ಶಂಬಜ್ಜನ ಕಾಲದ ಶುದ್ದಿ:
ಕಾಂಬು ಅಜ್ಜಿ ಹಗಲೊತ್ತು ತೋಟಕ್ಕೆ ಹೋದರೆ, ಬಪ್ಪಗ ಕತ್ತಿಲಿ ಒಂದು ಕಾಯಿ ಕೊಡಪ್ಪಿಗೊಂಡು ಬಪ್ಪದಲ್ಲದ್ದೆ, ಗೆನಾದ ಒಂದಷ್ಟು ಹಾಳೆ, ಕೂಂಬಾಳೆಯನ್ನೂ ಕಂಕುಳೆಡೆಲಿ ಸಿಕ್ಕಿಸಿಗೊಂಡು ಬಕ್ಕು. ಜೆಗಿಲಿಲಿ ಕತ್ತಿಯ ಕಾಲೆಡಕ್ಕಿಂಗೆ ಸಿಕ್ಕುಸಿ ಹಾಳೆಕಟ್ಟ ಮಡಿಕ್ಕೊಂಡು ಕೂದರೆ ಹತ್ತು ನಿಮಿಶ ಏಳವು, ಪುಳ್ಳಿಯಕ್ಕಳ ’ಹತ್ತರೆ ಬರೆಡಿ’ ಹೇಳಿ ಬೈವದು ಅಂಬಗ ಮಾಂತ್ರ.
ಎಷ್ಟೋ ಮನೆಗಳಲ್ಲಿ ಅಜ್ಜಿಯಕ್ಕೊ ಈ ಕೆಲಸ ಮಾಡಿಗೊಂಡು ಇತ್ತಿದ್ದವು. ಉದಿಯಪ್ಪಗ ತೋಟಕ್ಕೆ ಹೋಗಿ ಹೊಸ ಹಾಳೆಗಳ ತಪ್ಪದು, ತಂದು ಹಾಳೆ ಪಾತ್ರವೋ ಎಂತಾರು ಮಾಡುದು.
ಆ ಕಾಲಲ್ಲಿ ನಿತ್ಯೋಪಯೋಗಕ್ಕೆ ಅಡಕ್ಕೆ ಹಾಳೆ ತುಂಬ ಉಪಯೋಗ ಆಯ್ಕೊಂಡಿತ್ತು.
ಕಾಂಬು ಅಜ್ಜಿ ಹಗಲೊತ್ತು ತೋಟಕ್ಕೆ ಹೋದರೆ, ಬಪ್ಪಗ ಕತ್ತಿಲಿ ಒಂದು ಕಾಯಿ ಕೊಡಪ್ಪಿಗೊಂಡು ಬಪ್ಪದಲ್ಲದ್ದೆ, ಗೆನಾದ ಒಂದಷ್ಟು ಹಾಳೆ, ಕೂಂಬಾಳೆಯನ್ನೂ ಕಂಕುಳೆಡೆಲಿ ಸಿಕ್ಕಿಸಿಗೊಂಡು ಬಕ್ಕು. ಜೆಗಿಲಿಲಿ ಕತ್ತಿಯ ಕಾಲೆಡಕ್ಕಿಂಗೆ ಸಿಕ್ಕುಸಿ ಹಾಳೆಕಟ್ಟ ಮಡಿಕ್ಕೊಂಡು ಕೂದರೆ ಹತ್ತು ನಿಮಿಶ ಏಳವು, ಪುಳ್ಳಿಯಕ್ಕಳ ’ಹತ್ತರೆ ಬರೆಡಿ’ ಹೇಳಿ ಬೈವದು ಅಂಬಗ ಮಾಂತ್ರ.
ಎಷ್ಟೋ ಮನೆಗಳಲ್ಲಿ ಅಜ್ಜಿಯಕ್ಕೊ ಈ ಕೆಲಸ ಮಾಡಿಗೊಂಡು ಇತ್ತಿದ್ದವು. ಉದಿಯಪ್ಪಗ ತೋಟಕ್ಕೆ ಹೋಗಿ ಹೊಸ ಹಾಳೆಗಳ ತಪ್ಪದು, ತಂದು ಹಾಳೆ ಪಾತ್ರವೋ ಎಂತಾರು ಮಾಡುದು.
ಆ ಕಾಲಲ್ಲಿ ನಿತ್ಯೋಪಯೋಗಕ್ಕೆ ಅಡಕ್ಕೆ ಹಾಳೆ ತುಂಬ ಉಪಯೋಗ ಆಯ್ಕೊಂಡಿತ್ತು.
