ಮದಲಿಂಗೇ ಹಾಂಗೆ, ಮನೆಲಿ ಎಲ್ಲೊರಿಂಗೂ ಅದರ ಮೇಗೆ ಆಸಕ್ತಿ ಆದ ಕಾರಣ ಒಪ್ಪಣ್ಣಂಗುದೇ ಸಣ್ಣ ಇಪ್ಪಗಳೇ ಅದರ ಗಂಧ ಇತ್ತು.
ಮರುಳು ಹೇಳಿರೆ ಒಂದು ನಮುನೆ ಮರುಳೇ. ಇರುಳು ಹಗಲು ಲೆಕ್ಕ ಇಲ್ಲದ್ದೆ ಕೇಳಿದ್ದು ಇದ್ದು. ಜೋನು ಹಿಗ್ಗಿನ್ಸು ಹಾಡಿದ ಎಂದರೋ, ಚೆಂಬೈ ಅಜ್ಜ ಹಾಡಿದ ವಾತಾಪಿ, ಯೇಸುದಾಸಿನ ಸಾರಸಮುಖಿ, ಯಮ್ಮೆಲ್ವಿ ಅಜ್ಜಿ ಹಾಡಿದ ನನುಪಾಲಿಂಪ ಎಲ್ಲ ಕೆಸೆಟ್ಟುಗಳಲ್ಲಿ ಮಡಿಕ್ಕೊಂಡು ಇಕ್ಕು, ಯಕ್ಷಗಾನದ ಕೆಸೆಟ್ಟುಗಳ ಒಟ್ಟೊಟ್ಟಿಂಗೆ
ಅಷ್ಟಪ್ಪಗ ಸಂಗೀತ ಹೇಳಿತ್ತುಕಂಡ್ರೆ ಪದಂಗಳ ರಾಗವೂ, ತಾಳವೂ ಅರ್ತ ಅಕ್ಕು ಅಷ್ಟೆ. ಭಾಷೆಯೂ, ಭಾವವೂ ಅರ್ತ ಆಗಿಯೊಂಡು ಇತ್ತಿಲ್ಲೆ. ಆರಿಂಗೆ ಬೇಕದು!
ಒಪ್ಪಣ್ಣಂಗೆ ಈ ರಾಗ, ತಾಳ ಕೆಮಿಲೆ ಕೇಳಿ ಕೇಳಿ ಬಾಯಿಲೆ ಬಕ್ಕು. [ಒಪ್ಪಣ್ಣ ಹೇಳುದರ ಕೇಳಿ ಕೇಳಿ ಒಪ್ಪಕ್ಕಂಗೆ ತಿಂದದೇ ಬಾಯಿಲೆ ಬಂದೊಂಡು ಇತ್ತೋ ಏನೋ! ;-( ]
ದೊಡ್ಡಣ್ಣ ಸಂಗೀತ ಕೇಳುಗು, ಹಾಡ°.
ಒಪ್ಪಣ್ಣ ಸಂಗೀತ ಕೇಳುಗು, ಪದ ಹಾಡುಗುದೇ. ;-)
ಒಪ್ಪಕ್ಕ ಹಾಡುಗು, ಅದರ ಸಂಗೀತ ಟೀಚರು ಹಾಡಿದ್ದರ ಮಾಂತ್ರ ಕೇಳುಗಷ್ಟೆ, ಕೆಸೆಟ್ಟು ಎಲ್ಲ ಕೇಳುದು ಕಮ್ಮಿ.ದೊಡ್ಡಣ್ಣಂದು ಸಂಗೀತ ಸಂಗ್ರಹಿಸುದು ದೊಡ್ಡ ಮರುಳು. ಹೊಸತ್ತೊಸತ್ತು ಎಲ್ಲಿ ಸಿಕ್ಕಿತ್ತೋ, ಕಲಾವಿದನ ಹೆಸರು, ರಾಗದ ಹೆಸರು ನೋಡಿಕ್ಕಿ ಚೆಂದ ಕಂಡತ್ತೋ, ತೆಕ್ಕೊಂಗು, ಸುಮಾರು ಆಯಿದು ತಂದದು. ತಿಂಗಳಿಂಗೊಂದರಿ ಅಟ್ಟ ಉಡುಗುವಗ ಅಮ್ಮ ಪರಂಚಲಿದ್ದು ’ತಂದು ತಂದು ಹೇಮಾರ್ಸಿ’ ಮಡಗಿದ್ದಕ್ಕೆ..! ಮದಲಿಂಗೆ ದಕ್ಷಿಣಾದಿ (/ ಕರ್ನಾಟಕ ಶಾಸ್ತ್ರೀಯ ಸಂಗೀತ) ಮಾಂತ್ರ ತತ್ತಾ ಇದ್ದವ° ಈಗೀಗ ಉತ್ತರಾದಿಯುದೇ ತಪ್ಪಲೆ ಸುರು ಮಾಡಿದ್ದ. ಅದರಲ್ಲಿ ’ಭಾವ’ ಜಾಸ್ತಿ ಅಡ. ಉಮ್ಮಪ್ಪ! ಒಪ್ಪಣ್ಣಂಗೆ ಮದಲಿಂಗೇ ಉತ್ತರಾದಿ ಆಗ. ಅಂದು ಜೈಲುಸಿಂಗು ಸತ್ತಿಪ್ಪಗ ಮೂರು ದಿನ ರೇಡಿಯಲ್ಲಿ ಉತ್ತರಾದಿ ಕೇಳಿ ಕೇಳಿ ’ಎಬೇಲೆ, ಇದು ಹೀಂಗೇ!’ ಹೇಳಿ ತಲಗೆ ತುಂಬಿ ಹೋಗಿತ್ತು. ಆ ಹೊಡೆಂಗೆ ಆಸಕ್ತಿಯೇ ಹುಟ್ಟಿದ್ದಿಲ್ಲೆ. ಒಪ್ಪಣ್ಣನ ಕುಡ್ಪಲ್ತಡ್ಕ ಬಾವಂದೇ ಹಾಂಗೆ, ದಕ್ಷಿಣಾದಿ ಕಛೇರಿ ಕೊಡುವಷ್ಟು ಬತ್ತರೂ, ಉತ್ತರಾದಿಯ ಶುದ್ದಿ ಬಂದರೆ ಬಾಯಿಗೆ ಬೀಗ ಹಾಕಿಯೊಂಗು. ಆಚಕರೆ ಮಾಣಿಗೆ ಉತ್ತರಾದಿ ಕೇಳಿರೆ - ’ಒಂದಾರಿ ಅಕ್ಕಚ್ಚು ಕೊಡಿರಾ° ಅದಕ್ಕೆ!’ ಹೇಳುಗು. ಅಜ್ಜಕಾನ ಬಾವ ’ಕೆಸೆಟ್ಟಿನ ಟೇಪು ಸಿಕ್ಕಿಗೊಂಡಿದೋ ಹೇಳಿ ಒಂದು ಕನುಪ್ಯೂಸು ಬಯಿಂದು ಬಾವ’ ಹೇಳುಗು ;-). ಅಂತೂ ಒಪ್ಪಣ್ಣನ ಚೆಂಙಾಯಿಗೊ ಎಲ್ಲ ದಕ್ಷಿಣಾದಿಯವೇ! ಎಂಗಳ ಪೈಕಿಲಿ ಉತ್ತರಾದಿಯ ಬಗೆಗೆ ರಜ ಆದರೂ ಟೇಷ್ಟು ಇದ್ದದು ದೊಡ್ಡಣ್ಣಂಗೆ ಮಾಂತ್ರ.
