ಮಣ್ಣಚಿಟ್ಟೆಂದ ಬೀನುಬೇಗಿನವರೆಗೆ : ಜೀವನ ಪದ್ಧತಿ ಮೆಸ್ತಂಗೆ ಆದ ಬಗ್ಗೆ

ಮಣ್ಣ ಚಿಟ್ಟೆ ನೋಡಿದ್ದಿರಾ?
ಚಿಟ್ಟೆ ಹೇಳಿರೆ ನಮ್ಮ ಹಳೆ ಭಾಷೆಲಿ 'ಕಟ್ಟೆ' ಹೇಳಿ ಉಪಾರ್ಥ, ಈಗಾಣ ಹಾತೆಗಳ ಹೇಳುದಲ್ಲ. ಇಲ್ಲಿ ಮಣ್ಣಚಿಟ್ಟೆ ಹೇಳಿರೆ ’
ಮಣ್ಣಿಲಿ ಮಾಡಿದ ಕಟ್ಟೆ’ ಹೇಳಿ. ಈಗ ಎಲ್ಲ ಕಮ್ಮಿ ಆಯಿದು ಆ ರಚನೆಗೂ.
ಹಳೆ ಕಾಲದ ಮನೆಗಳಲ್ಲಿ, ಎದುರಾಣ ಜೆಗಿಲಿಯ ಕರೆಲಿ ಇಕ್ಕು, ಒಂದು ಕೋಲು ಎತ್ತರದ ಮಂಚದ ಹಾಂಗೆ, ಕಲ್ಲಿಲಿ/ಮಣ್ಣಿಲಿ ಮಾಡಿದ ಒಂದು ಚಿಟ್ಟೆ. ಕಲ್ಲಿಲಿ ಕಟ್ಟಿದ್ದಾದರೂ ಆವೆ ಮಣ್ಣಿನ ಕಲಸಿ, ಬೀಜದ ಎಣ್ಣೆ ಹಾಕಿ - ಚೆಂದಕ್ಕೆ ಅರದು, ನೊಂಪಾಗಿ ಇಕ್ಕು. ಎರಗಿ ಕೂಪಲೆ ರಜ್ಜ ಚಾರಗೆ ಮಣ್ಣಿನ ಗೋಡೆ. ಒಂದು ಎಲೆ ಮರಿಗೆ ಇಕ್ಕು ಅದರ್ಲಿ ಮಡಿಕ್ಕೊಂಡು. ಬೇಸಗೆಲಿ ಒಂದು ಹಾಳೆಬೀಸಾಳೆಯುದೆ. ಎಜಮಾನಂಗೆ ಹೇಳಿ ಲೆಕ್ಕ. ಬಂದವಕ್ಕುದೆ ಆವುತ್ತು. ಆ ಮಣ್ಣ ಚಿಟ್ಟೆಲಿ ಎಜಮಾನ ಕೂದೊಂಡು ಮನೆಯವರ ಹತ್ರೆ, ಆಳುಗಳ ಹತ್ರೆ, ಎಲ್ಲ ಮಾತಾಡುವ ಚೆಂದವೇ ಬೇರೆ. ಆಚಕರೆ ತರವಾಡು ಮನೆ ಇದ್ದಲ್ದ- ಮಾಣಿ ಭಾವನ ಮೇಗಾಣ ಮನೆ, ಅಲ್ಲಿ ಇದ್ದಿದಾ. ಊರ ಬೂತದ ಬಂಡಾರ ಎಲ್ಲ ಇಪ್ಪ ಮನೆ ಆದ ಕಾರಣ 'ಬಂಡಾರದ ಮನೆ' ಹೇಳಿಯೂ ಹೇಳುಗು ಅದರ. ಅದು ಸುಮಾರು ನೂರೈವತ್ತು ವರ್ಷ ಹಳೆ ಮನೆ ಅಡ. ಅಲ್ಲಿ ಇದ್ದು, ಮಣ್ಣ ಚಿಟ್ಟೆ. ಹ್ಮ್, ಬೇರೆ ಎಲ್ಲಿಯೂ ಈಗ ನೆಂಪಾವುತ್ತಾ ಇಲ್ಲೆ ಒಪ್ಪಣ್ಣಂಗೆ.