- ಹಾಳೆಯ ಕೊಡಿಯನ್ನೂ ಕಡೆಯನ್ನೂ ತುಂಡುಸಿ, ನಾರಿಗೆ (ಹಾಳೆ ಹಿಂದಾಣ ಚೋಲಿ) ತೆಗದರೆ ಹಾಳೆ ಪಾತ್ರ ಆತು. ಮದ್ಯಾನ ಉಂಬಲೆ. ನಾರಿಗೆ ತೆಗದ ಜಾಗೆ ನೆಲಕ್ಕ ಹಿಡುದು ನಿಂದರೆ, ಆಚೀಚ ಹೊಡೆಯ ನಾರಿಗೆ ಅದಕ್ಕೆ ಆಧಾರ ಕೊಡುಗು. ಹಾಳೆ ಪಾತ್ರಲ್ಲಿ ಆ ಕಾಲಲ್ಲಿ ಎಷ್ಟೋ ಮನೆಗಳಲ್ಲಿ ಉಂಡುಗೊಂಡಿತ್ತಿದ್ದವು. ಬಾಳೆಲಿ ಉಣ್ತ ಹಾಂಗೇ. ಹಾಳೆಪಾತ್ರಲ್ಲಿ ಉಂಬದು ಹೇಳಿರೆ ಬೇರೆಯೇ ಒಂದು ಅನುಭವ. ಬಾಳೆಯ ಹಾಂಗೆ ಮೃದು ಅಲ್ಲ, ಅದರ ಮೈ. ರಜ ದಡಿ ದಡಿ ಇದ್ದು, ರಂಗಮಾವನ ಮೋರೆಯ ಹಾಂಗೆ. ಕೊಯಿಶಕ್ಕಿ ಅಶನಕ್ಕೆ ಮಜ್ಜಿಗೆ ಹಾಕಿರೆ ಉಂಬಲೆ ನಿಜವಾಗಿ ಅಭ್ಯಾಸ ಬೇಕು.
- ಹಾಳೆ ರಜ್ಜ ಗೆನಾ ಆಗಿ ದೊಡ್ಡ ಇದ್ದರೆ ಹಾಳೆ ಪಡಿಗೆ ಕುತ್ತುಗು, ಎರಡು ಹೊಡೆ ನಾಲಗೆಯ ಮಡುಸಿದ ಹಾಂಗೆ ಹಿಡುದು, ಮುದ್ದೆಯ ನೆಡುಸರೆಂಗೆ ತೋಟ್ರ ಪೀಶಕತ್ತಿಲಿ ಒಟ್ಟೆ ಮಾಡಿ, ನಾರಿಗೆಬಳ್ಳಿಲಿ ಕುತ್ತಿ, ಕಟ್ಟಿರೆ ಪಡಿಗೆ ಆತು. ಕಾಂಬು ಅಜ್ಜಿಗೆ ಅದು ಅರ್ದ ನಿಮಿಶದ ಕೆಲಸ. ಪಾತಿ ಅತ್ತೆಗೆ ಎರಡು ನಿಮಿಶ ಬೇಕಕ್ಕು. (ಈಗಾಣ ಸೊಸೆಗೆ ಮ್ಯಾಗಿ ಆದರೆ ಎರಡು ನಿಮಿಶಲ್ಲಿ ಮಾಡ್ಲರಡಿತ್ತು. ಪಡಿಗೆಗೆ ಅರ್ದ ದಿನ ಬೇಕಕ್ಕೋ ಅರಡಿಯ!)
