿ ಇಕ್ಕು- ಕುಡಿತ್ತವನೆ ಅದರ ಕರಡದ್ದ ಹಾಂಗೇ ಕುಡಿಯೆಕ್ಕು. ಮಕ್ಕೊಗೆ ಕಾಪಿಹೊಡಿ ಉಷ್ಣ ಹೇಳಿ ಆದರೆ- ಆ ಬೆಲ್ಲದ ನೀರು ಕೊದಿತ್ತದಕ್ಕೆ ಹಾಲು ಹಾಕಿ ಬೆಲ್ಲನೀರು ಕೊಡುಗು. ಕೆಲವು ಮನೆಗಳಲ್ಲಿ ಅಂತೂ ೨೪ ಗಂಟೆ ಬೆಲ್ಲದ ಕಾಪಿ ಹಂಡೆ ಇಕ್ಕೇ ಇಕ್ಕು. (ಈಗ ರಜ್ಜ ಫ್ಯಾಶನ್ ಎಲ್ಲ ಸೇರಿ, ಗೋಬರ್ ಗ್ಯಾಸು, ಹಂಡೆ ಗ್ಯಾಸು ಎಲ್ಲ ಬಂದು - ಡಿಕೋಕ್ಷನು ತಯಾರು ಮಾಡಿ ಮಡುಗಿ, ಕಾಪಿ ಬಗ್ಸಿ...) ಕಾಪಿಯ ಕಥೆ ಇದು.

ಒಂದು ಚಾಯ ಕುಡಿವ°, ಬಾ ಹೇಳಿ ಆರಾರು ಹೇಳಿದರೆ ಅದು ಈ ಉದಿಯಪ್ಪಗಾಣ ವಿಷಯ ಅಲ್ಲ ಹೇಳುದು ಸ್ಪಷ್ಟ.! ಮಧ್ಯಾನ್ನ ಮೇಲೆ ಕುಡಿವ ಆಸರಿಂಗೆಗೆ ಚಾಯ ಹೇಳಿ ಅನ್ವರ್ಥ . :-)
ಚಾಯ ಕುಡುದು ಆತೋ? ಕೇಳಿರೆ - ಕಾಪಿಯೇ ಕುಡುದಿದ್ದರೂ, ಹೊತ್ತಪ್ಪಗಾಣದ್ದಾದರೆ, ಆತು- ಹೇಳಿಯೇ ಹೇಳೆಕ್ಕು.

ಹಳಬ್ಬರು ಉದಿಯಪ್ಪಗ ತಿಂಡಿ ತಿಂದುಗೋಂಡು ಇತ್ತಿದ್ದವಿಲ್ಲೆ ಅಡ. ಸೀದಾ ಮದ್ಯಾನ್ನದ ಊಟವೇ. ಮದ್ಯಾನ್ನ ಮೇಲೆ ಆದರೂ ಅವು ಕುಡುಕ್ಕೊಂಡು ಇದ್ದದು ಚಾಯ. ಕಾಪಿ ಹೇಳಿ ಮಾಡಿ ಕುಡುಕ್ಕೊಂದು ಇದ್ದದು ಅಂಬಗಾಣ ಸಣ್ಣ ಮಕ್ಕೊ. ಹಾಂಗಾಗಿಯೇ ಕಾಪಿ ಹೇಳಿರೆ ಉದಿಯಪ್ಪಗಾಣದ್ದು, ಚಾಯ ಹೇಳಿರೆ ಹೊತ್ತಪ್ಪಗಾಣದ್ದು ಹೇಳಿ ಆತು.

ಕುಡಿವ ೨ ನಮೂನೆ ಕಶಾಯಂಗೋ ಬೇರೆ ದೇಶಂದ ಬಂದ ಆಸರಿಂಗೆಗೊ ಆದರೂ, ನವಗೇ ಗೊಂತಿಲ್ಲದ್ದೆ ನಮ್ಮ 'ಹೊತ್ತು ಸೂಚಕ' ರೂಡನಾಮ ಆಗಿ ಹೇಂಗೆ ಕೆಲಸ ಮಾಡ್ತು ಅಲ್ದಾ?

ಒಂದೊಪ್ಪ: ಹ್ಮ್, ಹೇಳಿದ ಹಾಂಗೆ, ನಿಂಗೊಗೆ ಕಾಪಿಗೆಂತ?