ಅಲ್ಯಾಣ
ಶಂಬಜ್ಜನ ಕಾಲಕ್ಕೊರೆಗೂ ಆ ಮಣ್ಣ ಚಿಟ್ಟೆ ತೀರಾ ಉಪಯೋಗ ಆಯ್ಕೊಂಡಿತ್ತು.ಜವ್ವನಲ್ಲಿ ಶಂಬಜ್ಜ° ಸ್ವತಃ ಬಹಳ ಕೆಲಸಗಾರ. ಮಹಾ ಸಾಮರ್ತಿಗೆ ಇಪ್ಪವಡ. ಬೇಸಗೆಲಿ ಬಾವಿಗಿ ಇಳಿಗು, ಕೆಸರು ತೋಡ್ಳೆ, ಒಬ್ಬನೇ ತೋಡಿಂಗೆ ಹಾಕಿದ ಜೊಟ್ಟೆಯ ಮೊಗಚ್ಚುಗು, ಸೌದಿ ಒಡಗು, ಮಳೆಗಾಲ ಸುರು ಅಪ್ಪಗ ಮಾಡಿನ ಕೊಬಳಿಂಗೆ ಹತ್ತುಗು, ಮೂಲೆ ಓಡು, ಹಂಚು ಸರಿ ಮಡಗಲೆ ಎಲ್ಲ, ಸೊಪ್ಪಿನ ಸಮಯಲ್ಲಿ ಮರಂದ ಗೆಲ್ಲು ಜಾರ್ಸುಗು, ಪೆರ್ಚಿಬಂದ ಬಸವ° ಗೋಪಾಲನ ಮೂಗಿನ ಬಳ್ಳಿ ಹಿಡುದು ನಿಲ್ಸುಗು, ಅಡಕ್ಕೆ ಆರು ಮಣುವರೆಗೆ ಆಯಾಸ ಇಲ್ಲದ್ದೆ ಹೊರುಗು, ನೀರ್ಚಾಲು ವರೆಂಗೆ… ಇನ್ನೂ ಏನೇನೋ…ಆಳುಗೊಕ್ಕೆ ಹೇಳುವವಂಗೆ ಮಾಡ್ಲೂ ಗೊಂತು ಬೇಕಲ್ದ, ಹೇಳಿ ಕೇಳುಗು.


ಅವರ ಜೀವನವೂ ಅಷ್ಟೇ ಕಟ್ಟು ನಿಟ್ಟು. ಉದೆಕಾಲ ನಾಲ್ಕೂವರೆಗೆ ಏಳುಗು,ಎಣ್ಣೆ ಕಿಟ್ಟಿ, ಕಾರ್ಯಂಗಳ ಎಲ್ಲ ಮುಗುಶಿ, ಮಾವಿನ ಸೊಪ್ಪಿಲಿ ಹಲ್ಲು ತಿಕ್ಕಿ, ಚೆಂಬಿನ ಕೊಡಪ್ಪಾನಲ್ಲಿ ನೀರೆಳದು ತಣ್ಣೀರಿಲಿ ಮೀಗು, ಪ್ರಾತಃಕಾಲಲ್ಲಿ ಅರ್ಧಗಂಟೆ ಜೆಪ ಮಾಡುಗು. ನೂರೆಂಟು ಗಾಯತ್ರಿ ನಿಘಂಟು. ಮತ್ತೆ ಪೂಜೆ - ದೇವರ ತಲಗೆ ನೀರೆರಗು. ತರವಾಡು ಮನೆ ಇದಾ- ಬೂತಂಗಳೂ ಇದ್ದು, ಬಂಡಾರಕ್ಕೆ ದೀಪ ತೋರ್ಸುಗು. ಎಲ್ಲ ಆದ ಮತ್ತೆ ಕಷಾಯ ಕುಡುದು, ತೋಟಕ್ಕೆ ಒಂದು ಸುತ್ತು ಹೋಗಿ ಬಕ್ಕು. ಮಕ್ಕ ಎದ್ದು, ತಯಾರಿ ಎಲ್ಲ ಆದ ಮತ್ತೆ ಒಟ್ಟಿಂಗೆ ಉದಿಯಪ್ಪಗಾಣ ಕಾಪಿ ಕುಡಿಗು. ಹರ್ಕು ಸುತ್ತಿಗೊಂಡು ಕತ್ತಿ ಹಿಡ್ಕೊಂಡು ತೋಟಕ್ಕೆ ಹೋದರೆ ಬಪ್ಪದು ಹತ್ತು ಘಳಿಗೆ ಆದ ಮತ್ತೆಯೇ. ಸೋಗೆ ಎಳವದು, ಕಂಜಿಗಳ ಹಟ್ಟಿಗೆ ಹುಲ್ಲು ಮಾಡುದು, ಇತ್ಯಾದಿ ಎಲ್ಲ ಮಾಡುಗು.