ಎಂತಾರು ತುಂಬುಸಿ ಮಡಗಲೆ. ಜೆಂಬ್ರಕ್ಕೆ ಎಲೆ ಮರಿಗೆ ಮಾಡ್ಳಾದರೂ ಆತು. ಪೋಕು ಮುಟ್ಟಿರೆ ಪಾತ್ರಕ್ಕೂ ಬಳಸುಗು ಹೇಳಿ ಆಚಮನೆ ದೊಡ್ಡಣ್ಣ ಹೇಳಿತ್ತಿದ್ದ. ತಾತ್ಕಾಲಿಕ ವೆವಸ್ತೆಗೊಕ್ಕೆ ಅಕ್ಕಷ್ಟೆ ಇದೆಲ್ಲ. - ಸಾರಡಿ ತೋಡಿಂದ ಜೊಟ್ಟೆ ಮೊಗಚ್ಚಿ, ತೋಟದ ಕರೆಣ ಕಟ್ಟಪುಣಿಲೆ ನೀರು ಬರುಸಿ ಅವರ ಆಚ ಹೊಡೇಣ ಕೊಳಕ್ಕೆ ಗೆದ್ದಗೆ ನೀರು ಬಿಟ್ಟೋಂಡು ಇದ್ದದು. ಹೋಪ ದಾರಿಲಿ ತಟ್ಟಿಲಿ ಮಡಗಿದ ಅಡಕ್ಕೆ ಸೆಸಿಗೊಕ್ಕೆ ನೀರು ತೋಕೆಡದೋ? ಅದಕ್ಕೆ ’ಹಾಳೆ ಕಿಳ್ಳಿ’ ಮಾಡುಗು. (ಮೂಡ್ಳಾಗಿ ’ಹಾಳೆ ಚಿಳ್ಳಿ’ ಹೇಳಿಯೂ ಹೇಳುಗು ಅದರ.) ಪಡಿಗೆಯಷ್ಟು ಚೆಂದವೂ ಇಲ್ಲೆ, ದೊಡ್ಡವೂ ಇಲ್ಲೆ. ಎರಡೂ ಹೊಡೆಯ ಗಟ್ಟಿಗೆ ಬಿಗುದ್ದು ಕಟ್ಟುಗು, ಬಾಳೆ ಬಳ್ಳಿಲಿ. ಉದ್ದಕೆ ಒಂದು ಓಡದ ನಮುನೆಯ ಪಾತ್ರದ ಹಾಂಗೆ ಅಕ್ಕು. ಕಣಿಂದ ನೀರು ತೋಕಲೆ ಅಕ್ಕಷ್ಟೆ, ಬೇರೆ ಎಂತಕೂ ಆಗ.
- ಹಟ್ಟಿಂದ ಗೊಬ್ಬರ ತೆಗದು ಗೆದ್ದೆಗೋ, ತೋಟಕ್ಕೋ ಹಾಕುದು. ಬಟ್ಯ ನಾಯ್ಕಂಗೆ ಗೊಬ್ಬರ ಹೊರ್ಲೆ ತಲಗೆ ಹೆಡಗೆ ಮಡುಗೆಡದೋ? ತಲೆ ಒತ್ತುದಕ್ಕೆ ಹೇಳಿಗೋಂಡು ಹಾಳೆಯ ಒಂದು ಟೊಪ್ಪಿ ಮಾಡುಗು. ಮುಟ್ಟಂಪಾಳೆ ಹೇಳುಗು ಅದಕ್ಕೆ. ತುಳು ಮೂಲದ ಹೆಸರು. ಪುಳ್ಳಿಮಾಣಿ ವಿನು ತಿಂತ ಕೋನು ಐಸ್ಕ್ರೀಮಿನ ತಲೆಯ ಹಾಂಗೆ ಕಾಂಗು ಅದು. ತಲಗೆ ಹೊರೆ ಮಡುಗುತ್ತರೆ ಈ ಮುಟ್ಟಂಪಾಳೆ ಮಾಡಿ ಮಡುಗುತ್ತದು ಕ್ರಮ.
- ಮುಟ್ಟಂಪಾಳೆ ಆದರೆ ಬಹು ತಾತ್ಕಾಲಿಕ. ರಜ ಸಮಯ ಬರೆಕ್ಕು ಹೇಳಿ ಆದರೆ ಮುಟ್ಟಾಳೆ ಮಾಡುಗು. ಚೆಂದಕೆ ಒಂದು ಕ್ರಮಲ್ಲಿ ಮಡುಸಿ, ಒಣಗುಸಿ, ಹಾಳಗೆ ಶೇಕ ಕೊಟ್ಟು, ಕರಂಚುಸಿ ಒಂದು ಟೊಪ್ಪಿ ನಮುನೆದು ಮಾಡುಗು. ಕ್ರಿಕೆಟಿನ ದೋನಿಯ ಟೊಪ್ಪಿಯ ಹಾಂಗೆ ಕಾಂಗು. ತುಂಬ ಸಮಯ ಬಕ್ಕು. ಕೆಲಸಕ್ಕೆ ಹೋದಿಪ್ಪಗ ಚೆಂಡಿ ಆದರೆ ಒಲೆಕಟ್ಟೆಲಿ ಮಡಗಿ ಒಣಗುಸುದು. ಇಂದಿರಾ ಗಾಂದಿ ಕೊಡೆಯಾಲಕ್ಕೆ ಬಂದಿಪ್ಪಗ ಅದು ತಲೆಲಿ ಮಡಿಕ್ಕೊಂಡು ನಮಸ್ಕಾರ ಮಾಡಿದ್ದಡ. ಬಟ್ಯಂಗೆ ಹೆಮ್ಮೆಯ ವಿಶಯವೇ ಅದು. ಬೊಳುಂಬು ಮಾವ "ಹ್ಯಾಟ್ಸಾಫ್" (Hats Off) ಹೇಳ್ತದರ ಬದಲು "ಮುಟ್ಟಾಳೆ ನೆಗ್ಗಿದೆ ಮಿನಿಯಾ..." ಹೇಳುದು.