ಇಪ್ಪ ಕೆಸೆಟ್ಟುಗಳಲ್ಲಿ ಒಂದೊಂದರ ತೆಗದು ಕೇಳ್ತ ಕೆಲಸ ಒಪ್ಪಣ್ಣಂಗೆ. ಲಾಯ್ಕಿದ್ದರೆ ಚೆಂಙಾಯಿಗೊಕ್ಕೆಲ್ಲ ಕೈಯಾನಕೈ ಕೊಡುದು, 'ಇದರ ಕೇಳು, ಲಾಯ್ಕಿದ್ದು' ಹೇಳಿ.
ಅವರ ಮನೆಂದಲೂ ಹೊಸ ಹೊಸತ್ತು ಬಕ್ಕು. ಒಳ್ಳೆ ಕೆಸೆಟ್ಟುಗೊ ಇದ್ದರೆ ಪರಸ್ಪರ ಕೊಟ್ಟುಗೊಂಬದು ಅಂದಿಂದಲೇ ಇದ್ದು. ಊರಿಲಿ ಆಚಕರೆ ಮಾಣಿ, ಅಜ್ಜಕಾನ ಬಾವ°, ಕೊಳಚ್ಚಿಪ್ಪು ಬಾವ°, ದೊಡ್ಡಬಾವ°, ಈಚಕರೆ ಪುಟ್ಟ°, ಪುಟ್ಟಕ್ಕ, ಕುಡ್ಪಲ್ತಡ್ಕ ಬಾವ°, ಇನ್ನೂ ಸುಮಾರಿದ್ದೆಯೊ°- ಎಂಗೊ ಎಲ್ಲ ಒಂದು ಸಂಗೀತ ಕೇಳ್ತವರ ಗುಂಪು. ಬೆಂಗ್ಳೂರಿಲಿ ಇರ್ತ ಚೆಂಬಾರ್ಪು ಅಣ್ಣಂದೇ ಆಟದ ಪದ ಇಪ್ಪ ಕೆಸೆಟ್ಟು ಸುಮಾರು ಕೊಟ್ಟಿದವು, ಲಾಯ್ಕ ಲಾಯ್ಕದ್ದು ನೋಡಿ. ಅದುದೇ ಸಂಗೀತವೇ ಅಲ್ದೋ?! ಮಂಡೆ ಪಿರ್ಕಿ ಅಪ್ಪಗ ಕೇಳುದಿದ್ದು ಒಂದೊಂದರಿ.
ಮಳೆಗಾಲದ ಪುರುಸೊತ್ತಿಲಿ ಕೆಸೆಟ್ಟು ಕೇಳುದೂ ಒಂದು ಉದ್ಯೋಗವೇ ಅಲ್ದೋ, ನಮ್ಮಾಂಗಿರ್ತ ಹಳ್ಳಿಯೋರಿಂಗೆ!
ಕೆಲವು ಸರ್ತಿ ಮರುಳು ಜೋರಾತು ಕಂಡ್ರೆ ಸುಬ್ರಮಣ್ಯಕ್ಕೊರೆಂಗೆ ಹೋಪದೂ ಇದ್ದು - ನರಸಿಂಹ ಜಯಂತಿಯ ಸಂಗೀತ ಕಚೇರಿ ಕೇಳುಲೆ. ಈ ಒರಿಷ ರೂಪತ್ತೆ ಗೆಂಡಂದೇ ಸಿಕ್ಕಿದವು, ರೂಪತ್ತೆ ಬಿಟ್ಟ ಕಾರಣ ಮಾತಾಡಿದವುದೇ ಎಂಗಳತ್ರೆ!
ಮೊನ್ನೆ ಶೆನಿವಾರ ಹೊತ್ತಪ್ಪಗಾಣ ಹೊತ್ತಿಂಗೆ ಚೆರಪ್ಪುಲೆ ಆರುದೇ ಬಯಿಂದವಿಲ್ಲೆ, ಮಳೆಯ ಲೆಕ್ಕಲ್ಲಿ ಎಲ್ಲೊರು ಮನೆ ಒಳ ಕೂಚಪ್ಪ. ಅಲ್ಲದ್ರೆ ಎಂಗೊ ಕೆಲವು ಜೆನಂಗ ಕಟ್ಟೆಪೂಜೆ ಮಾಡ್ಳಿದ್ದು- ಎಂತಾರು ಸದ್ಯದ ಶುದ್ದಿಗೊ ಹೋಪದು. ಹಾಂಗೆ ಇರುಳು ಒಂದರಿ ಹಳೇ ಕೆಸೆಟ್ಟು ಪೆಟ್ಟಿಗೆಯ ಹಿಡ್ಕೊಂಡು ಕೂದ್ದು.