ತರವಾಡು ಮನೆ ಆದರೂ ಜಾಗೆ ಪೂರ ಪಾಲಾಗಿ, ಸಣ್ಣ ಜಾಗೆ ಒಳುದ್ದು. ಬಂಡಾರ ಬೇರೆ ಇದ್ದು. ಒರಿಶಕ್ಕೊಂದರಿ ನೇಮ ಅಕ್ಕಿದಾ, ಅವ್ವೇ ಎದುರು ನಿಂದು ಮಾಡ್ಸುದು. ಪಾನಕ ಪೂಜೆ ಇತ್ಯಾದಿ ಎಲ್ಲ ತರವಾಡು ಮನೇಲೆ ಆಯೆಕ್ಕಿದಾ, ಎಲ್ಲದಕ್ಕೂ ಆ ಬೂಮಿಂದ ಆಯೆಕ್ಕಲ್ದಾ. ಆಚಕರೆ ಜಾಗೆ ಹಸುರು ಆದ್ದು ಶಂಬಜ್ಜನಿಂದಾಗಿಯೇ ಹೇಳಿ ಹೇಳುಗು ಅಂಬಗಾಣವು. ಒಂದರಿಯಾಣ ಒತ್ತರೆ ಕೆಲಸ ಎಲ್ಲ ಮುಗುಶಿ, ಹತ್ತು ಗಳಿಗೆ ಹೊತ್ತಿಂಗೆ ಬಂದರೆ (ಅಂದಾಜಿ ಉದಿಯಪ್ಪಗ ಹತ್ತು ಗಂಟೆ ಹೊತ್ತಿಂಗೆ) ಮಣ್ಣ ಚಿಟ್ಟೆಲಿ ಕೂದುಗೊಂಗು. ಒಂದು ಎಲೆ ತಿಂಗು, ಕೊಟ್ಟಡಕ್ಕೆ ಕೊಟೊಕೊಟೊ ಅಗುಕ್ಕೊಂಡು. ಹಾಳೆ ಬೀಸಾಳೆಲಿ ಗಾಳಿ ಹಾಕಿಗೊಂಡು ಮೀಸೆ ಕೆಂಪು ಮಾಡುಗು. ಎಲೆ ತುಪ್ಪಿ ಮತ್ತೆ ಕೆಲಸಕ್ಕೆ ಹೆರಡುಗು. ಒಂದು ಚೆಂಬು ಮಜ್ಜಿಗೆ ನೀರು ಕುಡಿಗು, ಕಾಂಬು ಅಜ್ಜಿ ಕೊಟ್ಟರೆ :-).