- ದುರ್ಗಾಪೂಜೆಗೆ ಕಿಸ್ಕಾರ ಹೂಗು ಕೊಯಿವಲೋ, ಗುಡ್ಡೆಂದ ಬೀಜ ಹೆರ್ಕಲೋ ಮತ್ತೊ ಹಾಳೆ ಮೂಡೆ ಉಪಯೋಗ ಆಯ್ಕೊಂಡು ಇತ್ತು. ಉದ್ದ ಹಾಳೆಯ ಅರ್ದಕ್ಕೆ ಮಡುಸಿ ಎರಡೂ ಹೊಡೆಂದ ಕಟ್ಟಿ ಒಂದು ಪಾತ್ರ ಮಾಡುದು ಮೊದಲು. ಮತ್ತೆ ಅದಕ್ಕೆ ಒಂದು ಬಾಳೆ ಬಳ್ಳಿಯೋ, ನಾರಿನ ಬಳ್ಳಿಯೋ ಮತ್ತೊ ಕಟ್ಟುದು, ಹೆಗಲಿಂಗೆ ನೇಲುಸಲೆ. ಪುಟ್ಟತ್ತೆಯ ವೇನಿಟಿ ಬೇಗು ಇಲ್ಲೆಯೋ, ಸಾಮಾನ್ಯ ಅದೇ ನಮುನೆ. ಮೂಡೆ ಹೆಗಲಿಂಗೆ ಹಾಯ್ಕೊಂಡು ಹೆರಟ್ರೆ, ಅದರ ಒಳ ಅಡಕ್ಕೆಯೋ, ಹೂಗೋ, ಬೀಜವೋ, ಬೇಕಾದ್ದು ತುಂಬುಸಿಗೊಂಡು ಬಕ್ಕು.ನೆರಿಯದಜ್ಜ ಎಡಪ್ಪಾಡಿಗೆ ಬಪ್ಪಗ ಹಾಳೆ ಮೂಡೆಲಿ ಮಜ್ಜಿಗೆ ತುಂಬುಸಿ ತಯಿಂದವಡ,ಎಡಪ್ಪಾಡಿ ಬಾವ ಹೇಳಿದ ಶುದ್ದಿ.
- ಮಣ್ಣ ಜೆಗಿಲಿಗೆ ಸಗಣ ಬಳುಗುದು ಗೊಂತಿದ್ದಲ್ದ? ನೆಲಕ್ಕ ನೀಟುದೇ ಇರ್ತು, ಶುದ್ದಕ್ಕೂ ಆತು ಹೇಳಿಗೊಂಡು ಸಗಣ ಬಳುಗುದು. ಬಣ್ಣ ಬರೆಕ್ಕಾರೆ ರಜ್ಜ ಬೆಟ್ರಿಕರಿಯನ್ನೂ ಸೇರುಸಿಗೊಂಗು. ಬಳುಗುಲೆ ಹಾಳೆಕಡೆ ಬೇಕೇ ಬೇಕು. ಪಂಜ ಚಿಕ್ಕಯ್ಯ "ನಿನಿಗೆ" ಸೆಗ್ಣಿ ಸಾರ್ಸುದು ಇದೇ ನಮುನೆಲಿ!
- ತೆಳ್ಳವೋ, ಉದ್ದಿನ ದೋಸೆಯೋ ಮತ್ತೊ ಮಾಡ್ತರೆ ಚುಟ್ಟಿ ಕಿಟ್ಟೆಡದೋ? ಅದಕ್ಕೆ ಬೇಕಾದ ಹಾಂಗೆ ಹಾಳೆತುಂಡು ಮಾಡಿಗೊಳ್ತವು, ಕೈಗೆ ಬೆಶಿಯೂ ಬತ್ತಿಲ್ಲೆ, ತಯಾರು ಮಾಡ್ಳುದೇ ಸುಲಬ ಇರ್ತು ಹೇಳಿಗೊಂಡು.