ಹೆರ ಒಪ್ಪಕ್ಕ° ಓದಿಗೊಂಡು ಇತ್ತು, ಪರೀಕ್ಷೆ ಅಡ್ಡ - ಯೇವತ್ತು ನೋಡಿರೂ ಪರೀಕ್ಷೆ ಅವಕ್ಕೆ- ಹಾಂಗೆ ಅದಕ್ಕೆ ಹರಟೆ ಮಾಡುದು ಬೇಡ ಹೇಳಿಗೊಂಡು ಕರೆಣ ಕೋಣಗೆ ತೆಕ್ಕೊಂಡು ಹೋಗಿ ಮೆಲ್ಲಂಗೆ ಬಾಗಿಲು ಹಾಕಿಗೊಂಡು ಕೂದಾತು. ಟೇಪ್ರೆಕಾರ್ಡಿನ ತಲಗೆ ಮೀಶೆಡದೋ, ಹೆಡ್ ಕ್ಲೀನು (head clean) ಆಯಿಲು ಇಲ್ಲದ್ದಕ್ಕೆ ಪೆಟ್ರೋಲಿಲಿ ಮಾಡಿ ಆತು ಮತ್ತೆ!
ಅಜಪ್ಪಿ ಅಜಪ್ಪಿ ಅಪ್ಪಗ ಒಂದೊಳ್ಳೆ ಕೆಸೆಟ್ಟು ಸಿಕ್ಕಿತ್ತು. ಸದ್ಯ ತಂದದು ಹೇಳಿ ಕಾಣ್ತು. ಮೊದಲು ಕಂಡಿದಿಲ್ಲೆ ಇದರ. ಮೋಹನ ರಾಗ- ಡಾ-ಎಮ್- ಬಾಲಮುರಳಿ -ಹರಿಪ್ರಸಾದ್ ಚೌರಾಸಿಯಾ ಹೇಳಿ ಕಂಡತ್ತು. ದ್ವಂದ್ವ ಅಡ, ಬಡಗಲಾಗಿ ಅದರ ’ಜುಗಲ್ (ಯುಗಳ=೨) ಬಂದಿ’ ಹೇಳುದಡ. ಕೆಂಪು ಕೆಂಪು ಬಣ್ಣದ ಕವರಿನ ಕೆಸೆಟ್ಟು. ಅದರ ಮೇಗೆ ಇಬ್ರ ಪಟಂಗ. ತೊಡಿಯ - ಸಣ್ಣ ಮಕ್ಕೊ ಮಣ್ಣಿ ತಿಂಬಗ ಮಾಡಿದ ಹಾಂಗೆ ಮಾಡಿ, ಮುಗ್ದ ಕಣ್ಣಿಲಿ ಒಂದು ನೆಗೆ ಮಾಡಿ ಇಪ್ಪ ಪೋಸಿಲಿ, ಮಾಷ್ಟ್ರಮನೆ ಅತ್ತೆಯ ಹಾಂಗೆ ಲಾಲುಗಂದ ಬೊಟ್ಟು ಹಾಕಿದ, ಒರಿಶ ಎಪ್ಪತ್ತಾತಡ ಅವಂಗೆ - ಕಳುದೊರಿಶ ಪುತ್ತೂರಿಂಗೆ ಬಯಿಂದನಡ, ನಮ್ಮೂರಿಂದ ಗಣೇಶಮಾವಂದೇ, ಮಾಷ್ಟ್ರುಮಾವಂದೇ ಹೋಗಿತ್ತಿದ್ದವು - ಆ ಬಾಲಮುರಳಿಯ ಪಟ. ಅವನ ಬಲತ್ತಿಂಗೆ ಒಂದು ಉದ್ದದ ಕೊಳಲು ಹಿಡ್ಕೊಂಡು - ದಕ್ಷಿಣಾದಿಯ ಕೊಳಲಿನ ಹಾಂಗೆ ಬರೇ ಸಣ್ಣದಲ್ಲ- ರಜ ಉದ್ದ, ರಜ್ಜ ತೋರ - ಕಾಂಬಲುದೇ, ಸ್ವರವುದೇ! - ಬಾನ್ಸುರಿ (ಬಾನ್ಸು = ಬೆದುರು) ಹೇಳುದಡ ಅದಕ್ಕೆ - ಅದರ ಹಿಡ್ಕೊಂಡು ಬೆರಳಿಲಿ - ಗೆಡ್ಡದ ಜೋಯಿಶರು ಮಾಟ ಮಾಡಿದ ಹಾಂಗೆ - ಎಂತದೋ ಸಂಜ್ಙೆ ಕೊಟ್ಟುಗೊಂಡು - ಈ ಕೆಸೆಟ್ಟಿನ ಕೇಳು ಹೇಳಿಗೊಂಡು ಇತ್ತಿದ್ದ° ಚೌರಾಸಿಯ°.
ರಜ ಆಸಕ್ತಿ ಹುಟ್ಟುಸಿತ್ತು.
ಬಾಲಮುರಳಿ ಹೇಳಿರೆ ದಕ್ಷಿಣಾದಿ ಸಂಗೀತದ ಬಲಿಪ್ಪ°. ಒಳ್ಳೆ ಸ್ವರವುದೇ ಇದಾ! ಮಂದ್ರ ಷಡ್ಜಂದ ತಾರಕ ನಿಷಾದವರೆಗೆ ಆರಾಮಲ್ಲಿ ಏರುಸುತ್ತ°. ಆಶು ಕವಿ ಅಡ. ಸ್ವತಃ ಕೀರ್ತನೆಗಳ ಬರದು ಹಾಡ್ತನಡ. ಅತ್ಲಾಗಿ ಚೌರಾಸಿಯ ಹೇಳಿರುದೇ ಚಿಲ್ಲರೆ ಜೆನ ಏನಲ್ಲ. ನಮ್ಮ ಗೋಡುಕಿಂಡಿಂದಲೂ ದೊಡ್ಡ ಕಿಂಡಿ. ಕೊಳಲಿನ ಮಾತಾಡುಸುತ್ತನಡ. ಪೋರೀನಿಂಗೆ ಹೋವುತ್ತನಡ. ಅಮೇರಿಕಲ್ಲಿ ಹೋಗಿ ಮನ್ನೆ ಇತ್ಲಾಗಿ ಕೊಳಲು ಬಾರುಸಿಕ್ಕಿ ಬೈಂದನಡ, ಮಾಡಾವು ಅಕ್ಕಂಗೆ ’ಹೋಪಲೆ ಆಗಿತ್ತಿಲ್ಲೆ’ ಹೇಳಿ ಬೇಜಾರು ಮಾಡಿತ್ತಿದ್ದು. ಅಂತೂ, ಬಾಲಮುರಳಿ-ಚೌರಾಸಿಯ ಒಂದು ವಿಶೇಷ ಬೆರಕ್ಕೆ ಹೇಳಿ ಅನಿಸಿತ್ತು ಒಪ್ಪಣ್ಣಂಗೆ.