ಕಾಂಬು ಅಜ್ಜಿ ಹೇಳಿರೆ ಮೂಕಾಂಬಿಕಾ ಹೇಳಿ ಹೆಸರು, ಶಂಬಜ್ಜನ ಎಜಮಾಂತಿ. ಅವುದೇ ಹಾಂಗೆ, ಜವ್ವನಲ್ಲಿ ಮಹಾ ತ್ರಾಣಿ ಹೆಮ್ಮಕ್ಕೊ ಅಡ. ಈಗಾಣ ಹಾಂಗೆ ಮಿಶನಿಲಿ ಮೆರುದ ಅವಲಕ್ಕಿ ಎಲ್ಲ ಇಲ್ಲೆ ಇದಾ ಆ ಕಾಲಕ್ಕೆ. ನಿತ್ಯಕ್ಕೆ ಬೇಕಾದ ಅವಲಕ್ಕಿಯ ಅವ್ವೇ ಮೆರಿಗಡ. ಒನಕ್ಕೆಯುದೇ ಹಾಂಗೆ, ಗೆಂಡುಮಕ್ಕೊ ಹಿಡಿತ್ತದರ ಹಿಡಿಗಡ, ಮೆರಿವಲೆ. ಕಡವಲೂ ಹಾಂಗೆ, ಜೆಂಬ್ರದ್ದಿನಕ್ಕೆ ಬೇಕಾದ ೩ ಸೇರು ಅಕ್ಕಿ ಎಲ್ಲ ಒಂದರಿ ಕೂದ್ದರ್ಲಿಯೇ ಕಡದು ಏಳುಗಡ. ಅಜ್ಜ ೮೫ ಒರಿಶ ಬದುಕ್ಕಿದ್ದವಡ, ಸಂತೋಶಲ್ಲಿ. ಇದೆಲ್ಲ ಅಂದ್ರಾಣ ಕಥೆ, ಈಗ ಇಬ್ರುದೇ ಇಲ್ಲೆ. ಅವರ ಪಟ ಇದ್ದು, ಮಣ್ಣ ಚಿಟ್ಟೆಯ ಸರೀ ಒತ್ತಕ್ಕೆ, ಗೋಡೆಲಿ ನೇಲ್ಸಿಗೊಂಡು, ಅವರ ನೆಂಪಿಂಗೆ ರಂಗಮಾವ ಮಾಡ್ಸಿದ್ದು.


ಮತ್ತೆ ಅವರ ಮಗ ರಂಗ ಮಾವ°, ಅವುದೇ ಎನೂ ಮನೆಲೇ ಕೂಪ ಜೆನ ಅಲ್ಲ. ಧಾರಾಳ ಕೆಲಸ ಮಾಡುಗು, ಸೊಪ್ಪು ಕೊಚ್ಚುದು, ಅಗತ್ತೆ ಮಾಡುದು, ಗೊಬ್ಬರ ತೆಗವದು, ಪಂಪು ಎಳಗುಸಿ ನೀರು ಹಿಡಿವದು, ಇತ್ಯಾದಿ ಕೃಷಿಗೆ ಅಗತ್ಯ ಇಪ್ಪ ಕೆಲಸಂಗ ಎಲ್ಲ ಮಾಡಿಗೊಂಡಿಕ್ಕು. ಅಡಕ್ಕೆಯ ಅವ್ವೇ ಸೊಲಿಗು, ಗಟ್ಟಿ ಜೀವ, ತೊಂದರಿಲ್ಲೆ. ಕಾಯಾಮು ಹೇಳಿ ಅಣ್ಣಿ ಬಕ್ಕು,ಗಟ್ಟಿ ಕೆಲಸ ಎಲ್ಲ ಅದು ಮಾಡುಗು ಇದಾ. ಉದಿಯಪ್ಪಗ ಸೂರ್ಯ ಹುಟ್ಟುವಗಳೇ ಎದ್ದು ಮಿಂದು, ಸಣ್ಣ ಜೆಪ ತಪ ಪೂಜೆ ಎಲ್ಲ ಆಗಿ ಕಾಪಿ ಕುಡುದು ಜಾಗೆ ತಿರುಗ್ಗು. ಅಂದೇ ಮಾದವ ಆಚಾರಿಯ ಕೈಲಿ ಹೇಳಿ ತೋಡಕರೆಲಿ ಇದ್ದ ಬೀಟಿ ಮರದ ಕುರ್ಶಿ ಮಾಡ್ಸಿದವು. ಕಪ್ಪಿಂದು, ಅವರ ಹಾಂಗೆ. ಅದು ರಂಗಮಾವನ ಕುರ್ಶಿ ಹೇಳಿಯೇ ಲೆಕ್ಕ. ಚೆಂದಕ್ಕೆ ಪೆರ್ಲಮಗ್ಗದ ವಸ್ತ್ರ ಹೊದಶಿ ಒಂದು ಮೇಲೋಸನ ಹಾಕಿಗೊಂಡಿಕ್ಕು, ಎಷ್ಟೊತ್ತಿಂಗೂ, ಅವಕ್ಕೆ ಕೂಪಲೇಳಿ. ಬೇರೆ ಆರುದೇ ಕೂರವು ಅದರ್ಲಿ. ಕೆಲಸ ಮಾಡಿ ಬಚ್ಚುವಗ ಆ ಕುರ್ಶಿಲಿ ಕೂದು ಎಲೆ ಅಡಕ್ಕೆ ಬಾಯಿಗೆ ಹಾಕುಗು. ರಜ್ಜ ರಜ್ಜ ಬಾಗವತ ಓದುಗು. ಬರೆತ್ತರೂ ಅಲ್ಲಿ ಕೂದುಗೊಂಡೆ.