- ಕುಂಞಿ ಬಾಬೆಯ ಮನುಶುಲೋ, ಎಣ್ಣೆಕಿಟ್ಟುಲೋ ಎಲ್ಲ ಹಾಳೆ ಬೇಕಾವುತ್ತಡ, ಒಪ್ಪಣ್ಣಂಗೆ ಅಷ್ಟು ಅರಡಿಯ. ಹಳತ್ತು ನೆಂಪಿಲ್ಲೆ, ಹೊಸತ್ತು ಅನುಭವ ಇಲ್ಲೆ. ;-)
- ಶಂಬಜ್ಜಂಗೆ ಸೆಕೆ ಜಾಸ್ತಿ. ಬೇಸಗೆ ಬಂದರೆ ಮೂರೊತ್ತೂ ಅವರ ಕೈಲಿ ಬೀಸಾಳೆ ಇದ್ದೇ ಇಕ್ಕು. ಮೈಲಿ ವಸ್ತ್ರ ಇಲ್ಲದ್ರೂ ಕೈಲಿ ಬೀಸಾಳೆ ನಿಘಂಟೇ. ಮರದ ಮಂಚಲ್ಲಿ ಮನುಗುವಗ ಹಾಸವು, ಎಂತದನ್ನುದೇ. ಉಂಡಿಕ್ಕಿ ವರಗುವಗ ಕೈಲಿ ಹಾಳೆ ಬೀಸಾಳೆ ತಿರುಗುಸುಲೆ ಸುರು ಮಾಡಿರೆ ಮನುಗಿದಲ್ಲಿಗೆ ವರಕ್ಕು ಬಪ್ಪನ್ನಾರವೂ ತಿರುಗಿಯೋಂಡೇ ಇಕ್ಕು.
- ಆಚಕರೆ ಮಾಣಿಬಾವನ ಹಾಂಗಿಪ್ಪ ದಪ್ಪ ಚರ್ಮದೋರಿಂಗೆ ಶಾಲಗೋಪಗ ಬೆನ್ನಿಂಗೆ ಕಟ್ಟಲೂ ಹಾಳೆ ಕೀತು ಬೇಕಾಗಿತ್ತು :-( . ಕೇಳೆಡಿ ಅವನತ್ರೆ, ನಾಚಿಕೆ ಮಾಡಿಗೊಳ್ತ° ;-)
- ಇದಿಷ್ಟಲ್ಲದ್ದೇ ಜೆಗಿಲಿಲಿ ಇಪ್ಪ ಹೇಸಿಗೆ ತೆಗವದರಿಂದ ಹಿಡುದು, ಪಿಕ್ಕಾಸಿಂಗೆ ತಳ್ಳೆ ಮಾಡುವಗ ಎಡೆಂಗೆ ಕೊಡ್ಳೋ, ಹೇಳಿದ್ದು ಕೇಳದ್ದ ಎಮ್ಮೆ ಮೈಗೆ ಎರಡು ಬಾರುಸುಲೋ- ಬೇನೆ ಅಪ್ಪಲಾಗ , ಶಬ್ದ ಬರೆಕ್ಕು ಅವಕ್ಕೆ ಬಡುದಪ್ಪಗ- ಹಾಂಗೆ, ಸಪುರ ಬಳ್ಳಿ ತಿರ್ಪಿ ಎಂತಕಾರು ಕಟ್ಟುಲೋ, ಒಲೆಂದ ಬೂದಿ ತೆಗವಗಳೋ, ಹಲಸಿನ ಕಾಯಿ ಕೊರವಗಳೋ, - ಹೀಂಗೇ ಇನ್ನುದೇ ಹಲವಾರು ನಮುನೆಯ ಉಪಯೋಗಂಗೊ ಇದ್ದು.
ರಂಗ ಮಾವನ ಕಾಲಲ್ಲಿ:
ಎಲ್ಲದಕ್ಕೂ ಕೃತಕ ವಸ್ತುಗೊ ಬಂದುಗೊಂಡು ಇದ್ದ ಕಾಲ. ಹಾಳೆ ಉಪಯೋಗ ಕಡಮ್ಮೆ ಆಯ್ಕೊಂಡು ಬಂತು. ಆದರೂ ಎಡೆಡೆಲಿ ಬೇಕಾದ ಅವಶ್ಯಕ ವಸ್ತುಗೊಕ್ಕೆ ಹಾಳೆಯನ್ನೇ ಕುತ್ತಿಗೊಂಡು ಇದ್ದದು. ಎಲ್ಲೊರಿಂಗೂ ಅದರ ಉಪಯೋಗ ಗೊಂತಿತ್ತು. ಅಗತ್ಯ ಕಮ್ಮಿ ಇದ್ದದು, ಹಾಂಗಾಗಿ ಉಪಯೋಗವೂ ಕಮ್ಮಿ.