ಇವಿಬ್ರುದೇ ಹುಟ್ಟಿದ್ದು, ಸಂಗೀತ ಕಲ್ತದು, ಪ್ರಸಿದ್ಧಿಗೆ ಬಂದದು - ಎಲ್ಲವುದೇ ಬೇರೆ ಬೇರೆ ಊರಿಲಿ. ಇಬ್ರಿಂಗೂ ಗುರುಮುಖೇನ ಪಾಟ ಆದರೂ, ಆದ ಕ್ರಮವೇ ಬೇರೆ ಬೇರೆ. ಕಲ್ತ ಸಂಗೀತಂಗೊ ಬೇರೆ ಬೇರೆ. ಉಂಬ ಊಟ ಬೇರೆ, ಹಾಡಿ ಬೆಳದ ವಾತಾವರಣ ಬೇರೆ ಬೇರೆ. ಪಕ್ಕನೆ ಅವರ ಇಬ್ರನ್ನೂ ಒಂದೇ ಕಚೇರಿಗೆ ಕೂರುಸಿ ಅವಿಲು ಮಾಡಿರೆ ಹೇಂಗಕ್ಕಪ್ಪಾ!? ಒಂದರಿ ಕೇಳುಲೇ ಬೇಕು ಹೇಳಿ ಅನಿಸಿ ಹೋತು ಒಪ್ಪಣ್ಣಂಗೆ.
ಮಾಣಿ, ಕೂಸು- ಇಬ್ರೂ ಹುಟ್ಟಿದ ಕುಟುಂಬವೇ ಬೇರೆ ಬೇರೆ. ಬೆಳದ ಪರಿಸರವೇ ಬೇರೆ. ಅಭಿರುಚಿಗಳೇ ಬೇರೆ. ಭವಿಷ್ಯದ ಕನಸುಗಳೇ ಬೇರೆ ಬೇರೆ - ಸೀದ ತಂದು ಒಂದೇ ಕುಟುಂಬಲ್ಲಿ ಹಾಕಿ ’ಗೆಂಡೆಂಡತ್ತಿ’ ಹೇಳಿ ಬದುಕ್ಕಲೆ ಬಿಟ್ರೆ ಹೇಂಗಿಕ್ಕಪ್ಪಾ! ಒಂದರಿ ಅನುಭವಿಸುಲೇ ಬೇಕು, ಮನುಷ್ಯ ಆದವ°.
ಇದೆರಡೂ ಒಂದೇ ನಮುನೆ ಕಂಡತ್ತು ಒಪ್ಪಣ್ಣಂಗೆ!
ಷಡ್ಜ-ಋಷಭ-ಗಾಂಧಾರ-ಪಂಚಮ-ದೈವತ - ಇವಿಷ್ಟು ಮೋಹನ ರಾಗದ ಅಸ್ಥಿಪಂಜರ. ಮತ್ತೆ ಕಲಾವಿದನ ಚಾಕಚಕ್ಯತೆ, ಶೈಲಿ, ತಾಕತ್ತಿನ ಮೇಗೆ ಸ್ವರ ವಿಸ್ತಾರ ಮಾಡ್ತ° - ಹೇಳಿ ಮೀಸೆಬೈಲು ಚಿಕ್ಕಮ್ಮ ಹೇಳಿದ್ದು ನೆಂಪಾತು. ಒಬ್ಬೊಬ್ಬಂದು ಒಂದೊಂದು ಶೈಲಿ. ಹುಟ್ಟು- ಬಾಲ್ಯ- ಕೌಮಾರ್ಯ-ಗೃಹಸ್ಥ-ವಾನಪ್ರಸ್ಥ - ಇವಿಷ್ಟು ಮನುಷ್ಯ ಜನ್ಮದ ಅವಿಭಾಜ್ಯ ಅಂಶಂಗೊ. ಒಬ್ಬೊಬ್ಬನ ಚಾಕಚಕ್ಯತೆಲಿ ಒಂದೊಂದು ಎತ್ತರಕ್ಕೆ ಏರುತ್ತವು. ಅವರವರ ಶಕ್ತಿಗೆ, ಅವರವರ ಭಾವಕ್ಕೆ ಅನುಕೂಲ ಆದ ಹಾಂಗೆ.
ಷಡ್ಜ:
’ಯೋವೇದಾದೌಸ್ವರಃ’ ಹೇಳಿ ಗಣೇಶಮಾವ ಓಂಕಾರವ ಹೇಳಿತ್ತಿದ್ದವು, ಮೊನ್ನೆ ಒಂದರಿ ಮಾತಾಡುವಗ. ವೇದಾರಂಭಲ್ಲಿಪ್ಪ ಓಂಕಾರ ಸುರು ಅಪ್ಪದೇ ಷಡ್ಜಂದ ಅಡ. ಸಂಗೀತ ಆರಂಬ ಅಪ್ಪದುದೇ ಷಡ್ಜಂದಲೇ. ಯೇವ ಸಂಗೀತಗಾರನೂ, ಎಷ್ಟು ದೊಡ್ಡ ಕಚೇರಿ ಆದರೂ ಸುರು ಮಾಡುದು ಸ-ಪ-ಸಂದ. ಅಡಿಪಾಯ ಗಟ್ಟಿ ಇದ್ದು ಹೇಳಿ ಆದರೆ ಮಾಂತ್ರ ಪೆಂಟಗನ್ನೂ ನಿಂಗು, ತೇಜಮಹಾಲಯವೂ ನಿಂಗು. ಮುಂದಿನ ಮುಕ್ಕಾಲುಗಂಟೆಯ ಭರ್ತಿ ಸಂಗೀತದ ಸಮೃದ್ಧ ಹಂತಿ ಊಟಕ್ಕೆ ಗಂಭೀರ ಆರಂಭ ಕೊಟ್ಟ°, ಬಾಲಮುರಳಿ. ವಾಹ್! ಎಂತಾ ಆರಂಭ, ಮಂದ್ರ ಗಾಂಭೀರ್ಯ!