ನಿತ್ಯದ ಕೆಲಸ ಎಲ್ಲ ಪಾತಿಅತ್ತೆ ಮಾಡುಗು. ಅವಲಕ್ಕಿ ತಂದು ಕೊಟ್ಟರೆ ಒಗ್ಗರ್ಸುಗು. ನಿತ್ಯಕ್ಕೆ ಬೇಕಾದ ಅಕ್ಕಿ-ಅರೆಪ್ಪು ಕಡಗು, ಮೇಲಾರ-ಕೊದಿಲು ಎಲ್ಲ ಮಾಡುಗು. ಹೋದೋರನ್ನೂ ಹೊಟ್ಟೆತುಂಬ್ಸಿ ಕಳುಸುಗು. ಮೊನ್ನೆ ಮೀವಗ ಬಿದ್ದದಕ್ಕೆ ಬದಿಯಡ್ಕದ ಡಾಕ್ಟ್ರ
° ಶಂಕರಮಾವನ ಮದ್ದು. ಈಗ ರಜ ಸೊಂಟ ಬೇನೆ ಹೇಳುದುಬಿಟ್ರೆ ಆರೋಗ್ಯಲ್ಲಿದ್ದವು.


ರಂಗಮಾವನ ಮಗ, ಈಗಾಣ ಎಜಮಾನ
ಕಿರಣ ಬಾವ°, ಎಂತಪ್ಪಾ- ಶ್ಯಾಮ ಕಿರಣ ಹೇಳಿ ಹೆಸರು. ತರವಾಡು ಮನೆಯ ಇನ್ನಾಣ ಎಜಮಾನ. ಕಲಿಯುವಿಕೆ ಆದ ಮತ್ತೆ ಕಾರಿನ ಚಕ್ರ ಅದು ಇದು ಎಂತದೋ ಎಲ್ಲ ಅಂಗುಡಿ ಮಡಗಿದ್ದ°, ಕುಂಬ್ಳೆಲಿ. ಹಗಲಿಂಗೆ ರಜ್ಜ ಹೊತ್ತು ಹೋಗಿ ಬಕ್ಕು, ನೋಡಿಗೊಂಬಲೆ ಕೆಲಸದವು ಇದ್ದವಿದಾ. ಉದಿಯಾದರೆ ಎದ್ದು ವಾರ್ತೆ ನೋಡುಗು. ಎಂತ ಪೊನ್ನಂಬ್ರ ಹೋಪದು ಬೇಕೆ, ವಾರ್ತೆ ನೋಡದ್ರೆ – ಹೇಳಿ ರಂಗಮಾವ ಪರಂಚುಗು. ಎಷ್ಟೊತ್ತಾದರೂ ಮೀವಲೆ ಹೋಗ°, ಅಮ್ಮ ಪರಂಚಿ ಪರಂಚಿ ಸುಮಾರು ಹೊತ್ತಪ್ಪಗ ಮೆಲ್ಲಂಗೆ ಹೆರಡುಗು, ನಮುನೆ ನಮುನೆ ಸಾಬೊನು ಎಲ್ಲ ಹಾಕಿ ಮಿಂದು ಬಪ್ಪಗ ಉದಿಯಪ್ಪಗಾಣ ಕಾಪಿ ತಯ್ಯಾರು ಇರ್ತು. ಅಮ್ಮ ಮಾಡದ್ರೆ ಹೆಂಡತ್ತಿಯ ಬೈದತ್ತು. ನಾಲ್ಕು ಒರಿಶ ಹಿಂದೆ ಮದುವೆ ಆದ್ದು ಇದಾ, ಕೊಂಗಾಟ ಪೂರ ಮುಗುದ್ದು ಈಗ, ಹೆಂಡತ್ತಿಯ ಹತ್ರೆ. ಮದ್ಯಾನ್ನದ ಮೊದಲು ದೇವರ ಪೂಜೆ ಮಾಡ್ಲಿದ್ದು