ಕಡುದು, ಬೆಶಿಲಿಲಿ ಒಣಗುಸಿ, ಉಪ್ಪು ನೀರು ತಳುದು, ಗೋಣಂಗೊಕ್ಕೆ ಹಾಯ್ಕೊಂಡು ಇತ್ತಿದ್ದವು. ಅಷ್ಟೆ. ತಿತಿ ದಿನ ಪರಾದಿನದವರ ಊಟ ಆದ ಮೇಲೆ ಕೈ ತೊಳವಲೆ ಪಡಿಗೆಯೋ, ಮದುವೆ ಜೆಂಬ್ರಂಗಳಲ್ಲಿ ಮದುಮ್ಮಾಯಂಗೆ ಗಾಳಿ ಬೀಸಲೆ ಬೀಸಾಳೆಯೋ , ಮತ್ತೊ ಉಪಯೋಗ ಆಯ್ಕೊಂಡಿತ್ತು. ಕೆಲವು ದಿಕ್ಕೆ ಜೋರು ಮಳೆಗಾಲ ಹಾಳೆ ಕೀತು ಮಾಡಿ ಮಾಡಿನ ಹಂಚಿನೆಡೆಂಗೆ ಮಡುಗ್ಗು, ನೀರು ಸೋರ್ತದಕ್ಕೆ.
ಪಡಿಗೆಯೋ- ಅದರ ಬದಲು ಪ್ಲೇಶ್ಟಿಕು ಬರಣಿ, ಮೂಡೆಯೋ- ಅದರ ಬದಲು ಪ್ಲೇಶ್ಟಿಕು ಪಾಟೆ, ಮುಟ್ಟಾಳೆಯೋ - ಅದರ ಬದಲು ಪ್ಲೇಶ್ಟಿಕು ಟೊಪ್ಪಿ, ಬೀಸಾಳೆಯೋ - ಅದರ ಬದಲು ಪ್ಲೇಶ್ಟಿಕು ಬೇಸಾಳೆ, ಹಾಳೆತುಂಡೋ- ಅದರ ಬದಲು ಪ್ಲೇಶ್ಟಿಕು ಸೌಟು, ಕಸವು ತೆಗವ ಹಾಳೆತುಂಡೋ, ಅದೇ ನಮುನೆದುದೇ ಪ್ಲೇಶ್ಟಿಕಿಂದು ಬತ್ತಡ, ಹಾಳೆ ಪಾತ್ರದ ಬದಲು ಶ್ಟೀಲು ಬಟ್ಳು ಬಂತು.
ಅಲ್ಲಿಗೆ ಆ ತಲೆಮಾರಿನ ಹಿಂದೆವರೆಗೂ ಇದ್ದ ಅಗಾಧ ಹಾಳೆಯ ಉಪಯೋಗ ರಪಕ್ಕ ನಿಂದತ್ತು.
ಹಾಳೆಂದಾಗಿ ಎಂತೆಲ್ಲ ಮಾಡಿಗೊಂಡಿತ್ತಿದ್ದವೋ, ಅದಕ್ಕೆಲ್ಲ - ಒಂದರಿ ಪೈಸೆ ಕೊಟ್ರೆ ಮುಗುತ್ತಲ್ದೋ? - ಪ್ಲೇಶ್ಟಿಕಿಂದು ಬಂತು. ಹಳತ್ತೆಲ್ಲ ಮರದವು.
ಅಜ್ಜಕಾನ ಬಾವ ಹೇಳಿದ ಪ್ರಕಾರ ಪಾತಿ ಅತ್ತೆಗೆ ಪಡಿಗೆ ಕುತ್ತುದುದೇ ಮರಕ್ಕೊಂಡು ಬಯಿಂದಡ.
ನೋಡಿಗೊಂಡು ಇದ್ದ ಹಾಂಗೇ ಒಂದು ತಲೆಮಾರು ಕಳುತ್ತು.
ಇದು ಈಗ ಶಾಂಬಾವನ ಕಾಲ.
ಮಳೆಗಾಲದ ಹಾಂಗಿಪ್ಪ ಸಮಯಂಗಳಲ್ಲಿ ವೆವಸ್ತೆಗೆ ಎಲ್ಲ ಅದು ಬಯಂಕರ ಸುಲಬ ಆದ ಕಾರಣ ಈಗ ಅದು ತುಂಬ ರೈಸಿಗೊಂಡು ಇದ್ದು. ಬಪೆ ಹೇಳಿರೆ ಹಾಂಗೇ ಅಲ್ದೋ, ಎಲ್ಲ ಸಾಲಾಗಿ ಮಡುಗುತ್ತದು, ಮಾರ್ಜಿನು ಪ್ರೀ ಅಂಗುಡಿಲಿ ಮಡಗಿದ ಹಾಂಗೆ. ಬೇಕಾದ್ದರ ಎದುರು ಹೋಗಿ ನಿಂದರೆ ಬಳುಸಲೆ ನಿಂದ ಕೂಚಕ್ಕಂಗೊ ಪ್ರೀತಿಲಿ ಪ್ಲೇಟಿಂಗೆ ಹಾಕುತ್ತವು. ಹಾಂಗಾಗಿ ಹಂತಿ ಊಟಂದ ಬಪೆ ರುಚಿ ಜಾಸ್ತಿ ಹೇಳಿ ಕೊಳಚ್ಚಿಪ್ಪು ಬಾವನ ಅಂಬೋಣ. ಆಚಕರೆ ಮಾಣಿ ಎರಡು ಸರ್ತಿ ಉಂಡದು ಅಜ್ಜಕಾನ ಬಾವಂಗೆ ಮಾಂತ್ರ ಗೊಂತಾದ್ದು.
ಹಾಳಗೆ ಒಳ್ಳೆತ ಕ್ರಯ ಸಿಕ್ಕುತ್ತು ಹೇಳಿಗೊಂಡು ಈಗ ಎಲ್ಲೊರು ಅದರ ಮಾರುದು. ಹಾಂಗಾಗಿ ಇಡಿ ಹಾಳಗೂ ಒಳ್ಳೆತ ಕ್ರಯ. ಆಚಕರೆ ಮಾವ ಅವರ ಪುಳ್ಳಿಗೆ ಬೇಕಪ್ಪಷ್ಟೇ ತೆಗದು ಮಡಗಿ ಒಳುದ್ದರ ಪೂರ ಜಾಲಕರೆಲಿ ತಣಿಲಿಲಿ ಹಾಕಿದ್ದವಡ. ಆ ಮಾಣಿ ಜೀಪು ಮಾಡಿಗೊಂಡು ಬತ್ತನಡ, ಶೆನಿವಾರ ಶೆನಿವಾರ.
ಮನೆಮನೆಗೆ ಹೋಗಿ ಹಾಳೆ ಇದ್ದೋ ಕೇಳಿ, ಕ್ರಯಕ್ಕೆ ತೆಗದು; ಕ್ರಯ ಹೇಳಿರೆ ಗಮ್ಮತ್ತಿದ್ದು- ಇಡಿ ಹಾಳೆ ಒಂದಕ್ಕೆ ಎಂಟಾಣೆ (ಐವತ್ತು ಪೈಸೆ) - ಅದರ ಜೀಪಿಲಿ ಕೋಂಡೋಗಿ, ಅವನ ಗುಡ್ಡೆಲಿ ತಣಿಲಿಲಿ ಒಣಗುಸಿ, ಒತ್ತುತ್ತ ಮಿಶನಿಲಿ - ಕರೆಂಟಿನ ಮಿಶನಡ- ಮಿಶನಿಲಿ ಮಡಗಿ ಹಪ್ಪಳ ಒತ್ತಿದ ಹಾಂಗೆ ಒತ್ತುದು. ಅಷ್ಟಪ್ಪಗ ಚಡಿ ಚಡಿ ಸಾದಾರಣದ್ದು ಹೋಗಿ ಚೆಂದಕೆ ಒಂದು ಉರುಟು ಉರುಟು ಬಟ್ಳು ತಯಾರು ಆವುತ್ತು. (ಹಿಸ್ಕು ಎಡೆಲಿ ಇದ್ದರೆ ಎಂತಕ್ಕೋ? ಮಾಂಬ್ಳದ ಹಾಂಗಕ್ಕೋ? ಏ°? ;-( ) ತಂದ ಹಾಳೆ ತಟ್ಟೆಲಿ ನಮ್ಮ ಮನೆ ಹಾಳೆಯೇ ಇದ್ದೋ ಏನೋ, ಹೇಳಿ ಪಾಲಾರು ಅಣ್ಣ ನೆಗೆ ಮಾಡಿದ°.