ಮನುಷ್ಯನ ಜೀವನ ಆರಂಭ ಅಪ್ಪದು ಅಮ್ಮನ ಹೊಟ್ಟೆಂದ. ಬಾಬೆ ಹುಟ್ಟುವಗಳೇ ಅಂತಾ ಒಂದು ಸಂಭ್ರಮ, ಮನೆ-ಮನ ಇಡೀಕ. ಮುಂದೆಂತ ಹೇಳ್ತ ನಿರೀಕ್ಷೆ - ಉತ್ಸಾಹ.
ಋಷಭ:
ಅನುಕರಣೆ ತಪ್ಪು, ಆದರೆ ಅನುಸರಣೆ ಬೇಕೇ ಬೇಕು. ಸುರುವಾಣದ್ದರ ನೋಡಿ ಅದೇ ನಮುನೆ ನೊಣ ಪ್ರತಿ ತೆಗವದರ ಅನುಕರಣ ಹೇಳುದು, ಸಾರವ ಮಾಂತ್ರ ತೆಕ್ಕೊಂಡು ಮುಂದುವರಿವದಕ್ಕೆ ಅನುಸರಣ ಹೇಳುದು - ಹೇಳಿ ತಾಳಮದ್ದಳೆಗೆ ಅರ್ತ ಹೇಳ್ತ ಬೆಳ್ಳಾರೆ ರಾಂಬಾವ ಹೇಳಿತ್ತಿದ್ದವು ಓ ಮೊನ್ನೆ. ’ಎರಡನೇ’ದು ಹೇಳಿರೆ ಸುರುವಾಣದ್ದರ ಅನುಸರಣೆ ಆಗಿರೆಕ್ಕು. ಒಂದರ್ಥಲ್ಲಿ ಪ್ರಥಮತೆಂದಲೂ ದ್ವಿತೀಯತೆ ಮುಖ್ಯ. ನೂರು ಮೀಟರು ಓಡುವಗ ಎರಡ್ನೇಯವ° ತುಂಬ ಹಿಂದೆ ಇದ್ದರೆ ಸುರುವಾಣವಂಗೆ ಗೆದ್ದ ಸಾರ್ತಕತೆಯೇ ಇರ್ತಿಲ್ಲೆ, ಒಂದೇ ಅಂಗುಲ ವೆತ್ಯಾಸ ಆದರೆ ಆ ಕುಶಿ ಮತ್ತಲ್ಲ!
ಷಡ್ಜದಷ್ಟೇ ರಸವತ್ತಾದ ಋಷಭ ನಮ್ಮ ಜೀವನಲ್ಲಿ ಸಿಕ್ಕುತ್ತಾ ಹೋಯೆಕ್ಕು. ಹುಟ್ಟಿದ ಬಾಬೆಯ ಬೆಳವಣಿಗೆಗೆ ಪರಿಸರ ಹೇಂಗಿರ್ತು ಹೇಳುದು ಹುಟ್ಟಿದ್ದರಿಂದಲೂ ಹೆಚ್ಚು ಮುಖ್ಯ, ಆಸಕ್ತಿದಾಯಕ. ಋಷಭದ ಮುಂದುವರಿಕೆ ಬೆಳವಣಿಗೆಯ ಹಂತ. ಕೇಸೆಟ್ಟು ಓಡಿಗೋಂಡು ಇದ್ದು. . .
ಗಾಂಧಾರ:
ಷಡ್ಜದ ಆರಂಬ, ಋಷಭದ ಮುಂದುವರಿಕೆ ಸಿಕ್ಕಿದ ಮತ್ತೆ ಆ ಪರಿಸರಲ್ಲಿ ತಲ್ಲೀನತೆ ಬೇಕು, ಅಲ್ಲದೋ? ಚೆಂದದ ಪರಿಸರಲ್ಲಿ ಬೆಳೆತ್ತಾ ಇಪ್ಪ ಮಗುವಿನ ತಲ್ಲೀನತೆ ಯೇವದರಲ್ಲಿ ಇದ್ದು? ನೆಡು ಪ್ರಾಯಲ್ಲಿ ಅದರ ಆಸಕ್ತಿಯ ವಿಷಯಂಗೊ ಹೇಂಗೆ ಇದ್ದು, ಮನೆತನವ ಮುಂದುವರುಶುಲೆ ಸಮರ್ತ ಆಗಿ ಬೆಳೆತ್ತಾ ಇದ್ದೋ? ಈ ವಿಚಾರವ ಅತ್ಯಂತ ಗಮನಲ್ಲಿ ಮಡಗೆಕ್ಕಾವುತ್ತು ಅಪ್ಪಮ್ಮ. ಯಕ್ಷ ಕಿನ್ನರ ಗಾಂಧರ್ವರ ಪ್ರಿಯ ಸ್ವರ ಆದ ಗಾಂಧಾರಲ್ಲಿ ಅದೇ ತಲ್ಲೀನತೆ ಮುಂದುವರಿತ್ತಾ ಹೋವುತ್ತು... ಜೀವನದ ಹಾಂಗೇ...
ಜೀವನ ಕಟ್ಟುಲೆ ಬೇಕಾದ ನಿಯತ್ತು ಬೆಳವದು ಮಧ್ಯ ವಯಸ್ಸಿಲೇ ಅಡ. ಮಾಷ್ಟ್ರುಮಾವ° ಅನುಭವ ಬರದಿತ್ತಿದ್ದವು. ಗಾಂಧಾರದ ತಲ್ಲೀನತೆಲಿ ಕೋಣೆ ಇಡೀ ಒಂದಾತು. ಪದ ಪಷ್ಟ್ಳಾಸಿದ್ದು. ಅಮ್ಮ ಉಂಬಲೆ ದಿನಿಗೆಳಿದ್ದು ಗೊಂತೇ ಆಯಿದಿಲ್ಲೆ. ಚೆ, ಇನ್ನು ಆಂತೋಂಡು ಉಣ್ಣೆಕ್ಕಷ್ಟೆ. ಉದ್ದೆಕ್ಕುದೇ, ಮತ್ತೆ! ;-(
ಪಂಚಮ:
ಗಾಂಧಾರಲ್ಲಿ ಜೀವನ ಕಟ್ಟಿ ಆದ ಮತ್ತೆ ಪುರುಷ-ಕ್ಷೇತ್ರದ ಪರಿಚಯ, ಸಂಪರ್ಕ.