ಮಗಾ, ಎನ್ನ ಮದ್ಯಾನ್ನದ ಮೊದಲು ಕಲ್ತುಗೊ – ಹೇಳಿ ರಂಗ ಮಾವ ಹೇಳುಗು ಅಂದಿಂದಲೇ. ಇವಂಗೆ ಮಂತ್ರ ಹೇಳಿರೆ ರಜ್ಜ ಒಗದಿಕೆ. ಸಣ್ಣ ಇಪ್ಪಗ ಬಟ್ಟಮಾವ°ನ ನೆಗೆ ಮಾಡಿ ಈಗ ಅದನ್ನೇ ಕಲಿವಲೆ ಎಂತದೋ ಒಂದು ಮುಜುಗರ ಅಪ್ಪದಿದಾ! ಅಂತೂ ರಜ ಮಂತ್ರ ಗೊಂತಿದ್ದು, ಬರುಂಬುಡ ಚಡ್ಡಿ ಹಾಕಿಗೊಂಡೇ ದೇವರಿಂಗೆ ಅಬಿಶೇಕ ಮಾಡ್ತ°, ಬೂತದ ಬಂಡಾರಕ್ಕೆ ಹೂಗು ಮಡುಗುತ್ತ° ಹೇಳಿ ಇನ್ನುದೇ ರಂಗಮಾವನೇ ಸ್ವತಃ ಮಾಡುದು. ಈಗಾಣ ಬಳಂಕುತ್ತ ಎಳಮ್ಮೆ ನಮುನೆ ಪೈಬರು ಕುರ್ಶಿ ಇದ್ದಲ್ದಾ– ಆ ಕುರ್ಶಿಲಿ ಟೀವಿ ಬುಡಲ್ಲಿ ಕೂದುಗೊಂಡು ಎಷ್ಟೊತ್ತಿಂಗೂ ನೆಗೆ ಮಾಡಿಗೊಂಡಿಕ್ಕು. ಚೋದ್ಯ ಎಂತರ ಹೇಳಿರೆ, ಬೇರೆ ಆರಿಂಗೂ ಅರಡಿಯ ಇದಾ, ಅದು ಹಿಂದಿ ಶ್ಟೇಶನು – ಡಿಶ್ಶಿಲಿ ಬಪ್ಪದು. ಕಟ್ಲೀಸೋ, ನೆಲಕಡ್ಳೆಯೋ ಎಷ್ಟೊತ್ತಿಂಗೂ ಇಕ್ಕು ಅವನ ಕೈಲಿ. ಇನ್ನೊಂದು ಕೈಲಿ ರಿಮೋಟು, ಶ್ಟೇಶನು ಬದಲುಸುಲೆ. ಹೆಂಡತ್ತಿಗೂ ಅದೇ ಬೇಕಾದ್ದು, ಗೆಂಡ ಟೀವಿ ನೋಡಿಗೊಂಡಿದ್ದರೆ, ಎನಗೆ ತುಂಬ ಹೊತ್ತು ತಲೆಬಾಚುಲೆ ಎಡಿಗು, ಹೇಳಿ. ಬಗತ್ತಲೆ ಬಿಡಿ, ತಲೆಕಸವೇ ಸರಿಗಟ್ಟು ಇಲ್ಲೆ, ಸಣ್ಣ ಕೂಸುಗೊ ಹಾಕುತ್ತ ಹೇರ್ ಬೇಂಡೊ, ಎಂತರಪ್ಪ, ಎದ್ರಂಗೆ ಹೀಂಗೆ ಬಕ್ಕು, ಅರ್ದ ಚಂದ್ರ – ಅದರ ಹಾಕಿ, ಹಿಂದಂಗೆ ಹುಂಡು ತಲೆಕಸವು ನೇಲ್ಸುಗು. ಕೊಡೆಯಾಲಲ್ಲಿ ಹೆಮ್ಮಕ್ಕೊಗೂ ಬಂಡಾರಿ ಕೊಟ್ಟಗೆ ಬೈಂದಡ ಅಲ್ದಾ ಈಗ? ಅಲ್ಲಿಗೆ ಹೋಕಡ, ತಿಂಗಳಿಂಗೆರಡು ಸರ್ತಿ. ಬೇಶಿ ತುಂಬ್ಸಿದ ಸೇಮಗೆ, ಮೇಗೀ ಹೇಳಿ ಇದ್ದಲ್ದ, ಟೀವಿಲಿ ಬತ್ತಡ, ಅದರ ಮಾಡ್ಳೆ ಗೊಂತಿದ್ದಡ. ಡಿಕೋಕ್ಷನು ಹಾಕಿದ ಕಾಪಿ ಆದರೆ ಮಾಡ್ಳೆ ಅರಡಿಗು ಅದಕ್ಕೆ. ಅಷ್ಟೆ. ಇರುಳಿಂಗೆ ಉಣ್ಣ, ಸರಿಗಟ್ಟು - ಪತ್ಯದವರ ಹಾಂಗೆ. ಮಾವ ಮಾಡಿದ ನೆಟ್ಟಿ ಬಳ್ಳಿಂದ ಚೆಕ್ಕರ್ಪೆ ಕೊಯ್ದು ಕೊಯ್ದು ತಿಂಗು. ಮನೆ ಬಿಟ್ಟು ಹೆರಡ ಜೋಡಿಂಗೆ ಮಣ್ಣಕ್ಕು ಹೇಳಿಗೊಂಡು.

೨ ವರ್ಶದ ಮಾಣಿ ಇದ್ದ
° ಅವಕ್ಕೆ -ವಿನು ಹೇಳಿ. ಅವಂಗೆ ಕೂಪಲೆ ಹೇಳಿ ಒಂದು ತಲೆಕೊಂಬಿನ ಹಾಂಗೆ ಇಪ್ಪ ಕುರ್ಶಿ ತಯಿಂದವಡ ಮೊನ್ನೆ.

ಅದರ ಹೆಸರು ಬೀನು ಬೇಗು ಹೇಳಿ ಅಡ.ಕಪ್ಪು ಬಣ್ಣದ ಚರ್ಮದ ಚೋಲಿ ಒಳ – ಈ ಅಳತ್ತೊಂಡೆ ಬಿತ್ತು ಇಲ್ಲೆಯೋ- ಹಾಂಗಿಪ್ಪ ಎಂತದೋ ಬಿತ್ತು ಬಿತ್ತು ಇಪ್ಪದಡ, ಆಚಕರೆ ಮಾಣಿಬಾವ ಹೇಳಿದ. ಹೇಂಗೆ ಬೇಕಾರು ಕೂಪಲಕ್ಕಡ, ಬಜಕ್ಕನೆ. ಸೋಪ, ಕುರ್ಶಿ, ಹಾಸಿಗೆ, ತಲೆಕೊಂಬು ಎಂತ ಬೇಕಾರು ಮಾಡ್ಳಾವುತ್ತಡ ಅದರ – ಹಾಂಗಿಪ್ಪ ಕುರ್ಶಿ. ಆಚಕರೆ ಮಾಣಿಬಾವ ಕೂದ° ಅಡ, 'ಬಾಳೆ ಹೊಂಡಲ್ಲಿ ಚಾಂಬಾರಿನ ಮೇಗೆ ಕೂದ ಹಾಂಗೆ ಆತು ಒಪ್ಪಣ್ಣ ಬಾವ', ಹೇಳಿದ°.

ಅಮ್ಮ ರೂಮಿಲಿ, ಅಪ್ಪ ಟೀವಿಲಿ, ಆ ಬೀನು ಬೇಗಿನ ಅವನಷ್ಟಕ್ಕೆಅತ್ತೆ ಇತ್ತೆ ಎಳಕ್ಕೊಂಡು ಹೋಗಿ, ಬೇಕಾದಲ್ಲಿ ಸರಿಮಾಡಿ, ಪುಳ್ಳಿಮಾಣಿ ಕೂಪದಡ,ಆಚಕರೆ ಮಾಣಿ ಹೇಳಿದ°.