’ಎಬೆ, ಎಂಗೊಗೆ ಹಾಳೆಲಿ ಊಟವೋ?’ ಹೇಳಿ ಮದ್ಯಾನ್ನ ಬರ್ಮಿಲಿ ಊಟಕ್ಕೆ ಬಂದ ಮೋಹನ ಬಂಟಂಗೆ ಬೆಶಿ ಆತು. ಊಟವ ಹಾಳೆಲಿ ಕೊಡುದು ಈಗ ಕೋಟಿಗೆ ಮಾಂತ್ರ. ಹಾಳೆಯ ಈ ನಮುನೆ ಹೊಸ ಅವತಾರ ಅವಕ್ಕೆಲ್ಲ ಅಬ್ಯಾಸ ಆಯೆಕ್ಕಷ್ಟೆ. ’ಪೇಟೆಲಿ ಎಲ್ಲ ಅದಕ್ಕೆ ಒಳ್ಳೆತ ಡಿಮಾಂಡು ಇದ್ದು ಮಾವ°’ ಹೇಳ್ತ, ಆ ತಟ್ಟೆ ತಂದು ಕೊಡ್ತ ಮಾಣಿ.
ಏನೇ ಆಗಲಿ, ಎರಡು ತಲೆಮಾರು ಹಿಂದೆ ಇದ್ದ ಹಾಳೆ ಉಪಯೋಗ ಈಗ ಇನ್ನೊಂದು ರೂಪಲ್ಲಿ ನಡೆತ್ತಾ ಇದ್ದು. ಒಳ್ಳೆ ಬೆಳವಣಿಗೆ. ಆರೋಗ್ಯಕ್ಕೆ ಒಳ್ಳೆದು ಹೇಳ್ತ ಮರುಳು ಈಗ ಜೋರು ಅಲ್ದೋ? ಹಾಂಗಾಗಿ ಮತ್ತೆ ಮೊದಲಾಣ ಹಾಂಗಕ್ಕೋ? ಹಾಳೆ ಪಡಿಗೆ, ಹಾಳೆ ಸೌಟು, ಹಾಳೆಯ ಕಸವು ತೆಗೆತ್ತದು, ಹಾಳೆ ಬೀಸಾಳೆ... ಎಲ್ಲ ಬಪ್ಪಲೆ ಸುರು ಅಕ್ಕೋ ಏನೋ!
ಆದರೆ ಎಲ್ಲ ಪೈಸಕ್ಕೆ ತಪ್ಪ ಹಾಂಗಿರ್ತದು ಬಕ್ಕೋ ಹೇಳಿಗೊಂಡು ಒಪ್ಪಣ್ಣಂಗೆ ಒಂದು ಕನಪ್ಯೂಸು ಬಪ್ಪದು.
ಪಾತಿ ಅತ್ತೆಗೆ ಗೊಂತಿಪ್ಪ ಪಡಿಗೆ ಕುತ್ತುತ್ತ ಕ್ರಮ ಈಗಾಣ ಸೊಸೆಗೆ ಅಬ್ಯಾಸ ಅಕ್ಕೋ, ಆಗದೋ ಹೇಳುದರಿಂದಲೂ, ಬಟ್ಟಕ್ಕಳ ಜೀವಾಳ ಆಗಿಪ್ಪ ಅಡಕ್ಕೆ ಮರದ ಹಾಳೆ ಹೀಂಗೊಂದು ಜೀವ ಪಡಕ್ಕೊಳ್ತು ಹೇಳುದು ತುಂಬ ಒಳ್ಳೆ ಶುದ್ದಿ.
ಒಂದೊಪ್ಪ: ಈ ಒಪ್ಪದ ಲೆಕ್ಕಲ್ಲಿ ಆದರೂ ಮನೆಲಿ ಹಾಳೆ ಪಾತ್ರ ಮಾಡಿ, ಅದರ್ಲಿ ಹೆಜ್ಜೆ ಉಂಡಿಕ್ಕಿ ಒಂದರಿ, ಆತೋ? ಹಿಸ್ಕು ಇದ್ದೋ ನೋಡಿಗೊಳ್ಳಿ. ;-)
ಸೂ: ಮೊನ್ನೆ ಮಾರ್ಚಿಂದ ಕಳುದ ಜುಲೈವರೆಂಗೆ ಲೆಕ್ಕ ಹಾಕಿ ಅಪ್ಪಗ ’ಶುದ್ದಿ’ಯ ಲೋಕಾದ್ಯಂತ ಒಟ್ಟು ೧೦,೦೦೦ ಸರ್ತಿ ಓದಿದ್ದವು! ತುಂಬ ಕುಶಿ ಆತು. ಒಪ್ಪಣ್ಣಂಗೆ ಹೇಳಿಗೊಂಬಲೆ ಇಪ್ಪ ಸೊತ್ತು ಅದೊಂದೇ. ನಿಂಗಳ ಸಪೋರ್ಟು ಹೀಂಗೇ ಮುಂದರಿಶಿ ಆತೋ.... :-)