ಬಾಲಮುರಳಿಯ ಆರಂಭಕ್ಕೆ ಸಾಥ್ ಕೊಡುವಂತಹ ಕೊಳಲು, ಹಿಂದಂದ. ಅಷ್ಟೊತ್ತು ಪುರುಷ ಸ್ವರದ ತಲ್ಲೀನತೆಲಿ ಇದ್ದ ಕೆಮಿಗೊಕ್ಕೆ ಒಂದರಿಯೇ ಕೊಳಲಿನ ಇಂಪು. ಅದುದೇ ಪಂಚಮಲ್ಲಿ. ಕೋಗಿಲೆಯ ಪಿಟ್ಟೆ ಮೈಗೆ ಬಿದ್ದ ಮತ್ತೆ ಮೇಗೆ ನೋಡುವಗ ಒಂದು ಸ್ವರ ಬತ್ತಲ್ದ, ಅದೇ ಸ್ವರ - ಪಂಚಮ. ಮಧ್ಯಮಂದ ಒಂದು ಮೇಗೆಯೇ. ಆದರೆ ಮೋಹನ ರಾಗಕ್ಕೆ ಇದುವೇ ಮಧ್ಯಮ.
ಮಧ್ಯವಯಸ್ಸು ಬಪ್ಪ ಮೊದಲೇ ಸಮಾಜಲ್ಲಿ ಒಂದು ಅಲೆ ಉತ್ಪತ್ತಿ ಮಾಡಿ ಮಡಗುತ್ತ°, ಮನುಷ್ಯ. ಕೊಳಲಿನ ಸಾಥಿನ ಒಟ್ಟೊಟ್ಟಿಂಗೆ ಹೆಜ್ಜೆ ಹಾಕುತ್ತ°. ಹಲವಾರು ಹೊಸ ಹೊಸ ಪ್ರಯೋಗಂಗಳ ಮಾಡ್ತ. ಪ್ರಯತ್ನ ಮಾಡ್ತ, ಮುಂದೆ ಹೋವುತ್ತ°, ಹಿಂದೆ ಬತ್ತ°.ಮೇಲೆ-ಕೆಳ, ಏರು-ತಗ್ಗು ಎಲ್ಲ ಅನುಬವಿಸುತ್ತ°. ಹಿಮ್ಮೇಳದ ಸಹವಾದನ ಕುಟುಂಬದ ಸದಸ್ಯರ ಅನ್ಯೋನ್ಯತೆಯ ಸಂಕೇತ. ಅದರಷ್ಟಕೇ ಓಡುತ್ತ ಶೃತಿ ನಿತ್ಯಜೀವನದ ಶಾಂತತೆಯ ಸಂಕೇತ. ಅದ್ಭುತ ಕವಿ ಸಮಯ. ಇನ್ನುದೇ ಕೇಳಿಗೊಂಡೇ ಇಪ್ಪ° ಹೇಳಿ ಕಾಣ್ತು. . .
ಮುರಳೀರವಳೀ ಹಾ....ಯ್..!
ಹರಿ-ಪ್ರಸಾದ-ಬಾಲ-ಮುರಳೀ-ರವಳೀ-ಹಾ-
[ಅರ್ತ: ಮುರಳೀರವಳೀ(ಎರಡು ಮುರಳಿ ಇದ್ದು!) ಹರಿ-ಪ್ರಸಾದ (ಚೌರಾಸಿಯಂದೇ, )ಬಾಲ-ಮುರಳೀ (ಬಾಲಮುರಳೀ ಕೃಷ್ಣಂದೇ), ಇಲ್ಲಿ ಎರಡೆರಡು ಮುರಳಿ ಇದ್ದು!
ಹೇಳಿರೆ, ಬಾಲ "ಮುರಳಿ" ಕೃಷ್ಣನ ಹತ್ತರೆ ಒಂದು ಮುರಳೀ, ಹರಿಪ್ರಸಾದ ಚೌರಾಸಿಯನ ಹತ್ರೆ ಇನ್ನೊಂದು ಮುರಳಿ - ಹಾಂಗೆ ಒಟ್ಟು ಎರಡೆರಡು ಮುರಳಿ ಇದ್ದು- ಹೇಳುದು ಇದರ ತಾತ್ಪರ್ಯ. ]
ಆ ಇಡೀ ಕೇಸೆಟ್ಟಿಲಿ ಬಪ್ಪದು ಪದ ಅಷ್ಟೇ! ತುಂಬಾ ಅರ್ತ ಗರ್ಭಿತ. ಎರಡೇ ಗೆರೆಯ ಹುಂಡುಪದ್ಯದ ಸಾಲು..
ಬಾಕಿ ಉಳುದ್ದೆಲ್ಲ ರಾಗ-ತಾನ ಅಷ್ಟೇ.
ಪುರುಷನ ಹತ್ತರೆ ಒಂದು ಅಂಶ, ಸ್ತ್ರೀಯ ಹತ್ತರೆ ಒಂದು ಅಂಶ - ಎರಡೂ ಸೇರಿರೇ ಸಂಸಾರ ತಾನೇ! ಒಂದು ಇಲ್ಲದ್ರೂ ಅದು ಚಕ್ರ ಇಲ್ಲದ್ದ ರಥ.
ಪಂಚಮದ ಸಮ್ಮಿಳನಲ್ಲಿ ಆ ಸಂಸಾರ ಮುಂದುವರಿಯೆಕ್ಕು ಹೇಳುವ ಆಶಯ ಎಲ್ಲಾ ಸಂಸಾರಸ್ಥರದ್ದು.
ದೈವತ:
ನೆಡು ಪ್ರಾಯ ಕಳುದ ಮತ್ತೆ ಬೇರೆಂತ ಬೇಕು- ದೇವತಾರಾಧನೆ ಬಿಟ್ಟು?
ಪಂಚಮಲ್ಲಿ ಸಿಕ್ಕಿದ ಅನುಭವಂಗಳ ಮೆಲುಕು ಹಾಯ್ಕೊಂಡು, ಮೊದಲು ಮಾಡಿದ ಸಾಧನೆಯ ನೆಂಪುಮಾಡಿಗೊಂಡು... ಹತ್ತರೆ ಕೂದ ಹೆಂಡತ್ತಿ ಆ ವಿಷಯಂಗಳ ಇನ್ನೂ ಸ್ಪಷ್ಟ ಮಾಡಿ ನೆಂಪಿನ ಜಾಸ್ತಿ ಮಾಡುತ್ತು. ಮುಂದಾಣ ಜೇವಮಾನವ ಯಥಾಯೋಗ್ಯ ಪುಣ್ಯಕಾರ್ಯಲ್ಲಿ ಕಳವದು ಎಲ್ಲಾ ಹಿರಿಯ ಆಶಯ.
