ಅಡಕ್ಕೆ ತೋಟಕ್ಕೆ ಮಂಗ ಬಪ್ಪದು ಸಹಜ.
ಮಂಗಂಗೊ ಬಂದರೆ ಅಡಕ್ಕೆ-ಮಾಲೆಕ್ಕಾಯಿ- ಬೊಂಡ- ಬನ್ನಂಗಾಯಿ ಎಲ್ಲ ಎಳದು ಹಾಕಿ ನಾನಾ ನಮೂನೆಯ ರಗಳೆ ಮಾಡಿ, ಬೆಳೆಶಿದವಂಗೆ ನಾಮ ಹಾಕುತ್ತವು. ಈಗ ಕಾಡುಗೊ ಕಮ್ಮಿ ಆದ ಮತ್ತೆ ಅಂತೂ ಅವರ ಉಪದ್ರ ಜೋರೇ ಜೋರು. ಓಡುಸಿದಷ್ಟೂ ಮತ್ತೆ ಮತ್ತೆ ಬತ್ತವು.
ಇದು ಮಂಗಂಗಳ ಶುದ್ದಿ.
ಈ ಮಂಗಂಗಳ ಓಡುಸುಲೆ ಹೇಳಿ ಮನೆಲಿಪ್ಪ ನಾಯಿಯನ್ನೂ ಕರಕ್ಕೊಂದು ಹೋಪ ಕ್ರಮ ಇದ್ದು. ನಾಯಿ ಜಾತಿ (ಊರ ನಾಯಿ) ಆದರೆ ಬತ್ತು, ಜಾತಿ ನಾಯಿ ಆದರೆ ಕಾಲಿಂಗೆ ಮಣ್ಣು ಆಗದ್ದ ಹಾಂಗೆ ಅಟ್ಟುಂಬೊಳ ಮಾಂತ್ರ ತಿರುಗುದು, ಅದು ಬಿಡಿ. ಯಜಮಾನನ ಹೊಪಲ್ಲಿಗೆ ಎಲ್ಲ ಒಟ್ಟಿಂಗೆ ಬಂದುಗೊಂಡು, ಕಂಡ ಮಂಗಂಗಳ ಎಲ್ಲ ಜೋರು ಮಾಡಿ, ತೋಟ ಇಡೀ ಓಡಿಗೊಂದಿರ್ತು. ಮಂಗ ಮರಂದ ಮರಕ್ಕೆ ಹಾರುವಗ ಇದುದೆ ಅಲ್ಲಿಗೆ ಹೋಗಿ ರಾಮಾ-ರಂಪ ಮಾಡಿ ಬಿಡ್ತು. ಯಜಮಾನನ ಮನಸ್ಸಿಲಿ ಇಪ್ಪ ಆಲೋಚನೆಯ ಸರಿಯಾರಿ ಅರ್ಥ ಮಾಡುವ ಉಪಕಾರಿಯ ಹಾಂಗೆ ಕೆಲಸ ಮಾಡ್ತು.
ಇದು ನಾಯಿಯ ಶುದ್ದಿ.
ಈಗ ಹೇಳಿ, ಮನುಷ್ಯಂಗೆ ಹತ್ತರೆ , ಉಪಕಾರಿ, ನಂಬುಲಕ್ಕಾದ ಪ್ರಾಣಿ ಯಾವುದು? ನಾಯಿ ಅಲ್ದೋ? ಉಪದ್ರವಿ ಜೀವಿ ಯಾವುದು? ಮಂಗನೆ ಅಲ್ದೋ? ಅಂಬಗ,
ಒಬ್ಬಂಗೆ ಬೈವಗ, ಮಂಗ ಹೇಳಿ ಬೈದ್ದರಿಂದಲೂ ನಾಯಿ ಹೇಳಿ ಬೈದರೆ ಹೆಚ್ಚು ಬೇನೆ ಆವುತ್ತು. ಅಲ್ದಾ?
ಅದೆಂತಕೆ ಹಾಂಗೆ?
ಒಂದೊಪ್ಪ: ಪಾಕಿಸ್ತಾನದ ನಾಯಿಗೊಕ್ಕೆ ಬಾಂಬ್ ಹಾಕುಲೆ ನಮ್ಮ ಮಂಗಂಗೊಕ್ಕೆ ಇನ್ನುದೇ ಬುದ್ಧಿ ಬಯಿಂದಿಲ್ಲೆ, ಎಂತ ಹೇಳ್ತಿ ಬಾವ?