  • ಶಂಬಜ್ಜ° ಕಲ್ಲಿನ ಹಾಂಗೆ ಗಟ್ಟಿ ಇತ್ತಿದ್ದವು, ಜೀವನಪದ್ದತಿಯೂ ಹಾಂಗೆ, ಕಲ್ಲಿನ ಹಾಂಗೆ ಕಟ್ಟುನಿಟ್ಟು. ಕಲ್ಲಿನಾಂಗಿಪ್ಪ ಮಣ್ಣಚಿಟ್ಟೆಲಿ ಕೂರುಗು.
  • ರಂಗಮಾವಂದು ಅಷ್ಟು ಕಡ್ಪ ಅಲ್ಲ,ಆದರೆ ನಿಯತ್ತು ಇತ್ತು, ಮರದ ಕುರ್ಶಿಲಿ ಕೂರುಗು, ಮರದ ಹಾಂಗೆ ಗಟ್ಟಿ ಮುಟ್ಟು ದೇಹ.
  • ಕಿರಣಬಾವಂದು ನಿಯತ್ತೂ ಕಮ್ಮಿ ಆಯಿದು, ಪೈಬರು ಕುರ್ಶಿಲಿ ಕೂರ್ತ ಜೀವನ, ಅವನೂ ಹಾಂಗೇ, ಪೈಬರು ಕುರ್ಶಿಯಷ್ಟೇ ಗಟ್ಟಿ.
  • ಅವನ ಮುದ್ದು ಮಗ ವಿನು ಅಂತೂ ಬಾರೀ ಕೊಂಗಾಟಲ್ಲೇ ಬೆಳೆತ್ತವ°, ಬೀನುಬೇಗಿಲಿ ಕೂರ್ತವ°, ಹಾಂಗೇ ಇದ್ದಂದೇ!

ಅಜ್ಜಂದ್ರ ಕಟ್ಟುನಿಟ್ಟಿನ ಜೀವನ, ಕಾಲ ಹೋದ ಹಾಂಗೆ ಮೆಸ್ತಂಗೆ ಆಗಿಯೋಂಡು ಬಂತು. ಜೀವನ ಪದ್ಧತಿಯ ನೇರ ಪರಿಣಾಮ ದೇಹದ ಮೇಲೆ ಬೀಳುತ್ತು. ವ್ಯಾಯಾಮ – ಪ್ರಾಣಾಯಾಮ ಎಲ್ಲ ಮಾಡಿಗೊಂಡಿದ್ದ ಅಜ್ಜಂದ್ರು ೮೦-೮೫ ಒರಿಶ ಬದುಕ್ಕಿದ್ದವು, ಆರಾಮಲ್ಲಿ.ಎಂತದೂ ಇಲ್ಲದ್ದೆ ಇಪ್ಪತ್ನಾಲ್ಕು ಗಂಟೆ ಟೀವಿ, ಕಂಪ್ಯೂಟರು ಹೇಳಿಗೊಂಡು ಬಸುಂಬನ ಹಾಂಗೆ ಬೆಳದರೆ,'ಈ ದೇಹ ಎಷ್ಟು ದಿನ ನಮ್ಮ ಎಳಗು ಬಾವಾ?' ಹೇಳಿ ಆ ಬೀನು ಬೇಗು ಅವಸ್ತೆ ನೋಡಿಕ್ಕಿ ಬಂದ ದಿನ ಆಚಕರೆ ಮಾಣಿ ಕೇಳಿದ°.

ಜೀವನಶೈಲಿ ಮೆಸ್ತಂಗೆ ಆದ ಹಾಂಗೆ ಜೀವವೂ ಮೆಸ್ತಂಗೆ ಆವುತ್ತು, ಅಲ್ದಾ?

ಒಂದೊಪ್ಪ: ನಿಂಗೊ ಎಂತರಲ್ಲಿ ಕೂಪದು ಬಾವ, ಮನೆಲಿಪ್ಪಗ ?