ಬಾಲಮುರಳಿ ಅವನೇ ಹುಟ್ಟು ಹಾಕಿ ಬೆಳೆಶಿ, ಸಾಂಕಿದ ಸ್ವರವಿಸ್ತಾರದ ಸೊಂಪಿನ ಅನುಭವಿಸಿಗೊಂಡು ಇದ್ದ. ಸ್ವರದ ಏರಿಳಿತ ಸರೀ ಗೊಂತಾವುತ್ತು, ಕೇಳುವ ಕೆಮಿಗೆ. ಕೊಳಲಿನ ಇಂಪು ಅದರ ನಾದವ ಇನ್ನುದೇ ಜಾಸ್ತಿ ಮಾಡಿತ್ತು. ಒಟ್ಟಾರೆ ಅನುಭವವೇ ಅನುಭವ.
ಷಡ್ಜ:
ಮತ್ತೆ ಬಾಲ್ಯ.
ತುಂಬ ಪ್ರಾಯ ಆದ ಮನುಷ್ಯನ ನಡವಳಿಕೆಗೊ ಬಾಲ್ಯಾವಸ್ಥೆಯ ನೆಂಪು ತತ್ತಡ. ದೀರ್ಘಕಾಲ ಒಟ್ಟಿಂಗಿಪ್ಪ ಹೆಂಡತ್ತಿಗೂ ಅದೇ ಅನುಭವ. ಪರಸ್ಪರ ಭಾವನೆಗೊ ಮಾಂತ್ರ, ಬಲ ಇಲ್ಲೆ. ಅನುಭವ ಮಾಂತ್ರ, ಅನುಸ್ವರ ಇಲ್ಲೆ. ಹುಟ್ಟಿಂದ ದೈವತದವರೆಗೆ ತಲ್ಲೀನತೆಲಿ ಜೊತೆಜೊತೆಲಿ ನೆಡದು ಬಂದ ಪಂಚಮದ ಕಾಲವ ನೆನಪಿಸುದೇ ಅಲ್ಲಿಪ್ಪ ಯಥಾ ಶಕ್ತಿ ಕಾರ್ಯ. ಸಣ್ಣಗಿಪ್ಪಗಾಣ ಹಾಂಗೇ ಭಾವನೆಗೊ. ಸ್ಥಿಮಿತಿ, ಮಿತಿ - ಎರಡೂ ಇಲ್ಲೆ. ಅದರಷ್ಟಕ್ಕೇ ಹರಿಯಬಿಡೆಕ್ಕಾವುತ್ತು. ಮುದಿಮರುಳು ಹೇಳ್ತವು. ಆದರೆ ಹಿನ್ನೆಲೆ / ಹಿಮ್ಮೇಳದವಕ್ಕೆ ಸರೀ ಗುರ್ತ ಇದ್ದು. ನಮ್ಮ ಪ್ರತಿ ಚಲನೆಯನ್ನುದೇ ಅವು ಪ್ರಸಾದ ಹೇಳಿ ಸ್ವೀಕರಿಸುತ್ತವು. ಬಾಲ್ಯಲ್ಲಿ ಹುಚ್ಚು ಆಲೋಚನೆಗೊ ಇತ್ತು, ಸಂಪತ್ತು ಶೇಖರಣೆ ಇತ್ತಿಲ್ಲೆ. ವೃದ್ಧಾಪ್ಯಲ್ಲಿ ಸಂಪತ್ತು ಧಾರಾಳ ಇದ್ದು, ಹರಿಯಬಿಡುವ ಹುಚ್ಚು ಇಲ್ಲೆ.
ಬಾಲಮುರಳಿ, ಚೌರಾಸಿಯ, - ಇಬ್ರುದೇ ಇನ್ನು ಮುಗುಶುವ ಏರ್ಪಾಡಿಂಗೆ ಬಂದವು.
ರಾಗ-ತಾನ-ಪಲ್ಲವಿಯ ಮೂರು ಹಂತಂಗಳಲ್ಲಿ ಬೇಕಾದಷ್ಟು ಅನುಭವ ಹಂಚಿಗೊಂಡು, ಕುಶಿ ಕೊಟ್ಟು, ಕುಶಿ ತೆಕ್ಕೊಂಡು, ಕೇಳುಗರಿಂಗೆ ಹಬ್ಬದೂಟ ಬಳುಸಿದವು. ಅಂಬಗಂಬಗ ಅಲ್ಲಿ ಕೇಳ್ತವು ಚಪ್ಪಾಳೆ ತಟ್ಟಿದ್ದೇ ಅದಕ್ಕೆ ಸಾಕ್ಷಿ.
ಒಂದೇ ನಮುನೆಯವು, ಒಂದೇ ತಲೆಮಾರಿನವು, ಮೊದಲು ಗುರ್ತ - ಪರಿಚಯವೇ ಇರ್ತಿಲ್ಲೆ, ಅಂತವು ಅನ್ಯೋನ್ಯವಾಗಿ ಗೆಂಡೆಂಡತ್ತಿ ಅಪ್ಪದು ನೆಂಪಾಗಿಯೇ ಆತು.
ಸ-ರಿ-ಗ-ಪ-ದ-ಸ ಹೇಳ್ತ ಐದು ಸ್ವರವ ಕುಣಿಸಿ ಅಪ್ಪಗ ಸಿಕ್ಕುತ್ತದು ಮೋಹನ ರಾಗ. ಮೋಹನ ಹೇಳಿದ ಕೂಡ್ಳೇ ಮೋಳಮ್ಮನ ಕಟ್ಟಿ ಹಾಕಿದ ಮೋಹನ ಬಂಟನ ನೆಂಪಾವುತ್ತು ಊರಿನವಕ್ಕೆ. ಆದರೆ ಅದೇ ಹೆಸರಿಲಿ ಎಷ್ಟೊಂದು ಸೌಮ್ಯತೆ ಇರ್ತು ಹೇಳಿ ಇದರ ಕೇಳಿಯೇ ಗೊಂತಕ್ಕಷ್ಟೆ!
ಉತ್ತರಾದಿ ಹೇಳಿರೆ ಮೂರು ಮಾರು ದೂರ ಹೋಯ್ಕೋಂಡು ಇದ್ದ ಒಪ್ಪಣ್ಣಂಗೆ ರಜಾ ಗುರ್ತ ಅಪ್ಪಲೆ ಸುರು ಆತು. ಬಾಲಮುರಳಿ ಚೌರಾಸಿಯನ ಗುರ್ತ ಮಾಡುಸಿದ. ಇವನಿಂದಾಗಿ ಅವನ, ಅವನಿಂದಾಗಿ ಮತ್ತೊಬ್ಬನ, ಮತ್ತೊಬ್ಬನಿಂದಾಗಿ ಇನ್ನೊಬ್ಬನ - ಹೀಂಗೇ ಗುರ್ತ ಬೆಳದು ಬೆಳದು ಮುಂದುವರಿವದಲ್ದೋ, ಮಾನವ ಸಮಾಜ?
ಬರೇ ಒಂದು ಕಚೇರಿಯ ಅರ್ತಮಾಡುವಗ ಒಂದು ಮಾನವ ಸಮಾಜದ ಅರ್ತ ಆವುತ್ತು. ಅಂಬಗ ಸಂಗೀತಲ್ಲಿ ಎಂತಾ ಶಕ್ತಿ ಇದ್ದು?
ಕುಡ್ಪಲ್ತಡ್ಕ ಬಾವ ಮೊನ್ನೆ ಎನಗೊಂದು ಶೃತಿಪೆಟ್ಟಿಗೆ ತಂದು ಕೊಟ್ಟಿದ°, ’ಇದಾ, ಸಂಗೀತ ಕಲಿ!’ ಹೇಳಿ. ಬಂಡಾಡಿ ಅಜ್ಜಿಯ ರೇಡಿಯದ ಹಾಂಗೆ ’ಕೊಯೋ°. . .’ ಹೇಳ್ತು. ರೇಡಿಯದಷ್ಟಕೆ ಇದ್ದುದೇ. ಸುಚ್ಚು ಹಾಕಿ ಓನು ಮಾಡುದು ಗೊಂತಾತು. ಮೆಲ್ಲಂಗೆ ಸುರು ಮಾಡೆಕ್ಕು ಇನ್ನು ಸಂಗೀತ ಕಲಿವಲೆ. ಕೇಳಿದ್ದೆಲ್ಲ ಬಾಯಿಗೆ ಬತ್ತರೂ, ಗುರುಗಳ ಕೈಂದ ಕಲಿವದು ಬೇರೆಯೇ ಇದ್ದು.
ಕೇಸೆಟ್ಟಿನ ಸೇಂಪುಲು (Sample) ಸಂಕೊಲೆ (link) ಇಲ್ಲಿದ್ದು:
|
(http://www.mediafire.com/file/eywj2lieyem/Muraliravali.mp3)
ಮೋಹನ ರಾಗದ ಭಾವ ಉತ್ಸಾಹಪೂರ್ಣ ಶಾಂತಿ - ಹೇಳಿ ದೊಡ್ಡಣ್ಣ ಹೇಳ್ತಿತ್ತಿದ್ದ. ಅಪ್ಪನ್ನೇ ಹೇಳಿ ಆತೆನಗೆ. ಕೇಳ್ತಾ ಇಪ್ಪಗ ಹಳೆ ಕೆಲವು ಮನಶ್ಶಾಂತಿ ತಪ್ಪ ಘಟನೆಗೊ ಎಲ್ಲ ನೆಂಪಾತು. ಪ್ರಾಯ ಅಲ್ಲಿಗೇ ನಿಂದು, ಕೆಳಾಂತಾಗಿ ಹೋದ ಹಾಂಗೆ ಅನಿಸಿತ್ತು. ಸುಮ್ಮನೆ ಅಲ್ಲ ಗಂಗಜ್ಜಿ ತೊಂಬತ್ತೈದು ವರ್ಷ ಬದ್ಕಿದ್ದು. :-)
ಪ್ರಪಂಚಲ್ಲಿ ಯಾವುದೇ ಜಗಳ ಇಲ್ಲದ್ದ ವಾತಾವರಣ ಅನಿಸಿ ಕುಶೀ ಆತು! ಯೇವ ಜಗಳವೂ ಇಲ್ಲೆ. ಜಾಗೆ ತಕರಾರು, ನೀರಿನ ಜಗಳ, ಹೋಕ್ವರ್ಕು ಬಿಟ್ಟದು, ಇಂತಾ ಎಲ್ಲಾ ಚಿರಿಪಿರಿ ಬಿಟ್ಟ ಶಾಂತತೆ (ಶಾಂತತ್ತೆ ಅಲ್ಲ!) ಇಪ್ಪ ವಾತಾವರಣ ಅನಿಸಿ ಹೋತು. ರಾಜ್ಯ - ರಾಜ್ಯದ ನಡುವೆ, ದೇಶ-ದೇಶದ ನಡುವೆ, ಜೆನ-ಜೆನದ ನಡುವೆ ಇರ್ತ ಎಲ್ಲ ಜಗಳ ನಂದಿ ಹೋದ ವಾತಾವರಣ ಅನಿಸಿ ಹೋತು. ಎಲ್ಲ ಉಗ್ರವಾದ ಶಮನ ಆದ ಸುಖ-ನೆಮ್ಮದಿ ಅನಿಸಿ ಹೋತು.
ಹೇಳಿದಾಂಗೆ - ದೊಡ್ಡಣ್ಣನ ಪೆಟ್ಟಿಗೆಲಿ ಈಗಳೂ ಇದ್ದು ಆ ಕೇಸೆಟ್ಟು. ಬೇಕಾದವು ಅವನತ್ರೆ ಕೇಳಿ, ಕೊಡುಗು ಅವ°.
ಎಲ್ಲೊರು ಕೇಳಿಕ್ಕಿ.
ಒಂದೊಪ್ಪ: ಉಗ್ರವಾದಿ ಲಾಡೆನ್ನಿಂಗೆ ಇದರ ಕೇಳುಸಿರೆ ಬೆಡಿ ಕರೆಲಿ ಮಡಗಿ ವೀಣೆ ಹಿಡ್ಕೊಂಗೋ ಹೇಳಿ ಒಂದು ಕನುಪ್ಯೂಸು ಬಂದದು, ಒಪ್ಪಣ್ಣಂಗೆ. ಎಂತ ಹೇಳ್ತಿ? :-)